ಶನಿವಾರ, ಡಿಸೆಂಬರ್ 01, 2012

ರಾಶ್ಟ್ರಬಾಶೆ ಎಂಬುದೊಂದು ಬೇಕೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

’ಕನ್ನಡಿಗರು ಕನ್ನಡ ಮಾತಾಡಿದರೆ, ಮರಾಟಿಗರು ಮರಾಟಿ ಮಾತಾಡಿದರೆ, ಪಂಜಾಬಿಗಳು ಪಂಜಾಬಿ ಮಾತಾಡಿದರೆ, ಹೀಗೆ ಆಯಾ ರಾಜ್ಯದವರು ಆಯಾ ಬಾಶೆಗಳನ್ನು ಮಾತಾಡಿದರೆ, ಬಾರತೀಯ ಎನಿಸಿಕೊಂಡವನು ಯಾವ ಬಾಶೆ ಮಾತಾಡುತ್ತಾನೆ? ಇಂಗ್ಲೆಂಡಿನವರಿಗೆ ಇಂಗ್ಲಿಶ್ ಇರುವಂತೆ, ಜರ‍್ಮನರಿಗೆ ಜರ‍್ಮನ್ ಇರುವಂತೆ, ಇಟಲಿಯವರಿಗೆ ಇಟಾಲಿಯನ್ ಇರುವಂತೆ, ಬಾರತದವರಿಗೆ ಬಾರತೀಯ ಬಾಶೆಯೊಂದು ಇರಬಾರದೆ? ಇರಬೇಕು. ಇರಲೇಬೇಕು. ಆದ್ದರಿಂದ, ಬಾರತೀಯರು ನಾವೆಲ್ಲ ಒಂದು ’ರಾಶ್ಟ್ರಬಾಶೆ’ ಎಂಬುದನ್ನು ಅಳವಡಿಸಿಕೊಳ್ಳಬೇಕು. ನಮ್ಮ ನಮ್ಮಲ್ಲಿನ ಸಂಪರ‍್ಕಕ್ಕೆ ಅದನ್ನೇ ಬಳಸಬೇಕು. ಹಿಂದಿ ಹೇಗೂ ಹೆಚ್ಚು ಜನರಿಗೆ ತಿಳಿದಿರುವುದರಿಂದ ಹಿಂದಿಯೇ ರಾಶ್ಟ್ರಬಾಶೆ ಆಗಬೇಕು’ - ಇದು ’ರಾಶ್ಟ್ರಾಬಿಮಾನಿಗಳು’ ಎಂದು ಕರೆದುಕೊಳ್ಳುವ, ಅದರಲ್ಲೂ ಹಿಂದಿಯೇ ಮನೆಮಾತಾಗಿರುವ ಕೋಟ್ಯಂತರ ಬಾರತೀಯರ ವಾದ. ಇವರ ವಾದದಲ್ಲಿ ಏನಾದರೂ ಹುರುಳಿದೆಯೆ? ನೋಡೋಣ.
      ಮೊದಲು, ’ಇಂಗ್ಲೆಂಡಿನವರಿಗೆ ಇಂಗ್ಲಿಶ್ ಇರುವಂತೆ, ಜರ‍್ಮನರಿಗೆ ಜರ‍್ಮನ್ ಇರುವಂತೆ, ಇಟಲಿಯವರಿಗೆ ಇಟಾಲಿಯನ್ ಇರುವಂತೆ...’ ವಾದದ ಬಗ್ಗೆ ಕೊಂಚ ಬಗೆದು ನೋಡೋಣ. ಇಡೀ ಇಂಗ್ಲೆಂಡ್ ತುಂಬ ಬಹುತೇಕ ಮಂದಿ ಆಡುತ್ತಿದ್ದುದು ಇಂಗ್ಲಿಶ್ ಒಂದೇ. ಅದೇ ರೀತಿ, ಜರ‍್ಮನಿಯಲ್ಲಿ ಜರ‍್ಮನ್ ಬಾಶೆ ಒಂದೇ. ಅಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಾಶೆ ಮಾತಾಡುತ್ತಿರಲಿಲ್ಲ. ಇಟಲೀ ದೇಶದಲ್ಲೂ ಹಾಗೇ. ದೇಶಕ್ಕೆಲ್ಲಾ ಇದ್ದುದು ಒಂದೇ ಬಾಶೆ. ಇಂಗ್ಲೆಂಡ್, ಜರ‍್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಇದ್ದದ್ದು ಬಹುತೇಕ ಒಂದೇ ಜನಾಂಗ, ಒಂದೇ ಬಾಶೆ ಮತ್ತು ಒಂದೇ ಸಂಸ್ಕ್ರುತಿ.  ಹಾಗಾಗಿ ಆ ದೇಶಗಳಲ್ಲಿ, ಅಲ್ಲಿದ್ದ ಒಂದೇ ಬಾಶೆ ತನ್ನಶ್ಟಕ್ಕೆ ತಾನೇ ’ದೇಶಬಾಶೆ’ ಆಯಿತು. ನಮಗೊಂದು ದೇಶಬಾಶೆ ಬೇಕು ಎಂದು ಪ್ರತ್ಯೇಕವಾಗಿ ಆಲೋಚಿಸುವ ಅಗತ್ಯವೇ ಅವರಿಗೆ ಬೀಳಲಿಲ್ಲ.
      ಆದರೆ, ನಮ್ಮ ದೇಶ ಹಾಗಿಲ್ಲ. ನಮ್ಮ ದೇಶದ ಉದ್ದಗಲದಲ್ಲಿ ಒಂದೇ ಬಗೆಯ ಮಂದಿ ವಾಸವಾಗಿಲ್ಲ. ಬೇರೆಬೇರೆ ಬುಡಕಟ್ಟಿನ ಜನ, ಬೇರೆಬೇರೆ ಬಾಶಾವರ್ಗದ ಜನ, ಬೇರೆಬೇರೆ ನಡವಳಿಕೆಯ ಜನ - ಹೀಗೆ ವಯ್ವಿದ್ಯಮಯವಾದ ಸಮುದಾಯಗಳು ಬದುಕುತ್ತಿರುವ ಒಂದು ಒಕ್ಕೂಟ ನಮ್ಮ ದೇಶ. ಈ ಸಮುದಾಯಗಳು ಕೂಡ ಒಂದರಲ್ಲಿ ಒಂದು ಬೆರೆತು ಹೋಗಿಲ್ಲ. ಪ್ರತಿ ಸಮುದಾಯಕ್ಕೂ ಅದರದ್ದೇ ಆದ ಪ್ರತ್ಯೇಕ ಪ್ರದೇಶ ಇದೆ. ಅಶ್ಟೇ ಅಲ್ಲ, ಒಂದು ಸಮುದಾಯ ಮಾತ್ರ ಬಹಳ ದೊಡ್ಡದು, ಉಳಿದವೆಲ್ಲ ಲೆಕ್ಕಕ್ಕೆ ಬಾರದ ಪುಟ್ಟ ಸಮುದಾಯಗಳು ಎಂದೂ ಹೇಳುವ ಹಾಗಿಲ್ಲ. ಅದೇ ರೀತಿ, ಒಂದು ಬಾಶೆ ಮಾತ್ರ ಬೆಳವಣಿಗೆ ಹೊಂದಿದೆ, ಇನ್ನುಳಿದವೆಲ್ಲ ಕೇವಲ ಬಾಯ್ನುಡಿಗಳು ಎಂದೂ ಅನ್ನುವಂತಿಲ್ಲ. ಹಾಗೆ ನೋಡಿದರೆ ಬಾರತದಲ್ಲಿ, ಹಲವಾರು ಸಮುದಾಯಗಳಿಗೆ ಕೋಟಿ ಕೋಟಿ ಸಂಕ್ಯೆಯ ಜನಬಲವಿದೆ. ಅವುಗಳು ಆಡುವ ಬಾಶೆಗಳಿಗೆ ಸಾವಿರ ವರ‍್ಶಗಳನ್ನು ಮೀರಿದ ಸಾಹಿತ್ಯಿಕ ಚರಿತ್ರೆ ಕೂಡ ಇದೆ.
