ಶನಿವಾರ, ಡಿಸೆಂಬರ್ 15, 2012

ಹಿಂದೀ ಕಲಿಕೆಯಿಂದ ಲಾಬವಿದೆಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

’ಹಿಂದಿ ನಮ್ಮ ರಾಶ್ಟ್ರಬಾಶೆ. ಆದ್ದರಿಂದ ಎಲ್ಲಾ ಬಾರತೀಯರೂ ಹಿಂದಿ ಕಲಿಯಬೇಕು’ - ಇದು ಹಿಂದೀವಾದಿಗಳ ಆಗ್ರಹ. ’ಹಿಂದಿ ರಾಶ್ಟ್ರಬಾಶೆಯಲ್ಲ. ನಮ್ಮ ದೇಶಕ್ಕೆಲ್ಲಾ ಹಿಂದಿ ಒಂದೇ ರಾಶ್ಟ್ರಬಾಶೆ ಎಂದು ಸಂವಿದಾನದಲ್ಲಿ ಎಲ್ಲೂ ಹೇಳಿಲ್ಲ. ಹಿಂದಿಯನ್ನು ರಾಶ್ಟ್ರಬಾಶೆ ಎಂದು ಕರೆಯುವುದು ಒಂದು ಸುಳ್ಳು ಪ್ರಚಾರ’ - ಇದು ಹಿಂದಿ ಹೇರಿಕೆಯನ್ನು ಒಲ್ಲದ ದಕ್ಶಿಣದವರು ನಾವು ಹಿಂದೀವಾದಿಗಳ ಸುಳ್ಳನ್ನು ಬಯಲಿಗೆಳೆಯುವ ಸಲುವಾಗಿ ನೀಡುವ ಪ್ರತಿಕ್ರಿಯೆ. ವಾಸ್ತವವಾಗಿ ನಾವು ಹೇಳುವುದೇ ಸತ್ಯ. ಹಿಂದಿ ರಾಶ್ಟ್ರಬಾಶೆಯಲ್ಲ. ಇಸವಿ ೨೦೧೦ರಲ್ಲಿ ಗುಜರಾತಿನ ಉಚ್ಚ ನ್ಯಾಯಾಲಯವೇ ಹಾಗೆಂದು ತೀರ್ಪು ಕೊಟ್ಟಿದೆ.
      ಆದರೆ, ಇಂತಹ ಸತ್ಯಾದಾರಿತ ಆಕ್ಶೇಪಣೆಗಳಿಗೆಲ್ಲಾ ಜಗ್ಗುವವರಲ್ಲ ಹಿಂದೀವಾದಿಗಳು. ’ಅದಿಕ್ರುತವಾಗಿ ರಾಶ್ಟ್ರಬಾಶೆ ಅಲ್ಲದಿದ್ದರೇನು? ಅನದಿಕ್ರುತವಾಗಿ ಹಿಂದಿ ರಾಶ್ಟ್ರಬಾಶೆಯೆ. ಅದಿಕ್ರುತ ಎನ್ನುವುದು ಬರೀ ಲೇಬಲ್ಲು, ಅಶ್ಟೆ. ದಕ್ಶಿಣದ ನಿಮ್ಮನ್ನು ಬಿಟ್ಟರೆ, ದೇಶದ ಉಳಿದೆಲ್ಲಾ ಮಂದಿಗೆ ಹಿಂದಿ ಆಗಲೇ ಬರುತ್ತದೆ. ನಿಮಗೆ ಕಾಮನ್ ಸೆನ್ಸ್ ಇದ್ದರೆ ನೀವೂ ಹಿಂದಿ ಕಲಿಯುತ್ತೀರಿ. ಹಿಂದಿ ಕಲಿಯದಿದ್ದರೆ ನಿಮಗೇ ನಶ್ಟ’ - ಇದು ’ದಕ್ಶಿಣದ ನೀವು ದಡ್ಡರು. ನಿಮ್ಮನ್ನು ಕಂಡರೆ ಅಯ್ಯೋ ಪಾಪ ಎನಿಸುತ್ತದೆ’ ಎಂಬ ದಾಟಿಯಲ್ಲಿ ಅವರಿಂದ ಬರುವ ಮರುಮಾತು. ಮೇಲುನೋಟಕ್ಕೆ ಅವರ ಮಾತು ಸರಿ ಇರುವಂತೆಯೇ ಕಾಣಿಸುತ್ತದೆ. ಆದರೆ, ಕೊಂಚ ಬಿಡಿಸಿ ನೋಡಿದರೆ, ಅದರಲ್ಲಿರುವ ಹುಳುಕು ಹೊರಬರುತ್ತದೆ.
      ಹಿಂದೀಪರರ ವಾದದಲ್ಲಿ ಮುಕ್ಯವಾಗಿ ಎರಡು ಅಂಶಗಳಿವೆ. ಒಂದು - ’ಹಿಂದಿ ಕಲಿಯುವುದರಿಂದ ಹಿಂದಿಯೇತರರಿಗೆ ಲಾಬ ಇದೆ. ಹಾನಿ ಇಲ್ಲ’. ಎರಡು - ’ಹಿಂದಿ ಅದಿಕ್ರುತ ರಾಶ್ಟ್ರಬಾಶೆಯೋ ಅನದಿಕ್ರುತ ರಾಶ್ಟ್ರಬಾಶೆಯೋ ಎನ್ನುವುದು ಮುಕ್ಯವೇ ಅಲ್ಲ. ನಿಜಪ್ರಪಂಚದಲ್ಲಿ ಹಿಂದಿಯ ವರ್ಚಸ್ಸಿಗೆ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’. ಈಗ ಎರಡು ಅಂಶಗಳನ್ನೂ ಕೊಂಚ ಕೆದಕಿ ನೋಡೋಣ.
      ಮೊದಲು, ಹಿಂದಿ ಕಲಿಯುವುದರಿಂದ ಎಶ್ಟು ಲಾಬ ಇದೆ ಎಂಬುದರ ಬಗ್ಗೆ ಯೋಚಿಸೋಣ. ಹಿಂದೀವಾದಿಗಳು ಕೊಚ್ಚಿಕೊಳ್ಳುವ ಹಾಗೆ ದೇಶದ ಮುಕ್ಕಾಲುವಾಸಿ ಬಾಗದಲ್ಲಿ ಹಿಂದಿಯ ಬಳಕೆ ಆಗುತ್ತಿದೆ ಎಂದೇ ಒಪ್ಪಿಕೊಳ್ಳೋಣ. ಇದರಿಂದ ತಲೆಗೆ ತಟ್ಟನೆ ಹೊಳೆಯುವ ಒಂದು ಲಾಬ ಇದು - ನಾವೇನಾದರೂ ದಕ್ಶಿಣವನ್ನು ಬಿಟ್ಟು ಬಾರತದ ಉಳಿದೆಡೆಗಳಲ್ಲಿ ಪ್ರಯಾಣ ಮಾಡಬೇಕಾಗಿ ಬಂದಾಗ, ಹಿಂದಿ ಕಲಿತಿದ್ದರೆ, ಸಂಪರ‍್ಕದ ತೊಂದರೆ ಆಗುವುದಿಲ್ಲ ಎನ್ನುವುದು. ಆದರೆ, ಇದು ಒಂದು ತೀರಾ ಸಣ್ಣ ಲಾಬ. ಏಕೆಂದರೆ, ನಾವು ಪ್ರಯಾಣ ಮಾಡಿದರೆ, ಅದು ಸಾಮಾನ್ಯವಾಗಿ ದೊಡ್ಡ ದೊಡ್ಡ ಊರುಗಳಿಗೇ. ಈಗಿನ ದಿನಗಳಲ್ಲಿ ಎಲ್ಲಾ ದೊಡ್ಡ ಊರುಗಳಲ್ಲಿ ಇಂಗ್ಲೀಶ್ ಸಾಕಶ್ಟು ಚಾಲ್ತಿಯಲ್ಲಿದೆ. ಹಾಗಾಗಿ, ಹಿಂದಿಯನ್ನೇ ಬಳಸಬೇಕೆಂಬ ಅಗತ್ಯ ನಮಗೆ ಬೀಳುವುದಿಲ್ಲ.
      ಹಿಂದಿ ಕಲಿಯುವುದರಿಂದ ದಕ್ಶಿಣೇತರ ರಾಜ್ಯಗಳಲ್ಲಿ ನಮಗೆ ಆಗುವ ಇನ್ನೊಂದು ಲಾಬ ಉದ್ಯೋಗಾವಕಾಶ. ಇದರಲ್ಲಿ ಎರಡು ಬಗೆ ಇದೆ. ಮೊದಲನೆಯದು, ಹಳ್ಳಿಗಾಡಿನ ಬಡವರು ಹೊಟ್ಟೆಪಾಡಿಗಾಗಿ ಗುಳೆ ಹೊರಟು ಕೂಲಿ ಕೆಲಸಗಳನ್ನು ಪಡೆದುಕೊಳ್ಳುವುದು. ಇದಕ್ಕೆ ಹರುಕು ಮುರುಕು ಹಿಂದಿ ಬಂದರೂ ಸಾಕು. ಇದಕ್ಕೆಂದೇ ಅವ್‍ಪಚಾರಿಕವಾಗಿ ಶಾಲೆಯಲ್ಲಿ ಹಿಂದಿ ಕಲಿಯಬೇಕಾಗಿಲ್ಲ. ಎರಡನೆಯದು, ’ವಯ್ಟ್ ಕಾಲರ್’ ಕೆಲಸಗಳು. ಇದರಲ್ಲಿ ಮತ್ತೆ ಎರಡು ಬಗೆ - ಕಾಸಗಿ ವಲಯ ಮತ್ತು ಸರ‍್ಕಾರೀ ವಲಯ. ಕಾಸಗಿ ವಲಯದ ಕೆಲಸಗಳಿಗೆ ಹಿಂದೀ ಬೇಡ. ಅಲ್ಲಿ ಬಹುಮಟ್ಟಿಗೆ ಬೇಕಿರುವುದು ಇಂಗ್ಲೀಶ್. ಸರ‍್ಕಾರೀ ವಲಯದಲ್ಲಿ ಮಾತ್ರ ಅನೇಕ ಕಡೆ ಹಿಂದಿಯ ತಿಳಿವಳಿಕೆ ಬೇಕು. ಅದೂ ಅಲ್ಲದೆ, ಅಲ್ಲಿ ಹರುಕು ಮುರುಕು ಹಿಂದಿ ಸಲ್ಲುವುದಿಲ್ಲ. ಹಲವಾರು ವರ‍್ಶ ಅವ್‍ಪಚಾರಿಕವಾಗಿ ಕಲಿತು ಪಡೆದುಕೊಂಡ ಹಿಂದಿಯ ಅರಿವೇ ಅಲ್ಲಿ ನಡೆಯುವುದು.
      ಹಾಗಾಗಿ, ಅವ್‍ಪಚಾರಿಕವಾಗಿ ಹಿಂದಿ ಕಲಿಯುವುದರಿಂದ, ಕೇಂದ್ರ ಸರ‍್ಕಾರೀ ವಲಯದ ಕೆಲವು ಕೆಲಸಗಳನ್ನು ನಮ್ಮಲ್ಲಿ ಕೆಲವೇ ಕೆಲವರು ಪಡೆದುಕೊಳ್ಳುವಂತಹ ಒಂದು ಲಾಬವಿದೆ ಎಂದು ಒಟ್ಟಾರೆಯಾಗಿ ನಾವು ಹೇಳಬಹುದು, ಅಶ್ಟೆ.
      ಹೀಗೆ ಬಿಡಿಸಿ ನೋಡಿದರೆ, ಶಾಲೆಯಲ್ಲಿ ವರ‍್ಶಗಟ್ಟಲೆ ಹಿಂದೀ ಕಲಿಯುವುದರಿಂದ ಹಿಂದೀಯೇತರರಿಗೆ ಲಾಬವಿದೆ ಎಂಬ ವಾದ ಒಂದು ಅಣಕದಂತೆ ಕಾಣುತ್ತದೆ. ಅಬ್ಬಬ್ಬ ಎಂದರೆ, ನಮ್ಮ ನೂರರಲ್ಲಿ ಒಬ್ಬನಿಗೆ, ಇಲ್ಲ ಇಬ್ಬರಿಗೆ, ಹೋಗಲಿ ಮೂವರಿಗೆ ಅದರಿಂದ ಅರ‍್ತಪೂರ‍್ಣ ಲಾಬವಾಗಬಹುದೆ? ಅದಕ್ಕಿಂತ ಹೆಚ್ಚಿನ ಮಂದಿಗೆ ಲಾಬವಾಗುವುದು ಕಾಣೆ. ಈ ಸಂಪತ್ತಿಗೆ ’ನಾವೆಲ್ಲರೂ’ ಯಾಕೆ ಹಿಂದೀ ಕಲಿಯಬೇಕು? ಹೀಗೆ ಸರಿಯಾದ ಕಣ್ಣೋಲಿನಿಂದ ನೋಡಿದರೆ, ತ್ರಿಬಾಶಾ ಸೂತ್ರ ಎಂತಹ ಒಂದು ಕೆಲಸಕ್ಕೆ ಬಾರದ ಸೂತ್ರ ಎಂಬುದು ಕೂಡಲೆ ಗೊತ್ತಾಗುತ್ತದೆ. ಆದ್ದರಿಂದ, ಏನಾದರೂ ನಮಗೆ ಚೂರುಪಾರು ಬುದ್ದಿ ಇದ್ದರೆ, ನಾವು ಕೂಡಲೇ ಈ ಸೂತ್ರದಿಂದ ಹೊರಕ್ಕೆ ಬರಬೇಕು.
      ಹಾಗಾದರೆ, ಹಿಂದಿ ಕಲಿಯುವುದರಿಂದ ಏನೂ ಉಪಯೋಗ ಇಲ್ಲ ಎಂದು ಹೇಳುತ್ತಿದ್ದೀರೇನು? ಎಂದು ನೀವು ಕೇಳಬಹುದು. ಇಲ್ಲ ಇಲ್ಲ. ಉಪಯೋಗ ಇಲ್ಲ ಎಂದು ನಾನು ಹೇಳುತ್ತಿಲ್ಲ. ಉಪಯೋಗ ಇದೆ. ಆದರೆ, ನಮಗಲ್ಲ. ನಾವು ಹಿಂದಿ ಕಲಿಯುವುದರಿಂದ ಹಿಂದೀವಾಲರಿಗೆ ಬೇಕಾದಶ್ಟು ಉಪಯೋಗ ಇದೆ! ಹಿಂದಿಯೇತರರು ಹಿಂದಿ ಕಲಿಯುವುದರಿಂದ ಒಂದು ಹನಿ ಬೆವರು ಕೂಡ ಸುರಿಸದೆ ಇಡೀ ದೇಶವೇ ಹಿಂದೀವಾಲರಿಗೆ ಒಂದು ಆಟದ ಬಯಲಾಗುತ್ತದೆ.
      ’ಹೋಗಲಿ ಬಿಡಿ. ಅವರಿಗೆ ಲಾಬ ಆದರೆ ನಾವ್ಯಾಕೆ ಕರುಬಬೇಕು? ನಮಗೇನೂ ನಶ್ಟ ಇಲ್ಲ ತಾನೆ?’ ಎಂದು ಕೆಲವರು ಕೇಳಬಹುದು. ಸತ್ಯವಾಗಿಯೂ ನಶ್ಟ ಇದೆ ಸ್ವಾಮೀ. ಅದಕ್ಕಾಗೇ ನಾವು ತಲೆ ಕೆಡಿಸಿಕೊಳ್ಳಬೇಕಾಗಿರುವುದು. ನಾವು ಹಿಂದಿ ಕಲಿತರೆ ನಮ್ಮ ನುಡಿ ಬರೀ ಮನೆಯ ನುಡಿಯಾಗುತ್ತದೆ. ಹೊರಗೆ ಎಲ್ಲಾ ಕಡೆ ಹಿಂದಿಯೇ ಮೊದಲ ನುಡಿಯಾಗಿ ರಾರಾಜಿಸುತ್ತದೆ. ನನ್ನ ಮಾತಿನಲ್ಲಿ ನಿಮಗೆ ನಂಬಿಕೆ ಬರದಿದ್ದರೆ ಒಮ್ಮೆ ಬಾಂಬೆ ಕಡೆ ನೋಡಿ. ಅಲ್ಲಿ ಹಿಂದಿಯೇ ಮನೆಮಾತಾಗಿರುವ ಅಸಲೀ ಹಿಂದೀವಾಲರು ನಿಜಕ್ಕೂ ಅಲ್ಪಸಂಕ್ಯಾತರು. ಆದರೂ ಬಾಂಬೆಯ ವ್ಯಾವಹಾರಿಕ ನುಡಿ, ಎಲ್ಲರೂ ಬಳಸುವ ಮೊದಲ ನುಡಿ, ಹಿಂದಿಯೇ!
      ಬಾಂಬೆಯ ಚಾಯೆ ಬೆಂಗಳೂರಿನಲ್ಲೂ ಈಗ ಡಾಳಾಗಿ ಕಾಣತೊಡಗಿದೆ. ಹಿಂದೀವಾಲರು ಎಲ್ಲಾ ಕಡೆ ಹಿಂದಿಯಲ್ಲೇ ಮಾತಾಡಿ ಜಯಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿ ವಾಸ ಮಾಡುವುದು ಅವರ ರಾಜ್ಯದಲ್ಲೇ ಇನ್ನೊಂದು ಊರಿನಲ್ಲಿ ವಾಸ ಮಾಡಿದಶ್ಟು ಹಗುರ ಆಗಿದೆ. ಇದು ಹೀಗೇ ಮುಂದುವರಿದರೆ, ಬಾಂಬೆಯ ಹಾಗೇ, ಬೆಂಗಳೂರಿನ ಮೊದಲ ನುಡಿ ಕೂಡ ಹಿಂದಿ ಆಗುವುದರಲ್ಲಿ ಸಂದೇಹವಿಲ್ಲ. ಇದು ಇಶ್ಟಕ್ಕೇ ನಿಲ್ಲುವುದಿಲ್ಲ. ಕಾಲ ಸರಿದಂತೆ, ನಮ್ಮ ಎಲ್ಲ ದೊಡ್ಡ ಊರುಗಳಲ್ಲೂ ಇದೇ ಸನ್ನಿವೇಶ ಏರ‍್ಪಡುತ್ತದೆ. ಹೀಗಾದರೆ ನಶ್ಟವಲ್ಲದೆ ಇನ್ನೇನು? ಕನ್ನಡ ನಾಡಿನಲ್ಲಿ ಎಲ್ಲೆಡೆ ಕನ್ನಡವಲ್ಲದೆ ಇನ್ನಾವುದೋ ಬಾಶೆ ಮೆರೆಯುವಂತಾದರೆ ಅದು ನಶ್ಟವಲ್ಲದೆ ಮತ್ತಿನ್ನೇನು?
      ’ಈ ರೀತಿ ಹಿಂದಿ ಎಲ್ಲ ದೊಡ್ಡ ಊರುಗಳಲ್ಲಿ ಚಾಲ್ತಿಗೆ ಬರುವುದು ಹೇಗೂ ಆಗೇ ಆಗುತ್ತದೆ. ಅದನ್ನು ತಡೆಯಲಿಕ್ಕೆ ಆಗುವುದಿಲ್ಲ’ ಎಂದು ಕೆಲವರು ಹೇಳಬಹುದು. ಅಂತಹವರಿಗೆ ನಾನು ಹೇಳುವುದಿಶ್ಟೆ - ಒಮ್ಮೆ ತಮಿಳುನಾಡಿನ ದೊಡ್ಡ ಊರುಗಳಲ್ಲಿ ಸುತ್ತಾಡಿಕೊಂಡು ಬನ್ನಿ ಎಂದು. ತಮಿಳರು ಹಿಂದಿಯನ್ನು ಕಲಿಯಲಿಕ್ಕೇ ಹೋಗಲಿಲ್ಲ. ಅದರಿಂದ ಅವರಿಗೇನೂ ನಶ್ಟವಾಗಲಿಲ್ಲ. ಬದಲಾಗಿ ಅವರಿಗೆ, ’ಹಿಂದಿ ಬಂದು ವಕ್ಕರಿಸಿಕೊಂಡರೆ ಹೇಗಪ್ಪಾ?’ ಎಂದು ಅಂಜುವ ಅಗತ್ಯವೇ ಇರದ ಒಂದು ಸನ್ನಿವೇಶ ನಿರ‍್ಮಾಣದ ಲಾಬವೇ ಆಯಿತು. ಈ ವಿಶಯದಲ್ಲಿ ಅಹಂಬಾವ ಬದಿಗೊತ್ತಿ ತಮಿಳರಿಂದ ನಾವು ಕಲಿಯಬೇಕು.
    ಒಟ್ಟಾರೆ ಹೇಳಬೇಕೆಂದರೆ, ಹಿಂದೀಪರರ ’ಹಿಂದಿ ಕಲಿತರೆ ನಿಮಗೇ ಲಾಬ’ ಎನ್ನುವ ವಾದವನ್ನು ಒಪ್ಪುವುದೂ ನಮ್ಮ ತಾಯ್ನುಡಿಯನ್ನು ಹಳ್ಳಕ್ಕೆ ತಳ್ಳುವುದೂ, ಎರಡೂ ಒಂದೆ. ಇನ್ನು ಅವರ ಇನ್ನೊಂದು ವಾದ, ’ಹಿಂದಿ ಅದಿಕ್ರುತ ರಾಶ್ಟ್ರಬಾಶೆಯೋ ಅನದಿಕ್ರುತ ರಾಶ್ಟ್ರಬಾಶೆಯೋ ಎನ್ನುವುದು ಮುಕ್ಯವಲ್ಲ’ ಎನ್ನುವುದನ್ನು ಒಪ್ಪುವುದಂತೂ ಕನ್ನಡದಂತಹ ಬಾಶೆಗಳನ್ನು ತಳವೇ ಇಲ್ಲದ ಒಂದು ಪ್ರಪಾತಕ್ಕೆ ತಳ್ಳಿದ ಹಾಗೆ. ಅದರ ಬಗ್ಗೆ ಮುಂದಿನ ಕಂತಿನಲ್ಲಿ ಮಾತಾಡೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಕಾಮೆಂಟ್‌ಗಳಿಲ್ಲ: