ಭಾನುವಾರ, ಆಗಸ್ಟ್ 25, 2013

ತೆಲಂಗಾಣವೆಂಬ ಎಚ್ಚರಿಕೆಯ ಗಂಟೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೆಲ ದಿನಗಳ ಹಿಂದೆ ನನ್ನ ಗೆಳೆಯರೊಬ್ಬರು ನನಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ನೆರೆಯ ತೆಲುಗುನಾಡು ತೆಲಂಗಾಣದ ಸಲುವಾಗಿ ಇರುಪೋಳು ಆಗುತ್ತಿರುವ ಸಂಗತಿ ಅವರಿಗೆ ತುಂಬಾ ನೋವನ್ನುಂಟು ಮಾಡಿತ್ತು. ಹಾಗಂತ ಅವರೇನೂ ತೆಲುಗರಲ್ಲ. ನನ್ನ ಹಾಗೇ ಕನ್ನಡಿಗರು. ಆದರೆ, ದ್ರಾವಿಡ ಅರಿಮೆ ಇರುವ ಕನ್ನಡಿಗರು.
      "ನಾವು ದ್ರಾವಿಡರೆಲ್ಲ ಒಂದಾಗಬೇಕು ಅಂತ ನಾವು ಅಂದುಕೊಂಡರೆ, ಒಂದೇ ಬಾಶೆ ಆಡುವ ತೆಲುಗರೇ ಎರಡು ಹೋಳಾಗಲಿಕ್ಕೆ ಹೊರಟಿದ್ದಾರಲ್ಲಾ, ಈ ದಡ್ಡತನಕ್ಕೆ ಏನು ಹೇಳೋದು, ರಾಜ್?", ಎಂದು ನನಗೆ ಪ್ರಶ್ನೆ ಹಾಕಿದರು. "ಈ ತೆಲುಗು ಮಂದಿಗೆ ಗಟ್ಟಿಯಾದ ಒಂದು ತೆಲುಗು ಅಯ್‍ಡೆಂಟಿಟಿ ಅನ್ನೋದು ಇದ್ದಿದ್ದರೆ ತಮ್ಮ ನೆಲವನ್ನೇ ಎರಡು ಹೋಳು ಮಾಡಲಿಕ್ಕೆ ಹೋಗುತ್ತಿದ್ದರೆ? ಇದಕ್ಕೆಲ್ಲಾ ತೆಲುಗು ಬಾಶೆಯ ಸಂಸ್ಕ್ರುತೀಕರಣ ಕಾರಣ, ಆರ‍್ಯಮಯವಾದ ತೆಲುಗು ಸಾಹಿತ್ಯ ಕಾರಣ", ಎಂದು ವಿಶಯದ ಬಗ್ಗೆ ತಮ್ಮ ತೀರ‍್ಮಾನವನ್ನೂ ಹೇಳಿದರು.
      ತೆಲಂಗಾಣದ ಬೇರ‍್ಪಡಿಕೆಗೂ ತೆಲುಗಿನ ಸಂಸ್ಕ್ರುತೀಕರಣಕ್ಕೂ ಎಲ್ಲಿಯ ನಂಟು ಎಂಬುದು ನನಗೆ ಕೂಡಲೇ ಹೊಳೆಯಲಿಲ್ಲ. "ತೆಲಂಗಾಣ ಬೇರೆ ಆಗುತ್ತಿರುವುದಕ್ಕೆ ಆರ‍್ತಿಕ ಅಸಮಾನತೆ ಕಾರಣ ಅಲ್ಲವೆ? ಬಹಳ ಹಿಂದಿನಿಂದಲೂ ತೆಲಂಗಾಣ ಪ್ರಾಂತ್ಯದ ಅಬಿವ್ರುದ್ದಿಯ ಬಗ್ಗೆ ಉಳಿದ ತೆಲುಗರು ನಿರ‍್ಲಕ್ಶ್ಯ ಮಾಡಿದ್ದಾರೆ. ಸಾಲದುದಕ್ಕೆ ತೆಲಂಗಾಣದ ತೆಲುಗನ್ನು ಕಳಪೆ ತೆಲುಗು ಎಂದು ಕೂಡ ಆಡಿಕೊಂಡು ಬಂದಿದ್ದಾರೆ. ದಶಕಗಳಿಂದ ಈ ಬಗ್ಗೆ ತೆಲಂಗಾಣದ ಮಂದಿ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಇದೆಲ್ಲದರ ಜೊತೆಗೆ ಈ ನಡುವೆ ಹಯ್ದರಾಬಾದು ನಗರಕ್ಕೆ ಹಣದ ಹೊಳೆಯೇ ಹರಿದಿದೆ. ಆ ಹಣವನ್ನು ಹೊಡೆದುಕೊಳ್ಳುವ ಆಲೋಚನೆ ಇರುವ ಸ್ತಳೀಯ ಪುಡಾರಿಗಳ ಹಂಚಿಕೆಯೂ ತೆಲಂಗಾಣದ ಪ್ರತ್ಯೇಕತೆಯಲ್ಲಿ ಸೇರಿಕೊಂಡಿದೆ. ತೆಲಂಗಾಣದ ಬೇರ‍್ಪಡಿಕೆಗೆ ಇವು ಕಾರಣಗಳು ಅಂತ ಎಲ್ಲರೂ ಹೇಳೋದು. ನೀವು ಹೇಳುವ ಹಾಗೆ ತೆಲುಗಿನ ಸಂಸ್ಕ್ರುತೀಕರಣ ಇರಲಾರದು", ಎಂದು ನಾನು ಅವರ ತೀರ‍್ಮಾನಕ್ಕೆ ಪ್ರತಿ ಹೇಳಿದೆ.
