ಸೋಮವಾರ, ಮಾರ್ಚ್ 25, 2013

ಮಣಿಯಿತು UPSC!

ವಿ.ಸೂ.: ವಿದಾನ ಸಬೆಯ ಚುನಾವಣೆ ಮುಗಿಯುವವರೆಗೆ, ಅಂದರೆ, ಮೇ ತಿಂಗಳ ಮೊದಲ ವಾರದವರೆಗೆ, ಬ್ಲಾಗನ್ನು ಬರೆಯುವುದರಿಂದ ಬಿಡುವು ತೆಗೆದುಕೊಂಡಿದ್ದೇನೆ - ಎಚ್.ಎಸ್.ರಾಜ್

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೋಟಿಗಟ್ಟಲೆ ಮಂದಿಗೆ ತಾಯ್‍ನುಡಿಗಳಾಗಿದ್ದರೂ ಕನ್ನಡ, ತಮಿಳು, ತೆಲುಗು, ಮರಾಟಿ ಮುಂತಾದ ನುಡಿಗಳಿಗೆ ಕೇವಲ ’ಪ್ರಾದೇಶಿಕ ಬಾಶೆ’ ಎಂಬ ಇಳಿಗೆಯ್ವ ಹಣೆಪಟ್ಟಿ ನಮ್ಮ ದೇಶದಲ್ಲಿ! ಸಾಲದುದಕ್ಕೆ ಅವುಗಳ ಮೇಲೆ ಹಿಂದೀ ಮತ್ತು ಇಂಗ್ಲಿಶ್ ನುಡಿಗಳ ಎಡೆಬಿಡದ ದಬ್ಬಾಳಿಕೆ ಬೇರೆ. ಯಾವಾಗ ಯಾವ ರೂಪದಲ್ಲಿ ಕುತ್ತುಗಳು ಬಂದು ಅವುಗಳ ಮೇಲೆ ಎರಗುತ್ತವೋ ಎಂದು ಹೇಳಲು ಬರುವುದಿಲ್ಲ. ’ಹೋದೆಯಾ ಪಿಶಾಚೀ ಎಂದರೆ, ಬಂದೆ ಗವಾಕ್ಶೀಲಿ!’ ಎನ್ನುವ ಹಾಗೆ, ಕನ್ನಡದಂತಹ ನುಡಿಗಳ ಮೇಲೆ ಹಿಂದೀ ಮತ್ತು ಇಂಗ್ಲೀಶುಗಳ ಹಾವಳಿ ತಪ್ಪಿದ್ದಲ್ಲ. ಕಳೆದ ಎರಡು ಮೂರು ವಾರಗಳಲ್ಲಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ಕೆಂದ್ರ ಲೋಕಸೇವಾ ಸಮಿತಿಯ (UPSC) ಹೊಸ ಪರೀಕ್ಶಾ ಕಟ್ಟಳೆಗಳೇ ಇದಕ್ಕೆ ಒಂದು ಅತ್ಯುತ್ತಮ ನಿದರ‍್ಶನ.
      ಪ್ರಾದೇಶಿಕ ಬಾಶೆಗಳಲ್ಲಿ ಪ್ರಾವೀಣ್ಯತೆ ಇದ್ದು ಪ್ರಾದೇಶಿಕ ಬಾಶೆಗಳಲ್ಲೇ ಅಯ್. ಏ. ಎಸ್. ಮುಂತಾದ ಸೇವೆಗಳಿಗಾಗಿ ನಡೆಯುವ ಪರೀಕ್ಶೆಗಳಿಗೆ ಉತ್ತರಗಳನ್ನು ಬರೆಯಲು ಬಯಸುವ ಅಬ್ಯರ‍್ತಿಗಳಿಗೆ ಹಿನ್ನಡೆಯಾಗುವ ರೀತಿಯಲ್ಲಿ ಲೋಕಸೇವಾ ಸಮಿತಿ ತನ್ನ ಹೊಸ ಪರೀಕ್ಶಾ ವಿದಾನವನ್ನು ರೂಪಿಸಿ, ಜಾರಿಗೆ ತರಲು ಹೊರಟಿತ್ತು. ಸಹಜವಾಗೇ ಪ್ರಾದೇಶಿಕ ಬಾಶೆಗಳನ್ನಾಡುವವರಿಂದ ಇದಕ್ಕೆ ಎದಿರು ವ್ಯಕ್ತವಾಗಲು ತೊಡಗಿತು. ಲೋಕಸೇವಾ ಸಮಿತಿ ಬರೀ ಇಶ್ಟೇ ಬದಲಾವಣೆ ತಂದಿದ್ದರೆ, ಅಂದರೆ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಮಾತ್ರ ಹಿನ್ನಡೆಯಾಗುವ ಹಾಗೆ ಮಾರ‍್ಪಾಡುಗಳನ್ನು ತಂದಿದ್ದರೆ, ಅದರ ಎದುರು ಹೋರಾಡುವುದು ನಮ್ಮಂತಹ ಪ್ರಾದೇಶಿಕ ಬಾಶೆಗಳನ್ನಾಡುವವರಿಗೆ ದಿಟವಾಗಿಯೂ ಕಶ್ಟವಾಗುತ್ತಿತ್ತು. ಆದರೆ, ನಮ್ಮ ಅದ್ರುಶ್ಟ ಕೊಂಚ ಚೆನ್ನಾಗಿತ್ತು ಎಂದು ಕಾಣುತ್ತದೆ. ಏಕೆಂದರೆ, ಲೋಕಸೇವಾ ಸಮಿತಿ, ಪ್ರಾದೇಶಿಕ ಬಾಶೆಗಳ ಅಬ್ಯರ‍್ತಿಗಳಿಗೆ ಕೆಡುಕು ಮಾಡುವುದರ ಜೊತೆಗೆ, ಇಂಗ್ಲಿಶ್ ಬಾಶೆಗೆ ಒತ್ತು ಕೊಟ್ಟು, ಇಂಗ್ಲಿಶ್ ಬಾಶೆಯಲ್ಲಿ ಕುಶಲತೆ ಇರುವ ಅಬ್ಯರ‍್ತಿಗಳಿಗೆ ಒಳಿತಾಗುವ ಹಾಗೆ ಕೂಡ ಮಾರ‍್ಪಾಡುಗಳನ್ನು ಮಾಡಿತ್ತು. ಇದರಿಂದಾಗಿ, ಇಂಗ್ಲಿಶ್ ಅಶ್ಟಾಗಿ ಬಾರದ, ಹಿಂದಿಯಲ್ಲಿ ಮಾತ್ರ ಕುಶಲತೆ ಇರುವ ಮಂದಿಗೂ ಹಿನ್ನಡೆಯಾಗಿತ್ತು. ಹಾಗಾಗಿ, ಹಿಂದೀ ಆಡುಗರಿಂದಲೂ ಸಮಿತಿಯ ಹೊಸ ನೀತಿಗೆ ತೀವ್ರ ವಿರೋದ ವ್ಯಕ್ತವಾಯಿತು.
      ಒಟ್ಟಿನಲ್ಲಿ, ಸಂಸತ್ತಿನಲ್ಲಿ ಹೆಚ್ಚುಕಡಿಮೆ ಎಲ್ಲಾ ಪಕ್ಶಗಳಿಂದಲೂ ಲೋಕಸೇವಾ ಸಮಿತಿ ಹೊರಡಿಸಿದ್ದ ಹೊಸ ನೀತಿಯ ಅದಿಸೂಚನೆಗೆ ಒಗ್ಗಟ್ಟಿನಿಂದ ಕೂಡಿದ ವಿರೋದ ವ್ಯಕ್ತವಾಯಿತು. ಪ್ರತಿಬಟನೆಯ ಗದ್ದಲ ಎಶ್ಟು ಗಟ್ಟಿಯಾಗಿತ್ತೆಂದರೆ, ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸೇವಾ ಸಮಿತಿಯ ತಲೆಯವರನ್ನು ಕೂಡಲೇ ವಜಾ ಮಾಡಿ ಎಂದು ಜೆಡಿಯು ಮುಂದಾಳು ಶರದ್ ಯಾದವ್ ಒತ್ತಾಯಿಸಿದರು. ಲಾಲೂ ಪ್ರಸಾದ್ ಯಾದವರ ಪಕ್ಶದ ಸದಸ್ಯ ರಗುವಂಶ್ ಸಿಂಗರು ಎರಡು ಬಾರಿ ಸಬಾದ್ಯಕ್ಶರ ಪೀಟದ ಕಡೆ ನುಗ್ಗಿ ಅದಿಸೂಚನೆ ವಿರುದ್ದ ಗೋಶಣೆ ಕೂಗಿದರು! ಇಂತಹ ಕಟ್ಟಿದಿರಿಗೆ ಮಣಿದು ಸರ‍್ಕಾರ ಬೇರೆ ದಾರಿ ಇಲ್ಲದೆ ಲೋಕಸೇವಾ ಸಮಿತಿಯ ಅದಿಸೂಚನೆಯನ್ನು ತಡೆಹಿಡಿಯುವ ನಿರ‍್ದಾರವನ್ನು ಪ್ರಕಟಿಸಿತು. ಇದೆಲ್ಲಾ ನಡೆದ ಎರಡು ನಾಳುಗಳ ಬಳಿಕ ಲೋಕಸೇವಾ ಸಮಿತಿ ತನ್ನ ಪರೀಕ್ಶಾ ಮಾದರಿಯನ್ನು ಮತ್ತೆ ರೂಪಿಸುವುದಾಗಿ ಹೇಳಿಕೆ ಕೊಟ್ಟಿತು. ಮತ್ತೆರಡು ದಿನಗಳಲ್ಲಿ, ಇಂಗ್ಲೀಶಿಗೆ ಕೊಟ್ಟಿರುವ ಒತ್ತನ್ನಶ್ಟೇ ಅಲ್ಲದೆ ಪ್ರಾದೇಶಿಕ ನುಡಿಗಳ ಮೇಲೆ ಹಾಕಿದ್ದ ಎಲ್ಲ ಅಡ್ಡಿಗಳನ್ನೂ ತೆಗೆದು ಹಾಕಿರುವುದಾಗಿ ಕೂಡಾ ತಿಳಿಸಿತು.
      ಎಲ್ಲಾ ಪಕ್ಶಗಳೂ ಹೀಗೆ ಒಟ್ಟಿಗೆ ಎದುರು ತೋರಿಸಿದ್ದರಿಂದ ನಮ್ಮ ಕನ್ನಡಕ್ಕೆ ಕುತ್ತಾಗಿದ್ದ ಅದಿಸೂಚನೆಗೆ ಬೇಗನೇ ತಡೆ ಬಿದ್ದಿತು. ಈ ಗೆಲುವು ನಮಗೆ ಸಂತಸದ ವಿಶಯವೇನೋ ಸರಿ. ಆದರೆ, ಈ ಗೆಲುವಿಗೆ ಕಾರಣವಾದ ಹೋರಾಟದಲ್ಲಿ ನಮ್ಮ ಪಾಲು ಎಶ್ಟರ ಮಟ್ಟಿನದು ಎಂಬುದು ಸರಿಯಾಗಿ ತಿಳಿಯದು. ಏಕೆಂದರೆ, ನಾನು ನೋಡಿದ ಪತ್ರಿಕೆಗಳಲ್ಲಿ ನಮ್ಮ ಕನ್ನಡ ನಾಡಿನ ಸಂಸದರು ಹೋರಾಡಿದ ಬಗ್ಗೆ ನಿರ‍್ದಿಶ್ಟ ವರದಿಗಳಿರಲಿಲ್ಲ. ಅದೇನೇ ಇರಲಿ, ಕನ್ನಡದ ಸಂಗಟನೆಗಳಲ್ಲಾದರೂ ಕೆಲವು ಹಾಗೂ ಕನ್ನಡದ ಸಾಹಿತಿಗಳಲ್ಲಾದರೂ ಕೆಲವರು ಕಂಡಿತವಾಗಿಯೂ ಲೋಕಸೇವಾ ಸಮಿತಿಯ ಅದಿಸೂಚನೆಗೆ ಕಟುವಾದ ಪ್ರತಿಬಟನೆಯನ್ನು ಸೂಚಿಸಿದ್ದರು. ಅದೇ ವೇಳೆ ಬೆಂಗಳೂರಿನಲ್ಲಿ ನಡೆದ ತೆಲುಗು ವಿಜ್‍ನಾನ ಸಮಿತಿಯ ಸಮಾರಂಬದಲ್ಲೂ ಹಲವು ತೆಲುಗು ಗಣ್ಯರು ಅದಿಸೂಚನೆಯ ಬಗ್ಗೆ ವಿರೋದವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದರು. ಇದೆಲ್ಲಾ ನಮ್ಮಲ್ಲಿ ಆಶಾಬಾವನೆಯನ್ನು ಮೂಡಿಸುವ ಸಂಗತಿ.
      ಲೋಕಸೇವಾ ಸಮಿತಿಯ ಅದಿಸೂಚನೆಯ ಬಗ್ಗೆ ಕಂಡು ಬಂದ ಪ್ರತಿಬಟನೆಯಲ್ಲಿ ಗಮನಿಸಬೇಕಾದ ಒಂದು ಮುಕ್ಯ ಅಂಶವಿದೆ. ಅದೇನೆಂದರೆ, ಹಿಂದೀವಾಲರ ಪ್ರತಿನಿದಿಗಳು ನಿಜಕ್ಕೂ ಪ್ರತಿಬಟಿಸಿದ್ದು ಇಂಗ್ಲೀಶಿಗೆ ಹೆಚ್ಚಿನ ಒತ್ತು ಸಿಕ್ಕಿದುದಕ್ಕೇ ಹೊರತು ಪ್ರಾದೇಶಿಕ ಬಾಶೆಗಳಿಗೆ ತೊಡಕು ಉಂಟಾದುದಕ್ಕಲ್ಲ!  ಪರೀಕ್ಶೆಗಳ ಹೊಸ ಮಾದರಿಯಿಂದ ಪ್ರಾದೇಶಿಕ ಬಾಶೆಗಳಿಗೆ ಮಾತ್ರ ತೊಡಕು ಉಂಟಾಗಿದ್ದರೆ, ಹಿಂದೀ ನಾಡಿನ ಮುಂದಾಳುಗಳು ಚಕಾರವನ್ನಾದರೂ ಎತ್ತುತ್ತಿದ್ದರೆ? ಹಿಂದೀವಾಲರಿಗೆ ಪ್ರಾದೇಶಿಕ ಬಾಶೆಗಳ ಬಗ್ಗೆಯೂ ಸಹಾನುಬೂತಿ ಏನಾದರು ಇದೆಯೆ? ಇದು ಬಗೆದು ನೋಡಬೇಕಾದ ವಿಚಾರ.
      ಈ ಸಲವೇನೋ ಕಾರಣಾಂತರದಿಂದ ಹಿಂದೀವಾಲರ ನೆರವು ನಮಗೆ ದೊರೆಯಿತು. ಆದರೆ, ಎಲ್ಲ ಸಂದರ‍್ಬಗಳಲ್ಲೂ ಅದು ದೊರೆಯಲಾರದು. ಆದ್ದರಿಂದ, ಎಲ್ಲ ಸಂದರ‍್ಬಗಳಲ್ಲೂ ನೆರವು ದೊರೆಯುವತ್ತ ನಮ್ಮ ಕೆಳೆಯ ಕಯ್ಯನ್ನು ನಾವು ಚಾಚಿರಬೇಕು. ಅಂದರೆ, ನಮ್ಮ ಹಾಗೇ ಕಶ್ಟಗಳನ್ನು ಎದುರಿಸಬೇಕಾದ ಬೇರೆ ಪ್ರಾದೇಶಿಕ ನುಡಿಗರಿಗೆ ನಮ್ಮ ಬೆಂಬಲವನ್ನು ನೀಡುತ್ತಿರಬೇಕು ಮತ್ತು ಅವರಿಂದ ಬೆಂಬಲವನ್ನು ಪಡೆದುಕೊಳ್ಳುತ್ತಿರಬೇಕು. ಮುಕ್ಯವಾಗಿ, ನಡೆನುಡಿಗಳಲ್ಲಿ ಹಾಗೂ ಬುಡಕಟ್ಟಿನಲ್ಲಿ ನಮ್ಮವರೆನಿಸುವ ನಮ್ಮ ಸಹದ್ರಾವಿಡರಾದ ತಮಿಳರು, ತೆಲುಗರು ಮತ್ತು ಮಲೆಯಾಳರೊಂದಿಗೆ ಸವ್‍ಹಾರ‍್ದವನ್ನೂ ಒಗ್ಗಟ್ಟನ್ನೂ ಮೂಡಿಸಿಕೊಳ್ಳಬೇಕು. ತೆಂಕಣರು ನಾವೆಲ್ಲ ದ್ರಾವಿಡತನವೆಂಬ ನಮ್ಮ ನನ್ನಿ ಹಿನ್ನೆಲೆಯ ಬಲದಿಂದ ಒಗ್ಗೂಡಬೇಕು. ಹೀಗೆ ಒಗ್ಗೂಡಿದರೆ, ಮರಾಟಿ ಮತ್ತು ಬಂಗಾಲಿಗಳಂತಹ ಬೇರೆ ಪ್ರಾದೇಶಿಕ ನುಡಿಗರ ನೆರವನ್ನು ಪಡೆದುಕೊಳ್ಳುವುದೂ ಹಗುರಾಗಬಹುದು. ಆಗ, ಕೇಂದ್ರದಿಂದ ಆಗಾಗ್ಗೆ ಬರುವ ಲೋಕಸೇವಾ ಸಮಿತಿಯ ಕೆಡುಕ ನೀತಿಗಳಂತಹ ಕುತ್ತುಗಳ ವಿರುದ್ದ ಹೋರಾಡುವುದು ನಮಗೆ ಬಹುಮಟ್ಟಿಗೆ ಸುಲಬವಾಗಬಹುದು. ನಮ್ಮ ನಡೆನುಡಿಗಳು ಉಳಿದುಕೊಳ್ಳಬಹುದು.

ನಲ್‍ಮೆಯೊಡನೆ,
ಎಚ್.ಎಸ್.ರಾಜ್

ಕಾಮೆಂಟ್‌ಗಳಿಲ್ಲ: