ಮಂಗಳವಾರ, ಜೂನ್ 25, 2013

ಕನ್ನಡದಲ್ಲೂ ಮುದ್ದಾದ ಹೆಸರುಗಳಿವೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡ ಟೀವಿ ಕಾಲುವೆಯೊಂದರಲ್ಲಿ ’ಚಿಣ್ಣರ ಚಿಲಿಪಿಲಿ’ಎಂಬ, ಪುಟ್ಟ ಮಕ್ಕಳು ಪಾಲ್ಗೊಳ್ಳುವ ಜನಪ್ರಿಯ ಕಾರ‍್ಯಕ್ರಮವೊಂದು ಪ್ರಸಾರವಾಗುತ್ತಿದೆ. ಅದರಲ್ಲಿ ಇತ್ತೀಚೆಗೆ ಕೇವಲ ಕೊಡವ ಮಕ್ಕಳಶ್ಟೇ ಪಾಲ್ಗೊಂಡ ವಿಶೇಶ ಸಂಚಿಕೆಯೊಂದು ಬಿತ್ತರವಾಯಿತು. ಆ ಮಕ್ಕಳಲ್ಲಿ ಒಬ್ಬ ಪುಟಾಣಿ ಹುಡುಗಿಗೆ ’ಬೆಳಕು’ ಎಂಬ ಮುದ್ದಾದ ಹೆಸರು. ’ಬೆಳಕು’ ಅಪ್ಪಟ ಕನ್ನಡ ಪದ. ಅದು ಕೊಡವ ಪದವೂ ಆಗಿರಬಹುದೇನೋ. ಒಟ್ಟಿನಲ್ಲಿ ದ್ರಾವಿಡ ಮೂಲದ ಪದ. ಸಾಮಾನ್ಯವಾಗಿ ಬರೀ ಸಂಸ್ಕ್ರುತ ಪದಗಳಿಂದಲೇ ಮಕ್ಕಳಿಗೆ ಹೆಸರಿಡುವ ನಮ್ಮಲ್ಲಿ ಈಗೀಗ ಕನ್ನಡ ಅತವ ದ್ರಾವಿಡ ಮೂಲದ ಹೆಸರುಗಳನ್ನಿಡುವ ಪ್ರವ್ರುತ್ತಿ ಕೂಡ ಶುರುವಾಗಿದೆ. ’ನಮ್ಮ ನುಡಿಯಲ್ಲೇ ಹೆಸರಿಡೋಣ, ಸಂಸ್ಕ್ರುತವೇನೂ ಬೇಕಾಗಿಲ್ಲ’ ಎಂಬ ನಿಲುವು ಇದಕ್ಕೆ ಕಾರಣವೋ, ಇಲ್ಲ, ’ಸಾಮಾನ್ಯ ಹೆಸರು ಬೇಡ, ಯುನೀಕ್ ಆದ ಹೆಸರು ಇರಲಿ’ ಎನ್ನುವ ದೋರಣೆ ಕಾರಣವೋ, ನನಗೆ ತಿಳಿಯದು. ಆದರೆ, ಕಾರಣ ಏನಾದರೂ ಇರಲಿ, ಮತ್ತೆ ಅಚ್ಚಗನ್ನಡ ಹೆಸರುಗಳು ಚಲಾವಣೆಗೆ ಹೇಗೋ ಬರುತ್ತಿರುವುದು ಅಚ್ಚಗನ್ನಡದ ಒಲವಿಯಾದ ನನ್ನ ಕಣ್ಣಿನಲ್ಲಿ ಒಂದು ಸಂತಸದ ಸಂಗತಿ.
