ಬುಧವಾರ, ಸೆಪ್ಟೆಂಬರ್ 25, 2013

ವಿಶ್ವಕ್ಕೇ ಅಣ್ಣ ನಮ್ಮ ಬಸವಣ್ಣ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮರಾಟರಿಗೆ ಶಿವಾಜಿ ಹೇಗೋ, ತಮಿಳರಿಗೆ ವಳ್ಳುವರ್ ಹೇಗೋ, ತೆಲುಗರಿಗೆ ವೇಮನ ಹೇಗೋ, ಹಾಗೆ ಕನ್ನಡರಿಗೆ ಬಸವಣ್ಣ ’ಸಾಂಸ್ಕ್ರುತಿಕ’ ನಾಯಕನಾದರೆ, ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ ಎಂದು ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಕರರು ಇತ್ತೀಚೆಗೆ ಕಾರ‍್ಯಕ್ರಮವೊಂದರಲ್ಲಿ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ಹೀಗೆಂದು ಸೆಪ್ಟೆಂಬರ್ ಒಂದರ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾಗಿದೆ. ರಾ.ನಂ.ಚಂದ್ರಶೇಕರರ ಈ ಸಲಹೆಯನ್ನು ಕಂಡಾಗ, ’ಬಸವಣ್ಣ ಎಂತಹ ಮಹಾನ್ ವ್ಯಕ್ತಿ! ಇಡೀ ವಿಶ್ವಕ್ಕೇ ಆದರ‍್ಶಪ್ರಾಯನಾಗಿರಬೇಕಾದ ಬಸವಣ್ಣನನ್ನು ಆತನ ನೆಲದಲ್ಲೇ ’ನಾಡ ಲಾಂಚನ’ ವ್ಯಕ್ತಿಯಾಗಿ ಗುರುತಿಸಲಾಗಿಲ್ಲವಲ್ಲ!’ ಎಂದು ನನಗೆ ಕೊಂಚ ಬೇಸರವಾಯಿತು.
      ಪ್ರಾಪಂಚಿಕವಾಗಿ ನೋಡುವುದಾದರೆ, ಬಸವಣ್ಣನಿಗೆ ಯಾವ ಕೊರತೆ ಇತ್ತು? ತಾರುಣ್ಯದಲ್ಲೇ ಹಿರಿಯ ಅದಿಕಾರದ ಪದವಿ ದೊರೆತಿತ್ತು. ದೊರೆ ಬಿಜ್ಜಳನ ಇಡೀ ಬಂಡಾರದ ಪಾರುಪತ್ಯೆಯ ಹೊಣೆಯೇ ಆತನ ಮೇಲಿತ್ತು. ದೊರೆಯ ಮೆಚ್ಚುಗೆ, ಸಮಾಜದ ಮನ್ನಣೆ ಎರಡೂ ಅವನಿಗಿತ್ತು. ಎತ್ತರದ ಪದವಿ ತಂದ ಸಿರಿಸಂಪತ್ತು ಮಾತ್ರವಲ್ಲದೆ ಅವನಿಗೆ ತನ್ನನ್ನು ಚಚ್ಚರದಿಂದ ಅನುಸರಿಸುವ ಅಕ್ಕರೆಯ ಕುಟುಂಬವೂ ಇತ್ತು. ಒಬ್ಬ ಮನುಶ್ಯನಿಗೆ ಇದಕ್ಕಿಂತ ಬೇರೆ ಇನ್ನೇನು ಬೇಕು? ಬಸವಣ್ಣ ಇಂತಹ ಪ್ರಾಪಂಚಿಕ ಸುಕದಲ್ಲಿ ಬದುಕಿನುದ್ದಕ್ಕೂ ಹಾಯಾಗಿ ಇದ್ದುಬಿಡಬಹುದಾಗಿತ್ತು. ಕಶ್ಟಗಳನ್ನು ಮಯ್ಮೇಲೆ ತಂದುಕೊಳ್ಳುವ ಅಗತ್ಯವಾದರೂ ಅವನಿಗೆ ಎಲ್ಲಿತ್ತು? ಆದರೂ ಆತ ಸಮಾಜದ ಒಳಿತಿಗಾಗಿ ಅಪಾಯಗಳಿಗೆ ಮಯ್ ಒಡ್ಡಿದ. ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ತನ್ನ ಬದುಕನ್ನೇ ಸವೆಸಿದ.
      ಪ್ರಪಂಚದಲ್ಲಿ ಹಲವಾರು ನೀತಿಬೋದಕರೂ ಸಮಾಜ ಸುದಾರಕರೂ ಬಂದು ಹೋಗಿದ್ದಾರೆ. ಮನುಶ್ಯರಲ್ಲಿ ಸಮಾನತೆ ಇರಬೇಕೆಂದು ಉಪದೇಶಿಸಿದ್ದಾರೆ. ಮನುಶ್ಯರು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ಅರುಹಿದ್ದಾರೆ. ಪ್ರಾಣಿಪಕ್ಶಿಗಳಲ್ಲಿ ಮರುಕವಿಡಬೇಕೆಂದು ಕೇಳಿಕೊಂಡಿದ್ದಾರೆ. ಆದರೆ, ಅವರಲ್ಲಿ ಎಶ್ಟು ಮಂದಿ ’ಕಾಯಕದ’ ಹಿರಿಮೆಯ ಬಗ್ಗೆ ನುಡಿದಿದ್ದಾರೆ? ಬಸವಣ್ಣ, ಸಾಮಾಜಿಕ ಸಮಾನತೆ, ವಯ್ಯಕ್ತಿಕ ನಯ್ತಿಕತೆ, ಪ್ರಾಣಿದಯೆ ಮುಂತಾದ ಮುನ್ನಿನ ಕೆಲ ಸುದಾರಕರು ಕೊಟ್ಟ ಹಳೆಯ ಸಂದೇಶವನ್ನೇ ತಾನೂ ಇನ್ನೊಮ್ಮೆ ಕೊಟ್ಟು ಸುಮ್ಮನಾಗಲಿಲ್ಲ. ’ಕಾಯಕವೇ ಕಯ್ಲಾಸ’ ಎಂತಲೂ ಹೇಳಿದ. ತನ್ನ ಬಾಳಿನುದ್ದಕ್ಕೂ ಹೇಳಿದಂತೆಯೇ ನಡೆದುಕೊಂಡ. ಬಸವಣ್ಣನಿಗೆ, ಕಾಯಕವೆಂಬುದೇ ಒಂದು ಮಹಾನ್ ವ್ರತ ಎಂಬ ನನ್ನಿಯ ಅರಿವಿತ್ತು. ’ಮಡಕೆ ಮಾಡುವರೆ ಮಣ್ಣೇ ಮೊದಲು’ ಎಂದು ಆತನ ವಚನವೊಂದು ಹೇಳುತ್ತದೆ. ಅದೇ ಪರಿಯಲ್ಲಿ, ’ಪ್ರಪಂಚ ನಡೆವರೆ ಕಾಯಕವೇ ಮೊದಲು’ ಎಂದು ಯಾರೂ ಹೇಳಬಹುದು. ಮಂದಿ ಕೆಲಸ ಮಾಡಲಿಲ್ಲ ಎಂದರೆ ಪ್ರಪಂಚ ಎಲ್ಲಿರುತ್ತದೆ? ಅಶ್ಟು ಮುಕ್ಯ, ಕೆಲಸ ಮಾಡುವುದು. ಮಾಡುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ, ಅದರಲ್ಲೇ ಕಯ್ವಲ್ಯವನ್ನು ಪಡೆಯಿರಿ ಎನ್ನುವ ಬಸವಣ್ಣ ಸಾರಿದ ಮತದ ಎತ್ತರವನ್ನು ಅದೆಶ್ಟು ಉಳಿದ ಮತಗಳು ತಲುಪಲಾರುವವು?
      ಪ್ರಾಣಿದಯೆಯ ವಿಶಯದಲ್ಲೂ ಅಶ್ಟೆ. ಬಸವಣ್ಣನ ಕಣ್ಣೋಲಿನಲ್ಲಿ ವಸ್ತುನಿಶ್ಟತೆ ಇತ್ತು. ಮಾಂಸಕ್ಕಿಂತ ಮಾಂಸವನ್ನು ಪಡೆದುಕೊಳ್ಳುವುದರ ಹಿಂದಿನ ಹಿಂಸೆಯ ಬಗ್ಗೆ ಅವನಿಗೆ ಹೆಚ್ಚು ಕಾಳಜಿಯಿತ್ತು. ಮೊದಲೇ ಸತ್ತು ಹೊರಗೆಸೆಯಲಾಗಿದ್ದ ಹಸುವಿನ ಬಾಡನ್ನು ತಿನ್ನುವ ಕುಲವಿಲ್ಲದವರಿಗಿಂತ, ಜೀವಂತಿಕೆ ಕುಲುಕಿ ಚಿಮ್ಮುವ ಎಳೆಯ ಪ್ರಾಣಿಗಳನ್ನು ಕೊಂದು, ಬಾಡುಂಡು ತೇಗುವ ಕುಲಜರೇ ಕೀಳು ಎಂಬ ವಸ್ತುನಿಶ್ಟ ಅಬಿಪ್ರಾಯ ಅವನದಾಗಿತ್ತು. ’ಹೊತ್ತು ತಂದು ಕೊಲುವಿರಿ ನೀವು!’ ಎಂದು ಎಳವಾಡಿಗೆ ಆಟಿಸುವ ಸವರ‍್ಣೀಯರನ್ನು ತನ್ನ ಒಂದು ವಚನದಲ್ಲಿ ಅವನು ನೇರವಾಗೇ ಮೂದಲಿಸಿದ್ದಾನೆ.
      ಬಸವಣ್ಣನಿಗೆ ಸತ್ತ ಬಳಿಕ ಸಿಗುವ ಸ್ವರ‍್ಗಕ್ಕಿಂತ ಇಂದಿದ್ದು ಬಾಳುವ ಎಂದಿನ ಪ್ರಪಂಚದ ಏಳಿಗೆಯೇ ಮುಕ್ಯವಾಗಿತ್ತು. ವಿದವೆಯರ ಮರುಮದುವೆಗೆ ತಡೆ ಇರಬಾರದೆಂದ. ಬೆಲೆವೆಣ್ಣುಗಳ ಬಿಡುಗಡೆಗೆ ಮಿಡುಕಿದ. ಜಾತೀಯತೆಯನ್ನಂತೂ ಅತ್ಯಂತ ಕಟುವಾಗಿ ವಿರೋದಿಸಿದ. ಜಾತೀಯತೆಯ ಎದುರು ತಾನು ತಳೆದಿದ್ದ ಕಡುನಿಲುವನ್ನು ಎಂದೂ ಆತ ಸಡಿಲಿಸಲಿಲ್ಲ. ಕಡೆಕಡೆಗೆ ಜಾತೀಯತೆಗೆ ಪತ್ತಿದ ಗಟನೆಯೊಂದರಿಂದ ಅವನ ಪ್ರಾಣಕ್ಕೇ ಕುತ್ತು ಬರುವಂತಾಗಿ, ಆತ ಊರನ್ನೇ ತೊರೆದು ಹೋಗಬೇಕಾಯಿತು.
      ಇಂತಹ ಒಬ್ಬ ದೀರ ದೇವತಾ ಮನುಶ್ಯನನ್ನು ನಮ್ಮ ನಾಡಿನ ಲಾಂಚನವನ್ನಾಗಿ ನಾವು ಇನ್ನೂ ಮಾಡಿಕೊಂಡಿಲ್ಲ ಎನ್ನುವುದನ್ನು ನೆನೆದರೇ ಆಶ್ಚರ‍್ಯವಾಗುತ್ತದೆ. ಇದಕ್ಕೆ ಕಾರಣ ಏನಿರಬಹುದು? ಜಾತೀಯತೆಯ ಕೋತಿಹಿಡಿಯಲ್ಲಿ ಸಿಲುಕಿರುವ ನಮ್ಮ ಸಮಾಜ ಬಸವಣ್ಣನನ್ನು ವೀರಶಯ್ವ ಮತದೊಂದಿಗೆ ತಳಿಕೆ ಹಾಕಿರುವುದೇ ಕಾರಣವಿರಬಹುದೆ? ’ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಿಕೊಂಡರೆ ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ’ - ಇದು ಈ ಮೊದಲು ತಿಳಿಸಿದಂತೆ ರಾ.ನ.ಚಂದ್ರಶೇಕರರ ಅಬಿಪ್ರಾಯ. ನನಗನ್ನಿಸುತ್ತದೆ, ಇಂದಿನ ಜಾತಿಮರುಳಿನ ನೆಲೆಯಲ್ಲಿ ಯಾರಾದರೂ ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಹೊರಟರೆ, ಒಮ್ಮತದ ಮಾತು ಬಿಡಿ, ಕನ್ನಡಿಗರಲ್ಲಿ ಒಂದು ಮಿನಿ ಕಾಳಗವೇ ನಡೆದರೂ ನಡೆಯಬಹುದು. ಎಂತಹ ನಾಚಿಕೆಗೇಡು ಇದು!
      ಎಂದಾದರೊಂದು ದಿನ ನಮ್ಮಲ್ಲಿಯ ಜಾತೀಯತೆಯ ಸಣ್ಣತನ ತೊಲಗಿ, ನಮ್ಮ ದ್ರಾವಿಡ ನೆಲದಲ್ಲಿ ಹುಟ್ಟಿ, ನಮ್ಮ ಮೆಚ್ಚಿನ ದ್ರಾವಿಡ ನುಡಿಯಾದ ಕನ್ನಡದಲ್ಲೇ ಇಡೀ ವಿಶ್ವವೇ ಒಪ್ಪುವಂತಹ ಮತವನ್ನು ಸಾರಿ ಸಂದ ಬಸವಣ್ಣ, ನಮ್ಮೆಲ್ಲರ ನಾಯಕನಾಗಿ, ನಮ್ಮ ನಾಡಕುರುಹಾಗಿ ಮೆರೆಯುತ್ತಾನೆ ಎಂದು ಸದ್ಯಕ್ಕೆ ಹಾರಯ್ಸೋಣ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಸೆಪ್ಟೆಂಬರ್ 10, 2013

ನನ್ನಿಯೋ ಇಲ್ಲ ಬರೀ ಆಶಾವಾದವೋ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಆಗಸ್ಟ್ ಹತ್ತರ The Times of India ಪತ್ರಿಕೆಯಲ್ಲಿ, ಕನ್ನಡ ನುಡಿಯ ಬವಿಶ್ಯದ ಬಗ್ಗೆ ನಡೆದ ಕಾರ‍್ಯಕ್ರಮವೊಂದರ ಸುದ್ದಿ ಪ್ರಕಟವಾಗಿದೆ. ಆ ಕಾರ‍್ಯಕ್ರಮದಲ್ಲಿ ಕನ್ನಡ ನುಡಿವೊಲದಲ್ಲಿ  ಹೆಸರು ಮಾಡಿರುವ ಶ್ರೀಯುತರಾದ ಜಿ.ವೆಂಕಟಸುಬ್ಬಯ್ಯ, ಕೆ.ವಿ.ನಾರಾಯಣ್, ಗಣೇಶ್ ದೇವಿ ಮುಂತಾದವರು ಬಾಶಣ ಮಾಡಿದ್ದಾರೆ. ಸುದ್ದಿ ಬರಹ ಅವರ ಬಾಶಣಗಳಿಂದ ಕೆಲ ಮುಕ್ಯ ಅಬಿಪ್ರಾಯಗಳನ್ನು ಎತ್ತಿ ಓದುಗರ ಮುಂದಿಟ್ಟಿದೆ. ಬಾಶಣಗಳ ಒಟ್ಟಾರೆ ತೀರ‍್ಮಾನ ಕನ್ನಡದೊಲವಿಗಳಿಗೆ ಹಿಗ್ಗು ತರುವಂತಹುದೇ ಆಗಿದೆ. ಏಕೆಂದರೆ, ’ಕನ್ನಡ ನುಡಿಗೆ ಕುಂದಿಲ್ಲ. ಬರುವ ನೂರಾರು ವರ‍್ಶ ಕನ್ನಡ ನುಡಿ ಏಳಿಗೆವೆತ್ತು ಸಂಬ್ರಮದಿಂದ ಬಾಳಿ ಬದುಕಲಿದೆ’ - ಇದು ಬಾಶಣಗಳು ಒಮ್ಮತದಿಂದ ವ್ಯಕ್ತಪಡಿಸಿದ ಅಬಿಪ್ರಾಯ.
      ಈ ಬಗೆಯ ಗೆಲುನೋಟಕ್ಕೆ ಬಾಶಣಕಾರರು ಕೊಟ್ಟ ಆದಾರಗಳನ್ನು ಸುದ್ದಿ ಉದ್ದರಿಸಿದೆ. ’ಕನ್ನಡಕ್ಕೆ ಎರಡು ಸಾವಿರ ವರ‍್ಶಗಳ ಇತಿಹಾಸವೂ ಮೇಲುನುಡಿಪಿನ (ಶ್ರೇಶ್ಟಸಾಹಿತ್ಯದ) ಬೆಳೆಯೂ ಇದೆ. ಅಂದದ ಲಿಪಿ ಇದೆ. ಬಗೆಗೊಳುವ ಇನಿದಾದ ದನಿ ಇದೆ. ಮುಕ್ಯವಾಗಿ, ಅದನ್ನಾಡುವ ಕೋಟಿಕೋಟಿ ಮಂದಿಯ ಸಂಕ್ಯಾಬಲದ ಅಡಿಗಲ್ಲೂ ಇದೆ’ - ಇದು ನಡೆದಾಡುವ ನಿಗಂಟು ವೆಂಕಟಸುಬ್ಬಯ್ಯನವರ ಅನಿಸಿಕೆಯಾದರೆ, ನುಡಿಯರಿಗ ಕೆ.ವಿ.ನಾರಾಯಣ್ ಅವರು ಹೇಳಿರುವುದು ಹೀಗೆ - ’ಯಾವುದೇ ನುಡಿ ಅಳಿಯುವುದು ಅದನ್ನಾಡುವವರು ಅಳಿದರೆ ಮಾತ್ರ. ಕನ್ನಡಕ್ಕೆ ಅಳಿಯುವ ಬಯವಿಲ್ಲ. ಆದರೆ, ಒಂದೇ ನುಡಿ ಚಲಾವಣೆಯಲ್ಲಿರುವಂತಹ ಪರಿಸರಗಳು ಇನ್ನು ಮುಂದೆ ಇರುವ ಹಾಗಿಲ್ಲ. ಒಂದೇ ಪರಿಸರದಲ್ಲಿ ಹಲನುಡಿಗಳ ಬಳಕೆಯಾಗುವುದೇ ಬವಿಶ್ಯದ ವಾಸ್ತವ. ಸಂಕ್ಯಾಬಲ ಅಶ್ಟೊಂದು ಮುಕ್ಯವಲ್ಲ. ಏಕೆಂದರೆ, ಕೊಂಕಣಿ ಆಡುವರಿಗಿಂತ ಹಲವುಪಟ್ಟು ಹೆಚ್ಚು ಮಂದಿ ಗೋಂಡೀ ನುಡಿಯನ್ನು ಆಡುತ್ತಾರೆ. ಆದರೆ, ಸಂವಿದಾನದಲ್ಲಿ ಕೊಂಕಣಿಯನ್ನು ಹೆಸರಿಸಿದ್ದಾರೆಯೇ ಹೊರತು ಗೋಂಡೀಯನ್ನಲ್ಲ’. ಇನ್ನು ಮತ್ತೊಬ್ಬ ನುಡಿಯರಿಗರಾದ ಗಣೇಶ್ ದೇವಿ ಅವರು ಅಬಿಪ್ರಾಯಪಟ್ಟದ್ದು ಹೀಗೆ - ’ಕನ್ನಡಕ್ಕೆ ಎಲ್ಲ ನುಡಿಗಳಿಂದಲೂ ಪದಸಂಪತ್ತನ್ನು ತಂದುಕೊಳ್ಳುವ ಯುಕ್ತಿ ಇದೆ. ಬಾಶೆಗಳು ಅಳಿಯುತ್ತವೆ ಎನ್ನುವುದೇ ಸುಳ್ಳು. ಬಾಶೆಗಳು ಕಲುಶಿತವಾಗುತ್ತವೆ ಎನ್ನುವುದೂ ಸುಳ್ಳು. ಬಾಶೆಗಳು ಹೊಳೆಗಳ ಹಾಗೆ. ಹಲವು ಮೂಲಗಳಿಂದ ಕಸುವನ್ನು ಪಡೆದುಕೊಂಡು ನಿರಂತರವಾಗಿ ಹರಿಯುತ್ತವೆ, ಸಾಯುವುದಿಲ್ಲ. ಕನ್ನಡವೇ ಇದಕ್ಕೆ ಒಂದು ಒಳ್ಳೆಯ ಎತ್ತುಗೆ (ಉದಾಹರಣೆ)’.
      ಈ ಅನಿಸಿಕೆಗಳನ್ನು ಕೇಳಿದರೆ ಯಾವ ಕನ್ನಡಿಗನಿಗೇ ಆಗಲಿ ಸಂತೋಶವಾಗಬೇಕು. ನನಗೂ ಆಯಿತು. ಆದರೆ, ಒಡನೆಯೇ ಕೆಲ ಸಂದೇಹಗಳೂ ತಲೆ ಎತ್ತಿದುವು. ನಾನು ನುಡಿಯರಿಗನಲ್ಲ. ನುಡಿಗಳ ಬಗೆಗಿನ ಪೇರರಿವು ನನಗೆ ಕಂಡಿತ ಇಲ್ಲ. ಮೇಲೆ ಹೆಸರಿಸಿದ ಅರಿಗರ ತೀರ‍್ಮಾನಗಳನ್ನು ಅಲ್ಲಗಳೆಯುವ ಗುಂಡಿಗೆ ನನಗಿಲ್ಲ. ಆದರೂ, ಅವರ ಅನಿಸಿಕೆಗಳು ಇಡಿನನ್ನಿ (ಪೂರ‍್ಣ ಸತ್ಯ) ಅಲ್ಲ ಎನಿಸುವ ಸಂದೇಹಗಳು ನನ್ನಲ್ಲಿ ಮೂಡಿವೆ. ಅವುಗಳನ್ನು ಕಿರಿದಾಗಿ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.
      ಯಾವುದೇ ನುಡಿಯ ಇಂದಿನ ಹಾಗೂ ನಾಳೆಯ ಆರೋಗ್ಯವನ್ನು ಅದರ ಚರಿತ್ರೆ ಮತ್ತು ಸಾಹಿತ್ಯಗಳ ಹಳಮೆಯಿಂದ ನಿಜಕ್ಕೂ ಅಳೆಯಲು ಬರುತ್ತದೆಯೆ? ಕನ್ನಡದಲ್ಲಿ ’ಹಳೆಯ’ ನುಡಿಪೇನೋ ಬೇಕಾದಶ್ಟಿದೆ. ಆದರೆ, ಅದನ್ನು ಓದುವವರು ಎಶ್ಟಿದ್ದಾರೆ? ಜನ, ಬಾಶೆಗೆ ಇಂದು ಎಶ್ಟು ಉಪಯೋಗ ಇದೆ ಎಂಬುದರ ಬಗ್ಗೆ ಯೋಚಿಸುತ್ತಾರೆಯೆ ಹೊರತು ಅದರ ಚರಿತ್ರೆಯ ಬಗ್ಗೆ ಅಲ್ಲ. ಇನ್ನು, ’ಸಂಕ್ಯಾಬಲವಿದ್ದರೆ ನುಡಿ ಅಳಿಯುವುದಿಲ್ಲ’ ಮತ್ತು ’ಆಡುಗರು ಅಳಿಯದಿದ್ದರೆ ನುಡಿ ಅಳಿಯುವುದಿಲ್ಲ’ ಎಂಬ ನಂಬಿಕೆಗಳ ಬಗ್ಗೆ ಕೊಂಚ ಯೋಚಿಸೋಣ. ಉದಾಹರಣೆಗಾಗಿ, ಮೆಕ್ಸಿಕೋ ದೇಶದಲ್ಲಿದ್ದ ಮತ್ತು ಇಡೀ ದಕ್ಶಿಣ ಅಮೆರಿಕದ ದೇಶಗಳಲ್ಲಿದ್ದ ಸ್ತಳೀಯ ಬಾಶೆಗಳ ಪಾಡು ಏನಾಯಿತು ಎಂಬುದನ್ನು ಒಂದಿಶ್ಟು ಗಮನಿಸೋಣ. ಆ ನಾಡುಗಳಿಗೆ ವಲಸೆ ಹೋದ ಅಯ್‍ರೋಪ್ಯರ ಸಂಕ್ಯೆ ಅಲ್ಲಿನ ಸ್ತಳೀಯರ ಸಂಕ್ಯೆಗೆ ಹೋಲಿಸಿದರೆ ಬಹಳ ಕಡಿಮೆ. ಆದರೂ, ಅಯ್‍ರೋಪ್ಯರ ಸ್ಪ್ಯಾನಿಶ್ ಮತ್ತು ಪೋರ‍್ಚುಗೀಸ್ ಬಾಶೆಗಳು ಸ್ತಳೀಯರ ಬಾಶೆಗಳನ್ನು ಬಗ್ಗು ಬಡಿದವು! ಈಗ ಅಲ್ಲಿ, ಎಲ್ಲೋ ಅಲ್ಲೊಂದು ಇಲ್ಲೊಂದು ಸ್ತಳೀಯ ಬಾಶೆಗಳು ಬರೀ ಮನೆಗಳಿಗೆ ಮತ್ತು ಹಟ್ಟಿಗಳಿಗೆ ಸೀಮಿತವಾಗಿ, ಇದ್ದೂ ಸತ್ತಂತೆ ಬಳಕೆಯಲ್ಲಿವೆ. ಅಶ್ಟಕ್ಕೂ ಅಯ್‍ರೋಪ್ಯರ ಬರವಿನಿಂದಾಗಿ ಅಮೆರಿಕ ಕಂಡದ ಸ್ತಳೀಯ ಜನರೇನೂ ಅಳಿದು ಹೋಗಲಿಲ್ಲ. ಅವರ ಸಂತತಿ ನಿರಂತರವಾಗಿ ಬಾಳಿ ಬದುಕಿಕೊಂಡೇ ಬಂದಿದೆ. ಆದರೆ, ಅವರ ಬಾಶೆಗಳು ಮಾತ್ರ ಇತಿಹಾಸದ ಪುಟಗಳನ್ನು ಸೇರಿಕೊಂಡಿವೆ. ಅಂದರೆ, ಆಡುಗರು ಅಳಿಯಲಿಲ್ಲ, ಆದರೆ ಅವರ ಬಾಶೆಗಳು ಅಳಿದವು. ಇದಕ್ಕೆ ಕಾರಣ ಏನು? ಸ್ತಳೀಯರು ವಲಸೆ ಬಂದ ಅಯ್‍ರೋಪ್ಯರ ಕಯ್ಯಲ್ಲಿ ಸೋತು ಆಳಿಸಿಕೊಂಡರು! ಪರಿಣಾಮವಾಗಿ ಅಯ್‍ರೋಪ್ಯರ ನುಡಿಗಳು ’ಉಪಯುಕ್ತ’ ಎನಿಸಿದುವು. ಸ್ತಳೀಯರ ನುಡಿಗಳು ’ಅನುಪಯುಕ್ತ’ ಎನಿಸಿದುವು. ಅಶ್ಟೇ ಕಾರಣ.
      ದೂರದ ಅಮೆರಿಕ ಕಂಡಗಳು ಬೇಡ. ಕನ್ನಡದ ಚರಿತ್ರೆಯನ್ನು ನೋಡಿದರೇ ಮೇಲಿನ ನಂಬುಗೆಗಳು ಎಶ್ಟರಮಟ್ಟಿಗೆ ಸರಿ ಎನ್ನುವ ಸಂದೇಹ ಮೂಡುತ್ತದೆ. ಹಲವಾರು ವಿದ್ವಾಂಸರ ಪ್ರಕಾರ ಮಹಾರಾಶ್ಟ್ರದಲ್ಲಿ ಮೊದಲು ಕನ್ನಡವೇ ಜನರ ಮಾತಾಗಿತ್ತು. ಆದರೆ, ಕಾಲಕ್ರಮೇಣ ಮರಾಟಿ ಅಲ್ಲಿ ಕನ್ನಡವನ್ನು ಅಳಿಸಿ ಹಾಕಿತು. ಈ ಸತ್ಯದ ಬಗ್ಗೆ ಡಾ.ಚಿದಾನಂದ ಮೂರ‍್ತಿಯವರು ಅವರ ’ಬ್ರುಹತ್ ಬಾಶಿಕ ಕರ‍್ನಾಟಕ’ ಎಂಬ ಓದುಗೆಯಲ್ಲಿ ವಿವರವಾಗಿ ಬರೆದಿದ್ದಾರೆ. ಇದರ ಅರ‍್ತ ಏನು? ಕನ್ನಡರೇನೂ ಮಹಾರಾಶ್ಟ್ರದಿಂದ ಎಲ್ಲಿಗೋ ಓಡಿ ಹೋಗಲಿಲ್ಲ. ಕನ್ನಡವನ್ನು ಬಿಟ್ಟು ಮರಾಟಿಯನ್ನು ಕಯ್ಗೆತ್ತಿಕೊಂಡರು, ಅಶ್ಟೆ. ಕನ್ನಡಿಗರ ಸಂಕ್ಯಾಬಲವಾಗಲೀ, ಮುಂದುವರೆದ ಅವರ ಸಂತತಿಗಳಾಗಲೀ ಅವರಿಗೆ ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ನೆರವಾಗಲಿಲ್ಲ.
      ಕಡೆಯದಾಗಿ, ’ನುಡಿಗಳು ಹೊಳೆಗಳ ಹಾಗೆ. ಹರಿಯುತ್ತಲೇ ಇರುತ್ತವೆ. ಸಾಯುವುದಿಲ್ಲ’ ಎಂಬ ಅಬಿಪ್ರಾಯದ ಬಗ್ಗೆ ನನಗೆ ಹೊಳೆಯುವುದು ಇದು. ನಿಸರ‍್ಗದ ಇತಿಹಾಸದಲ್ಲಿ ನೂರಾರು ಹೊಳೆಗಳು ಬತ್ತಿಹೋಗಿವೆ. ಮನುಶ್ಯನ ಇತಿಹಾಸದಲ್ಲಿ ನೂರಾರು ನುಡಿಗಳು ಕಣ್ಮರೆಯಾಗಿವೆ. ಹಾಗಾಗಿ, ಹೊಳೆಗಳಾಗಲೀ ನುಡಿಗಳಾಗಲೀ ನೆಲೆಯಾದುವಲ್ಲ.
      ಒಬ್ಬ ಸಾಮಾನ್ಯ ಬಾಶಾಸಕ್ತನಾಗಿ ನನ್ನ ಅನಿಸಿಕೆ ಇದು - ’ಯಾವುದೇ ಬಾಶೆ, ಜನರ ಕಣ್ಣಿಗೆ ಉಪಯುಕ್ತ ಎನಿಸಿದರೆ ತಾನಾಗೇ ಉಳಿದುಕೊಳ್ಳುತ್ತದೆ. ಉಪಯುಕ್ತ ಅಲ್ಲ ಎನಿಸಿದರೆ, ಅದರ ಉಳಿವು ಅದರ ಆಡುಗರ ಇಚ್ಚಾಶಕ್ತಿಯನ್ನು ಅವಲಂಬಿಸಿರುತ್ತದೆ. ಆಡುಗರ ಬೆಂಬಲವಿಲ್ಲದಿದ್ದರೆ ಯಾವುದೇ ನುಡಿಯಾಗಲೀ ಉಳಿಯುವುದಿಲ್ಲ. ಸಂಕ್ಯಾಬಲ ಮುಂತಾದ ವಾದಗಳಿಗೆ ಅಶ್ಟಿಶ್ಟು ಹುರುಳಿರಬಹುದು. ಆದರೆ, ಆಡುಗರ ಇಚ್ಚಾಶಕ್ತಿಯಶ್ಟು ಮುಕ್ಯ ಅವು ಎಂದೆಂದೂ ಅಲ್ಲ’. ಹಾಗಾಗಿ, ಪ್ರಶ್ನೆ ಇದು - ಕನ್ನಡಿಗರಿಗೆ ಕನ್ನಡವನ್ನು ಉಳಿಸಿಕೊಳ್ಳುವ ಇಚ್ಚಾಶಕ್ತಿ ಇದೆಯೆ? ಇದ್ದರೆ ಕನ್ನಡಕ್ಕೆ ಕುಂದಿಲ್ಲ.
      ಇಶ್ಟೆಲ್ಲಾ ಸಂದೇಹಗಳಿದ್ದರೂ, ಮೇಲಿನ ನುಡಿಯರಿಗರು ಕಂಡಿರುವ ಕಾಣ್ಕೆ ಕನ್ನಡದ ಪಾಲಿಗೆ ಸರಿಗಾಣ್ಕೆಯಾಗಲಿ ಎಂದೇ ನಾನು ಬಯಸುತ್ತೇನೆ. ಅಳಿದುಳಿದಿರುವ ಕೆಲವೇ ದ್ರಾವಿಡ ಸೊಲ್ಲುಗಳಲ್ಲಿ ಮುಕ್ಯವೆನಿಸಿರುವ ನಮ್ಮ ಕನ್ನಡ ನುಡಿಗೆ ಕೊನೆ ಎಂದೂ ಬಾರದಿರಲಿ ಎಂದೇ ನಾನು ಹಾರಯ್ಸುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್