ಮಂಗಳವಾರ, ನವೆಂಬರ್ 27, 2012

ಕನ್ನಡಿಗರು ಕೋತಿಗಳೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಕೆಲ ದಿನಗಳ ಹಿಂದೆ ಹಿರಿಯ ರಾಜಕಾರಿಣಿ ರಾಮ್ ಜೇಟ್‍ಮಲಾನಿ ಅವರು ’ರಾಮಾಯಣದ ಶ್ರೀರಾಮ ಒಬ್ಬ ಕೆಟ್ಟ ಗಂಡ’ ಎಂದು ನುಡಿದು ತಮ್ಮ ಪಕ್ಶ ಬೀಜೇಪಿಗೆ ಇನ್ನಿಲ್ಲದ ಮುಜುಗರ ಉಂಟುಮಾಡಿದರು! ಶ್ರೀರಾಮನನ್ನೇ ಬಂಡವಾಳ ಮಾಡಿಕೊಂಡಿರುವ ಬೀಜೇಪಿಗೆ ಇಂತಹ ಕಸಿವಿಸಿ ಆಗಬಾರದಿತ್ತು, ಪಾಪ!
      ಜೇಟ್‍ಮಲಾನಿಯವರ ಅನಿಸಿಕೆಗೆ ಸಹಜವಾಗೇ ದೇಶದ ತುಂಬೆಲ್ಲ ಕೂಡಲೆ ಪ್ರತಿಕ್ರಿಯೆಗಳು ಬಂದವು. ನಮ್ಮ ಟೀವಿ ಕಾಲುವೆಗಳಲ್ಲೂ ಈ ವಿಶಯದ ಮೇಲೆ ಕೆಲ ಬಿಸಿ ಚರ‍್ಚೆಗಳು ನಡೆದವು. ಕೇಸರಿಪರ ಕಟ್ಟಾಳುಗಳು, ’ರಾಮ ತ್ಯಾಗಮಯಿ, ಆದರ‍್ಶ ದೊರೆ, ಆದರ್‍ಶ ಪತಿ. ಜೇಟ್‍ಮಲಾನಿಯವರು ಎಲ್ಲೋ ಬಾಯ್ತಪ್ಪಿ ಏನೋ ಹೇಳಿದ್ದಾರೆ’ ಎಂದು ತಿಪ್ಪೆ ಸಾರಿಸಿಕೊಂಡರು. ’ಇವತ್ತೇನಾದ್ರು ರಾಮ ತುಂಬು ಬಸಿರಿ ಸೀತೇನ ಕಾಡಿಗೆ ಕಳಿಸಿದ್ದರೆ ಜಯ್ಲಿಗೆ ಹೋಗುತ್ತಿದ್ದ’ ಎನ್ನುವ ದಾಟಿಯಲ್ಲಿ ಎದುರುವಾದಿಗಳು ಕೇಸರಿಪರದವರಿಗೆ ವಿಕ್ರುತ ಹಿಗ್ಗಿನಿಂದ ಮತ್ತೆ ಮತ್ತೆ ತೀಡಿದರು.
      ’ರಾಮ ಒಳ್ಳೆ ಗಂಡನೋ ಕೆಟ್ಟ ಗಂಡನೋ, ಅದರ ತಂಟೆ ನಮಗೆ ಯಾಕೆ ಬಿಡಿ. ಅದೊಂದು ಉಪಯೋಗಕ್ಕೆ ಬಾರದ ವಾದವಿವಾದ’, ಎನ್ನುವುದು ಈ ವಿಶಯದಲ್ಲಿ ನನ್ನ ವಯ್ಯಕ್ತಿಕ ಅನಿಸಿಕೆ. ಹಾಗಾಗಿ, ಟೀವೀಯಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು ’ಇದೂ ಒಂದು ಮನರಂಜನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಹಗುರಾಗಿ ನೋಡುತ್ತಿದ್ದೆ. ಆಗ, ವಾದವಿವಾದದ ನಡುವೆ ಒಬ್ಬರು ಹೇಳಿದ ಮಾತೊಂದು ನನ್ನ ಗಮನ ಸೆಳೆಯಿತು. ರಾಮಾಯಣದಲ್ಲಿ ಕನ್ನಡಿಗರನ್ನು ’ವಾನರರು’ ಎಂದು ಕರೆದು ಅವಹೇಳನ ಮಾಡಲಾಗಿದೆಯಂತೆ - ಇದು ಅವರು ಹೇಳಿದ್ದು. ಇದನ್ನು ಕೇಳಿದ ಕೂಡಲೆ ನನ್ನ ನೆನಪಿನ ಅಂಗಳದಲ್ಲಿ ಕೊಂಚ ಸಂಚಲನ ಉಂಟಾಯಿತು. ಈ ಅಬಿಪ್ರಾಯವನ್ನು ಬಹು ಹಿಂದಿನಿಂದಲೂ ನಾನು ಆಗಾಗ್ಗೆ ಕೆಲವರ ಬಾಯಲ್ಲಿ ಕೇಳಿದ್ದೆ. ಕೇಳಿದಾಗಲೆಲ್ಲ ಅದರ ಬಗ್ಗೆ ನನಗೆ ಏನನ್ನಿಸಿತ್ತು ಎಂಬುದನ್ನು ಕೊಂಚ ಮೆಲುಕು ಹಾಕಿದೆ.
      ರಾಮನಿಗೆ ಅವನ ಬೆಂಬಲಕ್ಕೆ ನಿಂತ ’ವಾನರರು’ ಸಿಕ್ಕಿದ್ದು ದಕ್ಶಿಣದಲ್ಲೇ. ಅದರ ಮೇಲೆ, ’... ಆ ಜಲದಿಯನೆ ಜಿಗಿದ ಹನುಮ ಪುಟ್ಟಿದ ನಾಡು... ’ ಎಂದು ಬೇರೆ ನಾವು ಹೆಮ್ಮೆಯಿಂದ ನಮ್ಮ ನಾಡಿನ ಬಗ್ಗೆ ಹೇಳಿಕೊಳ್ಳುತ್ತೇವೆ. ಆದ್ದರಿಂದ, ರಾಮಾಯಣದ ವಾನರರು ಕನ್ನಡ ನಾಡಿನವರು ಎನ್ನುವುದರಲ್ಲಿ ಅನುಮಾನವಿಲ್ಲ. ಆಗಿನ ಕಾಲದಲ್ಲಿ ನಮ್ಮ ನಾಡಿನಲ್ಲಿ ಬರೀ ವಾನರರು ಮಾತ್ರ ಇದ್ದರೋ, ಇಲ್ಲ ಅವರ ಜೊತೆ ಬೇರೆ ಸಾಮಾನ್ಯ ಮನುಶ್ಯರೂ ಇದ್ದರೋ, ಇದ್ದರೂ ಆವರ ಬಗ್ಗೆ ರಾಮಾಯಣದಲ್ಲಿ ಏನಾದರೂ ಪ್ರಸ್ತಾಪವಾಗಿದೆಯೋ ಎಂಬುದು ತಿಳಿದಿಲ್ಲ. ಇದರ ಬಗ್ಗೆ ನಮಗೆ ತಿಳಿದವರೇ ಹೇಳಬೇಕು.
