ಶುಕ್ರವಾರ, ಏಪ್ರಿಲ್ 25, 2014

ನಮ್ಮ ಮೆಟ್ರೋ ಮತ್ತು ಹಿಂದೀ ಹೇರಿಕೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೆಲ ವಾರಗಳ ಹಿಂದೆ ಬೆಂಗಳೂರಿನ ಹೆಮ್ಮೆಯ ನಮ್ಮ(!?) ಮೆಟ್ರೋ ರಯಿಲು ತನ್ನ ಎರಡನೆಯ ಹಳಿವಳಿಯನ್ನು (track-route) ಸಾರ್‌ವಜನಿಕ ಸೇವೆಗೆ ತೆರೆದಾಗ ಡೇಜಾವೂ ಎಂಬಂತೆ ಹಳೆಯ ಕೆಲ ದ್ರುಶ್ಯಗಳು ಟೀವೀಯ ಮೇಲೆ ಮತ್ತೆ ಕಾಣಿಸಿಕೊಂಡುವು. ಮೆಟ್ರೋದಲ್ಲಿ ಹಿಂದಿಯಲ್ಲಿ ಸಂದೇಶಗಳನ್ನು ಕೊಡುವುದನ್ನು ವಿರೋದಿಸುವ ಒಂದು ಚರ್‌ಚಾ ಕಾರ್‌ಯಕ್ರಮ ನಡೆಯಿತು. ಬನವಾಸಿ ಬಳಗದ ಗೆಳೆಯರು ಅದರಲ್ಲಿ ಪಾಲ್ಗೊಂಡು, ಮೆಟ್ರೋದಲ್ಲಿ ಹಿಂದೀ ಹೇರಿರುವುದು ಹೇಗೆ ತಪ್ಪು ಎಂಬುವುದನ್ನು ತಕ್ಕ ಕಾರಣಗಳನ್ನು ಕೊಡುತ್ತ ನೋಡುಗರ ಮುಂದೆ ತೆರೆದಿಟ್ಟರು. ದಯ್‍ತ್ಯ ಅಳವನ್ನು ಹೊಂದಿರುವ ಕನ್ನಡ ಸಂಗಟನೆಯ ಮುಂದಾಳೊಬ್ಬರು ಸುದ್ದಿ ತುಣುಕೊಂದರಲ್ಲಿ, ’ನೆರೆಯ ತಮಿಳುನಾಡಿನಲ್ಲಿ ಯಾವ ಸಂಚಾರ ಏರ್‌ಪಾಡಿನಲ್ಲೂ ಹಿಂದಿಯ ಬಳಕೆ ಇಲ್ಲ. ನಮ್ಮ ಮೆಟ್ರೋದಲ್ಲಿ ಮಾತ್ರ ಯಾಕಿರಬೇಕು? ಇದರ ಬಗ್ಗೆ ಸಂಬಂದಪಟ್ಟವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ’ಎಂಬ ಹೇಳಿಕೆ ಕೊಟ್ಟರು. ನಿರಾಸೆಯ ಸಂಗತಿ ಏನೆಂದರೆ, ಇದೇ ಬಗೆಯ ಹೇಳಿಕೆಗಳೂ ಚರ್‌ಚೆಗಳೂ ಕೆಲ ವರ‍್ಶಗಳ ಹಿಂದೆ ನಮ್ಮ ಮೆಟ್ರೋ ತನ್ನ ಸೇವೆಯನ್ನು ಮೊತ್ತಮೊದಲು ತೊಡಗಿಸಿದಾಗ ಕೂಡ ಕೇಳಿ ಬಂದಿದ್ದವು. ಇದರ ಅರ್‌ತ ಏನೆಂದರೆ, ಈ ಎರಡು ಮೂರು ವರ್‌ಶಗಳಲ್ಲಿ ಹಿಂದೀ ಸಂದೇಶಗಳ ಬಗ್ಗೆ ನಮ್ಮಲ್ಲಿ ಕೆಲವರು ತೋರಿಸಿರುವ ವಿರೋದದ ವಿಶಯದಲ್ಲಿ ಮೆಟ್ರೋ ಸಂಸ್ತೆ ’ಕ್ಯಾರೆ’ಎಂದು ಕೂಡ ಅಂದಿಲ್ಲವೆಂಬುದು!
      ನಮ್ಮ ಮೆಟ್ರೋ ಸಂಸ್ತೆ ಈ ವಿಶಯದಲ್ಲಿ ಏನೂ ಗೊತ್ತಿಲ್ಲದಂತೆ ಇರುವುದು ಏಕೆ? ಹಿಂದೀ ಹೇರಿಕೆಯ ವಿಶಯವನ್ನು ಯಾರೂ ನೇರವಾಗಿ ಅದರ ಗಮನಕ್ಕೆ ತಂದಿಲ್ಲವೆಂದಲ್ಲ. ಬನವಾಸಿ ಬಳಗದ ವೆಬ್ ತಾಣಕ್ಕೆ ಹೋಗಿ ನೋಡಿದರೆ, ಅವರು ಮೆಟ್ರೋ ಸಂಸ್ತೆಯ ಮುಂದೆ ಆಗಾಗ್ಗೆ ಈ ವಿಶಯದಲ್ಲಿ ಆಕ್ಶೇಪಿಸಿಕೊಂಡು ಬಂದಿರುವುದು ಕಾಣುತ್ತದೆ. ಕಾನೂನು ಕೊಡಮಾಡಿರುವ ಸವುಲಬ್ಯಗಳನ್ನು ಬಳಸಿಕೊಂಡು ಬನವಾಸಿ ಬಳಗದವರು, ಹಿಂದೀ ಹೇರಿರುವ ತಪ್ಪಿನ ಬಗ್ಗೆ ಮೆಟ್ರೋ ಸಂಸ್ತೆಯ ಪಾರುಪತ್ಯೆಯವರಿಗೆ ಹಲವಾರು ಬಾರಿ ಎತ್ತಿ ತೋರಿಸಿದ್ದಾರೆ. ಸಾರ‍್ವಜನಿಕರ ಸಾವಿರಾರು ಎಲೆಕ್ಟ್ರಾನಿಕ್ ಸಹಿಗಳನ್ನು ಕೂಡ ಇದರ ಬಗ್ಗೆ ಬಳಗದ ಪರಿವಾರದವರು ಒಟ್ಟಯಿಸಿ, ಸಂಬಂದಪಟ್ಟವರಿಗೆ ರವಾನಿಸಿದ್ದಾರೆ. ಇಶ್ಟೆಲ್ಲ ಮಾಡಿದರೂ ಇಳುವರಿ ಮಾತ್ರ ಸೊನ್ನೆ! ಇದು ಹೀಗೇ ನಡೆದರೆ ಕನ್ನಡಿಗರ ’ನಮ್ಮ’ ಮೆಟ್ರೋದಲ್ಲಿ ಉತ್ತರದವರ ಹಿಂದಿ ನೆಲೆಯಾಗಿ ನಿಂತು ರಾರಾಜಿಸುವುದು ಗ್ಯಾರಂಟಿ.
      ಹಾಗಾದರೆ, ನಮ್ಮ ಮೆಟ್ರೋ ಸಂಸ್ತೆಯನ್ನು ಮಣಿಸಲು ಏನು ಮಾಡಬೇಕು? ಮುಕ್ಯವಾಗಿ, ನಾವು ಆರಿಸಿ ಕೂರಿಸಿರುವ ನಮ್ಮ ’ಪ್ರತಿನಿದಿಗಳ’ ಬಾಯಿಂದ ಮೆಟ್ರೋ ಸಂಸ್ತೆಗೆ ಹೇಳಿಸಬೇಕು. ಮೆಟ್ರೋ ಸೇವೆ ತೊಡಗಿದಂದಿನಿಂದ ಇಶ್ಟು ಕಾಲದವರೆಗೆ, ನಮ್ಮ ಒಬ್ಬ ಪ್ರತಿನಿದಿಯಾದರೂ ಈ ವಿಶಯದಲ್ಲಿ ತುಟಿಪಿಟಕ್ಕೆಂದಿದ್ದಾರೆಯೆ? ಇಲ್ಲ! ಹಿಂದೀ ಮಾತಾಡುವ ದಿಲ್ಲಿಯ ಹಯ್ ಕಮಾಂಡಿನವರಿಂದ ಮಾತು ಮಾತಿಗೆ ಅಣತಿಗಳನ್ನು ಹೇಳಿಸಿಕೊಳ್ಳುವ ಚಾಳಿಯನ್ನು ಮಯ್ಗೂಡಿಸಿಕೊಂಡಿರುವ ಇವರಿಂದ ಹಿಂದೀ ವಿರೋದದ ಹೇಳಿಕೆಗಳು ಎಲ್ಲಾದರೂ ಬರುವುದುಂಟೆ? ಹೇಗೋ ಮೊದಲು ಇವರ ಬಾಯಿಂದ ಮೆಟ್ರೋದಲ್ಲಿನ ಹಿಂದೀ ಸಂದೇಶಗಳನ್ನು ತೆಗೆದು ಹಾಕುವ ಹೇಳಿಕೆಗಳನ್ನು ನಾವು ಬರಿಸಬೇಕು. ಇದಕ್ಕಾಗಿ ಇವರ ಬಳಿ ಹೋಗಿ ಬರೀ ಕೋರಿಕೊಂಡರೆ ಆಗುವುದಿಲ್ಲ. ಜನಬಲವಿಲ್ಲದ ಯಾವ ಕೋರಿಕೆಗಳ ವಿಶಯದಲ್ಲೂ ಜನನಾಯಕರು ತಮ್ಮ ’ಬೆಲೆಕಟ್ಟಲಾಗದ’ ಸಮಯವನ್ನು ಹಾಳುಮಾಡಿಕೊಳ್ಳುವುದಿಲ್ಲ. ಆದ್ದರಿಂದ, ಎಲ್ಲಕ್ಕೂ ಮೊದಲು ನಾವು ನಮ್ಮ ಕೋರಿಕೆಗೆ ಜನಬಲವಿದೆ ಎಂಬುದನ್ನು ತೋರಿಸಬೇಕು.
      ಜನಬಲವನ್ನು ತೋರಿಸುವುದಕ್ಕೆ ಎಲೆಕ್ಟ್ರಾನಿಕ್ ಸಹಿಗಳು ನಮ್ಮ ದೇಶದ ವ್ಯವಸ್ತೆಯಲ್ಲಿ ಸಾಲುವುದಿಲ್ಲ ಎನ್ನುವುದು ನನ್ನ ನಂಬಿಕೆ. ಈ ಆದುನಿಕ ದಿನಗಳಲ್ಲೂ ನಮ್ಮಲ್ಲಿ, ಹತ್ತಾರು ಸಾವಿರ ಜನಗಳನ್ನು ಒಂದೆಡೆ ಸೇರಿಸಿ ಜನಬಲವನ್ನು ಪ್ರದರ್‌ಶಿಸುವುದೇ ಪರಿಣಾಮಕಾರಿ ಎನಿಸುತ್ತದೆ ನನಗೆ. ಆದರೆ, ಹತ್ತಾರು ಸಾವಿರ ಜನಗಳನ್ನು, ಅದರಲ್ಲೂ ಹಿಂದೀ ವಿರೋದಂತಹ ಜನಾಸಕ್ತಿ ಇರದ ವಿಶಯಗಳಲ್ಲಿ, ಒಂದೆಡೆ ಸೇರಿಸುವುದು ಹೇಗೆ? ಇದೇ ದೊಡ್ಡ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಂಡರೆ ಮಾತ್ರ ಹಿಂದೀ ಹೇರಿಕೆಯನ್ನು ಮೆಟ್ರೋದಿಂದ ತೆಗೆಯಲು ಆಗಬಹುದು ಎನಿಸುತ್ತದೆ.
      ಬೆಂಗಳೂರಲ್ಲದೆ ಬೇರೆ ಊರುಗಳಲ್ಲಿ ಬದುಕುವ ಒಟ್ಟಾರೆ ಕನ್ನಡಿಗರಿಗೆ ಮೆಟ್ರೋದಲ್ಲಿ ಹಿಂದಿ ತೂರಿಸಿರುವುದು ಒಂದು ಸಮಸ್ಯೆಯೇ ಎನಿಸಿಲ್ಲ. ಇದು ಸಹಜ. ಹೋಗಲಿ, ಬೆಂಗಳೂರಿನ ಕನ್ನಡಿಗರಿಗಾದರೂ ಇದು ಒಂದು ’ಇಶ್ಯೂ’ ಆಗಿದೆಯೆ? ಅನುಮಾನ. ಬೆಂಗಳೂರಿನ ಕನ್ನಡಿಗರು ತಾವೇ ಮೇಲೆ ಬಿದ್ದು ಹಿಂದೀ ಮಾತಾಡುವುದನ್ನು ನೋಡಿದರೆ, ಸಾರ್‌ವಜನಿಕ ಕಾರ್‌ಯಕ್ರಮಗಳಲ್ಲಿ ಹಿಂದೀ ಬಾಶಣಗಳನ್ನು ಆರಾಮಾಗಿ ಕುಳಿತು ಕೇಳುವುದನ್ನು ನೋಡಿದರೆ, ಅವರಿಗೆ ಹಿಂದೀ ಬಳಕೆಯ ಬಗ್ಗೆ ಬೇಸರವಿಲ್ಲದಂತೆ ಕಾಣುತ್ತದೆ. ಈ ಮಾತು, ಬರೀ ಬೆಂಗಳೂರಿನವರಿಗೇ ಏಕೆ, ಇಡೀ ಕರ್‌ನಾಟಕದ ಜನರಿಗೇ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಸಿನಿಮಾಗಳಲ್ಲಿ, ಟೀವೀಯಲ್ಲಿ, ಕನ್ನಡಿಗರೇ ಸಾಲು ಸಾಲು ಹಿಂದೀ ಮಾತಾಡುವುದನ್ನು ಈಗ ನೋಡುತ್ತಿದ್ದೇವೆ. ಪೂರ್‌ತಿ ಹಿಂದೀ ಬಾಶೆಯಲ್ಲೇ ಸಂದರ್‌ಶನಗಳನ್ನು ನಡೆಸುವುದನ್ನು ನೋಡುತ್ತಿದ್ದೇವೆ. ಕನ್ನಡ ಹಾಡುಗಳ ಕಾರ‍್ಯಕ್ರಮಗಳಲ್ಲಿ ಕನ್ನಡದ ಹಾಡುಗಾರರೇ ಉಬ್ಬಿನಿಂದ ಹಿಂದೀ ಹಾಡುಗಳನ್ನು ಹಾಡುವುದನ್ನು ನೋಡುತ್ತಿದ್ದೇವೆ. ಇದನ್ನೆಲ್ಲಾ ನೋಡಿದರೆ, ಕನ್ನಡಿಗರು ಹಿಂದೀಯನ್ನು ಆಗಲೇ ಹೆಚ್ಚುಕಡಿಮೆ ಒಪ್ಪಿಕೊಂಡಿರುವಂತೆ ಕಾಣುತ್ತದೆ. ಈ ಊಹೆ ನಿಜವಾದರೆ, ಹಿಂದೀಯನ್ನು ಮೆಟ್ರೋದಿಂದಾಗಲೀ, ಕರ್‌ನಾಟಕದಿಂದಾಗಲೀ ತೆಗೆದು ಹಾಕುವುದು ಹಿಮಾಲಯವನ್ನು ಹತ್ತುವಶ್ಟೇ ಅರಿದಾಗುತ್ತದೆ.
      ಆದ್ದರಿಂದ, ಮೊದಲು ನಾವು ಬೆಂಗಳೂರು ಕನ್ನಡಿಗರಲ್ಲಿ ಎಶ್ಟು ಮಂದಿಗೆ ಮೆಟ್ರೋದಿಂದ ಹಿಂದಿಯನ್ನು ತೆಗೆಸುವ ಆಸೆ ಇದೆ ಎಂಬುದನ್ನು ಕಂಡುಹಿಡಿಯಬೇಕು. ಬೆಂಗಳೂರಿನ ಬೇರೆ ಬೇರೆ ಬಾಗಗಳಲ್ಲಿ, ಬೇರೆ ಬೇರೆ ವರ್‌ಗಗಳ ಕನ್ನಡಿಗರನ್ನು ಬೇಟಿ ಮಾಡಿ, ಮಾತಾಡಿಸಿ, ಈ ವಿಶಯದಲ್ಲಿ ಅವರಿಗೆ ಎಶ್ಟರ ಮಟ್ಟಿನ ಆಸಕ್ತಿ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಬರೀ ಇಂಟರ್‌ನೆಟ್ಟನ್ನು ನೆಚ್ಚಿಕೊಂಡರೆ ಸಾಲದು. ಸಾಕಶ್ಟು ಮಂದಿಯಲ್ಲಿ ಹಿಂದೀ ಬಗ್ಗೆ ವಿರೋದ ಇದೆ ಎಂದು ಕಂಡುಬಂದರೆ, ಬೆಂಗಳೂರಿನ ಉಳಿದ ತೆಂಕಣ ಬಾರತೀಯರ ಬೆಂಬಲವನ್ನು ಪಡೆದುಕೊಳ್ಳುವ ಮುಂದಿನ ಹೆಜ್ಜೆಯನ್ನು ಇಡಬಹುದು. ಬೆಂಗಳೂರಿನ ದ್ರಾವಿಡ ನುಡಿಗರು ಒಟ್ಟಾಗಿ ಸೇರಿದರೆ, ಹಿಂದೀಯನ್ನು ಬೆಂಗಳೂರಿಂದ ಒಂದೇ ನಾಳಿನಲ್ಲಿ ತೊಲಗಿಸಬಹುದು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಸಹಜವಾಗಿ ಕನ್ನಡಿಗರೇ ಇಡಬೇಕು. ಕನ್ನಡಿಗರು, ತಮಿಳರು, ತೆಲುಗರು ಮತ್ತು ಮಲಯಾಳಿಗರು ಒಂದಾದರೆ ಹಿಂದೀ ಆಟ ನಡೆಯುವುದಿಲ್ಲ. ಆದರೆ ನಾವೆಲ್ಲ ಹೀಗೆ ಒಂದಾಗುವುದಕ್ಕೆ ನಮ್ಮ ಕನ್ನಡ ಸಂಗಟನೆಗಳೇ ಅಡ್ಡ ಬಂದರೂ ಬರಬಹುದು. ಅಡಿಗಡಿಗೂ ತಮಿಳರನ್ನು ಬಯ್ದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ನಮ್ಮ ಎಶ್ಟೋ ರೋಲ್ಕಾಲ್ ಸಂಗಟನೆಗಳಿಗೆ ದ್ರಾವಿಡರು ಒಂದಾಗುವುದು ಬೇಡ ಎನಿಸಿದರೆ ಅಚ್ಚರಿಯೇನೂ ಇರಬಾರದಶ್ಟೇ?
      ಒಟ್ಟಿನಲ್ಲಿ ನನ್ನ ಅನಿಸಿಕೆ ಇದು - ನಮ್ಮ ಮೆಟ್ರೋದಿಂದ ಹಿಂದಿಯನ್ನು ತೆಗೆಸುವುದಕ್ಕೆ, ಮೊದಲು ನಾವು ಮಾಡಬೇಕಾದುದು ಬೆಂಗಳೂರಿನ ಎಶ್ಟು ಮಂದಿ ಕನ್ನಡಿಗರಿಗೆ ಇದು ಬೇಕಾಗಿದೆ ಎಂದು ತಿಳಿದುಕೊಳ್ಳುವುದು. ಇಂಟರ್‌ನೆಟ್ ಒಂದೇ ಅಲ್ಲದೆ ಬೇರೆ ಇನ್ನು ಯಾವ ಯಾವ ಬಗೆಯಲ್ಲಿ ಇದನ್ನು ಮಾಡಬಹುದು ಎಂಬುದನ್ನು ನಾವು ಎಣಿಸಬೇಕು. ನಿಮಗೇನಾದರೂ ತೋಚಿದರೆ ಎಲ್ಲರೊಡನೆ ಈ ತಾಣದಲ್ಲಿ ಹಂಚಿಕೊಳ್ಳಿ. ನಾವೆಲ್ಲ ಒಬ್ಬಗೆಯಿಂದ ಒಟ್ಟಾಗಿ ನೆಗಳಿದರೆ ಗುರಿಯನ್ನು ಮುಟ್ಟುವುದು ಆಗದ ಮಾತೇನೂ ಅಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್