      "ಅಯ್ಯೋ! ನಾನು ಹೇಳೋದು ದ್ರಾವಿಡತನ ಇರೋ ನಿಮಗೂ ಅರ‍್ತವಾಗ್ತಾ ಇಲ್ವಲ್ಲಾ!", ಎಂದು ಆಕ್ಶೇಪಣಿಯ ದನಿಯಲ್ಲಿ ಉದ್ಗಾರ ತೆಗೆದು ನನ್ನ ಗೆಳೆಯರು ಅವರ ವಾದದ ಅರ‍್ತ ಏನೆಂಬುದನ್ನು ವಿವರಿಸಿದರು. "ನೋಡಿ ರಾಜ್, ತೆಲುಗರಿಗೆ, ’ನಾವು ಎಲ್ಲಕ್ಕೂ ಮೊದಲು ತೆಲುಗರು. ನಾವು ಒಂದೇ ಜನ. ನಮ್ಮ ನಿಶ್ಟೆ ಎಂದೂ ನಮ್ಮ ತೆಲುಗುತನಕ್ಕೇ’ಎಂಬ ಗಟ್ಟಿಯಾದ ’ತೆಲುಗು ಅಯ್‍ಡೆಂಟಿಟಿ’ ಇದ್ದಿದ್ದರೆ, ತೆಲಂಗಾಣದ ಅಬಿವ್ರುದ್ದಿಯನ್ನು ಅವರು ಕಡೆಗಣಿಸುತ್ತಿರಲಿಲ್ಲ. ತೆಲಂಗಾಣದ ತೆಲುಗನ್ನು ಕಳಪೆ ಅಂತ ಆಡಿಕೊಳ್ಳುತ್ತಿರಲಿಲ್ಲ. ಅಶ್ಟಕ್ಕೂ ತೆಲಂಗಾಣದ ಹೋರಾಟ ನೆನ್ನೆ ಮೊನ್ನೆಯದಲ್ಲ. ನಲ್ವತ್ತು ವರ‍್ಶಗಳಶ್ಟು ಹಳೆಯದು. ನಿಜವಾದ ತೆಲುಗುತನ ತೆಲುಗರಿಗೆ ಇದ್ದಿದ್ದರೆ ಅಶ್ಟು ಸಮಯದಲ್ಲಿ ತೆಲಂಗಾಣದ ಸಮಸ್ಯೆಯನ್ನು ಅವರು ಬಗೆಹರಿಸಿಕೊಂಡಿರುತ್ತಿದ್ದರು. ಈ ಮಾತನ್ನಾದರೂ ನೀವು ಒಪ್ಪಬೇಕು ತಾನೆ?"
      "ಮನುಶ್ಯರು ಎಶ್ಟೇ ಆಗಲಿ ಸ್ವಾರ‍್ತಿಗಳು. ಅವರ ಸ್ವಾರ‍್ತ ಅವರ ಕಯ್ಯಲ್ಲಿ ಯಾವ್ಯಾವಾಗ ಏನೇನು ಮಾಡಿಸುತ್ತೆ ಅಂತ ಹೇಳಲಿಕ್ಕೆ ಬರೋದಿಲ್ಲ. ಅಚಲವಾದ ತೆಲುಗು ಅಯ್‍ಡೆಂಟಿಟಿ ಅನ್ನೋದೊಂದು ತೆಲುಗರಲ್ಲಿ ಇದ್ದಿದ್ದರೆ ತೆಲುಗುನಾಡಿನಲ್ಲಿ ಎಲ್ಲಾ ಸರಿ ಇರುತ್ತಿತ್ತು ಅನ್ನೋದು ತುಂಬಾ ಸರಳ ದ್ರುಶ್ಟಿಯ ವಾದ ಅಂತ ನನಗೆ ಅನಿಸುತ್ತೆ. ಆದರೂ ಈ ವಾದವನ್ನು ಸುಮ್ಮನೆ ಬದಿಗೆ ಸರಿಸಲಿಕ್ಕೆ ಆಗೋದಿಲ್ಲ. ಅದರಲ್ಲಿ ಸತ್ಯದ ಎಳೆ ಇರೋ ಹಾಗಿದೆ. ಆದರೆ, ಇದರಲ್ಲಿ ತೆಲುಗು ಬಾಶೆಯ ಸಂಸ್ಕ್ರುತೀಕರಣದ ಪಾತ್ರ ಏನು ಅನ್ನೋದು ಮಾತ್ರ ಇನ್ನೂ ನನಗೆ ತಿಳೀತಿಲ್ಲ!", ಎಂದು ನನ್ನ ಸಂದೇಹವನ್ನು ಮತ್ತೆ ಅವರ ಮುಂದಿಟ್ಟೆ.