      ಅದೇನಾದರೂ ಇರಲಿ. ’ರಾಮಾಯಣದ ವಾನರರು ನಿಜವಾಗಿಯೂ ಕೋತಿಗಳಲ್ಲ. ಮನುಶ್ಯರೇ. ಅದರಲ್ಲೂ ಕನ್ನಡಿಗರು. ಬಹುತೇಕ ಕನ್ನಡಿಗರು ಕಪ್ಪು ಮಯ್ಬಣ್ಣದವರಾದದ್ದರಿಂದ, ಬಿಳಿ ಚಾಯೆಯ ಉತ್ತರದ ಆರ‍್ಯರು ಕರಿ ಚಾಯೆಯ ದಕ್ಶಿಣದ ದ್ರಾವಿಡರನ್ನು ತುಚ್ಚವಾಗಿ ಕಾಣುವ ಉದ್ದೇಶದಿಂದ ಅವರನ್ನು ವಾನರರಿಗೆ ಹೋಲಿಸಿದ್ದಾರೆ’ - ಇದು ಒಟ್ಟಾರೆ ದೂರು. ಈ ದೂರನ್ನು ದಕ್ಶಿಣದ ಕೆಲವರು ಆಗ್ಗಾಗ್ಗೆ ಮಾಡುತ್ತಾ ಬಂದಿದ್ದಾರೆ. ಈ ದೂರಿನಲ್ಲಿ ಏನಾದರು ಹುರುಳಿದೆಯೆ? ಇದು ನಾವು ಕೇಳಬೇಕಾದ ಕೇಳ್ಕೆ.
      ವಯ್ಯಕ್ತಿಕವಾಗಿ ನನಗನ್ನಿಸುವುದು, ’ಈ ದೂರಿನಲ್ಲಿ ಹುರುಳಿಲ್ಲ’ ಎಂದೇ. ಏಕೆಂದರೆ, ರಾಮಾಯಣದಲ್ಲಿ ಹನುಮಂತ ಎಂಟ್ರಿ ಕೊಟ್ಟ ಕ್ಶಣದಿಂದಲೇ ಅದರ ಚಹರೆಯೇ ಬದಲಾಗಿಬಿಡುತ್ತದೆ. ರಾವಣ ಅಳಿಯುವವರೆಗೆ ಹನುಮಂತನೇ ಕತಾನಾಯಕನಾಗುತ್ತಾನೆ. ವಾನರರದೇ ಪ್ರದಾನ ಪಾತ್ರವಾಗುತ್ತದೆ. ಹೀಗೆ, ಒಂದು ಕತೆಯಲ್ಲಿ ಒಂದು ಸಮುದಾಯವನ್ನು ಕೀಳೆಂದು ಗುರುತಿಸಿ, ಅದೇ ಕತೆಯಲ್ಲಿ ಅದೇ ಸಮುದಾಯವನ್ನು ಏಕಕಾಲಕ್ಕೆ ವಯ್ಬವೀಕರಿಸುವುದು ಅಸಮಂಜಸ ಎನಿಸುವುದಿಲ್ಲವೆ? ರಾಮಾಯಣದಲ್ಲಿ ಹೇರಳವಾಗಿ ಕಾಲ್ಪನಿಕ ಅಂಶಗಳು ಸೇರಿಕೊಂಡಿವೆ. ಅವುಗಳಲ್ಲಿ ’ವಾನರರ’ ಸಂಗತಿಯೂ ಒಂದು ಕಾಲ್ಪನಿಕ ಅಂಶ ಎನಿಸುತ್ತದೆ ನನಗೆ. ಅಶ್ಟಕ್ಕೂ ರಾಮಾಯಣಕ್ಕೆ ಒಂದೇ ಆವ್ರುತ್ತಿ ಇಲ್ಲ. ಹಲವಾರು ಬೇರೆಬೇರೆ ರಾಮಾಯಣದ ಆವ್ರುತ್ತಿಗಳಿವೆ. ರಾಮಾಯಣದ ಕೆಲವು ಬಗೆಗಳಲ್ಲಿ ವಾನರರ ಪ್ರಸ್ತಾಪವೇ ಇಲ್ಲ. ಉದಾಹರಣೆಗೆ, ಹಳಗನ್ನಡದ ಕವಿ ನಾಗಚಂದ್ರನ ರಾಮಾಯಣದಲ್ಲಿ ಹನುಮಂತ ಕೋತಿಯೂ ಅಲ್ಲ, ರಾವಣ ರಾಕ್ಶಸನೂ ಅಲ್ಲ. ಅಶ್ಟೇ ಏಕೆ, ಅದರಲ್ಲಿ ಅವರಿಬ್ಬರೂ ನಂಟರು ಬೇರೆ! ಹಾಗಾಗಿ, ಬರಿಯ ಕಲ್ಪನೆಯ ಒಂದು ಅಂಶಕ್ಕೆ ವಿಪರೀತ ಅರ‍್ತ ಕೊಟ್ಟು, ನಾವು ಕನ್ನಡಿಗರು ರಾಮಾಯಣದ ಬಗ್ಗೆ ಅಲರ‍್ಜಿ ಬರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ನನಗೆ ಅನ್ನಿಸುತ್ತದೆ.
      ಹಾಗೆ ನೋಡಿದರೆ, ಉತ್ತರದವರು ನಮ್ಮನ್ನು ರಾಮಾಯಣದಲ್ಲಿ ಕೀಳಾಗಿ ಕಂಡಿದ್ದಾರಾ ಎನ್ನುವುದಕ್ಕಿಂತ ಅವರು ಈಗಲೂ ಹಾಗೇ ಮಾಡುತ್ತಿದ್ದಾರಾ ಎನ್ನುವುದು ಮುಕ್ಯ. ಸತ್ಯವಾಗಿಯೂ ಹಾಗೇ ಮಾಡುತ್ತಿದ್ದಾರೆ! ಇದೇ ಮುಕ್ಯ. ಜೊತೆಗೆ, ಇದು ಎಲ್ಲರಿಗೂ ಗೊತ್ತಿರುವ ವಿಶಯ ಕೂಡ. ಬಡಗರು, ನಾವು ತೆಂಕಣರನ್ನು ’ಮದ್ರಾಸಿ’ ಎಂಬ ಒಂದೇ ಪದದಿಂದ, ನಾಯಿಕುನ್ನಿಯನ್ನು ಎತ್ತಿ ಪಕ್ಕಕ್ಕೆ ಹಾಕುವ ಹಾಗೆ ಹಾಕಿಬಿಡುತ್ತಾರೆ. ತೆಂಕಣರಲ್ಲಿ ಕನ್ನಡಿಗರು, ತಮಿಳರು, ತೆಲುಗರು ಮುಂತಾದ ಬೇರೆಬೇರೆ ಸಮುದಾಯಗಳಿವೆ ಎನ್ನುವುದು ಅವರಿಗೆ ಮುಕ್ಯವಲ್ಲ. ಅವರಿಗೆ ಅದು ಬೇಕಾಗೂ ಇಲ್ಲ. ಅವರು ಮದ್ರಾಸಿ ಎಂದು ಹೇಳುವಾಗ ಉಚ್ಚಾರಣೆಯ ದಾಟಿಯನ್ನು ಗಮನಿಸಬೇಕು. ದಕ್ಶಿಣದವರ ಬಗ್ಗೆ ಅವರಿಗೆ ಇರುವ ’ಆದರ’ ಅದರಲ್ಲಿ ಹಾಗೇ ತೊಟ್ಟಿಕ್ಕುತ್ತದೆ!
      ಉತ್ತರದ ಜನಸಾಮಾನ್ಯರು ಹಾಳಾಗಿ ಹೋಗಲಿ ಬಿಡಿ. ಕವಿವರ‍್ಯ ಟಾಗೋರರ ’ಜನಗಣಮನ’ ಗೀತೆಯಲ್ಲೂ ದಕ್ಶಿಣದವರಿಗೆ ತಕ್ಕ ಗೌರವ ಸಿಕ್ಕಿಲ್ಲ. ಪಂಜಾಬ ಸಿಂದ ಗುಜರಾತ ಮರಾಟ ’ದ್ರಾವಿಡ’ ಉತ್ಕಲ ವಂಗ! ತೆಂಕಣಿಗರಿಗೆಲ್ಲ ದ್ರಾವಿಡ ಎಂಬ ಒಂದೇ ಹೆಸರಿನ ಹಣೆಪಟ್ಟಿ! ಟಾಗೋರರಿಗೆ ದಕ್ಶಿಣದವರನ್ನು ಕಡೆಗಣಿಸುವ ಉದ್ದೇಶ ಇದ್ದಿರಲಿಕ್ಕಿಲ್ಲ. ಅನುಕೂಲಕ್ಕಾಗಿ ಎಲ್ಲರನ್ನೂ ದ್ರಾವಿಡ ಎಂದು ಒಟ್ಟುಸೇರಿಸಿ ಅವರು ಕರೆದಿರಬಹುದು. ಆದರೂ, ಸಂಸ್ಕ್ರುತಜನ್ಯ ಬಾಶೆಗಳನ್ನಾಡುವವರನ್ನೆಲ್ಲ ಬಿಡಿಬಿಡಿಯಾಗಿ ಗುರುತಿಸಿ, ದ್ರಾವಿಡ ನುಡಿಗಳನ್ನಾಡುವವರನ್ನು ಮಾತ್ರ ಒಟ್ಟಾರೆಯಾಗಿ ದ್ರಾವಿಡರು ಎಂದು ಕರೆದಿರುವುದು ಸರಿಯಲ್ಲ. ದೇಶದ ಕೆಲವು ಸಮುದಾಯಗಳನ್ನಂತೂ ಟಾಗೋರರು ಸಂಪೂರ‍್ಣವಾಗಿ ಕಯ್ಬಿಟ್ಟಿದ್ದಾರೆ. ಆ ಸಮುದಾಯಗಳಿಗೆ ಹೋಲಿಸಿದರೆ ನಮ್ಮ ಪಾಡು ಉತ್ತಮ ಎನ್ನಬಹುದು.
      ದಕ್ಶಿಣದಲ್ಲಿ ನಮ್ಮನ್ನು ನಾವು, ’ನಾವು ಕನ್ನಡಿಗರು, ನಾವು ತಮಿಳರು, ನಾವು ತೆಲುಗರು’, ಹೀಗೆ ಸಹಜವಾಗೇ ಬೇರೆಬೇರೆಯಾಗಿ ಗುರುತಿಸಿಕೊಳ್ಳುತ್ತೇವೆ. ಆದ್ದರಿಂದ, ಯಾರಾದರೂ ನಮ್ಮನ್ನು ಮದ್ರಾಸಿ ಎಂದೋ, ದ್ರಾವಿಡ ಎಂದೋ ಇಲ್ಲ ಸವ್‍ತಿ ಎಂದೋ ಒಂದೇ ಹೆಸರಿನಿಂದ ಕರೆದರೆ ನಮಗೆ ಬೇಸರವಾಗುವುದು ಸ್ವಾಬಾವಿಕ (ಅಂದ ಹಾಗೆ, ಈಗಿನ ತಲೆಮಾರಿನ ನಮ್ಮ ಹುಡುಗರು ’ನಾರ‍್ತಿ’ ಎಂದು ಉತ್ತರದವರನ್ನು ಅವರ ದಾಟಿಯಲ್ಲೇ ಕರೆಯುತ್ತಾರೆ. ಆದರೆ, ಅದು ಬೇರೆ ಮಾತು). ಹೀಗೆ ಸುಮ್ಮನೆ ಬೇಸರಪಟ್ಟುಕೊಳ್ಳುವ ಬದಲು, ಉತ್ತರದವರು ನಮ್ಮನ್ನು ಮದ್ರಾಸಿ ಎಂದು ಕೀಳಾಗಿ ಕರೆಯುವುದರ ಹಿನ್ನೆಲೆ ಏನು ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ, ಅದರ ಬಗ್ಗೆ ತಕ್ಕ ದೋರಣೆಯನ್ನು ನಾವು ಬೆಳೆಸಿಕೊಳ್ಳುವುದು ಒಳ್ಳೆಯದು.
      ಉತ್ತರದವರು ದಕ್ಶಿಣದವರನ್ನು ಕೀಳಾಗಿ ಕಾಣುವುದು ನಿನ್ನೆ ಮೊನ್ನೆಯ ಚಾಳಿಯಲ್ಲ. ತುಂಬಾ ಹಿಂದಿನಿಂದಲೂ ಅವರು ಹೀಗೇ ಮಾಡುತ್ತಾ ಬಂದಿದ್ದಾರೆ. ’ದಕ್ಶಿಣದವರು ದಡ್ಡರು’ ಎಂಬ ಉಕ್ತಿಯೇ ಇದೆ ಸಂಸ್ಕ್ರುತದಲ್ಲಿ. ಆದ್ದರಿಂದ, ಉತ್ತರದವರ ಮೇಲೆ ಸುಮ್ಮನೆ ಕೆರಳುವ ಬದಲು, ಅವರ ಮೇಲೆ ಉಂಟಾಗುವ ಮುನಿಸನ್ನು ನಾವು ಸರಿಯಾದ ನಿಟ್ಟಿನಲ್ಲಿ ಹರಿಸಬೇಕು. ನಮ್ಮ ಒಳಿತಿಗಾಗಿ ಆ ಸಿಟ್ಟನ್ನು ಬಳಸಿಕೊಳ್ಳಬೇಕು. ’ನಮ್ಮನ್ನೆಲ್ಲ ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದ ಕಡೆಗಣಿಸುತ್ತೀರಿ ತಾನೆ? ನಾವೂ ಅಶ್ಟೆ. ನಿಮ್ಮ ಜೊತೆ ವ್ಯವಹರಿಸಬೇಕಾಗಿ ಬಂದಾಗಲೆಲ್ಲ ನಾವು, ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದಲೇ ಒಗ್ಗಟ್ಟಿನಿಂದಲೇ ವ್ಯವಹರಿಸುತ್ತೇವೆ’ ಎನ್ನುವ ಚಲವನ್ನು ನಾವು ತೋರಿಸಬೇಕು. ’ರಾಶ್ಟ್ರಗೀತೆಯಲ್ಲಿ ನಮ್ಮನ್ನೆಲ್ಲ ದ್ರಾವಿಡರು ಎಂದು ಒಟ್ಟಾಗಿ ಕರೆದಿದ್ದೀರಿ ತಾನೆ? ರಾಶ್ಟ್ರಗೀತೆಯಲ್ಲಿರುವುದೇ ಸರಿ. ನಾವೆಲ್ಲ ದ್ರಾವಿಡರೆ. ನಿಮ್ಮ ಕಿರುಕುಳಗಳನ್ನು ಎದುರಿಸುವ ಸನ್ನಿವೇಶ ಬಂದಾಗಲೆಲ್ಲ ನಾವೆಲ್ಲ ಒಂದೇ’ ಎಂದು ದ್ರಾವಿಡೇತರರಿಗೆ ಮನದಟ್ಟಾಗುವ ಹಾಗೆ ನಾವು ನಡೆದುಕೊಳ್ಳಬೇಕು.
      ಹೀಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದರಲ್ಲಿ ಮಾರ‍್ಪಾಟನ್ನು ತಂದುಕೊಳ್ಳಬೇಕು. ಆದರೆ, ಇಂತಹ ಕಣ್ಣೋಲಿನ ಮಾರ‍್ಪಾಟು ಬೇಕಾಗಿರುವುದು ಬರೀ ಸೇಡು ತೀರಿಸಿಕೊಳ್ಳುವುದಕ್ಕೆಂದಲ್ಲ. ಇಂತಹ ಮಾರ‍್ಪಾಟು ನಿಜಕ್ಕೂ ಬೇಕಾಗಿರುವುದು ಉತ್ತರದಿಂದ ತಡೆಯಿಲ್ಲದೆ ನಮ್ಮೆಡೆಗೆ ಬರುವ ಕಿರುಕುಳಗಳನ್ನು ಸಮರ‍್ತವಾಗಿ ಎದುರಿಸುವುದಕ್ಕಾಗಿ. ಏಕೆಂದರೆ, ಉತ್ತರದಿಂದ ಬರುವ ಕಿರುಕುಳಗಳು ಕನ್ನಡಿಗರಿಗೆ ಮಾತ್ರ ಕಿರುಕುಳಗಳಾಗಿರುವುದಿಲ್ಲ. ಸಾಮಾನ್ಯವಾಗಿ ಅವು ದಕ್ಶಿಣದವರೆಲ್ಲರಿಗೂ ಕಿರುಕುಳಗಳಾಗಿರುತ್ತವೆ. ಆದ್ದರಿಂದ ಉತ್ತರದವರ ಕಿರುಕುಳಗಳನ್ನು ಎದುರಿಸುವಾಗ ’ಮದ್ರಾಸಿಗಳು’ ನಾವು ಒಗ್ಗಟ್ಟಿನಿಂದ ಕಯ್ ಕಯ್ ಸೇರಿಸಿ ನಿಲ್ಲಬೇಕು.  ಹಾಗೆ ನಿಂತರೇ ನಮಗೆ ಒಳಿತು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ನವೆಂಬರ್ 15, 2012

ಬೇರಾಗುವುದೇ ಸರಿದಾರಿಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಮೊನ್ನೆ ಕಾವೇರಿ ನೀರಿನ ಗಲಾಟೆಯ ಬಿಸಿ ಏರಿ ಇನ್ನೇನು ಬೆಂಕಿ ಬುಗಿಲೆಂದು ಹೊತ್ತಿಕೊಳ್ಳುತ್ತದೆ ಎಂಬ ಮಟ್ಟಕ್ಕೆ ತಲುಪಿದಾಗ ಹೋರಾಟದ ಮುಂಚೂಣಿಯಲ್ಲಿದ್ದ(?) ಕೆಲ ಮುಂದಾಳುಗಳು, ’ಪ್ರದಾನ ಮಂತ್ರಿಗಳೇ, ಕರ‍್ನಾಟಕಕ್ಕೆ ನ್ಯಾಯ ಒದಗಿಸಿ, ಇಲ್ಲ ಒಕ್ಕೂಟದಿಂದ ಹೊರಹೋಗಲು ಬಿಡಿ’ ಎಂದು ಗುಡುಗಿದರು.  ’ಒಕ್ಕೂಟದಿಂದ ಹೊರಹೋಗಲು ಬಿಡಿ’ ಎನ್ನುವುದು, ’ನಮಗೆ ನಿಮ್ಮ ದೇಶದಲ್ಲಿರುವುದು ಬೇಕಾಗಿಲ್ಲ. ನಾವೇ ಒಂದು ಪ್ರತ್ಯೇಕ ದೇಶವನ್ನು ಮಾಡಿಕೊಳ್ಳುತ್ತೇವೆ’ ಎಂದು ಮುಸುಡಿಗೆ ಹೊಡೆದಂತೆ ಹೇಳುವುದರ ಮೆಲ್ಮೆಯ ರೂಪ. ಇದೇನು ಮುಂದಾಳುಗಳ ಎದೆಯಲ್ಲಿ ನನ್ನಿಯಾಗಿ ಹೊಮ್ಮಿದ ಬಾವನೆಯೋ ಇಲ್ಲ ಕೆರಳಿದ್ದ ಕನ್ನಡಿಗರಿಂದ ಮೆಚ್ಚುಗೆ ಪಡೆಯುವ ಹುನ್ನಾರವೋ, ಆ ಮುಂದಾಳುಗಳಿಗೇ ಗೊತ್ತು. ಅದು ಹಾಗಿರಲಿ. ಏಕೆಂದರೆ ಇಲ್ಲಿ, ಮುಂದಾಳುಗಳ ಹಂಚಿಕೆ ಏನಿತ್ತು ಎನ್ನುವುದು ಅಶ್ಟು ಮುಕ್ಯವಲ್ಲ. ಒಂದುವೇಳೆ ನಮ್ಮ ದೇಶದ ರಾಜ್ಯಗಳು ’ನಾವೇ ಒಂದು ಪ್ರತ್ಯೇಕ ದೇಶವನ್ನು ಮಾಡಿಕೊಳ್ಳುತ್ತೇವೆ’ ಎಂದು ದಂಗೆ ಎದ್ದು ಹಾಗೇ ಮಾಡಿಬಿಟ್ಟರೆ, ಅದರಿಂದಾಗುವ ಪರಿಣಾಮಗಳೇನು ಎಂದು ಕೊಂಚ ಯೋಚಿಸುವುದು ಮುಕ್ಯ.
    ನಮ್ಮ ದೇಶ ಒಗ್ಗಟ್ಟಿಗೆ ಎಂದೂ ಹೆಸರಾಗಿರಲಿಲ್ಲ. ನಮಗೆ ’ರಾಶ್ಟ್ರ’ ಎಂಬ ಪರಿಕಲ್ಪನೆಯೇ ಇರಲಿಲ್ಲ. ನಮ್ಮ ನಮ್ಮಲ್ಲೆ ನಾವು ಎಶ್ಟು ಕಚ್ಚಾಡುತ್ತಿದ್ದೆವೆಂದರೆ, ಅದರಿಂದಾಗಿ ಹೊರಗಿನಿಂದ ಬಂದ ಚಿಲ್ಲರೆ ಪಲ್ಲರೆ ಜನರೆಲ್ಲಾ ನಮ್ಮನ್ನು ಸುಲಬವಾಗಿ ತುಳಿದು ಆಳಿದರು. ಹಾಗೆ ನೋಡಿದರೆ, ನಮ್ಮನ್ನು ಒಂದು ದೇಶ ಎಂದು ಮಾಡಿದ್ದೂ ಕೂಡ ಹೊರನಾಡಿಗರೇ. ಕಚ್ಚಾಡುವ ನಮ್ಮ ಹಳೆಯ ಚಾಳಿ ಈಗಲೂ ನಮ್ಮನ್ನು ಬಿಟ್ಟಿಲ್ಲ ಎಂಬುದೂ ಎಲ್ಲರಿಗೂ ಗೊತ್ತಿದೆ. ನನ್ನಿನೆಲೆ ಹೀಗಿರುವಾಗ, ರಾಜ್ಯಗಳೆಲ್ಲ ಸಿಡಿದು ಬೇರೆಬೇರೆ ದೇಶಗಳಾದರೆ ಜನರ ಗತಿ ಏನು?
    ಕಾವೇರಿಯಲ್ಲಿ ನೀರಿನ ಕೊರತೆ ಬೀಳುವುದು ಆಗಾಗ್ಗೆ ಆಗುತ್ತಲೇ ಇರುತ್ತದೆ. ಅದನ್ನು ತಡೆಯಲಿಕ್ಕಾಗುವುದಿಲ್ಲ. ಈಗಲಾದರೋ, ನೀರಿನ ಕೊರತೆ ಆದಾಗ, ಪ್ರತಿಬಟನೆಗಳು ಎದುರಿಗಳ ಅಣಕುಬೊಂಬೆಗಳನ್ನು ಸುಡುವುದರಲ್ಲೋ, ಹೆದ್ದಾರಿಗಳನ್ನು ತಡೆಯುವುದರಲ್ಲೋ, ಸಾರ್ವಜನಿಕರ ಸ್ವತ್ತುಗಳಿಗೆ ಕೊಂಚ ಜಕಮ್ ಮಾಡುವುದರಲ್ಲೋ - ಹೀಗೆ ಕಡಿಮೆ ಕೇಡಿನಲ್ಲೇ ಕೊನೆಗೊಳ್ಳುತ್ತವೆ. ಆದರೆ, ಕರ‍್ನಾಟಕ ಮತ್ತು ತಮಿಳುನಾಡುಗಳು ಬೇರೆಬೇರೆ ದೇಶಗಳೇ ಆಗಿಬಿಟ್ಟರೆ,  ಇಬ್ಬರ ನಡುವಿನ ತಕರಾರುಗಳು ಅಲ್ಪದರಲ್ಲೇ ತೀರುತ್ತವೆಯೆ? ಎರಡೂ ಕಡೆ ಮುಟ್ಟಾಳತನ ಎಶ್ಟು ದಂಡಿಯಾಗಿದೆ ಎಂದರೆ, ಒಂದೊಂದು ತಕರಾರಿಗೂ ಒಂದೊಂದು ಕಾಳಗವೇ ನಡೆಯಬಹುದು, ಬಾರತ ಮತ್ತು ಪಾಕಿಸ್ತಾನದ ನಡುವೆ ಇದುವರೆಗೆ ನಡೆದಿರುವ ಮೂರು ಯುದ್ದಗಳ ಹಾಗೆ. ಇದರಿಂದ ಜನರಿಗೆ ಲಾಬವಂತೂ ಆಗುವುದಿಲ್ಲ. ಜನರ ಸ್ತಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ, ಅಶ್ಟೆ. ಹಾಗಾಗಿ, ’ನಾವೇ ಬೇರೆ ದೇಶ ಮಾಡಿಕೊಳ್ಳುತ್ತೇವೆ’ ಎನ್ನುವುದು ಜಾಣ್ಮೆಯ ನಡೆಯಲ್ಲ. ಅದು ಅರಿವುಗೇಡಿನ ಕುರುಹು.
    ಜಾಣ್ಮೆಯ ನಡೆ ಯಾವುದೆಂದರೆ, ಒಕ್ಕೂಟದಲ್ಲಿ ಉಳಿದುಕೊಂಡೇ ನಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದು. ನಾವು ಮೊದಲು ಕೇಳಬೇಕಾದ ಕೇಳ್ವಿ ಇದು - ಪ್ರದಾನ ಮಂತ್ರಿಗಳು ತಮಿಳುನಾಡಿನ ಕಡೆಗೆ ಏಕೆ ವಾಲಿದರು?. ಈ ಕೇಳ್ವಿಗೆ ಮಾರು ಎಲ್ಲರಿಗೂ ಗೊತ್ತಿದೆ - ಪ್ರದಾನಿಗಳು ತಮಿಳುನಾಡಿನ ಕಡೆಗೆ ಏಕೆ ವಾಲಿದರು? ಏಕೆಂದರೆ, ಅವರ ಸಮ್ಮಿಶ್ರ ಸರ‍್ಕಾರದ ಉಳಿವಿಗೆ ತಮಿಳು ಪಕ್ಶದ ಬೆಂಬಲ ಬೇಕು, ಅದಕ್ಕೆ. ಕೆಲ ದಶಕಗಳಿಂದ ತಮಿಳರು ಇಂತಹ ಒಂದು ಒಳ್ಳೆಯ ಆಯಕಟ್ಟಿನ ಎಡೆಯಲ್ಲಿ ತಮ್ಮನ್ನು ತಾವು ಇರಿಸಿಕೊಂಡು ಬಂದಿದ್ದಾರೆ. ಇದೂ ಕೂಡ ಎಲ್ಲರಿಗೂ ಗೊತ್ತಿರುವುದೇ.
    ಕೆಂದ್ರದಲ್ಲಿ ಆಳಿಕೆ ಹೂಡುವುದಕ್ಕೆ ರಾಶ್ಟ್ರೀಯ ಪಕ್ಶಗಳಿಗೆ ಅವುಗಳದ್ದೇ ಬಹುಮತ ದೊರಕುತ್ತಿಲ್ಲ. ಹಾಗಾಗಿ, ಪ್ರಾದೇಶಿಕ ಪಕ್ಶಗಳ ನೆರವಿನಿಂದಲೇ ಅವು ಅದಿಕಾರಕ್ಕೆ ಬರಬೇಕು. ಇಂತಹ ನೆಲೆಯಲ್ಲಿ ಅದಿಕಾರದಲ್ಲಿರುವ ಪಕ್ಶಕ್ಕೆ ಬೆಂಬಲಿಗ ಪಕ್ಶಗಳು ಹೇಳಿದಂತೆ ಕುಣಿಯುವುದು ಅನಿವಾರ‍್ಯ ಆಗೇ ಆಗುತ್ತದೆ. ತಮಿಳರು ಸಾಮಾನ್ಯವಾಗಿ ಪ್ರಾದೇಶಿಕ ಪಕ್ಶಗಳನ್ನೇ ಗೆಲ್ಲಿಸಿ ಕಳಿಸುವುದರಿಂದ, ಅವರ ಹಂಗಿನಲ್ಲಿ ಆಡಳಿತ ಪಕ್ಶ ಇರಲೇಬೇಕಾಗುತ್ತದೆ.
    ಹಾಗಾದರೆ ನಾವೂ ಏಕೆ ತಮಿಳರಂತೆ ಆಯಕಟ್ಟಿನ ಎಡೆಯಲ್ಲಿ ನಮ್ಮನ್ನು ನಾವು ಇರಿಸಿಕೊಳ್ಳಬಾರದು? ನಾವೂ ಏಕೆ ಪ್ರಾದೇಶಿಕ ಪಕ್ಶಗಳನ್ನು ಕಟ್ಟಿ ಗೆಲ್ಲಿಸಬಾರದು? ಸರಿಯಾಗಿ ಬಗೆದು ನೋಡಿದರೆ, ಇದು ನಾವು ಹಿಡಿಯಬೇಕಾದ ದಾರಿ; ’ಬೇರೆ ಹೋಗುತ್ತೇವೆ’ ಎನ್ನುವುದಲ್ಲ.
    ಆದ್ದರಿಂದ, ನಮ್ಮದೇ ಆದ ಕೆಚ್ಚಿನ ನೆಚ್ಚಿನ ಪಕ್ಶಗಳನ್ನು ನಾವು ಕಟ್ಟಿಕೊಳ್ಳಬೇಕು. ಹಾಗೂ, ’ಕರುನಾಡವರು ಹುಟ್ಟಿನಲ್ಲಿ ಮತ್ತು ನಡೆನುಡಿಯಲ್ಲಿ ದ್ರಾವಿಡ ಹಿನ್ನೆಲೆಯವರು’ ಎಂಬ ನನ್ನಿ ಈ ಪಕ್ಶಗಳ ದೋರಣೆಯಲ್ಲಿ ಎದ್ದು ಕಾಣಬೇಕು. ನಮಗೆ, ’ಕೇಂದ್ರದಲ್ಲಿ ನಮ್ಮ ಮಾತು ನಡೆದರಶ್ಟೇ ಸಾಲದು, ದಕ್ಶಿಣದ ನಮ್ಮ ನೆರೆನಾಡುಗಳ  ನಣ್ಪು ಕೂಡ ದೊರೆಯಬೇಕು’ ಎಂಬ ಗುರಿ ಇರಬೇಕು. ಏಕೆಂದರೆ, ಉತ್ತರದ ಕಡೆಯಿಂದಲೂ ನಮಗೆ ಸಮಸ್ಯೆಗಳು ಬರುತ್ತವೆ. ವಾಸ್ತವವಾಗಿ,  ದೇಶದ ಜನಸಂಕ್ಯೆಯ ಮಾಹಿತಿಯನ್ನು ಗಮನಿಸಿದರೆ, ಕಾವೇರಿ ಸಮಸ್ಯೆಯನ್ನು ಮೀರಿಸುವ ಸಮಸ್ಯೆಗಳು ಬಡಗಿನಿಂದ  ಮುಂಬರುವ ನಾಳುಗಳಲ್ಲಿ ನಮ್ಮ ಕಡೆಗೆ ಬರುವಂತೆ ತೋರುತ್ತಿದೆ. ಹೀಗೆ ಬೇರೆಬೇರೆ ಕಾರಣಗಳಿಂದಾಗಿ ಇಂದು, ನಾವು ನಮ್ಮ ಪ್ರಾದೇಶಿಕತೆಯನ್ನು ಎತ್ತಿಹಿಡಿಯಬೇಕಾಗಿದೆ. ನಮ್ಮ ದ್ರಾವಿಡತನವನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಉಳಿವಿಗಾಗಿ ನಾವು ಹೊಣೆವೆತ್ತು ನಡೆದುಕೊಳ್ಳಬೇಕಾಗಿದೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಗುರುವಾರ, ನವೆಂಬರ್ 08, 2012

ಹಿಂದೀವಾಲರ ಪೊಗರು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಹನ್ನೆರಡು ವರ‍್ಶಗಳ ಹಿಂದಿನ ಮಾತು. ಅಮೆರಿಕದಲ್ಲಿ ಇದ್ದುದು ಸಾಕು ಎಂದು, ಮರಳಿ ಬಂದು ಮಯ್ಸೂರಿನಲ್ಲಿ ಬೀಡು ಬಿಟ್ಟೆ. ಆದರೆ, ಕಾರಣಾಂತರಗಳಿಂದ ಎರಡು ವರ‍್ಶಗಳೊಳಗೇ ಅಮೆರಿಕಕ್ಕೆ ತಿರುಗಿ ಹೋಗಬೇಕಾಯಿತು. ಹೋಗುವಾಗ ನನ್ನ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಮಾರಾಟಕ್ಕೆ ಹಚ್ಚಿದೆ. ಅವುಗಳನ್ನು ಹಿಂದೀವಾಲನೊಬ್ಬ ಕೊಂಡುಕೊಳ್ಳುವುದಕ್ಕೆಂದು ಬಂದ. ಸಾಮಾನುಗಳನ್ನು ಬಿಡಿಬಿಡಿಯಾಗಿ ಸೂಕ್ಶ್ಮವಾಗಿ ನೋಡುವುದಕ್ಕೇ ನನ್ನ ಮನೆಗೆ ಮೂರ‍್ನಾಲ್ಕು ಬಾರಿ ಬೇಟಿ ಕೊಟ್ಟ. ಪ್ರತಿ ಬೇಟಿಯಲ್ಲೂ ನನ್ನೊಂದಿಗೆ ಹಿಂದಿಯಲ್ಲೇ ಮಾತಾಡಲು ಪದೇ ಪದೇ ಪ್ರಯತ್ನ ಪಟ್ಟ. ಅವನಿಗೆ ಇಂಗ್ಲಿಶ್ ಚೆನ್ನಾಗೇ ಬರುತ್ತಿತ್ತು. ನನಗೆ ಹಿಂದಿ ಬರುವುದು ತುಂಬಾ ಕಡಿಮೆ. ಅಶ್ಟೇ ಅಲ್ಲದೆ, ಹಿಂದಿಯಲ್ಲಿ ಮಾತಾಡುವ ಇಶ್ಟವೂ ಇಲ್ಲ. ಹಾಗಾಗಿ ಅವನೊಂದಿಗೆ ಹಿಂದಿಯಲ್ಲಿ ಮಾತಾಡಲು ನಾನು ಹೋಗಲಿಲ್ಲ. ನನಗೆ ಹಿಂದಿ ಬರುವುದಿಲ್ಲ ಎಂದು ಮೊದಲೇ ಅವನಿಗೆ ಹೇಳಿಬಿಟ್ಟೆ. ಆದರೂ ಆತ ನನಗೆ ಹಿಂದಿಯಲ್ಲೇ ಮಾತನಾಡಿಸಲು ಅನೇಕ ಸಲ ಪ್ರಯತ್ನಿಸಿದ. ನಾನು ಸುಳ್ಳು ಹೇಳುತ್ತಿದ್ದೇನೆ, ಹಿಂದಿ ಬಾರದವನಂತೆ ನಟಿಸುತ್ತಿದ್ದೇನೆ ಎಂದು ಅವನಿಗೆ ಸಂದೇಹ. ’ನಿನಗೆ ಚೂರೂ ಹಿಂದಿ ಬರುವುದಿಲ್ಲವೆ?’ ಎಂದು ಹತ್ತು ಬಾರಿಯಾದರೂ ನನ್ನನ್ನು ಬಿಟ್ಟು ಬಿಟ್ಟು ಕೇಳಿದ. ಕಡೆಯ ದಿನ ಸಾಮಾನನ್ನು ಸಾಗಿಸಲು ಆಳುಗಳನ್ನು ಕರೆದುಕೊಂಡು ಬಂದ. ಆಳುಗಳೆಲ್ಲ ಕನ್ನಡಿಗರೇ ಆಗಿದ್ದರು. ಆದರೂ ಅವರಿಗೆ ಅವನು ಹಿಂದಿಯಲ್ಲಿ ಅಪ್ಪಣೆ ಕೊಡುತ್ತಿದ್ದ. ಅವರೂ ಅವನೊಡನೆ ಹರುಕುಮುರುಕು ಹಿಂದಿಯಲ್ಲೇ ಮಾತಾಡುತ್ತಿದ್ದರು. ಕಡೆಗೂ ಸಾಮಾನುಗಳನ್ನೆಲ್ಲ ಸಾಗಿಸಿಕೊಂಡು ಹೋದ. ಅವನ ನಡವಳಿಕೆ ನನ್ನನ್ನು ಕೊಂಚ ಯೋಚನೆಗೆ ಹಚ್ಚಿತು. ನಾನೋ, ಒಬ್ಬ ಹುಟ್ಟು ಕನ್ನಡಿಗ. ಕನ್ನಡ ಮಣ್ಣಲ್ಲೇ ಬೆಳೆದ ಕನ್ನಡ ಮಣ್ಣಿನ ಮಗ. ಹಾಗಾಗಿ, ’ಇವನು ಯಾರೋ ಎಲ್ಲಿಂದಲೋ ಬಂದು ನನ್ನ ಊರಿನಲ್ಲೇ ನನಗೆ ಹಿಂದಿಯಲ್ಲಿ ಮಾತಾಡಲು ಒತ್ತಾಯ ಮಾಡಿದನಲ್ಲ. ನಾನು ಹಿಂದಿ ಮಾತಾಡದಿದ್ದುದು ನನ್ನದೇ ತಪ್ಪು ಎನ್ನುವ ಹಾಗೆ ಆಡಿದನಲ್ಲ. ಎಶ್ಟಿದೆ ನೋಡು ಇವನ ಪೊಗರು!’ ಎಂದುಕೊಂಡೆ.
      ಈಗ, ಮತ್ತೆ ಮರಳಿಬಂದು, ಕಳೆದ ಎರಡು ವರ‍್ಶಗಳಿಂದ ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದೇನೆ. ಮೇಲಿನ ಗಟನೆಯನ್ನು ಮೇಲಿಂದ ಮೇಲೆ ನೆನಪಿಸಿಕೊಳ್ಳುತ್ತಿದ್ದೇನೆ. ಏಕೆಂದರೆ, ಹಾಗಾಗಿದೆ ಇಲ್ಲಿನ ಸ್ತಿತಿ. ಬೆಂಗಳೂರಿನಲ್ಲಿ ಎಲ್ಲಾ ಕಡೆಯೂ ಈಗ ಹಿಂದೀವಾಲರು ತುಂಬಿಹೋಗಿದ್ದಾರೆ. ಎಲ್ಲಾ ಕಡೆಯೂ ರಾಜಾರೋಶವಾಗಿ ಹಿಂದಿಯಲ್ಲೇ ಮಾತಾಡುತ್ತಾರೆ. ಹೋಟೆಲುಗಳಲ್ಲಿ, ಮಾಲುಗಳಲ್ಲಿ ಕೆಲಸಗಾರರನ್ನು ಹಿಂದಿಯಲ್ಲೇ ಕೂಗಿ ಕರೆಯುತ್ತಾರೆ. ಹಿಂದಿಯಲ್ಲೇ ಪ್ರಶ್ನೆ ಕೇಳುತ್ತಾರೆ. ಹಿಂದಿಯಲ್ಲೇ ವಾದ ಮಾಡುತ್ತಾರೆ. ಬೆಂಗಳೂರಿಗರು ಹಿಂದಿ ಕಲಿತಿರಬೇಕು, ಹಿಂದಿಯಲ್ಲಿ ಮಾತಾಡಬೇಕು, ಹಿಂದಿ ಗೊತ್ತಿಲ್ಲದಿದ್ದರೆ ಬೆಂಗಳೂರಿಗರದೇ ತಪ್ಪು ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ನಮ್ಮವರೂ ಅಶ್ಟೆ. ಅವರು ಹಾಕಿದ ತಾಳಕ್ಕೆ ಕುರಿಗಳಂತೆ ಕುಣಿಯುತ್ತಿದ್ದಾರೆ. ಏನೆನ್ನುವುದು ಇದಕ್ಕೆ? ಕನ್ನಡಿಗರ ತಲೆಯೂರಿನಲ್ಲೇ ಬಡಗರಿಂದ ಕನ್ನಡಿಗರ ಮೇಲೆ ಹಿಂದೀ ಹೇರಿಕೆ ನಡೆಯುತ್ತಿದೆ. ಆದರೆ ವೀರ ಕನ್ನಡಿಗರು ಮಾತ್ರ ಅದಕ್ಕೆ ಎಳ್ಳಶ್ಟೂ ಎದುರು ತೋರಿಸುತ್ತಿಲ್ಲ!
      ಯಾಕೆ ನಾವು ಹೀಗೆ? ನಮ್ಮ ನೆರೆಯ ತಮಿಳರು ಚೆನ್ನಯ್ನಲ್ಲಿ ಹೀಗಾಗಲಿಕ್ಕೆ ಬಿಟ್ಟಿದ್ದಾರೆಯೆ? ಅಲ್ಲೂ ದಂಡಿಯಾಗಿ ಹಿಂದೀಗಳು ಸೇರಿಕೊಂಡಿದ್ದಾರೆ. ಆದರೆ ತೆಪ್ಪಗೆ ತಮಿಳು ಕಲಿತು ತಮಿಳಿನಲ್ಲೇ ಮಾತಾಡುತ್ತಾರೆ. ಅಲ್ಲಿ ಹಿಂದಿಯಲ್ಲಿ ಮಾತಾಡಲಿಕ್ಕೆ ಆಸ್ಪದವೇ ಇಲ್ಲ. ಏಕೆಂದರೆ, ತಮಿಳರು ದ್ರಾವಿಡತನ ಮೆರೆದು ಹಿಂದಿಯನ್ನು ಕಲಿಯುವ ತಂಟೆಗೇ ಹೋಗಲಿಲ್ಲ. ಅವರು ಹಿಂದಿ ಕಲಿಯದೇ ಹೋದುದರಿಂದ ಅವರ ತಾಯ್ನುಡಿ ತಮಿಳಿಗಿದ್ದ ಮೊದಲೆಡೆ ಹಾಗೇ ಉಳಿಯಿತು. ಆದರೆ ನಾವು ಮಾಡಿದ್ದೇನು? ಅವರಂತೆ ನಾವು ಕೂಡ ದ್ರಾವಿಡ ನುಡಿಯನ್ನೇ ಆಡಿದರೂ ದ್ರಾವಿಡತನವನ್ನು ಮಾತ್ರ ಮಯ್ಗೂಡಿಸಿಕೊಳ್ಳಲಿಲ್ಲ. ದ್ರಾವಿಡತನವನ್ನು ಕಡೆಗಣಿಸಿ ’ತ್ರಿಬಾಶಾ’ ಸೂತ್ರಕ್ಕೆ ಒಪ್ಪಿ ಟೋಪಿ ಹಾಕಿಸಿಕೊಂಡೆವು. ಕುವೆಂಪು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದೆವು. ಹಿಂದಿ ಕಲಿತು ಎಡವೆಟ್ಟು ಮಾಡಿಕೊಂಡೆವು. ಎಡವೆಟ್ಟಿನ ಪಲವನ್ನು ಈಗ ಉಣ್ಣುತ್ತಿದ್ದೇವೆ. ನಮ್ಮ ಮಣ್ಣಿನಲ್ಲೇ ನಾವು ಹಿಂದೀಗಳ ಒಡನೆ ಹಿಂದಿಯಲ್ಲೇ ತೊತ್ತುಗಳ ಹಾಗೆ ಮಾತಾಡುತ್ತಿದ್ದೇವೆ. ನಾವು ಹಿಂದಿ ಕಲಿತದ್ದು ನಮಗೇ ಮುಳುವಾಗಿದೆ; ಹಿಂದೀಗಳಿಗೆ ಅನುಕೂಲವಾಗಿದೆ!
      ಆದರೆ ಇನ್ನೂ ಕಾಲ ಮಿಂಚಿಲ್ಲ. ಬೆಂಗಳೂರು ಇನ್ನೂ ಬಾಂಬೆ ಆಗಿಲ್ಲ. ಈಗಲೂ ನಾವು ಹಿಂದೀಗಳಿಗೆ, ’ಕರ‍್ನಾಟಕ ದ್ರಾವಿಡ ನೆಲ. ಕನ್ನಡ ದ್ರಾವಿಡ ನುಡಿ. ಇಲ್ಲಿ ಕನ್ನಡವೇ ಮೊದಲು. ಹಿಂದೀ ಬಾಲ ಇಲ್ಲಿ ಬಿಚ್ಚಬೇಡಿ’ ಎಂಬ ತಿಳಿವಳಿಕೆ ಕೊಡುವ ಕೆಚ್ಚು ತೋರಿಸಬೇಕು. ನಮ್ಮ ದ್ರಾವಿಡತನವನ್ನು ಮೆರೆಯಬೇಕು. ತ್ರಿಬಾಶಾ ಸೂತ್ರದಿಂದ ಹೊರಗೆ ಬರಬೇಕು. ಹಿಂದಿಯನ್ನು ಅಸಡ್ಡೆಯಿಂದ ಕಾಣಬೇಕು. ಹಿಂದಿಯಲ್ಲಿ ಮಾತಾಡಲಿಕ್ಕೇ ಹೋಗಬಾರದು. ಹಿಂದಿಯಲ್ಲಿ ಮಾತಾಡಿದರೆ ಕನ್ನಡಕ್ಕೆ ಕುತ್ತು ಎನ್ನುವುದನ್ನು ಅರಿತುಕೊಳ್ಳಬೇಕು. ಹಿಂದಿಯಲ್ಲಿ ಮಾತಾಡದಿದ್ದರೆ ನಶ್ಟವೇನೂ ಇಲ್ಲ ಎಂಬುದನ್ನು ಕಂಡುಕೊಳ್ಳಬೇಕು.
      ಅಂದ ಹಾಗೆ, ನಾನು ಬರೀ ಉಪದೇಶ ಮಾಡುತ್ತಿಲ್ಲ. ಮೇಲೆ ಹೇಳಿದ ಹಾಗೇ ನಡೆದುಕೊಂಡು ಬಂದಿದ್ದೇನೆ. ಎಂದೂ ನಾನು ಹಿಂದಿಗೆ ಸೊಪ್ಪು ಹಾಕಿಲ್ಲ. ಅದರಿಂದ ನನಗೆ ಏನೂ ನಶ್ಟವಾಗಿಲ್ಲ. ನಂಬಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.