ಗುರುವಾರ, ಫೆಬ್ರವರಿ 21, 2013

ಹಿಂದೀ ಹುಚ್ಚು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊತ್ತಮೊದಲ ನಾಳು, ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕೆಲ ಗಣ್ಯರ ಮತ್ತು ವೇದಿಕೆಗೆ ಕಾವಲಾಗಿದ್ದ ಪೋಲೀಸರ ನಡುವೆ ಗದ್ದಲ ನಡೆಯಿತು ಎಂಬುದನ್ನು ನೀವು ಕೇಳಿರಬಹುದು. ಬರೀ ಗದ್ದಲವಲ್ಲದೆ, ಹಗುರಾಗಿ ನೂಕಾಟ ತಳ್ಳಾಟವೂ ನಡೆಯಿತು ಎಂದು ಮಾದ್ಯಮಗಳು ವರದಿ ಮಾಡಿದ್ದವು.
      ಮುಕ್ಯಮಂತ್ರಿಗಳು ವೇದಿಕೆಗೆ ಬರುವವರೆಗೆ ಗಣ್ಯರನ್ನಾಗಲೀ ಯಾರನ್ನೇ ಆಗಲಿ, ವೇದಿಕೆಯ ಮೇಲೆ ಹೋಗಲು ಬಿಡುವುದಿಲ್ಲ ಎಂದು ಅಲ್ಲಿ ಕಾರ‍್ಯ ನಿರ‍್ವಹಿಸುತ್ತಿದ್ದ ಅಯ್.ಪೀ.ಎಸ್. ಅದಿಕಾರಿ ಹಟ ಹಿಡಿದಿದ್ದರಂತೆ. ಅವರ ಹಟಮಾರಿತನಕ್ಕೆ ಮಾಜಿ ಕಸಾಪ ಅದ್ಯಕ್ಶ ನೆಲ್ಲೂರು ಪ್ರಸಾದರು ಕೊಂಚ ಕಟುವಾಗಿ ವಿರೋದ ತೋರಿಸಿದಾಗ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಅದಿಕಾರಿ ಪಕ್ಕದಲ್ಲಿದ್ದ ಪೇದೆಗಳಿಗೆ ಆಜ್ನೆ ಮಾಡಿದರಂತೆ. ಅದರಿಂದ ಶುರುವಾಯಿತಂತೆ ನೂಕಾಟ ತಳ್ಳಾಟ. ಇಲ್ಲಿ ತಮಾಶೆ ಏನೆಂದರೆ, ಆ ಅಯ್.ಪೀ.ಎಸ್. ಅದಿಕಾರಿ, ’ಇವನನ್ನ ಕೂಡಲೇ ಅರೆಸ್ಟ್ ಮಾಡು’ ಎಂದು ಕೂಗಿದ್ದು ಹಿಂದೀ ಬಾಶೆಯಲ್ಲಿ. ಬಹುಶಹ ಅವರಿಗೆ ಕನ್ನಡ ಇನ್ನೂ ಬರುತ್ತಿಲ್ಲವೇನೋ, ಇಲ್ಲ,  ಅವರ ತಾಯ್ನುಡಿ ಹಿಂದೀ ಇರಬಹುದೇನೋ. ಆವೇಶದ ಬರದಲ್ಲಿ ಅವರ ಬಾಯಿಂದ ತಾಯ್ನುಡಿಯಲ್ಲಿ ಆಜ್ನೆ ಹೊರಟಿರಬಹುದೇನೋ. ಆದರೂ, ಕನ್ನಡ ನುಡಿ ಜಾತ್ರೆಯ ಮುಕ್ಯ ವೇದಿಕೆಯ ಬಳಿ ಹಿಂದಿಯಲ್ಲಿ ಕೂಗಬಾರದೆಂಬ ಪರಿಜ್ನಾನ ಅವರಿಗೆ ಇರಬೇಕಾಗಿತ್ತು. ಕರ‍್ನಾಟಕದ ಬದಲು ತಮಿಳುನಾಡಿನಲ್ಲಿ ಇಂತಹ ಒಂದು ಕಾರ‍್ಯಕ್ರಮ ನಡೆದಿದ್ದರೆ, ಅದಿಕಾರಿಗಳಿಗೆ, ಅವರೆಶ್ಟೇ ಹೊಸಬರಾಗಿರಲಿ,  ಒಬ್ಬ ತಮಿಳು ಗಣ್ಯನನ್ನು ಅರೆಸ್ಟ್ ಮಾಡು ಎಂದು ಹಿಂದೀಯಲ್ಲಿ ಕೂಗುವ ಎದೆಗಾರಿಕೆ ಬರುತ್ತಿತ್ತೆ? ಬರುತ್ತಿರಲಿಲ್ಲ. ಕರ‍್ನಾಟಕದಲ್ಲಿ ಮಾತ್ರ ಯಾರಿಗೇ ಆದರೂ ಯಾವ ಸಂದರ‍್ಬದಲ್ಲಾದರೂ ಆ ಎದೆಗಾರಿಕೆ ಸುಲಬವಾಗಿ ಬರುತ್ತದೆ. ಅಂದ ಹಾಗೆ, ಗಲಾಟೆಗೆ ಕಾರಣ ’ಅರೆಸ್ಟ್ ಮಾಡು’ ಎಂದದ್ದೋ, ಇಲ್ಲ, ಅದನ್ನು ಹಿಂದೀಯಲ್ಲಿ ಹೇಳಿದ್ದೋ ಎಂಬುದು ಇನ್ನೂ ತಿಳಿದಿಲ್ಲ.
      ತಮಿಳರು, ನಾವು, ಇಬ್ಬರೂ ಒಟ್ಟಾರೆ ದ್ರಾವಿಡರೇ. ಆದರೂ, ಹಿಂದಿಯ ಬಗೆಗಿನ ನಿಲುವಿನಲ್ಲಿ ಅವರಿಗೂ ನಮಗೂ ಎಶ್ಟೊಂದು ಬೇರ‍್ಮೆ! ಇತ್ತೀಚೆಗೆ, ಮದುರಯ್ ಜಿಲ್ಲೆಯ ಆಡಳಿತಾದಿಕಾರಿ, ’ಮದುರಯ್‍ನ ಹೆಸರಾಂತ ಗುಡಿಗಳನ್ನು ನೋಡಲು ಬಡಗ ಬಾರತದ ಬಹುಮಂದಿ ಬರುತ್ತಿರುತ್ತಾರೆ. ಅವರ ಅನುಕೂಲಕ್ಕಾಗಿ ಇನ್ನು ಮುಂದೆ ಹಿಂದೀಯಲ್ಲೂ ಪಲಕಗಳನ್ನು ಹಾಕೋಣ’ ಎಂದು ಕಾರಣ ಕೊಟ್ಟು, ಹಾಗೇ ಮಾಡುವುದಾಗಿ ಆದೇಶ ಹೊರಡಿಸಿದರು. ಕೂಡಲೇ ಅದಕ್ಕೆ ಮದುರೆಯ ತಮಿಳರಿಂದ ಎಂತಹ ಕಟ್ಟೆದಿರು ವ್ಯಕ್ತವಾಯಿತೆಂದರೆ, ಜಿಲ್ಲಾದಿಕಾರಿ ತಮ್ಮ ಆದೇಶವನ್ನು ತಕ್ಶಣವೇ ರದ್ದು ಮಾಡಬೇಕಾಯಿತು (ಈ ಸುದ್ದಿ ಫೆಬ್ರವರಿ ೭, ೨೦೧೩ರ ಪ್ರಜಾವಾಣಿಯಲ್ಲಿ ವರದಿಯಾಗಿದೆ). ತಮಿಳರ ಈ ನಡೆ, ನಮ್ಮ ಕಣ್ಣಿನಲ್ಲಿ, ಹಿಂದೀ ದ್ವೇಶ ಎನಿಸಬಹುದು. ಆದರೆ, ಹಿಂದೀಯಂತಹ ವಸಾಹತುಶಾಹಿ ಬಾಶೆಯನ್ನು ತಡೆಯಲು ತಮಿಳರು ಪಾಲಿಸುವ ನೀತಿಯೇ ಸರಿಯಾದ ನೀತಿ.
