ಗುರುವಾರ, ಜುಲೈ 25, 2013

ಕನ್ನಡಿಗರಿಗೇಕೆ ಸಂಸ್ಕ್ರುತ ವಿಶವಿದ್ಯಾಲಯದ ಹೊರೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಕೆಳಗಿನ ಓಲೆಯನ್ನು ಜುಲಯ್ ೨೪, ೨೦೧೩ ರಂದು ಮಾಗಡಿ ಕ್ಶೇತ್ರದ ಶಾಸಕರಾದ ಶ್ರೀ ಎಚ್.ಸಿ.ಬಾಲಕ್ರಿಶ್ಣರ ಕಯ್ಗಿತ್ತೆ. ಬಾಲಕ್ರಿಶ್ಣರು ಇತ್ತೀಚೆಗೆ ಸುದ್ದಿಗಾರರ ಬಳಿ ಮಾಗಡಿ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‍ನ ನಿರ‍್ಮಾಣವನ್ನು ವಿರೋದಿಸುವುದಾಗಿ ಹೇಳಿಕೆ ನೀಡಿದ್ದಾರೆ. ’ಇವರು ಬರಿಯ ಮಾತಿನ ಮಲ್ಲರಲ್ಲ!’ - ಇದು ಅವರನ್ನು ಕಂಡ ಬಳಿಕ ನನಗೆ ಅನಿಸಿದ್ದು. ಒಂದು ವೇಳೆ ಸಂಸ್ಕ್ರುತ ವಿಶ್ವವಿದ್ಯಾಲಯದ ವಿರುದ್ದ ಹೋರಾಟ ಮೊದಲಾದರೆ ನಾವೆಲ್ಲ ಬಾಲಕ್ರಿಶ್ಣರಿಗೆ ಬೆಂಬಲವನ್ನು ನೀಡೋಣ.


      ಜುಲಯ್ ೨೨, ೨೦೧೩

      ಮಾಗಡಿ ಕ್ಶೇತ್ರದ ಶಾಸಕರಾದ ಮಾನ್ಯ ಎಚ್.ಸಿ.ಬಾಲಕ್ರಿಶ್ಣರಿಗೆ ವಂದನೆಗಳು.
      ಕಳೆದ ಸರ‍್ಕಾರದ ಆದೇಶದ ಮೇರೆಗೆ ನಿಮ್ಮ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಕ್ಯಾಂಪಸ್‍ನ ವಿರುದ್ದ ಹೋರಾಟ ನಡೆಸುವುದಾಗಿ ಇತ್ತೀಚೆಗೆ ನೀವು ಮಾದ್ಯಮದವರಿಗೆ ಹೇಳಿಕೆ ಕೊಟ್ಟಿದ್ದೀರಿ. ’ಈ ಯೋಜನೆಯಿಂದ ಸ್ತಳೀಯರಿಗೆ ಯಾವುದೇ ಪ್ರಯೋಜನವಿಲ್ಲ. ತಾಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದ ಸಂಸ್ಕ್ರುತ ವಿಶ್ವವಿದ್ಯಾಲಯ ನಮಗೆ ಬೇಡ’ ಎಂದು ಸುದ್ದಿಗಾರರ ಬಳಿ ಹೇಳಿದ್ದೀರಿ. ಈ ಸಂಗತಿ ಜುಲಯ್ ೨, ೨೦೧೩ ತಾರೀಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ.
      ಸಂಸ್ಕ್ರುತ ವಿಶ್ವವಿದ್ಯಾಲಯ ಸಣ್ಣ ಯೋಜನೆಯಲ್ಲ. ಅದು ನಿಮ್ಮ ಕ್ಶೇತ್ರದ ನೂರು ಎಕರೆಗಳಶ್ಟು ನೆಲವನ್ನು ಕಬಳಿಸಲಿದೆ. ನಿಮ್ಮ ಕ್ಶೇತ್ರದ ಇಶ್ಟೊಂದು ಸಂಪನ್ಮೂಲವನ್ನು ಬಳಸಿಕೊಂಡರೂ ಅದಕ್ಕೆ ಪ್ರತಿಯಾಗಿ ಈ ವಿಶ್ವವಿದ್ಯಾಲಯ ಸ್ತಳೀಯರಿಗೆ ಯಾವ ಉಪಯೋಗವನ್ನೂ ದೊರಕಿಸಿಕೊಡುವುದಿಲ್ಲ ಎಂಬ ನಿಮ್ಮ ಗ್ರಹಿಕೆ ಸರಿಯಾದುದೇ. ಹಾಗಾಗಿ, ಅದರ ನಿರ‍್ಮಾಣವನ್ನು ವಿರೋದಿಸುವ ನಿಮ್ಮ ನಿಲುವು ತಕ್ಕ ನಿಲುವೇ ಆಗಿದೆ. ನಿಮ್ಮ ನಿಲುವನ್ನು ಕೇವಲ ಸ್ತಳೀಯರಲ್ಲದೆ ಅಸಂಕ್ಯಾತ ಇತರ ಕನ್ನಡಿಗರೂ ಬೆಂಬಲಿಸುತ್ತಾರೆಂಬ ನಂಬಿಕೆ ನನಗಿದೆ.
      ನೀವು ಜನಪ್ರತಿನಿದಿಗಳಾಗಿರುವುದರಿಂದ, ನೀವು ಪ್ರತಿನಿದಿಸುವ ಜನಗಳ ಒಳಿತನ್ನು ಮುಂದಿಟ್ಟುಕೊಂಡು, ಸಹಜವಾಗಿಯೆ ಈ ವಿಶಯವನ್ನು ಸ್ತಳೀಯ ದ್ರುಶ್ಟಿಕೋನದಿಂದ ನೋಡಿ, ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದೀರಿ. ಆದರೆ, ಈ ವಿಶಯವನ್ನು ಕೇವಲ ಸ್ತಳೀಯ ದ್ರುಶ್ಟಿಕೋನದಿಂದಲ್ಲದೆ ಸಮಸ್ತ ಕನ್ನಡಿಗರ ದ್ರುಶ್ಟಿಕೋನದಿಂದಲೂ ಪರಿಗಣಿಸಬಹುದು. ಇದರ ಅರಿವು ನಿಮಗೂ ಇರುತ್ತದೆ. ಈ ವಿಶಾಲ ದ್ರುಶ್ಟಿಕೋನದ ಬಗ್ಗೆ ಸಂಕ್ಶಿಪ್ತವಾಗಿ ಇಲ್ಲಿ ಒಂದೆರಡು ವಿಶಯಗಳನ್ನು ಮಂಡಿಸಲು ನಾನು ಬಯಸುತ್ತೇನೆ.
      ಸಂಸ್ಕ್ರುತ ಬಾಶೆಯಿಂದ ಕನ್ನಡಿಗರಿಗೆ ಏನು ಪ್ರಯೋಜನ? ಇದು ಎಲ್ಲ ಕನ್ನಡಿಗರೂ ಕೇಳಬೇಕಾದ ಮೊತ್ತಮೊದಲ ಪ್ರಶ್ನೆ. ಏನೂ ಇಲ್ಲ. ಕಿಂಚಿತ್ತೂ ಇಲ್ಲ. ಎಳ್ಳಶ್ಟೂ ಇಲ್ಲ. ಇದು ಉತ್ತರ! ಸಂಸ್ಕ್ರುತ ಕಲಿಯುವುದರಿಂದ ಕನ್ನಡ ಯುವಕರಿಗೆ ಕೆಲಸ ದೊರೆಯುವುದೆ? ಇಲ್ಲ. ಕೆಲಸ ಕೊಡುವ ಯಾವ ಉದ್ಯಮದವರಾಗಲೀ ಸಂಸ್ತೆಯವರಾಗಲೀ, ’ನೀನು ಸಂಸ್ಕ್ರುತ ಕಲಿತಿದ್ದೀಯಾ?’ ಎಂದು ಉದ್ಯೋಗಾರ‍್ತಿಯನ್ನು ಕೇಳುತ್ತಾರೆಯೆ? ಎಂದೂ ಇಲ್ಲ. ಏಕೆಂದರೆ, ಸಂಸ್ಕ್ರುತದಿಂದ ನಿಜಪ್ರಪಂಚದ ವ್ಯವಹಾರದಲ್ಲಿ ಯಾವ ಉಪಯೋಗವೂ ಇಲ್ಲ.
      ವಾಸ್ತವ ಹೀಗಿದ್ದೂ ಸಂಸ್ಕ್ರುತ ವಿಶ್ವವಿದ್ಯಾಲಯವನ್ನು ತೆರೆಯುವ ಅವ್‍ಚಿತ್ಯವೇನು? ಈ ಪ್ರಶ್ನೆಯನ್ನು ಸಂಸ್ಕ್ರುತ ವಿಶ್ವವಿದ್ಯಾಲಯದ ಕುಲಪತಿ ಮಲ್ಲೇಪುರಮ್ ವೆಂಕಟೇಶರಿಗೆ ಈ ಹಿಂದೆ ಕೆಲ ಬುದ್ದಿಜೀವಿ ಕನ್ನಡಿಗರು ಕೇಳಿದ್ದರು. ಅದಕ್ಕೆ ಅವರು ಕೊಟ್ಟ ಒಟ್ಟಾರೆ ಉತ್ತರ ಹೀಗಿತ್ತು - ’ಹಳಗನ್ನಡದ ಕಾವ್ಯಗಳಲ್ಲಿ ಸಂಸ್ಕ್ರುತದ ಬಳಕೆ ಎಶ್ಟೊಂದು ವ್ಯಾಪಕವಾಗಿ ಆಗಿದೆ ಎಂದರೆ, ಸಂಸ್ಕ್ರುತದ ತಿಳಿವಳಿಕೆ ಇಲ್ಲದೆ ಅವುಗಳನ್ನು ಸರಿಯಾಗಿ ಅರ‍್ತ ಮಾಡಿಕೊಳ್ಳಲು ಆಗುವುದಿಲ್ಲ’. ಹೇಗಿದೆ ನೋಡಿ ಈ ಸಮರ‍್ತನೆ! ಹೆಚ್ಚುಕಡಿಮೆ ಇಂತಹ ವಾದವನ್ನೇ ಸಂಸ್ಕ್ರುತ ವಿಶ್ವವಿದ್ಯಾಲಯದ ಪರವಾಗಿರುವ ಎಲ್ಲರೂ ಸಾಮಾನ್ಯವಾಗಿ ಮುಂದಿಡುವುದು. ಇಂತಹ ಹುಲು ವಾದಕ್ಕೆ ಏನು ಹೇಳುವುದು? ಇವರ ವಾದ ಎಶ್ಟು ಪೊಳ್ಳು ಎನ್ನುವುದಕ್ಕೆ ಒಂದು ಸರಳ ಉದಾಹರಣೆ ಕೊಡುತ್ತೇನೆ, ಕೇಳಿ. ಯಾವಾಗಲಾದರೂ ಒಮ್ಮೆ ನಿಮಗೇನಾದರೂ ಕೊಂಚ ಹಾಲಿನ ಅಗತ್ಯ ಬಿದ್ದರೆ, ಅದನ್ನು ಅಂಗಡಿಗೆ ಹೋಗಿ ಕೊಂಡುಕೊಳ್ಳುತ್ತೀರೋ ಇಲ್ಲ ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳುತ್ತೀರೋ? ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳಬೇಕು ಎನ್ನುತ್ತಾರೆ ಸಂಸ್ಕ್ರುತ ವಿಶ್ವವಿದ್ಯಾಲಯ ಬೇಕು ಎನ್ನುವ ಸಂಸ್ಕ್ರುತದ ಒಣ ಅಬಿಮಾನಿಗಳು! ದೇಶದ ತುಂಬೆಲ್ಲಾ ಉತ್ಕ್ರುಶ್ಟವಾದ ಸಂಸ್ಕ್ರುತ ವಿಶ್ವವಿದ್ಯಾಲಯಗಳಿವೆ. ಕೆಲ ಪಂಡಿತರನ್ನು ಅಲ್ಲಿಗೇ ಕಳಿಸಿ, ಕನ್ನಡಕ್ಕೆ ಬೇಕಾಗುವಶ್ಟು ಸಂಸ್ಕ್ರುತದ ಅದ್ಯಯನವನ್ನು ಅವರಿಂದ ಮಾಡಿಸಿದರೆ ಸಾಕಾಗುವುದಿಲ್ಲವೆ? ಈ ಅಲ್ಪ ಕಾರಣಕ್ಕಾಗಿ ಒಂದು ಇಡಿಯ ಸಂಸ್ಕ್ರುತ ವಿಶ್ವವಿದ್ಯಾಲಯವನ್ನೇ ತೆರೆದು ನಡೆಸಬೇಕೆ? ಕನ್ನಡಿಗರ ಸಂಪನ್ಮೂಲಗಳನ್ನು ಇಂತಹ ಪ್ರಯೋಜನಕ್ಕೆ ಬಾರದ ಯೋಜನೆಗಳ ಸಲುವಾಗಿ ಪೋಲು ಮಾಡಬೇಕೆ?
      ಇಂದು ಕನ್ನಡಿಗರಿಗೆ ಬೇಕಾಗಿರುವುದು ಇಂಗ್ಲೀಶ್. ಸಂಸ್ಕ್ರುತವಲ್ಲ. ಇಂದು ಇಡೀ ಪ್ರಪಂಚವೇ ಇಂಗ್ಲೀಶ್ ಬಾಶೆಯನ್ನು ಕಲಿಯುತ್ತಿದೆ. ಇಂಗ್ಲೀಶನ್ನು ಅಶ್ಟಾಗಿ ಹಚ್ಚಿಕೊಂಡಿರದಿದ್ದ ಪ್ರಾನ್ಸ್, ಜಪಾನ್, ಚೀನಾ ಮುಂತಾದ ರಾಶ್ಟ್ರಗಳೇ ಇಂದು ಮುತುವರ‍್ಜಿಯಿಂದ ಇಂಗ್ಲೀಶ್ ಕಲಿಯುತ್ತಿವೆ. ಇಡೀ ಪ್ರಪಂಚಕ್ಕೇ ಒಂದು ವ್ಯಾವಹಾರಿಕ ಬಾಶೆಯಾಗಿ ಇಂದು ಇಂಗ್ಲೀಶ್ ತಲೆ ಎತ್ತಿ ನಿಂತಿದೆ. ಇಂದಿನ ಪ್ರಪಂಚದಲ್ಲಿ ಇಂಗ್ಲೀಶ್ ಕಲಿಯುವುದರಿಂದ ಆಗುವ ಲಾಬ ಕಡಿಮೆಯಲ್ಲ. ಇಂಗ್ಲೀಶ್ ಬಾರದಿದ್ದರೆ ನಶ್ಟ ಕಂಡಿತ. ಕನ್ನಡ ಮಾದ್ಯಮದಲ್ಲಿ ಓದುವವರೂ ಕೂಡ ಒಂದಲ್ಲಾ ಒಂದು ಹಂತದಲ್ಲಿ ಇಂಗ್ಲೀಶಿನಲ್ಲಿ ವ್ಯವಹರಿಸಲೇ ಬೇಕಾಗುತ್ತದೆ. ಸ್ವಾಬಿಮಾನಕ್ಕೂ ಇಂದು ಇಂಗ್ಲೀಶ್ ಬೇಕಾಗಿದೆ. ಇಂಗ್ಲೀಶಿನಲ್ಲಿ ಮಾತನಾಡಲು ಬಾರದೆ ಕೀಳರಿಮೆ ಅನುಬವಿಸುತ್ತಿರುವ ಲಕ್ಶಾಂತರ ಕನ್ನಡ ತರುಣರ ಪಾಡು ಯಾರಿಗೆ ತಿಳಿದಿಲ್ಲ? ಇಂಗ್ಲೀಶ್ ಬಾರದೆ ಬೇರೆ ದಾರಿ ಇಲ್ಲ ಎನ್ನುವಶ್ಟರಮಟ್ಟಿಗೆ ಇಂದು ಇಂಗ್ಲೀಶ್ ಅನಿವಾರ‍್ಯವಾಗಿದೆ. ಆದ್ದರಿಂದ, ಕನ್ನಡಿಗರು ಇಂದು ಕನ್ನಡದ ಜೊತೆ ಹೆಚ್ಚುವರಿಯಾಗಿ ಕಲಿಯಬೇಕಾಗಿರುವುದು ಇಂಗ್ಲೀಶನ್ನು. ಕನ್ನಡಿಗರ ಸಾರ‍್ವಜನಿಕ ಹಣ ಸಲ್ಲಬೇಕಾಗಿರುವುದು ಇಂಗ್ಲೀಶ್ ಕಲಿಕೆಗೆ. ಸಂಸ್ಕ್ರುತ ಕಲಿಕೆಗೆ ಅಲ್ಲ.
      ’ಕೋಟಿಗಟ್ಟಲೆ ಹಣ ನಿತ್ಯವೂ ಪೋಲಾಗುತ್ತಿರುತ್ತದೆ. ಸಂಸ್ಕ್ರುತ ಬಾಶೆಗೆ ಕೊಂಚ ಹಣ ಹೋದರೆ ಕೊಳ್ಳೆ ಹೋದುದು ಏನು?’ ಎಂದು ಸಂಸ್ಕ್ರುತ ದುರಬಿಮಾನಿಗಳು ಸಾಮಾನ್ಯವಾಗಿ ಸವಾಲು ಹಾಕುತ್ತಾರೆ. ಅವರಿಗೆ ನಾವು ಹೇಳಬೇಕಾದುದು ಇಶ್ಟೇ - ಪೋಲು ಪೋಲೇ. ವ್ಯರ‍್ತ ವ್ಯರ‍್ತವೇ. Wasting of resources is never justified!
     ಇವೆಲ್ಲ ಕಾರಣಗಳಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರ ಹಣ ಸುರಿದು ಸಂಸ್ಕ್ರುತ ವಿಶ್ವವಿದ್ಯಾಲಯವೊಂದನ್ನು ಸಾಕುವ ಆಲೋಚನೆ ತಕ್ಕುದಲ್ಲ. ಇದು ಅನೇಕ ಕನ್ನಡಿಗರಿಗೆ ತಿಳಿದಿದೆ. ತಕ್ಕ ಮುಂದಾಳ್ತನ ಇಲ್ಲದಿರುವುದರಿಂದ ಹಾಗೂ ತಕ್ಕ ಸನ್ನಿವೇಶ ಒದಗಿ ಬಂದಿಲ್ಲವಾದ್ದರಿಂದ, ಅವರು ಸದ್ಯಕ್ಕೆ ಸುಮ್ಮನೆ ಕುಳಿತಿದ್ದಾರೆ. ಗಂಬೀರವಾದ ಹೋರಾಟ ನಡೆಯುವ ಸೂಚನೆ ಕಂಡು ಬಂದರೆ ಅವರೆಲ್ಲರೂ ಎದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದರಲ್ಲಿ ಸಂದೇಹವಿಲ್ಲ. ಮಾನ್ಯ ಬಾಲಕ್ರಿಶ್ಣರೆ, ಅಂತಹ ಒಂದು ಹೋರಾಟಕ್ಕೆ ನಿಮ್ಮ ಕ್ಶೇತ್ರದಿಂದಲೇ, ನಿಮ್ಮಿಂದಲೇ ಚಾಲನೆ ದೊರಕಲಿ ಎಂದು ನಾನು ಹಾರಯ್ಸುತ್ತೇನೆ. ನಿಮ್ಮ ಹೋರಾಟಕ್ಕೆ ನನ್ನ ಯಾವತ್ತೂ ಬೆಂಬಲವಿರುತ್ತದೆಂಬ ಸಂಪೂರ್ಣ ನಂಬುಗೆಯನ್ನು ನಿಮಗೆ ನೀಡುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ
(kannadigarudravidare.blogspot.in)
kannadigarudravidare@gmail.com

ಕಾಮೆಂಟ್‌ಗಳಿಲ್ಲ: