ಅರುಹುನಡೆ

ಕನ್ನಡಿಗರ ಒಳಿತಿಗಾಗಿ, ಕನ್ನಡಿಗರನ್ನು ಕಾಡುವ ಸಮಸ್ಯೆಗಳ ಬಗೆಹರಿವಿಗಾಗಿ, ಬಳಗ ಬೇರೆಬೇರೆ ಅರುಹುನಡೆಗಳನ್ನು ಸಮಯೋಚಿತವಾಗಿ ಕಯ್ಗೆತ್ತಿಕೊಳ್ಳುತ್ತದೆ. ಇಂತಹ ಅರುಹುನಡೆಗಳ ವಿವರಣೆಗಾಗಿ ಈ ಪುಟ.

                              ಅರುಹುನಡೆ - "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ"

ತಾಯ್ನುಡಿಯಲ್ಲಿ ಕಲಿವುದು ತಾಯಹಾಲುಂಡಂತೆ
      ಈಗಿನ ದಿನಗಳಲ್ಲಿ ಬಡವರಾಗಲೀ ಬಲ್ಲಿದರಾಗಲೀ, ಕಲಿತವರಾಗಲೀ ಕಲಿಯದವರಾಗಲೀ, ಎಲ್ಲರೂ ತಮ್ಮ ಮಕ್ಕಳನ್ನು ಆಂಗ್ಲ ಮಾದ್ಯಮ ಶಾಲೆಗೆ ಸೇರಿಸುವುದು ಎಲ್ಲರಿಗೂ ತಿಳಿದ ವಿಶಯ. ಇದು ಹೀಗೇಕೆ? ಪ್ರಪಂಚದ ಯಾವುದೇ ಮುಂದುವರಿದ ದೇಶದಲ್ಲಾಗಲಿ, ಮಕ್ಕಳ ಮೊದಲ ಕಲಿಕೆ ಆಗುವುದೇ ಅವರ ತಾಯ್ನುಡಿಯಲ್ಲಿ. ಇಡೀ ಪ್ರಪಂಚದಲ್ಲೇ, ಶಯ್‍ಕ್ಶಣಿಕ ಕ್ಶೇತ್ರದಲ್ಲಿ ನುರಿತ ಬಹುತೇಕ ಎಲ್ಲರ ಅಬಿಪ್ರಾಯ ಏನೆಂದರೆ, ಮಕ್ಕಳು ಅವರ ತಾಯ್ನುಡಿಯಲ್ಲಿ ಕಲಿಯುವಶ್ಟು ಚೆನ್ನಾಗಿ ಬೇರಿನ್ನಾವ ನುಡಿಯಲ್ಲೂ ಕಲಿಯಲಾರರು, ಎಂದು. ವಿಶಯ ಗ್ರಹಿಕೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಕುಶಲತೆ ಮಕ್ಕಳಲ್ಲಿ ಸರಿಯಾದ ಬಗೆಯಲ್ಲಿ ಉಂಟಾಗುವುದು ಅವರಿಗೆ ತಾಯ್ನುಡಿಯಲ್ಲಿ ಕಲಿಕೆಯಾದಾಗಲೇ. ತಾಯ್ನುಡಿಯಲ್ಲಿ ಕಲಿಯದಿದ್ದರೆ ಮಕ್ಕಳ ಕಲಿಯುವ ಸಾಮರ‍್ತ್ಯವೇ ಕುಂಟಿತವಾಗುತ್ತದೆ ಎನ್ನುತ್ತಾರೆ ನುರಿತವರು.

ಇಂಗ್ಲೀಶಿನ ಹುಚ್ಚು
      ವಾಸ್ತವ ಹೀಗಿದ್ದೂ ತಂದೆತಾಯಿಗಳು ಮಕ್ಕಳನ್ನು ಆಂಗ್ಲ ಮಾದ್ಯಮ ಶಾಲೆಗೇ ಸೇರಿಸುವುದು ಯಾಕೆ? ಇದಕ್ಕೆ ಮೂಲಬೂತ ಕಾರಣ, ತಮ್ಮ ಮಕ್ಕಳು ಇಂಗ್ಲೀಶಿನಲ್ಲಿ ಅರಳು ಹುರಿದಂತೆ ಮಾತಾಡಬೇಕು ಎಂಬ ಆಸೆ. ಈ ಆಸೆಯಾದರೂ ಯಾತಕ್ಕೆ? ಅದಕ್ಕೆ ಎರಡು ಕಾರಣಗಳು. ಇಂಗ್ಲೀಶಿನಲ್ಲಿ ಮಾತನಾಡುವುದು ಬಂದರೆ, ಮೊದಲನೆಯದಾಗಿ, ಒಳ್ಳೆಯ ಸಂಬಳ ತರುವ ಕೆಲಸ ಸಿಗುತ್ತದೆ; ಎರಡನೆಯದಾಗಿ, ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ. ಜಾಗತೀಕರಣದ ಹಾಗೂ ಬಹುರಾಶ್ಟ್ರೀಯ ಉದ್ಯಮಗಳ ಈ ಕಾಲದಲ್ಲಿ ಮೊದಲನೆಯ ಕಾರಣಕ್ಕೆ ಸಾಕಶ್ಟು ಆದಾರವಿದೆ. ಇನ್ನು ಎರಡನೆಯ ಕಾರಣಕ್ಕೆ, ಇಂಗ್ಲೀಶನ್ನು ತಲೆಯ ಮೇಲಿಟ್ಟುಕೊಂಡು ದಿನನಿತ್ಯ ಮೆರೆಸುವ ನಮ್ಮ ಸಮಾಜವೇ ಒಂದು ದೊಡ್ಡ ಆದಾರ.
