ಭಾನುವಾರ, ಆಗಸ್ಟ್ 17, 2014

ನಾವ್ ಮಾಡ್ತಿರೋದೂ ಅದನ್ನೇ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡ ಒಂದನ್ನೇ ಮಾತಾಡುವ ಒಂದು ಕಿರುಹಳ್ಳಿ ಇದೆ ಎಂದುಕೊಳ್ಳಿ. ಆ ಹಳ್ಳಿಯವರಲ್ಲಿ ಅರೆವಾಸಿ ಮಂದಿ ಅದು ಹೇಗೋ ಏನೋ ಕಾಲಕ್ರಮೇಣ ಕನ್ನಡವನ್ನು ತೊರೆದು ಮರಾಟಿಯನ್ನು ಆಡಲು ತೊಡಗಿದರೆಂದುಕೊಳ್ಳಿ. ಆ ಬಳಿಕ ಅವರು, ಕನ್ನಡ ಆಡುವುದನ್ನು ಮುಂದುವರೆಸಿಕೊಂಡು ಬಂದ ಉಳಿದ ಅರ್‌ದದವರ ಮೇಲೆ ತಿರುಗಿಬಿದ್ದು, "ಏ ಕನ್ನಡದವರಾ, ನಾವೀಗ ಕನ್ನಡಿಗರಲ್ಲ, ಮರಾಟಿಗರು. ನಾವೇ ಬೇರೆ, ನೀವೇ ಬೇರೆ!" ಎಂದು ಬೊಬ್ಬೆ ಹಾಕಿ ಹಳ್ಳಿಯನ್ನು ಎರಡು ಪಾಲು ಮಾಡಿದರೆಂದುಕೊಳ್ಳಿ. ಅಶ್ಟಕ್ಕೂ ಸುಮ್ಮನಿರದೆ, "ಪಾಲು ಸರಿಯಾಗಿ ಆಗಿಲ್ಲ. ಇನ್ನೂ ಕೆಲವು ಓಣಿಗಳು ನಮಗೇ ಸೇರಬೇಕು" ಎಂದು ಚಂಡಿ ಹಿಡಿದು, ಆ ಓಣಿಗಳಲ್ಲಿ ಬಂಡರಂತೆ ಬಂದು ಮರಾಟಿ ಬಾವುಟ ನೆಟ್ಟರೆಂದುಕೊಳ್ಳಿ. ಹೀಗೇನಾದರು ನಡೆದರೆ ಏನೆನಿಸುತ್ತೆ ನಿಮಗೆ? ಅಲ್ಲ, ಇದೆಂತಹ ವಿಪರ್‌ಯಾಸ ಅಂತ!? ಇದೆಂತಹ ವಿಪರ್‌ಯಾಸವೆಂದರೆ, ಒಂದೇ ಒಕ್ಕಲಿನ ಕೆಲವರು ತಮ್ಮ ಮಾತನ್ನು ಬಿಟ್ಟು ಹೆರವರ ಮಾತನ್ನು ಅಪ್ಪಿಕೊಂಡು, ತಮ್ಮವರ ಮೇಲೇ ತಿರುಗಿ ಬೀಳುವ ಅಯ್ಯೋ ಎನಿಸುವಂತಹ ವಿಪರ್‌ಯಾಸ! ಕನ್ನಡಿಗರ ಮತ್ತು ಮರಾಟಿಗರ ನಡುವೆ ವಾಸ್ತವಾಗಿ ನಡೆದು ಬಂದಿರುವುದು ಇಂತಹದೇ ಒಂದು ಕ್ರೂರ ವಿಪರ್‌ಯಾಸ.
      ಮೊನ್ನೆ ಮೊನ್ನೆ ಬೆಳಗಾವಿ ಜಿಲ್ಲೆಯ ಯಳ್ಳೂರ ಗ್ರಾಮದಲ್ಲಿದ್ದ ’ಯಳ್ಳೂರು ಮಹಾರಾಶ್ಟ್ರಕ್ಕೆ ಸೇರಿದ ಊರು’ ಎಂದು ಸೂಚಿಸುವ ಪಲಕಗಳನ್ನು ತೆರವುಗೊಳಿಸಿದಾಗ, ಅದರಿಂದಾಗಿ ಮರಾಟಿಗರಿಂದ ನಡೆದ ಪುಂಡಾಟಿಕೆಯ ಬಗ್ಗೆ ಕೇಳಿದಾಗ, ಮೇಲಿನ ಚಾರಿತ್ರಿಕ ವಾಸ್ತವವನ್ನು ನೆನೆದು ’ಇದೆಂತಹ ವಿದಿಯ ಅಣಕ!’ ಎನಿಸಿತು ನನಗೆ. ಏಕೆಂದರೆ, ಇಂದಿನ ಬಹುತೇಕ ಮರಾಟಿಗರ ಮುನ್ನರು ಒಮ್ಮೆ ಕನ್ನಡಿಗರೇ ಆಗಿದ್ದರು, ಇಂದಿನ ಮಹಾರಾಶ್ಟ್ರದ ಹೆಚ್ಚಿನ ಬಾಗದಲ್ಲಿ ಒಮ್ಮೆ ಕನ್ನಡವೇ ನೆಲದ ನುಡಿಯಾಗಿತ್ತು ಎನ್ನುವುದಕ್ಕೆ ಯಾರಿಗೂ ಅಲ್ಲಗಳೆಯಲಾರದಶ್ಟು ಸಂಸ್ಕ್ರುತಿ, ಶಾಸನ ಹಾಗೂ ಊರ ಹೆಸರುಗಳ ಪುರಾವೆ ಇಡೀ ಮಹಾರಾಶ್ಟ್ರದಲ್ಲೆಲ್ಲಾ ಕಂಡುಬರುತ್ತದೆ. ಇದರ ಬಗ್ಗೆ ಬಹು ವಿವರವಾಗಿ ಡಾ.ಚಿದಾನಂದ ಮೂರ್‌ತಿಯವರ ’ಬ್ರುಹತ್ ಬಾಶಿಕ ಕರ್‌ನಾಟಕ’ ಎಂಬ ಓದುಗೆಯಲ್ಲಿ ಬರೆಯಲಾಗಿದೆ (ಕನ್ನಡದೊಲವಿಗಳೆಲ್ಲರೂ ಓದಲೇಬೇಕಾದ ಹೊತ್ತಗೆ ಇದು). ಸುಮಾರು ಸಾವಿರ ಏಡುಗಳ ಮುನ್ನ ಮರಾಟಿ ಎಂಬುದೇ ಇರಲಿಲ್ಲ ಎನ್ನುವುದರ ಬಗ್ಗೆ ನಮ್ಮ ಕನ್ನಡದ ಕೆಲ ಅರಿಗರು ಆಗಾಗ್ಗೆ ಮರಾಟಿಗರಿಗೆ ನೆನಪಿಸುವುದು ಒಂದು ವಾಡಿಕೆಯೇ ಆಗಿದೆ. ’ಒಮ್ಮೆ ಕನ್ನಡವನ್ನೇ ಆಡುತ್ತಿದ್ದ ನೀವು, ಈಗ ಕನ್ನಡಕ್ಕೇ ಅವಹೇಳನ ಮಾಡುತ್ತಿದ್ದೀರಿ’ ಎಂದು ಅವರನ್ನು ಚೇಡಿಸುವುದು ಕೂಡಾ ನಡೆದೇ ಇದೆ. ಆದರೆ, ಇದರಿಂದ ಪ್ರಯೋಜನವೇನೂ ಆಗಿಲ್ಲ. ಮರಾಟಿಗರಿಗೆ ಇಂದು, ಅವರನ್ನು ನುಂಗಿ ನೀರು ಕುಡಿದ ಆರ್‌ಯಬಾಶೆ ಮರಾಟಿಯೇ ಚೆನ್ನೆನಿಸಿದೆ, ಒಮ್ಮೆ ತಮ್ಮದೇ ಆಗಿದ್ದ ಕನ್ನಡ ನುಡಿ ಕೀಳೆನಿಸಿದೆ!
      ಈ ಬಗೆಯ, ’ತಮ್ಮನ್ನು ಮೆಟ್ಟಿದ ನಡೆನುಡಿಯನ್ನು ಹೊಗಳುವ, ತಮ್ಮದೇ ಆಗಿದ್ದ ನಡೆನುಡಿಯನ್ನು ತೆಗಳುವ’ ಪರಿ ಮರಾಟಿಗರಿಗೆ ಮಾತ್ರ ಸೀಮಿತವಾದದ್ದಲ್ಲ. ಒಟ್ಟಾರೆ ಮನುಶ್ಯ ಸ್ವಬಾವವೇ ಹೀಗೆ! ಈ ಚಾಳಿ ಕನ್ನಡಿಗರಲ್ಲೂ ಇದೆ. ಏಕೆಂದರೆ, ’ತಮ್ಮತನ’ ಕಳೆದುಕೊಂಡ ಮರಾಟಿಗರು ಏನನ್ನು ಮಾಡುತ್ತಿದ್ದಾರೋ ಅದನ್ನೇ ನಾವೂ ಮಾಡುತ್ತಿದ್ದೇವೆ, ನಮ್ಮದೇ ರೀತಿಯಲ್ಲಿ!
      ಮರಾಟಿ ಬಂದು ಕನ್ನಡ ಹೋಗುವ ಕಾಲದಲ್ಲಿ ಜನಕ್ಕೆ ವಾಸ್ತವಿಕವಾದ ’ದ್ರಾವಿಡ’ ಎಂಬ ಪರಿಕಲ್ಪನೆಯೇ ಇರಲಿಲ್ಲ. ಈ ಪರಿಕಲ್ಪನೆ ಬಂದಿರುವುದು ಸುಮಾರು ಇನ್ನೂರು ವರ್‌ಶಗಳಿಂದ ಮಾತ್ರ. ಒಂದು ವೇಳೆ ಈ ಪರಿಕಲ್ಪನೆ ಆಗಲೇ ಇದ್ದಿದ್ದರೆ ಮರಾಟಿಗೆ ಕನ್ನಡವನ್ನು ಹಿಮ್ಮೆಟ್ಟಿಸುವುದು ಹಗುರವಾಗುತ್ತಿರಲಿಲ್ಲ. ಅದೇನೇ ಇರಲಿ. ದ್ರಾವಿಡ ಪರಿಕಲ್ಪನೆಯ ಅರಿವು ಈಗಂತೂ ಇದೆ. ಆದರೆ, ಅದರ ಸಮರ್‌ಪಕ ಬಳಕೆ ನಮ್ಮಲ್ಲಿ ಎಲ್ಲಿ ಆಗುತ್ತಿದೆ?
      ಕನ್ನಡಿಗರ ಮಯ್ ಲಕ್ಶಣಗಳನ್ನು ಗಮನಿಸಿದರೆ, ಅವರಲ್ಲಿ ದ್ರಾವಿಡ ಲಕ್ಶಣಗಳು ಹೆಚ್ಚಾಗಿ ಇರುವವರೇ ಬಹಳ. ಮೇಲಾಗಿ ನಮ್ಮ ಕನ್ನಡ ಒಂದು ದ್ರಾವಿಡ ನುಡಿ. ಹಾಗಾಗಿ ದ್ರಾವಿಡತನವೇ ನಮಗೆ ನಮ್ಮತನದ ಅಡಿಗಲ್ಲಾಗಬೇಕು. ಆದರೆ, ದ್ರಾವಿಡತನದ ಬದಲು ಆರ್‌ಯತನವನ್ನೇ ಅಡಿಗಲ್ಲಾಗಿ ಮಾಡಿಕೊಳ್ಳಲು ಹೊರಟಂತಿದೆ ನಮ್ಮ ನಡವಳಿಕೆ!
      ದ್ರಾವಿಡ ಲಕ್ಶಣಗಳು ಹೆಚ್ಚಾಗಿ ಇರುವ ಕನ್ನಡಿಗರಲ್ಲಿ ಬಹುಮಂದಿ ಕಲಿತವರಲ್ಲ. ಮೇಲಿನ ವರ್‌ಗಕ್ಕೆ ಸೇರಿದವರಲ್ಲ. ಹಾಗಾಗಿ ಅವರು ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ. ಕಲಿಕೆ ಇಲ್ಲದ ಅವರಿಗೆ ತಾವು ದ್ರಾವಿಡರು ಎಂಬುದೂ ತಿಳಿದಿಲ್ಲ. ದ್ರಾವಿಡ ಅರಿವು ಇರುವ ಕಲಿತವರೆನಿಸಿಕೊಂಡ ನಾವು ಅವರಲ್ಲಿ ದ್ರಾವಿಡ ಅರಿವನ್ನು ಮೂಡಿಸಬಹುದು. ಆದರೆ, ನಾವು ಹಾಗೆ ಮಾಡುತ್ತಿಲ್ಲ. ಹಾಗೆ ಮಾಡುವುದಿರಲಿ, ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದೇವೆ. ಆರ್‌ಯ ನಡೆನುಡಿಗಳನ್ನೇ ತಲೆಯಮೇಲಿಟ್ಟುಕೊಂಡು ಮೆರೆಸುತ್ತಿದ್ದೇವೆ. ಹೋಮ, ಹವನ, ಯಜ್ನ, ಯಾಗ ಮುಂತಾದ ಉತ್ತರದ ಕಂದಾಚಾರಗಳಿಗೆ ಪಕ್ಕಾಗಿದ್ದೇವೆ (ಅದೂ ಬಸವಣ್ಣನ ನಾಡಿನವರಾಗಿ!). ಕನ್ನಡದ ತುಂಬೆಲ್ಲ ಕನ್ನಡದ ಹೆಸರಿನಲ್ಲಿ ಸಂಸ್ಕ್ರುತವನ್ನು ತುರುಕಿಕೊಂಡಿದ್ದೇವೆ. ದ್ರಾವಿಡರಾದ ನಾವು ಆರ‍್ಯನುಡಿ ಸಂಸ್ಕ್ರುತಕ್ಕಾಗಿ ವಿಶ್ವವಿದ್ಯಾಲಯ ಕಟ್ಟಿಕೊಡುತ್ತಿದ್ದೇವೆ. ನಮ್ಮ ಹಿರಿಕಟ್ಟಡಗಳಿಗೆ, ಕೆರೆಕಟ್ಟೆಗಳಿಗೆ, ಕಾಡುಮೇಡುಗಳಿಗೆ, ಊರುಕೇರಿಗಳಿಗೆ ಮುಂತಾದುವಕ್ಕೆಲ್ಲ ಕನ್ನಡ ಎಂದುಕೊಂಡು ಸಂಸ್ಕ್ರುತದ ಹೆಸರುಗಳನ್ನು ಇಡುತ್ತಿದ್ದೇವೆ. ದೇಶಪ್ರೇಮದ ಹೆಸರಿನಲ್ಲಿ ರಾಶ್ಟ್ರಬಾಶೆ ಎಂದುಕೊಂಡು ಹಿಂದೀ ಕಲಿಯುತ್ತಿದ್ದೇವೆ. ನಮ್ಮ ನಾಡಿನಲ್ಲೇ ಹಿಂದಿಯಲ್ಲಿ ಮಾತಾಡಿ ಕನ್ನಡವನ್ನು ಬದಿಗೊತ್ತುತ್ತಿದ್ದೇವೆ. ಹಿಂದೀ ಬಾಶಣಗಳನ್ನು ದನ್ಯತಾಬಾವದಿಂದ(!) ಕೇಳುತ್ತಿದ್ದೇವೆ. ಇಂತಹ ಅಡಿಯಾಳ್ತನವನ್ನು ಮಯ್ಗೂಡಿಸಿಕೊಂಡಿರುವ ನಾವು, ’ಅಡಿಯಾಳ್ತನ ಬೇಡ!’ ಎಂದು ದ್ರಾವಿಡತನವನ್ನು ಕಾಯ್ದುಕೊಳ್ಳಲು ಹೆಣಗುತ್ತಿರುವ, ಜನಾಂಗೀಯವಾಗಿ ನಮ್ಮವರೇ ಆದ ತಮಿಳರ ನೀತಿಯನ್ನು ಮಾತ್ರ ತಪ್ಪದೆ ಜರೆಯುತ್ತೇವೆ! ನಮಗೂ ಮರಾಟಿಗರಿಗೂ ಎಲ್ಲಿದೆ ಮನೋಬಾವನೆಯಲ್ಲಿ ವ್ಯತ್ಯಾಸ? ಅವರು ಮಾಡುವುದನ್ನೇ ನಾವೂ ಮಾಡುತ್ತಿದ್ದೇವೆ.
      ಈಗಿನ ದಿನಗಳಲ್ಲಿ ಆರ್‌ಯವಾದಿಗಳಿಗೆ ರಾಜಕೀಯ ಬಲ ಬಂದಿರುವುದರಿಂದ, ದ್ರಾವಿಡರಾದ ಕನ್ನಡಿಗರ ನಡೆನುಡಿಗಳ ಮೇಲೆ ಇನ್ನು ಮುಂದೆ ಹೆಚ್ಚುಹೆಚ್ಚು ಒತ್ತಡ ಬೀಳುವುದರಲ್ಲಿ ಸಂದೇಹವಿಲ್ಲ. ಹಾಗಾಗಿ, ಕನ್ನಡಿಗರು ನಾವು ಆರ್‌ಯ ನಡೆನುಡಿಗಳಿಗೆ ಮಣೆ ಹಾಕದೆ, ನಮ್ಮವರೇ ಆದ ತಮಿಳರೊಂದಿಗೆ ಸೇರಿ, ನಮ್ಮ ನಡೆನುಡಿಗಳನ್ನು ಕಾಪಾಡಿಕೊಳ್ಳುವ ಒಗ್ಗಟ್ಟಿನ ಹಾದಿ ಹಿಡಿಯಬೇಕು (ತೆಲುಗರೂ ಮಲೆಯಾಳದವರೂ ಹೀಗೇ ಮಾಡಬೇಕು). ಹೀಗೆ ಮಾಡದಿದ್ದರೆ, ಮರಾಟಿಗರ ನಡವಳಿಕೆ ಎಶ್ಟು ವಿಶಾದನೀಯ ನಗೆಪಾಟಲು ಎನಿಸುತ್ತದೆಯೋ ಅಶ್ಟೇ ವಿಶಾದನೀಯ ನಗೆಪಾಟಲಾಗುತ್ತದೆ ನಮ್ಮ ನಡವಳಿಕೆ ಕೂಡ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್