ಸೋಮವಾರ, ಮಾರ್ಚ್ 17, 2014

ತಿಪ್ಪಸಂದ್ರದಲ್ಲಿ "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆಯ ಮೊತ್ತಮೊದಲ ಕಾರ‍್ಯಕ್ರಮವನ್ನು ಬಳಗ ನಡೆಸಿತು. ಕಾರ‍್ಯಕ್ರಮದ ಹೆಚ್ಚಿನ ಕೆಲವು ಚಿತ್ರಗಳನ್ನು ವಿವರಣೆಯೊಡನೆ ನಮ್ಮ Facebook  ತಾಣದ Photos ವಿಬಾಗದಲ್ಲಿ ಹಾಕಿದೆ (https://www.facebook.com/groups/kannadigarudravidare/photos/). ಅವನ್ನೂ ನೋಡಲು ಮರೆಯಬೇಡಿ. ಇನ್ನು, ಅರುಹುನಡೆಗೆ ಪ್ರೇರಣೆ ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ತಾಣದ ಅರುಹುನಡೆ ಪುಟವನ್ನು ನೋಡಿ.

ಮೊದಲ ಚಿತ್ರದಲ್ಲಿರುವವರು, ಎಡದಿಂದ ಬಲಕ್ಕೆ, ಸುರೇಶ್, ಬಾಶಾ ಮತ್ತು ನಾನು (ಎಚ್. ಎಸ್. ರಾಜ್)














ನಾನು ಮತ್ತು ಗೆಳೆಯರಾದ ಸುರೇಶ್, ಬಾಶಾ, ನವಿಲ್ - ನಾವು ನಾಲ್ವರೂ ನಮ್ಮ ಓಮ್ನಿ ವ್ಯಾನಿನಲ್ಲಿ ಕಾರ‍್ಯಕ್ರಮದ ಸರಕನ್ನೆಲ್ಲಾ ತುಂಬಿಕೊಂಡು ಮದ್ಯಾಹ್ನ ಬೆಂಗಳೂರಿಂದ ಹೊರಟು ಸುಮಾರು ಮೂರು ಗಂಟೆಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯನ್ನು ತಲುಪಿದೆವು.
      ತಿಪ್ಪಸಂದ್ರದಲ್ಲಿ ಸರ‍್ಕಾರ ಕನ್ನಡಿಗರ ತೆರಿಗೆ ಹಣದಲ್ಲಿ ದೊಡ್ದದೊಂದು ಸಂಸ್ಕ್ರುತ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಕಟ್ಟಲಿದೆ. ನಮ್ಮ ಮಕ್ಕಳಿಗೆ ಬಾಳ್ತೆ ಇರುವ ಕನ್ನಡ ಇಂಗ್ಲೀಶುಗಳನ್ನು ಹೇಳಿಕೊಡುವುದನ್ನು ಬಿಟ್ಟು ಉಪಯೋಗವಿರದ ಸಂಸ್ಕ್ರುತಕ್ಕೆ ಸವಲತ್ತುಗಳನ್ನು ಪೋಲು ಮಾಡುವುದು ತಪ್ಪು ಎಂಬುದು ನಮ್ಮ ಅನಿಸಿಕೆ. ಆದ್ದರಿಂದ, ತಿಪ್ಪಸಂದ್ರದಲ್ಲೇ ನಮ್ಮ ಅರುಹುನಡೆಯನ್ನು ಸಾಂಕೇತಿಕ ಪ್ರತಿಬಟನೆ ಎಂಬಂತೆ ಶುರು ಮಾಡಿದೆವು.
      ನಮ್ಮ ಕಾರ‍್ಯಕ್ರಮ ನಡೆಸಿಕೊಡುವುದರ ಬಗ್ಗೆ ತಿಪ್ಪಸಂದ್ರದ ಪಂಚಾಯತಿಯವರಿಗೆ ನಾವು ಮೊದಲೇ ತಿಳಿಸಿದ್ದೆವು. ಊರನ್ನು ತಲುಪಿದ ಮೇಲೆ, ಮೊದಲು "ಇಂಗ್ಲಿಶ್ ಕಲಿಸಿ, ಹಿಂದಿ ಕಳಿಸಿ" ಎಂದು ಸಾರುವ ಅರುಹುನಡೆಯ ನಮ್ಮ ಬ್ಯಾನರನ್ನು ಹಿಡಿದು ಊರಿನ ಮುಕ್ಯ ಬೀದಿಗಳಲ್ಲಿ ಕಾರ‍್ಯಕ್ರಮಕ್ಕೆ ಜನರನ್ನು ಮೆಗಾಫೋನಿನ ಮೂಲಕ ಕರೆಯುತ್ತಾ ಒಮ್ಮೆ ಹೋಗಿ ಬಂದೆವು. ಬಂದೊಡನೆ, ಪಂಚಾಯತಿ ಕಚೇರಿಯ ಎದುರಿರುವ ನಾಗರಕಟ್ಟೆಯ ಬದಿ ನಮ್ಮ ಸವುಂಡ್ ಸಿಸ್ಟಮ್ಮನ್ನು ಅಣಿಗೊಳಿಸಿದೆವು. ಹಾಗೇ ಬ್ಯಾನರನ್ನೂ ಕಟ್ಟಿದೆವು. ಕೊಂಚ ಹೊತ್ತಿನಲ್ಲಿ ಮಂದಿ ಬರಲು ತೊಡಗಿದರು.
      ’ದೊಡ್ಡ ಊರುಗಳಲ್ಲಿ ಜನಕ್ಕೆ ಕಾರ‍್ಯಕ್ರಮಗಳಲ್ಲಿ ಆಸಕ್ತಿ ಇರುವುದಿಲ್ಲ. ಆದರೆ, ಚಿಕ್ಕ ಊರುಗಳಲ್ಲಿ ಹಾಗಲ್ಲ. ಕುತೂಹಲಕ್ಕಾಗಿಯಾದರೂ ಕಾರ‍್ಯಕ್ರಮಗಳಿಗೆ ಬರುತ್ತಾರೆ’ ಎಂಬುದು ನಮ್ಮ ಎಣಿಕೆಯಾಗಿತ್ತು. ನಮ್ಮ ಎಣಿಕೆ ಪೂರ್‌ತಿ ಸರಿಯಲ್ಲ ಎಂಬುದು ಬೇಗನೇ ಗೊತ್ತಾಯಿತು! ಸುಮಾರು ಅರುವತ್ತೋ ಎಪ್ಪತ್ತೋ ಮಂದಿ ಬಂದಿದ್ದರು. ಅದು ಅಲ್ಲಿನ ಒಟ್ಟು ವಯಸ್ಕ ಜನಸಂಕ್ಯೆಯ ಶೇಕಡಾ ಹತ್ತರಶ್ಟು ಮಾತ್ರ. ಹೆಂಗಸರಂತೂ ಬೆರಳೆಣಿಕೆಯಶ್ಟಟಿದ್ದರು, ಅಶ್ಟೇ. ಬಹುಮಂದಿ ಹೆಂಗಸರು ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮುಂತಾದ ಮನೆ ಕೆಲಸಗಳನ್ನು ಮಾಡಿಕೊಂಡಿದ್ದರು. ಯುವಕರೂ ಹೆಚ್ಚಾಗಿ ಕಾಣಲಿಲ್ಲ. ಬಂದವರಲ್ಲಿ ಹೆಚ್ಚಿನವರು ನಡು ವಯಸ್ಸಿನವರಾಗಿದ್ದರು.
      ನಾವು ಕುರ್‌ಚಿಗಳ ಏರ‍್ಪಾಡು ಮಾಡಿರಲಿಲ್ಲ. ಹಾಗಾಗಿ, ಬಂದವರೆಲ್ಲಾ ಎಲ್ಲೆಲ್ಲಿ ಕಟ್ಟೆ ಕಲ್ಲುಗಳಿದ್ದವೋ, ಅಲ್ಲಲ್ಲಿ ಕುಳಿತುಕೊಂಡು ಬಾಶಣವನ್ನು ಕೇಳಿದರು. ಬಹಳಶ್ಟು ಜನ ಅಂಗಡಿಗಳ ಮುಂದಿನ ಬೆಂಚುಗಳ ಮೇಲೆ ಕುಳಿತಿದ್ದರು. ಗೆಳೆಯ ಸುರೇಶ್ ಬಹುದೂರಕ್ಕೆ ಕೇಳಿಸಲೆಂದೇ ಉದ್ದೇಶಿಸಿ ತಮ್ಮ ಕಯ್ಗಳಿಂದಲೇ ವಿಶೇಶವಾಗಿ ಮಾಡಿದ್ದ ನಮ್ಮ ಎರಡೂ ಸ್ಪೀಕರುಗಳೂ ಈ ಸಂದರ‍್ಬದಲ್ಲಿ ತುಂಬು ಉಪಯೋಗಕ್ಕೆ ಬಂದವು. ಸುರೇಶರ ಹಾಗೂ ಈ ಕೆಲಸದಲ್ಲಿ ನೆರವಾದ ಅವರ ಅಣ್ಣನವರ ಕವುಶಲ್ಯಕ್ಕೆ ನಾನು ರುಣಿ.
      ’ಮಕ್ಕಳ ಮೊದಲ ಕಲಿಕೆ ಕನ್ನಡದಲ್ಲೇ ಆಗಬೇಕು. ಆದರೆ, ಮೊದಲಿಂದಲೇ ಅವರಿಗೆ ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಹೇಳಿಕೊಡಬೇಕು. ಹಾಗೆ ಹೇಳಿಕೊಡುವ ಸವುಲಬ್ಯ ಆಗಲೇ ಇದೆ. ಅದನ್ನು ಸರ‍್ಕಾರ ಎಲ್ಲಾ ಕನ್ನಡ ಮಾದ್ಯಮ ಶಾಲೆಗಳಲ್ಲಿ ಜಾರಿಗೆ ತರಬೇಕು. ಉಪಯೋಗಕ್ಕೆ ಬಾರದ ಹಿಂದೀ ಕಲಿಸುವುದರ ಬದಲು, ಅದೇ ಸಮಯಯವನ್ನು ಇಂಗ್ಲೀಶ್ ಕಲಿಸುವುದಕ್ಕೆ ಬಳಸಬೇಕು’ - ಇದು ನನ್ನ ಬಾಶಣದ ತಿರುಳು. ಬಾಶಣ ಅರ‍್ದ ಗಂಟೆ ಮೀರಲಿಲ್ಲ. ಬಾಶಣದ ಬಳಿಕ ಒಂದಿಬ್ಬರು ಮೂವರು ಕೇಳಿದ ಪ್ರಶ್ನೆಗಳಿಗೆ ತಕ್ಕ ಮಾರು ಹೇಳಿದೆ. ಅಲ್ಲಿಗೆ ನಮ್ಮ ಕಾರ‍್ಯಕ್ರಮ ಮುಗಿಯಿತು.
      ವಿಶೇಶ ಸಂಗತಿಗಳೇ ನಡೆಯದಂತೆ ಸಪ್ಪೆಯಾಗಿ ನಮ್ಮ ಕಾರ‍್ಯಕ್ರಮವೇನೂ ಮುಗಿದು ಹೋಗಲಿಲ್ಲ. ಕಾರ‍್ಯಕ್ರಮದ ಮುನ್ನ, "ಹಿಂದಿ ಕಳಿಸಿ" ಎಂಬ ನಮ್ಮ ಬ್ಯಾನರಿನ ಸಂದೇಶವನ್ನು ತಪ್ಪಾಗಿ ಅರ‍್ತ ಮಾಡಿಕೊಂಡ ಒಬ್ಬ ಹೆಣ್ಣುಮಗಳು, ’ಬೆಂಗ್ಳೂರ‍್ನಾಗೇ ಆಪಾಟಿ ಇಂದಿ ಜನ್‍ಗುಳು ತುಂಬ್ಕಂಡವ್ರೆ. ಅವ್ರುನ್ ಮದ್ಲ್ ಕಳ್ಸಿ, ಆಮೇಲ್ ಇಲ್ಲಿಗ್ ಬರ್ರಿ’ ಎಂದು ನಮಗೆ ತಾಕೀತು ಮಾಡಿದಳು! ಕಾರ‍್ಯಕ್ರಮದ ಬಳಿಕ, ಹಿಂದಿಯನ್ನು ’ಮಾತ್ರುಬಾಶೆ’ಎಂದು ತಪ್ಪಾಗಿ ತಿಳಿದುಕೊಂಡಿದ್ದ ಒಬ್ಬರು, ’ನಮ್ಮ ಮಾತ್ರುಬಾಶೆಯನ್ನೇ ಕಳಿಸಿ ಅಂತಿದ್ದೀರಲ್ಲಾ, ಸರೀನಾ?’ ಎಂದು ಕಳಕಳಿಯನ್ನು ನಟಿಸಿ ಆಕ್ಶೇಪಿಸಿದರು. ಅದಕ್ಕೆ ಅವರ ಒಡನಿದ್ದವರೇ ಅವರ ತಪ್ಪನ್ನು ತೋರಿಸಿ, ’ನಿನ್ನ ಪ್ರಶ್ನೆಗೆ ಅರ‍್ತವೇ ಇಲ್ಲ’ ಎಂದು ಹೇಳಿ ಅವರನ್ನು ಸುಮ್ಮನಿರಿಸಿದರು. ಸುತ್ತಮುತ್ತಲಿದ್ದವರಿಗೆ ಅವರ ಆ ಪ್ರಶ್ನೆಯಿಂದ ತುಂಬಾ ನಗು ಬಂತು. ಇನ್ನು ’ಕನ್ನಡಿಗರೂ ದ್ರಾವಿಡರೆ’ ಎನ್ನುವುದು ಕೆಲವರಿಗೆ ತಿಳಿದ ಸಂಗತಿಯಾಗಿದ್ದರೆ, ಹಲವರಿಗೆ ಹೊಸ ಸುದ್ದಿಯಂತಿತ್ತು. ಅರಸು ಎಂಬ ಸ್ತಳೀಯ ಹಿರಿಯಾಳೊಬ್ಬರು ’ದಕ್ಶಿಣ ಬಾರತದವರೆಲ್ಲಾ ದ್ರಾವಿಡರೇ’ ಎಂದು ಕಾರ‍್ಯಕ್ರಮದ ಬಳಿಕ ಜೊತೆಯಲ್ಲಿದ್ದವರಿಗೆ ಬಿಡಿಸಿ ಹೇಳಿದರು.
      ಬೆಂಗಳೂರಿಗೆ ನಾವು ಮರಳಿದಾಗ ಆಗ ತಾನೇ ಕತ್ತಲಾಗಿತ್ತು. ಒಟ್ಟಿನಲ್ಲಿ, ಕಾರ‍್ಯಕ್ರಮ ನಮಗೆ ತ್ರುಪ್ತಿ ಕೊಟ್ಟಿತ್ತು. ಬರೀ ದೊಡ್ಡ ಊರುಗಳಲ್ಲಿ ಕಾರ‍್ಯಕ್ರಮಗಳನ್ನು ನಡೆಸಿದರೆ ಸಾಲದು. ಸಣ್ಣ ಊರುಗಳಿಗೂ ಸಂದೇಶ ತಲುಪಬೇಕು. ಮೊದಮೊದಲು, ಬೆಂಗಳೂರಿನ ಸುತ್ತಮುತ್ತಲ ಊರುಗಳಲ್ಲಿ ನಮ್ಮ ಅರುಹುನಡೆ ಕಾರ‍್ಯಕ್ರಮಗಳನ್ನು ನಡೆಸಬೇಕೆಂಬುದು ನಮ್ಮ ತೀರ‍್ಮಾನ. ಈ ಕಾರ‍್ಯಕ್ರಮಗಳಲ್ಲಿ ನೀವೂ ಪಾಲ್ಗೊಳ್ಳಬೇಕು ಎಂಬುದು ನಮ್ಮ ಆಸೆ. ಮುಂದಿನ ಕಾರ‍್ಯಕ್ರಮದ ವಿವರಗಳಿಗೆ ಈ ತಾಣವನ್ನು ದಯವಿಟ್ಟು ಆಗಾಗ್ಗೆ ಗಮನಿಸುತ್ತಿರಿ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್