      "ಸಂಸ್ಕ್ರುತೀಕರಣದ ಪಾತ್ರ ಇದೆ. ನೋಡೀ, ಮೊದಮೊದಲು ನೂರಾರು ವರ‍್ಶ ತೆಲುಗಿನಲ್ಲಿ ಸಾಹಿತ್ಯ ಬರೆದವರೆಲ್ಲಾ ಸಂಸ್ಕ್ರುತ ಬಾಶೆಯ ಮೇಲೆ ಅಪಾರ ಗವ್ರವ ಇಟ್ಟುಕೊಂಡವರು. ಆರ‍್ಯ ಸಂಸ್ಕ್ರುತಿಯೇ ಇಡೀ ದೇಶದ ಸಂಸ್ಕ್ರುತಿ ಅಂತ ನಂಬಿಕೊಂಡವರು. ಅವರಿಗೆ ತೆಲುಗರ ದ್ರಾವಿಡತನದ ಬಗ್ಗೆ ಗೊತ್ತಿರಲಿಲ್ಲ. ಗೊತ್ತಿದ್ದರೂ ಅದನ್ನು ಲೆಕ್ಕಕ್ಕೆ ಇಡಲಿಲ್ಲ. ತೆಲುಗಿನ ಹೆಸರಿನಲ್ಲಿ ಬರೀ ಸಂಸ್ಕ್ರುತ ಪದಗಳನ್ನು ಗಿಡಿದು ’ತೆಲುಗು’ ಸಾಹಿತ್ಯ ರಚಿಸಿದರು. ಉತ್ತರದ ರಾಮಾಯಣ ಮಹಾಬಾರತದಂತಾ ಕತೆಗಳನ್ನೇ ಮತ್ತೆ ಮತ್ತೆ ತೆಲುಗಿನಲ್ಲಿ ಬರೆದು ’ಇದು ತೆಲುಗು ಸಾಹಿತ್ಯ’ ಎಂದು ಕರೆದರು. ಸಂಸ್ಕ್ರುತದಂತಾ ಬಾಶೆ ಇನ್ನೊಂದಿಲ್ಲ, ಆರ‍್ಯ ಸಂಸ್ಕ್ರುತಿಯೇ ಸಂಸ್ಕ್ರುತಿ ಅಂತ ಸಾಮಾನ್ಯ ತೆಲುಗರಿಗೆ ಶತಮಾನಗಳ ಕಾಲ ಒತ್ತುಣಿಸಿದರು. ತೆಲುಗರಲ್ಲಿ ತೆಲುಗಿನ ಅಬಿಮಾನ ಮೂಡಿಸುವ ಬದಲು ಅವರದಲ್ಲದ ಬಾರತದ ಅಬಿಮಾನ ತುಂಬಿಸಿದರು. ಬಾರತದ ಅಬಿಮಾನ ಮತ್ತು ತೆಲುಗು ಅಬಿಮಾನ ಬೇರೆಬೇರೆಯೇ ಅಲ್ಲ ಅನ್ನೋ ಹಾಗೆ ಗೊಂದಲ ಸ್ರುಶ್ಟಿ ಮಾಡಿದರು. ಇಂತಾ ಪರಿಸ್ತಿತಿಯಲ್ಲಿ ನಿಜವಾದ ’ತೆಲುಗು ಅಯ್‍ಡೆಂಟಿಟಿ’ ಹೇಗೆ ತಾನೆ ಬೆಳೆಯಲಿಕ್ಕೆ ಸಾದ್ಯ?", ಎಂದು ನನ್ನ ಗೆಳೆಯರು ಅವರ ವಾದವನ್ನು ಬಿಡಿಸಿ ಹೇಳಿದರು.
      ಅವರ ಈ ವಿವರಣೆ ಕೇಳಿದ ಮೇಲೆ ಅವರ ವಾದದಲ್ಲಿ ನಿಜಕ್ಕೂ ಹುರುಳಿದೆ ಎನಿಸಿತು. "ನಿಮ್ಮ ವಾದದ ಓಟ ಏನು ಅನ್ನೋದು ನನಗೆ ಈಗ ಗೊತ್ತಾಯಿತು. ನಿಮ್ಮ ವಾದ ಗಂಬೀರವಾಗಿ ಪರಿಗಣಿಸಬೇಕಾದದ್ದೇ. ನಿಮ್ಮ ವಾದ ತೆಲುಗಿಗೆ ಮಾತ್ರವಲ್ಲ, ಒಟ್ಟಾರೆ ಬಾರತದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ ಅಂತ ಅನಿಸುತ್ತೆ", ಎಂದು ಕೊಂಚ ಒಮ್ಮತ ಸೂಚಿಸಿದೆ.
