ಬುಧವಾರ, ನವೆಂಬರ್ 26, 2014

ಕಾಯಿಲೆಗಿಂತ ಕೆಟ್ಟದ್ದಾಯ್ತು ಮದ್ದಿನ ಅಡ್ಡ ಪರಿಣಾಮ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಬಾರಿಯ ಲೋಕಸಬೆಯ ಚುನಾವಣೆಯಲ್ಲಿ ಮಂದಿ ಬೀಜೇಪಿ ಪಕ್ಶವನ್ನು ನಿಚ್ಚಳ ಬಹುಮತದಿಂದ ಅದಿಕಾರಕ್ಕೆ ತಂದರು. ಆದರೆ, ಅವರು ಮತ ಹಾಕಿದ್ದು ನಿಜಕ್ಕೂ ಬೀಜೇಪಿಗೆ ಅಲ್ಲ. ಮತ ಹಾಕಿದ್ದೆಲ್ಲ ಮೋದಿಯವರಿಗೆ. ಒಂದೆಡೆ ಕಾಂಗ್ರೆಸ್ ಪಕ್ಶದ ಆಳ್ವಿಕೆಯಲ್ಲಿ ಹೊರಬಿದ್ದ ಬ್ರಶ್ಟಾಚಾರದ ಹಗರಣಗಳು, ಇನ್ನೊಂದೆಡೆ ಹದಗೆಟ್ಟು ತೊಳಲಾಡುತ್ತಿದ್ದ ಆರ್‌ತಿಕ ನೆಲೆ, ಇವೆರಡರಿಂದ ಬೇಸತ್ತಿದ್ದ ಮತದಾರರು, ಮೋದಿಯವರಿಂದ ಆಳ್ವಿಕೆಯಲ್ಲಿ ಕೊಂಚವಾದರೂ ಪ್ರಾಮಾಣಿಕತೆ ಮತ್ತು ಆರ‍್ತಿಕ ಸ್ತಿತಿಯಲ್ಲಿ ಸ್ವಲ್ಪವಾದರೂ ಲವಲವಿಕೆ ಮತ್ತೆ ಬರಬಹುದೆಂಬ ನಿರೀಕ್ಶೆಯಿಂದ ಬೀಜೇಪಿಯನ್ನು ಗೆಲ್ಲಿಸಿದರೇ ಹೊರತು, ಅದರ ಹಿಂದುತ್ವದ ನಿಲುವಿಗೆ ಮನಸೋತೇನೂ ಅಲ್ಲ.
      ಗುಜರಾತ್ ರಾಜ್ಯಕ್ಕೆ ಮೋದಿಯವರ ಆಡಳಿತದಿಂದ ಒಳಿತಾದಂತೆ ಇಡೀ ದೇಶಕ್ಕೂ ಆಗಲಿ ಎನ್ನುವ ಹಾರಯ್ಕೆಯಿಂದ ಮಂದಿ ಬೀಜೇಪಿಯನ್ನು ಬೆಂಬಲಿಸಿದ್ದು. ಆದರೆ, ಮೋದಿಯವರಿಂದ ಪವಾಡವನ್ನು ನಿರೀಕ್ಶಿಸುವ ರಬಸದಲ್ಲಿ, ಬೀಜೇಪಿಯ ತಾತ್ವಿಕ ನಿಲುವಿನಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನ ರವೆಯಶ್ಟೂ ಯೋಚಿಸಲಿಲ್ಲ. ದೇಶದ ಕಾಯಿಲೆಗೆ ಮೋದಿಯೇ ಸರಿಯಾದ ಮದ್ದು ಎಂದುಕೊಂಡರು. ಆದರೆ, ಆ ಮದ್ದಿಗೆ ಮೂಲ ಕಾಯಿಲೆಗಿಂತಲೂ ಕೆಟ್ಟದಾದ side effect ಗಳಿವೆ ಎಂಬುದನ್ನು ಮಾತ್ರ ಮರೆತರು! ಒಂದಾದ ಮೇಲೆ ಒಂದರಂತೆ ಉದ್ಬವವಾಗುತ್ತಿರುವ ಈ ಅಡ್ಡ ಪರಿಣಾಮಗಳ ಸರಣಿ ಮಾಲೆಯನ್ನು ಈಗ ನಾವು ನಾಳುನಾಳೂ ನೋಡುತ್ತಿದ್ದೇವೆ.
