ಶುಕ್ರವಾರ, ಜೂನ್ 13, 2014

ಎಲ್ಲಕ್ಕೂ ಮೊದಲು ಇರಬೇಕು ’ಇದು ನಮ್ಮ ನುಡಿ’ ಎಂಬ ಕೆಚ್ಚು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡಿಗ ರಾಜಕಾರಣಿಗಳಿಗೆ ತಮ್ಮ ತಾಯ್ನುಡಿಯ ಬಗ್ಗೆ ಅಬಿಮಾನ ಕಡಿಮೆ ಎಂಬ ಸಾಮಾನ್ಯ ನಂಬಿಕೆ ಜನಮನದಲ್ಲಿ ಮನೆಮಾಡಿದೆ. ಈ ನಂಬಿಕೆ ಸಂಪೂರ‍್ಣ ಸರಿ ಅಲ್ಲ ಎನ್ನುವ ಹಾಗೆ ಈ ನಡುವೆ ನಮ್ಮ ಪ್ರತಿನಿದಿಗಳು ನಡೆದುಕೊಂಡು ನಮ್ಮನ್ನು ಅಚ್ಚರಿ ಬೀಳಿಸಿದ್ದಾರೆ!
      ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸುವ ವಿರುದ್ದ ತೀರ್‌ಪು ಕೊಟ್ಟಾಗ ಎಣಿಸಿದಂತೆಯೇ ಕನ್ನಡದೊಲವಿಗಳಿಂದ ಕೂಗಾಟ ಮತ್ತು ಹೋರಾಟದ ಮಾತುಗಳು ಕೇಳಿಬಂದವು. ಮಯ್ಸೂರಿನಲ್ಲಿ ಕೆಲ ಸಾಹಿತಿಗಳು ಒಟ್ಟಿಗೆ ಸೇರಿ, ಕನ್ನಡಕ್ಕಾಗಿ ಗೋಕಾಕ್ ಮಾದರಿಯ ಚಳುವಳಿಯನ್ನು ಕಯ್ಗೆತ್ತಿಕೊಳ್ಳುವುದಾಗಿ ಹೇಳಿಕೆ ಕೊಟ್ಟರು. ತೀರ‍್ಪಿನಿಂದ ಸಿಡಿಮಿಡಿಗೊಂಡ ಸರ‍್ಕಾರ ಕೂಡ ನಾಡಿನಲ್ಲಿ ಕನ್ನಡವನ್ನು ಕಾಪಾಡುವ ನಿಟ್ಟಿನಲ್ಲಿ ತಾನು ಏನೇನು ಮಾಡಲಿದೆ ಎಂಬುದರ ಬಗ್ಗೆ ಒಂದು ಪಟ್ಟಿಯನ್ನೇ ಮಾಡಿ ಗೋಶಿಸಿತು. ಆದರೆ, ಜನಸಾಮಾನ್ಯರು ಮಾತ್ರ, ’ಇಶ್ಟೆಲ್ಲಾ ಹಾರಾಟ ಕೆಲಕಾಲ ಮಾತ್ರ. ಸ್ವಲ್ಪ ದಿನ ಕಳೆದರೆ ಎಲ್ಲರೂ ಮಾಮೂಲಿನಂತೆ ತೆಪ್ಪಗಾಗುತ್ತಾರೆ’ಎಂದುಕೊಂಡರು. ಮೊದಮೊದಲು ಜನಗಳು ಅಂದುಕೊಂಡದ್ದೇ ನಿಜವಾಗುವ ಹಾಗೆ ಕಂಡಿತು. ಆದರೆ, ಮೊನ್ನೆಮೊನ್ನೆ ಜನರ ಅನಿಸಿಕೆಯನ್ನು ಸುಳ್ಳು ಮಾಡುವಂತಹ ಕೆಲ ಸಂಗತಿಗಳು ನಡೆದಿವೆ.
