ಮಂಗಳವಾರ, ಫೆಬ್ರವರಿ 18, 2014

ಸ್ವತಂತ್ರ ದ್ರಾವಿಡನಾಡು!?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನೆರೆಯ ತೆಲುಗುನಾಡನ್ನು ಇರುಪೋಳು ಮಾಡುವ ಪ್ರಕ್ರಿಯೆಯ ಬಗ್ಗೆ ಗಲಾಟೆ ತುದಿಮುಟ್ಟುತ್ತಿರುವ ಈ ದಿನಗಳಲ್ಲಿ ಅಲ್ಲಿಯ ಕೆಲ ಮುಂದಾಳುಗಳಿಂದ ವಯ್ಪರೀತ್ಯದ ಕೂಗುಗಳು ಕೇಳಿಬರುತ್ತಿವೆ. ಇಡಿ ಆಂದ್ರವನ್ನು ಎರಡು ತುಂಡು ಮಾಡುವುದೇ ಆದರೆ, ಸೀಮಾಂದ್ರವನ್ನು ಒಂದು ಪ್ರತ್ಯೇಕ ದೇಶವನ್ನಾಗಿಸಬೇಕು ಎಂಬ ಗುಡುಗು ಅವರಿಂದ ಹೊರಡುತ್ತಿದೆ. ಇದು ಯಾರೋ ಒಬ್ಬಿಬ್ಬರು ಇಡುತ್ತಿರುವ ಬೊಬ್ಬೆಯಲ್ಲ. ಹಲವಾರು ತೆಲುಗು ದೇಶಮ್ ಪಕ್ಶದ ಮುಂದಾಳುಗಳಿಂದ ಬಂದಿರುವ ಆಗ್ರಹ.
      ’ನಮ್ಮದೇ ಸಂಸತ್ ನಮಗೆ ಕೊಡಿ. ದಿಲ್ಲಿಯ ಸಂಸತ್ತಿನಲ್ಲಿ ನಮಗೆ ನ್ಯಾಯವೂ ಇಲ್ಲ, ಬೆಲೆಯೂ ಇಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಹಾಗೆ ನಮಗೆ ನಮ್ಮದೇ ಆದ ಸೀಮಾಂದ್ರ ದೇಶ ಕೊಡಿ’ ಎಂದು ಮೊದುಗುಲ ವೇಣುಗೋಪಾಲ ರೆಡ್ಡಿ ಎಂಬ ಸಂಸದರು ಅಬ್ಬರಿಸಿದ್ದಾರೆ. ’ಸೀಮಾಂದ್ರ - ಒಂದು ಪ್ರತ್ಯೇಕ ರಾಶ್ಟ್ರ’ ಎಂಬ ಸಮುದಾಯ ಪುಟವೊಂದನ್ನು ಫೇಸ್‍ಬುಕ್ಕಿನಲ್ಲಿ ತೆರೆಯಲಾಗಿದೆಯಂತೆ. ತೆಲುಗು ದೇಶಮ್ಮಿನ, ಒಮ್ಮೆ ಮಂತ್ರಿಯಾಗಿದ್ದ ಗಾಲಿ ಮುದ್ದುಕ್ರಿಶ್ಣಮ ನಾಯುಡು ಎಂಬವರು, ’ತೆಲುಗರಿಗೆ ಮನ್ನಣೆ ದಕ್ಕದು ಎಂದ ಮೇಲೆ, ತೆಲುಗುನಾಡು ಬಾರತದೊಳಗೆ ಏಕಿರಬೇಕು? ಪ್ರತ್ಯೇಕ ರಾಶ್ಟ್ರ ಏಕಾಗಬಾರದು?’ ಎಂದು ಕೇಳುತ್ತಿದ್ದಾರೆ. ಕಿಶ್ಣಾ ಜಿಲ್ಲೆಯ ತೆಲುಗು ದೇಶಮ್ಮಿನ ಅದ್ಯಕ್ಶ ನೂತಕ್ಕಿ ವೇಣುಗೋಪಾಲ ರಾವ್ ಎಂಬವರು ಕಳೆದ ಅಕ್ಟೋಬರಿನಲ್ಲೇ ತೆಲಂಗಾಣದ ವಿಶಯವಾಗಿ ’ಪ್ರತ್ಯೇಕ ಸೀಮಾಂದ್ರ ದೇಶ ಬೇಕು’ಎಂದು ಸಾರುವ ಪೋಸ್ಟರುಗಳನ್ನು ಮಾಡಿಸಿದ್ದರಂತೆ. ಮಾಜಿ ಮಂತ್ರಿ ಸೋಮಿರೆಡ್ಡಿ ಚಂದ್ರಮೋಹನ ರೆಡ್ಡಿ ಎಂಬವರು ಇನ್ನೂ ಮುಂದೆ ಹೋಗಿ, ’ಇಡೀ ತೆಂಕಣ ಬಾರತವೇ ಏಕೆ ಒಂದು ಸ್ವತಂತ್ರ ದೇಶವಾಗಬಾರದು?’ ಎಂದು ಗುಡುಗಿ, ’ಹಾಗಾಗುವ ದಿನಗಳು ದೂರವಿಲ್ಲ’ ಎಂದು ಆಶಾವಾದ ಬೆರೆತ ಬವಿಶ್ಯವನ್ನೂ ನುಡಿದಿದ್ದಾರೆ. ಇನ್ನೊಬ್ಬ ಮಾಜಿ ಮಂತ್ರಿ ಬೊಜ್ಜಲ ಗೋಪಾಲಕ್ರಿಶ್ಣ ರೆಡ್ಡಿ ಎಂಬವರು, ’ಬಾರತ ಯೂರೋಪಿನ ಹಾಗೆ ಸ್ವತಂತ್ರ ದೇಶಗಳ ಒಕ್ಕೂಟವಾಗಬೇಕು’ ಎಂದು ದನಿಗೂಡಿಸಿದ್ದಾರೆ. ಇವೆಲ್ಲಾ ಸಂಗತಿಗಳು ಫೆಬ್ರವರಿ ಹದಿನಾರರ ಟಯ್‍ಮ್ಸ್ ಆಫ್ ಇಂಡಿಯಾ ಸುದ್ದಿಹಾಳೆಯಲ್ಲಿ ಪ್ರಕಟವಾಗಿವೆ.
      ತಮಗೆ ನ್ಯಾಯ ದೊರಕುತ್ತಿಲ್ಲ ಎಂಬ ಹತಾಶೆ ತಟ್ಟಿದಾಗ ಮಂದಿ ಈ ರೀತಿ ಪ್ರತ್ಯೇಕತೆಯ ಕೂಗು ಹಾಕುವುದು ಆಗಾಗ್ಗೆ ನಡೆಯುತ್ತಾ ಬಂದಿದೆ. ಕಾವೇರಿ ನೀರಿನ ಗದ್ದಲದಲ್ಲಿ ನಮ್ಮ ನಡುವೆಯೂ ಪ್ರತ್ಯೇಕತೆಯ ಕ್ಶೀಣ ಕೊರಲು ಕಳೆದ ವರ‍್ಶ ಕೇಳಿಬಂದಿತ್ತು. ಆದರೆ, ಈಗ ಆಂದ್ರದಿಂದ ಬರುತ್ತಿರುವುದನ್ನು ಕ್ಶೀಣದನಿ ಎಂದು ಕಡೆಗಾಣಿಸುವಂತಿಲ್ಲ. ಇದು ತೆಲುಗು ದೇಶಂ ಪಕ್ಶದ ರಾಜಕೀಯ ನಡೆಯೇ ಆದರೂ, ಅದು ಸಾರುತ್ತಿರುವ ಸಂದೇಶಗಳಲ್ಲಿ ಅದರ ಮುಂದಾಳುಗಳಿಗೆ ಕೂಡ ದಿಟವಾದ ನಂಬಿಕೆ ಇರುವಂತೆಯೇ ಕಾಣಿಸುತ್ತಿದೆ. ಅಶ್ಟಕ್ಕೂ, ಚಿತ್ತೂರಿನಲ್ಲಿ ’ದ್ರಾವಿಡ ವಿಶವಿದ್ಯಾಲಯವನ್ನು’ ನಿರಿಸಿದ್ದು ತೆಲುಗು ದೇಶಮ್ ಪಕ್ಶವೇ. ಈ ಪಕ್ಶಕ್ಕೆ ಮೊದಲಿಂದಲೂ ದ್ರಾವಿಡ ಅರಿವು ಇದ್ದಂತೆ ಕಾಣುತ್ತದೆ. ಒಟ್ಟಿನಲ್ಲಿ ಮುಕ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ತೆಂಕಣ ಬಾರತದಲ್ಲಿ, ತಮಿಳುನಾಡಿನ ಹೊರಗೂ ಅಲ್ಲಲ್ಲಿ ಕೊಂಚಕೊಂಚ ದ್ರಾವಿಡತನದ ಅರಿವು ಇನ್ನೂ ಬದುಕಿಕೊಂಡಿದೆ ಎನ್ನುವುದು. ನಮ್ಮ ’ಕನ್ನಡಿಗರೂ ದ್ರಾವಿಡರೆ’ ಬಳಗ ಅಸ್ತಿತ್ವಕ್ಕೆ ಬಂದ ಅಲ್ಪಕಾಲದಲ್ಲೇ ಈ ಸತ್ಯ ನನಗೆ ಮನವರಿಕೆಯಾಗಿತ್ತು.
      ಪ್ರಶ್ನೆ ಇದು - ಪ್ರತ್ಯೇಕತೆ ಸರಿಯೆ? ಹತಾಶೆಯ ನೋವಿಂದ ಪ್ರೇರಿತವಾಗಿ ’ನಾವು ಬೇರೆಯಾಗಬೇಕು’ ಎಂಬ ಬಾವುಕತೆಯ ಕೂಗೇಳುವುದು ಸಹಜ. ಆದರೆ, ಪ್ರತ್ಯೇಕತೆಯಂತಹ ಗಂಬೀರವಾದ ಸಂಗತಿಯನ್ನು ವಿವೇಚನೆಯಿಂದ ನೋಡುವುದು ಒಳಿತು. ಬಾವುಕತೆಯ ಕಯ್ಗೆ ಜುಟ್ಟುಕೊಟ್ಟು ಒಂದೊಂದು ರಾಜ್ಯವೂ ಒಂದೊಂದು ಸ್ವತಂತ್ರ ದೇಶವಾಗಿ ಸಿಡಿದು ಚದುರಿದರೆ, ನಾವು ನೆಮ್ಮದಿಯಿಂದ ಬಾಳಲಿಕ್ಕಾಗುತ್ತದೆಯೆ? ಇದರ ಬಗ್ಗೆ ಆಳವಾಗಿ ಯೋಚಿಸಬೇಕು. ನಮ್ಮ ದೇಶದ ಇತಿಹಾಸವನ್ನು ನೋಡಿದರೆ, ಚದುರಿ ಬಾಳುವುದರಿಂದ ನಮಗೆ ನಶ್ಟವಾಗುವ ಸಾದ್ಯತೆಯೇ ಹೆಚ್ಚು ಎಂಬುದು ಎದ್ದು ಕಾಣುತ್ತದೆ. ಶತಮಾನಗಳ ಹಿಂದೆ, ಸಂಪನ್ಮೂಲಗಳ ಕೊರತೆ ಇಲ್ಲದಿದ್ದಾಗಲೂ ನಾವು ನಮ್ಮನಮ್ಮಲ್ಲೇ ಅರ‍್ತವಿಲ್ಲದ ಕಲಹಗಳನ್ನು ಮಾಡಿಕೊಂಡಿದ್ದೇವೆ. ಇನ್ನು ಸಂಪನ್ಮೂಲಗಳ ಕೊರತೆ ಹೇರಳವಾಗಿರುವ ಈ ದಿನಗಳಲ್ಲಿ ನಮ್ಮ ನಡವಳಿಕೆ ಹೇಗಾಗಬಹುದು? ಮೊದಲಿಂದಲೂ ನಮ್ಮಲ್ಲಿ ದಡ್ದತನಕ್ಕೇನೂ ಕೊರತೆ ಇಲ್ಲವಲ್ಲ? ನಮ್ಮ ಎಶ್ಟೋ ಹೊಳೆಗಳು ಎರಡು ಮೂರು ರಾಜ್ಯಗಳ ಮೂಲಕ ಹರಿಯುತ್ತವೆ. ನಾವು ಪ್ರತ್ಯೇಕ ರಾಶ್ಟ್ರಗಳಾದರೆ, ಅವುಗಳನ್ನು ನ್ಯಾಯಸಮ್ಮತವಾಗಿ ಹಂಚಿಕೊಳ್ಳುವಶ್ಟು ಎತ್ತರದ ತಿಳಿವಳಿಕೆಯ ಮಟ್ಟ ನಮಗಿದೆಯೆ? ಇದೆ ಎಂದು ಹೇಳುವ ಆರ‍್ಪು ಯಾರಿಗೂ ಇರದು. ವಾಸ್ತವ ಹೀಗಿರುವಾಗ ಪ್ರತ್ಯೇಕತೆಯ ಕೂಗು ಸಲ್ಲ.
      ಹಾಗಾದರೆ, ’ದಕ್ಶಿಣದ ನಮಗೆ ಬಾರತದ ಒಕ್ಕೂಟದಲ್ಲಿ ಬೆಲೆ ಸಿಗುತ್ತಿಲ್ಲ’ ಎಂಬ ಸಮಸ್ಯೆಗೆ ಬಗೆಹರಿವೇನು? ಬಗೆಹರಿವೇನೆಂದರೆ, ನಮ್ಮ ಮನೋಸ್ತಿತಿಯನ್ನು ಕೊಂಚ ಮಾರ‍್ಪಡಿಸಿಕೊಳ್ಳುವುದು. ದಿಲ್ಲಿಯ ಮಟ್ಟದಲ್ಲಿ, ’ನಾವು ಕನ್ನಡರು, ನಾವು ತಮಿಳರು, ನಾವು ತೆಲುಗರು’ ಎಂದು ನಮ್ಮನ್ನು ನಾವು ಬೇರೆಬೇರೆಯಾಗಿ ಗುರುತಿಸಿಕೊಳ್ಳದೇ, ’ದಕ್ಶಿಣದವರು ನಾವೆಲ್ಲ ದ್ರಾವಿಡರು’ ಎಂದು ಒಗ್ಗಟ್ಟಿನಿಂದ ನಡೆಯಬೇಕು. ನಮ್ಮ ಯಾವುದೇ ಒಂದು ರಾಜ್ಯಕ್ಕೆ ಅವಮಾನವಾದರೆ, ಅದು ನಮಗೆಲ್ಲರಿಗೂ ಆದ ಅವಮಾನ ಎಂದೇ ಬಾವಿಸಿಕೊಳ್ಳಬೇಕು. ಮೊನ್ನೆ ಮೊನ್ನೆ ಆಮ್ ಆದ್ಮಿ ಪಕ್ಶದ ಅರಿವುಗೆಟ್ಟವನೊಬ್ಬ ಮಲಯಾಳೀ ನರ‍್ಸುಗಳನ್ನು ಕಪ್ಪು ಕುರೂಪಿಗಳು ಎಂದು ಅಣಕಿಸಿದಾಗ, ಕೇರಳೀಯರನ್ನು ಬಿಟ್ಟರೆ, ಉಳಿದ ನಾವೆಲ್ಲ ಸುಮ್ಮನಿದ್ದೆವು. ಇದು ಸರಿಯಲ್ಲ. ಮುಕ್ಯವಾಗಿ, ನಮ್ಮ ಮುಂದಾಳುಗಳು ’ಪ್ರತ್ಯೇಕತೆ’ ಎಂದು ಕೂಗುವ ಬದಲು ನಮ್ಮ ದ್ರಾವಿಡತನದ ಅರಿವನ್ನು ನಮ್ಮ ಎಲ್ಲ ಸಮುದಾಯಗಳಲ್ಲೂ ಹರಡುವ ಪ್ರಯತ್ನವನ್ನು ಮಾಡಬೇಕು. ನಮ್ಮ ದ್ರಾವಿಡ ಒಗ್ಗಟ್ಟನ್ನು ನಾವು ಒಂದು ಗಟ್ಟಿನೆಲೆಯಲ್ಲಿ ಮೆರೆದರೆ, ತೆಲಂಗಾಣದಂತಹ ತೊಂದರೆಗಳು ಏಳುವುದೂ ಇಲ್ಲ, ನಮಗೆ ರಾಶ್ಟ್ರ ಮಟ್ಟದಲ್ಲಿ ಬೆಲೆ, ಮನ್ನಣೆ ಮತ್ತು ನ್ಯಾಯಗಳು ದೊರಕದೆ ಹೋಗುವುದೂ ಇಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್