ಮಂಗಳವಾರ, ನವೆಂಬರ್ 12, 2013

ಸಂಸ್ಕ್ರುತಕ್ಕಾಗಿ ಸವಲತ್ತುಗಳ ಪೋಲು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಬಾರಿ ಸಂಸ್ಕ್ರುತಾಬಿಮಾನಿ ಕನ್ನಡಿಗರಿಗೆ ದೀಪಾವಳಿ ಹಬ್ಬದ ಸಡಗರ ಎರಡು ವಾರ ಮುಂದಾಗೇ ಬಂತು. ಒಂದೆಡೆ ಸಂಸ್ಕ್ರುತ ವಿಶ್ವವಿದ್ಯಾಲಯದಲ್ಲಿ ಸಂಸ್ಕ್ರುತ ಸಂಜೆ ಕಾಲೇಜಿನ ಉದ್ಗಾಟನೆ ಆದರೆ, ಇನ್ನೊಂದೆಡೆ ಶ್ರೀ ಶ್ರೀ ರವಿಶಂಕರರ Art of Living ಆಶ್ರಮದಲ್ಲಿ ಅಕಿಲ ಬಾರತ ಸಂಸ್ಕ್ರುತ ಅದಿವೇಶನ ಜರುಗಿತು (ವರದಿ : ಪ್ರಜಾವಾಣಿ, ಅಕ್ಟೋಬರ್ ೨೦, ೨೦೧೩). ಇದಾದ ಕೆಲವೇ ದಿನಗಳಲ್ಲಿ ನಮ್ಮ ಸರ‍್ಕಾರ, ಸಂಸ್ಕ್ರುತ ವಿಶ್ವವಿದ್ಯಾಲಯಕ್ಕೆ ಈ ಮೊದಲು ರಿಯಾಯತಿ ದರದಲ್ಲಿ ನೀಡಿದ್ದ ನೂರೆಕರೆ ನೆಲವನ್ನು ಸಂಪೂರ‍್ಣ ಬಿಟ್ಟಿಯಾಗಿ ಮತ್ತೆ ಮಂಜೂರು ಮಾಡಿತು (ವರದಿ : ಪ್ರಜಾವಾಣಿ, ಅಕ್ಟೋಬರ್ ೨೯, ೨೦೧೩). ಒಟ್ಟಿನಲ್ಲಿ ನಮ್ಮ ಸ್ತಳೀಯ ಸಂಸ್ಕ್ರುತಾಬಿಮಾನಿಗಳಿಗೆ ಒಂದು ದೊಡ್ಡ ಹ್ಯಾಟ್ರಿಕ್ಕೇ ದೊರೆಯಿತು. ಸಂಸ್ಕ್ರುತಾಬಿಮಾನಿಗಳಿಗೆ ಇದಕ್ಕಿಂತಾ ಬೇರೇನು ಬೇಕು ಹೇಳಿ?
      ನನ್ನ ಗಮನ ಸೆಳೆದದ್ದು ಈ ಆಗುಗಳಿಗಿಂತ ಹೆಚ್ಚಾಗಿ ಈ ಸಮಯದಲ್ಲಿ ಬಿಚ್ಚುಗೊರಲಿನಿಂದ ಹೊರಹೊಮ್ಮಿದ ಕೆಲವು ಸಂಸ್ಕ್ರುತವನ್ನು ಹೊಗಳುವ ನುಡಿಮುತ್ತುಗಳು. ಸಂಸ್ಕ್ರುತ ಸಂಜೆ ಕಾಲೇಜನ್ನು ಉದ್ಗಾಟಿಸಿದ ಮಹನೀಯರು ತಮ್ಮ ಬಾಶಣದಲ್ಲಿ, ಅಂತರರಾಶ್ಟ್ರೀಯ ಮಟ್ಟದಲ್ಲಿ ಸಂಸ್ಕ್ರುತ ಇಂಗ್ಲೀಶಿಗೆ ಸರಿಸಮನಾದ ಬಾಶೆ ಎಂದೂ, ಸಂಸ್ಕ್ರುತದ ಪುನರುಜ್ಜೀವನದಿಂದ ಜನರಲ್ಲಿ ನಯ್ತಿಕ ಮಟ್ಟ ಹೆಚ್ಚುತ್ತದೆ ಎಂದೂ ಸಬಿಕರಿಗೆ ತಿಳಿಸಿದರಂತೆ! ಅಂತರರಾಶ್ಟ್ರೀಯ ಮಟ್ಟದಲ್ಲಿ ಸಂಸ್ಕ್ರುತ ಇಂಗ್ಲೀಶಿಗೆ ಸರಿಸಮನಾದ ಬಾಶೆ! ಇದಕ್ಕೆ ಏನು ಹೇಳುವುದು ಸ್ವಾಮೀ? ವಿಶ್ವದ ಮೂಲೆಮೂಲೆಗಳಲ್ಲೂ ಬದುಕಿನ ಏಳಿಗೆಗಾಗಿ ಜನ ಮುಗಿಬಿದ್ದು ಕಲಿಯುತ್ತಿರುವ ಸರ‍್ವವ್ಯಾಪಿ ಇಂಗ್ಲೀಶ್ ಎಲ್ಲಿ, ಅಲ್ಲೊಬ್ಬ ಇಲ್ಲೊಬ್ಬ, ಅಬಿಮಾನಕ್ಕೋ ಕುತೂಹಲಕ್ಕೋ ಅರೆಬರೆಯಾಗಿ ಕಲಿಯುವ ಸಂಸ್ಕ್ರುತ ಎಲ್ಲಿ? ಇವೆರಡೂ ಹೇಗೆ ಅಂತರರಾಶ್ಟ್ರೀಯ ಮಟ್ಟದಲ್ಲಿ ಸರಿಸಮಾನ ಅಂತ? ಇರಲಿ ಬಿಡಿ. ಇನ್ನು ನಯ್ತಿಕ ಮಟ್ಟಕ್ಕೂ, ಸಂಸ್ಕ್ರುತ ಬಿಡಿ, ಯಾವುದೇ ಬಾಶೆಯ ಪುನರುಜ್ಜೀವನಕ್ಕೂ ಯಾವ ಬಾದರಾಯಣ ಸಂಬಂದ ಇರಲಿಕ್ಕೆ ಸಾದ್ಯ?
      ಇತ್ತ ಸಂಸ್ಕ್ರುತ ಅದಿವೇಶನದಲ್ಲಿ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರು ಮಾತಾಡುತ್ತಾ, ಸಂಸ್ಕ್ರುತ ಬಾಶೆಯ ’ಉಚ್ಚಾರಣೆಯಿಂದ’ ಮಕ್ಕಳ ಬವುದ್ದಿಕ ಮಟ್ಟ ಹಾಗೂ ವ್ಯಕ್ತಿತ್ವ ವಿಕಸನ ಹೆಚ್ಚುತ್ತದೆ ಎಂದರಂತೆ! ಇದಕ್ಕೇನಂತೀರಿ? ಒಂದು ಬಾಶೆಯ ಉಚ್ಚಾರಣೆಯನ್ನು ಕಲಿಯುವುದರಿಂದ ಬವುದ್ದಿಕ ಮಟ್ಟ ಹಾಗೂ ವ್ಯಕ್ತಿತ್ವ ವಿಕಸನ ಹೆಚ್ಚುತ್ತದಂತೆ! ಬೇಶ್! ಮೆಚ್ಚಿದೆ! ಎಂತಾ ಒಂದು ನಿಗೂಡ ಮಾಂತ್ರಿಕ ಶಕ್ತಿಯ ಬಾಶೆ ಇರಬೇಕು ನಮ್ಮ ಸಂಸ್ಕ್ರುತ ಬಾಶೆ! ಇಂತಾ ಬಾಶೆಯನ್ನು ಹೊರಿಸಿಕೊಂಡಿರುವ ನಾವೇ ಬಾಗ್ಯವಂತರು ಬಿಡಿ!
      ಸಂಸ್ಕ್ರುತದ ಹುಚ್ಚು ಅಬಿಮಾನಿಗಳು ಇಂತಾ ಬಾಲಿಶ ಬುರುಡೆಗಳನ್ನು ಬಿಡುತ್ತಾರಲ್ಲಾ, ಇವರ ಹೇಳಿಕೆಗಳಿಗೆ ಅದಾವ ಸಂಶೋದನೆಗಳ ಆದಾರ ಇದೆ ಎಂದು ನನಗೆ ಅಚ್ಚರಿಯಾಗುತ್ತದೆ. ಸಾಹಿತಿ ಎಸ್. ಎಲ್. ಬಯ್ರಪ್ಪನವರು, ಕನ್ನಡದಲ್ಲಿ ಶೇಕಡ ಎಂಬತ್ತರಶ್ಟು ಸಂಸ್ಕ್ರುತವೇ ಇದೆ, ಆದ್ದರಿಂದ ಕನ್ನಡವನ್ನು ಸರಿಯಾಗಿ ಕಲಿತುಕೊಳ್ಳುವುದಕ್ಕೆ ಸಂಸ್ಕ್ರುತದ ಕಲಿಕೆ ಬೇಕೇ ಬೇಕು ಎಂದು ಇದೇ ಅದಿವೇಶನದಲ್ಲಿ ತಮ್ಮ ಅಬಿಪ್ರಾಯ ಕೊಟ್ಟರಂತೆ. ಇದರ ಬಗ್ಗೆಯೂ ಕೊಂಚ ಯೋಚನೆ ಮಾಡಿ ನೋಡಿ. ಕನ್ನಡ ಇಂದು ಸಂಸ್ಕ್ರುತಮಯವಾಗಿದ್ದರೆ ಅದಕ್ಕೆ ಕಾರಣ ಯಾರು? ತಲತಲಾಂತರದಿಂದ ಸಂಸ್ಕ್ರುತವನ್ನು ಕನ್ನಡದಲ್ಲಿ ಸಾರಾಸಗಟಾಗಿ ತುರುಕಿಕೊಂಡು ಬಂದ ಸಂಸ್ಕ್ರುತದ ದುರಬಿಮಾನಿ ಸಾಹಿತಿಗಳೇ ಕಾರಣರು. ಈ ಮಂದಿ ಮೊದಲು ಕನ್ನಡವನ್ನು ಸಂಸ್ಕ್ರುತಮಯ ಮಾಡುತ್ತಾರೆ. ಬಳಿಕ, ಸಂಸ್ಕ್ರುತ ಕಲಿಯದೇ ಕನ್ನಡ ಕಲಿಯಲು ಬರುವುದಿಲ್ಲ ಎಂದು ಡೋಂಗೀ ಬಿಟ್ಟು, ಸಂಸ್ಕ್ರುತ ವಿಶ್ವವಿದ್ಯಾಲಯ ಮುಂತಾದವು ಬೇಕೇ ಬೇಕು ಎಂದು ಅರಚಾಡಿ, ಬಡಪಾಯಿ ಕನ್ನಡಿಗರ ನೆಲ ಹಣ ಮುಂತಾದ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಹೇಗಿದೆ ಈ ವರಸೆ?
      ಸಂಸ್ಕ್ರುತದ ದುರಬಿಮಾನಿಗಳು ಸಾಮಾನ್ಯರಲ್ಲ. ಹಿಂದೊಮ್ಮೆ, ’ಅ,ಆ, ಇ,ಈ’ ಕಲಿಯುವ ಒಂದನೇ ತರಗತಿಯ ಮಟ್ಟದ ಸಂಸ್ಕ್ರುತವನ್ನು ಹಯ್‍ಸ್ಕೂಲು ಮಟ್ಟದ ಕನ್ನಡಕ್ಕೆ ಸರಿಸಮನಾಗಿ ತಂದು ಕೂಡಿಸಿ, ಕನ್ನಡಕ್ಕೇ ಬತ್ತಿ ಇಟ್ಟಿದ್ದರು ಈ ಉಂಡ ಮನೆಗೆ ಎರಡು ಬಗೆಯುವ ಮಂದಿ! ಇವರ ಕುತಂತ್ರವನ್ನು ತೆಗೆದುಹಾಕುವುದಕ್ಕೆ ಆಗ ಒಂದು ದೊಡ್ಡ ಹೋರಾಟವನ್ನೇ (ಗೋಕಾಕ್ ಹೋರಾಟ) ನಡೆಸಬೇಕಾಯಿತು ಕನ್ನಡಿಗರು. ಈಗಿನ ದಿನಗಳಲ್ಲಿ ಗೋಕಾಕ್ ಚಳುವಳಿಗೆ ಕಾರಣ ಏನು ಎಂಬುದೇ ಜನಕ್ಕೆ ನೆನಪಿಲ್ಲ. ಇದರ ಜೊತೆಗೆ, ಸಂಸ್ಕ್ರುತಪರ ರಾಜಕೀಯ ಶಕ್ತಿಗಳೂ ಬಲಗೊಂಡಿವೆ. ಹಾಗಾಗಿ, ಸಂಸ್ಕ್ರುತದ ಕಿಡಿಗೇಡಿಗಳು ಮತ್ತೆ ನಮ್ಮ ನಡುವೆ ಗರಿಗೆದರಿಕೊಂಡು ಹಾರಾಡಲು ಶುರುಮಾಡಿವೆ.
      ಸಂಸ್ಕ್ರುತದ ದುರಬಿಮಾನಿಗಳು ಎಶ್ಟೇ ಬಡಾಯಿ ಕೊಚ್ಚಿಕೊಳ್ಳಬಹುದು. ಆದರೆ, ಸತ್ಯ ಏನು? ಸಂಸ್ಕ್ರುತ ಒಂದು ಸತ್ತ ಬಾಶೆ. ಅದರಿಂದ ’ಪ್ರಾಕ್ಟಿಕಲ್’ ಉಪಯೋಗವಿಲ್ಲ. ಕೆಲಸ ಕೊಡುವವರು ಎಂದಾದರೂ, ’ನಿನಗೆ ಸಂಸ್ಕ್ರುತ ಬರುತ್ತದೆಯೆ?’ ಎಂದು ಕೇಳುತ್ತಾರೆಯೆ? ನಿಮಗೆ ಕೆಲಸ ಬೇಕು ಎಂದರೆ, ಇಂಗ್ಲೀಶ್ ಬೇಕು, ನಮ್ಮ ರಾಜ್ಯದಲ್ಲಿ ಕನ್ನಡ ಬೇಕು. ಬರೀ ಸಂಸ್ಕ್ರುತವನ್ನೇ ನೆಚ್ಚಿಕೊಂಡರೆ ಜನಸಾಮಾನ್ಯರಿಗೆ ಒಂದು ಪಯ್ಸೆಯೂ ಹುಟ್ಟುವುದಿಲ್ಲ.
      ಹೀಗೆ ಸಂಸ್ಕ್ರುತದಿಂದ ಯಾವ ಪ್ರಯೋಜನ ಇಲ್ಲದಿದ್ದರೂ, ಅದರ ಅಬಿಮಾನಿಗಳು ಸರ‍್ಕಾರದಿಂದ ಮೇಲಿಂದ ಮೇಲೆ ಸಾರ‍್ವಜನಿಕರ ಸವಲತ್ತುಗಳನ್ನು ಹೇಗೆ ಗಿಟ್ಟಿಸಿಕೊಳ್ಳುತ್ತಾರೆ? ಇದರ ಬಗ್ಗೆ ಸಾಮಾನ್ಯ ಕನ್ನಡಿಗರು ಏಕೆ ಚಕಾರ ಎತ್ತುವುದಿಲ್ಲ? ನನಗನ್ನಿಸುವುದು ಇದು - ಕನ್ನಡಿಗರಿಗೆ ಅವರ ದ್ರಾವಿಡತನದ ಅರಿವಿಲ್ಲದಿರುವುದೇ ಇದಕ್ಕೆ ಕಾರಣ. ಬಹಳಶ್ಟು ಕನ್ನಡಿಗರಿಗೆ, ಸಂಸ್ಕ್ರುತ ಇಂಡೋ-ಯೂರೋಪಿಯನ್ ವರ‍್ಗಕ್ಕೆ ಸೇರಿದ ಒಂದು ಪರಕೀಯ ಬಾಶೆ ಎಂಬುದರ ಅರಿವಿಲ್ಲ. ಕನ್ನಡ, ಸಂಸ್ಕ್ರುತದ ನೆತ್ತರನಂಟಿರದ ಒಂದು ದ್ರಾವಿಡ ಬಾಶೆ ಎಂಬುದರ ಅರಿವಿಲ್ಲ. ಸಂಸ್ಕ್ರುತದ ಅತಿಯಾದ ಬಳಕೆಯಿಂದ ಕನ್ನಡದ ದ್ರಾವಿಡತನವೇ ಅಳಿದು ಹೋಗಿರುವ ಸಂಗತಿಯಂತೂ ಗೊತ್ತೇ ಇಲ್ಲ. ದಾರ್‍ಮಿಕ ಕಾರ‍್ಯಗಳೆಲ್ಲ ಸಂಸ್ಕ್ರುತ ಮಂತ್ರಪಟನೆಯಿಂದಲೇ ಆಗುವುದರಿಂದ, ಸಂಸ್ಕ್ರುತವೆಂದರೆ ನಮ್ಮದೇ ಬಾಶೆ ಎಂದು ತಿಳಿದುಕೊಂಡಿದ್ದಾರೆ ಹಲವರು. ಹಾಗಾಗಿ, ಸಂಸ್ಕ್ರುತಕ್ಕೆ ಸರ‍್ಕಾರದ ಹಣ ಹರಿದಾಗ, ಕನ್ನಡಿಗರಿಗೆ ಅದು ಪರಕೀಯ ಬಾಶೆಯೊಂದಕ್ಕೆ ಹರಿದ ಹಣ ಎನ್ನಿಸುವುದಿಲ್ಲ. ಇದರಿಂದಾಗಿ, ಕನ್ನಡಿಗರ ಮಟ್ಟಿಗೆ ನಿಜಕ್ಕೂ ಕೆಲಸಕ್ಕೆ ಬಾರದ ಈ ಸಂಸ್ಕ್ರುತ ಬಾಶೆಗೆ ಕನ್ನಡಿಗರದೇ ಹಣ ಪೋಲಾಗುತ್ತಿದೆ!
      ಆದ್ದರಿಂದ, ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಕನ್ನಡಿಗರು ನಾವು ಒಟ್ಟಾರೆ ದ್ರಾವಿಡರು ಎನ್ನುವ ನನ್ನಿಯನ್ನು ಕಂಡುಕೊಳ್ಳಬೇಕು. ನಮ್ಮ ಮಕ್ಕಳಿಗೆ ಬದುಕಿನಲ್ಲಿ ಏಳಿಗೆಯನ್ನು ಪಡೆಯಲು ನೆರವಾಗುವ ಕನ್ನಡ ಮತ್ತು ಇಂಗ್ಲೀಶ್ ಬಾಶೆಗಳನ್ನು ಕಲಿಸುವುದಕ್ಕೆ ಮಾತ್ರ ಹಣವನ್ನು ಎರೆಯಬೇಕು. ಉಪಯೋಗಕ್ಕೆ ಬಾರದ ಸಂಸ್ಕ್ರುತದಂತಹ ಹೆರನುಡಿಗಳಿಗೆ ನಮ್ಮ ಸಮಯವನ್ನೂ ದುಡಿಮೆಯನ್ನೂ ಪೋಲು ಮಾಡಬಾರದು. ಕನ್ನಡಕ್ಕೆ ಬೇಕಾಗುವ ಪದಗಳನ್ನು ಕನ್ನಡದಲ್ಲೇ ಮಾಡಿಕೊಂಡು ಕ್ರಮೇಣ ಸಂಸ್ಕ್ರುತದ ಬಳಕೆಯನ್ನು ಕಡಿಮೆ ಮಾಡಬೇಕು. ಕನ್ನಡಕ್ಕೆ ಕನ್ನಡತನವನ್ನೂ ದ್ರಾವಿಡತನವನ್ನೂ ಮತ್ತೆ ತಂದುಕೊಡಬೇಕು. ಕನ್ನಡಕ್ಕೆ, ಸಂಸ್ಕ್ರುತವಾಗಲೀ ಇಲ್ಲ ಬೇರೆ ಯಾವುದೇ ಬಾಶೆಯಾಗಲೀ, ಕೇವಲ ಪೂರಕವೇ ಹೊರತು ಅನಿವಾರ‍್ಯವಲ್ಲ, ಹಾಗಾಗಿ ಅವುಗಳಿಗೆ ನಮ್ಮ ಸವಲತ್ತುಗಳನ್ನು ಸುರಿಯುವುದು ಸಲ್ಲ, ಎಂಬ ಸತ್ಯವನ್ನು ಎತ್ತಿ ತೋರಬೇಕು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್