      ನಮ್ಮ ಮಂದಿಗೆ ಇಂಗ್ಲೀಶಿನ ವ್ಯಾಮೋಹ ಎಶ್ಟಿದೆ ಎಂದರೆ, ನಿಮಗೆ ಗೊತ್ತಿರದ ವಿದ್ಯೆಗಳೇ ಇಲ್ಲದಿರಬಹುದು, ನಿಮ್ಮನ್ನು ಮೀರಿಸುವ ಜಾಣರೇ ಇಲ್ಲದಿರಬಹುದು, ಆದರೂ, ನಿಮಗೆ ಇಂಗ್ಲೀಶಿನಲ್ಲಿ ಮಾತನಾಡುವುದು ಬರಲಿಲ್ಲವೆಂದರೆ, ನಿಮಗೆ ಮರ‍್ಯಾದೆ ಸಿಗುವುದಿಲ್ಲ. ಇನ್ನೊಬ್ಬನಿಗೆ ಬೇರೆ ಏನೂ ಗೊತ್ತಿಲ್ಲದಿದ್ದರೂ ಇಂಗ್ಲೀಶಿನಲ್ಲಿ ಮಾತನಾಡುವುದೊಂದು ಗೊತ್ತಿದ್ದರೆ ಆಯಿತು, ಅವನಿಗೇ ಎಲ್ಲಾ ಮರ‍್ಯಾದೆ! ವ್ಯಕ್ತಿಗಳ ಮಟ್ಟವನ್ನು ಇಂಗ್ಲೀಶಿನಿಂದ ಅಳೆಯುವ ನಮ್ಮ ಸಮಾಜದ ಕಣ್ಣೋಲು ಎಶ್ಟು ಓರೆಕೋರೆಯಾಗಿದೆ ಎಂದರೆ, ನಮ್ಮಲ್ಲಿ ಇಂಗ್ಲೀಶ್ ಮಾತಾಡುವವನು ಮೇಲರಿಮೆಯಿಂದ ಮೆರೆದರೆ, ಇಂಗ್ಲೀಶ್ ಬಾರದವನು ಕೀಳರಿಮೆಯಿಂದ ನಲುಗುತ್ತಾನೆ. ಇಂಗ್ಲೀಶ್ ಉಪಯುಕ್ತ ಬಾಶೆ ಎಂಬುದೇನೋ ಸತ್ಯ. ಆದರೆ, ಅದನ್ನು ಕಲಿತ ಮಾತ್ರಕ್ಕೆ ಯಾರೂ ತಾನೇತಾನಾಗಿ ವಿದ್ಯಾವಂತರೂ ಆಗುವುದಿಲ್ಲ, ಜಾಣರೂ ಆಗುವುದಿಲ್ಲ. ಈ ಸರಳ ನನ್ನಿ ನಮ್ಮ ಮಂದಿಗೆ ತಿಳಿದಿಲ್ಲದಿರುತ್ತದೆಯೆ? ತಿಳಿದಿರುತ್ತದೆ. ಆದರೂ, ಸಮಾಜದ ಓಟಕ್ಕೆ ಎದುರಾಗಿ ನಡೆಯುವ ಎದೆಗಾರಿಕೆ ಯಾರಿಗಿರುತ್ತದೆ? ಸರಿಯೋ ತಪ್ಪೋ, ಒಟ್ಟಿನಲ್ಲಿ, ಇಂಗ್ಲೀಶಿನಲ್ಲಿ ಮಾತಾಡುವ ಕವ್‍ಶಲ ಇಂದು ನಮ್ಮಲ್ಲಿ ಬೇಕೇ ಬೇಕು ಎನಿಸುವಶ್ಟು ಅವಶ್ಯವಾಗಿ ಹೋಗಿದೆ.

ನಮ್ಮ ಮಕ್ಕಳು ಕೀಳರಿಮೆಯಲ್ಲಿ ಬೆಳೆಯುವುದು ಬೇಡ
      ಈ ಇಂಗ್ಲೀಶ್ ಅಯ್ಲಿನ ಕೆಟ್ಟ ಹಾಗೂ ಕ್ರೂರ ಪರಿಣಾಮ ನಮ್ಮ ಸಣ್ಣ ಊರುಗಳ ಶಾಲೆಮಕ್ಕಳ ಮೇಲೆ ಆಗಿರುವಶ್ಟು ಇನ್ನಾರ ಮೇಲೂ ಆಗಿಲ್ಲ. ಇದು ಎಲ್ಲರಿಗೂ ಗೊತ್ತಿರುವಂತೆ ನನಗೂ ಗೊತ್ತಿತ್ತು. ಆದರೂ, ಅದರ ನೇರ ಅನುಬವ ಆದಾಗ ನನಗಾದ ನೋವು ಅಶ್ಟಿಶ್ಟಲ್ಲ. ಕಳೆದ ವರ‍್ಶ ವಿದಾನಸಬೆಯ ಚುನಾವಣೆಯ ಸಂದರ‍್ಬದಲ್ಲಿ ಬೆಂಗಳೂರಿನ ಸುತ್ತುಮುತ್ತಿನ ಕೆಲ ಸಣ್ಣ ಊರುಗಳಲ್ಲಿ ಓಡಾಡುವಾಗ ಹಲವಾರು ಬಾರಿ ಶಾಲಾ ಹಾಗೂ ಕಾಲೇಜು ಮಕ್ಕಳೊಂದಿಗೆ ಇಂಗ್ಲೀಶ್ ಕಲಿಕೆಯ ಬಗ್ಗೆ ಮಾತಾಡಿದ್ದೆ. ಇಂಗ್ಲೀಶ್ ಸರಿಯಾಗಿ ಬಾರದಿರುವುದಕ್ಕಾಗಿ ಅವರಲ್ಲಿದ್ದ ಕೀಳರಿಮೆಯ ಆಳವನ್ನು ಕಂಡು ನನಗೆ ಕರುಳು ಚುರ್ ಎಂದಿತ್ತು. ಇದರ ಬಗ್ಗೆ ಏನಾದರೂ ಮಾಡಬೇಕು ಎಂದುಕೊಂಡಿದ್ದೆ. ಈಗ ಮಾಡುವ ಸಮಯ ಒದಗಿ ಬಂದಂತಿದೆ.

ಇಂಗ್ಲಿಶ್ ಕಲಿಸಿ
      ನಮ್ಮ ಜನಗಳ ಕಣ್ಣಲ್ಲಿ ’ಇಂಗ್ಲೀಶ್ ಬರುವುದು’ ಎಂದರೆ, ’ಇಂಗ್ಲೀಶಿನಲ್ಲಿ ಮಾತನಾಡಲು ಬರುವುದು’ ಎಂದೇ ಅರ‍್ತ. ನಿಮಗೆ ಇಂಗ್ಲೀಶಿನಲ್ಲಿ ಎಶ್ಟೇ ಪಾಂಡಿತ್ಯವಿದ್ದರೂ, ಅದರಲ್ಲಿ ನಿಮಗೆ ಸರಾಗವಾಗಿ ಮಾತಾಡಲು ಬರಲಿಲ್ಲವೆಂದರೆ, ನಿಮಗೆ ಇಂಗ್ಲೀಶ್ ಬರುವುದಿಲ್ಲ ಎಂದೇ ಮಂದಿ ತೀರ‍್ಮಾನಿಸುವುದು. ಅದೂ ಅಲ್ಲದೆ, ಇಂಗ್ಲೀಶಿನಲ್ಲಿ ಮಾತನಾಡಲು ಬರುವುದು ಹೇಗೂ ಮುಕ್ಯ. ಹಾಗಾಗಿ, ಮಕ್ಕಳಿಗೆ ಇಂಗ್ಲೀಶಿನ ಪ್ರಯೋಜನ ದೊರಕಿಸಿಕೊಡಬೇಕೆಂದರೆ ಮತ್ತು ಅವರಲ್ಲಿ ಕೀಳರಿಮೆ ಮೂಡುವುದನ್ನು ತಡೆಯಬೇಕೆಂದರೆ, ಅವರಿಗೆ ನಾವು ಇಂಗ್ಲೀಶಿನಲ್ಲಿ ’ಮಾತನಾಡುವುದನ್ನು’ ಮುಕ್ಯವಾಗಿ ಹೇಳಿಕೊಡಬೇಕು. ಶುರುವಿನಿಂದಲೇ ಇಂಗ್ಲೀಶ್ ಮಾದ್ಯಮದಲ್ಲಿ ಓದಿಸಿದರೆ ಸಾಕು, ಮಕ್ಕಳಿಗೆ ತನ್ನಶ್ಟಕ್ಕೆ ತಾನೆ ಇಂಗ್ಲೀಶಿನಲ್ಲಿ ಮಾತನಾಡಲು ಬರುತ್ತದೆ ಎಂದು ತಾಯ್‍ತಂದೆಯರು ತಿಳಿದಿದ್ದಾರೆ. ಇದೇ ಕಾರಣಕ್ಕಾಗಿ ನಮ್ಮ ಸರ‍್ಕಾರ ಕೂಡ ಈಗ ತನ್ನ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಶ್ ಮಾದ್ಯಮ ಶಿಕ್ಶಣವನ್ನು ಕೊಡಲು ಯೋಚಿಸಿದೆ. ಆದರೆ, ’ಇಂಗ್ಲೀಶ್ ಮಾದ್ಯಮದಲ್ಲಿ ಓದಿಸಿದರೆ ಸಾಕು, ಇಂಗ್ಲೀಶಿನಲ್ಲಿ ಮಾತನಾಡುವುದು ಬರುತ್ತದೆ’ ಎನ್ನುವ ತಿಳಿವಳಿಕೆ ತಪ್ಪು. ಯಾವುದೇ ಬಾಶೆಯಾಗಲಿ, ಅದರಲ್ಲಿ ಮಾತಾಡುವುದನ್ನು ಕಲಿಯಬೇಕೆಂದರೆ, ಅದನ್ನು ಎಡೆಬಿಡದಂತೆ ಮತ್ತೆಮತ್ತೆ ಮಾತಾಡಿಯೇ ಕಲಿಯಬೇಕು. ಬರೀ ಪುಸ್ತಕವನ್ನು ಓದುವುದರಿಂದಾಗಲೀ, ಸೊಲ್ಲರಿಮೆಯನ್ನು ತಿಳಿದುಕೊಳ್ಳುವುದರಿಂದಾಗಲೀ, ಮಾತಾಡುವುದು ಬರುವುದಿಲ್ಲ. ಹಾಗಾಗಿ, ಮಕ್ಕಳಿಗೆ ಇಂಗ್ಲೀಶಿನಲ್ಲಿ ಮಾತಾಡುವುದನ್ನು ಪ್ರತ್ಯೇಕವಾಗಿಯೇ ಹೇಳಿಕೊಡಬೇಕು. ಸಣ್ಣ ಊರುಗಳಲ್ಲಂತೂ ಕನ್ನಡದ ವಾತಾವರಣವೇ ಎಲ್ಲೆಡೆ ಇರುವುದರಿಂದ, ಹೀಗೆ ಪ್ರತ್ಯೇಕವಾಗಿ ಇಂಗ್ಲೀಶ್ ವಾತಾವರಣವನ್ನು ತಾತ್ಕಾಲಿಕವಾಗಿ ಶಾಲೆಗಳಲ್ಲಿ ಕಲ್ಪಿಸಿ ಮಕ್ಕಳಿಗೆ ಇಂಗ್ಲೀಶಿನಲ್ಲಿ ಮಾತಾಡುವುದನ್ನು ಹೇಳಿಕೊಡುವುದು ನಿಜಕ್ಕೂ ಅತ್ಯಗತ್ಯವಾಗುತ್ತದೆ.