      ನಾವೂ ಹಿಂದೊಮ್ಮೆ ಹಿಂದಿಗೆ ಕಟ್ಟೆದಿರನ್ನು ತೋರಿಸಿದ್ದೆವು. ೧೯೬೮ರಲ್ಲಿ ಕೇಂದ್ರ ಸರ‍್ಕಾರ ಹಿಂದೀಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡಲು ಹೊರಟಾಗ, ತಮಿಳರು ಮತ್ತು ಬಂಗಾಳಿಗಳ ಒಡನೆ ನಾವೂ ’ಆಗದು’ ಎಂದು ಕೂಗಿದ್ದೆವು. ಅಂದಿನ ವಿರೋದ ಇಂದು ಎಲ್ಲಿ ಹೋಯಿತೋ ತಿಳಿಯುವುದಿಲ್ಲ. ಬೆಳಗಾವಿಯಲ್ಲಿ ನಡೆದ ಕನ್ನಡ ವಿಶ್ವ ಸಮ್ಮೇಳನದಲ್ಲಿ ಅಯ್‍ಶ್ವರ‍್ಯಾ ರಯ್ ಹಿಂದೀಯಲ್ಲಿ ಬಾಶಣ ಬಿಗಿದಾಗ ನಮ್ಮಿಂದ ಆಕ್ಶೇಪಣೆ ಏಳಲಿಲ್ಲ. ಬಡಗ ಬಾರತದ ದುರೀಣರು ಬಂದು ನಮ್ಮೆದುರು ’ಕರ‍್ನಾಟಕದ ಬಾಶೆಯೇ ಹಿಂದಿ’ ಎನ್ನುವ ಹಾಗೆ ಹಿಂದೀಯಲ್ಲಿ ಬಾಶಣಗಳನ್ನು ಕಿರುಚುವಾಗ ನಾವು ತುಟಿಪಿಟಕ್ಕೆನ್ನುವುದಿಲ್ಲ. ಏನಾಯಿತು ನಮಗೆ? ತ್ರಿಬಾಶಾ ಸೂತ್ರಕ್ಕೆ ನಮ್ಮನ್ನು ನಾವೇ ಒಳಪಡಿಸಿಕೊಂಡದ್ದರ ಪರಿಣಾಮವೇ ಇದು?
      ಹಿಂದಿಯ ಮಟ್ಟಿಗೆ ವಿರೋದ ಹೋಗಿರುವುದಶ್ಟೇ ಅಲ್ಲ, ವಿರೋದದ ಬದಲು ಅಪ್ಪಟ ಉತ್ಸಾಹ ನಮ್ಮ ಮಂದಿಗೆ ಬಂದಿರುವಂತೆ ಕಾಣಿಸುತ್ತದೆ. ಎಶ್ಟೋ ಕಡೆ ನಾವೇ ಮೇಲೆ ಬಿದ್ದು ಹಿಂದೀ ಮಾತಾಡುತ್ತೇವೆ. ಗೇಟನ್ನು ಕಾಯುವ ಸೆಂಟ್ರೀಗಳಿಗೆ, ಲಿಫ್ಟುಗಳನ್ನು ನಡೆಸುವವರಿಗೆ ನಾವಾಗಿ ನಾವು ಹಿಂದಿಯಲ್ಲಿ ಮಾತಾಡಿಸುತ್ತೇವೆ. ಮಾಲುಗಳಲ್ಲಿ ಹಿಂದೀ ಗ್ರಾಹಕರಿಗೆ ಹಿಂದೀಯಲ್ಲೇ ಸೇವೆ ನೀಡುತ್ತೇವೆ. ಕನ್ನಡ ಸಿನಿಮಾಗಳಿಗೆ ಹಿಂದಿಯಲ್ಲಿ ಹೆಸರುಗಳನ್ನು ಇಡುತ್ತೇವೆ. ಕನ್ನಡ ಟೀವೀ ಕಾಲುವೆಗಳಲ್ಲಿ ಎಶ್ಟೋ ಬಾರಿ ಹಿಂದೀ  ಹಾಡುಗಳ ಕಾರ‍್ಯಕ್ರಮಗಳನ್ನು ನಡೆಸುತ್ತೇವೆ. ರೇಡಿಯೋದಲ್ಲೂ ಕನ್ನಡ ಮತ್ತು ಹಿಂದೀ ಹಾಡುಗಳನ್ನು ಬೆರೆಸಿ ಬಿತ್ತರ ಮಾಡುತ್ತೇವೆ. ಒಟ್ಟಿನಲ್ಲಿ ಹಿಂದಿಗೆ ಮಣೆಹಾಕಿ ಕೂರಿಸಿದ್ದೇವೆ. ಹಿಂದಿ ತಳವೂರಿದರೆ ಕನ್ನಡಕ್ಕೆ ಎಡೆ ಇರುವುದಿಲ್ಲ ಎನ್ನುವ ಅಂಜಿಕೆ ನಮಗಿದ್ದಂತೆ ಕಾಣುವುದಿಲ್ಲ.
      ಇಶ್ಟೆಲ್ಲಾ ನಿರಾಶಾವಾದದ ಕತ್ತಲೆಯಲ್ಲಿ ಒಂದು ಆಶಾವಾದದ ಬೆಳಕು ಈ ನಡುವೆ ಕಾಣಿಸಿಕೊಂಡಿದೆ. ಬನವಾಸಿ ಬಳಗ, ಕನ್ನಡ ಮತ್ತು ಇತರ ಎಡೆನುಡಿಗಳಿಗೆ ಹಿಂದಿಯಶ್ಟೇ ಮಾನ್ಯತೆ ದೊರಕಬೇಕೆಂದೂ, ಅದಕ್ಕೆ ತಕ್ಕಂತೆ ಸಂವಿದಾನದಲ್ಲಿ ತಿದ್ದುಪಡಿ ಆಗಬೇಕೆಂದೂ, ರಾಜ್ಯಪಾಲರ ಮೂಲಕ ಕೇಂದ್ರ ಸರ‍್ಕಾರವನ್ನು ಒತ್ತಾಯಿಸಲು ಪ್ರಯತ್ನ ನಡೆಸಿದೆ. ಪ್ರಯತ್ನಕ್ಕೆ ಒತ್ತಾಸೆಯಾಗಿ ಸಾವಿರಾರು ಸಹಿಗಳನ್ನು ಕಲೆಹಾಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಶತ್ತಿನ ಬೆಂಬಲವನ್ನು ಪಡೆದುಕೊಳ್ಳುವುದರಲ್ಲೂ ಯಶಸ್ವಿಯಾಗಿದೆ. ’ಅರೆಸ್ಟ್ ಮಾಡು’ ಎಂದು ಹಿಂದಿಯಲ್ಲಿ ಕೂಗು ಬಂದ ಬಿಜಾಪುರದ ಸಮ್ಮೇಳನದಲ್ಲೇ ’ಕನ್ನಡಕ್ಕೆ ಹಿಂದಿಯ ಸ್ತಾನಮಾನಗಳನ್ನು ಕೇಂದ್ರ ಸರ‍್ಕಾರ ನೀಡಬೇಕು’ ಎಂಬ ನಿರ‍್ಣಯವನ್ನು ಪ್ರಕಟಿಸುವಂತೆ ಮಾಡುವಶ್ಟು ಪ್ರಬಾವ ಬೀರಿದೆ. ಬನವಾಸಿ ಬಳಗದ ಈ ಪ್ರಯತ್ನದ ಸುದ್ದಿ ಹರಡುತ್ತದೆ ಎಂದು ಹಾರಯ್ಸೋಣ. ಇನ್ನಾದರೂ ಕನ್ನಡಿಗರು, ’ಕನ್ನಡನಾಡಿನಲ್ಲಿ ಕನ್ನಡಕ್ಕೆ ಎಡೆ, ಹಿಂದಿಗಲ್ಲ’ ಎಂಬ ನಿಲುವನ್ನು ತಾಳುತ್ತಾರೆ ಎಂದು ನಂಬೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಸೋಮವಾರ, ಫೆಬ್ರವರಿ 11, 2013

ಬಾಶಾಂದತೆ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹೇಸಿಗೆ ಬರಿಸುವ ಸುದ್ದಿಗಳಿಗೆ ಏನೂ ಕೊರತೆ ಇಲ್ಲ ಈ ದಿನಗಳಲ್ಲಿ. ಇತ್ತೀಚೆಗೆ ಟೀವೀಯಲ್ಲಿ ನೋಡಿದ ಒಂದು ಸುದ್ದಿ, ಬಾಶೆಯ ಹೆಸರಿನಲ್ಲಿ ನಡೆಯುವ ಕೇಡುಗತನದ ಕಟ್ಟೆದುರಿಯಾದ ನನ್ನಲ್ಲಿ ಅತೀವ ಕಳವಳ ಉಂಟುಮಾಡಿತು.
      ಸುಮಾರು ಹತ್ತು ವರ‍್ಶದ ಹುಡುಗನೊಬ್ಬನ ಬೆಂದು ಹೋಗಿದ್ದ ಎರಡೂ ಮುಂಗಯ್ಗಳನ್ನು ಮತ್ತೆ ಮತ್ತೆ ಟೀವೀ ತೆರೆಯ ಮೇಲೆ ತೋರಿಸುತ್ತಿದ್ದರು. ಹುಡುಗನ ಹೆಸರು ಮಹಮದ್ ಜಾವೆದ್. ಅವನ ಕಯ್ಗಳನ್ನು ಹಾಗೆ ಬೇಯಿಸಿದವನು ದಾದಾ ಪೀರ್ ಎಂಬ ಒಬ್ಬ ಮುಸ್ಲಿಮ್ ದರ‍್ಮಗುರು. ಈ ಅಮಾನವೀಯ ಆಗುಹ ನಡೆದದ್ದು ಆ ಹುಡುಗ ತಂಗಿಕೊಂಡು ಓದುತ್ತಿದ್ದ ಚಿಕ್ಕಮಗಳೂರಿನ ಒಂದು ಮುಸ್ಲಿಮ್ ವಸತಿ ಶಾಲೆಯಲ್ಲಿ. ಕುದಿವ ನೀರಿಂದ ಆ ಹುಡುಗನ ಕಯ್ಯನ್ನು ಆ ದರ‍್ಮಗುರು ಸುಟ್ಟದ್ದು ಯಾಕೆ ಗೊತ್ತೆ? ಆ ಹುಡುಗನ ಕುರಾನ್ ಕಲಿಕೆ ಆ ದರ‍್ಮಗುರು ಎಣಿಸಿದ ಹಾಗೆ ಸಾಗುತ್ತಿರಲಿಲ್ಲ ಎಂಬ ಕಾರಣಕ್ಕಾಗಿ!
      ಹುಡುಗನನ್ನೂ ಹುಡುಗನ ತಂದೆಯನ್ನೂ ವರದಿಗಾರರು ಮಾತಾಡಿಸುತ್ತಿದ್ದರು. ದರ‍್ಮಗುರು ವರದಿಗಾರರಿಂದ ತಲೆಮರೆಸಿಕೊಂಡಿದ್ದ. ವಿಶಯವನ್ನು ವರದಿಗಾರರು ಕೆದಕಿ ನೋಡಿದಾಗ ತಿಳಿದು ಬಂದದ್ದು ಇದು - ಅರಬ್ಬೀ ಬಾಶೆಯ ಅಡಚಣೆ ಆ ಹುಡುಗನಿಗೆ ಕುರಾನ್ ಕಲಿಯುವುದನ್ನು ಕಶ್ಟ ಮಾಡಿತ್ತು.