      "ಹವ್‍ದು! weak identity ವಾದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ. ಅದರಲ್ಲೂ, ಮುಕ್ಯವಾಗಿ ಕನ್ನಡಕ್ಕೆ ಕಟುವಾಗೇ ಅನ್ವಯವಾಗುತ್ತೆ. ಕನ್ನಡದಲ್ಲಿ ಆಗಿರೋದೂ ಇದೇನೆ. ಕನ್ನಡದ ಸಾಹಿತಿಗಳಿಗೆ, ಚಿಂತಕರಿಗೆ, ಮಟಾದೀಶರಿಗೆ, ಮುಂದಾಳುಗಳಿಗೆ ಕನ್ನಡಿಗರ ದ್ರಾವಿಡತನವಾಗಲೀ ಕನ್ನಡತನವಾಗಲೀ ಚರಿತ್ರೆಯುದ್ದಕ್ಕೂ ಯಾವತ್ತೂ ಮುಕ್ಯವಾಗಿಲ್ಲ. ಹಳೆಯ ಸಾಹಿತಿಗಳು ಉತ್ತರದ ಹಳಸಲು ಕತೆಗಳನ್ನೇ ಕನ್ನಡದಲ್ಲಿ ಬರೆದು ’ಕನ್ನಡ’ಸಾಹಿತ್ಯ ಅಂತ ಕರೆದರು. ಕನ್ನಡದ ತುಂಬಾ ಸಂಸ್ಕ್ರುತ ಪದಗಳನ್ನು ತುರುಕಿಟ್ಟರು. ಈಚೆಗೆ ನಮ್ಮ ಮುಂದಾಳುಗಳು ದೇಶದ ಒಗ್ಗಟ್ಟಿನ ನೆವದಲ್ಲಿ ತ್ರಿಬಾಶಾ ಸೂತ್ರಕ್ಕೆ ಒಪ್ಪಿಗೆ ಕೊಟ್ಟು ಕನ್ನಡಿಗರಿಗೆ ಹಿಂದಿ ಕಲಿಸಿ, ಅದರ ಮೂಲಕ ಹಿಂದೀ ವಲಸಿಗರಿಗೆ ಅನುಕೂಲ ಮಾಡಿಕೊಟ್ಟರು. ಇನ್ನು ಸಂಸ್ಕ್ರುತ ವಿಶ್ವವಿದ್ಯಾಲಯ ಬೇರೆ ಕಟ್ಟುತ್ತಾರಂತೆ. ಹೀಗೆ ನಾಡಿನ ನಡೆನುಡಿಗಳನ್ನು ಎಡ್ಡಾದಿಡ್ಡಿ ಕಡೆಗಣಿಸಿದರೆ ಗೊಂದಲವಿಲ್ಲದ ’ಕನ್ನಡ ಅಯ್‍ಡೆಂಟಿಟಿ’ ಅನ್ನೋದು ಎಲ್ಲಿಂದ ಬರುತ್ತದೆ? ನಮ್ಮಲ್ಲೂ ಕೆಲವು ಪ್ರದೇಶಗಳು ಹಿಂದುಳಿದಿವೆ. ಅವುಗಳ ಮುನ್ನಡೆಗೆ ಉಳಿದ ಪ್ರದೇಶಗಳು ಸ್ವಾರ‍್ತ ಬಿಟ್ಟು ಗಮನ ಹರಿಸಬೇಕು. ಇಂತಾ ನಿಸ್ವಾರ‍್ತ ನಿಲುವನ್ನು ತೆಗೆದುಕೊಳ್ಳೋದಕ್ಕೆ, ’ನಾವು ಕನ್ನಡಿಗರು ಒಂದೇ ಮಂದಿ. ನಮಗೆ ನಮ್ಮ ನಾಡಿನ ನಡೆನುಡಿ ಮುಕ್ಯ. ನಮ್ಮ ನಿಶ್ಟೆ ನಮ್ಮ ನಾಡಿಗೆ ಅಶ್ಟೆ’ ಅನ್ನೋ ಒಂದು ಕಡುವಾದ ಕನ್ನಡ ಅಯ್‍ಡೆಂಟಿಟಿ ಬೇಕೇ ಬೇಕು. ಇಲ್ಲದಿದ್ದರೆ ತೆಲಂಗಾಣದಂತಾ ದುರಂತ ನಮ್ಮಲ್ಲೂ ಆಗಬಹುದು", ಎಂದು ನುಡಿದು ನನ್ನ ಗೆಳೆಯರು ಚರ‍್ಚೆ ಮುಗಿಸಿದರು.
      ನಾಡಿನ ಮುನ್ನಡೆಯಲ್ಲಿ ಪ್ರಾದೇಶಿಕ ಅಸಮಾನತೆ, ಕನ್ನಡಿಗರ ಬಗ್ಗೆ ಕಿಂಚಿತ್ತೂ ಆದರವಿಲ್ಲದ ಹೊರಗಿನವರ ಮಿತಿಮೀರಿದ ವಲಸೆ, ದೆಹಲಿಯ ಒಡೆಯರ ಮುಂದೆ ತೊತ್ತುಗಳಂತೆ ಕಯ್ಕಟ್ಟಿ ನಿಲ್ಲುವ ನಮ್ಮ ’ಮುಂದಾಳುಗಳು’ - ಇವು ಇತ್ತೀಚಿನ ದಶಕಗಳಲ್ಲಿ ನಾವು ಕಂಡಿರುವ ವಾಸ್ತವಗಳು. ಈ ವಾಸ್ತವಗಳ ಎದುರು ನಮ್ಮ ಗೆಳೆಯರು ಒಡ್ಡಿದ ವಾದದ ತಿರುಳನ್ನೂ ಪ್ರಸ್ತುತತೆಯನ್ನೂ ಅಲ್ಲಗಳೆಯಲು ಆದೀತೆ? ನೀವೇ ಹೇಳಿ!

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶನಿವಾರ, ಆಗಸ್ಟ್ 10, 2013

Frankenstein ಪದಗಳು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಟೀವೀಯಲ್ಲಿ ಸುದ್ದಿ ಕಾರ‍್ಯಕ್ರಮವೊಂದನ್ನು ನೋಡುತ್ತಿದ್ದೆ. ಸುದ್ದಿ ಓದುತ್ತಿದ್ದ ಆಳು ಯಾವುದೋ ಸುದ್ದಿಯೊಂದನ್ನು ಓದಿ, ಅದು ’ನಂಬಿಕಾರ‍್ಹ’ ಮೂಲಗಳಿಂದ ಸಿಕ್ಕಿದುದು ಎಂದು ಹೇಳಿಕೊಂಡರು. ಆ ’ನಂಬಿಕಾರ‍್ಹ’ ಎಂಬ ಪದವನ್ನು ಕೇಳಿದೊಡನೆ ನನ್ನಲ್ಲಿ ಹಲವಾರು ’ಒಳ್ಳೆಯವು’ ಎಂದು ಹೇಳಲಾರದ ಬಾವನೆಗಳು ಒಟ್ಟಿಗೇ ಮೂಡಿದವು. ಹಿಂದೊಮ್ಮೆ ’ನಂಬಲಾರ‍್ಹ’ ಎಂಬ ಇಂತಹುದೇ ಇನ್ನೊಂದು ಪದವನ್ನು ಕೇಳಿದ್ದು ಕೂಡಾ ನನ್ನ ನೆನಪಿಗೆ ಬಂತು. ಮೊದಲೆಲ್ಲಾ ಇಂತಹ ಪದಗಳನ್ನು ಕೇಳಿದಾಗ ನನಗೆ ಸಿಟ್ಟೇ ಬರುತ್ತಿತ್ತು. ಈಗಲಾದರೋ, ವಯಸ್ಸಿಗೆ ಅನುಗುಣವಾಗಿ ಮೆದುವಾಗಿರುವುದರಿಂದಲೋ ಇಲ್ಲ ಸೋಲನ್ನು ಹೆಚ್ಚುಕಡಿಮೆ ಒಪ್ಪಿಕೊಂಡಿರುವುದರಿಂದಲೋ, ಇಂತಹ ಪದಗಳನ್ನು ಕೇಳಿದರೆ ನನ್ನಲ್ಲಿ ಸಿಟ್ಟಿನ ಬದಲು ’ಅಯ್ಯೋ ಪಾಪ’ ಎನ್ನುವ ಉದ್ಗಾರಕ್ಕೆ ಹೊಂದುವ ಬಾವನೆಗಳು ಏಳುತ್ತವೆ. ಏಕೆ ಎಂದು ಕೇಳುತ್ತೀರಾ? ಹೇಳುತ್ತೇನೆ ಕೇಳಿ.
      ಕನ್ನಡ ನುಡಿಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಕನ್ನಡದ್ದೇ ಆದ ’ಅಚ್ಚಗನ್ನಡ’ ಎಂದು ಕರೆಸಿಕೊಳ್ಳುವ ಕಯ್, ಕಣ್ಣು, ಕೋಳಿ, ನಾಯಿ, ಮಳೆ, ಹೊಳೆ ಮುಂತಾದ ಪದಗಳಿವೆ. ಇವುಗಳ ಜೊತೆಗೆ ಹೊರನುಡಿಗಳಿಂದ ಎರವಲಾಗಿ ಬಂದ ದೀಪ, ಆಕಾಶ, ಪೆನ್ನು, ಮೇಜು ಮುಂತಾದ ’ಆಮದು’ ಪದಗಳಿವೆ. ಈ ಎರಡು ಬಗೆಯ ಪದಗಳಲ್ಲಿ ಅಸಹಜವಾದದ್ದು ಏನೂ ಇಲ್ಲ. ಆದರೆ, ಇವರೆಡು ಬಗೆಗಳಿಗೆ ಹೊರತಾಗಿ ಇನ್ನೊಂದು ಬಗೆಯ ಪದಗಳಿವೆ. ಈ ಪದಗಳನ್ನು ಸಹಜ ಎನ್ನಬೇಕೋ, ಅಸಹಜ ಎನ್ನಬೇಕೋ, ನನಗೆ ಸುಲಬವಾಗಿ ತೋಚುವುದಿಲ್ಲ. ಮೇಲೆ ತಿಳಿಸಿದ ’ನಂಬಿಕಾರ‍್ಹ’ ಎನ್ನುವುದು ಈ ಗುಂಪಿಗೆ ಸೇರಿದ್ದು. ಯಾವುದೇ ಕಿಡಿಗೇಡಿತನವಿಲ್ಲದೆ ಕೆಲ ಜನರಿಂದ ತಾನೇ ತಾನಾಗಿ ಇಂತಹ ಪದಗಳ ಸ್ರುಶ್ಟಿ ಆಗಿರುವುದರಿಂದ, ಇಂತಹ ಪದಗಳನ್ನೂ ’ಸಹಜ’ ಎಂದೇ ಕರೆಯಬೇಕಾಗಬಹುದು. ಆದರೆ, ಇಂತಹ ಪದಗಳು ’ಸರಿ’ ಎನ್ನುವುದು ಮಾತ್ರ ನನ್ನಂತಹ ಮನೋಬಾವನೆಯವರಿಗೆ ಸಾದ್ಯವಿಲ್ಲ.