      ಗೋಕಾಕ್ ಮಟ್ಟದ ಹೋರಾಟದ ಪಣತೊಟ್ಟ ಸಾಹಿತಿಗಳ ಹಿಂಡು ಎತ್ತ ಪೋದುದೋ ತಿಳಿಯಲಿಲ್ಲ. ಆದರೆ, ನಾಡಿನ ಮುಕ್ಯಮಂತ್ರಿಗಳು ಹಾಗೂ ಹೊಸದಾಗಿ ಆಯ್ಕೆಗೊಂಡ ಸಂಸದರಲ್ಲಿ ಬಹುಮಂದಿ ಮಾತ್ರ ಕನ್ನಡದ ಅಬಿಮಾನ ಮೆರೆವಂತಹ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಮಾನ್ಯ ಮುಕ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರದಾನಮಂತ್ರಿ ಮೋದಿಯವರನ್ನು ಬೇಟಿ ಮಾಡಿ, ಸುಪ್ರೀಮ್ ಕೋರ‍್ಟಿನ ತೀರ‍್ಪಿನ ಬಗ್ಗೆ ವಿವರಿಸಿ, ತಾಯ್ನುಡಿಯನ್ನು ಕಲಿಕೆಯ ಮಾದ್ಯಮ ಮಾಡುವುದರ ಬಗ್ಗೆ ಸಂಸತ್ತಿನಲ್ಲಿ ಚರ‍್ಚೆ ನಡೆಸುವುದಕ್ಕೆ ನೆರವಾಗಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಈ ವಿಶಯದಲ್ಲಿ ಹಲವಾರು ರಾಜ್ಯಗಳ ಮುಕ್ಯಮಂತ್ರಿಗಳಿಗೆ ಕಾಗದವನ್ನೂ ಬರೆದಿರುವುದಾಗಿ ತಿಳಿಸಿದ್ದಾರೆ. ಕನ್ನಡವನ್ನು ಕಾಯುವ ಅವರ ಈ ಕಾಯಕ ಅಡೆತಡೆಯಿಲ್ಲದೇ ಮುಂದುವರೆಯಲಿ ಎಂದು ಹಾರಯ್ಸೋಣ.
      ಇನ್ನು ನಮ್ಮ ಸಂಸದರು ಕೂಡ ಪಕ್ಶಾತೀತವಾಗಿ ಸಂಸತ್ತಿನ ಪ್ರಮಾಣವಚನವನ್ನು ಕನ್ನಡದಲ್ಲೇ ತೆಗೆದುಕೊಂಡಿದ್ದಾರೆ. ಕೇಂದ್ರಮಂತ್ರಿಮಂಡಲದ ಪ್ರಮಾಣವಚನವನ್ನು ಹಿಂದಿಯಲ್ಲಿ ತೆಗೆದುಕೊಂಡು ಮೊದಲು ಕನ್ನಡಿಗರಿಗೆ ಕಸಿವಿಸಿಯುಂಟುಮಾಡಿದ್ದ ಅನಂತಕುಮಾರರು ಕೂಡ ಬಳಿಕ ಸಂಸದ ಪ್ರಮಾಣವಚನವನ್ನಾದರೂ ಕನ್ನಡದಲ್ಲಿ ತೆಗೆದುಕೊಂಡು ನಾವೆಲ್ಲ ಸಮಾದಾನದ ನಿಟ್ಟುಸಿರನ್ನು ಬಿಡುವಂತೆ ಮಾಡಿದ್ದಾರೆ. ಆದರೆ, ಎಲ್ಲಾ ಕನ್ನಡಿಗ ಸಂಸದರೂ ಕನ್ನಡದಲ್ಲೇ ಪ್ರಮಾಣವಚನ ತೆಗೆದುಕೊಂಡಿಲ್ಲ. ಒಬ್ಬರು ಪಾಪ ಸಂಸ್ಕ್ರುತದಲ್ಲಿ ತೆಗೆದುಕೊಂಡರಂತೆ! ಏನು ಹೇಳುವುದು ಇದಕ್ಕೆ? ಕನ್ನಡಕ್ಕೆ ಹೊಡೆತ ಬಿದ್ದಿರುವ ಈ ದಿನಗಳಲ್ಲಿ, ಉಳಿದೆಲ್ಲ ಕನ್ನಡಿಗ ಸಂಸದರು ಒಗ್ಗಟ್ಟಿನಿಂದ ಕನ್ನಡವನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ‍್ಬದಲ್ಲಿ, ಈ ಒಬ್ಬರಿಗೆ ಕನ್ನಡ ಬಿಟ್ಟು ಸಂಸ್ಕ್ರುತದಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ ಬಯಕೆ ಏಕೆ ಬಂತೋ?
      ನಮ್ಮ ಬಹುತೇಕ ಸಂಸದರು ಹೀಗೆ ಕನ್ನಡತನವನ್ನು ಮೆರೆದಿರುವುದು ಉದ್ದೇಶಪೂರ‍್ವಕವಾಗಿರಬಹುದು. ಸುಪ್ರೀಮ್ ಕೋರ‍್ಟಿನ ತೀರ‍್ಪಿನ ಬಗ್ಗೆ ಚರ‍್ಚೆ ನಡೆಸಲು ಸಂಸತ್ತಿನ ವಾತಾವರಣವನ್ನು ಮುನ್ನಣಿಗೊಳಿಸುವ ಸಲುವಾಗಿ ಅವರು ಈ ರೀತಿ ಮಾಡಿರಬಹುದು. ಯಾವ ಕಾರಣಕ್ಕಾದರೂ ಮಾಡಿರಲಿ, ಕನ್ನಡತನದ ಇಂತಹ ಪ್ರದರ‍್ಶನವನ್ನು ನಮ್ಮ ಸಂಸದರು ಹೀಗೇ ಮುಂದುವರೆಸಿಕೊಂಡು ಹೋಗಬೇಕು. ಏಕೆಂದರೆ, ಬೀಜೇಪಿ ಪಕ್ಶ ಈಗ ಪೂರ‍್ಣ ಅದಿಕಾರಕ್ಕೆ ಬಂದಿರುವುದರಿಂದ, ಕನ್ನಡದಂತಹ ಹಿಂದಿಯೇತರ ಸ್ತಳೀಯ ನುಡಿಗಳನ್ನು ಚಚ್ಚರದಿಂದ ಎತ್ತಿಹಿಡಿಯುವ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚು ಉಂಟಾಗಿದೆ. ಉತ್ತರದ ಬೀಜೇಪಿ ಪಕ್ಶದವರು ಎಲ್ಲೆಡೆಯಲ್ಲೂ ಎಲ್ಲ ಸಂದರ‍್ಬಗಳಲ್ಲೂ ಹಿಂದೀಯಲ್ಲೇ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಅವರ ಮುಂದಾಳುಗಳು ಆಂಗ್ಲ ಚಾನೆಲ್ಲುಗಳಿಗೆ ಬರುತ್ತಾರೆ, ಆದರೆ, ಇಂಗ್ಲೀಶ್ ಚೆನ್ನಾಗಿ ಬಂದರೂ, ಹಿಂದೀಯಲ್ಲೇ ರಾಜಾರೋಶವಾಗಿ ಮಾತಾಡುತ್ತಾರೆ. ಕೋಟ್ಯಂತರ ಬಾರತೀಯರಿಗೆ ಹಿಂದಿ ತಿಳಿಯದು ಎಂಬ ಪರಿವೆಯಾಗಲೀ ಕಾಳಜಿಯಾಗಲೀ ಅವರಿಗಿಲ್ಲ. ಹೀಗೆ ನಡೆದುಕೊಳ್ಳುವುದೂ ಕೂಡ ಒಂದು ರೀತಿಯಲ್ಲಿ ಹಿಂದೀ ಹೇರಿಕೆಯೇ ತಾನೆ?
      ಇಂತಹವರಿಗೆ ಪ್ರತ್ಯುತ್ತರವಾಗಿ ನಮ್ಮ ದಕ್ಶಿಣದ ಮುಂದಾಳುಗಳು ಕೂಡ ಎಲ್ಲಿ ಅಂದರಲ್ಲಿ ನಮ್ಮ ದ್ರಾವಿಡ ನುಡಿಗಳನ್ನೇ ಆಡಿ ತೋರಿಸಬೇಕು. ಆದರೆ, ಅಂತಹ ಗಂಡು ಇರುವ ಮುಂದಾಳುಗಳು ನಮ್ಮಲ್ಲಿದ್ದಾರೆಯೆ? ಹಿಂದೆ ಇದ್ದರು. ಎಪ್ಪತ್ತರ ದಶಕದಲ್ಲಿ ಒಮ್ಮೆ ದಿಲ್ಲಿಯ ಒಂದು ಸಮಾರಂಬದಲ್ಲಿ, ವೇದಿಕೆಯ ಮೇಲಿದ್ದವರು ಬರೀ ಹಿಂದಿಯಲ್ಲಿ ಬಾಶಣ ಮಾಡಿದರು. ಅದಕ್ಕೆ ಪ್ರತ್ಯುತ್ತರವಾಗಿ, ವೇದಿಕೆಯ ಮೇಲಿದ್ದ ನಮ್ಮ ಸಹದ್ರಾವಿಡರಾದ ತೆಲುಗಿನ ನೀಲಮ್ ಸಂಜೀವ ರೆಡ್ಡಿಯವರು, ತಮ್ಮ ಸರದಿ ಬಂದಾಗ ಮೊದಲೆರಡು ನಿಮಿಶ ತೆಲುಗಿನಲ್ಲಿ ಬಾಶಣ ಮಾಡಿ, ಹಿಂದೀವಾಲರಿಗೆ ಪೆಚ್ಚಾಗುವಂತೆ ಮಾಡಿ, ಬಳಿಕ ಇಂಗ್ಲೀಶಿನಲ್ಲಿ ಬಾಶಣವನ್ನು ಮುಂದುವರೆಸಿದರು. ಇಂತಹ ಗಂಡು ನಮ್ಮ ಈಗಿನ ತೆಂಕಣದ ಮುಂದಾಳುಗಳಿಗೆ ಇದೆಯೆ?
      ಕನ್ನಡವನ್ನು ಉಳಿಸುವ ಸಲುವಾಗಿ ನಾವು ಹಲವಾರು ಕಟ್ಟಳೆಗಳನ್ನು ತರಬಹುದು. ಸಂವಿದಾನವನ್ನೂ ತಿದ್ದಬಹುದು. ಆದರೆ, ಕನ್ನಡಿಗರಲ್ಲಿ ಕನ್ನಡದ ಅಬಿಮಾನವೇ ಇಲ್ಲದಿದ್ದರೆ ಕಟ್ಟಳೆಗಳಿಂದ ಏನು ಪ್ರಯೋಜನ? ವಲಸಿಗರ ಮಕ್ಕಳಿಗೆ ನಾವು ಕಟ್ಟಳೆ ಜಾರಿಗೊಳಿಸಿ ಕಡ್ಡಾಯವಾಗಿ ಶಾಲೆಯಲ್ಲಿ ಕನ್ನಡವನ್ನು ಕಲಿಸಬಹುದು. ಆದರೆ, ಅವರು ಕನ್ನಡವನ್ನು ಮಾತಾಡುವಂತೆಯೂ ಮಾಡಲು ಕಟ್ಟಳೆಯನ್ನು ಜಾರಿಗೊಳಿಸಲು ಬರುವುದೇ? ಇಂದು ಎಶ್ಟೊಂದು ಮಂದಿ ಹುಟ್ಟು ಕನ್ನಡಿಗರೇ ಕನ್ನಡ ಬಿಟ್ಟು ಇಂಗ್ಲೀಶಿನಲ್ಲಿ ಮಾತಾಡುತ್ತಿದ್ದಾರೆ. ಇಂತಹವರನ್ನೆಲ್ಲಾ ಕನ್ನಡದಲ್ಲಿ ಮಾತಾಡುವಂತೆ ಮಾಡಲು ಕಟ್ಟಳೆ ಮಾಡಲಾದೀತೆ? ಎಲ್ಲಕ್ಕೂ ಮೊದಲು ನಮ್ಮಲ್ಲಿ ಸ್ವಾಬಿಮಾನವಿರಬೇಕು. ಎಲ್ಲೆಡೆಯಲ್ಲೂ ನಾವು ನಮ್ಮ ನುಡಿಯನ್ನು ಆಡಬೇಕು ಮತ್ತು ವಲಸಿಗರ ಬಾಯಲ್ಲಿ ಆಡಿಸಬೇಕು. ಹಾಗೆ ಮಾಡಿದರೆ ಕನ್ನಡ ಉಳಿದೀತೇ ಹೊರತು, ಅದನ್ನು ಬಿಟ್ಟು ಬರೀ ಒಂದರ ಮೇಲೊಂದು ಕಟ್ಟಳೆಗಳನ್ನು ಹೊಸೆದರೆ ಏನೂ ಬಾಳ್ತೆಯಿಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್