      ಹುಡುಗ ಮತ್ತು ಆತನ ತಂದೆ ಇಬ್ಬರೂ ಮಾಮೂಲಿ ತೆಂಕಣ ಬಾರತದವರಂತೆ ಕಾಣುತ್ತಿದ್ದರು. ಅವರದ್ದು ದ್ರಾವಿಡ ಮಯ್ಬಣ್ಣ ಮತ್ತು ದ್ರಾವಿಡ ಚಹರೆ. ಇಸ್ಲಾಮನ್ನು ಪಾಲಿಸುವ ದ್ರಾವಿಡರು ಎಂದು ಅವರನ್ನು ಯಾರು ಬೇಕಾದರೂ ಗುರುತಿಸಬಹುದಾಗಿತ್ತು. ಹಾಗಿತ್ತು ಅವರ ಮಯ್ಪರಿ.
      ಆ ಬಡಪಾಯಿ ಹುಡುಗನನ್ನು ನೋಡಿ, ’ಎತ್ತಣ ದ್ರಾವಿಡ ಹುಡುಗ, ಎತ್ತಣ ಅರಬ್ಬೀ ಬಾಶೆ?’ ಎಂದುಕೊಂಡೆ ನಾನು. ದ್ರಾವಿಡ ಹುಡುಗನೊಬ್ಬನಿಗೆ ಅರಬ್ಬೀ ಬಾಶೆ ಕೊಂಚ ತೊಡಕೆನಿಸಿದರೆ, ಅದೇನು ಮಹಾ ತಪ್ಪು ಸ್ವಾಮಿ? ಅಶ್ಟಕ್ಕೂ, ದರ‍್ಮದಲ್ಲಿ ಯಾವುದು ಮುಕ್ಯ? ಅದರ ತಿರುಳೋ, ಇಲ್ಲ, ಅದನ್ನು ಬರೆದಿಟ್ಟಿರುವ ಬಾಶೆಯೋ? ತಿರುಳನ್ನು ತೂರಿ ತವುಡನ್ನು ಬಾಚಿಕೊಳ್ಳುವ ಅರಿವುಗೇಡಿತನ ಯಾಕೆ? ಕ್ರಯ್‍ಸ್ತರು ಅವರ ಅರವೋದುಗೆಯನ್ನು ಅವರವರ ಬಾಶೆಗಳಲ್ಲೇ ಓದಿ ಪ್ರಾರ‍್ತನೆ ಸಲ್ಲಿಸುತ್ತಾರೆ. ಅದರಿಂದ ಕ್ರಯ್‍ಸ್ತ ದರ‍್ಮಕ್ಕೇನಾದರೂ ಕುಂದು ಬಂದಿದೆಯೆ? ಸಂಸ್ಕ್ರುತವನ್ನು ಬಿಟ್ಟು ಮಂದಿಯ ಆಡುನುಡಿಗಳಲ್ಲಿ ಬವ್‍ದ್ದ  ಬಿಕ್ಶುಗಳು ತಮ್ಮ ದರ‍್ಮದ ಪ್ರಚಾರ ಮಾಡಿದರು. ಹಾಗೆ ಮಾಡಿದ್ದಕ್ಕೆ ಬವ್‍ದ್ದ ದರ‍್ಮವೇನಾದರೂ ಮುರುಟಿ ಹೋಯಿತೆ? ಇನ್ನು ನಮ್ಮ ನಾಡಿನಲ್ಲೇ, ಶರಣರು ತಿಳಿಗನ್ನಡದಲ್ಲಿ ವಚನಗಳನ್ನು ಹಾಡಿದರು. ಅದರಿಂದೇನಾದರೂ ವೀರಶಯ್ವ ಮತ ಹರಡದೆ ಉಳಿಯಿತೆ?
      ದರ‍್ಮದ ಹೆಸರಿನಲ್ಲಿ, ಸಂಸ್ಕ್ರುತಿಯ ಹೆಸರಿನಲ್ಲಿ, ತಿಳಿಯದ ಬಾಶೆಯನ್ನು ಜನರ ನಡುವೆ ತೂರಿಸುವುದರಲ್ಲಿ ನಾವು ಹಿಂದೂಗಳು ಕೂಡ ಯಾರಿಗೂ ಕಡಿಮೆ ಇಲ್ಲ. ನಮ್ಮ ವಿಶಯದಲ್ಲಿ ಅರಬ್ಬಿಯ ಸ್ತಾನವನ್ನು ಸಂಸ್ಕ್ರುತ ತೆಗೆದುಕೊಳ್ಳುತ್ತದೆ, ಅಶ್ಟೆ.
      ನಮ್ಮ ಪೂಜೆ ಪುನಸ್ಕಾರಗಳು ನಡೆಯುವುದು ಸಂಸ್ಕ್ರುತದಲ್ಲಿ. ಹೋಮ ಹವನಗಳು ನಡೆಯುವುದು ಸಂಸ್ಕ್ರುತದಲ್ಲಿ. ಮದುವೆಯ ವಿದಿವಿದಾನಗಳು ನಡೆಯುವುದು ಸಂಸ್ಕ್ರುತದಲ್ಲಿ. ದಾರ‍್ಮಿಕ ಕಾರ‍್ಯಕ್ರಮಗಳು ಮೊದಲುಗೊಳ್ಳುವುದು ಸಂಸ್ಕ್ರುತದಲ್ಲಿ. ಎಶ್ಟೋ ಶಾಲೆಗಳಲ್ಲಿ ಮಕ್ಕಳು ಮೊದಲು ಪ್ರಾರ‍್ತನೆ ಸಲ್ಲಿಸುವುದು ಸಂಸ್ಕ್ರುತದಲ್ಲಿ. ಎಲ್ಲವೂ ನಮಗೆ ತಿಳಿಯದ ಸಂಸ್ಕ್ರುತದಲ್ಲಿ! ಸಂಸ್ಕ್ರುತವೇ ಯಾಕಾಗಬೇಕು? ಕನ್ನಡ ಯಾಕಾಗಬಾರದು?
      ನಾವು ಕನ್ನಡಿಗರು ದ್ರಾವಿಡರು, ನಮ್ಮ ಕನ್ನಡ ದ್ರಾವಿಡ ಬಾಶೆ, ಸಂಸ್ಕ್ರುತ ಬಡಗದ ಆರ‍್ಯ ಬಾಶೆ, ಕನ್ನಡಕ್ಕೂ ಅದಕ್ಕೂ ನೆತ್ತರ ನಂಟಿಲ್ಲ, ಸಂಸ್ಕ್ರುತ ನಮ್ಮದಲ್ಲ ಎಂದು ಮುಂತಾದ ಕಾರಣಗಳಿಗಾಗಿ ನಾನು ಸಂಸ್ಕ್ರುತದ ಇದಿರಾಗಿ ಮಾತಾಡುತ್ತಿಲ್ಲ. ನಮ್ಮ ಬದುಕಿಗೆ ಮುಕ್ಯವಾದ ವಿದಿವಿದಾನಗಳು ನಮಗೆ ತಿಳಿಯದ ಬಾಶೆಯಲ್ಲಿ ಯಾಕೆ ನಡೆಯಬೇಕು ಎಂಬ ಮೂಲಬೂತ ಕೇಳ್ವಿಯ ನೆಲೆಯಿಂದ ಮಾತಾಡುತ್ತಿದ್ದೇನೆ. ನಮ್ಮ ವಿದಿವಿದಾನಗಳು ನಮಗೆ ತಿಳಿಯುವ ಬಾಶೆಯಲ್ಲಿದ್ದರೆ ಸರಿಯಲ್ಲವೆ ಎಂಬ ಸಹಜ ತರ‍್ಕದ ನೆಲೆಯಿಂದ ಮಾತಾಡುತ್ತಿದ್ದೇನೆ.
     ಹಿಂದೆ, ಕುವೆಂಪು ಅವರು ಮದುವೆಯ ಸರಳ ವಿದಿಗಳನ್ನು ಕನ್ನಡದಲ್ಲೇ ರಚಿಸಿದ್ದರಂತೆ. ಅವರ ಮಾದರಿಯನ್ನು ಅನುಸರಿಸಿ ಹಲವು ಮದುವೆಗಳು ನಡೆದಿದ್ದವಂತೆ (ತೀರ ಇತ್ತೀಚೆಗೂ ಕುವೆಂಪು ವಿದಿಯಲ್ಲಿ ಮದುವೆಗಳು ನಡೆದಿವೆ ಎಂದೂ ಕೇಳಿದ್ದೇನೆ). ಇನ್ನು ನಮ್ಮ ಕಾಲದಲ್ಲಿ ಕೂಡ, ನಗೆಗಯ್ವಿ ಕ್ರಿಶ್ಣೇಗವ್ಡರ ಮಗಳ ಮದುವೆಯನ್ನು ಹಿರೇಮಗಳೂರು ಕಣ್ಣನ್ ಅವರು ಕನ್ನಡದಲ್ಲೇ ನಡೆಸಿಕೊಟ್ಟುದನ್ನು ಟೀವೀಯಲ್ಲಿ ಕಳೆದ ವರ‍್ಶ ನಾವು ನೋಡಿದ್ದೇವೆ. ಹೀಗೆ ಸಂಸ್ಕ್ರುತದ ಬದಲು ಕನ್ನಡದಲ್ಲೇ ನಡೆಸುವ ಶುಬ ಕಾರ‍್ಯಕ್ರಮಗಳು ಆಗಾಗ್ಗೆ ಜರುಗುತ್ತಿರುತ್ತವೆ.
      ಹಾಗಾಗಿ, ಸಂಸ್ಕ್ರುತವಿಲ್ಲದೆ ನಮ್ಮ ದರ‍್ಮ ಮತ್ತು ಸಂಸ್ಕ್ರುತಿ ನಡೆಯುವುದಿಲ್ಲ ಎಂದು ನಾವು ನಂಬಬೇಕಾಗಿಲ್ಲ. ನಮ್ಮ ಕನ್ನಡದಲ್ಲೇ ಅವು ನಡೆಯಬಲ್ಲವು. ಬರಿಯ ಮದುವೆ ಮುಂತಾದವುಗಳೇ ಏಕೆ, ನಮ್ಮ ಪರಮ ಗುರಿ ಮೋಕ್ಶ ಕೂಡ ಕನ್ನಡದ ಮೂಲಕವೇ ದೊರೆಯಬಲ್ಲುದು. ಶತಮಾನಗಳ ಹಿಂದೆಯೇ ಮಹಲಿಂಗ ರಂಗನೆಂಬ ಒಬ್ಬ ಕನ್ನಡದ ಕವಿ ಹೇಳಿದ್ದ - ಸುಲಿದ ಬಾಳೆಯ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ... ಸುಲಬವಾಗಿರ‍್ಪ ಕನ್ನಡದ ನುಡಿಯಲ್ಲಿ ತಿಳಿದು ತನ್ನೊಳು ತನ್ನ ಮೋಕ್ಶವ ಗಳಿಸಿಕೊಂಡರೆ ಸಾಲದೇ, ಸಂಸ್ಕ್ರುತದಲಿನ್ನೇನು?
      ಮಹಲಿಂಗ ರಂಗಾ, ನಿನ್ನ ಮಾತಿಗೆ ನನ್ನ ನೆರೆಯೊಪ್ಪಿಗೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್