ಬುಧವಾರ, ಜುಲೈ 10, 2013

ಮಹಿಶಿ ವರದಿಗೆ ಸಂವಿದಾನದ ಅಡ್ಡಗಾಲು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮುಕ್ಯಮಂತ್ರಿ ಸಿದ್ದರಾಮಯ್ಯನವರು ಸರೋಜಿನಿ ಮಹಿಶಿ ವರದಿಯನ್ನು ಪರಿಶ್ಕರಿಸುವುದಕ್ಕೆ ಆದೇಶ ನೀಡುವುದಾಗಿ ಹೇಳಿದ್ದಾರೆ. ಹಾಗೆಂದು ಅವರು ಹೇಳಿರುವುದನ್ನು ಪತ್ರಿಕೆಗಳು ಕಳೆದ ತಿಂಗಳ ಹದಿನಾರರಂದು ವರದಿ ಮಾಡಿವೆ. ಪರಿಶ್ಕರಿಸುವುದು ಎಂದರೆ ತಕ್ಕ ಬಗೆಯ ಮಾರ‍್ಪಾಟುಗಳಿಂದ ಮೂರು ದಶಕಳಶ್ಟು ಹಳೆಯದಾದ ಈ ವರದಿಯನ್ನು ಇಂದಿನ ನೆಲೆನಡೆಗೆ ಹೊಂದಿಸುವುದು ಎಂದರ‍್ತ. ಹಾಗೆ ಮಾಡುವುದರಿಂದ ಅದರ ಅನುಶ್ಟಾನ ಹಗುರವೂ ಅರ‍್ತಪೂರ‍್ಣವೂ ಆಗಬಹುದೆಂಬುದು ಹೇಳಿಕೆಯ ಇಂಗಿತ. ಸಿದ್ದರಾಮಯ್ಯನವರಿಗಾದರೂ ಮಹಿಶಿ ವರದಿಯ ನೆನಪು ಇನ್ನೂ ಇದೆಯಲ್ಲಾ ಎನ್ನುವುದು ಒಂದು ಸಂತಸದ ಸಂಗತಿ.
      ವರದಿಗೆ ಮಾರ‍್ಪಾಟುಗಳೇನೋ ಆಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಎಂತಹ ಮಾರ‍್ಪಾಟುಗಳು ಆಗಬೇಕು? ಇದರ ಬಗ್ಗೆ ಸರ‍್ಕಾರ ಕೊಂಚ ಚಚ್ಚರದಿಂದ ಯೋಚಿಸಬೇಕು. ಮಾರ‍್ಪಾಡುಗಳು ತಕ್ಕವಲ್ಲದಿದ್ದರೆ ವರದಿಯ ಅನುಶ್ಟಾನಕ್ಕೆ ಸಂವಿದಾನದ ಅಡ್ಡಗಾಲು ಬೀಳುವುದು ಕಂಡಿತ. ನ್ಯಾಯಾಲಯಗಳು ಸಂವಿದಾನದ ಪರ ತೀರ‍್ಪುಗಳನ್ನು ಕೊಡುವುದೂ ಅಶ್ಟೇ ಕಂಡಿತ. ಹೀಗೆ ಏಕೆ ಹೇಳುತ್ತಿದ್ದೇನೆ ಎಂದರೆ, ನಮ್ಮ ಉಚ್ಚ ನ್ಯಾಯಾಲಯ ಈಗಾಗಲೇ ಈಗಿರುವ ಮಹಿಶಿ ವರದಿಯ ಬಗ್ಗೆ ತನ್ನ ಅನಿಚ್ಚೆಯನ್ನು ಕಡ್ಡಿ ಮುರಿದಂತೆ ವ್ಯಕ್ತಪಡಿಸಿದೆ. ಸಂವಿದಾನವನ್ನು ಮುಂದಿಟ್ಟುಕೊಂಡು ಮಹಿಶಿ ವರದಿಯನ್ನು ಹೊಡೆದುರುಳಿಸಿದೆ.
      ಕಳೆದ ವರ‍್ಶ ನಮ್ಮ ಹಿರಿಯ ನಾಗರೀಕರಾದ ವಿನುತ, ’ಕರ‍್ನಾಟಕದ ಅಯ್‍ಟೀ ಕಂಪನಿಗಳು ಕೆಲಸ ಕೊಡುವಲ್ಲಿ ಕನ್ನಡಿಗರನ್ನು ಬೇಕೆಂದೇ ಕಡೆಗಾಣಿಸುತ್ತಿವೆ. ಆದ್ದರಿಂದ ಮಹಿಶಿ ವರದಿಯ ಸಂಪೂರ‍್ಣ ಅನುಶ್ಟಾನ ನಮ್ಮ ನಾಡಿನ ಉದ್ಯಮಗಳಲ್ಲಿ ಆಗಬೇಕು’ ಎಂದು ಆಗ್ರಹಿಸಿ ಉಚ್ಚ ನ್ಯಾಯಾಲಯದಲ್ಲಿ ಸಾರ‍್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದರು. ’ಬೆಂಗಳೂರಿನ ಅಯ್‍ಟೀ ಕಂಪನಿಗಳಲ್ಲಿ ಕೆಲಸ ಮಾಡುವ ಕನ್ನಡಿಗರ ಸಂಕ್ಯೆ ನೂರಕ್ಕೆ ಹತ್ತರಶ್ಟೂ ಇಲ್ಲ. ಅದೇ ಚೆನ್ನಯ್‍ನ ಅಯ್‍ಟೀ ಕಂಪನಿಗಳಲ್ಲಿ ದುಡಿಯುವ ತಮಿಳರ ಸಂಕ್ಯೆ ಮತ್ತು ಹಯ್ದರಾಬಾದಿನ ಅಯ್‍ಟೀ ಕಂಪನಿಗಳಲ್ಲಿ ಕೆಲಸ ಮಾಡುವ ತೆಲುಗರ ಸಂಕ್ಯೆ ನೂರಕ್ಕೆ ಎಪ್ಪತ್ತಕ್ಕೂ ಮಿಕ್ಕಿದೆ’ ಎಂದು ದಾವೆಯಲ್ಲಿ ವಾದಿಸಿದ್ದರು. ಇನ್ನೂ ಮುಂದುವರೆದು, ’ಕಾಲೇಜುಗಳಿಂದ ನೇರವಾಗಿ ಕಂಪನಿಗೆ ಪದವೀದರರನ್ನು ಸೇರಿಸಿಕೊಳ್ಳುವಾಗ ಮತ್ತು ಕಂಪನಿಯೊಳಗೆ ಬಡ್ತಿಗಳನ್ನು ಕೊಡುವಾಗಲೂ ಕನ್ನಡಿಗರ ಕಡೆಗಣನೆ ಉದ್ದೇಶಪೂರ‍್ವಕವಾಗೇ ಆಗುತ್ತಿದೆ’ ಎಂದೂ ಅವರು ದೂರಿದ್ದರು.
      ವಿನುತರ ಈ ದಾವೆಗೆ ಈ ವರ‍್ಶ ಹಯ್‍ಕೋರ‍್ಟಿನ ವಿಬಾಗೀಯ ಬೆಂಚ್ ತೀರ‍್ಪು ಕೊಟ್ಟಿತು. ಅದು ಹೀಗಿದೆ - ’ಉದ್ಯೋಗದ ವಿಶಯದಲ್ಲಿ ಬಾಶೆಯನ್ನು ಪರಿಗಣಿಸುವುದು ಅಕ್ರಮವಾಗುತ್ತದೆ. ಸಂವಿದಾನದ ಹದಿನಾಲ್ಕನೆಯ ಮತ್ತು ಹದಿನಾರನೆಯ ಆರ‍್ಟಿಕಲ್ಲುಗಳನ್ನು ಮೀರಿದಂತಾಗುತ್ತದೆ. ಬಾಶೆಯ ಆದಾರದ ಮೇಲೆ ಕೆಲಸಗಳನ್ನು ಕೊಡುವಂತೆ ಸರ‍್ಕಾರಕ್ಕೆ ನ್ಯಾಯಾಲಯಗಳು ಆದೇಶ ಮಾಡುವಂತಿಲ್ಲ. ಹಾಗೆ ಮಾಡುವುದಕ್ಕೆ ಸಂಸತ್ತಿಗೆ ಮಾತ್ರ ಅಳವಿರುತ್ತದೆ.’ ಸಂಸತ್ತಿಗೆ ಮಾತ್ರ ಅದಿಕಾರ ಇದೆ ಎಂದರೆ, ’ತಕ್ಕ ಕಾನೂನುಗಳನ್ನು ಜಾರಿ ಮಾಡುವುದೂ, ಸಂವಿದಾನವನ್ನು ಅದಕ್ಕಾಗಿ ತಿದ್ದುಪಡಿ ಮಾಡುವುದೂ - ಇವೇ ನಾಡಿನ ಮಕ್ಕಳಿಗೆ ಆದ್ಯತೆಯಿಂದ ಕೆಲಸ ದೊರಕಿಸಿ ಕೊಡುವುದಕ್ಕೆ ದಾರಿ.’ ಎಂದರ‍್ತ. ಈ ತೀರ‍್ಪನ್ನು ನೋಡಿದರೆ, ಮಹಿಶಿ ವರದಿಯನ್ನು ಬರೀ ಪರಿಶ್ಕರಿಸಿದ ಮಾತ್ರಕ್ಕೆ ಅದರ ಅನುಶ್ಟಾನ ನ್ಯಾಯಾಲಯದ ಅಡ್ಡಗಾಲನ್ನು ದಾಟುವುದೆ ಎಂಬ ಅನುಮಾನ ಮೂಡುತ್ತದೆ. ನುರಿತ ನ್ಯಾಯವಾದಿಗಳೇ ಈ ಸಂದೇಹವನ್ನು ಬಗೆಹರಿಸಬೇಕು.