      ಅದೇನು ಈ ’ನಂಬಿಕಾರ‍್ಹ’ ಎನ್ನುವ ಪದದಲ್ಲಿ ಆಗಿರುವ ಅಂತಾ ಎಡವಟ್ಟು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಹೀಗಿದೆ ನೋಡಿ. ’ನಂಬಿಕಾರ‍್ಹ’ ಪದ ಕನ್ನಡದ ’ನಂಬಿಕೆ’ ಎನ್ನುವ ಪದಕ್ಕೆ ’ಅರ‍್ಹ’ ಎನ್ನುವ ಸಂಸ್ಕ್ರುತ ಪದವನ್ನು ಯಾರೂ ಕಂಡುಕೇಳರಿಯದ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಳೆಯ ಪ್ರಕಾರ ಅಂಟಿಸಿ ಮಾಡಿಕೊಂಡ ಪದ! ’ವಿಶ್ವಾಸಾರ‍್ಹ’ ಎಂಬ ಸರಿಯಾದ ರೀತಿಯಲ್ಲಿ ಮಾಡಿಕೊಂಡ ಸಂಸ್ಕ್ರುತ ಪದ ಒಂದಿದೆ. ಅದನ್ನೇ ಅನುಕರಿಸ ಹೊರಟು ಕನ್ನಡ ಸರಿಯಾಗಿ ತಿಳಿಯದವರು ಯಾರೋ ಮಾಡಿಟ್ಟ ತಪ್ಪುತಪ್ಪು ಪದ ಈ ನಮ್ಮ ’ನಂಬಿಕಾರ‍್ಹ’ ಪದ. ಮೊದ್ದು ಅನುಕರುಣೆಯಿಂದಾಗಿ ಇಂತಹ ಪದಗಳ ಟಂಕಣೆ ಆಗಾಗ್ಗೆ ಕನ್ನಡದಲ್ಲಿ ಆಗಿದೆ, ಆಗುತ್ತಿರುತ್ತದೆ. ಎತ್ತುಗೆಗೆ (ಉದಾಹರಣೆಗೆ), ’ಊಟೋಪಚಾರ’ ಎನ್ನುವ ಇನ್ನೊಂದು ಪದವಿದೆ. ಇದಂತೂ ತುಂಬಾ ಸ್ವಾರಸ್ಯವುಳ್ಳ ಪದ. ಇಲ್ಲಿ ಕನ್ನಡದ ’ಊಟ’ ಮತ್ತು ಸಂಸ್ಕ್ರುತದ ’ಉಪಚಾರ’ ಎಂಬ ಪದಗಳನ್ನು ಸಂಸ್ಕ್ರುತ ಸೊಲ್ಲರಿಮೆಯ ’ಗುಣ ಸಂದಿ’ ಎಂಬ ಕಟ್ಟಳೆಗೆ ಒಳಪಡಿಸಿ, ’ಊಟೋಪಚಾರ’ ಎಂದು ಯಾರೋ ಕಡುಜಾಣರು ಇಶ್ಟೆಲ್ಲಾ ತಿಳಿಯದೆಯೇ ಸಮೆದಿದ್ದಾರೆ! ಇವರ ಪ್ರತಿಬೆಗೆ ತಕ್ಕ ಪ್ರಶಸ್ತಿಯನ್ನು ಕೊಡಬೇಕು! ಈ ಪದದ ಬಳಕೆ ಸಾಮಾನ್ಯವಾಗಿ ಮದುವೆಗೆ ಪತ್ತಿದ ಬರಹಗಳಲ್ಲಿ ಕಾಣಬರುತ್ತದೆ. ಹಾಗಾಗಿ, ಸಂಸ್ಕ್ರುತದ ’ವರೋಪಚಾರ’ ಎಂಬ ಪದದ ದಡ್ಡ ಅನುಕರಣೆಯೇ ’ಊಟೋಪಚಾರ’ ಪದದ ಬರವಿಗೆ ಕಾರಣ ಎಂದು ಊಹಿಸುವುದು ಕಶ್ಟವಲ್ಲ. ಈ ತೆರನ ಅಮಾಯಕ ಅನುಕರಣೆಯಿಂದ ’ದೊಡ್ಡಸ್ತಿಕೆ’, ’ನೆಂಟಸ್ತಿಕೆ’, ’ಚಿಪ್ಪೇಂದ್ರಿಯ (chip + ಇಂದ್ರಿಯ)’ ಮುಂತಾದ ಇನ್ನೂ ಕೆಲ ಪದಗಳು ಕನ್ನಡದಲ್ಲಿ ಸ್ರುಶ್ಟಿಯಾಗಿವೆ.
      ಈ ರೀತಿ, ಕನ್ನಡದ ಪದಕ್ಕೆ ಬೇರೆ ಬಾಶೆಯ ಪದವನ್ನು ಅಂಟಿಸಿ ಮಾಡಿಕೊಳ್ಳುವ ಪದಗಳಿಗೆ ನಾನು ’ಪ್ರಾಂಕನ್‍ಸ್ಟಯ್ನ್’ (frankenstein) ಪದಗಳು ಎಂದು ಕರೆಯುತ್ತೇನೆ (Dr. Frankenstein ಎಂಬ ಒಬ್ಬ ಹುಚ್ಚು ವಿಜ್ನಾನಿ ಬೇರೆ ಬೇರೆ ಹೆಣಗಳಿಂದ ಅವಯವಗಳನ್ನು ಆಯ್ದು ಒಟ್ಟಿಗೆ ಸೇರಿಸಿ ಒಬ್ಬ ಕ್ರುತಕ ಮನುಶ್ಯನನ್ನು ಮಾಡಿದ ಎಂಬುದು ಪಡುವಲ ನುಡಿಪಿನಲ್ಲಿ, ಅಂದರೆ ಪಾಶ್ಚಾತ್ಯ ಸಾಹಿತ್ಯದಲ್ಲಿ, ಮೂಡಿಬಂದ ಒಂದು ಕತೆ). ಪ್ರಾಂಕನ್‍ಸ್ಟಯ್ನ್ ಪದಗಳು ಕನ್ನಡದಲ್ಲಿ ಬಹು ಹಿಂದಿನಿಂದಲೂ ಇವೆ. ಕನ್ನಡದ ಮೊತ್ತಮೊದಲ ಬರಹವಾದ ಪಲ್ಮಿಡಿ ಶಾಸನದಲ್ಲೇ ’ಪೆತ್ತಜಯನ್’ ಎಂಬ ಪ್ರಾಂಕನ್‍ಸ್ಟಯ್ನ್ ಪದವಿದೆ! ಕನ್ನಡದ ಪದಗಳ ಕೊನೆಗೆ ಸಂಸ್ಕ್ರುತದ ಒಟ್ಟುಗಳನ್ನು (ಪ್ರತ್ಯಯಗಳನ್ನು) ಅಂಟಿಸುವುದಂತೂ ನಮ್ಮಲ್ಲಿ ತುಂಬಾ ಹಳೆಯ ವಾಡಿಕೆ. ಸಮಗಾರ (ಕಾರ), ಹಣವಂತ (ವಂತ < ಮತ್),  ಕೂದಲುಮಯ (ಮಯ) ಮುಂತಾದ ಪದಗಳು ಕನ್ನಡದಲ್ಲಿ ಸಾಕಶ್ಟಿವೆ. ಇನ್ನು ’ಕಸುಬುದಾರ’, ’ಗುತ್ತಿಗೆದಾರ’ ಮುಂತಾದ ಪದಗಳಲ್ಲಿ ಕನ್ನಡದ್ದಲ್ಲದ ’ದಾರ್’ ಎಂಬ ಹಿನ್ನೊಟ್ಟಿನ ಬಳಕೆಯಾಗಿದೆ. ಹಿನ್ನೊಟ್ಟುಗಳನ್ನು ಬಳಸುವುದು ಸರಿ ಎಂದ ಮೇಲೆ ಬೇರೆ ನುಡಿಗಳ ಮುನ್ನೊಟ್ಟುಗಳನ್ನೂ ಏಕೆ ಬಳಸಬಾರದು? ಹೀಗೆ ಪ್ರಶ್ನೆ ಕೇಳಿಕೊಂಡೋ ಎಂಬಂತೆ ಈಗೀಗ ನಾವು ಸಂಸ್ಕ್ರುತದ ಪ್ರತ್ಯಯಗಳನ್ನು ಕನ್ನಡದ ಪದಗಳ ಮೊದಲಿಗೂ ಹಚ್ಚುತ್ತಿದ್ದೇವೆ. ಸನ್ನಡತೆ, ದುರ‍್ಬಳಕೆ, ಪುನರ‍್ಬಳಕೆ ಮುಂತಾದವು ಇದಕ್ಕೆ ಎತ್ತುಗೆ. ಅಶ್ಟಕ್ಕೇ ನಾವು ಸುಮ್ಮನಾಗಿಲ್ಲ. ಕನ್ನಡಕ್ಕೆ ಸಂಸ್ಕ್ರುತದ ಒಟ್ಟುಗಳನ್ನು ಅಂಟಿಸಿದ ಹಾಗೇ ಸಂಸ್ಕ್ರುತಕ್ಕೆ ಕನ್ನಡದ ಒಟ್ಟುಗಳನ್ನು ಏಕೆ ಅಂಟಿಸಬಾರದು? ಹೀಗೆ ಯೋಚಿಸಿ ನಾವು ಅದನ್ನೂ ಮಾಡಿದ್ದೇವೆ! ’ಮುಂಬಾಗ’, ’ಹಿಂಬಾರ’, ’ಮುಂದಾಲೋಚನೆ’, ’ಹೊಂಗಿರಣ’ ಎಂದೆಲ್ಲಾ ಪದಗಳನ್ನು ಬಳಕೆಗೆ ತಂದಿದ್ದೇವೆ. ಈಗ ಉಳಿದಿರುವುದು ಇಂಗ್ಲೀಶಿನ ಪ್ರತ್ಯಯಗಳನ್ನು ಕನ್ನಡಕ್ಕೆ ಅಂಟಿಸುವುದು ಮಾತ್ರ. ಅದೂ ಆಗಲೇ ಆಗಿದೆ ಎಂದು ನನಗೆ ಯಾರಾದರೂ ಹೇಳಿದರೆ ನಾನೇನೂ ಅಚ್ಚರಿ ಪಡುವುದಿಲ್ಲ.
      ಸಾಮಾನ್ಯ ಮಂದಿಗೆ ಪದಗಳ ಕಟ್ಟೋಣ ಹೇಗೆ ಆಗಿದೆ ಎಂಬುದರ ಅರಿವಿರುವುದಿಲ್ಲ. ಅವರಿಗೆ ತಮ್ಮ ನುಡಿಯ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಹಾಗಾಗಿ, ಪದಗಳು ಸರಿಯಾಗಿ ಮಾಡಿರುವಂತಹವೋ ಅಲ್ಲವೋ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ಪದಗಳು ಹೇಗಿದ್ದರೂ ಅವುಗಳನ್ನು ಅವರು ಒಪ್ಪಿಕೊಳ್ಳುತ್ತಾರೆ ಮತ್ತು ಬಳಸುತ್ತಾರೆ. ಆದರೆ, ’ನಮ್ಮ ನುಡಿ ಎಂತಹುದು, ಯಾವ ಗುಂಪಿನದು, ಅದರ ವಿಶೇಶತೆ ಏನು, ಅದರ ಮಾಳ್ಕೆ ಹೇಗೆ, ಅದನ್ನು ಹೇಗೆ ಬಳಸುವುದು ಒಳ್ಳೆಯದು, ಅದರ ಬೆಳವಣಿಗೆಗೆ ಯಾವುದು ಒಳ್ಳೆಯದು’ ಮುಂತಾದ ಮಾಹಿತಿಗಳನ್ನು ತಿಳಿದುಕೊಂಡಿರುವವರಿಗೆ, ಎಡ್ಡಾದಿಡ್ಡಿಯಾಗಿ ಪದಗಳನ್ನು ಮಾಡಿಕೊಳ್ಳುವುದು ಒಪ್ಪಿಗೆಯಾಗುವುದಿಲ್ಲ. ನಮ್ಮ ಶಿಕ್ಶಣದಲ್ಲಿ ಕನ್ನಡದ ಬಗೆಗಿನ ಇಂತಹ ವಿಶಯಗಳ ಬಗ್ಗೆ ಸಾಕಶ್ಟು ಹೇಳಿಕೊಡುವುದಿಲ್ಲ. ಒಂದು ವೇಳೆ ಹೇಳಿಕೊಟ್ಟರೆ, ಬಹಳಶ್ಟು ಕನ್ನಡಿಗರು ಪ್ರಾಂಕನ್‍ಸ್ಟಯ್ನ್ ಪದಗಳನ್ನು ಇಶ್ಟಪಡುವುದಿಲ್ಲ ಎನ್ನುವುದು ನನ್ನ ನಂಬಿಕೆ. ಇಶ್ಟೆಲ್ಲಾ ಹೇಳಿದ ಮೇಲೆ, ಕನ್ನಡ ಒಂದು ಬಾಳುನುಡಿ (ಜೀವಂತ ಬಾಶೆ) ಎನ್ನುವುದನ್ನು ಮರೆಯಲಾಗುವುದಿಲ್ಲ. ಅದರ ಮೇಲೆ ಯಾರಿಗೂ ’ಕಾಪಿ ರಯ್‍ಟ್ ’ ಇಲ್ಲ. ಮಂದಿಗೆ, ’ಈ ಪದಗಳನ್ನು ಬಳಸಿ, ಈ ಪದಗಳನ್ನು ಬಳಸಬೇಡಿ’ ಎಂದು ಒತ್ತಾಯಿಸುವ ಅದಿಕಾರ ಯಾರಿಗೂ ಇಲ್ಲ. ಸರಿಯಾದ ಶಿಕ್ಶಣದಿಂದ ಮಾತ್ರ ಅವರ ಮನ ಒಲಿಸಬೇಕು. ಸರಿಯಾದ ಶಿಕ್ಶಣ ಯಾವಾಗ ದೊರೆಯುತ್ತದೋ ಯಾರಿಗೆ ಗೊತ್ತು? ಅಲ್ಲಿಯವರೆಗೂ ಪ್ರಾಂಕನ್‍ಸ್ಟಯ್ನ್ ಪದಗಳ ಟಂಕಣೆ ನಿಲ್ಲುವುದಿಲ್ಲ, ಬಳಕೆ ನೀಗುವುದಿಲ್ಲ. ಸದ್ಯಕ್ಕೆ, ಎಂದಾದರೊಂದು ದಿನ ಪ್ರಾಂಕನ್‍ಸ್ಟಯ್ನ್ ಪದಗಳಿಂದ ಕನ್ನಡಕ್ಕೆ ಬಿಡುಗಡೆ ದೊರೆಯಬಹುದು ಎಂದುಕೊಳ್ಳೋಣ, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್