ಸೋಮವಾರ, ಮಾರ್ಚ್ 04, 2013

ಮಹಿಶಿ ವರದಿ ಜಾರಿ ಮಾಡಿರಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನಮ್ಮ ನೆಚ್ಚಿನ(?) ಮುಂದಾಳುಗಳೆ,
      ಕನ್ನಡ ನಾಡಿನಲ್ಲಿ ಕನ್ನಡಿಗರಾದ ನಮಗೆ ನಮ್ಮ ಕವ್‍ಶಲ್ಯಕ್ಕೆ ತಕ್ಕ ಉದ್ಯೋಗ ದೊರೆಯುವುದು ನಮ್ಮ ಹುಟ್ಟಿನಿಂದಲೇ ಬಂದ ಹಕ್ಕು! ಅದನ್ನು ದೊರಕಿಸಿಕೊಡುವುದು ನಾವು ಆರಿಸಿ ಕಳಿಸಿರುವ ನಮ್ಮ ಮುಂದಾಳುಗಳಾದ ನಿಮ್ಮ ಕನಿಶ್ಟ ಕರ‍್ತವ್ಯ! ಆದರೆ, ನ್ಯಾಯವಾಗಿ ನಮಗೆ ದೊರೆಯಬೇಕಾದ ಕೆಲಸಗಳನ್ನು ನೀವು ನಮ್ಮಿಂದ ದೂರ ಮಾಡಿ ಹೊರನಾಡಿಗರ ಪಾಲು ಮಾಡುತ್ತೀರಿ. ಹಾಗೆ ಮಾಡಿ ನಮ್ಮ ಬದುಕನ್ನೇ ಕಸಿದುಕೊಳ್ಳುತ್ತೀರಿ. ಸಂಬಳ ತರುವ ಕೆಲಸವೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ? ಚೆಂದದ ಬಾಳನ್ನು ಕಟ್ಟಿಕೊಳ್ಳುವುದಾದರೂ ಹೇಗೆ?
      ಮೊದಲಿಂದಲೂ ನಮ್ಮ ನಾಡನ್ನು ಮುನ್ನಡೆಸಿಕೊಂಡು(?) ಬಂದಿರುವ ಮುಂದಾಳುಗಳು ನೀವು, ನಮ್ಮ ಕೆಲಸಗಳನ್ನು ವಲಸಿಗರ ಮಡಿಲಿಗೆ ಹಾಕಿ, ನಮ್ಮ ಬದುಕಿಗೆ ಕತ್ತಲೆ ತುಂಬಿಸುತ್ತಾ ಬಂದಿದ್ದೀರಿ. ಇಪ್ಪತ್ತಯ್ದು ವರುಶಗಳ ಹಿಂದೆಯೇ ನಮ್ಮ ಉದ್ಯೋಗಗಳನ್ನು ಹೇಗೆ ಕಾಪಾಡಬೇಕು ಎಂದು ನಿಮಗೆ, ನೀವೇ ನೇಮಿಸಿದ ಸಮಿತಿಯೊಂದು ಸಲಹೆ ಮಾಡಿತ್ತು. ಅದರ ನೆನಪಿದೆ ತಾನೆ? ಸರೋಜಿನಿ ಮಹಿಶಿ ಸಮಿತಿ ಎಂದು ಅದರ ಹೆಸರು. ಅದರ ಸಲಹೆಗಳನ್ನು ನೀವು ತಡವಿಲ್ಲದೆ ಆಗಲೇ ಜಾರಿಗೆ ತರಬೇಕಾಗಿತ್ತು. ಆದರೆ, ತರಲಿಲ್ಲ. ಅದನ್ನು ಬಿಟ್ಟು, ನಮ್ಮ ಕೆಲಸಗಳನ್ನು ವಲಸಿಗರ ಕಯ್ಗಿಡುವ, ವಲಸಿಗರನ್ನು ಓಲಯ್ಸುವ ನಿಮ್ಮ ಎಂದಿನ ಚಾಳಿಯನ್ನು ತಡೆಯಿಲ್ಲದೆ ನಡೆಸಿಕೊಂಡು ಬಂದಿರಿ! ಅಶ್ಟು ಸಾಲದು ಎಂಬಂತೆ, ಈಗೀಗ, ’ಇಪ್ಪತ್ತಯ್ದು ವರುಶಗಳ ಹಿಂದಿನ ಹಾಗೆ ಇಂದಿನ ಪರಿಸ್ತಿತಿ ಇಲ್ಲ. ಹಾಗಾಗಿ, ಅಂದಿನ ಸಲಹೆಗಳನ್ನು ಇಂದು ಜಾರಿಗೆ ತರಲು ಬರುವುದಿಲ್ಲ’ ಎಂದು ಹೇಳುತ್ತಿದ್ದೀರಿ. ’ಕಳ್ಳನಿಗೊಂದು ಪಿಳ್ಳೆ ನೆವ’ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಜಾಣ್ಮೆಯ ಮಟ್ಟವನ್ನೇ ಅಣಕಿಸುತ್ತಿದ್ದೀರಿ. ನಮ್ಮ ತಾಳ್ಮೆಯನ್ನು ಕೆಣಕುತ್ತಿದ್ದೀರಿ. ಇಶ್ಟು ವರುಶ ನಮಗೆ ಗಾಯ ಮಾಡಿದ್ದಲ್ಲದೆ, ಈಗ ಗಾಯದ ಮೇಲೆ ಬರೆಯನ್ನೂ ಎಳೆಯಲು ಹೊರಟಿದ್ದೀರಿ.
      ನಮ್ಮ ಮುಂದಾಳುಗಳಾದ ನೀವು ಅಯ್‍ವತ್ತು ವರುಶಗಳ ಹಿಂದೆ ದೇಶದ ಒಗ್ಗಟ್ಟಿನ ಹೆಸರಿನಲ್ಲಿ ನಮ್ಮ ಮೇಲೆ ತಪ್ಪು ಬಾಶಾನೀತಿಯನ್ನು ಹೊರಿಸಿದಿರಿ. ’ಇಂತಹ ಕನ್ನಡಗುಲಿ ಬಾಶಾನೀತಿ ಬೇಡ’ ಎಂದ ಕುವೆಂಪು ಅಂತಹ ಮಹನೀಯರ ಎಚ್ಚರಿಕೆಗೆ ಜಾಣಕಿವುಡು ನಟಿಸಿದಿರಿ. ತ್ರಿಬಾಶಾ ಸೂತ್ರ ಎಂಬ ಉರುಳಿಗೆ ನಮ್ಮ ಕೊರಳನ್ನು ನೂಕಿದಿರಿ. ಹಿಂದೀ ಮಾರಿಗೆ ಕನ್ನಡದ ಕಂದಮ್ಮಗಳನ್ನು ಬಲಿಕೊಟ್ಟಿರಿ. ಅದರ ಪರಿಣಾಮ ಇಂದು ಏನಾಗಿದೆ ನೋಡಿ. ಜನಸಂಖ್ಯೆ ಮಿತಿ ಮೀರಿದ ಉತ್ತರದ ಹಿಂದೀ ನಾಡುಗಳಿಂದ ನಮ್ಮ ನಾಡಿಗೆ ವಲಸಿಗರ ಹೊಳೆಯೇ ಹರಿದು ಬರುತ್ತಿದೆ. ಲಕ್ಶಲಕ್ಶ ಹಿಂದೀಯರಿಗೆ ನಮ್ಮ ನಾಡಿನಲ್ಲಿ ಬಂದು ನೆಲೆಸುವುದೂ ನಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುವುದೂ ನಮ್ಮ ಬಾಯಲ್ಲೇ ಹಿಂದೀ ಆಡಿಸುವುದೂ ನೀರು ಕುಡಿದಷ್ಟು ಸರಾಗವಾಗಿದೆ. ಇದರಿಂದಾಗಿ, ನಾವು ಮತ್ತು ನಮ್ಮ ನಡೆನುಡಿಗಳು ನಮ್ಮ ನೆಲದಲ್ಲೇ ಮೂಲೆಗುಂಪಾಗುವ ಸ್ತಿತಿ ಬಂದೊದಗಿದೆ! ನಮ್ಮ ನಾಡಿನಲ್ಲೇ ನಾವು ಅಲ್ಪಸಂಕ್ಯಾತರೂ, ಎರಡನೇ ದರ‍್ಜೆಯ ಜನರೂ ಆಗುವ ಹೊತ್ತು ಹತ್ತಿರ ಬರುತ್ತಿದೆ. ಇಶ್ಟೆಲ್ಲಾ ಕೆಡುಕು ನಡೆಯುತ್ತಿದ್ದರೂ ಮುಂದಾಳುಗಳು ನೀವು ಏನು ಮಾಡುತ್ತಿದ್ದೀರಿ? ನಮಗಾಗಿ ಇರಬೇಕಾದ ಏರ‍್ಪಾಡುಗಳನ್ನು ವಲಸಿಗರಿಗೆ ಹೊಂದುವಂತೆ ಬದಲಾಯಿಸುತ್ತಿದ್ದೀರಿ. ನಮ್ಮ ಹಿರಿಯರು ನಮಗಾಗಿ ಕೂಡಿಟ್ಟ ನಮ್ಮ ನಾಡಿನ ಎಲ್ಲ ಸವಲತ್ತುಗಳನ್ನೂ ಸಂಪನ್ಮೂಲಗಳನ್ನೂ ವಲಸಿಗರ ಪಾಲು ಮಾಡುತ್ತಿದ್ದೀರಿ.
      ನಮ್ಮ ನೆಚ್ಚಿನ(?) ಮುಂದಾಳುಗಳೆ, ಇನ್ನಾದರೂ ನಿಮ್ಮನ್ನು ನಂಬಿ ಆರಿಸಿ ಕಳಿಸಿದ ಹುಲು ಕನ್ನಡಿಗರ ಬಗ್ಗೆ ಕೊಂಚ ಯೋಚಿಸಿರಿ. ಸುಳ್ಳು ದೇಶಯ್‍ಕ್ಯತೆಯ ಪೊಳ್ಳು ನೀತಿಗಳನ್ನು ಅತ್ತ ತಳ್ಳಿ. ಕನ್ನಡತನವನ್ನು ಕಲಿತುಕೊಳ್ಳಿ. ಕನ್ನಡತನವನ್ನು ಕಲಿಸಿ. ಕನ್ನಡಿಗರಲ್ಲಿರುವ ತಮ್ಮತನದ ಅರಿವಿನ ಕೊರತೆಯನ್ನು ನೀಗಿಸಿ. ಕನ್ನಡಿಗರಿಗೆ ಅವರ ನಿಜವಾದ ಹಿನ್ನೆಲೆಯ ಬಗ್ಗೆ ಅರಿವು ಕಾಣಿಸಿ. ಕನ್ನಡ ನಡೆನುಡಿಗಳನ್ನು ಕಾಪಾಡಿ. ಕನ್ನಡಿಗರ ಬದುಕಿನ ನಾಳೆಗಳನ್ನು ಬೆಳಗಿಸಿ. ಕನ್ನಡಿಗರು ಹೊನ್ನಿನ ಬಾಳನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗಿ.
ಇಂತೀ ನಿಮ್ಮನ್ನು ಮತ್ತೆ ಮತ್ತೆ ನಂಬಿ ಆರಿಸಿ ಕಳಿಸುವ,
ಬಡಪಾಯಿ ಕನ್ನಡಿಗರು
(ಬರೆದವರು: ಎಚ್.ಎಸ್.ರಾಜ್ ಮತ್ತು ಪ್ರಶಾಂತ ಸೊರಟೂರ)

1 ಕಾಮೆಂಟ್‌:

Unknown ಹೇಳಿದರು...

It is a fact that three language formula is an imposition of Hindi on non-Hindi speaking population in the name of national unity and integration. reciprocally learning south Indian language is not considered as a matter of national integration. Migration from north India in future may create demographic and social problems. But we have to blame ourselves for not promoting Kannada along with English. Many school with CBSE syllabus do not have Kannada as I or II language. The tragedy is that many teachers and professors who earn their livelihood by teaching Kannada send their children to these elitist schools. Kannada language and culture can be strengthened by making Kannada as a compulsory Languge whether the schools prescribe to CBSE or ICSE. This policy is already in existence in Kerala state.
Kiran