      ಕಂಪನಿಗಳು ಇಂದು ಬರೀ ’ಪ್ರತಿಬೆಯ’ ಆದಾರದ ಮೇಲೆ ಕೆಲಸಗಳನ್ನು ಕೊಡುತ್ತಿರುವುದಾಗಿ ಹೇಳಿಕೊಳ್ಳುತ್ತಿವೆ.  ಬರೀ ’ಪ್ರತಿಬೆಗೆ’ ಮನ್ನಣೆ ಕೊಡುವ, ಕನ್ನಡಿಗರ ಸ್ತಳೀಯತೆಗೆ ಮನ್ನಣೆ ಕೊಡದ, ತಮ್ಮ ಒಳಿತನ್ನು ಮಾತ್ರ ಲೆಕ್ಕವಿಡುವ ಕಂಪನಿಗಳಿಗೆ ನಮ್ಮ ನಾಡಿನ ಸಂಪನ್ಮೂಲಗಳನ್ನು ಬಿಟ್ಟಿಯಾಗೋ ರಿಯಾಯತಿಯಲ್ಲೋ ಏಕೆ ಕೊಡಬೇಕು? ತೆರಿಗೆ ವಿನಾಯತಿಗಳನ್ನು ಏಕೆ ಕೊಡಬೇಕು? ಈ ಕಂಪನಿಗಳಿಂದ ನಮಗೇನು ವಿಶೇಶ ಲಾಬ? ಯಾವುದೇ ಹುದ್ದೆಗಾಗಲೀ, ಅದನ್ನು ನಿಬಾಯಿಸುವ ಕೌಶಲವಿರುವ ಕನ್ನಡಿಗ ಅಬ್ಯರ‍್ತಿಗಳಿದ್ದರೆ, ಅವರೇ ಅದಕ್ಕೆ ನೇಮಕವಾಗಬೇಕು. ಕನ್ನಡಿಗ ಅಬ್ಯರ‍್ತಿಗಳ ಕೊರತೆ ಇದ್ದರೆ ಮಾತ್ರ ಬೇರೆಯವರನ್ನು ನೇಮಕ ಮಾಡಿಕೊಳ್ಳಬಹುದು. ಈ ಬಗೆಯ ಒಟ್ಟಾರೆ ಶರತ್ತಿಗೆ ಒಪ್ಪದಿರುವ ಕಂಪನಿಗಳಿಗೆ ನಮ್ಮ ನಾಡಿನ ಸಂಪನ್ಮೂಲಗಳು ರಿಯಾಯತಿಯಲ್ಲಿ ಏಕೆ ದೊರೆಯಬೇಕು?
      ಇನ್ನು ಕನ್ನಡಿಗರ ಕೆಲಸಗಳನ್ನು ಕಸಿದುಕೊಳ್ಳುತ್ತಿರುವರಲ್ಲಿ ಎರಡು ಬಗೆ ಇದೆ. ಒಂದು, ಕನ್ನಡಿಗರಂತೆಯೆ ದ್ರಾವಿಡರಾದ ನೆರೆನಾಡವರಾದ ತಮಿಳರು, ತೆಲುಗರು ಮತ್ತು ಮಲಯಾಳರು. ಇನ್ನೊಂದು, ಲೆಕ್ಕವಿಲ್ಲದ ಸಂಕ್ಯೆಯಲ್ಲಿ ಬಂದು ಸೇರಿಕೊಳ್ಳುತ್ತಿರುವ ಉತ್ತರ ಬಾರತದವರು. ಈ ಉತ್ತರದವರ ವರಸೆಯೇ ಬೇರೆ. ದಕ್ಶಿಣದವರು ಸ್ತಳೀಯ ಬಾಶೆಯ ಸ್ತಿತಿಯಲ್ಲಿ ಏರುಪೇರು ಮಾಡುವುದು ಕಡಿಮೆ. ಆದರೆ ಉತ್ತರದವರು ಹೋದಲ್ಲೆಲ್ಲಾ ಹಿಂದೀ ಪತಾಕೆಯನ್ನು ನೆಡುತ್ತಾರೆ. ಈ ಹಿಂದೆ ಹೇಳಿದ ದಾವೆಯಲ್ಲಿ ವಿನುತರು ಹಿಂದೀ ಮಂದಿಗಳ ಬಗ್ಗೆಯೂ, ’ಅಯ್‍ಟೀ ಕಂಪನಿಗಳಲ್ಲಿ ಹಿಂದಿಯ ಹೇರಿಕೆ ನಡೆಯುತ್ತದೆ. ಕಂಪನಿ ಬಸ್ಸುಗಳಲ್ಲಿ ಬರೀ ಹಿಂದೀ ಹಾಡುಗಳನ್ನು ಮಾತ್ರ ಹಾಕುತ್ತಾರೆ. ಕನ್ನಡ ನಾಡಹಬ್ಬದ ಆಚರಣೆಗೆ ಅಡ್ಡಗಾಲು ಹಾಕುತ್ತಾರೆ.’ ಎಂದು ಅಳಲನ್ನು ತೋಡಿಕೊಂಡಿದ್ದರು. ಹಿಂದೀವಾಲರ ಈ ಬಗೆಯ ದಬ್ಬಾಳಿಕೆಯ ಬಗ್ಗೆ ಅಲ್ಲಲ್ಲಿ ಆಗಾಗ್ಗೆ ಪ್ರತ್ಯೇಕ ವರದಿಗಳೂ ಆಗಿವೆ. ಹಿಂದೀ ಮಂದಿಯೇ ಹೀಗೆ ಎನಿಸುತ್ತದೆ. ಮುಂಬಯ್ ಹೊಳಲನ್ನು ಹಿಂದೀಮಯ ಮಾಡಿದ ಇವರಿಗೆ ಬೆಂಗಳೂರನ್ನೂ ಹಾಗೇ ಮಾಡುವುದು ಕಶ್ಟವೆ?
      ಉದ್ಯೋಗ, ವಲಸೆ, ಆಡಳಿತ ಬಾಶೆ - ಇಂತಹ ಸಮಸ್ಯೆಗಳಿಗೆ ಸಂವಿದಾನದ ತಿದ್ದುಪಡಿ ಇಲ್ಲದೆ ಹುರುಳುಳ್ಳ ಬಗೆಹರಿಕೆ ಸಾದ್ಯವಿಲ್ಲವೇನೋ. ಹಾಗಾದರೆ, ಸಂವಿದಾನದ ತಿದ್ದುಪಡಿಗೆ ಅಳವನ್ನು ಬರಿಸಿಕೊಳ್ಳುವುದು ಹೇಗೆ? ಕನ್ನಡಿಗರು ಮಾತ್ರ ಪ್ರತ್ಯೇಕವಾಗಿ ಬೊಬ್ಬೆ ಹಾಕಿದರೆ ಆಗುತ್ತದೆಯೆ? ಕನ್ನಡಿಗರು ಮತ್ತು ಬೇರೆ ರಾಜ್ಯದವರು ಸೇರಿ ಪ್ರಯತ್ನಿಸಬೇಕು. ಮೊದಲು ದಕ್ಶಿಣದ ದ್ರಾವಿಡರು - ನಾವು, ತೆಲುಗರು, ತಮಿಳರು ಮತ್ತು ಮಲಯಾಳರು - ದ್ರಾವಿಡತನದ ಅಡಿಯಲ್ಲಿ ಒಂದಾಗಬೇಕು. ನಾವು ಒಗ್ಗೂಡಿದರೆ ನಮ್ಮೊಡನೆ ಕಯ್ ಸೇರಿಸಲು ದೇಶದ ಕೆಲ ಇತರೆ ರಾಜ್ಯದವರೂ ಮುಂದೆ ಬರಬಹುದು. ಹೀಗೆ ಎಲ್ಲರೂ ಒಟ್ಟಾಗಿ ಪ್ರಯತ್ನಪಟ್ಟರೆ ಸಂವಿದಾನದ ತಿದ್ದುಪಡಿ ಸಾದ್ಯವಾಗಬಹುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: