ಶುಕ್ರವಾರ, ಮೇ 16, 2014

ಕಡ್ಡಾಯ ಕನ್ನಡ ಮಾದ್ಯಮ ಸರಿಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ತಮ್ಮ ಮಕ್ಕಳು ಯಾವ ಮಾದ್ಯಮದಲ್ಲಿ ಕಲಿಯುತ್ತಾರೆ ಎಂಬುದು ತಾಯ್ತಂದೆಯರ ನಿರ‍್ದಾರವಲ್ಲದೆ ಮತ್ತಿನ್ನಾರದ್ದು?
      ಹೀಗೆ ಏಕೆ ಕೇಳುತ್ತಿದ್ದೇನೆ ಎಂದರೆ, ಇತ್ತೀಚೆಗೆ ಸುಪ್ರೀಮ್ ಕೋರ‍್ಟ್, ’ಕಲಿಕೆಯ ಒಯ್ಯುಗೆ ಯಾವುದೆಂಬುದು ತಾಯ್ತಂದೆಯರ ನಿರ‍್ದಾರವಲ್ಲದೆ ಸರ‍್ಕಾರದ್ದಲ್ಲ’ ಎಂದು ಕಡ್ಡಿ ಮುರಿದಂತೆ ತೀರ‍್ಪು ಕೊಟ್ಟಿದೆ, ಹಲವರು ’ಈ ತೀರ‍್ಪು ಸರಿ ಅಲ್ಲ’ ಎಂದು ಎದಿರೊಡ್ಡಿಕೆಯ ಬೊಬ್ಬೆಗಳನ್ನು ಹಾಕುತ್ತಿದ್ದಾರೆ, ಅದಕ್ಕೆ.
      ಕನ್ನಡವನ್ನು ಉಳಿಸುವ ಉದ್ದೇಶವನ್ನು ಒಳಗಿಟ್ಟುಕೊಂಡು, ಅದನ್ನು ಆಗಮಾಡಿಸುವುದಕ್ಕಾಗಿ, ಹೊರಗೆ, ’ತಾಯ್ನುಡಿಯಲ್ಲೇ ಮಕ್ಕಳ ಮೊದಲ ಕಲಿಕೆ ನಡೆಯಬೇಕು. ಇದು ಶಿಕ್ಶಣ ತಜ್ನರ ಒಮ್ಮತ ’ ಎಂಬ ಜಾಣವಾದವನ್ನು ಮುಂದಿಡುತ್ತಾ ಬಂದಿದ್ದ ಕರ‍್ನಾಟಕ ಸರ‍್ಕಾರದ ಹೂಟವನ್ನು ಸುಪ್ರೀಮ್ ಕೋರ‍್ಟ್ ಗಟ್ಟಿ ತೀರ‍್ಪಿನಿಂದ ಹೊಡೆದು ಹಾಕಿದೆ. ಸುಪ್ರೀಮ್ ಕೋರ‍್ಟಿನ ಈ ತೀರ‍್ಮಾನ ಸರಿಯೆ? ಇದು ಪ್ರಶ್ನೆ.
      ನನ್ನ ಅಬಿಪ್ರಾಯದಲ್ಲಿ, ಸರಿ. ಕಲಿಕೆಯ ಒಯ್ಯುಗೆ ಒಂದೇ ಅಲ್ಲ, ಮಕ್ಕಳು ಯಾವ ಹೆಸರನ್ನು ಹೊತ್ತು ಬದುಕುತ್ತಾರೆ, ಯಾವ ಮಾತನ್ನು ಆಡುತ್ತಾರೆ, ಯಾವ ಬಗೆಯ ನಡವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ, ಯಾವ ಮಕ್ಕಳೊಂದಿಗೆ ಬೆರೆಯುತ್ತಾರೆ, ಯಾವ ದರ‍್ಮವನ್ನು ನೆಚ್ಚಿಕೊಳ್ಳುತ್ತಾರೆ ಎಂಬವನ್ನೆಲ್ಲಾ ಅವರ ತಾಯ್ತಂದೆಯರೇ ನಿರ‍್ದರಿಸುತ್ತಾರೆ. ಇದು ಸ್ರುಶ್ಟಿಯ ನಿಯಮ. ಇಂತಹ ವಿಶಯಗಳಲ್ಲಿ ಸರ‍್ಕಾರವಾಗಲೀ ಬೇರಾರೇ ಆಗಲಿ, ತಲೆಹಾಕುವುದನ್ನು ಬೂಮಿಯ ಮೇಲಿನ ಹೆಚ್ಚೆಣಿಕೆಯ ತಂದೆ ತಾಯಿಗಳು ಒಪ್ಪುವುದಿಲ್ಲ. ಮೂಡನಂಬಿಕೆಯಲ್ಲಿ ಸಿಲುಕಿದ ಕೆಲ ತಾಯ್ತಂದೆಯರು ಹರಕೆ ತೀರಿಸುವುದೇ ಮುಂತಾದ ಕಾರಣಗಳಿಗಾಗಿ ತಮ್ಮ ಮಕ್ಕಳ ತಲೆಯ ಮೇಲೆ ತೆಂಗಿನಕಾಯಿ ಒಡೆಸುವುದೂ, ಮಕ್ಕಳ ಬೆನ್ನಿಗೆ ಕೊಕ್ಕೆ ಚುಚ್ಚಿಸಿ ಗಾಳಿಯಲ್ಲಿ ’ಸಿಡಿ’ ಆಡಿಸುವುದೂ ಮುಂತಾದ, ಮಕ್ಕಳ ಒಳಿತಿಗೆ ನಿಜಕ್ಕೂ ಕೆಡುಕನ್ನು ಉಂಟುಮಾಡುವಂತಹ ಆಚರಣೆಗಳನ್ನು ನಡೆಸುತ್ತಾರೆ. ಇಂತಹ ವಿಶಯಗಳಲ್ಲಿ ಮಾತ್ರ ಅಡ್ಡಬರುವುದಕ್ಕೆ ಸರ‍್ಕಾರಕ್ಕೆ ಇಲ್ಲವೆ ಸಮಾಜಕ್ಕೆ ಅದಿಕಾರವಿದೆಯೇ ಹೊರತು, ಕಲಿಕೆಯ ಮಾದ್ಯಮದಂತಹ ವಿಶಯಗಳಲ್ಲಿ ಅಲ್ಲ.
      ’ನಮ್ಮ ನಾಡಿನಲ್ಲಿ ನಮ್ಮ ಅಸ್ಮಿತೆ ಉಳಿಯಬೇಕೆಂದರೆ ನಮ್ಮ ನುಡಿ ಉಳಿಯಬೇಕು. ನಮ್ಮ ನುಡಿ ಉಳಿಯಬೇಕೆಂದರೆ ಕನ್ನಡ ಮಾದ್ಯಮದಲ್ಲೇ ಕಲಿಕೆ ಆಗಬೇಕು’, ಎಂದು ನೇರವಾಗೇ ಅಸ್ಮಿತೆಯ ಚವುಕಟ್ಟಿನಲ್ಲಿ ವಾದ ಮಾಡಿದ್ದರೆ ನಮ್ಮ ಸರ‍್ಕಾರಕ್ಕೆ ಕೋರ‍್ಟಿನಲ್ಲಿ ಸೋಲುಂಟಾಗುತ್ತಿರಲಿಲ್ಲ ಎಂದು ಈಗ ಕೆಲವರು ಎತ್ತಿ ಆಡುತ್ತಿದ್ದಾರೆ. ಈ ವಾದವೂ ತಾಯ್ತಂದೆಯರ ಸಹಜ ಹಕ್ಕಿಗೆ ದಕ್ಕೆ ತರುತ್ತಿದ್ದರಿಂದ, ಇದನ್ನೂ ಕೂಡ ಕೋರ‍್ಟು ಸಂವಿದಾನದಲ್ಲಿ ಕೊಡಮಾಡಿರುವ ಹಕ್ಕುಗಳನ್ನು ಹೆಸರಿಸಿ ಸುಲಬವಾಗೇ ತಳ್ಳಿ ಹಾಕುತ್ತಿತ್ತು.
      ನಿಜಕ್ಕೂ, ಕನ್ನಡವನ್ನು ಕಲಿಕೆಯ ಮಾದ್ಯಮವಾಗಿ ಹೇರುವ ಅದಿಕಾರ ಸರ‍್ಕಾರಕ್ಕೆ ಬರಬೇಕೆಂದರೆ, ಅದಕ್ಕೆ ಇರುವ ದಾರಿ ಒಂದೇ - ಸಂವಿದಾನವನ್ನು ತಿದ್ದುವುದು. ಆದರೆ, ಇದು ಹಗುರಾಗಿ ಆಗುವಂತಹುದಲ್ಲ. ಸಂವಿದಾನದ ತಿದ್ದುಪಡಿಗೆ ಇಡೀ ದೇಶದ ಹೆಚ್ಚೆಣಿಕೆಯ ಶಾಸಕರ ಒಪ್ಪಿಗೆ ಬೇಕೇ ಬೇಕು. ಆದರೂ, ಹೆಚ್ಚು ಸಮಯ ತೆಗೆದುಕೊಂಡರೂ, ಈ ತಿದ್ದುಪಡಿಯನ್ನು ಆಗಿಸುವುದಕ್ಕೆ ಸರ‍್ಕಾರ ದುಡಿಯಬೇಕೇ ಹೊರತು, ’ಮರುಪರಿಶೀಲನೆ ಮಾಡಿಸುತ್ತೇವೆ’ ಎಂದು ಮತ್ತೆ ಹಳೇ ವಾದವನ್ನೇ ಕೋರ‍್ಟಿನ ಮುಂದಿಟ್ಟು ಹೊತ್ತುಹಾಳುಮಾಡುವುದಲ್ಲ.
      ಅಶ್ಟಕ್ಕೂ, ಕನ್ನಡವನ್ನು ಕಲಿಕೆಯ ಮಾದ್ಯಮವಾಗಿ ಕಡ್ಡಾಯ ಮಾಡುವುದು ಸರ‍್ಕಾರಕ್ಕೆ ಎಂದೂ ಸಾದ್ಯವಾಗದೇ ಇರಬಹುದು. ಇಂದು ಹಳ್ಳಿಹಳ್ಳಿಗಳಲ್ಲಿ, ಕೊಂಪೆಕೊಂಪೆಗಳಲ್ಲಿ, ಮಕ್ಕಳ ತಂದೆತಾಯಿಗಳಿಗೆ ಬೇಕಾಗಿರುವುದು ಒಂದೇ - ತಮ್ಮ ಮಕ್ಕಳು ಆಂಗ್ಲ ಮಾದ್ಯಮದಲ್ಲಿ ಓದಬೇಕು ಎನ್ನುವುದು. ಅದಕ್ಕಾಗಿ ಸಾಲ ಮಾಡಿಯಾದರೂ ಮಕ್ಕಳನ್ನು ಆಂಗ್ಲ ಮಾದ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ನನ್ನಿನೆಲೆ ಇಂತಿರುವಾಗ, ಯಾವ ಸರ‍್ಕಾರಕ್ಕೆ ತಾನೆ ಇಂಗ್ಲೀಶಿನ ಮೇಲೆಡೆಗೆ ಕನ್ನಡವನ್ನು ತಂದಿಡಲು ಸಾದ್ಯವಾಗುತ್ತದೆ? ದೇಶದ ಸಂವಿದಾನದ ತಿದ್ದುಪಡಿ ಹಾಗಿರಲಿ, ಹೇಗೋ ಏನೋ ಕರ‍್ನಾಟಕ ರಾಜ್ಯ ಒಂದು ಸ್ವತಂತ್ರ ದೇಶವೇ ಆಯ್ತು ಎಂದುಕೊಳ್ಳೋಣ. ಆಗಲಾದರೂ ಸರ‍್ಕಾರಕ್ಕೆ ಕನ್ನಡ ಮಾದ್ಯಮವನ್ನು ಕಡ್ಡಾಯ ಮಾಡುವುದು ಸಾದ್ಯವಾಗುತ್ತದೆಯೆ? ಹಾಗೇನೇದರೂ ಸರ‍್ಕಾರ ಮಾಡಲು ಮುಂದಾದರೆ, ಕನ್ನಡಿಗ ತಂದೆತಾಯಿಗಳೇ ಬೀದಿಗಿಳಿದು ಎದಿರೊಡ್ಡಿಯಾರು! ಇಂದು ಇಂಗ್ಲೀಶಿನ ಸೆಳೆತ ಆ ಮಟ್ಟಕ್ಕಿದೆ.
      ಕನ್ನಡವನ್ನು ಉಳಿಸಬೇಕೆಂದಿದ್ದರೆ, ಸರ‍್ಕಾರ ಕೂಡಲೆ ಮಾಡಬೇಕಾಗಿರುವುದು ಈ ಮುಂತಾದವು - ’ಗಣಿತ ಮುಂತಾದ ವಿಶಯಗಳಿಗೆ ಎಶ್ಟರ ಮಟ್ಟಿನ ಒತ್ತು ಇದೆಯೋ ಅಶ್ಟೇ ಒತ್ತು ಕೊಟ್ಟು ಕನ್ನಡ ನುಡಿಯನ್ನೊಂದು ಕಡ್ಡಾಯ ವಿಶಯವಾಗಿ ಮಾಡಿ ನಾಡಿನ ಎಲ್ಲಾ ಶಾಲೆಗಳಲ್ಲಿ ಅದನ್ನು ಕಲಿಸುವಂತೆ ಆದೇಶ ಹೊರಡಿಸುವುದು (ಕೇರಳದಲ್ಲಿ ಇಂತಹ ಕಟ್ಟಳೆ ಜಾರಿಯಲ್ಲಿದೆ). ನಾಡಿನ ಅಂಗಡಿಗಳು, ಕಾಸಗಿ ಕಚೇರಿಗಳು, ಆಸ್ಪತ್ರೆಗಳು ಮುಂತಾದ ಎಲ್ಲಾ ಸಾರ‍್ವಜನಿಕ ವ್ಯವಹಾರದ ಎಡೆಗಳಲ್ಲಿ ಕನ್ನಡ ಬಯಸುವವರಿಗೆ ಕನ್ನಡದಲ್ಲೇ ವ್ಯವಹರಿಸುವ ಸವುಲಬ್ಯವನ್ನು ಕಡ್ಡಾಯಗೊಳಿಸುವುದು. ಸರ‍್ಕಾರಿ ವ್ಯವಹಾರ ಇಡಿಯಾಗಿ ಕನ್ನಡದಲ್ಲೇ ನಡೆವಂತೆ ಮಾಡುವುದು. ತ್ರಿಬಾಶಾ ಸೂತ್ರದಿಂದ ಹೊರಗೆ ಬರುವುದು. ಹೆಚ್ಚೆಡೆಗಳಲ್ಲಿ ಕನ್ನಡಿಗರಿಗೇ ಉದ್ಯೋಗ ಮೀಸಲಾಗಿರಿಸುವುದು (ಸರೋಜಿನಿ ಮಹಿಶಿ ವರದಿಯ ಅನುಶ್ಟಾನ)’.
      ಮೇಲಿನಂತಹ ನಡೆಗಳಿಂದ ಕನ್ನಡದ ಕಲಿಕೆ ಮತ್ತು ಬಳಕೆಯನ್ನು ಹೆಚ್ಚಿಸಬಹುದು. ಆದರೆ, ಇಲ್ಲೂ ಒಂದು ಕೇಳ್ವಿಯನ್ನು ಕೇಳಬೇಕಾಗುತ್ತದೆ. ಕನ್ನಡವನ್ನು ಕಲಿತ ಮಾತ್ರಕ್ಕೆ ಕನ್ನಡಿಗರಲ್ಲದವರು ನಿಜವಾದ ಕನ್ನಡಿಗರಾಗಿಬಿಡುತ್ತಾರೆಯೆ? ಕನ್ನಡ ಬಂದೊಡನೆ ಹೊರಗಿನವರಿಗೆ ಹುಟ್ಟುಕನ್ನಡಿಗರಿಗಿರುವಶ್ಟು ಕನ್ನಡ ನೆಲದ ಹಾಗೂ ನುಡಿಯ ಒಲವು ಬಂದುಬಿಡುತ್ತದೆಯೆ? ಒಟ್ಟಾರೆ ನಮ್ಮ ಹಾಗೇ ಕಾಣುವ, ನಮ್ಮ ನುಡಿಯಂತಹ ನುಡಿಗಳನ್ನೇ ಆಡುವ, ದ್ರಾವಿಡ ಹಿನ್ನೆಲೆಯ ತೆಂಕಣ ಬಾರತದ ಮಂದಿಯಲ್ಲಿ ನಮ್ಮ ನೆಲದ ಮೇಲೆ ನಮಗಿರುವಶ್ಟೇ ಒಲವು ಮೂಡಬಹುದು. ಆದರೆ, ಇದೇ ಮಾತನ್ನು ’ತೆಂಕಣಿಗರು ಕೀಳು’ ಎಂಬ ನಂಬಿಕೆಯನ್ನು ರೂಡಿಸಿಕೊಂಡಿರುವ ಬೇರೆ ಪ್ರದೇಶಗಳ ಮಂದಿಯ ಬಗ್ಗೆ ಹೇಳಲು ಬರುತ್ತದೆಯೆ?
      ಎಶ್ಟೋ ಹೊರಗಿನ ಮಂದಿ ಇಂದು ಯಾವಯಾವುದೋ ಕಾರಣಕ್ಕಾಗಿ ಕನ್ನಡದಲ್ಲಿ ಮಾತಾಡುವುದನ್ನು ಕಲಿತಿದ್ದಾರೆ. ಆದರೆ, ಅವರಲ್ಲಿ ಬಹುಮಂದಿಗೆ ಕನ್ನಡದೊಂದಿಗೆ ಗುರುತಿಸಿಕೊಳ್ಳುವ ಒಲವು ಇಲ್ಲ. ಇದೊಂದು ಕಡುನನ್ನಿ. ಆದ್ದರಿಂದ, ಹೊರಗಿನಿಂದ ನಮ್ಮ ನಾಡೊಳಗೆ ಬಂದು ಸೇರುತ್ತಿರುವ ವಲಸಿಗರ ಪ್ರಮಾಣದ ಮೇಲೆ ನಮಗೆ ಹಿಡಿತ ಇಲ್ಲದಿದ್ದರೆ, ಅದರಿಂದಲೂ ನಮ್ಮ ಅಸ್ಮಿತೆಗೆ ಕುಂದು ಬರುತ್ತದೆ. ಈ ನಿಟ್ಟಿನಲ್ಲೂ ಸಂವಿದಾನದ ತಿದ್ದುಪಡಿ ಆಗಬೇಕು. ಇದರ ಅರ‍್ತ, ಈ ದೇಶದ ಎಲ್ಲ ರಾಜ್ಯಗಳಿಗೂ ಹೆಚ್ಚುಕಡಿಮೆ ಸ್ವತಂತ್ರ ದೇಶಗಳಿಗೆ ಇರುವಶ್ಟೇ ಅದಿಕಾರವಿರಬೇಕು (true federalism). ಈ ಬಗೆಯ ಸ್ವಾತಂತ್ರ್ಯ ರಾಜ್ಯಗಳಿಗೆ ದೊರಕುವುದು ನ್ಯಾಯವೇ. ಏಕೆಂದರೆ, ವಯ್ಚಾರಿಕವಾಗಿ ನೋಡಿದರೆ, ಬಾರತ ರಾಜ್ಯಗಳ ಒಕ್ಕೂಟವಲ್ಲ, ದೇಶಗಳ ಒಕ್ಕೂಟ.
      ದೇಶಮಟ್ಟದ ಸ್ವಾತಂತ್ರ್ಯ ಪಡೆದುಕೊಳ್ಳುವ ಗುರಿ ಮುಟ್ಟುವುದು ಅರಿದೇ. ಆದರೆ, ಅಸಾದ್ಯವಲ್ಲ. ನಮ್ಮ ಹಾಗೇ ವಲಸಿಗರ ಮುತ್ತಿಗೆಯಿಂದ ತತ್ತರಿಸುತ್ತಿರುವ ಅಸ್ಸಾಮಿನಂತಹ ಬೇರೆ ರಾಜ್ಯಗಳೊಡನೆ ಕೂಡಿ ನಾವು ಹೋರಾಡಿದರೆ ಕಂಡಿತವಾಗಿಯೂ ಗುರಿ ತಲುಪುಬಹುದು. ಈ ಬಗೆಯ ಹೆಜ್ಜೆಗಳನ್ನೇ ಇಂದು ಕನ್ನಡಿಗರಾದ ನಾವು ಹಾಕಬೇಕಾಗಿರುವುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್