      ಮೋದಿಯವರೇನೋ ದೇಶ ಕಟ್ಟುವ ಕಾಯಕದಲ್ಲಿ ಸಿಂಹದಂತೆ ತಮ್ಮನ್ನು ತಾವು ತೊಡಗಿಸಿಕೊಂಡವರಂತೆ ಕಾಣುತ್ತಿದ್ದಾರೆ. ಆದರೆ, ಅವರ ಹೆಸರಿನಿಂದ ಬಲ ಪಡೆದುಕೊಂಡು, ಅವರ ನೆರಳಿನ ಕಾಪಿನಿಂದ ಕುದುರಿಕೊಂಡು ಹಲವರು ಗುಳ್ಳೇನರಿಗಳಂತೆ ಕಿರಿಕಿರಿ ಮಾಡುವುದಕ್ಕೆ ತೊಡಗಿದ್ದಾರೆ! ಅವರು ಆಡಿದ್ದೇ ಮಾತು, ಮಾಡಿದ್ದೇ ಕಟ್ಟಳೆ ಎನ್ನುವ ಹಾಗಿದೆ ಅವರ ಪರಿ. ಮೋದಿಯವರ ಬಣದ ಇಂತಹವರಿಂದ ಈಗೀಗ ಹೊರಬರುತ್ತಿರುವ ಬಗೆಮುತ್ತುಗಳು ಒಂದಲ್ಲ ಎರಡಲ್ಲ, ಸಾಲು ಸಾಲು!
      ನಮ್ಮ ನಾಡಿನ ಹೊಸ ರಾಜ್ಯಪಾಲರು ಹೇಳುತ್ತಾರೆ, ವೇದಗಳ ಕಲಿಕೆ ಶಾಲೆಗಳಲ್ಲಿ ಕಡ್ಡಾಯವಾಗಿ ಆಗಬೇಕಂತೆ. ವೇದಾದ್ಯಯನದಿಂದ ಅಪರಾದಗಳ ಮಟ್ಟ ಇಳಿಯುತ್ತದಂತೆ! "ಕಳಬೇಡ, ಕೊಲಬೇಡ" ಎಂದು ನಮಗೆಲ್ಲ ತಿಳಿಯುವ ತಿಳಿಗನ್ನಡದಲ್ಲೇ ನಮ್ಮ ಬಸವಣ್ಣ ವಚನ ಹಾಡಿ ಹೆಚ್ಚುಕಡಿಮೆ ಸಾವಿರ ವರ್‌ಶಗಳೇ ಕಳೆದರೂ ನಾವ್ಯಾರೂ ಕದಿಯುವುದನ್ನು ಬಿಡಲಿಲ್ಲ, ಕೊಲ್ಲುವುದನ್ನು ನಿಲ್ಲಿಸಲಿಲ್ಲ. ಇನ್ನು ನಮಗರಿಯದ ಸಂಸ್ಕ್ರುತದ ವೇದ ಕಲಿತರೆ ಸಂತರಾಗಿಬಿಡುತ್ತೇವೆಯೆ? ಉಪದೇಶದಿಂದ ಎಲ್ಲಾದರೂ ಜನರನ್ನು ಒಳ್ಳೆಯವರನ್ನಾಗಿಸಲು ಬರುತ್ತದೆಯೆ?
      ಪೇಜಾವರ ಶ್ರೀಗಳು ಹೇಳಿಕೆ ಕೊಡುತ್ತಾರೆ, ದೇಶದಲ್ಲಿ ಇಶ್ಟೊಂದು ಅಶಾಂತಿ ನೆಲೆಸಿರುವುದು ಹುಲಿಯಂತಹ ಒಂದು ಹಿಂಸ್ರ ಪ್ರಾಣಿಯನ್ನು ರಾಶ್ಟ್ರೀಯ ಪ್ರಾಣಿ ಎಂದು ನಾವು ಗುರುತಿಸಿಕೊಂಡಿರುವುದಕ್ಕಂತೆ! ಗೋಮಾತೆಯನ್ನು ರಾಶ್ಟ್ರೀಯ ಪ್ರಾಣಿ ಎಂದು ಗೋಶಿಸಿದರೆ ಎಲ್ಲೆಡೆ ಶಾಂತಿ ನೆಲೆಯೂರುವುದಂತೆ! ಅದೇನು ತರ್‌ಕ ಸ್ವಾಮೀ!
      ಉತ್ತರ ಬಾರತದ ಬತ್ರ ಎಂಬ ಮಹನೀಯರೊಬ್ಬರು ಹೇಳುತ್ತಾರೆ, ನಮ್ಮ ದೇಶದಲ್ಲಿ ಎಲ್ಲಾ ವಿದೇಶೀ ಬಾಶೆಗಳ ಕಲಿಕೆಯನ್ನು ಸಂಪೂರ್‌ಣವಾಗಿ ನಿಶೇದಿಸಬೇಕಂತೆ. ಹಾಗಾದರೆ ಇಂಗ್ಲೀಶ್ ಮೂಲತಹ ಒಂದು ವಿದೇಶೀ ಬಾಶೆ. ಅದನ್ನೂ ನಿಶೇದಿಸಬೇಕೆ? ಇಂದು ಇಂಗ್ಲೀಶ್ ಮತ್ತು ಇಂಟರ್‌ನೆಟ್ಟಿನ ಒಗ್ಗೂಡಿಕೆಯಿಂದ ಮನುಕುಲದ ಇಡೀ ಅರಿವೊಟ್ಟಿಲೇ ಎಲ್ಲರ ಬೆರಳ ತುದಿಯಲ್ಲಿದೆ. ಇಡೀ ವಿಶ್ವವೇ ಇಂಗ್ಲೀಶ್ ಕಲಿಯುತ್ತಿರುವಾಗ ನಾವು ಅದರ ಕಯ್ಬಿಡಬೇಕೆ? ಇದು ಅಪ್ಪಟ ಹುಚ್ಚು ತಾನೆ?
      ಕೇಸರಿ ಬಣದವರು ಪಟ್ಟಿ ಮಾಡುವ ತಪ್ಪುಗಳಲ್ಲಿ ಏನೇನು ಸೇರಿಕೊಂಡಿದೆ ನೋಡಿ. ಕಾದಲರ ನಾಳನ್ನು ಆಚರಿಸುವುದು ತಪ್ಪು, ಹೆಣ್ಣುಮಕ್ಕಳು ಜೀನ್ಸ್ ತೊಟ್ಟರೆ ತಪ್ಪು, ಯುವಕ ಯುವತಿಯರು ಪಾರ್‌ಟೀ ಮಾಡುವುದು ತಪ್ಪು, ಸಾರ‍್ವಜನಿಕ ಎಡೆಗಳಲ್ಲಿ ಮುತ್ತಿಡುವುದು ತಪ್ಪು, ಸಂಸ್ಕ್ರುತ ಕಲಿಯದಿದ್ದರೆ ತಪ್ಪು, ಹಿಂದೀ ಮಾತಾಡದಿದ್ದರೆ ತಪ್ಪು, ಗೀತೆ ವೇದಗಳನ್ನು ಓದದಿದ್ದರೆ ತಪ್ಪು, ಗೋವನ್ನು ಪೂಜನೀಯ ಪ್ರಾಣಿ ಎಂದು ನಂಬದಿರುವುದು ತಪ್ಪು, ಹೀಗೆ ಎಲ್ಲವೂ ತಪ್ಪೇ!
      ಕೇಸರಿಗಳು ಬರೀ ಅಬಿಪ್ರಾಯ ಕೊಟ್ಟು ಸುಮ್ಮನಿದ್ದರೆ ನಾವ್ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಆದರೆ, ಅವರು ಬರೀ ಹೇಳಿಕೆ ಕೊಟ್ಟು ಸುಮ್ಮನಿರುವುದಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಅವರ ಅಸಹನೆಯನ್ನು ಕಾರ್‌ಯರೂಪದಲ್ಲೂ ತೋರಿಸುತ್ತಾರೆ. ಯುವಕರ ಪಾರ್‌ಟೀಗಳಿಗೆ ನುಗ್ಗಿ ಹುಡುಗ ಹುಡುಗಿಯರನ್ನು ಕೇಸರಿಗಳು ಆಗಾಗ್ಗೆ ತಳಿಸುತ್ತಾರೆ. ಹರಿಯಾಣ ರಾಜ್ಯದ ಯಾವುದೋ ಒಂದು ಊರಿನಲ್ಲಿ ಹೆಣ್ಣುಮಕ್ಕಳು ಜೀನ್ಸ್ ತೊಡುವಂತಿಲ್ಲ, ಮೋಬಯಿಲ್ ದೂರವಾಣಿಗಳನ್ನು ಬಳಸುವಂತಿಲ್ಲ ಎಂಬ "ಕಾಪ್" ಕಟ್ಟಳೆಯನ್ನು ಹೊರಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಎಲ್ಲೋ ಒಂದೆಡೆ ಬುರ್‌ಕಾ ತೊಟ್ಟವರು ಬೀದಿಯ ಕಸ ಹೊಡೆಯುವಂತಿಲ್ಲ ಎಂಬ ಅವರದ್ದೇ ಆದ ಸ್ವಂತ ಕಾನೂನೊಂದನ್ನು ಮಾಡಿದ್ದಾರೆ. ಪುರಾತನ ಕಾಲದಲ್ಲೇ ನಮ್ಮಲ್ಲಿ ಟೆಸ್ಟ್ ಟ್ಯೂಬ್ ಬೇಬಿ ತಂತ್ರಜ್ನಾನವಿತ್ತೆಂದೂ, ದ್ರೋಣಾಚಾರ್‌ಯ ಒಬ್ಬ ಟೆಸ್ಟ್ ಟ್ಯೂಬ್ ಬೇಬಿಯೆಂದೂ ಉತ್ತರದ ರಾಜ್ಯವೊಂದರಲ್ಲಿ ಮಕ್ಕಳ ಪಟ್ಯಪುಸ್ತಕದಲ್ಲೇ ಸೇರಿಸಿಬಿಟ್ಟಿದ್ದಾರೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಇನ್ನು ಮುಂದೆ ಜರ್‌ಮನ್ನಿನಂತಹ ವಿದೇಶೀ ಬಾಶೆಗಳನ್ನು ನಾಲ್ಕನೇ ಬಾಶೆಯ ಸ್ತಾನಕ್ಕೆ ದೂಡಬೇಕೆಂದು ಕೇಂದ್ರ ಸರ್‌ಕಾರ ಸೂಚನೆ ಹೊರಡಿಸಿದೆ.
      ಹೀಗೆ, ಒಟ್ಟಿನಲ್ಲಿ ಕೇಸರಿ ಬಣದವರಿಗೆ ವಿದೇಶಿ ಸಂಸ್ಕ್ರುತಿ, ವಿದೇಶಿ ಬಾಶೆ ಎಂದರೆ ಅಸಹನೆ ಕೆರಳುತ್ತದೆ. ಇದರ ಜೊತೆಗೆ ಬಾರತದಲ್ಲೆಲ್ಲ ಸಂಸ್ಕ್ರುತ, ಹಿಂದಿ, ಬಗವದ್ಗೀತೆ, ವೇದ ಮುಂತಾದ ಏಕರೂಪ ನಡೆನುಡಿಗಳನ್ನು ಹೇರುವ ಹುನ್ನಾರ ಅವರಿಗಿದೆ. ಬಾರತ ಒಂದು ಬಗೆಬಗೆಯ ಸಂಸ್ಕ್ರುತಿಗಳಿರುವ, ನುಡಿಗುಂಪುಗಳಿರುವ ಮತ್ತು ಬುಡಕಟ್ಟುಗಳಿರುವ ದೇಶ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳುವ ಬಗೆನೆಲೆ ಅವರಿಗಿಲ್ಲ. ಎತ್ತುಗೆಗೆ, "ದ್ರಾವಿಡ’ ಎಂಬುದೇ ಸುಳ್ಳು, ಅದು ಆಂಗ್ಲರು ನಮ್ಮನ್ನು ಒಡೆದು ಆಳುವುದಕ್ಕೆ ಕಲ್ಪಿಸಿದ ಕಟ್ಟುಕತೆ ಎಂದುಬಿಡುತ್ತಾರೆ ಕೇಸರಿ ಬಣದವರು. ನುಡಿ ಹಾಗೂ ಬುಡಕಟ್ಟುಗಳ ಬಗ್ಗೆ ಸಂಶೋದನೆಗಳಿಂದ ಕಂಡುಕೊಂಡಿರುವ ವಾಸ್ತವಾಂಶಗಳು ಅವರಿಗೆ ಬೇಡ. ಅವರಿಗೆ ಅವರ ಕಲ್ಪನಾಲೋಕದ ಅವರದ್ದೇ ಆದ ಸಂಕುಚಿತವಾದ ಬಾರತದ ಚಿತ್ರಣ ಒಂದಿದ್ದರೆ ಸಾಕು.
      ಇಂತಹ ಸಂಕುಚಿತ ಬಗೆಗಟ್ಟಿನವರಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಾಂತೀಯ ಜನರು ತಮ್ಮ ಪ್ರಾಂತೀಯತೆಯ ಅರಿವನ್ನು ಬಳಸಿಕೊಳ್ಳಬೇಕು. ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ನಾವು ನಮ್ಮ ದ್ರಾವಿಡ ಹಿನ್ನೆಲೆಯ ಅರಿವನ್ನು ಕಂಡುಕೊಳ್ಳಬೇಕು, ದ್ರಾವಿಡ ಅರಿವನ್ನು ನಮ್ಮ ಸಮುದಾಯಗಳಲ್ಲಿ ಹರಡಬೇಕು, ದ್ರಾವಿಡ ನೆಲೆಗಟ್ಟಿನಲ್ಲಿ ರಾಜಕೀಯ ಪಕ್ಶಗಳನ್ನು ಕಟ್ಟಿಕೊಳ್ಳಬೇಕು, ನೆರೆಯ ಸಹದ್ರಾವಿಡರೊಡನೆ ಕಯ್‍ಜೋಡಿಸಿ ಹೋರಾಡಬೇಕು. ಹೀಗೆ ಮಾಡುವುದರಿಂದ ನಮ್ಮತನ ನಮಗೆ ಉಳಿದೀತು. ಆದರೆ, ಹೀಗೆಲ್ಲ ಮಾಡುವುದಕ್ಕೆ ಬೇಕಾಗುವ ಕೆಚ್ಚು ನಮಗಿದೆಯೆ? ಅದೇ ಇಂದಿನ ಒಂದು ದೊಡ್ಡ ಕೇಳ್ವಿ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್