ಇಂಗ್ಲೀಶ್ ಮಾತನ್ನು ಕಲಿಸುವ ಪರಿ
      ಮಕ್ಕಳಿಗೆ ಇಂಗ್ಲೀಶಿನಲ್ಲಿ ಮಾತಾಡುವುದನ್ನು ಕಲಿಸಬೇಕು ಹಾಗೂ ಅದನ್ನು ಸಾದ್ಯವಾದರೆ ಮೊದಲನೆ ತರಗತಿಯಿಂದಲೇ ತೊಡಗಿಸಬೇಕು. ಆದರೆ, ಕಲಿಸುವವರು ಯಾರು? ಸರ‍್ಕಾರೀ ಶಾಲೆಗಳಲ್ಲಿ ಈ ಕೆಲಸ ಮುಕ್ಯವಾಗಿ ಆಗಬೇಕು. ಆದರೆ, ಸರ‍್ಕಾರೀ ಶಾಲೆಗಳ ಶಿಕ್ಶಕರಿಂದ ಇದು ಆಗುವಂತಹುದೆ? ಈ ಕೇಳ್ವಿಗೆ ಉತ್ತರ ಆಗಲೇ ಇದೆ. ನಮ್ಮ ರಾಜ್ಯದಲ್ಲಿ ಕೆಲ ಸಮಾಜ ಸೇವೆಯ ಸಂಸ್ತೆಗಳು ಕನ್ನಡ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಇಂಗ್ಲೀಶಿನಲ್ಲಿ ಮಾತಾಡುವುದನ್ನು ಆಗಲೇ ಕೆಲ ವರ‍್ಶಗಳಿಂದ ಕಲಿಸುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಅವು ಯಶಸ್ವಿಯೂ ಆಗಿವೆ. ಯಾವ ಪುಸ್ತಕವನ್ನೂ ಓದದೆ, ವ್ಯಾಕರಣವನ್ನು ಕಲಿಯದೆ, ಹೇಗೆ ಮಕ್ಕಳು ಮನೆಯಲ್ಲಿನ ವಾತಾವರಣದಿಂದಲೇ ತಾಯ್‍ನುಡಿಯಲ್ಲಿ ಮಾತಾಡುವುದನ್ನು ಕಲಿತುಕೊಳ್ಳುತ್ತಾರೋ, ಅದೇ ಮಾದರಿಯಲ್ಲಿ ಈ ಸಂಸ್ತೆಗಳು ಮಕ್ಕಳಿಗೆ ಇಂಗ್ಲೀಶ್ ಮಾತಾಡುವುದನ್ನು ಕಲಿಸುತ್ತವೆ. ಹೀಗೆ ಕಲಿಸಲು ಬೇಕಾಗುವ ಕವ್‍ಶಲವನ್ನು ಶಿಕ್ಶಕರಿಗೆ ಅಲ್ಪಾವದಿಯಲ್ಲೇ ಪರಿಣಾಮಕಾರಿಯಾಗಿ ಹೇಳಿಕೊಡುತ್ತವೆ. ಆದರೆ, ಈ ಸಂಸ್ತೆಗಳು ನಡೆಯುತ್ತಿರುವುದು ಕೆಲ ದಾನಿಗಳು ನೀಡುತ್ತಿರುವ ಹಣದ ನೆರವಿನಿಂದ. ಹಾಗಾಗಿ, ಇವಕ್ಕೆ ವ್ಯಾಪಕವಾಗಿ ಯೋಜನೆಯನ್ನು ಹಮ್ಮಿಕೊಳ್ಳಲು ಆಗುತ್ತಿಲ್ಲ. ನಮ್ಮ ಸರ‍್ಕಾರ ಈ ಸಂಸ್ತೆಗಳ ಉಪಯೋಗವನ್ನು ಪಡೆದುಕೊಳ್ಳಬೇಕು. ಸರ‍್ಕಾರವೇ ಹಣ ನೀಡಿ ಈ ಸಂಸ್ತೆಗಳ ಸೇವೆಯನ್ನು ತನ್ನ ಎಲ್ಲಾ ಶಾಲೆಗಳಲ್ಲಿ ಹಾಗೂ ತಕ್ಕ ಕಾಸಗಿ ಕನ್ನಡ ಮಾದ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಒದಗಿಸಬೇಕು. ಈಗ ಸರ‍್ಕಾರ ಯೋಚಿಸಿರುವಂತೆ, ಮಕ್ಕಳಿಗೆ ಮೊದಲ ಕಲಿಕೆಯನ್ನು ಇಡಿಯಾಗಿ ಇಂಗ್ಲೀಶ್ ಮಾದ್ಯಮದಲ್ಲಿ ಕೊಡಿಸುವುದನ್ನು ಬಿಟ್ಟು, ಕನ್ನಡ ಮಾದ್ಯಮದಲ್ಲೇ ಕೊಟ್ಟು, ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಮಾತ್ರ ಕಡ್ಡಾಯವಾಗಿ ಕಲಿಸಿದರೆ ಸಾಕು. ಹೀಗೆ ಮಾಡಿದರೆ ಮಕ್ಕಳು ವಿಶಯಗಳನ್ನೂ ಸರಿಯಾಗಿ ಕಲಿತುಕೊಳ್ಳುತ್ತಾರೆ, ಇಂಗ್ಲೀಶಿನಲ್ಲಿ ಮಾತಾಡುವುದನ್ನೂ ಕಲಿತುಕೊಳ್ಳುತ್ತಾರೆ, ಜೊತೆಗೆ ಕನ್ನಡವೂ ಉಳಿಯುತ್ತದೆ. ಮಕ್ಕಳು ಇಂಗ್ಲೀಶಿನಲ್ಲಿ ’ಮಾತಾಡುವುದನ್ನು’ ಕಲಿಯುವುದೇ ತಾಯಿತಂದೆಯರಿಗೆ ಮುಕ್ಯವಾಗಿರುವುದರಿಂದ, ಕನ್ನಡ ಮಾದ್ಯಮದ ಶಾಲೆಗಳಲ್ಲೇ ಅದು ಸಾದ್ಯ ಎಂಬುದು ಮನವರಿಕೆಯಾದರೆ, ಕನ್ನಡ ಮಾದ್ಯಮದ ಶಾಲೆಗಳಿಗೇ ತಮ್ಮ ಮಕ್ಕಳನ್ನು ಕಳಿಸಲು ಅವರು ಹಿಂಜರಿಯಲಾರರು. ಇದರಿಂದ ತಾಯಿತಂದೆಯರಿಗೂ ಕರ್‌ಚಿನ ಹೊರೆ ಕಡಿಮೆಯಾಗುತ್ತದೆ, ಕನ್ನಡ ಮಾದ್ಯಮ ಶಾಲೆಗಳು ಮುಚ್ಚುವುದೂ ನಿಲ್ಲುತ್ತದೆ.

ಹಿಂದಿ ಕಳಿಸಿ
      ಇಂಗ್ಲೀಶ್ ಮಾತಾಡುವುದನ್ನು ಕಲಿಸುವ ಪಾಟಗಳನ್ನು ಪ್ರತ್ಯೇಕವಾಗಿ ಹೇಳಿಕೊಡಬೇಕೆಂದರೆ, ಅದಕ್ಕೆ ಸಮಯದ ಕೊರತೆಯಾಗುವುದಿಲ್ಲವೆ? ಮಕ್ಕಳ ಮೇಲೆ ಹೆಚ್ಚುವರಿ ಹೊರೆಯಾಗುವುದಿಲ್ಲವೆ? ಹೀಗೆಂದು ಪ್ರಶ್ನೆಗಳು ಏಳಬಹುದು. ಮಾತಾಡುವುದನ್ನು ಕ್ರಮೇಣವಾಗಿ ಕಲಿಸುವುದಕ್ಕೆ ಹೆಚ್ಚು ಸಮಯ ಬೇಡ. ದಿನಕ್ಕೆ ಒಂದು ಗಂಟೆಯಶ್ಟು ಸಾಕು. ಪಾಟ ಮನೋರಂಜನೆಯಂತಿರುತ್ತದೆ, ಟೆಸ್ಟುಗಳಿರುವುದಿಲ್ಲ.  ಹಾಗಾಗಿ ಅದು ಮಕ್ಕಳಿಗೆ ಹೊರೆಯೆನಿಸುವುದಿಲ್ಲ, ಹಿಡಿಸುತ್ತದೆ. ಮೊದಲ ಕೆಲ ವರ‍್ಶಗಳಲ್ಲಿ ಇಶ್ಟು ಪ್ರಮಾಣದ ಪಾಟ ಸಾಕಾಗುತ್ತದೆ. ಬಳಿಕದ ವರ‍್ಶಗಳಲ್ಲಿ ಮಾತಿನ ಜೊತೆಗೆ ಇಂಗ್ಲೀಶಿನ ಸೊಲ್ಲರಿಮೆ, ಸಾಹಿತ್ಯ ಮುಂತಾದ ಗಂಬೀರ ಪಾಟಗಳ ಅಗತ್ಯವೂ ಬೀಳುತ್ತದೆ. ಆಗ, ಮೂರನೇ ಬಾಶೆ ಎಂಬ ಹೆಸರಿನಲ್ಲಿ ನಮ್ಮ ಬಹುತೇಕ ಮಕ್ಕಳು ಹೊರಿಸಿಕೊಂಡಿರುವ ಹಿಂದೀ ಕಲಿಕೆಯನ್ನು ಕಯ್ಬಿಟ್ಟು, ಅದಕ್ಕೆ ವ್ಯರ‍್ತವಾಗುತ್ತಿರುವ ಸಮಯವನ್ನು ಇಂಗ್ಲೀಶಿನ ಕಲಿಕೆಗೆ ಬಳಸಿಕೊಳ್ಳಬಹುದು. ಹಾಗೆ ಮಾಡುವುದೇ ಸರಿ. ನೆಲದಗಲಕ್ಕೂ ಚಲಾವಣೆಯಲ್ಲಿರುವ ಇಂಗ್ಲೀಶೇ ಇರಬೇಕಾದರೆ, ಕೆಲಸಕ್ಕೆ ಬಾರದ ಹಿಂದೀ ಕಲಿಕೆ ಯಾಕೆ ಬೇಕು ನಮ್ಮ ಮಕ್ಕಳಿಗೆ? ಇಂಗ್ಲೀಶಿನ ಮುಂದೆ ಹಿಂದಿ ಯಾವ ಲೆಕ್ಕ? ಮೂರನೇ ಬಾಶೆ ಎನ್ನುವ ಪರಿಕಲ್ಪನೆಯೇ ಒಂದು ಬೇಡದ ದೊಡ್ಡ ಹೊರೆ. ಮಕ್ಕಳು ಅವರ ನೆಲದ ನುಡಿ ಮತ್ತು ಇಂಗ್ಲೀಶನ್ನು ಕಲಿತರೆ ಸಾಕು. ಕಂಡ ಕಂಡ ಬಾಶೆಗಳನ್ನೆಲ್ಲಾ ಕಡ್ಡಾಯವಾಗಿ ಕಲಿಯುವ ಅಗತ್ಯವಿಲ್ಲ. ಅದೇ ಸಮಯವನ್ನು ಉಪಯೋಗಕ್ಕೆ ಬರುವ ವಿಶಯಗಳನ್ನು ಕಲಿತುಕೊಳ್ಳುವುದಕ್ಕೆ ವಿನಿಯೋಗಿಸಬಹುದು. ಆದ್ದರಿಂದ, ’ರಾಶ್ಟ್ರ ಬಾಶೆ’ ಎಂಬ ಸುಳ್ಳು ಪಟ್ಟ ಪಡೆದಿರುವ, ಹಿಂದೀಯೇತರರಿಗೆ ಒಳಿತಿನ ಬದಲು ಕೆಡುಕನ್ನು ಉಂಟುಮಾಡುವ, ಉಪಯೋಗಕ್ಕೆ ಬಾರದ ಹಿಂದೀ ಬಾಶೆಗೆ ಸಂಪೂರ‍್ಣ ವಿದಾಯ ಹೇಳುವುದೇ ಸರಿ.

ಸಲ್ಲದ ಅಂಜಿಕೆ ಬೇಡ
      ಮಕ್ಕಳು ಅಶ್ಟು ಸಣ್ಣ ವಯಸ್ಸಿನಲ್ಲೇ ಇಂಗ್ಲೀಶಿನಲ್ಲಿ ಮಾತಾಡುವುದನ್ನು ಕಲಿತರೆ ಮುಂದೆ ಅವರು ಕನ್ನಡ ಮಾತಾಡುತ್ತಾರೆಯೆ? ಹೀಗಾದರೆ ಕನ್ನಡದ ಗತಿಯೇನು? ಈ ತೆರನ ಪ್ರಶ್ನೆಗಳು ಕೇಳಿಬರುವುದು ಸಹಜ. ಉತ್ತರ ಇಶ್ಟೇ. ಸಣ್ಣ ಊರುಗಳಲ್ಲಿ ಹಾಗೂ ಕೆಳವರ‍್ಗದ ಕುಟುಂಬಗಳಲ್ಲಿ ಶಾಲೆಯಿಂದ ಹೊರಗೆ ಎಲ್ಲಾ ಕಡೆಯೂ ಕನ್ನಡದ ವಾತಾವರಣವೇ ಇರುತ್ತದೆ. ಹಾಗಾಗಿ, ಕನ್ನಡದ ಮಕ್ಕಳು ಕನ್ನಡ ಮಾತನಾಡುವುದು ಅನಿವಾರ‍್ಯ. ಪಟ್ಟಣದವರ ಮಕ್ಕಳು ಶಾಲೆಯಲ್ಲಿ, ಮನೆಯಲ್ಲಿ ಮತ್ತು ಅವರ ಸಮುದಾಯದಲ್ಲಿ ಒಟ್ಟಾರೆ ಇಂಗ್ಲೀಶಿನ ವಾತಾವರಣದಲ್ಲೇ ವ್ಯವಹರಿಸುತ್ತಾರೆ. ಆದ್ದರಿಂದ ಅವರು ಕನ್ನಡ ಮಾತಾಡುವುದು ಕಡಿಮೆಯಾಗಿದೆ. ಇಂಗ್ಲೀಶಿಗೆ ಇದೇ ಬಗೆಯ ಪರಿಣಾಮವನ್ನು ಸಣ್ಣ ಊರುಗಳಲ್ಲಿ ಬೀರಲು ಆಗುವುದಿಲ್ಲ. ಹಾಗಾಗಿ, ಹಳ್ಳಿಯ ಕನ್ನಡದ ಮಕ್ಕಳು ಇಂಗ್ಲೀಶ್ ಕಲಿತರೆ ಅದರಿಂದ ಕನ್ನಡಕ್ಕೇನೂ ಕುತ್ತು ಬರುವುದಿಲ್ಲ. ಅಶ್ಟಕ್ಕೂ, ಇಂಗ್ಲೀಶ್ ಕಲಿಯುವುದು ಇಂದಿನ ದಿನಗಳಲ್ಲಿ ಬೇಕೇ ಬೇಕು ಎಂದಾದಮೇಲೆ, ಕನ್ನಡದ ಗತಿಯೇನು ಎಂದು ಪ್ರಶ್ನೆ ಕೇಳುವುದೇ ಸರಿಯಲ್ಲ. ಕನ್ನಡ ಉಳಿಸಬೇಕು ಎನ್ನುವ ಉದ್ದೇಶದಿಂದ ಹಳ್ಳಿಯ ಮಕ್ಕಳಿಗೆ ಇಂಗ್ಲೀಶ್ ಕಲಿಕೆಯನ್ನು ನೀಡದಿರುವುದು ಒಂದು ಅಪರಾದವೇ ಆಗುತ್ತದೆ. ಅಶ್ಟಕ್ಕೂ, ಇಂಗ್ಲೀಶನ್ನು ಮರೆಮಾಜುವ ಹಕ್ಕಾಗಲೀ ಶಕ್ತಿಯಾಗಲೀ ಯಾರಿಗೂ ಇಲ್ಲ. ತಮ್ಮ ಮಕ್ಕಳಿಗೆ ಇಂಗ್ಲೀಶ್ ಮಾತಾಡುವುದನ್ನು ಕಲಿಸಿ, ಇನ್ನೊಬ್ಬರ ಮಕ್ಕಳಿಗೆ ಅದು ಬೇಡ ಎನ್ನುವ ಆಶಾಡಬೂತಿಗಳ ಮಾತನ್ನು ಈ ಕಾಲದಲ್ಲಿ ಕೇಳುವವರು ಯಾರು?

ಅರುಹುನಡೆ
      ಸಣ್ಣ ಊರುಗಳ ಮಕ್ಕಳು ಇಂಗ್ಲೀಶ್ ಮಾತಾಡುವುದನ್ನು ಕಲಿಯುವ ನಿಟ್ಟಿನಲ್ಲಿ, ಯಾವ ಯಾವ ಬಗೆಯ ಸವ್‍ಲಬ್ಯಗಳಿವೆ, ಸರ‍್ಕಾರ ಆ ಸವ್‍ಲಬ್ಯಗಳನ್ನು ಒದಗಿಸುವಂತೆ ಒತ್ತಾಯಿಸುವುದು ಹೇಗೆ, ಹಿಂದೀಯಂತಹ ಬಾಶೆಗಳನ್ನು ಕಲಿಯುವುದು ಏಕೆ ವ್ಯರ‍್ತ, ಮುಂತಾದ ವಿಶಯಗಳ ಬಗ್ಗೆ ತಾಯಿತಂದೆಯರಿಗೆ, ಶಿಕ್ಶಕರಿಗೆ ಮತ್ತು ಜನಪ್ರತಿನಿದಿಗಳಿಗೆ ಮನವರಿಕೆ ಮಾಡಿಕೊಡುವ ಗುರಿಯಿಂದ ’ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ’ ಅರುಹುನಡೆಯೊಂದನ್ನು ಹಮ್ಮಿಕೊಂಡಿದೆ. ಊರೂರುಗಳಿಗೆ ಹೋಗಿ ಈ ವಿಶಯದ ಬಗ್ಗೆ ಕಾರ‍್ಯಕ್ರಮಗಳನ್ನು ನಡೆಸುವುದೂ, ಈ ಅರಿವನ್ನು ಹರಡಲು ದುಡಿವವರ ದಂಡನ್ನು ಕಟ್ಟುವುದೂ, ಈ ಅರುಹುನಡೆಯ ಈಡು. ಈ ದುಡಿಮೆಯಲ್ಲಿ ಪಾಲ್ಗೊಳ್ಳಲು ಬಯಸುವವರು kannadigarudravidare@gmail.com ಮಿಂಚೆಯ ಮೂಲಕ ಬಳಗವನ್ನು ಸಂಪರ್‌ಕಿಸಬಹುದು.

ಕಾಮೆಂಟ್‌ಗಳಿಲ್ಲ: