ಸೋಮವಾರ, ಜನವರಿ 27, 2014

ಕಾಲೀ ಪೀಲೀ ಮಲಯಾಳೀ ನರ‍್ಸ್!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಆಮ್ ಆದ್ಮಿ ಪಕ್ಶದ ಮುಂದಾಳುಗಳಲ್ಲೊಬ್ಬನಾದ ಕುಮಾರ್ ವಿಶ್ವಾಸ್ ಎಂಬ ಮಹಾನುಬಾವನೊಬ್ಬ, ದಿಲ್ಲಿಯ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಮಲಯಾಳೀ ನರ‍್ಸುಗಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದರ ವಿಡಿಯೋ ತುಣುಕೊಂದನ್ನು ಕಳೆದ ವಾರ ದೇಶದ ಜನಪ್ರಿಯ ಆಂಗ್ಲ ಟೀವೀ ಕಾಲುವೆಗಳು ಹಲವು ಬಾರಿ ಮತ್ತೆ ಮತ್ತೆ ತೋರಿಸಿದವು. ಈ ಕುಮಾರ್ ವಿಶ್ವಾಸ್ ಎಂಬ ಪುಣ್ಯಾತ್ಮ ಒಬ್ಬ ಕವಿಯಂತೆ! ಮಲಯಾಳೀ ನರ‍್ಸುಗಳ ಬಗ್ಗೆ ಈತ ಕವಿತೆಯೊಂದನ್ನು ಗೀಚಿ, ಅದರಲ್ಲಿ, ’ಮಲಯಾಳೀ ನರ‍್ಸುಗಳು ಎಶ್ಟು ಕಪ್ಪು ಹಾಗೂ ಕುರೂಪಿಗಳು ಅಂದರೆ, ಅವರನ್ನು ಕಂಡಾಗ ಆಕರ‍್ಶಣೆಯ ಬಾವ ಮೂಡುವ ಬದಲು ತಾನೇ ತಾನಾಗಿ ಸೋದರ ಬಾವ ಮೂಡುತ್ತದೆ!’ ಎಂದು ಅವಹೇಳನ ಮಾಡಿದ್ದಾನೆ. ಈ ಕವಿತೆಯ ಚುಟುಕನ್ನು ಕವಿಗೋಶ್ಟಿಯೊಂದರಲ್ಲಿ ರಸಿಕರ ಮುಂದಿಡುವಾಗ ಅವನು ಅನುಬವಿಸುತ್ತಿದ್ದ ಮೋಜಿನ ಆಸ್ವಾದವನ್ನು ನೋಡಬೇಕಾಗಿತ್ತು! ಎಂತಹ ಎತ್ತರದ ಮನಸ್ಸಿನ ಆಳಿರಬೇಕು ಈ ಕುಮಾರ್ ವಿಶ್ವಾಸ್!  ಇನ್ನು ಅವನ ಕೊಳಚೆ ಕವಿತೆಯನ್ನು ಕೇಳುತ್ತಿದ್ದ ರಸಿಕರೂ ಅಶ್ಟೆ, ಎತ್ತರದ ಮನಸ್ಸಿನವರೇ! ಸಾಲು ಸಾಲಿಗೂ ’ಗೊಳ್’ ಎಂದು ನಗುತ್ತಿದ್ದ ಅವರ ಕೇಕೆ ಮುಗಿಲು ಮುಟ್ಟುವಂತಿತ್ತು!
      ಯಾರೋ ಮಲಯಾಳಿಗಳನ್ನು ಆಡಿಕೊಂಡರೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತೀರಾ? ಮಲಯಾಳಿಗಳಾದರೇನು ಕನ್ನಡಿಗರಾದರೇನು, ನಾವೆಲ್ಲಾ ಒಟ್ಟಾರೆ ದ್ರಾವಿಡರೇ ಅಲ್ಲವೆ? ಇಡಿಯಾಗಿ ನೋಡಿದರೆ, ತಮಿಳರು, ಕನ್ನಡಿಗರು, ತೆಲುಗರು, ನಾವೆಲ್ಲ ಕಪ್ಪು ಬಣ್ಣದವರೇ ಅಲ್ಲವೆ? ಹಾಗಾಗಿ, ಯಾವೊಂದು ದಕ್ಶಿಣ ರಾಜ್ಯದವರ ರೂಪವನ್ನು ಅಣಕಿಸಿದರೂ ಇಡೀ ದಕ್ಶಿಣದವರನ್ನೇ ಅಣಕಿಸಿದಂತೆ ಆಗುವುದಿಲ್ಲವೆ?
      ಉತ್ತರದವರ ಕಣ್ಣಲ್ಲಿ ದಕ್ಶಿಣದವರೆಲ್ಲಾ ಒಂದೇ - ಮದ್ರಾಸಿಗಳು! ’ಉತ್ತರದವರು ನೋಡಲು ಬೆಳ್ಳಗೆ ಚೆಂದ. ದಕ್ಶಿಣದವರು ಕಪ್ಪು ಕುರೂಪಿಗಳು. ಉತ್ತರದವರ ನಡೆನುಡಿ ಚೆನ್ನ. ದಕ್ಶಿಣದವರ ನಡೆನುಡಿ ಕಳಪೆ’- ಇದು ಒಟ್ಟಾರೆ ಉತ್ತರದ ಮಂದಿಗಳ ಅಬಿಪ್ರಾಯ. ಇದು ಉತ್ತರದವರ ಬಗೆನೆಲೆಯನ್ನು ತಿಳಿದ ಹೆಚ್ಚುಕಡಿಮೆ ಎಲ್ಲ ತೆಂಕಣರಿಗೂ ಗೊತ್ತು. ನಾನು ಚಿಕ್ಕವನಾಗಿದ್ದಾಗ, ಉತ್ತರದವರು ದ್ರಾವಿಡ ನುಡಿಗಳ ಬಗ್ಗೆ, ’ರಂಡು ಗುಂಡು ನಾರೀಯಲ್ ಪಾನಿ!’ ಎಂದು ಕೀಳಾಗಿ ಅಣಕಿಸುತ್ತಿದ್ದರು ಎಂಬುದನ್ನು ಹಲವೆಡೆ ಪತ್ರಿಕೆಗಳಲ್ಲಿ ಓದಿದ್ದೇನೆ. ತೆಂಕಣರ ಬಗೆಗಿನ ಬಡಗರ ಈ ಕೀಳು ಅಬಿಪ್ರಾಯ ನೆನ್ನೆ ಮೊನ್ನೆಯದಲ್ಲ. ತುಂಬಾ ಹಿಂದಿನಿಂದಲೂ ಇದು ಇದ್ದುಕೊಂಡು ಬಂದಿದೆ. ಮಂದೂ ಇರುತ್ತದೆ. ಇದು ಒಂದೊಪ್ಪೊತ್ತಿನಲ್ಲಿ ಅಳಿದು ಹೋಗುವಂತಹುದಲ್ಲ.
      ಬಡಗರಿಗೆ ನಮ್ಮ ಮೇಲೆ ಇಂತಹ ಕೀಳು ಅನಿಸಿಕೆ ಇದೆ ಎಂದು ತಿಳಿದಿದ್ದರೂ, ಅದೇನು ಮಾಯವೋ, ನಾವು ಮಾತ್ರ ಅವರ ಬಗ್ಗೆ ಸಿಡುಕುವುದಿಲ್ಲ! ಸಿಡುಕುವುದಿರಲಿ, ಅವರನ್ನು ಪ್ರೋತ್ಸಾಹಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ! ನಮ್ಮ ಸಿನಿಮಾಗಳನ್ನೇ ನೋಡಿ. ನಾಯಕ ನಟ ನಮ್ಮ ಹಾಗೇ ಕಾಣಿಸುತ್ತಾನೆ. ಆದರೆ ನಾಯಕಿ, ಸಾಮಾನ್ಯವಾಗಿ ಉತ್ತರದ ಎಲ್ಲಿಂದಲೋ ಕರೆತಂದವಳು, ಬೇರೆ ಯಾವುದೋ ಲೋಕದಿಂದ ಬಂದವಳ ಹಾಗೆ ಕಾಣಿಸುತ್ತಾಳೆ. ಅಶ್ಟೇ ಅಲ್ಲ, ಅವಳು ನಮ್ಮ ಹಾಗೇ ಕಾಣುವ ತಂದೆತಾಯಿಗಳ ಮಗಳೂ ಆಗಿರುತ್ತಾಳೆ ಚಿತ್ರದಲ್ಲಿ! ಇದೆಂತಾ ಅಸಂಬದ್ದ ಸ್ವಾಮೀ!? ಆದರೂ, ನಮ್ಮ ಮಂದಿ ಇಂತಾ ಚಿತ್ರಗಳಿಗೆ ನುಗ್ಗುವುದನ್ನು ಬಿಡುವುದಿಲ್ಲ. ಯಾಕೆ, ನಮ್ಮಲ್ಲಿ ಅಂದವಾದ ನಟಿಯರೇ ಇಲ್ಲವೆ? ಇನ್ನು ಹಾಡಿನ ವಿಶಯ ತೆಗೆದುಕೊಳ್ಳಿ. ಸಿನಿಮಾದಲ್ಲಿ ಹಾಡುವವರೆಲ್ಲಾ ಉತ್ತರದವರೇ ಆಗಿರಬೇಕು ಎಂದು ಯಾರೋ ಕಟ್ಟಳೆಯನ್ನೇ ಮಾಡಿದಂತಿದೆ. ’ಕಂಪಿಸ್ಸುವ’, ’ಪಿಸ್ಸುಗುಡುವ’, ಹೀಗೆ ಮುಂತಾಗಿ ಹೇಗೆ ಹೇಗೋ ಇರುತ್ತದೆ ಈ ಹಾಡುಗಾರರ ಕನ್ನಡ ಪದಗಳ ಉಚ್ಚಾರಣೆ. ಆದರೂ, ನಮ್ಮ ನಿರ‍್ಮಾಪಕರಿಗೆ ಮತ್ತು ನಮ್ಮ ಸಿನಿಮಾ ನೋಡುವ ಮಂದಿಗೆ ಇವರೇ ಬೇಕು! ಎಂತೆಂತಹ ನುರಿತ ಹಾಡುಗಾರರಿದ್ದಾರೆ ನಮ್ಮಲ್ಲೇ. ಆದರೆ, ಅವರನ್ನೆಲ್ಲ ನಾವು ಮೂಲೆಗುಂಪು ಮಾಡಿದ್ದೇವೆ. ಇನ್ನು ಸಿನಿಮಾದ ಹೆಸರುಗಳು? ’ಪ್ರೇಮ್ ಕಹಾನಿ’, ’ಅಂದರ್ ಬಾಹರ್’, ’ದಿಲ್‍ವಾಲ’- ಹೀಗೆ ಅಪ್ಪಟ ಅಪರಂಜಿ ಕನ್ನಡ! ಉದ್ದಾರವಾದಳು ಕನ್ನಡ ತಾಯಿ! ಇಶ್ಟು ಸಾಲದು ಎಂಬಂತೆ, ಉತ್ತರದಿಂದ ಬರುವ ಪುಡಾರಿಗಳೆಲ್ಲ ಹಿಂದಿಯಲ್ಲೇ ಎಗ್ಗಿಲ್ಲದಂತೆ ಬಾಶಣ ಬಗುಳಿ ಹೋಗುತ್ತಾರೆ. ಅದನ್ನು ನಾವು ಕುರಿಗಳಂತೆ ತೆಪ್ಪಗೆ ಕುಳಿತು ಕೇಳುತ್ತೇವೆ. ಪುಡಾರಿಗಳಂತಹ ದೊಡ್ಡವರನ್ನು ಬಿಡಿ, ಉತ್ತರದಿಂದ ಬಂದು ತಳ ಊರಿರುವ ಪಿಳ್ಳೆ ಪಿಸುಕಗಳೆಲ್ಲ, ನಮ್ಮ ಮಾತನ್ನಾಡುವ ಬದಲು, ನಮ್ಮ ಬಾಯಲ್ಲಿ ದಿನನಿತ್ಯ ಅವರ ಹಿಂದಿಯನ್ನೇ ಆಡಿಸುತ್ತವೆ. ಏನು ಹೇಳುವುದು ಸ್ವಾಮೀ ನಮ್ಮ ದಕ್ಶಿಣದವರ, ಅದರಲ್ಲೂ ನಮ್ಮ ಕನ್ನಡಿಗರ, ಕೆಚ್ಚಿಗೆ, ಸ್ವಾಬಿಮಾನಕ್ಕೆ?
      ನಾವು ಯಾಕೆ ಹೀಗೆ? ನನ್ನ ಅಬಿಪ್ರಾಯದಲ್ಲಿ, ನಮಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ’ತಮಿಳರಿಗೆ ದ್ರಾವಿಡತನದ ಅರಿವಿದೆ. ಆದರೂ, ಅವರೂ ಕೂಡ ಚಿತ್ರರಂಗದಲ್ಲಿ ಉತ್ತರದವರಿಗೆ ಮಣೆ ಹಾಕುತ್ತಾರಲ್ಲ?’ ಎಂದು ಯಾರಾದರೂ ನನ್ನನ್ನು ಕೇಳಬಹುದು. ಅದಕ್ಕೆ ನನ್ನ ಮಾರು ಇಶ್ಟೆ - ತಮಿಳರಿಗೆ ದ್ರಾವಿಡ ಶಿಕ್ಶಣವಾಗಿದೆ ಎಂದು ಯಾರು ಹೇಳಿದರು? ಅವರಿಗೂ ಅದು ಸರಿಯಾದ ರೀತಿಯಲ್ಲಿ ಆಗಿಲ್ಲ. ’ದ್ರಾವಿಡ ಎಂದರೆ ತಮಿಳರು, ತಮಿಳರು ಎಂದರೆ ದ್ರಾವಿಡರು’ ಎಂಬ ಸ್ತೂಲ ತಿಳಿವಳಿಕೆಗೆ ಮೀರಿ ತಮಿಳರಲ್ಲೂ ಪರಿಣಾಮಕಾರಿ ದ್ರಾವಿಡ ಶಿಕ್ಶಣವಾಗಿಲ್ಲ. ಇನ್ನು ಉಳಿದ ದಕ್ಶಿಣದವರಿಗೋ, ದ್ರಾವಿಡ ಅರಿವಿನ ಸೋಂಕೇ ಇಲ್ಲ. ನನ್ನ ಅನಿಸಿಕೆ ಇದು - ’ನಮ್ಮ ದ್ರಾವಿಡತನದ ಬಗ್ಗೆ ನಮಗೆ ಸರಿಯಾದ ಶಿಕ್ಶಣ ದೊರೆಯಬೇಕು. ಆಗ ಮಾತ್ರ ನಾವು ದಕ್ಶಿಣದವರು ನಮ್ಮ ನಮ್ಮಲ್ಲಿ ಒಗ್ಗಟ್ಟನ್ನು ಕಂಡುಕೊಳ್ಳಬಹುದು. ನಮ್ಮನ್ನು ಕೀಳಾಗಿ ಕಾಣುವ ಉತ್ತರದವರ ನಿಲುವನ್ನು ಪರಿಣಾಮಕಾರಿಯಾಗಿ ಎದುರಿಸಬಹುದು’

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಜನವರಿ 13, 2014

ಅಚ್ಚಗನ್ನಡದ ಬಗ್ಗೆ ರಾಜಿ ಬೇಡ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ವಾರ ಮಡಿಕೇರಿಯಲ್ಲಿ ಕಸಾಪ ನಡೆಸಿದ ಸಾಹಿತ್ಯ ಪರಿಶತ್ತಿನ ಕಾರ‍್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಹಂಪನಾ ಅವರು ಬಾಶಣ ಮಾಡುತ್ತಾ ಒಂದು ಒಳ್ಳೆಯ ಕಿವಿಮಾತನ್ನು ಕನ್ನಡಿಗರಿಗೆ ನೀಡಿದ್ದಾರೆ. ಅದೇನೆಂದರೆ, ಮಾತಿನ ಕನ್ನಡದಲ್ಲಿ ಮಿತಿ ಮೀರಿ ಆಂಗ್ಲ ಸೊಲ್ಲುಗಳನ್ನು ತುರುಕಬಾರದು ಎಂದು. ಎತ್ತುಗೆಗಾಗಿ, ಗುಡ್ ಮಾರ್‌ನಿಂಗ್, ಗುಡ್ ಆಫ್ಟರ‍್ನೂನ್, ಗುಡ್ ಈವನಿಂಗ್ ಮತ್ತು ಗುಡ್ ನಯ್ಟ್ ಎಂಬುವನ್ನು ಇಂಗ್ಲೀಶಿನಲ್ಲೇ ಹೇಳದೆ, ಅವನ್ನು ಕನ್ನಡಕ್ಕೆ ತಿರುಗಿಸಿ, ನಲ್‍ಬೆಳಗು, ನಲ್‍ಮದ್ಯಾನ, ನಲ್‍ಸಂಜೆ ಮತ್ತು ನಲ್‍ರಾತ್ರಿ ಎಂದು ಹೇಳಿದರೆ ಒಳ್ಳೆಯದು ಎಂದು ಸಲಹೆ ಕೊಟ್ಟಿದ್ದಾರೆ. ಹೀಗೆಂದು ಜನವರಿ ೧೦, ೨೦೧೪ ರ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ವರದಿಯಾಗಿದೆ. ಅಚ್ಚಗನ್ನಡದ ಒಲವಿಯಾದ ನನಗೆ ಇದನ್ನು ಓದಿ ತುಂಬಾ ಸಂತೋಶವಾಯಿತು. ’ಒಳ್ಳೆಯ, ಶುಬವಾದ’ ಎಂಬ ಹುರುಳುಗಳಿರುವ ನಮ್ಮದೇ ಆದ ’ನಲ್’ಎಂಬ ಇನಿದಾದ ಈ ಅಚ್ಚಗನ್ನಡ ಮುನ್ನೊಟ್ಟು ಕನ್ನಡದಲ್ಲಿ ಬಳಕೆಯೇ ಆಗುತ್ತಿಲ್ಲ ಎಂಬ ಕೊರಗು ನನಗೆ ಬಹು ಹಿಂದಿನಿಂದಲೂ ಇದೆ. ಇಂತಹ ’ನಲ್’ ಮುನ್ನೊಟ್ಟನ್ನು ಬಳಸಿರಿ ಎಂದು ಹಂಪನಾ ಅವರಂತಹ ಹಿರಿಯ ವಿದ್ವಾಂಸರೇ ಕರೆಕೊಟ್ಟರೆಂದ ಮೇಲೆ ನನ್ನಂತಹ ಅಚ್ಚಗನ್ನಡ ಪ್ರೇಮಿಗಳಿಗೆ ಹಿಗ್ಗು ಬಾರದಿರುತ್ತದೆಯೆ?
      ನಲ್‍ಮದ್ಯಾನ, ನಲ್‍ಸಂಜೆ ಮತ್ತು ನಲ್‍ರಾತ್ರಿ - ಈ ಪದಗಳನ್ನು ನಲ್ವಗಲು, ನಲ್ವಯ್ಗು ಮತ್ತು ನಲ್ಲಿರುಳು ಎಂದು, ಸಂಸ್ಕ್ರುತದ ಸೋಂಕೇ ಇಲ್ಲದೆ, ತನಿಯಾಗಿ ಅಚ್ಚಗನ್ನಡದಲ್ಲೇ ಹೇಳಬಹುದು. ಹಂಪನಾ ಅವರು ಹೀಗೇ ಹೇಳಿದ್ದರೆ ನಮಗೆ ಇನ್ನೂ ನಲಿವಾಗುತ್ತಿತ್ತು. ಬಹುಶಹ, ಮದ್ಯಾನ, ಸಂಜೆ ಮತ್ತು ರಾತ್ರಿ ಎಂಬ ಸಂಸ್ಕ್ರುತ ಮೂಲದ ಪದಗಳೇ ಕನ್ನಡಿಗರಿಗೆ ರೂಡಿಯಾಗಿರುವ ಕಾರಣಕ್ಕೋ ಏನೋ, ಹಂಪನಾ ಅವರು ಅವನ್ನೇ ಬಳಸಿ ಹೇಳಿದ್ದಾರೆ, ಎಂದು ನನಗೆ ಅನಿಸುತ್ತದೆ. ಏಕೆಂದರೆ, ಇದೇ ರೀತಿ, ಅಚ್ಚಗನ್ನಡದಲ್ಲೇ ಪದಗಳನ್ನು ಮಾಡುತ್ತೇವೆ ಎಂದು ಹೊರಟ ಹಲವರು, ಮಂದಿಗೆ ಏನು ರೂಡಿಯಾಗಿದೆಯೋ, ಇಲ್ಲ ಮಂದಿ ಒಪ್ಪುತ್ತಾರೆಯೋ ಇಲ್ಲವೋ ಎಂಬ ಹೆದರಿಕೆಯಿಂದ ಎಶ್ಟೋ ಬಾರಿ ಶುದ್ದ ಅಚ್ಚಗನ್ನಡವನ್ನು ಬಿಟ್ಟು ತದ್ಬವಗಳನ್ನು ಬಳಸುವ ’ರಾಜಿಯನ್ನು’ ಮಾಡಿಕೊಂಡಿರುವುದನ್ನು ನಾನು ಕಂಡಿದ್ದೇನೆ. ನನ್ನ ವಯ್ಯಕ್ತಿಕ ಅಬಿಪ್ರಾಯದಲ್ಲಿ ಹೀಗೆ ರಾಜಿ ಮಾಡಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಮಂದಿಗೆ ನುಡಿಯ ತಿಳಿವಳಿಕೆ ಇರುವುದಿಲ್ಲ. ಅವರನ್ನು ಮೆಚ್ಚಿಸಲು ತಿಳಿವಳಿಕೆ ಇರುವ ಪಂಡಿತರು ನಿಲುವನ್ನು ಸಡಿಲಿಸಿ ರಾಜಿ ಮಾಡಿಕೊಂಡರೆ, ಅದು ಕುರಿಗಳಿಗೇ ದಾರಿ ಹುಡುಕಲು ಬಿಡುವ ಕುರಿಗಾಹಿಯ ಪಾಡಿನಂತಾಗುತ್ತದೆ. ತಿಳಿದವರು ತಿಳಿಯದವರಿಗೆ ಸರಿದಾರಿ ತೋರಬೇಕೇ ಹೊರತು ಅವರೊಡನೆ ತಾವೂ ದಾರಿತಪ್ಪಬಾರದು. ಮಂದಿಯನ್ನು ಓಲಯ್ಸುವುದು ಅಶ್ಟೊಂದು ಮುಕ್ಯವಾದರೆ, ’ಅಚ್ಚಗನ್ನಡದ’ ಹೆಸರಿನಲ್ಲಿ ಮಾರ‍್ಪಾಟುಗಳನ್ನು ಸೂಚಿಸುವುದಾಗಲೀ, ಹೊಸ ಪದಗಳನ್ನು ಮಾಡಿಕೊಳ್ಳುವುದಾಗಲೀ ಏಕೆ ಮಾಡಬೇಕು? ತಮಗೆ ಬಂದ ಹಾಗೆ ಬಾಶೆಯನ್ನು ಕುಲಗೆಡಿಸಿಕೊಂಡು ಹೋಗಲಿ ಬಿಡಿ ಈ ಹಾಳಾದ ಜನ, ಎಂದು ಸುಮ್ಮನೇ ಬಿಟ್ಟರಾಯಿತಲ್ಲ?
      ಟೀವಿಯಲ್ಲಿ ಕಾರ‍್ಯಕ್ರಮದ ಕೊನೆಯಲ್ಲಿ ನಿರೂಪಕರು, ’ಗುಡ್ ನಯ್ಟ್, ಶುಬರಾತ್ರಿ’ ಎಂದು ಇಂಗ್ಲೀಶಿನಲ್ಲಿ, ಬಳಿಕ ಕನ್ನಡದಲ್ಲಿ ಹೇಳಿ ಕಾರ‍್ಯಕ್ರಮ ಮುಗಿಸುವುದನ್ನು ನಾವೆಲ್ಲ ನೋಡಿರುತ್ತೇವೆ. ಈ ಪದ್ದತಿಯ ಬಗ್ಗೆ ನಾನು ಕೇಳುವ ಕೇಳ್ವಿ ಇದು - ’ಶುಬರಾತ್ರಿ’ ಎನ್ನುವುದು ಕನ್ನಡವಲ್ಲ. ಅದು ಸಂಸ್ಕ್ರುತ. ಕನ್ನಡದಲ್ಲಿ ಹೇಳಬೇಕೆಂದಿದ್ದರೆ ಕನ್ನಡದಲ್ಲೇ ’ನಲ್ಲಿರುಳು’ ಎಂದು ಹೇಳಿ. ಕನ್ನಡದ ಹೆಸರಲ್ಲಿ ಸಂಸ್ಕ್ರುತವನ್ನು ನುಡಿದು ಕನ್ನಡಕ್ಕೆ ಅವಮಾನ ಮಾಡಿದರೆ ಕನ್ನಡಕ್ಕೆ ಏನು ಲಾಬ? "ಶುಬರಾತ್ರಿ ಎನ್ನುವುದು ಸಂಸ್ಕ್ರುತದಿಂದಲೇ ಬಂದಿರಬಹುದು, ಆದರೆ, ಅದು ಬಳಕೆಯಿಂದ ಕನ್ನಡವೇ ಆಗಿಬಿಟ್ಟಿದೆ. ಆದ್ದರಿಂದ ಅದನ್ನು ಕನ್ನಡವೆಂದೇ ತೆಗೆದುಕೊಳ್ಳಬೇಕು", ಎಂದು ವಾದಿಸುವವರಿದ್ದಾರೆ. ಇಂತಹವರಿಗೆ ನನ್ನ ಪ್ರತಿವಾದ ಇದು - ನಿಮ್ಮ ತರ‍್ಕವನ್ನು ಒಪ್ಪಿಕೊಂಡರೆ, ’ಗುಡ್ ನಯ್ಟ್’ ಎನ್ನುವುದನ್ನೂ ಕನ್ನಡವೆಂದೇ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ಬಳಕೆಯಲ್ಲಿ ’ಗುಡ್ ನಯ್ಟ್’ಇದೆಯೇ ಹೊರತು ’ಶುಬರಾತ್ರಿ’ಇಲ್ಲ. ಜನ ಒಬ್ಬರಿಗೊಬ್ಬರು ’ಶುಬರಾತ್ರಿ’ ಎಂದು ಹೇಳುವುದನ್ನು ನಾನು ಇದುವರೆಗೂ ನೋಡೇ ಇಲ್ಲ. ಎಲ್ಲರೂ ಸಾಮಾನ್ಯವಾಗಿ ’ಗುಡ್ ನಯ್ಟ್’ ಎಂದೇ ಹೇಳುವುದು. ಆದ್ದರಿಂದ, ಅರ‍್ತವಿಲ್ಲದ ಕನ್ನಡತನವನ್ನು ತೋರಿಸುವ ಉದ್ದೇಶದಿಂದ, ’ಗುಡ್ ನಯ್ಟ್’ ಜೊತೆಗೆ ’ಶುಬರಾತ್ರಿ’ ಯನ್ನು ಸೇರಿಸಿ ಹೇಳುವ ತಲೆ ಪ್ರತಿಶ್ಟೆಯಾದರೂ ಏಕೆ? ಈ ದೊಂಬರಾಟ ಬಿಟ್ಟು ಬರೀ ’ಗುಡ್ ನಯ್ಟ್’ ಎಂದರೆ ಸಾಲದೆ?
      ಎರವಲು ಪದಗಳ ಬಳಕೆಯಲ್ಲಿ ನಮ್ಮ ಕನ್ನಡ ವಿದ್ವಾಂಸರಿಗೆ ಇಬ್ಬಂದಿ ನೀತಿಯ ಕಾಟ ಇದೆ ಎಂದು ನನಗೆ ಅನಿಸುತ್ತದೆ. ಬರೀ ಸಂಸ್ಕ್ರುತ ಪದಗಳೇ ತುಂಬಿ ಕನ್ನಡ ಸಂಪೂರ‍್ಣ ಸಂಸ್ಕ್ರುತಮಯವಾದರೂ ಅವರಿಗೆ ಅದು ತಪ್ಪೆನಿಸುವುದಿಲ್ಲ. ಆದರೆ, ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಅಪ್ಪಿ ತಪ್ಪಿ ಬಳಕೆಯಾದರೆ, ಅದು ಸರಿಯಲ್ಲ ಇವರ ಕಣ್ಣಲ್ಲಿ! ದ್ರಾವಿಡ ನುಡಿಯಾದ ಕನ್ನಡಕ್ಕೆ ಇಂಗ್ಲೀಶ್ ಹೇಗೆ ಹೊರಗಿನದೋ ಹಾಗೇ ಸಂಸ್ಕ್ರುತ ಕೂಡ ಹೊರಗಿನದು ಎನ್ನುವ ನನ್ನಿ ಇವರಿಗೆ ಮುಕ್ಯವಲ್ಲ. ಸಾವಿರಾರು ವರ‍್ಶಗಳಿಂದ ಕನ್ನಡದೊಡನಾಟ ಮಾಡಿ, ನಮಗೆ ಹತ್ತಿರವಾಗಿರುವ ಸಂಸ್ಕ್ರುತವನ್ನು ಅದು ಹೇಗೆ ಬೇರೆಯದು ಎಂದು ಹೇಳಲಿಕ್ಕಾಗುತ್ತದೆ?, ಎಂಬುದು ಇವರ ವಾದ. ’ಯಾವುದು ಹತ್ತಿರ?’ ಎಂಬ ಪ್ರಶ್ನೆ ಬಂದರೆ, ಇಂದು ಇಂಗ್ಲೀಶ್ ನಮಗೆ ಹತ್ತಿರವಾಗಿರುವಶ್ಟು ಸಂಸ್ಕ್ರುತ ಎಂದೂ ಆಗಿರಲಿಲ್ಲ, ಆಗುವುದೂ ಇಲ್ಲ. ಆದ್ದರಿಂದ, ಕನ್ನಡ ಸಂಸ್ಕ್ರುತಮಯವಾಗುವುದು ತಪ್ಪಲ್ಲವೆಂದಾದರೆ, ಕನ್ನಡ ಆಂಗ್ಲಮಯವಾಗುವುದೂ ತಪ್ಪಾಗಬಾರದು ತಾನೆ? ಹುರುಳಿಲ್ಲದ ಇಬ್ಬಂದಿ ನೀತಿ ಏಕೆ?
      ಕನ್ನಡಕ್ಕೆ ಎಲ್ಲ ನುಡಿಗಳಿಂದಲೂ ಪದಗಳು ಬರಲಿ. ಮಡಿವಂತಿಕೆ ಬೇಡ. ಆದರೆ, ಬಂದ ಪದಗಳದ್ದೇ ರಾಜ್ಯಬಾರವಾಗಬಾರದು. ಕನ್ನಡದ ಸೊಗಡು ಅಳಿಯಬಾರದು. ಕನ್ನಡದ ಸವಿ ಇರುವುದೇ ಕನ್ನಡದ್ದೇ ಆದ ದ್ರಾವಿಡ ಮೂಲದ ಪದಗಳಲ್ಲಿ. ಅವನ್ನು ಹೊರಗೆ ತಳ್ಳಿ, ಬೇರೆಡೆಯ ಸೊಲ್ಲುಗಳನ್ನೇ ಕನ್ನಡದಲ್ಲಿ ಜಡಿದುಕೊಂಡರೆ ಕನ್ನಡ ಕನ್ನಡವಾಗಿ ಉಳಿಯುವುದಿಲ್ಲ. ಕನ್ನಡ ಒಂದು ದ್ರಾವಿಡ ನುಡಿ ಎಂಬುದನ್ನು ನಾವು ಮರೆಯಬಾರದು. ಪಂಡಿತರಲ್ಲೂ ಪಾಮರರಲ್ಲೂ ಕನ್ನಡದ ದ್ರಾವಿಡ ಹಿನ್ನೆಲೆಯ ಅರಿವು ಯಾವಾಗಲೂ ತುಡಿಯಬೇಕು. ನಮ್ಮ ಹಾಗೂ ನಮ್ಮ ನುಡಿಯ ದ್ರಾವಿಡತನವನ್ನು ನಾವು ಕಂಡುಕೊಂಡರೆ, ಕನ್ನಡದ ಹೆಸರಿನಲ್ಲಿ ಬೇರೆ ಬಾಶೆಯ ಪದಗಳನ್ನು ಮೆರೆಸುವುದೂ ತಪ್ಪುತ್ತದೆ, ಹೊಸ ಪದಗಳನ್ನು ಮಾಡಿಕೊಳ್ಳುವಾಗ, ರಾಜಿ ಮಾಡಿಕೊಂಡು ಅರೆಬರೆ ಕನ್ನಡ ಪದಗಳನ್ನು ಮಾಡಿಕೊಳ್ಳುವುದೂ ತಪ್ಪುತ್ತದೆ. ಆಗ ನೋಡಿ, ನಮ್ಮ ನಲ್ಗನ್ನಡ ಹೆಸರಿನಲ್ಲಿ ಮಾತ್ರವಲ್ಲ, ತಿರುಳಿನಲ್ಲೂ ನಲ್ಗನ್ನಡವಾಗೇ ಉಳಿದುಕೊಳ್ಳುತ್ತದೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್