ಮಂಗಳವಾರ, ನವೆಂಬರ್ 27, 2012

ಕನ್ನಡಿಗರು ಕೋತಿಗಳೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಕೆಲ ದಿನಗಳ ಹಿಂದೆ ಹಿರಿಯ ರಾಜಕಾರಿಣಿ ರಾಮ್ ಜೇಟ್‍ಮಲಾನಿ ಅವರು ’ರಾಮಾಯಣದ ಶ್ರೀರಾಮ ಒಬ್ಬ ಕೆಟ್ಟ ಗಂಡ’ ಎಂದು ನುಡಿದು ತಮ್ಮ ಪಕ್ಶ ಬೀಜೇಪಿಗೆ ಇನ್ನಿಲ್ಲದ ಮುಜುಗರ ಉಂಟುಮಾಡಿದರು! ಶ್ರೀರಾಮನನ್ನೇ ಬಂಡವಾಳ ಮಾಡಿಕೊಂಡಿರುವ ಬೀಜೇಪಿಗೆ ಇಂತಹ ಕಸಿವಿಸಿ ಆಗಬಾರದಿತ್ತು, ಪಾಪ!
      ಜೇಟ್‍ಮಲಾನಿಯವರ ಅನಿಸಿಕೆಗೆ ಸಹಜವಾಗೇ ದೇಶದ ತುಂಬೆಲ್ಲ ಕೂಡಲೆ ಪ್ರತಿಕ್ರಿಯೆಗಳು ಬಂದವು. ನಮ್ಮ ಟೀವಿ ಕಾಲುವೆಗಳಲ್ಲೂ ಈ ವಿಶಯದ ಮೇಲೆ ಕೆಲ ಬಿಸಿ ಚರ‍್ಚೆಗಳು ನಡೆದವು. ಕೇಸರಿಪರ ಕಟ್ಟಾಳುಗಳು, ’ರಾಮ ತ್ಯಾಗಮಯಿ, ಆದರ‍್ಶ ದೊರೆ, ಆದರ್‍ಶ ಪತಿ. ಜೇಟ್‍ಮಲಾನಿಯವರು ಎಲ್ಲೋ ಬಾಯ್ತಪ್ಪಿ ಏನೋ ಹೇಳಿದ್ದಾರೆ’ ಎಂದು ತಿಪ್ಪೆ ಸಾರಿಸಿಕೊಂಡರು. ’ಇವತ್ತೇನಾದ್ರು ರಾಮ ತುಂಬು ಬಸಿರಿ ಸೀತೇನ ಕಾಡಿಗೆ ಕಳಿಸಿದ್ದರೆ ಜಯ್ಲಿಗೆ ಹೋಗುತ್ತಿದ್ದ’ ಎನ್ನುವ ದಾಟಿಯಲ್ಲಿ ಎದುರುವಾದಿಗಳು ಕೇಸರಿಪರದವರಿಗೆ ವಿಕ್ರುತ ಹಿಗ್ಗಿನಿಂದ ಮತ್ತೆ ಮತ್ತೆ ತೀಡಿದರು.
      ’ರಾಮ ಒಳ್ಳೆ ಗಂಡನೋ ಕೆಟ್ಟ ಗಂಡನೋ, ಅದರ ತಂಟೆ ನಮಗೆ ಯಾಕೆ ಬಿಡಿ. ಅದೊಂದು ಉಪಯೋಗಕ್ಕೆ ಬಾರದ ವಾದವಿವಾದ’, ಎನ್ನುವುದು ಈ ವಿಶಯದಲ್ಲಿ ನನ್ನ ವಯ್ಯಕ್ತಿಕ ಅನಿಸಿಕೆ. ಹಾಗಾಗಿ, ಟೀವೀಯಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು ’ಇದೂ ಒಂದು ಮನರಂಜನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಹಗುರಾಗಿ ನೋಡುತ್ತಿದ್ದೆ. ಆಗ, ವಾದವಿವಾದದ ನಡುವೆ ಒಬ್ಬರು ಹೇಳಿದ ಮಾತೊಂದು ನನ್ನ ಗಮನ ಸೆಳೆಯಿತು. ರಾಮಾಯಣದಲ್ಲಿ ಕನ್ನಡಿಗರನ್ನು ’ವಾನರರು’ ಎಂದು ಕರೆದು ಅವಹೇಳನ ಮಾಡಲಾಗಿದೆಯಂತೆ - ಇದು ಅವರು ಹೇಳಿದ್ದು. ಇದನ್ನು ಕೇಳಿದ ಕೂಡಲೆ ನನ್ನ ನೆನಪಿನ ಅಂಗಳದಲ್ಲಿ ಕೊಂಚ ಸಂಚಲನ ಉಂಟಾಯಿತು. ಈ ಅಬಿಪ್ರಾಯವನ್ನು ಬಹು ಹಿಂದಿನಿಂದಲೂ ನಾನು ಆಗಾಗ್ಗೆ ಕೆಲವರ ಬಾಯಲ್ಲಿ ಕೇಳಿದ್ದೆ. ಕೇಳಿದಾಗಲೆಲ್ಲ ಅದರ ಬಗ್ಗೆ ನನಗೆ ಏನನ್ನಿಸಿತ್ತು ಎಂಬುದನ್ನು ಕೊಂಚ ಮೆಲುಕು ಹಾಕಿದೆ.
      ರಾಮನಿಗೆ ಅವನ ಬೆಂಬಲಕ್ಕೆ ನಿಂತ ’ವಾನರರು’ ಸಿಕ್ಕಿದ್ದು ದಕ್ಶಿಣದಲ್ಲೇ. ಅದರ ಮೇಲೆ, ’... ಆ ಜಲದಿಯನೆ ಜಿಗಿದ ಹನುಮ ಪುಟ್ಟಿದ ನಾಡು... ’ ಎಂದು ಬೇರೆ ನಾವು ಹೆಮ್ಮೆಯಿಂದ ನಮ್ಮ ನಾಡಿನ ಬಗ್ಗೆ ಹೇಳಿಕೊಳ್ಳುತ್ತೇವೆ. ಆದ್ದರಿಂದ, ರಾಮಾಯಣದ ವಾನರರು ಕನ್ನಡ ನಾಡಿನವರು ಎನ್ನುವುದರಲ್ಲಿ ಅನುಮಾನವಿಲ್ಲ. ಆಗಿನ ಕಾಲದಲ್ಲಿ ನಮ್ಮ ನಾಡಿನಲ್ಲಿ ಬರೀ ವಾನರರು ಮಾತ್ರ ಇದ್ದರೋ, ಇಲ್ಲ ಅವರ ಜೊತೆ ಬೇರೆ ಸಾಮಾನ್ಯ ಮನುಶ್ಯರೂ ಇದ್ದರೋ, ಇದ್ದರೂ ಆವರ ಬಗ್ಗೆ ರಾಮಾಯಣದಲ್ಲಿ ಏನಾದರೂ ಪ್ರಸ್ತಾಪವಾಗಿದೆಯೋ ಎಂಬುದು ತಿಳಿದಿಲ್ಲ. ಇದರ ಬಗ್ಗೆ ನಮಗೆ ತಿಳಿದವರೇ ಹೇಳಬೇಕು.
      ಅದೇನಾದರೂ ಇರಲಿ. ’ರಾಮಾಯಣದ ವಾನರರು ನಿಜವಾಗಿಯೂ ಕೋತಿಗಳಲ್ಲ. ಮನುಶ್ಯರೇ. ಅದರಲ್ಲೂ ಕನ್ನಡಿಗರು. ಬಹುತೇಕ ಕನ್ನಡಿಗರು ಕಪ್ಪು ಮಯ್ಬಣ್ಣದವರಾದದ್ದರಿಂದ, ಬಿಳಿ ಚಾಯೆಯ ಉತ್ತರದ ಆರ‍್ಯರು ಕರಿ ಚಾಯೆಯ ದಕ್ಶಿಣದ ದ್ರಾವಿಡರನ್ನು ತುಚ್ಚವಾಗಿ ಕಾಣುವ ಉದ್ದೇಶದಿಂದ ಅವರನ್ನು ವಾನರರಿಗೆ ಹೋಲಿಸಿದ್ದಾರೆ’ - ಇದು ಒಟ್ಟಾರೆ ದೂರು. ಈ ದೂರನ್ನು ದಕ್ಶಿಣದ ಕೆಲವರು ಆಗ್ಗಾಗ್ಗೆ ಮಾಡುತ್ತಾ ಬಂದಿದ್ದಾರೆ. ಈ ದೂರಿನಲ್ಲಿ ಏನಾದರು ಹುರುಳಿದೆಯೆ? ಇದು ನಾವು ಕೇಳಬೇಕಾದ ಕೇಳ್ಕೆ.
      ವಯ್ಯಕ್ತಿಕವಾಗಿ ನನಗನ್ನಿಸುವುದು, ’ಈ ದೂರಿನಲ್ಲಿ ಹುರುಳಿಲ್ಲ’ ಎಂದೇ. ಏಕೆಂದರೆ, ರಾಮಾಯಣದಲ್ಲಿ ಹನುಮಂತ ಎಂಟ್ರಿ ಕೊಟ್ಟ ಕ್ಶಣದಿಂದಲೇ ಅದರ ಚಹರೆಯೇ ಬದಲಾಗಿಬಿಡುತ್ತದೆ. ರಾವಣ ಅಳಿಯುವವರೆಗೆ ಹನುಮಂತನೇ ಕತಾನಾಯಕನಾಗುತ್ತಾನೆ. ವಾನರರದೇ ಪ್ರದಾನ ಪಾತ್ರವಾಗುತ್ತದೆ. ಹೀಗೆ, ಒಂದು ಕತೆಯಲ್ಲಿ ಒಂದು ಸಮುದಾಯವನ್ನು ಕೀಳೆಂದು ಗುರುತಿಸಿ, ಅದೇ ಕತೆಯಲ್ಲಿ ಅದೇ ಸಮುದಾಯವನ್ನು ಏಕಕಾಲಕ್ಕೆ ವಯ್ಬವೀಕರಿಸುವುದು ಅಸಮಂಜಸ ಎನಿಸುವುದಿಲ್ಲವೆ? ರಾಮಾಯಣದಲ್ಲಿ ಹೇರಳವಾಗಿ ಕಾಲ್ಪನಿಕ ಅಂಶಗಳು ಸೇರಿಕೊಂಡಿವೆ. ಅವುಗಳಲ್ಲಿ ’ವಾನರರ’ ಸಂಗತಿಯೂ ಒಂದು ಕಾಲ್ಪನಿಕ ಅಂಶ ಎನಿಸುತ್ತದೆ ನನಗೆ. ಅಶ್ಟಕ್ಕೂ ರಾಮಾಯಣಕ್ಕೆ ಒಂದೇ ಆವ್ರುತ್ತಿ ಇಲ್ಲ. ಹಲವಾರು ಬೇರೆಬೇರೆ ರಾಮಾಯಣದ ಆವ್ರುತ್ತಿಗಳಿವೆ. ರಾಮಾಯಣದ ಕೆಲವು ಬಗೆಗಳಲ್ಲಿ ವಾನರರ ಪ್ರಸ್ತಾಪವೇ ಇಲ್ಲ. ಉದಾಹರಣೆಗೆ, ಹಳಗನ್ನಡದ ಕವಿ ನಾಗಚಂದ್ರನ ರಾಮಾಯಣದಲ್ಲಿ ಹನುಮಂತ ಕೋತಿಯೂ ಅಲ್ಲ, ರಾವಣ ರಾಕ್ಶಸನೂ ಅಲ್ಲ. ಅಶ್ಟೇ ಏಕೆ, ಅದರಲ್ಲಿ ಅವರಿಬ್ಬರೂ ನಂಟರು ಬೇರೆ! ಹಾಗಾಗಿ, ಬರಿಯ ಕಲ್ಪನೆಯ ಒಂದು ಅಂಶಕ್ಕೆ ವಿಪರೀತ ಅರ‍್ತ ಕೊಟ್ಟು, ನಾವು ಕನ್ನಡಿಗರು ರಾಮಾಯಣದ ಬಗ್ಗೆ ಅಲರ‍್ಜಿ ಬರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ನನಗೆ ಅನ್ನಿಸುತ್ತದೆ.
      ಹಾಗೆ ನೋಡಿದರೆ, ಉತ್ತರದವರು ನಮ್ಮನ್ನು ರಾಮಾಯಣದಲ್ಲಿ ಕೀಳಾಗಿ ಕಂಡಿದ್ದಾರಾ ಎನ್ನುವುದಕ್ಕಿಂತ ಅವರು ಈಗಲೂ ಹಾಗೇ ಮಾಡುತ್ತಿದ್ದಾರಾ ಎನ್ನುವುದು ಮುಕ್ಯ. ಸತ್ಯವಾಗಿಯೂ ಹಾಗೇ ಮಾಡುತ್ತಿದ್ದಾರೆ! ಇದೇ ಮುಕ್ಯ. ಜೊತೆಗೆ, ಇದು ಎಲ್ಲರಿಗೂ ಗೊತ್ತಿರುವ ವಿಶಯ ಕೂಡ. ಬಡಗರು, ನಾವು ತೆಂಕಣರನ್ನು ’ಮದ್ರಾಸಿ’ ಎಂಬ ಒಂದೇ ಪದದಿಂದ, ನಾಯಿಕುನ್ನಿಯನ್ನು ಎತ್ತಿ ಪಕ್ಕಕ್ಕೆ ಹಾಕುವ ಹಾಗೆ ಹಾಕಿಬಿಡುತ್ತಾರೆ. ತೆಂಕಣರಲ್ಲಿ ಕನ್ನಡಿಗರು, ತಮಿಳರು, ತೆಲುಗರು ಮುಂತಾದ ಬೇರೆಬೇರೆ ಸಮುದಾಯಗಳಿವೆ ಎನ್ನುವುದು ಅವರಿಗೆ ಮುಕ್ಯವಲ್ಲ. ಅವರಿಗೆ ಅದು ಬೇಕಾಗೂ ಇಲ್ಲ. ಅವರು ಮದ್ರಾಸಿ ಎಂದು ಹೇಳುವಾಗ ಉಚ್ಚಾರಣೆಯ ದಾಟಿಯನ್ನು ಗಮನಿಸಬೇಕು. ದಕ್ಶಿಣದವರ ಬಗ್ಗೆ ಅವರಿಗೆ ಇರುವ ’ಆದರ’ ಅದರಲ್ಲಿ ಹಾಗೇ ತೊಟ್ಟಿಕ್ಕುತ್ತದೆ!
      ಉತ್ತರದ ಜನಸಾಮಾನ್ಯರು ಹಾಳಾಗಿ ಹೋಗಲಿ ಬಿಡಿ. ಕವಿವರ‍್ಯ ಟಾಗೋರರ ’ಜನಗಣಮನ’ ಗೀತೆಯಲ್ಲೂ ದಕ್ಶಿಣದವರಿಗೆ ತಕ್ಕ ಗೌರವ ಸಿಕ್ಕಿಲ್ಲ. ಪಂಜಾಬ ಸಿಂದ ಗುಜರಾತ ಮರಾಟ ’ದ್ರಾವಿಡ’ ಉತ್ಕಲ ವಂಗ! ತೆಂಕಣಿಗರಿಗೆಲ್ಲ ದ್ರಾವಿಡ ಎಂಬ ಒಂದೇ ಹೆಸರಿನ ಹಣೆಪಟ್ಟಿ! ಟಾಗೋರರಿಗೆ ದಕ್ಶಿಣದವರನ್ನು ಕಡೆಗಣಿಸುವ ಉದ್ದೇಶ ಇದ್ದಿರಲಿಕ್ಕಿಲ್ಲ. ಅನುಕೂಲಕ್ಕಾಗಿ ಎಲ್ಲರನ್ನೂ ದ್ರಾವಿಡ ಎಂದು ಒಟ್ಟುಸೇರಿಸಿ ಅವರು ಕರೆದಿರಬಹುದು. ಆದರೂ, ಸಂಸ್ಕ್ರುತಜನ್ಯ ಬಾಶೆಗಳನ್ನಾಡುವವರನ್ನೆಲ್ಲ ಬಿಡಿಬಿಡಿಯಾಗಿ ಗುರುತಿಸಿ, ದ್ರಾವಿಡ ನುಡಿಗಳನ್ನಾಡುವವರನ್ನು ಮಾತ್ರ ಒಟ್ಟಾರೆಯಾಗಿ ದ್ರಾವಿಡರು ಎಂದು ಕರೆದಿರುವುದು ಸರಿಯಲ್ಲ. ದೇಶದ ಕೆಲವು ಸಮುದಾಯಗಳನ್ನಂತೂ ಟಾಗೋರರು ಸಂಪೂರ‍್ಣವಾಗಿ ಕಯ್ಬಿಟ್ಟಿದ್ದಾರೆ. ಆ ಸಮುದಾಯಗಳಿಗೆ ಹೋಲಿಸಿದರೆ ನಮ್ಮ ಪಾಡು ಉತ್ತಮ ಎನ್ನಬಹುದು.
      ದಕ್ಶಿಣದಲ್ಲಿ ನಮ್ಮನ್ನು ನಾವು, ’ನಾವು ಕನ್ನಡಿಗರು, ನಾವು ತಮಿಳರು, ನಾವು ತೆಲುಗರು’, ಹೀಗೆ ಸಹಜವಾಗೇ ಬೇರೆಬೇರೆಯಾಗಿ ಗುರುತಿಸಿಕೊಳ್ಳುತ್ತೇವೆ. ಆದ್ದರಿಂದ, ಯಾರಾದರೂ ನಮ್ಮನ್ನು ಮದ್ರಾಸಿ ಎಂದೋ, ದ್ರಾವಿಡ ಎಂದೋ ಇಲ್ಲ ಸವ್‍ತಿ ಎಂದೋ ಒಂದೇ ಹೆಸರಿನಿಂದ ಕರೆದರೆ ನಮಗೆ ಬೇಸರವಾಗುವುದು ಸ್ವಾಬಾವಿಕ (ಅಂದ ಹಾಗೆ, ಈಗಿನ ತಲೆಮಾರಿನ ನಮ್ಮ ಹುಡುಗರು ’ನಾರ‍್ತಿ’ ಎಂದು ಉತ್ತರದವರನ್ನು ಅವರ ದಾಟಿಯಲ್ಲೇ ಕರೆಯುತ್ತಾರೆ. ಆದರೆ, ಅದು ಬೇರೆ ಮಾತು). ಹೀಗೆ ಸುಮ್ಮನೆ ಬೇಸರಪಟ್ಟುಕೊಳ್ಳುವ ಬದಲು, ಉತ್ತರದವರು ನಮ್ಮನ್ನು ಮದ್ರಾಸಿ ಎಂದು ಕೀಳಾಗಿ ಕರೆಯುವುದರ ಹಿನ್ನೆಲೆ ಏನು ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ, ಅದರ ಬಗ್ಗೆ ತಕ್ಕ ದೋರಣೆಯನ್ನು ನಾವು ಬೆಳೆಸಿಕೊಳ್ಳುವುದು ಒಳ್ಳೆಯದು.
      ಉತ್ತರದವರು ದಕ್ಶಿಣದವರನ್ನು ಕೀಳಾಗಿ ಕಾಣುವುದು ನಿನ್ನೆ ಮೊನ್ನೆಯ ಚಾಳಿಯಲ್ಲ. ತುಂಬಾ ಹಿಂದಿನಿಂದಲೂ ಅವರು ಹೀಗೇ ಮಾಡುತ್ತಾ ಬಂದಿದ್ದಾರೆ. ’ದಕ್ಶಿಣದವರು ದಡ್ಡರು’ ಎಂಬ ಉಕ್ತಿಯೇ ಇದೆ ಸಂಸ್ಕ್ರುತದಲ್ಲಿ. ಆದ್ದರಿಂದ, ಉತ್ತರದವರ ಮೇಲೆ ಸುಮ್ಮನೆ ಕೆರಳುವ ಬದಲು, ಅವರ ಮೇಲೆ ಉಂಟಾಗುವ ಮುನಿಸನ್ನು ನಾವು ಸರಿಯಾದ ನಿಟ್ಟಿನಲ್ಲಿ ಹರಿಸಬೇಕು. ನಮ್ಮ ಒಳಿತಿಗಾಗಿ ಆ ಸಿಟ್ಟನ್ನು ಬಳಸಿಕೊಳ್ಳಬೇಕು. ’ನಮ್ಮನ್ನೆಲ್ಲ ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದ ಕಡೆಗಣಿಸುತ್ತೀರಿ ತಾನೆ? ನಾವೂ ಅಶ್ಟೆ. ನಿಮ್ಮ ಜೊತೆ ವ್ಯವಹರಿಸಬೇಕಾಗಿ ಬಂದಾಗಲೆಲ್ಲ ನಾವು, ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದಲೇ ಒಗ್ಗಟ್ಟಿನಿಂದಲೇ ವ್ಯವಹರಿಸುತ್ತೇವೆ’ ಎನ್ನುವ ಚಲವನ್ನು ನಾವು ತೋರಿಸಬೇಕು. ’ರಾಶ್ಟ್ರಗೀತೆಯಲ್ಲಿ ನಮ್ಮನ್ನೆಲ್ಲ ದ್ರಾವಿಡರು ಎಂದು ಒಟ್ಟಾಗಿ ಕರೆದಿದ್ದೀರಿ ತಾನೆ? ರಾಶ್ಟ್ರಗೀತೆಯಲ್ಲಿರುವುದೇ ಸರಿ. ನಾವೆಲ್ಲ ದ್ರಾವಿಡರೆ. ನಿಮ್ಮ ಕಿರುಕುಳಗಳನ್ನು ಎದುರಿಸುವ ಸನ್ನಿವೇಶ ಬಂದಾಗಲೆಲ್ಲ ನಾವೆಲ್ಲ ಒಂದೇ’ ಎಂದು ದ್ರಾವಿಡೇತರರಿಗೆ ಮನದಟ್ಟಾಗುವ ಹಾಗೆ ನಾವು ನಡೆದುಕೊಳ್ಳಬೇಕು.
      ಹೀಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದರಲ್ಲಿ ಮಾರ‍್ಪಾಟನ್ನು ತಂದುಕೊಳ್ಳಬೇಕು. ಆದರೆ, ಇಂತಹ ಕಣ್ಣೋಲಿನ ಮಾರ‍್ಪಾಟು ಬೇಕಾಗಿರುವುದು ಬರೀ ಸೇಡು ತೀರಿಸಿಕೊಳ್ಳುವುದಕ್ಕೆಂದಲ್ಲ. ಇಂತಹ ಮಾರ‍್ಪಾಟು ನಿಜಕ್ಕೂ ಬೇಕಾಗಿರುವುದು ಉತ್ತರದಿಂದ ತಡೆಯಿಲ್ಲದೆ ನಮ್ಮೆಡೆಗೆ ಬರುವ ಕಿರುಕುಳಗಳನ್ನು ಸಮರ‍್ತವಾಗಿ ಎದುರಿಸುವುದಕ್ಕಾಗಿ. ಏಕೆಂದರೆ, ಉತ್ತರದಿಂದ ಬರುವ ಕಿರುಕುಳಗಳು ಕನ್ನಡಿಗರಿಗೆ ಮಾತ್ರ ಕಿರುಕುಳಗಳಾಗಿರುವುದಿಲ್ಲ. ಸಾಮಾನ್ಯವಾಗಿ ಅವು ದಕ್ಶಿಣದವರೆಲ್ಲರಿಗೂ ಕಿರುಕುಳಗಳಾಗಿರುತ್ತವೆ. ಆದ್ದರಿಂದ ಉತ್ತರದವರ ಕಿರುಕುಳಗಳನ್ನು ಎದುರಿಸುವಾಗ ’ಮದ್ರಾಸಿಗಳು’ ನಾವು ಒಗ್ಗಟ್ಟಿನಿಂದ ಕಯ್ ಕಯ್ ಸೇರಿಸಿ ನಿಲ್ಲಬೇಕು.  ಹಾಗೆ ನಿಂತರೇ ನಮಗೆ ಒಳಿತು.

ನಲ್ಮೆಯೊಡನೆ,
ಎಚ್.ಎಸ್.ರಾಜ್

7 ಕಾಮೆಂಟ್‌ಗಳು:

kannadaabhimaani ಹೇಳಿದರು...

ಈ ಲೇಖನದಲ್ಲಿ ದಕ್ಷಿಣದವರನ್ನು ಉತ್ತರದವರು ನಿರ್ಲಕ್ಷಿದ್ದಾರ ಎ೦ಬ ಪ್ರಷ್ಣೆಯು ಎದ್ದು ಕಾಣುತ್ತದೆ. ಹೌದು ಎ೦ದು ವಾದಿಸಲು ಕೆಲವರು ರಾಮಾಯಣವನ್ನು ಬಳಸಿಕೊ೦ಡಿರುವುದು ಉದಹರಿಸಲಾಗಿದೆ. ವಾನರು ಬೇರಾರೂ ಅಲ್ಲ ಅದು ದಕ್ಷಿಣದವರು ಎ೦ದು ಭಾವಿಸಲಾಗಿದೆ. ವಾನರು ಅ೦ದರೆ "ಕೋತಿ" ಎ೦ಬ ಕೇವಲ ಪದದ ಅರ್ಥದಿ೦ದ ನಮ್ಮನ್ನ ಕಡೆಗಣಿಸಿದ್ದಾರೆ ಎ೦ಬುದು ಇವರ ವಾದ. ಆದರೆ, ವಾಸ್ತವದಲ್ಲಿ ಮತ್ತು ಆಚರಣೀಯ ಹಿ೦ದು ಸ೦ಪ್ರದಾಯದಲ್ಲಿ ಇದಕ್ಕೆ ಪುಷ್ಟಿ ದೊರೆಯುವುದಿಲ್ಲ. ಮೇಲಾಗಿ, ಲೇಖಕರು ಅಭಿಪ್ರಾಯ ವ್ಯಕ್ತ ಪಡಿಸಿದ೦ತೆ, ಹನುಮ೦ತನಿಗೆ ವಿಶೇಷ ಸ್ಥಾನ ಮಾನಗಳು ಪುರಾತನ ಕಾಲದಿ೦ದಲೂ ದೊರೆತಿವೆ. ಹಿ೦ದು ಗ್ರ೦ಥಗಳಲ್ಲಿ "ವಾನರ" ಎ೦ದು ಎಲ್ಲಾದರು ಉಲ್ಲೇಖವಾಗಿದ್ದರೆ, ಅದು ಪ್ರೀತಿಯಿ೦ದ ಹೊರತು ಅವಹೇಳನ ದ್ರುಷ್ಟಿಯಿ೦ದ೦ತು ಅಲ್ಲ. ಇದಕ್ಕೆ ಕಾರಣ, ಆ೦ಜನೇಯನಿಗೇ ಮೀಸಲಾಗಿರುವ ದಿನಗಳು, ದೇಗುಲಗಳು, ವೈದಿಕ ಪೂಜಾ ವಿಧಾನಗಳು ಇತ್ಯಾದಿ... ಇದರಿ೦ದ ನನಗನಿಸುವುದೇನ೦ದರೆ, ರಾಮಾಯಣವನ್ನು, ದಕ್ಷಿಣದ ಕೆಲವರು ತಮ್ಮ ವಾದವನ್ನು ಬಲಪಡಿಸುವುದಕ್ಕೆ ಬಳಸಿದ೦ತೆ ಕಾಣಿಸುತ್ತೆ. ಸದ್ಯಕ್ಕೆ ಇದರಲ್ಲಿ ಹುರಳಿಲ್ಲ ಎ೦ದು ಭಾವಿಸಿದರೆ, ನಿಜವಾದ ಪ್ರಸ್ತುತ ಸಮಸ್ಯೆಯನ್ನು ಬೇರೆ ದ್ರುಷ್ಟಿಯಿ೦ದ ನೋಡಬೇಕಾಗುತ್ತೆ.
ಉತ್ತರದವರಿಗೆ ದಕ್ಷಿಣವೆ೦ದರೆ, ಕೇವಲ "ತಮಿಳರೆ" ಎ೦ದು ನ೦ಬಿಕೆ. ಇವರಲ್ಲಿ ಬಹಳಷ್ಟು ಜನರಿಗೆ ಕರ್ನಾಟಕ, ಕೇರಳ ಆ೦ದ್ರಪ್ರದೇಷ ಎ೦ಬ ರಾಜ್ಯಗಳು ಇವೆ ಎನ್ನುವ ಅರಿವಿಲ್ಲ. ಇದಕ್ಕೆ ಬಲವಾದ ಕಾರಣ ನಮ್ಮ ದಕ್ಷಿಣದ ಭಾಷೆಗಳಿಗು ಮತ್ತು ಹಿ೦ದಿ, ಹಿ೦ದಿ ಅಧಾರಿತ ಉತ್ತರದ ಭಾಷೆಗಳಿಗೂ ಇರುವ ದೂರದ ಹೋಲಿಕೆ. ಬೇರೆ ಕಾರಣಗಳು, ಆಡಳಿತದಲ್ಲಿ ದಕ್ಷಿಣದವರ ಪಾತ್ರ, ಬಾಲಿವುಡ್ ಚಿತ್ರಗಳ ಸಾರ್ವಭೌಮಿಕೆ ಇತ್ಯಾದಿ. ಕಾರಣಗಳನ್ನೂ ಹೀಗೆಯೇ ಇನ್ನಷ್ಟು ಉದಹರಿಸಬಹುದು. ಆದರೆ, ಕಾರಣಗಳನ್ನು ಆಳವಾಗಿ ನೋಡಿದರೆ ಎದ್ದು ಕಾಣುವ ಅ೦ಶ, ನಮ್ಮ ವಿಶಿಷ್ಟತೆಯನ್ನೆ ಅಥವ ಕನ್ನಡಿಗರ ಅರಿವನ್ನು ದೇಶ್ಯದ್ಯಾ೦ತ ಮೂಡಿಸಲು ವಿಫಲರಾಗಿರುವುದು. ಇದಕ್ಕೆ ಕಾರಣ ಉತ್ತರದವರಲ್ಲ, ನಾವೇ!
ಕನ್ನಡಿಗರೇ ಕನ್ನಡದ ಅವನತಿಗೆ ಕಾರಣರಾಗಿದ್ದಾರೆ. ಮನಸ್ಸಿನಲ್ಲಿಯೇ, ಹಿ೦ದಿ, ತಮಿಳು ಇ೦ಗ್ಲೀಷು, ಇವೆಲ್ಲ ಕನ್ನಡಕಿ೦ತ ಉತ್ತಮ ಭಾಷೆಗಳು, ಇವುಗಳನ್ನು ಕಲಿತರೆ, ನಮ್ಮ ಘನತೆ ಹೆಚ್ಚುತ್ತದೆ ಎ೦ಬ ಮನೋಭಾವ. ಎಲ್ಲರೂ ಹೀಗೆಯೇ ಯೋಚಿಸಿದಾಗ ಇದು ನಿಜ ಎನ್ನಿಸುವುದರಲ್ಲಿ ಸ೦ದೇಹವಿಲ್ಲ. ಹೀಗಾದರೆ, ನಮ್ಮ ಮೂಲ ಸಮಸ್ಯೆಗೆ ಉತ್ತರವೇನು? ನನ್ನ ಅನಿಸಿಕೆ, ಈಗ ಹೇಗೆ ಬೇರೆ ಭಾಷೆಗಳು ಉತ್ತಮ ಎ೦ಬ ಕಲ್ಪನೆ ಮೂಡಿದೆಯೋ ಅದನ್ನು ಅಳಿಸಿ, ನಮ್ಮಲ್ಲಿ ಅಷ್ಟೆ ಅಲ್ಲದೆ ಬೇರೆಯವರಲ್ಲೂ ಕನ್ನಡದ ಉದ್ದಗಲ, ಆಳ ಇವುಗಳನ್ನು ತಿಳಿಪಡಿಸುವುದು. ಇದೆಲ್ಲದಕ್ಕೂ ಎಲ್ಲ ಕನ್ನಡಿಗರ ಶ್ರಮ ಅತ್ಯಗತ್ಯ. ಅದರಲ್ಲೂ ದ್ರುಷ್ಟಿ ಮಾಧ್ಯಮದವರು ತಮ್ಮ ಮೇಲಿರುವ ಹೊಣೆಯನ್ನು ಎಚ್ಚರಿಕೆಯಿ೦ದ ನಿಭಾಯಿಸಬೇಕು.
ನಾನು ಸದ್ಯದಲ್ಲಿ, ಆಮೇರಿಕಾದಲ್ಲಿ ಜೀವನ ಮಾಡುತ್ತಿರುವುದರಿ೦ದ ನನಗೆ ಇಲ್ಲಿಯವರ ಒಡನಾಟದಿ೦ದ ಆದ ಕೆಲವು ಅನುಭವಗಳು ನನ್ನನ್ನು ಮತ್ತೆ ನನ್ನ ಮಾತ್ರುಭಾಷೆಯನ್ನು ಗ೦ಭೀರವಾಗಿ ನೋಡಲು ಉತ್ತೇಜಿಸಿದವು. ಇದು ನನಗೆ ಮಾತ್ರವಲ್ಲ ಎಲ್ಲ ಅನಿವಾಸಿ ಭಾರತೀಯರು ಆಗಿರಬಹುದು. ಇಲ್ಲಿಯವರಿಗೆ ಇ೦ಗ್ಲೀಷಿನಲ್ಲಿ ನನ್ನ ಪ್ರವೀಣತೆ ಮುಖ್ಯವಲ್ಲ ಎ೦ದು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಿದರು. ಇದಕ್ಕೆ ಕಾರಣ ಅವರ ಮಾತಿನಲ್ಲೇ ಹೇಳುವುದಾದರೆ ನಮ್ಮ ಮಾತ್ರು ಭಾಷೆ ಆ೦ಗ್ಲ ಭಾಷೆಯಲ್ಲ! ಆದರೆ, ಇದೇ ಜನರು ನಮಗೆ ನಮ್ಮ ಮಾತ್ರುಭಾಷೆಯಲ್ಲಿ, ಓದು ಬರಹದ ಪರಿಣಿತಿಯಿಲ್ಲ ಎ೦ದು ಗೊತ್ತಾದರೆ ಹುಬ್ಬೇರಿಸುವುದು ಬಹಳ ಸಾಮನ್ಯ ದ್ರುಶ್ಯ! ಅ೦ದರೆ, ನಾವು ನಮ್ಮನ್ನೇ ಕಡೆಗಣಿಸುವುದರಲ್ಲಿ ಅರ್ಥವಿಲ್ಲ! ಇದರ ಬದಲಾಗಿ, ಎಲ್ಲರು ಕನ್ನಡದ ಹಿರಿಮೆಯನ್ನು ಹಬ್ಬಲು ಶ್ರಮಿಸಬೇಕು. ಆಗ, ಕನ್ನಡಿಗರ ಮೇಲಿರುವ ಈ ಎಲ್ಲ ತಪ್ಪು ಕಲ್ಪನೆಗಳು ಮಾಯವಾಗುವುದರಲ್ಲಿ ಸ೦ದೇಹವಿಲ್ಲ.


Unknown ಹೇಳಿದರು...

ರಾಮಾಯಣದಲ್ಲಿ ತೆಂಕಣಿಗರನ್ನು ಹೀಯಾಳಿಸಿಲ್ಲ ಎನ್ನುವುದಕ್ಕೆ ಸರಿಯಾದ ಅಬಿಪ್ರಾಯಗಳನ್ನು ನನ್ನ ಚಿಂತನೆಗೆ ಪೂರಕವಾಗಿ ಕೊಟ್ಟಿದ್ದೀರಿ. ನಿಮ್ಮ ಪ್ರತಿಕ್ರಿಯೆಯ ಆ ಅಂಶವನ್ನು ಒಪ್ಪುತ್ತೇನೆ. ಆದರೆ, ಬಡಗರಿಗೆ ದಕ್ಶಿಣದವರೆಂದರೆ ತಮಿಳರು ಮಾತ್ರ ಎನ್ನುವುದನ್ನು ನಾನು ಒಪ್ಪಲಾರೆ. ಅವರಿಗೆ ದಕ್ಶಿಣದಲ್ಲಿ ತಮಿಳರಲ್ಲದೆ ಬೇರೆಯವರೂ ಇದ್ದಾರೆಂಬುದು ಗೊತ್ತು. ಆದರೂ ಅವರು ನಮ್ಮೆಲ್ಲರನ್ನೂ ಮದ್ರಾಸಿ ಎಂದೇ ಸೇರಿಸಿ ಕರೆಯುತ್ತಾರೆ. ಇದು ನನ್ನ ವಯ್ಯಕ್ತಿಕ ಅನುಬವ. ನಿಮ್ಮ ಅನಿಸಿಕೆಯನ್ನು ತಿಳಿಸಿದ್ದಕ್ಕೆ ದನ್ಯವಾದಗಳು.

Banavasi Somashekhar.ಬನವಾಸಿ ಮಾತು ಹೇಳಿದರು...

ಓದಿದೆ.ಲೇಖನವು ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ.ಈ ವಿಷಯದ ಮೇಲೆ ನೂರಾರು ಜನರ ಭಿನ್ನ ಭಿನ್ನ ಅಭಿಪ್ರಾಯಗಳನ್ನು ತಿಳಿದು ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವ ಅವಕಾಶ ಈ ಲೇಖನದಲ್ಲಿದೆ.

Unknown ಹೇಳಿದರು...

ನಿಮ್ಮ ಅನಿಸಿಕೆಯಂತೆ ಈ ವಿಶಯದಲ್ಲಿ ಚರ್ಚೆ ಮಾಡಲು ತುಂಬಾ ಅವಕಾಶವಿದೆ. ದನ್ಯವಾದಗಳು.

gunashekara murthy ಹೇಳಿದರು...

ನಿಮ್ಮ ಮಾತು ಒಪ್ಪಲೇ ಬೇಕಿದೆ ಅದಕ್ಕೆ ಮುಂಚೆ ಒಮ್ಮೆ ನನ್ನ ದ್ರಾವಿಡ ರಾಮಾಯಣವನ್ನು ಓದಿ ನಿಮ್ಮ ಅನಿಸಿಕೆಯನ್ನು ಬರೆಯಿರಿ kannada blogger'S nalli gunashekara murthy blogs

Unknown ಹೇಳಿದರು...

ಹಾಗೇ ದಯವಿಟ್ಟು ನಿಮ್ಮ ದ್ರಾವಿಡ ರಾಮಾಯಣ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿಸಿ.

gunashekara murthy ಹೇಳಿದರು...

ನಿಮ್ಮ ಮಾತು ಒಪ್ಪಲೇ ಬೇಕಿದೆ ಅದಕ್ಕೆ ಮುಂಚೆ ಒಮ್ಮೆ ನನ್ನ ದ್ರಾವಿಡ ರಾಮಾಯಣವನ್ನು ಓದಿ ನಿಮ್ಮ ಅನಿಸಿಕೆಯನ್ನು ಬರೆಯಿರಿ kannada blogger'S nalli gunashekara murthy blogs
http://vishvabharathi25@gmail.com