ಶುಕ್ರವಾರ, ಜುಲೈ 18, 2014

ಮುಂಬಾಗಿಲು ಬದ್ರ, ಹಿಂಬಾಗಿಲು ಚಿದ್ರ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೀಜೇಪಿ ಈಗ ಕೇಂದ್ರದಲ್ಲಿ ಅದಿಕಾರಕ್ಕೆ ಬಂದಿರುವುದರಿಂದ, ಇನ್ನು ಮುಂದೆ ಹಿಂದೀ ಹೇರಿಕೆಯ ಹುನ್ನಾರಗಳು ಮರುಕಳಿಸಬಹುದೆಂದು ನಾನು ಕಳೆದ ಲೇಕನದಲ್ಲಿ ಕಳವಳ ವ್ಯಕ್ತಪಡಿಸಿದ್ದೆ. ಕಾಕತಾಳೀಯವೆಂಬಂತೆ ಲೇಕನವನ್ನು ಪತ್ತಿಸಿದ ಕೆಲ ನಾಳುಗಳಲ್ಲೇ ಬೀಜೇಪೀಗಳ ಹಿಂದೀ ಹೇರಿಕೆಯ ಮೊದಲ ಪ್ರಯತ್ನ ನಡೆದೇಬಿಟ್ಟಿತು!
      ಸರ್‌ಕಾರೀ ಜಾಲತಾಣಗಳಲ್ಲಿ ಇನ್ನು ಮುಂದೆ ಹಿಂದೀ ಬಾಶೆಯ ಬಳಕೆಗೆ ಮೇಲೆಡೆ ಕೊಡಬೇಕೆಂದು ಮತ್ತು ರಾಜ್ಯ ಸರ್‌ಕಾರಗಳೊಡನೆ ಕೇಂದ್ರ ಸರ್‌ಕಾರ ಹಿಂದೀಯಲ್ಲಿ ವ್ಯವಹರಿಸಬಹುದೆಂದು ಆದೇಶಿಸುವ ಎರಡು ಬೇರೆಬೇರೆ ಸುತ್ತೋಲೆಗಳನ್ನು ಕೇಂದ್ರ ಸರ್‌ಕಾರ ಹೊರಡಿಸಿತು. ಹಿಂದೀ ಹೇರಿಕೆಗೆ ವಾತಾವರಣ ಈಗ ಹೇಗಿರಬಹುದೆಂದು ಅರಿತುಕೊಳ್ಳುವ ಹುನ್ನಾರದಿಂದ ಈ ರೀತಿ ಬೀಜೇಪಿ ಸರ್‌ಕಾರ ಮಾಡಿರಬಹುದು. ಕಾರಣ ಏನೇ ಇರಲಿ, ಅದರ ಈ ನಡೆಗೆ ಕೂಡಲೇ ಎದುರು ವ್ಯಕ್ತವಾದದ್ದೊಂದೇ ಅಲ್ಲ, ಹಾಗೆ ವ್ಯಕ್ತವಾದ ಎದುರಿಗೆ ಹಿಂದೆಂದೂ ಕಂಡಿರದ ಹರವು ಕೂಡ ಕಂಡುಬಂತು!
      ಮುಂಚೆ ಅರುವತ್ತರ ದಶಕದಲ್ಲಿ ಕೇಂದ್ರ ಸರ್‌ಕಾರ ಹಿಂದೀಯನ್ನು ಹೇರಲು ಹೊರಟಿದ್ದಾಗ ಅದಕ್ಕೆ ಎದಿರು ಕಂಡುಬಂದದ್ದು ಬಹುಪಾಲು ನಮ್ಮ ಸಹದ್ರಾವಿಡ ತಮಿಳು ಸೋದರರಿಂದ ಹಾಗೂ ಕೊಂಚಮಟ್ಟಿಗೆ ಕನ್ನಡಿಗರಿಂದ ಮತ್ತು ಬಂಗಾಳಿಗಳಿಂದ. ಆದರೆ ಈ ಬಾರಿ, ಒರಿಸ್ಸಾ, ಕಾಶ್ಮೀರ ಮುಂತಾದ ರಾಜ್ಯಗಳಿಂದ ಕೂಡ ವಿರೋದದ ಕೂಗುಗಳು ಕೇಳಿಬಂದವು! ಒರಿಸ್ಸಾದಲ್ಲಂತೂ, ಹಿಂದೀಯಲ್ಲಿ ಮಾತಾಡಲು ಹೊರಟ ಒಬ್ಬ ಶಾಸಕನಿಗೆ ಸಬಾಪತಿಗಳು, "ಒರಿಯಾದಲ್ಲಿ ಮಾತಾಡು, ಇಲ್ಲದಿದ್ದರೆ ಇಂಗ್ಲೀಶಿನಲ್ಲಿ ಮಾತಾಡು, ಹಿಂದೀಯಲ್ಲಿ ಮಾತ್ರ ಬೇಡ" ಎಂದು ಎಚ್ಚರಿಸಿದರು! ಹಿಂದಿಯೇತರರಾದ ನಮಗೆ ಇದೆಲ್ಲಾ ನಿಜಕ್ಕೂ ಒಂದು ಹಿಗ್ಗಿನ ಸುದ್ದಿ! ಕಲಿತವರ ಸಂಕ್ಯೆ ಹೆಚ್ಚಾಗುತ್ತಿರುವುದರಿಂದಲೋ ಏನೋ, ಹೆಚ್ಚು ಹೆಚ್ಚು ಹಿಂದಿಯೇತರರಿಗೆ ಹಿಂದೀ ದುರಬಿಮಾನಿಗಳ ಆಟದ ಅರಿವು ಮೂಡುತ್ತಿರುವುದರಿಂದಲೋ ಏನೋ, ಈಗೀಗ, ಹಿಂದೀ ಹೇರಿಕೆಗೆ ವಿರೋದ ದ್ರಾವಿಡರಿಂದ ಮಾತ್ರವಲ್ಲದೆ ಬೇರೆಯವರಿಂದಲೂ ವ್ಯಕ್ತವಾಗುತ್ತಿದೆ. ಈ ನೆಲೆ ಹೀಗೇ ಮುಂದುವರೆಯುತ್ತದೆ ಎಂದು ನಂಬೋಣ.
      ಇದೆಲ್ಲದರ ಅರ್‌ತ ಇಶ್ಟೇ. ಅದಿಕ್ರುತವಾಗಿ ಹಿಂದಿಯೊಂದನ್ನೇ ಸಂಪರ್‌ಕ ಬಾಶೆಯನ್ನಾಗಲೀ ರಾಶ್ಟ್ರಬಾಶೆಯನ್ನಾಗಲೀ ಮಾಡಲಾಗುವ ದಿನಗಳು ಹತ್ತಿರವಿಲ್ಲ. ಪಾಪ, ಹಿಂದೀ ದುರಬಿಮಾನಿಗಳು ಅದಕ್ಕಾಗಿ ಇನ್ನೂ ಹಲಹೊತ್ತು ತಾಳ್ಮೆಯಿಂದ ಕಾಯಬೇಕು. ಆದರೆ, ಅನದಿಕ್ರುತವಾಗಿ ಹಿಂದೀ ಹರಡುವುದು ಮಾತ್ರ ನಡೆಯುತ್ತಲೇ ಇದೆ. ಏಕೆಂದರೆ, ಹಿಂದಿಗೆ ವಿರೋದವಾಗಿ ಮುಂಬಾಗಿಲನ್ನೇನೋ ಮುಚ್ಚಿದ್ದೇವೆ. ಆದರೆ, ಹಿಂಬಾಗಿಲನ್ನು ತೆರೆದು ಬಿಟ್ಟಿದ್ದೇವೆ. ಹಿಂದಿಯ ತೂರಿಕೆಯನ್ನು ಮುಂಬಾಗಿಲಿನಲ್ಲಿ ತಡೆಯುವ ಹಾಗೇ ಹಿಂಬಾಗಿಲಿನಲ್ಲೂ ನಾವು ತಡೆಯಬೇಕು. ಇಲ್ಲದಿದ್ದರೆ, ಒಂದಲ್ಲ ಒಂದು ದಿನ ಹಿಂದೀ ಹೇಗೂ ಬಂದು ಕನ್ನಡದಂತಹ ಅಲ್ಲಲ್ಲಿನ ನೆಲದ ನುಡಿಗಳನ್ನು ಅಳಿಸಿಹಾಕುವುದು ಗ್ಯಾರಂಟಿ.
      ಅನದಿಕ್ರುತವಾಗಿ, ಅಂದರೆ ತಾನೇ ತಾನಾಗಿ, ಹಿಂದೀ ಬಾಶೆ ಒಂದು ಸ್ತಳೀಯ ಬಾಶೆಯನ್ನು ಹೇಗೆ ಬಗ್ಗುಬಡಿಯಬಲ್ಲುದು ಎಂಬುದಕ್ಕೆ ಒಂದು ಎತ್ತುಗೆಯನ್ನು ಕೊಡುತ್ತೇನೆ. ಮುಂಬಯಿ ನಗರವೇ ಆ ಎತ್ತುಗೆ. ಮುಂಬಯಿ ಮಹಾರಾಶ್ಟ್ರಕ್ಕೆ ಸೇರಿದ ಊರು. ಮಹಾರಾಶ್ಟ್ರದ ನೆಲದ ನುಡಿ ಮರಾಟಿ. ಆದರೆ, ಮುಂಬಯಿಯ ನೆಲದ ನುಡಿ ಮಾತ್ರ ಹಿಂದೀ! ಮುಂಬಯಿಯಲ್ಲಿ ಹಿಂದಿಯೇ ತಾಯ್ನುಡಿಯಾಗಿರುವವರ ಪ್ರಮಾಣ ನೂರಕ್ಕೆ ಇಪ್ಪತ್ತರಶ್ಟೂ ಇಲ್ಲ. ಆದರೂ, ಮುಂಬಯಿಯ ಬೀದಿ ಬೀದಿಗಳಲ್ಲಿ, ಮೂಲೆ ಮೂಲೆಗಳಲ್ಲಿ ಹಿಂದಿಯೋ ಹಿಂದಿ! ಅಲ್ಲಿ ಹಿಂದೀವಾಲರದೇ ಆಟ, ಹಿಂದಿಯದೇ ಬಾವುಟ! ಇದು ಹೇಗಾಯಿತು?
      ಅದಕ್ಕೆ ಉತ್ತರ ನಮ್ಮ ಬೆಂಗಳೂರಿನಲ್ಲೇ ಎದ್ದು ಕಾಣುತ್ತದೆ. ಇಲ್ಲೂ ಅಶ್ಟೆ, ಹಿಂದೀವಾಲರ ಸಂಕ್ಯೆ ಕಡಿಮೆ. ಆದರೆ, ಅವರ ವರ್‌ಚಸ್ಸು ಮಾತ್ರ ಊರಗಲ! ಎಲ್ಲೆಡೆ, ಎಲ್ಲರೊಡನೆ ಅವರು ಮಾತಾಡುವುದೇ ಹಿಂದಿಯಲ್ಲಿ! ಎಳ್ಳಶ್ಟೂ ಹಿಂಜರಿಯದೆ ಎಲ್ಲರ ಬಾಯಲ್ಲೂ ಹಿಂದಿಯನ್ನು ಹೊರಡಿಸುವ ಅವರ ಪೊಗರನ್ನು ಯಾರೇ ಆಗಲಿ ಮೆಚ್ಚಲೇ ಬೇಕು. ಅವರಿಗೆ ಸ್ತಳೀಯರ ಬಾವನೆಗಳು ಲೆಕ್ಕಕ್ಕೇ ಇಲ್ಲ! ಸ್ತಳೀಯರು ಕೆರಳಿಯಾರು ಎಂಬ ಹೆದರಿಕೆಯೇ ಇಲ್ಲ. ಅಶ್ಟಕ್ಕೂ ಅವರು ಯಾಕೆ ಹೆದರಬೇಕು? ಸ್ತಳೀಯರು ಕೆರಳುವುದೇ ಇಲ್ಲವಲ್ಲ? ಅವರ ಹಿಂದಿಗೆ ಪ್ರತಿಯಾಗಿ ಸ್ತಳೀಯರು ಕುರಿಗಳಂತೆ ಹಿಂದೀಯಲ್ಲೇ ಮಾರು ಕೊಡುತ್ತಾರೆ. ವಸ್ತುಸ್ತಿತಿ ಹೀಗಿರುವಾಗ ಅವರಿಗೇಕೆ ಅಂಜಿಕೆ? ಜೊತೆಗೆ, ಬೆಂಗಳೂರಿನಲ್ಲಿ ಮುಂಬಯಿಯಂತೆಯೇ ಸ್ತಳೀಯರ ಸಂಕ್ಯೆಯೇ ಕಡಿಮೆ. ಹೊರಗಿನವರ ಸಂಕ್ಯೆಯೇ ಹೆಚ್ಚು. ಇಂತಹ ನೆಲೆಯಲ್ಲಿ ಹಿಂದಿಗೆ ಯಾರಿಂದ ವಿರೋದ ಬರುತ್ತದೆ? ಬೆಂಗಳೂರು, ಹಿಂದಿಯ ಮಟ್ಟಿಗೆ ನೋಡುವುದಾದರೆ, ಮುಂಬಯಿಯ ಹಾದಿಯನ್ನು ಹಿಡಿದಿರುವುದರಲ್ಲಿ ಅನುಮಾನವಿಲ್ಲ. ಬವಿಶ್ಯದಲ್ಲಿ ಮುಂಬಯಿಯಂತೆ ಬೆಂಗಳೂರಿನ ಮೊದಲ ಬಾಶೆ ಕೂಡ ಹಿಂದಿಯೇ ಆದರೆ, ಬಳಿಕ ನಮ್ಮ ಉಳಿದ ದೊಡ್ಡ ಊರುಗಳಿಗೂ ಹಿಂದೀ ಕಾಯಿಲೆ ತಗುಲಿಕೊಂಡರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ದೊಡ್ಡ ಊರುಗಳು ಹಿಂದೀಮಯವಾಗಿ ಸಣ್ಣ ಊರುಗಳಲ್ಲಿ ಮಾತ್ರ ಕನ್ನಡ ಉಳಿದರೆ ಕನ್ನಡ ಇದ್ದೂ ಸತ್ತಂತೆ ತಾನೆ?
      ಇದೇ ಬಗೆಯ ಹಿಂದಿಯ ಆಕ್ರಮಣ ನಮ್ಮ ನೆರೆಯ ತಮಿಳುನಾಡಿನಲ್ಲಿ ಆಗುವುದಿಲ್ಲ. ಅಲ್ಲಿ ಏನು ವಿಶೇಶ? ಅಲ್ಲಿ ಒಂದೇ ವಿಶೇಶ - ಬಹುಮಂದಿ ತಮಿಳರು ಹಿಂದಿಯನ್ನು ಕಲಿಯುವುದಕ್ಕೂ ಹೋಗುವುದಿಲ್ಲ, ಮಾತಾಡುವುದಕ್ಕೂ ಹೋಗುವುದಿಲ್ಲ. ಅದಕ್ಕೆ ಕಾರಣ ಅಲ್ಲಿ ದಶಕಗಳಿಂದಲೂ ನಡೆದುಕೊಂಡು ಬಂದಿರುವ ದ್ರಾವಿಡ ಚಳುವಳಿ. ತಮಿಳರಿಗೆ ತಾವು ದ್ರಾವಿಡರೆಂಬುದು ತಿಳಿದಿದೆ. ಕನ್ನಡಿಗರಿಗಾದರೋ ತಾವೂ ಕೂಡ ದ್ರಾವಿಡರು ಎಂಬುದು ಇನ್ನೂ ತಿಳಿದಿಲ್ಲ. ಈ ನನ್ನಿ ತಿಳಿಯಬೇಕು. ತಿಳಿದರೆ, ನಾವೂ ಕೂಡ ಹಿಂದೀ ಬಾಶಣಗಳನ್ನು ಕುರಿಗಳಂತೆ ಸುಮ್ಮನೆ ಕೇಳುವುದನ್ನು ನಿಲ್ಲಿಸಬಹುದು. ಹಿಂದೀವಾಲರಿಗೆ ’ನಮ್ಮ ನುಡಿಯಲ್ಲೇ ಮಾತಾಡಿ’ ಎಂದು ಒತ್ತಾಯಿಸಬಹುದು. ಕನ್ನಡ ವಿರೋದಿಯಾದ ತ್ರಿಬಾಶಾ ಸೂತ್ರದಿಂದ ಹೊರಬರಬಹುದು. ನಮ್ಮ ಮೆಟ್ರೋದಿಂದ ಹಿಂದಿಯನ್ನು ತೊಲಗಿಸಬಹುದು. ಒಟ್ಟಾರೆ, ಹಿಂದೀ ಪಿಡುಗನ್ನು ದೂರವಿಡಬಹುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್