      ಅಯ್ದಾರು ದಶಕಗಳ ಹಿಂದಿನವರೆಗೆ ಕನ್ನಡಿಗರ ಹೆಸರುಗಳು ಹೆಚ್ಚುಕಡಿಮೆ ಕನ್ನಡದ್ದೇ ಅಂದರೆ ದ್ರಾವಿಡ ಮೂಲದ ಹೆಸರುಗಳೇ ಆಗಿರುತ್ತಿದ್ದವು. ಚೆಲುವಯ್ಯ, ಕಲ್ಲಪ್ಪ, ಚೆನ್ನಣ್ಣ, ಕೆಂಪ, ಕರಿಯ, ತಾಯಕ್ಕ, ಪುಟ್ಟಮ್ಮ, ಚಿಕ್‍ತಾಯಿ, ಎಲ್ಲವ್ವ - ಹೀಗೆ ಕನ್ನಡದ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದುದೇ ರೂಡಿಯಲ್ಲಿತ್ತು. ಕೆಳಜಾತಿಯ ಮಂದಿಯಲ್ಲಿ ಇಂತಹ ಹೆಸರುಗಳೇ ಹೆಚ್ಚಾಗಿ ಕಾಣುತ್ತಿದ್ದವು. ಮೇಲುಜಾತಿಯವರಲ್ಲಿ ಸ್ವಲ್ಪ ಸಂಸ್ಕ್ರುತ ಮೂಲದ ಹೆಸರುಗಳು ಚಾಲ್ತಿಯಲ್ಲಿದ್ದು, ಆ ಹೆಸರುಗಳು ಸಾಮಾನ್ಯವಾಗಿ ನಾರಾಯಣ, ಶ್ರೀನಿವಾಸ, ರಾಮಕ್ರಿಶ್ಣ, ಸೀತಾಪತಿ ಮುಂತಾದ ದೇವರ ಹೆಸರುಗಳಾಗಿರುತ್ತಿದ್ದವು. ಬಳಿಕದ ದಿನಗಳಲ್ಲಿ ಕ್ರಮೇಣ ಕನ್ನಡದ ಹೆಸರುಗಳು ಮತ್ತು ದೇವರ ಹೆಸರುಗಳು ಕಾಣೆಯಾಗತೊಡಗಿದವು. ಸಂಸ್ಕ್ರುತ ಮೂಲದ ಪಶು, ಪಕ್ಶಿ, ವಸ್ತುಗಳ ಹೆಸರುಗಳು ಬಳಕೆಗೆ ಬರಲು ಶುರುವಾದವು. ’ಓದಿದ’ ಕನ್ನಡಿಗರು ಇಂತಹ ಸಂಸ್ಕ್ರುತ ಮೂಲದ ಹೆಸರುಗಳನ್ನು ಇಡುವುದರಲ್ಲಿ ಒಂದು ರೀತಿಯಲ್ಲಿ ಪಯ್‍ಪೋಟಿಗೇ ತೊಡಗಿದರು ಎನ್ನಬಹುದು. ಪವನ್, ಪರಾಗ್, ಕಿರಣ್, ವಸಂತ್, ಮಯೂರ್, ಸುನಿಲ್, ಸೀಮಾ, ಪುಶ್ಪ, ಸ್ನೇಹಾ, ಸಾಗರ್, ಪಂಚಮ್, ಶ್ರುತಿ, ಶ್ವೇತಾ ಮುಂತಾದ ಹೆಸರುಗಳೇ ಪುಟಿದಾಡತೊಡಗಿದವು. ಬರುಬರುತ್ತಾ ಕನ್ನಡಿಗರಲ್ಲಿ ’ತಮ್ಮ ಮಕ್ಕಳ ಹೆಸರುಗಳು ಬರೀ ಸಂಸ್ಕ್ರುತ ಮೂಲದ್ದಾದರೆ ಸಾಲದು, ಅವು ಸಾಮಾನ್ಯವಾಗಿರಬಾರದು, ಯುನೀಕ್ ಕೂಡಾ ಆಗಿರಬೇಕು’ ಎಂಬ ದೋರಣೆಯೂ ಮೂಡಿತು. ಅದರ ಪರಿಣಾಮವಾಗಿ ಆಕಾಂಕ್ಶಾ, ಪ್ರಜ್ನ್ಯಾ, ಸ್ರುಜನಾ, ಮನೋಜ್ನ್ಯಾ ಮುಂತಾದ ಕಂಡುಕೇಳದ ಹೆಸರುಗಳೂ ಚಲಾವಣೆಗೆ ಬಂದವು. ಎಶ್ಟೋ ಮಕ್ಕಳ ಹೆಸರುಗಳನ್ನು ಅವರ ತಾತ ಅಜ್ಜಿಯರಿಗೆ ಉಚ್ಚಾರಣೆ ಮಾಡುವುದೇ ಅಸಾದ್ಯವಾಯಿತು! ಒಟ್ಟಿನಲ್ಲಿ ಕನ್ನಡದ ಹಾಗೂ ದೇವರ ಹೆಸರುಗಳು ಯಾರಿಗೂ ಹಿಡಿಸದೆ ಮೂಲೆಗುಂಪಾದವು. ಸಂಸ್ಕ್ರುತದ ಹೆಸರುಗಳು ಮನೆಮನೆಯಲ್ಲೂ ಬಳಕೆಗೆ ಬಂದವು. ಸಂಸ್ಕ್ರುತದ ಹೆಸರಾದರೆ ಆಯಿತು, ಅದು ಹೇಗೇ ಇರಲಿ, ಅದಕ್ಕೆ ಸಮಾಜದ ಒಪ್ಪಿಗೆ ಕೂಡಲೇ ದೊರೆಯುವಂತಾಯಿತು. ಸಂಸ್ಕ್ರುತದ ಹೆಸರುಗಳ ಇಂತಹ ಜನಪ್ರಿಯತೆಯಿಂದಾಗಿ ’ಇನ್ನು ಕನ್ನಡದ ಹೆಸರುಗಳು ಮತ್ತೆ ಬರುವುದಿಲ್ಲ, ಅವು ಹೋಗೇ ಬಿಟ್ಟವು’ಎನ್ನುವಂತಾಯಿತು. ಆದರೂ ಅಚ್ಚರಿ ಎಂಬಂತೆ ಅಲ್ಲಲ್ಲಿ ಒಂದೊಂದು ಕನ್ನಡದ ಹೆಸರುಗಳು ಹೊಸ ರೂಪಗಳಲ್ಲಿ ತಲೆ ಎತ್ತಲು ಶುರುಮಾಡಿದವು! ಈಗೀಗ ಅವುಗಳ ಸಂಕ್ಯೆ ಹೆಚ್ಚುತ್ತಿರುವ ಹಾಗೆಯೂ ಕಾಣಿಸುತ್ತಿದೆ. ಕನ್ನಡದ ಹೆಸರುಗಳ ಬೇರು ಇನ್ನೂ ಜೀವಂತವಾಗಿರುವ ಹಾಗೆ ಕಾಣುತ್ತದೆ!
      ಕೆಲ ಕನ್ನಡಿಗರು ತಮ್ಮ ಮಕ್ಕಳಿಗೆ ಅಪ್ಪಟ ಕನ್ನಡದ ಹೆಸರುಗಳನ್ನು ಇಟ್ಟಿರುವುದಕ್ಕೆ ಕೆಲವು ಎತ್ತುಗೆಗಳನ್ನು (ಉದಾಹರಣೆಗಳನ್ನು) ಕೊಡುತ್ತೇನೆ. ರಯ್ತ ಸಂಗ ಕಟ್ಟಿದ ನಂಜುಂಡಸ್ವಾಮಿಯವರ ಮಗಳ ಹೆಸರು ಚುಕ್ಕಿ. ಹೆಸರಾಂತ ಸಾಹಿತಿಗಳಾದ ದಾರವಾಡದ ಪಟ್ಟಣಶೆಟ್ಟಿ ದಂಪತಿಗಳ ಮಗಳ ಹೆಸರು ಹೂ. ಸಾಹಿತಿ ಹಾಗು ಚಿತ್ರ ನಿರ‍್ದೇಶಕ ನಾಗತಿಹಳ್ಳಿಯವರ ಇಬ್ಬರು ಹೆಣ್ಣುಮಕ್ಕಳ ಹೆಸರು ಸಿಹಿ ಮತ್ತು ಕನಸು. ಈಗ ನಮ್ಮ ನಾಡಿನ ಅಡ್ವೊಕೇಟ್ ಜನರಲ್ ಆಗಿರುವ ಹಿರಿಯ ನ್ಯಾಯವಾದಿ ರವಿವರ‍್ಮ ಕುಮಾರರ ಮಗಳ ಹೆಸರು ಬೆಳ್ಳಿ. ಇವರೆಲ್ಲಾ ಸಾಮಾನ್ಯರಲ್ಲ. ತಮ್ಮ ತಮ್ಮ ಸಾದನೆಗಾಗಿ ಹೆಸರು ಪಡೆದುಕೊಂಡಂತವರು (ಮಕ್ಕಳಿಗೆ ಹೆಸರಿಡುವ ಕಾಲಕ್ಕೆ ಇವರಿಗೆ ಇನ್ನೂ ಹೆಸರು ಬಂದಿರಲಿಕ್ಕಿಲ್ಲ. ಆಗ ಮಂದಿಯ ಕಣ್ಣಲ್ಲಿ ಇವರೂ ಸಾಮಾನ್ಯರೇ ಆಗಿದ್ದಿರಬೇಕು). ಇಂತಹ ಸಾದಕರೇ ಹೆಮ್ಮೆಯಿಂದ ತುಳಿದಂತಹ ದಾರಿಯನ್ನು ತುಳಿಯಲು ಉಳಿದವರಿಗೆ ಹಿಂಜರಿಕೆ ಆಗಲೇ ಬಾರದು ತಾನೆ? ಅಂದಹಾಗೆ, ಬೇರೆ ಕೆಲ ಕನ್ನಡಿಗರೂ ಮಕ್ಕಳಿಗೆ ಕನ್ನಡದ ಹೆಸರುಗಳನ್ನು ಇಟ್ಟಿರುವುದನ್ನು ನಾನು ನೋಡಿದ್ದೇನೆ. ನುಡಿ, ನವಿಲ್, ಇಬ್ಬನಿ, ಇಂಪು ಮುಂತಾದವು ಈ ಹೆಸರುಗಳು.
      ಹಳಗನ್ನಡದಲ್ಲಿ ಕಣ್ಣಾಡಿಸಿದರೆ ’ಆದುನಿಕ’ ಎನಿಸುವ ಹಲವಾರು ಹೆಸರುಗಳು ದೊರೆಯುತ್ತವೆ. ಇನ್ನು ’ಬರೀ ಕನ್ನಡದ್ದೇ ಆಗಬೇಕಾಗಿಲ್ಲ, ಒಟ್ಟಾರೆ ದ್ರಾವಿಡ ಮೂಲದ್ದಾದರೆ ಸಾಕು’ ಎನ್ನುವುದಾದರೆ ಹೆಸರುಗಳ ಆಯ್ಕೆಗೆ ಕೊರತೆ ಇರುವುದಿಲ್ಲ. ತುಳು, ಕೊಡವ, ತಮಿಳು, ತೆಲುಗು ಮತ್ತು ಮಲಯಾಳ ಬಾಶೆಗಳಿಂದ ಹೇರಳವಾಗಿ ಹೆಸರುಗಳು ದೊರೆಯಬಹುದು. ಒಂದು ರೀತಿಯಲ್ಲಿ ಎಲ್ಲಾ ದ್ರಾವಿಡ ನುಡಿಗಳಿಂದ ಹೆಸರುಗಳನ್ನು ಹೆಕ್ಕಿಕೊಳ್ಳುವುದೇ ಒಳ್ಳೆಯದು. ಹಾಗೆ ಮಾಡುವುದರಿಂದ ’ದ್ರಾವಿಡ ನುಡಿಗಳನ್ನಾಡುವ ನಮ್ಮೆಲ್ಲರದು ಒಂದೇ ಸಮುದಾಯ’ ಎನ್ನುವ ಅರಿವಿಗೆ ಹೆಚ್ಚಿನ ಇಂಬು ಸಿಕ್ಕಂತಾಗುತ್ತದೆ.
      ಇಶ್ಟೆಲ್ಲಾ ಹೇಳಿದ ಮೇಲೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಬೇಕಾಗುತ್ತದೆ. ’ದ್ರಾವಿಡ ಹೆಸರನ್ನೇ ಇಡುತ್ತೇನೆ’ಎಂದು ಹಟಕ್ಕೆ ಬಿದ್ದು ಮಕ್ಕಳಿಗೆ ಹೇಗೆ ಹೇಗೋ ಹೆಸರನ್ನಿಡುವುದು ಸರಿಯಲ್ಲ. ಹೆಸರನ್ನಿಡುವುದೇನೋ ತಂದೆತಾಯಿಗಳು. ಆದರೆ, ಅದರ ಹೊರೆಯನ್ನು ಹೊರುವುದು ಮಾತ್ರ ಬಡಪಾಯಿ ಮಕ್ಕಳು! ಆದ್ದರಿಂದ, ಮಕ್ಕಳಿಗೆ ಹೆಸರನ್ನಿಡುವಾಗ ಸಮಾಜ ಆ ಹೆಸರನ್ನು ಹೇಗೆ ನೋಡಬಹುದು ಎಂಬುದರ ಪರಿವೆಯೂ ನಮಗಿರಬೇಕು. ಜಾಗರೂಕತೆಯಿಂದ ಹೆಸರನ್ನಿಡಬೇಕು. ಒಟ್ಟಾರೆ ನನ್ನ ಈ ಬರಹದ ಉದ್ದೇಶ ಇಶ್ಟೆ - ’ಇಂಪಾದ ಇಲ್ಲ ಆದುನಿಕ ಎನಿಸುವ ಹೆಸರುಗಳು ಬರೀ ಸಂಸ್ಕ್ರುತದ ಸೊತ್ತಲ್ಲ. ದ್ರಾವಿಡ ನುಡಿಗಳಲ್ಲೂ ಅವು ಇವೆ. ಮಕ್ಕಳ ಹೆಸರನ್ನು ಆಯುವಾಗ ಕನ್ನಡ ಮತ್ತು ಉಳಿದ ದ್ರಾವಿಡ ನುಡಿಗಳಲ್ಲೂ ಒಮ್ಮೆ ಕಣ್ಣಾಡಿಸುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಮುದ್ದಾದ ಹಾಗೂ ಸಾಮಾನ್ಯವಲ್ಲದ ಹೆಸರುಗಳು ನಮ್ಮ ನುಡಿಗಳಲ್ಲೇ ನಮಗೆ ಸಿಗಬಹುದು.’

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: