ಮಂಗಳವಾರ, ಜೂನ್ 25, 2013

ಕನ್ನಡದಲ್ಲೂ ಮುದ್ದಾದ ಹೆಸರುಗಳಿವೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡ ಟೀವಿ ಕಾಲುವೆಯೊಂದರಲ್ಲಿ ’ಚಿಣ್ಣರ ಚಿಲಿಪಿಲಿ’ಎಂಬ, ಪುಟ್ಟ ಮಕ್ಕಳು ಪಾಲ್ಗೊಳ್ಳುವ ಜನಪ್ರಿಯ ಕಾರ‍್ಯಕ್ರಮವೊಂದು ಪ್ರಸಾರವಾಗುತ್ತಿದೆ. ಅದರಲ್ಲಿ ಇತ್ತೀಚೆಗೆ ಕೇವಲ ಕೊಡವ ಮಕ್ಕಳಶ್ಟೇ ಪಾಲ್ಗೊಂಡ ವಿಶೇಶ ಸಂಚಿಕೆಯೊಂದು ಬಿತ್ತರವಾಯಿತು. ಆ ಮಕ್ಕಳಲ್ಲಿ ಒಬ್ಬ ಪುಟಾಣಿ ಹುಡುಗಿಗೆ ’ಬೆಳಕು’ ಎಂಬ ಮುದ್ದಾದ ಹೆಸರು. ’ಬೆಳಕು’ ಅಪ್ಪಟ ಕನ್ನಡ ಪದ. ಅದು ಕೊಡವ ಪದವೂ ಆಗಿರಬಹುದೇನೋ. ಒಟ್ಟಿನಲ್ಲಿ ದ್ರಾವಿಡ ಮೂಲದ ಪದ. ಸಾಮಾನ್ಯವಾಗಿ ಬರೀ ಸಂಸ್ಕ್ರುತ ಪದಗಳಿಂದಲೇ ಮಕ್ಕಳಿಗೆ ಹೆಸರಿಡುವ ನಮ್ಮಲ್ಲಿ ಈಗೀಗ ಕನ್ನಡ ಅತವ ದ್ರಾವಿಡ ಮೂಲದ ಹೆಸರುಗಳನ್ನಿಡುವ ಪ್ರವ್ರುತ್ತಿ ಕೂಡ ಶುರುವಾಗಿದೆ. ’ನಮ್ಮ ನುಡಿಯಲ್ಲೇ ಹೆಸರಿಡೋಣ, ಸಂಸ್ಕ್ರುತವೇನೂ ಬೇಕಾಗಿಲ್ಲ’ ಎಂಬ ನಿಲುವು ಇದಕ್ಕೆ ಕಾರಣವೋ, ಇಲ್ಲ, ’ಸಾಮಾನ್ಯ ಹೆಸರು ಬೇಡ, ಯುನೀಕ್ ಆದ ಹೆಸರು ಇರಲಿ’ ಎನ್ನುವ ದೋರಣೆ ಕಾರಣವೋ, ನನಗೆ ತಿಳಿಯದು. ಆದರೆ, ಕಾರಣ ಏನಾದರೂ ಇರಲಿ, ಮತ್ತೆ ಅಚ್ಚಗನ್ನಡ ಹೆಸರುಗಳು ಚಲಾವಣೆಗೆ ಹೇಗೋ ಬರುತ್ತಿರುವುದು ಅಚ್ಚಗನ್ನಡದ ಒಲವಿಯಾದ ನನ್ನ ಕಣ್ಣಿನಲ್ಲಿ ಒಂದು ಸಂತಸದ ಸಂಗತಿ.
      ಅಯ್ದಾರು ದಶಕಗಳ ಹಿಂದಿನವರೆಗೆ ಕನ್ನಡಿಗರ ಹೆಸರುಗಳು ಹೆಚ್ಚುಕಡಿಮೆ ಕನ್ನಡದ್ದೇ ಅಂದರೆ ದ್ರಾವಿಡ ಮೂಲದ ಹೆಸರುಗಳೇ ಆಗಿರುತ್ತಿದ್ದವು. ಚೆಲುವಯ್ಯ, ಕಲ್ಲಪ್ಪ, ಚೆನ್ನಣ್ಣ, ಕೆಂಪ, ಕರಿಯ, ತಾಯಕ್ಕ, ಪುಟ್ಟಮ್ಮ, ಚಿಕ್‍ತಾಯಿ, ಎಲ್ಲವ್ವ - ಹೀಗೆ ಕನ್ನಡದ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದುದೇ ರೂಡಿಯಲ್ಲಿತ್ತು. ಕೆಳಜಾತಿಯ ಮಂದಿಯಲ್ಲಿ ಇಂತಹ ಹೆಸರುಗಳೇ ಹೆಚ್ಚಾಗಿ ಕಾಣುತ್ತಿದ್ದವು. ಮೇಲುಜಾತಿಯವರಲ್ಲಿ ಸ್ವಲ್ಪ ಸಂಸ್ಕ್ರುತ ಮೂಲದ ಹೆಸರುಗಳು ಚಾಲ್ತಿಯಲ್ಲಿದ್ದು, ಆ ಹೆಸರುಗಳು ಸಾಮಾನ್ಯವಾಗಿ ನಾರಾಯಣ, ಶ್ರೀನಿವಾಸ, ರಾಮಕ್ರಿಶ್ಣ, ಸೀತಾಪತಿ ಮುಂತಾದ ದೇವರ ಹೆಸರುಗಳಾಗಿರುತ್ತಿದ್ದವು. ಬಳಿಕದ ದಿನಗಳಲ್ಲಿ ಕ್ರಮೇಣ ಕನ್ನಡದ ಹೆಸರುಗಳು ಮತ್ತು ದೇವರ ಹೆಸರುಗಳು ಕಾಣೆಯಾಗತೊಡಗಿದವು. ಸಂಸ್ಕ್ರುತ ಮೂಲದ ಪಶು, ಪಕ್ಶಿ, ವಸ್ತುಗಳ ಹೆಸರುಗಳು ಬಳಕೆಗೆ ಬರಲು ಶುರುವಾದವು. ’ಓದಿದ’ ಕನ್ನಡಿಗರು ಇಂತಹ ಸಂಸ್ಕ್ರುತ ಮೂಲದ ಹೆಸರುಗಳನ್ನು ಇಡುವುದರಲ್ಲಿ ಒಂದು ರೀತಿಯಲ್ಲಿ ಪಯ್‍ಪೋಟಿಗೇ ತೊಡಗಿದರು ಎನ್ನಬಹುದು. ಪವನ್, ಪರಾಗ್, ಕಿರಣ್, ವಸಂತ್, ಮಯೂರ್, ಸುನಿಲ್, ಸೀಮಾ, ಪುಶ್ಪ, ಸ್ನೇಹಾ, ಸಾಗರ್, ಪಂಚಮ್, ಶ್ರುತಿ, ಶ್ವೇತಾ ಮುಂತಾದ ಹೆಸರುಗಳೇ ಪುಟಿದಾಡತೊಡಗಿದವು. ಬರುಬರುತ್ತಾ ಕನ್ನಡಿಗರಲ್ಲಿ ’ತಮ್ಮ ಮಕ್ಕಳ ಹೆಸರುಗಳು ಬರೀ ಸಂಸ್ಕ್ರುತ ಮೂಲದ್ದಾದರೆ ಸಾಲದು, ಅವು ಸಾಮಾನ್ಯವಾಗಿರಬಾರದು, ಯುನೀಕ್ ಕೂಡಾ ಆಗಿರಬೇಕು’ ಎಂಬ ದೋರಣೆಯೂ ಮೂಡಿತು. ಅದರ ಪರಿಣಾಮವಾಗಿ ಆಕಾಂಕ್ಶಾ, ಪ್ರಜ್ನ್ಯಾ, ಸ್ರುಜನಾ, ಮನೋಜ್ನ್ಯಾ ಮುಂತಾದ ಕಂಡುಕೇಳದ ಹೆಸರುಗಳೂ ಚಲಾವಣೆಗೆ ಬಂದವು. ಎಶ್ಟೋ ಮಕ್ಕಳ ಹೆಸರುಗಳನ್ನು ಅವರ ತಾತ ಅಜ್ಜಿಯರಿಗೆ ಉಚ್ಚಾರಣೆ ಮಾಡುವುದೇ ಅಸಾದ್ಯವಾಯಿತು! ಒಟ್ಟಿನಲ್ಲಿ ಕನ್ನಡದ ಹಾಗೂ ದೇವರ ಹೆಸರುಗಳು ಯಾರಿಗೂ ಹಿಡಿಸದೆ ಮೂಲೆಗುಂಪಾದವು. ಸಂಸ್ಕ್ರುತದ ಹೆಸರುಗಳು ಮನೆಮನೆಯಲ್ಲೂ ಬಳಕೆಗೆ ಬಂದವು. ಸಂಸ್ಕ್ರುತದ ಹೆಸರಾದರೆ ಆಯಿತು, ಅದು ಹೇಗೇ ಇರಲಿ, ಅದಕ್ಕೆ ಸಮಾಜದ ಒಪ್ಪಿಗೆ ಕೂಡಲೇ ದೊರೆಯುವಂತಾಯಿತು. ಸಂಸ್ಕ್ರುತದ ಹೆಸರುಗಳ ಇಂತಹ ಜನಪ್ರಿಯತೆಯಿಂದಾಗಿ ’ಇನ್ನು ಕನ್ನಡದ ಹೆಸರುಗಳು ಮತ್ತೆ ಬರುವುದಿಲ್ಲ, ಅವು ಹೋಗೇ ಬಿಟ್ಟವು’ಎನ್ನುವಂತಾಯಿತು. ಆದರೂ ಅಚ್ಚರಿ ಎಂಬಂತೆ ಅಲ್ಲಲ್ಲಿ ಒಂದೊಂದು ಕನ್ನಡದ ಹೆಸರುಗಳು ಹೊಸ ರೂಪಗಳಲ್ಲಿ ತಲೆ ಎತ್ತಲು ಶುರುಮಾಡಿದವು! ಈಗೀಗ ಅವುಗಳ ಸಂಕ್ಯೆ ಹೆಚ್ಚುತ್ತಿರುವ ಹಾಗೆಯೂ ಕಾಣಿಸುತ್ತಿದೆ. ಕನ್ನಡದ ಹೆಸರುಗಳ ಬೇರು ಇನ್ನೂ ಜೀವಂತವಾಗಿರುವ ಹಾಗೆ ಕಾಣುತ್ತದೆ!
      ಕೆಲ ಕನ್ನಡಿಗರು ತಮ್ಮ ಮಕ್ಕಳಿಗೆ ಅಪ್ಪಟ ಕನ್ನಡದ ಹೆಸರುಗಳನ್ನು ಇಟ್ಟಿರುವುದಕ್ಕೆ ಕೆಲವು ಎತ್ತುಗೆಗಳನ್ನು (ಉದಾಹರಣೆಗಳನ್ನು) ಕೊಡುತ್ತೇನೆ. ರಯ್ತ ಸಂಗ ಕಟ್ಟಿದ ನಂಜುಂಡಸ್ವಾಮಿಯವರ ಮಗಳ ಹೆಸರು ಚುಕ್ಕಿ. ಹೆಸರಾಂತ ಸಾಹಿತಿಗಳಾದ ದಾರವಾಡದ ಪಟ್ಟಣಶೆಟ್ಟಿ ದಂಪತಿಗಳ ಮಗಳ ಹೆಸರು ಹೂ. ಸಾಹಿತಿ ಹಾಗು ಚಿತ್ರ ನಿರ‍್ದೇಶಕ ನಾಗತಿಹಳ್ಳಿಯವರ ಇಬ್ಬರು ಹೆಣ್ಣುಮಕ್ಕಳ ಹೆಸರು ಸಿಹಿ ಮತ್ತು ಕನಸು. ಈಗ ನಮ್ಮ ನಾಡಿನ ಅಡ್ವೊಕೇಟ್ ಜನರಲ್ ಆಗಿರುವ ಹಿರಿಯ ನ್ಯಾಯವಾದಿ ರವಿವರ‍್ಮ ಕುಮಾರರ ಮಗಳ ಹೆಸರು ಬೆಳ್ಳಿ. ಇವರೆಲ್ಲಾ ಸಾಮಾನ್ಯರಲ್ಲ. ತಮ್ಮ ತಮ್ಮ ಸಾದನೆಗಾಗಿ ಹೆಸರು ಪಡೆದುಕೊಂಡಂತವರು (ಮಕ್ಕಳಿಗೆ ಹೆಸರಿಡುವ ಕಾಲಕ್ಕೆ ಇವರಿಗೆ ಇನ್ನೂ ಹೆಸರು ಬಂದಿರಲಿಕ್ಕಿಲ್ಲ. ಆಗ ಮಂದಿಯ ಕಣ್ಣಲ್ಲಿ ಇವರೂ ಸಾಮಾನ್ಯರೇ ಆಗಿದ್ದಿರಬೇಕು). ಇಂತಹ ಸಾದಕರೇ ಹೆಮ್ಮೆಯಿಂದ ತುಳಿದಂತಹ ದಾರಿಯನ್ನು ತುಳಿಯಲು ಉಳಿದವರಿಗೆ ಹಿಂಜರಿಕೆ ಆಗಲೇ ಬಾರದು ತಾನೆ? ಅಂದಹಾಗೆ, ಬೇರೆ ಕೆಲ ಕನ್ನಡಿಗರೂ ಮಕ್ಕಳಿಗೆ ಕನ್ನಡದ ಹೆಸರುಗಳನ್ನು ಇಟ್ಟಿರುವುದನ್ನು ನಾನು ನೋಡಿದ್ದೇನೆ. ನುಡಿ, ನವಿಲ್, ಇಬ್ಬನಿ, ಇಂಪು ಮುಂತಾದವು ಈ ಹೆಸರುಗಳು.
      ಹಳಗನ್ನಡದಲ್ಲಿ ಕಣ್ಣಾಡಿಸಿದರೆ ’ಆದುನಿಕ’ ಎನಿಸುವ ಹಲವಾರು ಹೆಸರುಗಳು ದೊರೆಯುತ್ತವೆ. ಇನ್ನು ’ಬರೀ ಕನ್ನಡದ್ದೇ ಆಗಬೇಕಾಗಿಲ್ಲ, ಒಟ್ಟಾರೆ ದ್ರಾವಿಡ ಮೂಲದ್ದಾದರೆ ಸಾಕು’ ಎನ್ನುವುದಾದರೆ ಹೆಸರುಗಳ ಆಯ್ಕೆಗೆ ಕೊರತೆ ಇರುವುದಿಲ್ಲ. ತುಳು, ಕೊಡವ, ತಮಿಳು, ತೆಲುಗು ಮತ್ತು ಮಲಯಾಳ ಬಾಶೆಗಳಿಂದ ಹೇರಳವಾಗಿ ಹೆಸರುಗಳು ದೊರೆಯಬಹುದು. ಒಂದು ರೀತಿಯಲ್ಲಿ ಎಲ್ಲಾ ದ್ರಾವಿಡ ನುಡಿಗಳಿಂದ ಹೆಸರುಗಳನ್ನು ಹೆಕ್ಕಿಕೊಳ್ಳುವುದೇ ಒಳ್ಳೆಯದು. ಹಾಗೆ ಮಾಡುವುದರಿಂದ ’ದ್ರಾವಿಡ ನುಡಿಗಳನ್ನಾಡುವ ನಮ್ಮೆಲ್ಲರದು ಒಂದೇ ಸಮುದಾಯ’ ಎನ್ನುವ ಅರಿವಿಗೆ ಹೆಚ್ಚಿನ ಇಂಬು ಸಿಕ್ಕಂತಾಗುತ್ತದೆ.
      ಇಶ್ಟೆಲ್ಲಾ ಹೇಳಿದ ಮೇಲೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಬೇಕಾಗುತ್ತದೆ. ’ದ್ರಾವಿಡ ಹೆಸರನ್ನೇ ಇಡುತ್ತೇನೆ’ಎಂದು ಹಟಕ್ಕೆ ಬಿದ್ದು ಮಕ್ಕಳಿಗೆ ಹೇಗೆ ಹೇಗೋ ಹೆಸರನ್ನಿಡುವುದು ಸರಿಯಲ್ಲ. ಹೆಸರನ್ನಿಡುವುದೇನೋ ತಂದೆತಾಯಿಗಳು. ಆದರೆ, ಅದರ ಹೊರೆಯನ್ನು ಹೊರುವುದು ಮಾತ್ರ ಬಡಪಾಯಿ ಮಕ್ಕಳು! ಆದ್ದರಿಂದ, ಮಕ್ಕಳಿಗೆ ಹೆಸರನ್ನಿಡುವಾಗ ಸಮಾಜ ಆ ಹೆಸರನ್ನು ಹೇಗೆ ನೋಡಬಹುದು ಎಂಬುದರ ಪರಿವೆಯೂ ನಮಗಿರಬೇಕು. ಜಾಗರೂಕತೆಯಿಂದ ಹೆಸರನ್ನಿಡಬೇಕು. ಒಟ್ಟಾರೆ ನನ್ನ ಈ ಬರಹದ ಉದ್ದೇಶ ಇಶ್ಟೆ - ’ಇಂಪಾದ ಇಲ್ಲ ಆದುನಿಕ ಎನಿಸುವ ಹೆಸರುಗಳು ಬರೀ ಸಂಸ್ಕ್ರುತದ ಸೊತ್ತಲ್ಲ. ದ್ರಾವಿಡ ನುಡಿಗಳಲ್ಲೂ ಅವು ಇವೆ. ಮಕ್ಕಳ ಹೆಸರನ್ನು ಆಯುವಾಗ ಕನ್ನಡ ಮತ್ತು ಉಳಿದ ದ್ರಾವಿಡ ನುಡಿಗಳಲ್ಲೂ ಒಮ್ಮೆ ಕಣ್ಣಾಡಿಸುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಮುದ್ದಾದ ಹಾಗೂ ಸಾಮಾನ್ಯವಲ್ಲದ ಹೆಸರುಗಳು ನಮ್ಮ ನುಡಿಗಳಲ್ಲೇ ನಮಗೆ ಸಿಗಬಹುದು.’

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಜೂನ್ 10, 2013

ಇಂಗ್ಲೀಶಿನೊಡನೆ ಕನ್ನಡದೊಲವನ್ನೂ ಕಲಿಸಬೇಕು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ಏಪ್ರಿಲ್ಲಿನ ಎರಡನೇ ವಾರ ಇರಬೇಕು. ದೇವನಹಳ್ಳಿಯ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಆಗ ಅಲ್ಲಿ ಅಯ್ದಾರು ಕಾಲೇಜು ಹುಡುಗರು ನನ್ನ ಹತ್ತಿರವೇ ನಿಂತುಕೊಂಡು ಹರಟೆ ಹೊಡೆಯುತ್ತಿದ್ದರು. "ಏನ್ರಪ್ಪಾ, ಏನ್ ಓತ್ತಾ ಇದ್ದೀರಿ?" ಎಂದು ಆತ್ಮೀಯತೆಯಿಂದ ಪ್ರಶ್ನೆ ಮಾಡಿ ನಾನೂ ಕೂಡ ಸ್ವಲ್ಪ ಹೊತ್ತಿನಲ್ಲಿ ಅವರೊಂದಿಗೆ ಮಾತಿಗೆ ಸೇರಿಕೊಂಡೆ. ಮಾತಿನ ನಡುವೆ ಅವರಲ್ಲಿ ಒಬ್ಬ ಹುಡುಗ, ಯಾರೋ ಒಬ್ಬರ ಬಗ್ಗೆ ಮಾತಾಡುತ್ತ, "ಅವರು ಲಾಂಗಾಗಿದಾರೆ" ಎಂದು ಹೇಳಿದ. ’ಅವರು ಎತ್ತರವಾಗಿದ್ದಾರೆ’ ಎಂದು ಹೇಳುವುದು ಅವನ ಉದ್ದೇಶವಾಗಿತ್ತು. ನಾನು ಕೂಡಲೇ, "ಲಾಂಗಾಗಿದಾರೆ ಅಂತ ಅನ್ನಬಾರದು. ಟಾಲಾಗಿದ್ದಾರೆ ಅಂತ ಅನ್ಬೇಕು. ಲಾಂಗಾಗಿದಾರೆ  ಅಂತಾನೂ ಹೇಳ್ಬೋದೇನೋ. ಆದರೆ, ಈಗೆಲ್ಲ ಸಾಮಾನ್ಯವಾಗಿ ಎಲ್ಲರೂ ಟಾಲ್ ಅಂತಾನೇ ಹೇಳೋದು" ಎಂದು ತಂತಾನೆ ಅವನಿಗೆ ಹೇಳಿಬಿಟ್ಟೆ. ನಾನು ಹೇಳಿದ್ದನ್ನು ಕೇಳಿ ಅವನ ಮುಕ ಕೊಂಚ ಮಂಕಾಯಿತು. ಅವನಿಗೆ ಬೇಸರವಾದದ್ದನ್ನು ನೋಡಿ, "ಬೇಜಾರ್ ಮಾಡ್ಕೋಬೇಡಪ್ಪಾ, ನಿನ್ನ ಇಂಗ್ಲೀಶ್ ಸರಿ ಆಗ್ಲಿ ಅನ್ನೋ ಒಳ್ಳೇ ಉದ್ದೇಶ್ದಿಂದ ಆಟೋಮ್ಯಾಟಿಕ್ಕಾಗಿ ಹೇಳ್ಬಿಟ್ಟೆ ಅಶ್ಟೇ. ಬೇರೆ ಇನ್ನೇನೂ ಅಲ್ಲ." ಎಂದು ನಾನು ತಕ್ಶಣವೇ ಕಳಕಳಿಯಿಂದ ಅವನಿಗೆ ಸಮಾದಾನ ಆಗುವಂತೆ ಹೇಳಿದೆ. ಹಾಗೆ ಮಾಡಿದ್ದರಿಂದ ಅವನ ಮುಕ ಮತ್ತೆ ಮೊದಲಿನಂತಾಯಿತು. ಬೇಗನೇ ಚೇತರಿಸಿಕೊಂಡ ಅವನು, "ಇಲ್ಲಿ ಎಲ್ರೂ ಲಾಂಗಾಗಿದಾರೆ ಅಂತಾನೇ ಹೇಳೋದು ಸಾರ್. ನೀವು ಬೆಂಗಳೂರಿನೋರು. ನಿಮ್ಮಶ್ಟ್ ಚನ್ನಾಗಿ ನಮಗೆ ಇಂಗ್ಲೀಶ್ ಬರ‍್ಲಿಕ್ಕೆ ಸಾದ್ಯಾನಾ?" ಎಂದು ’ಸಣ್ಣ ಊರಿನವರಿಗೆ ಇಂಗ್ಲೀಶ್ ಕಲಿಕೆಯಲ್ಲಿ ಅನ್ಯಾಯ ಆಗುತ್ತಿದೆ’ ಎನ್ನುವ ದಾಟಿಯಲ್ಲಿ ಕೇಳಿದ. "ಬೆಂಗ್ಳೂರ‍್ನವರಿಗೂ ಇಂಗ್ಲೀಶ್ ಸರಿಯಾಗಿ ಬರೋದಿಲ್ಲಪ್ಪ" ಎಂದು ಹೇಳಿ ನಾನು ಅವನಿಗೆ ಇನ್ನಶ್ಟು ಸಮದಾನ ಮಾಡಿದೆ. ಅಲ್ಲಿಂದ ನಮ್ಮ ಮಾತು ’ಇಂಗ್ಲೀಶ್ ಬೇಕೋ ಬೇಡವೋ, ಇಂಗ್ಲೀಶ್ ಎಶ್ಟು ಕಲೀಬೇಕು, ಯಾವ ವಯಸ್ಸಿನಿಂದ ಕಲೀಬೇಕು’ ಎಂದು ಮುಂತಾದ ವಿಶಯಗಳ ಕಡೆಗೆ ತಿರುಗಿತು.
      ’ಈಗ ಕೆಲಸ ಸಿಗಬೇಕು ಅಂದರೆ ಇಂಗ್ಲೀಶ್ ಬರಬೇಕು. ದೊಡ್ಡ ಊರುಗಳಲ್ಲಿ ಬೆಳೆದವರಿಗೆ ಇಂಗ್ಲೀಶ್ ಚೆನ್ನಾಗಿ ಬರುತ್ತದೆ. ಸಣ್ಣ ಊರಿನವರಿಗೆ ಇಂಗ್ಲೀಶ್ ಬರುವುದಿಲ್ಲ. ಇದರಿಂದಾಗಿ ಒಳ್ಳೆಯ ಕೆಲಸಗಳು ಪಟ್ಟಣದವರ ಪಾಲಾಗುತ್ತಿವೆ. ಕಡಿಮೆ ಸಂಬಳದ ಕೆಲಸಗಳು ಮಾತ್ರ ಹಳ್ಳಿಯವರಿಗೆ ಸಿಗುತ್ತಿವೆ. ಪಟ್ಟಣದ ಹುಡುಗರ ಜೊತೆ ಸ್ಪರ‍್ದಿಸುವುದು ಹಳ್ಳಿಯ ಹುಡುಗರಿಗೆ ತುಂಬಾ ಕಶ್ಟವಾಗಿದೆ. ಹಳ್ಳಿಯ ಹುಡುಗರಲ್ಲಿ ಕೀಳರಿಮೆ ಉಂಟಾಗಿದೆ. ಇಂಗ್ಲೀಶ್ ಬೇಕೇ ಬೇಕು. ಆದರೆ, ಚಿಕ್ಕ ಊರುಗಳಲ್ಲಿ ಇಂಗ್ಲೀಶನ್ನು ಅಶ್ಟು ಸರಿಯಾಗಿ ಕಲಿಸುತ್ತಿಲ್ಲ’ - ಒಟ್ಟಾರೆಯಾಗಿ ಹೀಗೆ, ಮಾತಿನ ವೇಳೆ ಆ ಹುಡುಗರು ಅವರ ಅಳಲನ್ನು ತೋಡಿಕೊಂಡರು. ಸರ‍್ಕಾರ ಪದವಿಗಾಗಿ ಓದುತ್ತಿರುವ ವಿದ್ಯಾರ‍್ತಿಗಳಿಗೆ ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಕಲಿಸಲು ವಿಶೇಶವಾದ ಯೋಜನೆಗಳನ್ನು ಹಾಕಿಕೊಂಡಿರುವುದರ ಬಗ್ಗೆ ಇತ್ತೀಚೆಗೆ ನಾನು ಪತ್ರಿಕೆಯಲ್ಲಿ ಓದಿದ್ದೆ. ಅದರ ಬಗ್ಗೆ ಅವರನ್ನು ಕೇಳಿದೆ. ಆ ಯೋಜನೆಗಳ ಪರಿಚಯ ಅವರಿಗೆ ಇರಲಿಲ್ಲ. ’ಅಂತಹ ಯೋಜನೆ ಇದ್ದರೂ, ಇಂಗ್ಲೀಶಿನಲ್ಲಿ ಮಾತಾಡುವುದನ್ನು ಅಶ್ಟು ತಡವಾಗಿ ಕಲಿಸಿದರೆ ಹೆಚ್ಚು ಪ್ರಯೋಜನವಿಲ್ಲ. ಕಾನ್ವೆಂಟು ಶಾಲೆಗಳ ಹಾಗೆ ಚಿಕ್ಕ ವಯಸ್ಸಿನಿಂದಲೇ ಹೇಳಿಕೊಡಬೇಕು.’ ಎಂದು ಆ ಯೋಜನೆಯ ಬಗ್ಗೆ ಅವರು ಅಬಿಪ್ರಾಯ ಪಟ್ಟರು.
      ಅಶ್ಟರಲ್ಲಿ ಬಸ್ಸು ಬಂತು. ಎಲ್ಲರೂ ಬಸ್ ಹತ್ತಿಕೊಂಡೆವು. ಬಸ್ಸಿನಲ್ಲಿ ಕುಳಿತು, ಅದುವರೆಗೂ ಮಾತಾಡಿದ್ದರ ಬಗ್ಗೆ ಯೋಚನೆ ಮಾಡಿದೆ. ನಮ್ಮ ಸಮಾಜದಲ್ಲಿರುವ ’ಇಂಗ್ಲೀಶಿನಲ್ಲಿ ಮಾತಾಡುವುದನ್ನು ಕಲಿತವರೇ ವಿದ್ಯಾವಂತರು, ಇಂಗ್ಲೀಶ್ ಬಾರದವರು ಅವಿದ್ಯಾವಂತರು’ ಎನ್ನುವ ದೋರಣೆ ನಿಜಕ್ಕೂ ತುಂಬಾ ಹಳೆಯದು. ನಾನು ಚಿಕ್ಕವನಾಗಿದ್ದಾಗಲೂ ಅದು ಇತ್ತು. ಇಂಗ್ಲೀಶರ ಆಡಳಿತ ಶುರುವಾದಾಗಲಿಂದಲೂ ಇಂಗ್ಲೀಶಿನಲ್ಲಿ ಮಾತನಾಡಲು ಬರುವುದು ನಮಗೆ ಒಂದು ಪ್ರತಿಶ್ಟೆಯ ಕುರುಹು ಆಗಿ ಬಂದಿರುವ ಹಾಗೆ ಕಾಣುತ್ತದೆ. ಇಂಗ್ಲೀಶ್ ಬರುವವರು ಅದು ಬಾರದವರಿಗೆ ಬಹಳ ಹಿಂದಿನಿಂದಲೂ ಕೀಳರಿಮೆ ಬರಿಸಿದ್ದಾರೆ. ಆದರೂ, ಕೆಲಸ ಪಡೆದುಕೊಳ್ಳುವ ವಿಶಯದಲ್ಲಿ ಇಂಗ್ಲೀಶ್ ಬಾರದಿರುವುದು ಹಿಂದೆ ಅಶ್ಟು ದೊಡ್ದ ತೊಡಕು ಎನಿಸಿರಲಿಲ್ಲ ಎಂದು ತೋರುತ್ತದೆ. ಆದರೆ ಈಗ, ಅದರಲ್ಲೂ ಜಾಗತೀಕರಣ ಬಂದ ಮೇಲೆ, ಸಮಾಜ ಇಂಗ್ಲೀಶಿಗೂ ಕೆಲಸ ದೊರಕಿಸಿಕೊಳ್ಳುವುದಕ್ಕೂ ಬಿಗಿಯಾಗಿ ತಳುಕು ಹಾಕಿರುವಂತೆ ಕಾಣುತ್ತಿದೆ. ಸಮಾಜ ಹಾಗೆ ಮಾಡಿರುವುದಕ್ಕೆ ಸರಿಯಾದ ಕಾರಣಗಳೂ ಇವೆ. ಒಂದೇ ಎಡೆಯಲ್ಲಿ ಬೇರೆ ಬೇರೆ ನುಡಿಗಳನ್ನು ಆಡುವವರು ವಾಸ ಮಾಡುವುದು ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಕಂಪನಿಗಳ ವಹಿವಾಟುಗಳು ಅಂತರ ರಾಶ್ಟ್ರೀಯ ಹರವನ್ನು ಪಡೆದುಕೊಳ್ಳುತ್ತಿವೆ. ಪ್ರಪಂಚದಗಲಕ್ಕೂ ಈಗ ಇಂಗ್ಲೀಶ್ ಕಲಿಕೆ ಬಿರುಸಿನಿಂದ ಸಾಗಿದೆ. ಆದ್ದರಿಂದ, ಇಂಗ್ಲೀಶ್ ಕಲಿಯುವುದು ಅಗತ್ಯವೂ ಉಪಯುಕ್ತವೂ ಅಗುತ್ತಿದೆ. ಒಟ್ಟಿನಲ್ಲಿ, ಇಂಗ್ಲೀಶ್ ಮಾತಾಡುವುದು ಬಂದರೆ ಕೆಲಸ ಮತ್ತು ಮನ್ನಣೆ - ಎರಡೂ ಸಿಗುತ್ತವೆ ಈಗ ನಮ್ಮ ಸಮಾಜದಲ್ಲಿ. ಹಾಗಾಗಿ, ಹಳ್ಳಿಯಾಗಲೀ ಪಟ್ಟಣವಾಗಲೀ, ಎಲ್ಲಾ ಕಡೆ ಈಗ ತಂದೆತಾಯಿಗಳು ತಮ್ಮ ಮಕ್ಕಳು ಇಂಗ್ಲೀಶ್ ಮಾತಾಡುವುದನ್ನು ಕಲಿಯಬೇಕು, ಅದರಲ್ಲೂ ಚಿಕ್ಕ ವಯಸ್ಸಿನಿಂದಲೇ ಕಲಿಯಬೇಕು ಎಂದು ಕಾತರಿಸುತ್ತಿದ್ದಾರೆ. ಆದ್ದರಿಂದಲೇ ಇಂಗ್ಲೀಶ್ ಮಾದ್ಯಮದ ಶಾಲೆಗಳಿಗೆ ಅಶ್ಟೊಂದು ಬೇಡಿಕೆ.
      ಇಂಗ್ಲೀಶಿನಲ್ಲಿ ಮಾತನಾಡುವ ಆಸೆ ಬಾನಿಗೇರಿರುವುದು ಎಲ್ಲರಿಗೂ ಗೊತ್ತಿರುವ ವಿಶಯ. ಅದರಲ್ಲಿ ಹೊಸದೇನೂ ಇಲ್ಲ. ಇತ್ತೀಚೆಗೆ ಚುನಾವಣೆ ಸಂದರ‍್ಬದಲ್ಲಿ, ಜನತಾದಳ ಪಕ್ಶ ’ಬೆಂಗಳೂರಿನ ಪ್ರತಿ ವಾರ‍್ಡಿನಲ್ಲೂ ಒಂದು ಮಾದರಿ ಇಂಗ್ಲೀಶ್ ಶಾಲೆಯನ್ನು ತೆರೆಯುವುದಾಗಿ’ ಪ್ರಣಾಳಿಕೆಯಲ್ಲಿ ಹೇಳಿತು. ಶ್ರೀರಾಮುಲು ಅವರ ಪಕ್ಶ ಇನ್ನೂ ಮುಂದೆ ಹೋಗಿ ’ನಾಡಿನ ಎಲ್ಲಾ ಸರ‍್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಶನ್ನು ಕಲಿಸಿಕೊಡುವುದಾಗಿ’ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತು. ನಾಡಿನ ಮಂದಿ ತಮ್ಮ ಮಕ್ಕಳಿಗೆ ಇಂಗ್ಲೀಶ್ ಕಲಿಸುವುದಕ್ಕೆ ಎಶ್ಟು ಹಾತೊರೆಯುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಆದಾರ ಬೇಡ. ಮಂದಿಗೆ ಏನು ಬೇಕೋ ಅದನ್ನು ಕೊಡುತ್ತೇವೆ ಎಂದು ಹೇಳಿ ಮತ ಪಡೆದುಕೊಳ್ಳುವುದೇ ತಾನೆ ಪುಡಾರಿಗಳ ಚಾಳಿ? ಅದೇನೆ ಇರಲಿ, ತಂದೆತಾಯಿಗಳಲ್ಲಿ ಇಂದು ಅವರ ಮಕ್ಕಳು ಇಂಗ್ಲೀಶಿನಲ್ಲಿ ಅರಳು ಹುರಿದಂತೆ ಮಾತನಾಡಬೇಕು ಎಂಬ ಹಂಬಲ ಎಶ್ಟು ಬಲವಾಗಿ ಬೇರೂರಿದೆ ಅಂದರೆ, ಮಕ್ಕಳಿಗೆ ಇಂಗ್ಲೀಶ್ ಮಾತನಾಡುವುದನ್ನು ಕಲಿಸದೇ ಬೇರೆ ದಾರಿಯೇ ಇಲ್ಲ, ಎನ್ನುವ ಹಾಗಾಗಿದೆ. ಹಾಗಾಗಿ, ಎಲ್ಲಾ ಮಕ್ಕಳೂ ಹೇಗೋ ಒಂದು ಬಗೆಯಲ್ಲಿ ಇಂಗ್ಲೀಶ್ ಕಲಿತು ಮಾತನಾಡುವ ಕಾಲ ಇನ್ನು ದೂರ ಉಳಿದಿಲ್ಲ. ಇದು ನನ್ನಿ! ಇದು, ಕನ್ನಡ ಉಳಿಯಬೇಕು ಎಂದು ಬಯಸುವ ನಮ್ಮಂತಹವರೆಲ್ಲ ತಪ್ಪದೆ ತಲೆಯಲ್ಲಿಟ್ಟುಕೊಳ್ಳಬೇಕಾದ ಕಡು ನನ್ನಿ.
      ಈಗ ಪ್ರಶ್ನೆ ಇದು - ಎಲ್ಲರೂ ಇಂಗ್ಲೀಶ್ ಮಾತನಾಡುವುದನ್ನು ಕಲಿತಾಗ ಕನ್ನಡ ಮಾತನಾಡುವವರು ಯಾರು? ಇಂಗ್ಲೀಶಿನ ವಾತಾವರಣದಲ್ಲಿ ಕನ್ನಡ ಮಾತಾಡುವುದನ್ನು ಉಳಿಸಿಕೊಳ್ಳುವುದು ಹೇಗೆ? ಎಲ್ಲರಿಗೂ ತಿಳಿದಂತೆ ಇಂಗ್ಲೀಶ್ ಬಲ್ಲವರಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಇಂಗ್ಲೀಶನ್ನೇ ಆಡುತ್ತಾರೆ. ಇಂಗ್ಲೀಶ್ ಬಂದೂ ಕನ್ನಡವನ್ನೇ ಹೆಚ್ಚಾಗಿ ಆಡುವವರು ಕಡಿಮೆ. ಇಂಗ್ಲೀಶ್ ಆಡುವುದು ಹಲವು ವೇಳೆ ಪ್ರತಿಶ್ಟೆಗಾಗಿ ಮಾತ್ರ. ಪ್ರತಿಶ್ಟೆ ಮನುಶ್ಯರಿಗೆ ಅಶ್ಟು ಮುಕ್ಯ. ಆದರೆ, ಪ್ರತಿಶ್ಟೆ ಅಶ್ಟು ಮುಕ್ಯವಾದರೂ ಕೆಲವರಿಗಾದರೂ ಪ್ರತಿಶ್ಟೆಯನ್ನೂ ಮೀರಿದ ಕನ್ನಡದ ಒಲವು ಇರುತ್ತದೆ ಎನ್ನುವುದೂ ನಿಜ. ಇಂತಹವರನ್ನೂ ನಾವು ನೋಡುತ್ತೇವೆ. ಕನ್ನಡದ ಮೇಲೆ ಒಲವು ಮತ್ತು ಅಬಿಮಾನ ಇರುವವರು ಇಂಗ್ಲೀಶ್ ಬಂದರೂ ಕನ್ನಡವನ್ನೇ ಆಡುತ್ತಾರೆ. ಕನ್ನಡ ಮಾತಾಡುವುದನ್ನು ಉಳಿಸುವ ಸುಳುಹು ನಮಗೆ ಇಂತಹವರಿಂದ ಬಹುಶಹ ಸಿಗಬಹುದು.
      ಮುಕ್ಯವಾಗಿ ನಮ್ಮ ಮಂದಿಗೆ ಮತ್ತು ಮಕ್ಕಳಿಗೆ ಕನ್ನಡದ ಬಗ್ಗೆ ಒಲವು ಮತ್ತು ಅಬಿಮಾನಗಳನ್ನು ಮೂಡಿಸಬೇಕು. ’ತಾಯ್ನುಡಿಯ ಬಗ್ಗೆ ಒಲವನ್ನು ಯಾರೂ ಕಲಿಸಬೇಕಾಗಿಲ್ಲ. ಅದು ತಾನಾಗೇ ಬರುತ್ತದೆ’ ಎನ್ನುವ ನಂಬಿಕೆ ಸುಳ್ಳು. ಇದಕ್ಕೆ ಇಂದಿನ ಇಂಗ್ಲೀಶ್ ಬರುವ ಕನ್ನಡಿಗರ ನಡವಳಿಕೆಯೇ ಸಾಕ್ಶಿ. ತಾಯ್ನುಡಿಯ ಪ್ರೀತಿ ಮತ್ತು ಅಬಿಮಾನಗಳನ್ನೂ ಕೂಡ ಬೇರೆ ವಿದ್ಯೆಗಳನ್ನು ಕಲಿಸುವ ಹಾಗೆಯೆ ಕಲಿಸಬೇಕು. ಕನ್ನಡದ ಮಟ್ಟಿಗೆ ಹೇಳುವುದಾದರೆ, ಕನ್ನಡ ಒಂದು ದ್ರಾವಿಡ ನುಡಿ, ಕನ್ನಡ ಆಡುವ ಪ್ರದೇಶದ ಹರವು ಅರ‍್ದಕ್ಕಿಂತಲೂ ಹೆಚ್ಚು ಕುಗ್ಗಿದೆ, ಒಮ್ಮೆ ಇಡೀ ದೇಶದ ಅಗಲಕ್ಕೂ ಹರಡಿದ್ದ ದ್ರಾವಿಡ ನುಡಿಗಳು ಇಂದು ಎಲ್ಲವನ್ನೂ ಕಳೆದುಕೊಂಡು ತೆಂಕಣದ ಬಾಗದಲ್ಲಿ ಮಾತ್ರ ಉಳಿದುಕೊಂಡಿವೆ, ಹೀಗೆ ಪ್ರಪಂಚದಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ದ್ರಾವಿಡ ನುಡಿಗಳಲ್ಲಿ ಕನ್ನಡ ನುಡಿ ಮುಕ್ಯ, ಕನ್ನಡದ ನುಡಿಪಿನ (ಸಾಹಿತ್ಯದ) ಸಂಪತ್ತು ಸಾವಿರ ವರ‍್ಶಗಳನ್ನೂ ಮೀರಿದೆ, ಕನ್ನಡ ನುಡಿಯನ್ನು ಆಡುವವರದು ದ್ರಾವಿಡ ಬುಡಕಟ್ಟಿನ ಹಿನ್ನೆಲೆ, ದ್ರಾವಿಡರಿಗೆ ಇತಿಹಾಸದ ಉದ್ದಕ್ಕೂ ಹಿನ್ನಡೆ ಆಗಿದೆ - ಹೀಗೆ ಕನ್ನಡದ ಬಗ್ಗೆ ಎಲ್ಲ ವಾಸ್ತವ ವಿಶಯಗಳ ಅರಿವನ್ನು ತಿಳಿಸಿಕೊಡುವುದರಿಂದ ಕನ್ನಡಿಗರಿಗೆ ಕನ್ನಡದ ಮೇಲೆ ಅಬಿಮಾನ ಮೂಡಿಸಬಹುದು ಎಂಬುದು ನನ್ನ ನಂಬಿಕೆ. ತ್ರಿಬಾಶಾ ಸೂತ್ರದಿಂದಾಗಿ ಕೆಲಸಕ್ಕೆ ಬಾರದ ಹಿಂದೀಯನ್ನು ಕಲಿಸುವುದರಲ್ಲಿ ಸಮಯವನ್ನು ಪೋಲು ಮಾಡುವ ಬದಲು, ಅದೇ ಸಮಯದಲ್ಲಿ ನಮ್ಮ ವಿದ್ಯಾರ‍್ತಿಗಳಿಗೆ ಇಂಗ್ಲೀಶ್ ಮಾತಾಡುವುದನ್ನೋ ಅತವ ಕನ್ನಡದ ಬಗ್ಗೆ ಅಬಿಮಾನ ಬೆಳೆಸಿಕೊಳ್ಳುವುದನ್ನೋ ಕಲಿಸಿದರೆ ಒಳ್ಳೆಯದು ಎನಿಸುತ್ತದೆ ನನಗೆ.
      ’ಕನ್ನಡ ಮಾತನಾಡಿದರೆ ಕೆಲಸ ದೊರೆಯುತ್ತದೆ, ಕನ್ನಡ ಮಾತನಾಡಿದರೆ ಜನ ಬೆಲೆ ಕೊಡುತ್ತಾರೆ, ಕನ್ನಡ ಮಾತನಾಡಿದರೆ ಲಾಬ ಉಂಟು, ಕನ್ನಡ ಮಾತಾಡದೆ ಬೇರೆ ದಾರಿಯೇ ಇಲ್ಲ’ ಎಂಬ ನೆಲೆಯನ್ನು ದಿನನಿತ್ಯದ ಬದುಕಿನಲ್ಲಿ ನಮಗೆ ಸ್ರುಶ್ಟಿ ಮಾಡಲಿಕ್ಕೆ ಸಾದ್ಯವಾದರೆ ಕನ್ನಡ ಮಾತಾಡುವುದು ತಾನಾಗೇ ಉಳಿಯುತ್ತದೆ. ಆದರೆ, ಅಂತಹ ನೆಲೆಯನ್ನು ಉಂಟುಮಾಡುವುದು ಇಂದಿನ ಸನ್ನಿವೇಶದಲ್ಲಿ ಸುಲಬದ ಮಾತೆ? ಹಾಗಾಗಿ, ಕನ್ನಡಿಗರು ಕನ್ನಡ ಮಾತನಾಡುವುದನ್ನು ಬಿಡಬಾರದೆಂದರೆ, ಕನ್ನಡದ ಬಗ್ಗೆ ಒಲವನ್ನು ನಿರ‍್ದಿಶ್ಟ ಪ್ರಯತ್ನಗಳಿಂದ ಅವರಲ್ಲಿ ಮೂಡಿಸುವುದು ಅವಶ್ಯವಾಗುತ್ತದೆ. ಕನ್ನಡಿಗರು ’ಕನ್ನಡದಿಂದ ನನಗೇನು ಲಾಬ?’ ಎನ್ನುವ ಬದಲು ’ನನ್ನಿಂದ ಕನ್ನಡಕ್ಕೇನು ಲಾಬ?’ ಎಂದು ಕೇಳುವಂತಾಗಬೇಕು. ಇಂತಹ ಬಾವನೆ ಬರುವುದು ನಾವು ನಮ್ಮ ಕನ್ನಡವನ್ನು ಪ್ರೀತಿಸಿದರೆ ಮಾತ್ರ. ಹಾಗಾಗಿ, ಕನ್ನಡದ ಬಗ್ಗೆ ಪ್ರೀತಿ ಮೂಡಿಸುವ ಕೆಲಸ ಕನ್ನಡವನ್ನೂ ಕನ್ನಡ ಮಾತಾಡುವುದನ್ನೂ ಉಳಿಸುವ ಪ್ರಯತ್ನದಲ್ಲಿ ಒಂದು ಮುಕ್ಯವಾದ ಉಪಾಯ. ಆದರೆ, ಪ್ರಶ್ನೆ ಇದು - ಈ ಪ್ರಯತ್ನದಲ್ಲಿ ಗಟ್ಟಿ ನಿರ‍್ದಾರದಿಂದ ತೊಡಗುವ ಚಲ ನಮಗಿದೆಯೆ? ಇದಕ್ಕೆ ಕಾಲವೇ ಉತ್ತರ ಹೇಳಬೇಕು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್