      ಹಾಗಾಗಿ, ಸರಿಗಣ್ಣಿನಿಂದ ನೋಡಿದರೆ, ಬಾರತ ’ಒಂದು’ ದೇಶವಲ್ಲ, ವಾಸ್ತವವಾಗಿ ಅದು ಒಂದು ’ದೇಶಗಳ ಒಕ್ಕೂಟ’ ಎಂಬುದು ಯಾರಿಗಾದರೂ ತಿಳಿಯುತ್ತದೆ. ಅಶ್ಟೇ ಅಲ್ಲದೆ, ಪ್ರಜಾಪ್ರಬುತ್ವ ಬಾರತದಲ್ಲಿರುವ ರಾಜಕೀಯ ಏರ‍್ಪಾಡು. ಅಂದರೆ, ಹೆಚ್ಚಿನ ಸಂಕ್ಯಾಬಲ ಯಾರಿಗಿರುತ್ತದೋ ಅವರಿಗೇ ರಾಜಕೀಯ ಬಲ ಕೂಡ. ಇಂತಹ ಒಂದು ವ್ಯವಸ್ತೆಯಲ್ಲಿ, ದೊಡ್ಡದೊಂದು ಸಮುದಾಯದ ಬಾಶೆಯನ್ನು ಉಳಿದೆಲ್ಲ ಸಮುದಾಯಗಳ ಮೇಲೆ ಹೇರಿದರೆ, ಅದರಿಂದ ದೊಡ್ಡ ಸಮುದಾಯಕ್ಕೆ ಮೇಲುಗಯ್ ಕೊಟ್ಟು, ಉಳಿದ ಸಮುದಾಯಗಳ ಮುಂದೆ ಬೇಕೇ ಇರದ ಒಂದು ಹೊಸ ತೊಡಕನ್ನು ತಂದಿಟ್ಟಂತಾಗುವುದಿಲ್ಲವೆ? ಇದರಿಂದ ಸಮುದಾಯಗಳ ನಡುವೆ ಮನಸ್ತಾಪಗಳು ಉಂಟಾಗದೆ ಇರುತ್ತದೆಯೆ?
      ಒಂದು ಸಮುದಾಯದ ಬಾಶೆಯನ್ನು ಇನ್ನೊಂದು ಸಮುದಾಯದ ಮೇಲೆ ಕಡ್ಡಾಯವಾಗಿ ಹೇರಿದರೆ, ಅವುಗಳ ನಡುವೆ ಮನಸ್ತಾಪ ಉಂಟಾಗೇ ಆಗುತ್ತದೆ. ಉದಾಹರಣೆಗೆ, ಸೋವಿಯತ್ ಒಕ್ಕೂಟ ಅಸ್ತಿತ್ವದಲ್ಲಿ ಇದ್ದಾಗ, ಅದರ ಎಲ್ಲ ಅಂಗ ರಾಜ್ಯಗಳ ಮೇಲೆ ರಶ್ಯನ್ ಬಾಶೆಯ ಕಲಿಕೆಯನ್ನು ಕಡ್ಡಾಯ ಮಾಡಲಾಗಿತ್ತು. ಮುಚ್ಚುಮರೆ ಏರ‍್ಪಾಡಿನ ಕಮ್ಯುನಿಸ್ಟ್ ಸರ‍್ಕಾರ, ಹೇಗೆ ತನ್ನ ಸೋವಿಯತ್ ಒಕ್ಕೂಟದಲ್ಲಿ ಎಲ್ಲ ಪ್ರಜೆಗಳೂ ರಶ್ಯನ್ ಬಾಶೆಯ ಕಲಿಕೆಯಿಂದ,  ಒಗ್ಗೂಡಿ, ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದು ಸುಳ್ಳು ಜಂಬ ಕೊಚ್ಚಿಕೊಳ್ಳುತ್ತಿತ್ತು. ಆದರೆ, ಸೋವಿಯತ್ ಒಕ್ಕೂಟ ಮುರಿದು ಬಿದ್ದ ಕೂಡಲೇ ಅದರ ನಿಜಬಣ್ಣ ಬಯಲಾಯಿತು. ಬಾರತದಂತೆಯೇ ಬೇರೆಬೇರೆ ಬುಡಕಟ್ಟಿನ, ಬೇರೆಬೇರೆ ನುಡಿಗಳ ಒಕ್ಕೂಟವಾಗಿದ್ದ ಸೋವಿಯತ್ ಯೂನಿಯನ್ನಿನಲ್ಲಿ ರಶ್ಯನ್ ಕಲಿಕೆಯ ಮೇಲಿದ್ದ ಅಸಮಾದಾನ ಪ್ರಪಂಚಕ್ಕೆಲ್ಲಾ ತಿಳಿದು ಬಂತು. ಅದೇ ರೀತಿ, ಚೀನಾದಲ್ಲೂ ಈಗ ಸೋವಿಯತ್ ಒಕ್ಕೂಟದಲ್ಲಿ ಇದ್ದ ಪರಿಸ್ತಿತಿಯೇ ಇದೆ. ಮುಂದೊಂದು ದಿನ, ಚೀನಾದಲ್ಲಿ ಜನಕ್ಕೆ ವಾಕ್ ಸ್ವಾತಂತ್ರ್ಯ ದೊರೆತರೆ, ಅಲ್ಲೂ ಅಶ್ಟೆ, ಚೀನೀಯೇತರ ಸಮುದಾಯಗಳಲ್ಲಿ ಮ್ಯಾಂಡರಿನ್ ಬಾಶೆಯ ಕಡ್ಡಾಯ ಕಲಿಕೆಯ ಬಗ್ಗೆ ಇರುವ ಒಳಗುದಿ ಬಯಲಾದೆ ಇರುವುದಿಲ್ಲ.
      ಆದ್ದರಿಂದ, ಬಾರತದಂತಹ ಅಪಾರ ಬೇರ್‍ಮೆ ಇರುವ ದೇಶಗಳಲ್ಲಿ ಒಂದು ಸಮುದಾಯದ ಬಾಶೆಯನ್ನು ಇಡೀ ದೇಶದ ಮೇಲೆ ’ರಾಶ್ಟ್ರಬಾಶೆ’ ಎಂಬ ಹಣೆಪಟ್ಟಿಯಿಂದ ಹೇರುವ ಪರಿಕಲ್ಪನೆಯೇ ಸರಿಯಲ್ಲ. ಇದುವರೆಗೇನೋ ಹಿಂದೀ ಹೇರಿಕೆ, ಆಗ್ರಹದಿಂದ ಆಗಿಲ್ಲ. ಜೊತೆಗೆ, ದೇಶದ ತುಂಬೆಲ್ಲಾ ಬಾಲಿವುಡ್ ಸಿನಿಮಾಗಳು ಜನಪ್ರಿಯವಾಗಿವೆ. ಹಾಗಾಗಿ, ಹಿಂದಿಯ ಬಗ್ಗೆ ಅಶ್ಟು ವಿರೋದ ಕಂಡುಬರುತ್ತಿಲ್ಲ. ಆದರೆ, ಮುಂದೆ ಎಂದಾದರೊಮ್ಮೆ, ಹಿಂದೀಯನ್ನು ಕಡ್ಡಾಯ ಮಾಡುವುದಕ್ಕೆ ಸಕಾಲ ಬಂದಿದೆ ಎಂದು ತಪ್ಪಾಗಿ ಎಣಿಸಿ, ಹಿಂದೀವಾಲರು ಆಗ್ರಹದಿಂದ ಅದನ್ನು ಕಡ್ಡಾಯ ಮಾಡಲು ಹೋದರೆ, ಅದಕ್ಕೆ ಪ್ರಜಾಪ್ರಬುತ್ವದ ನಮ್ಮ ವ್ಯವಸ್ತೆಯಲ್ಲಿ ಕಟ್ಟೆದುರು ಏಳುವುದರಲ್ಲಿ ಸಂದೇಹವಿಲ್ಲ.
      ದೇಶದ ಒಗ್ಗಟ್ಟಿಗೆ ರಾಶ್ಟ್ರಬಾಶೆ ಎಂಬುದು ಬೇಕೇ ಬೇಕು ಎನ್ನುವುದು ದೇಶಾಬಿಮಾನಿಗಳ ಇನ್ನೊಂದು ವಾದ. ಈ ವಾದವನ್ನೂ ಅಶ್ಟೆ. ಕೂಡಲೇ ಒಪ್ಪಲಿಕ್ಕಾಗುವುದಿಲ್ಲ. ಅಶ್ಟಕ್ಕೂ ಬಾಶೆಯಿಂದ ಮಾತ್ರ ಒಗ್ಗಟ್ಟು ಸಾದ್ಯ ಎಂದು ಹೇಳುವುದೇ ಸರಿ ಎನಿಸುವುದಿಲ್ಲ. ಉದಾಹರಣೆಗೆ, ಒಂದೇ ಬಾಶೆ ಆಡುತ್ತಿದ್ದ ಉತ್ತರದ ಹಾಗೂ ಪೂರ್ವದ ಹಿಂದುಗಳ ಮತ್ತು ಮುಸ್ಲಿಮರ ನಡುವೆ ಒಗ್ಗಟ್ಟು ಎಲ್ಲಿತ್ತು? ಇರಲಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳ ನಿರ‍್ಮಾಣವೇ ಅದಕ್ಕೆ ಸಾಕ್ಶಿ. ನಿಜವಾದ ಒಗ್ಗಟ್ಟು ಬರುವುದು,  ’ಒಗ್ಗಟ್ಟಿನಿಂದ ನಮಗೆ ಲಾಬವಿದೆ, ನಮ್ಮ ನೆಲಜಲಗಳಿಗೆ ಹಾನಿ ಇಲ್ಲ, ನಮ್ಮ ನಡೆನುಡಿಗಳಿಗೆ ಕೇಡಿಲ್ಲ’ ಎಂದು ಎಲ್ಲ ಸಮುದಾಯಗಳಿಗೂ ಎನಿಸುವಂತಹ ಏರ‍್ಪಾಡಿದ್ದರೆ ಮಾತ್ರ. ಆದ್ದರಿಂದ, ಬಾರತದಂತಹ ದೇಶದಲ್ಲಿ ಎಲ್ಲರ ಮೇಲೆ ’ಒಬ್ಬರ’ ಬಾಶೆಯನ್ನು ಹೇರಲು ಹೊರಟರೆ, ಒಗ್ಗಟ್ಟಿಗೆ ಬಲ ಬರುವುದಕ್ಕಿಂತ ದಕ್ಕೆ ಆಗುವ ಸಾದ್ಯತೆಯೇ ಹೆಚ್ಚು.
      ಆದ್ದರಿಂದ, ಕನ್ನಡಿಗರು ನಾವು ’ರಾಶ್ಟ್ರಬಾಶೆಯಿಂದ ಒಗ್ಗಟ್ಟು’ ಎಂಬ ಪೊಳ್ಳು ವಾದಗಳಿಗೆ ಬಲಿಬೀಳಬಾರದು. ಬುಡಕಟ್ಟು ಮತ್ತು ನಡೆನುಡಿಗಳಲ್ಲಿ ದ್ರಾವಿಡ ಹಿನ್ನೆಲೆಯವರಾದ ನಾವು ಹಿಂದಿಯ ಹೇರಿಕೆಗೆ ಒಪ್ಪಕೂಡದು. ಈಗ ಒಪ್ಪಿಕೊಂಡಿರುವ ತ್ರಿಬಾಶಾ ಸೂತ್ರದಿಂದ ಮೊದಲು ಹೊರಬರಬೇಕು. ನಮ್ಮ ನಾಡಿನಲ್ಲಿ ಕನ್ನಡಕ್ಕೇ ಮೊದಲೆಡೆ ಮಾಡಿಕೊಡಬೇಕು. ಉಳಿದ ಬಾರತೀಯರೊಂದಿಗೆ ವ್ಯವಹರಿಸುವುದಕ್ಕೆ ನಾವು ಇಂಗ್ಲಿಶ್ ಕಲಿತರೆ ಸಾಕು. ಇಂಗ್ಲಿಶ್ ಕಲಿಯುವುದು ಇಡೀ ಪ್ರಪಂಚದಲ್ಲೇ ಹೇಗೂ ತನ್ನಶ್ಟಕ್ಕೆ ತಾನೆ ಈಗ ಕಡ್ಡಾಯವಾಗಿಬಿಟ್ಟಿರುವುದರಿಂದ, ಇಂಗ್ಲಿಶ್ ಕಲಿಕೆ ನಮಗೆ ಪ್ರಯೋಜನವಿಲ್ಲದ ಹೊರೆಯಾಗುವುದಿಲ್ಲ. ವಾಸ್ತವವಾಗಿ ಇಂಗ್ಲಿಶ್ ಕಲಿಕೆ ಇಂದಿನ ಒಂದು ಅಗತ್ಯ. ಆದರೆ, ಹಿಂದಿ ಕಲಿಕೆ ಮಾತ್ರ ಕಂಡಿತವಾಗಿಯೂ ಒಂದು ಬಾಳ್ತೆಯೇ ಇಲ್ಲದ ಹೊರೆ. ಇದು ನನ್ನಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಕಾಮೆಂಟ್‌ಗಳಿಲ್ಲ: