ಬುಧವಾರ, ಜನವರಿ 30, 2013

ಗೋಕಾಕ್ ಚಳುವಳಿಯ ನೀತಿಪಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಗೋಕಾಕ್ ಚಳುವಳಿಯ ಹೆಸರು ಯಾರಿಗೆ ಗೊತ್ತಿಲ್ಲ? ’ಇನ್ನೊಂದು ಗೋಕಾಕ್ ಮಾದರಿ ಚಳುವಳಿ ನಡೀಬೇಕು ಕಣ್ರೀ’ ಎಂದು ಹೇಳುವುದು ಈಗ ಒಂದು ವಾಡಿಕೆ ಆಗಿಬಿಟ್ಟಿದೆ. ಅಶ್ಟು ಚೆನ್ನಾಗಿ ಎಲ್ಲರಿಗೂ ಗೊತ್ತಿದೆ ಗೋಕಾಕ್ ಚಳುವಳಿ. ಆದರೆ, ಗೋಕಾಕ್ ಚಳುವಳಿ ನಡೆದದ್ದು ಯಾಕೆ, ಅದರಿಂದ ನಿರ‍್ದಿಶ್ಟವಾಗಿ ಉಂಟಾದದ್ದು ಏನು ಎಂಬುದು ಬಹಳಶ್ಟು ಮಂದಿಗೆ ಗೊತ್ತಿಲ್ಲ.
      ಗೋಕಾಕ್ ಚಳುವಳಿ ನಡೆದು ಈಗ ಮೂವತ್ತು ವರ‍್ಶಗಳೇ ಕಳೆದಿವೆ. ಆ ದಿನಗಳಲ್ಲಿ ಕನ್ನಡಕ್ಕೆ ಅಪಾಯಕಾರಿ ಕುತ್ತೊಂದು ತಗುಲಿಕೊಂಡಿತ್ತು. ಗೋಕಾಕ್ ಚಳುವಳಿ ಆ ಕುತ್ತನ್ನು ಯಶಸ್ವಿಯಾಗಿ ತೊಡೆದು ಹಾಕಿತು. ಕುತ್ತನ್ನೇನೋ ತೊಡೆದು ಹಾಕಿತು. ಆದರೆ, ಆ ಕುತ್ತು ತಗುಲಿಕೊಳ್ಳುವುದಕ್ಕೆ ಕಾರಣವಾಗಿದ್ದ ಮೂಲ ಶಕ್ತಿಗಳನ್ನು ಅದು ತೊಡೆದು ಹಾಕಲಿಲ್ಲ. ಹಾಗಾಗಿ, ಆ ಶಕ್ತಿಗಳು ಈಗಲೂ ಜೀವಂತವಾಗೇ ಉಳಿದುಕೊಂಡಿವೆ. ಕೆಲ ಕಾಲ ಅಡಗಿ ಕುಳಿತಿದ್ದ ಅವು ಇತ್ತೀಚಿನ ವರ‍್ಶಗಳಲ್ಲಿ ಮತ್ತೆ ತಲೆ ಎತ್ತಿವೆ. ಆದ್ದರಿಂದ, ಗೋಕಾಕ್ ಚಳುವಳಿ ’ಯಾಕೆ’ ನಡೆಯಿತು ಎಂಬುದನ್ನು ನೆನಪಿಸಿಕೊಳ್ಳುವುದು ಇಂದು ಅಂದಿನಂತೆ ಪ್ರಸ್ತುತ.
      ಗೋಕಾಕ್ ಚಳುವಳಿಗೆ ಮುಂಚೆ ಕರ‍್ನಾಟಕದ ಬಹುಮಟ್ಟಿನ ವಿದ್ಯಾರ‍್ತಿಗಳು ಎಂಟರಿಂದ ಹನ್ನೆರಡನೆಯ ತರಗತಿಯವರೆಗೆ ’ಪ್ರತಮ ಬಾಶೆ’ ಎಂದು ಒಂದು ಬಾಶೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿತ್ತು. ಆ ಬಾಶೆ ಕನ್ನಡವೇ ಆಗಬೇಕಾಗಿರಲಿಲ್ಲ. ಕನ್ನಡದ ಬದಲು ಸಂಸ್ಕ್ರುತವನ್ನು ತೆಗೆದುಕೊಳ್ಳಬಹುದಾಗಿತ್ತು. ವಿಚಿತ್ರವೆಂಬಂತೆ ಕಾಲಕ್ರಮೇಣ ವಿದ್ಯಾರ‍್ತಿಗಳಿಗೆ ಸಂಸ್ಕ್ರುತವೇ ಹೆಚ್ಚು ಹೆಚ್ಚು ಪ್ರಿಯವಾಗ ತೊಡಗಿತು. ಕನ್ನಡದ ನೋಂದಣಿ ಸೊರಗತೊಡಗಿತು. ಇದೇ ಗೋಕಾಕ್ ಚಳುವಳಿಗೆ ಕಾರಣವಾದದ್ದು.
      ಒಂದು ತಿಳಿದ ಬಾಶೆ, ಇನ್ನೊಂದು ತಿಳಿದಿರದ ಬಾಶೆ - ಹೀಗೆ ಎರಡು ಬಾಶೆಗಳನ್ನು ಮುಂದಿಟ್ಟರೆ, ಯಾರೇ ಆಗಲಿ, ತಿಳಿದ ಬಾಶೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ತಿಳಿಯದ ಬಾಶೆಯನ್ನಲ್ಲ. ಯಾಕೆಂದರೆ, ತಿಳಿಯದ ಬಾಶೆಯನ್ನು ತೆಗೆದುಕೊಂಡರೆ ಓದು ಅನವಶ್ಯಕವಾಗಿ ಕಶ್ಟವಾಗುತ್ತದೆ. ಆದರೂ, ನಮ್ಮ ವಿದ್ಯಾರ‍್ತಿಗಳು ತಿಳಿದ ಕನ್ನಡವನ್ನು ಬಿಟ್ಟು ತಿಳಿಯದ ಸಂಸ್ಕ್ರುತವನ್ನೇ ತೆಗೆದುಕೊಳ್ಳಲು ಶುರುಮಾಡಿದರು, ಯಾಕೆ? ಕಾರಣ ತಿಳಿದುಕೊಂಡರೆ, ಕನ್ನಡದ ವಿರುದ್ದ ಎಂತಹ ಒಂದು ಮುಸುಕಿನ ಮರೆಯ ಸಂಚು ಆ ದಿನಗಳಲ್ಲಿ ನಡೆದಿತ್ತು ಎಂಬುದು ನಮಗೆ ಗೊತ್ತಾಗುತ್ತದೆ.
      ಆಗಿನ ದಿನಗಳಲ್ಲಿ ಮಕ್ಕಳು ಏಳನೇ ತರಗತಿಯವರೆಗೆ ಕನ್ನಡವನ್ನು ಓದಿಕೊಂಡು ಬರುತ್ತಿದ್ದರು. ಹಾಗಾಗಿ, ಎಂಟನೇ ತರಗತಿಯಿಂದ ಹಯ್‍ಸ್ಕೂಲು ಶುರುವಾದಾಗ, ಕನ್ನಡ ವಿಶಯದ ಮಟ್ಟ ಸಹಜವಾಗೇ ಹಯ್‍ಸ್ಕೂಲಿನ ಮಟ್ಟಕ್ಕೆ ಸರಿಹೊಂದುವಂತಿರುತ್ತಿತ್ತು. ಅಂದರೆ, ಕನ್ನಡವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ, ಅದರಲ್ಲಿ ಉತ್ತೀರ‍್ಣರಾಗುವುದಕ್ಕೆ ವಿದ್ಯಾರ‍್ತಿಗಳು ತಕ್ಕಮಟ್ಟಿಗೆ ಕಶ್ಟಪಡಬೇಕಾಗಿತ್ತು. ಆದರೆ, ಸಂಸ್ಕ್ರುತವನ್ನು ಪ್ರತಮ ಬಾಶೆಯಾಗಿ ತೆಗೆದುಕೊಂಡರೆ,  ಕಶ್ಟಪಡುವ ಅವಶ್ಯಕತೆಯೇ ಇರಲಿಲ್ಲ. ಯಾಕೆಂದರೆ, ಎಂಟನೇ ತರಗತಿಯೇ ಸಂಸ್ಕ್ರುತ ಕಲಿಕೆಯ ಮೊದಲನೇ ವರ‍್ಶವಾದ್ದರಿಂದ, ಅದರ ಕ್ಲಿಶ್ಟತೆ, ಪ್ರಾತಮಿಕ ಶಾಲೆಯಲ್ಲಿ ಕನ್ನಡದ ಕಲಿಕೆಗೆ ಎಶ್ಟು ಕ್ಲಿಶ್ಟತೆ ಇತ್ತೋ ಅದಕ್ಕಿಂತ ಹೆಚ್ಚಿರಲಿಲ್ಲ.
      ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಂಡರೆ, ಓದಬೇಕಾಗಿದ್ದುದು ತುಂಬಾ ಕಡಿಮೆ. ಪಾಟ ನಡೆಯುತ್ತಿದ್ದುದು ಕನ್ನಡದಲ್ಲೇ. ಪರೀಕ್ಶೆ ನಡೆಯುತ್ತಿದ್ದುದು ಕನ್ನಡದಲ್ಲೇ. ಉತ್ತರಗಳನ್ನು ಬರೆಯುತ್ತಿದ್ದುದು ಕನ್ನಡದಲ್ಲೇ. ಹೆಸರಿಗೆ ಸಂಸ್ಕ್ರುತ, ಆಶ್ಟೆ. ಎಲ್ಲಾ ನಡೆಯುತ್ತಿದ್ದುದು ಕನ್ನಡದಲ್ಲೇ. ಅಲ್ಲೊಂದು ಚೂರು ಸಂಸ್ಕ್ರುತದ ವ್ಯಾಕರಣ, ಇಲ್ಲೊಂದು ಚೂರು ಸಂಸ್ಕ್ರುತದ ತುಂಡು ಸಾಲುಗಳು, ಇಶ್ಟರ ಮೇಲೆ ಒಂದೆರಡು ಸಂಸ್ಕ್ರುತ ಸುಬಾಶಿತಗಳ ಕಂಟಪಾಟ. ಇಶ್ಟೇ, ಎಂಟನೇ ತರಗತಿಯ ಸಂಸ್ಕ್ರುತ ಕಲಿಕೆ!
      ಇನ್ನು ಅಂಕಗಳನ್ನು ಕೊಡುವ ಪರಿಯೋ! ಕನ್ನಡದಲ್ಲಿ ಪುಟಗಟ್ಟಲೆ ಬರೆದರೂ ನಿಮಗೆ ಶೇಕಡ ಅರವತ್ತೋ ಎಪ್ಪತ್ತೋ ಅಂಕಗಳು ಬಂದರೆ ಹೆಚ್ಚೆಚ್ಚು. ಸಂಸ್ಕ್ರುತದಲ್ಲಿ ನೋಡಿದರೆ ಗಣಿತದ ಹಾಗೆ ಅಂಕಗಳ ಕೊಡುತ್ತಿದ್ದರು! ಒಟ್ಟು ನೂರಯ್ವತ್ತು ಅಂಕಗಳಲ್ಲಿ ನೂರಯ್ವತ್ತನ್ನೂ ತೆಗೆದುಕೊಳ್ಳಬಹುದಾಗಿತ್ತು!
      ಹೀಗೆ, ಕನ್ನಡ ತೆಗೆದುಕೊಂಡವರಿಗೆ ಬೆಟ್ಟ ಏರಿದಶ್ಟು ಕಶ್ಟವಾಗಿದ್ದರೆ, ಸಂಸ್ಕ್ರುತ ತೆಗೆದುಕೊಂಡವರಿಗೆ ಮಳಲು ಗುಡ್ಡೆಯ ಮೇಲೆ ಆಡಿದಶ್ಟು ಹಗುರಾಗಿರುತ್ತಿತ್ತು. ವಸ್ತುಸ್ತಿತಿ ಹೀಗಿದ್ದಾಗ ಅದಾವ ಬುದ್ದಿ ಇರುವ ವಿದ್ಯಾರ‍್ತಿ ತಾನೆ ಸಂಸ್ಕ್ರುತವನ್ನು ಆಯ್ಕೆ ಮಾಡಿಕೊಳ್ಳದೆ ಇರುತ್ತಿದ್ದ? ಸಹಜವಾಗೇ, ಸುಲಬದ ದಾರಿ ಹುಡುಕುವ ವಿದ್ಯಾರ‍್ತಿಗಳು ಮತ್ತು ಅವರ ತಾಯಿತಂದೆಯರು ಕನ್ನಡವನ್ನು ಬದಿಗೆ ತಳ್ಳಿ ಸಂಸ್ಕ್ರುತವನ್ನು ಎತ್ತಿಕೊಳ್ಳುತ್ತಿದ್ದರು.
      ಈ ರೀತಿ, ಕನ್ನಡದ ನೆಲದಲ್ಲೇ ಕನ್ನಡಕ್ಕೆ ಬತ್ತಿ ಇಟ್ಟದ್ದು ಯಾವೊಂದು ಜಾತಿಯವರಲ್ಲ, ಯಾವೊಂದು ಪ್ರದೇಶದವರಲ್ಲ. ಹೊರಗಿನವರಂತೂ ಅಲ್ಲವೇ ಅಲ್ಲ. ನಮ್ಮವರಲ್ಲೇ ಸಂಸ್ಕ್ರುತದ ದುರಬಿಮಾನವಿದ್ದ ಕೆಲ ಕನ್ನಡದ್ರೋಹಿ ಕನ್ನಡಿಗರೇ ಈ ನಾಚಿಕೆಗೇಡಿನ ಕೆಲಸ ಮಾಡಿದ್ದು. ಈ ದ್ರೋಹಿಗಳು ತಮ್ಮ ಮಕ್ಕಳೊಂದಿಗೆ ಲಲ್ಲೆಗರೆಯುತ್ತಿದ್ದುದು ಕನ್ನಡದಲ್ಲಿ. ಹೆಂಡತಿಯರೊಡನೆ ಸರಸ ಸಲ್ಲಾಪವಾಡುತ್ತಿದ್ದುದು ಕನ್ನಡದಲ್ಲಿ. ಗೆಳೆಯರೊಟ್ಟಿಗೆ ಹರಟೆ ಕೊಚ್ಚುತ್ತಿದ್ದುದು ಕನ್ನಡದಲ್ಲಿ. ಎಲ್ಲರ ನಡುವೆ ವ್ಯವಹರಿಸುತ್ತಿದ್ದುದು ಕನ್ನಡದಲ್ಲಿ. ಆದರೆ, ಇವರ ನಿಶ್ಟೆ ಇದ್ದದ್ದೆಲ್ಲಾ ಸಂಸ್ಕ್ರುತದಲ್ಲಿ! ಏನಂತೀರಿ ಇಂತಹ ತಾಯಿಗುಲಿಗಳಿಗೆ?
      ಹಾಗೆ ನೋಡಿದರೆ, ಮೊತ್ತಮೊದಲು, ನಾಡ ಮಕ್ಕಳ ನುಡಿ ಕನ್ನಡಕ್ಕೆ ಸತ್ತನುಡಿ ಸಂಸ್ಕ್ರುತವನ್ನು ಸಮನಾಗಿ ನಿಲ್ಲಿಸುವ ಏರ‍್ಪಾಡೇ ನಡೆದಿರಬಾರದಾಗಿತ್ತು. ಆದರೂ ಅದು ನಡೆದು ಹೋಗಿತ್ತು. ಅದೇ ಒಂದು ಅಚ್ಚರಿ. ಅಶ್ಟು ಸಾಲದು ಎನ್ನುವಂತೆ, ಈ ನಾಚಿಕೆಗೇಡಿನ ಏರ‍್ಪಾಡನ್ನು ತೆಗೆದುಹಾಕುವುದಕ್ಕೆ ಹತ್ತು ವರ‍್ಶಗಳಿಗೂ ಹೆಚ್ಚು ಸಮಯ ಬೇಕಾಯಿತು. ಹೇಗಿತ್ತು ನೋಡಿ ಆಗ ಸಂಸ್ಕ್ರುತದ ದುರಬಿಮಾನಿಗಳ ವರ‍್ಚಸ್ಸು!
      ಈಗಲೂ ಕೂಡ ಅವರ ವರ‍್ಚಸ್ಸೇನೂ ಕಡಿಮೆಯಾಗಿಲ್ಲ. ಅವರ ಸಂಕ್ಯೆಯೂ ಕುಗ್ಗಿಲ್ಲ. ಕಳೆದ ನಾಲ್ಕಯ್ದು ವರ‍್ಶಗಳಲ್ಲಿ ಅವರ ಚಟುವಟಿಕೆ ಮತ್ತೆ ಹೆಚ್ಚಾಗಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಅವರು ಸಂಸ್ಕ್ರುತ ವಿಶ್ವವಿದ್ಯಾಲಯ ಮಾಡಿಕೊಂಡಿದ್ದಾರೆ. ಕನ್ನಡಿಗರ ತೆರಿಗೆ ಹಣದಲ್ಲಿ ಆಗಾಗ್ಗೆ ಅವರು ಸಂಸ್ಕ್ರುತ ಪುಸ್ತಕ ಮೇಳಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಸಚಿವ ರಾಮದಾಸ್ ಅವರು ದಂತವಯ್‍ದ್ಯಕೀಯ ವಿದ್ಯಾರ‍್ತಿಗಳಿಗೆ ಸಂಸ್ಕ್ರುತ ಕಲಿಕೆಯನ್ನು ಕಡ್ಡಾಯ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂಸ್ಕ್ರುತದ ದುರಬಿಮಾನಿಗಳ ಹಾವಳಿ ಬೆಳೆಗೆ ಎರಗುವ ಹಕ್ಕಿಗಳಂತೆ ಮತ್ತೆ ಮತ್ತೆ ಕನ್ನಡಿಗರ ಮೇಲೆ ಎರಗುತ್ತಲೇ ಇರುತ್ತದೆ.
      ಕನ್ನಡಿಗರು ನಾವು ದ್ರಾವಿಡ ಬುಡಕಟ್ಟಿಗೆ ಸೇರಿದವರು. ನಮ್ಮ ನುಡಿ ದ್ರಾವಿಡ ನುಡಿ. ಸಂಸ್ಕ್ರುತಕ್ಕೂ ಕನ್ನಡಕ್ಕೂ ನೆತ್ತರ ನಂಟಿಲ್ಲ. ವಾಸ್ತವ ಇದಾಗಿರುವಾಗ, ನಮಗೆ ಯಾಕೆ ಬೇಕು ಈ ಉತ್ತರದ ಸಂಸ್ಕ್ರುತವನ್ನು ಪೊರೆಯುವ ಹೊರೆ? ನಮ್ಮ ಕನ್ನಡವನ್ನೇ ಕಾಪಾಡಿಕೊಳ್ಳುವುದಕ್ಕೆ ಸಂಪನ್ಮೂಲದ ಕೊರತೆ ಇರುವಾಗ ಪರಕೀಯ ಸಂಸ್ಕ್ರುತಕ್ಕೆ ಯಾಕೆ ನಮ್ಮ ಸಾರ‍್ವಜನಿಕ ಹಣವನ್ನು ಪೋಲು ಮಾಡಬೇಕು? ಆರ‍್ಯ ಬಾಶೆಗಳನ್ನಾಡುವ ಮಂದಿ ನಮ್ಮ ಹತ್ತರಶ್ಟಿದ್ದಾರೆ ಈ ದೇಶದಲ್ಲಿ. ಸಂಸ್ಕ್ರುತದ ಲಾಲನೆ ಪಾಲನೆಯನ್ನು ಬೇಕಿದ್ದರೆ ಅವರು ಮಾಡಿಕೊಳ್ಳಲಿ. ದ್ರಾವಿಡರಾದ ನಮಗೇಕೆ ಸಂಸ್ಕ್ರುತವನ್ನು ಉಳಿಸುವ ಬೆಳೆಸುವ ಮುಟ್ಟಾಳ ಕೆಲಸ? ಹೀಗೆ, ಕನ್ನಡಿಗರು ನಾವು ದ್ರಾವಿಡ ಅರಿವನ್ನು ಮೂಡಿಸಿಕೊಳ್ಳಬೇಕು. ಅದೇ ಸಂಸ್ಕ್ರುತದ ದುರಬಿಮಾನಿಗಳ ಹಾವಳಿಗೆ ತಕ್ಕ ಪರಿಹಾರ.
      ಆದ್ದರಿಂದ, ಗೋಕಾಕ್ ಚಳುವಳಿಯನ್ನು ನಾವು ಹೇಗೆ ಮರೆಯುವುದಿಲ್ಲವೋ, ಹಾಗೆ, ಅದರ ಕಾರಣ ಏನಾಗಿತ್ತು ಎಂಬುದನ್ನೂ ನಾವು ಮರೆಯಬಾರದು. ನಮ್ಮ ಸಹಜ ದ್ರಾವಿಡತನವನ್ನು ನಾವು ಮಯ್ಗೂಡಿಸಿಕೊಳ್ಳದಿದ್ದರೆ, ನಮ್ಮ ನಡುವೆಯೇ ಇದ್ದುಕೊಂಡು ನಮಗೇ ಎರಡು ಬಗೆಯುವ ದ್ರೋಹಿಗಳಿಂದ ನಮ್ಮ ನಡೆನುಡಿಗಳಿಗೆ ಕುತ್ತು ಮೇಲಿಂದ ಮೇಲೆ ಬರುವುದು ತಪ್ಪುವುದಿಲ್ಲ ಎಂಬ ಪಾಟವನ್ನು ನಾವು ಗೋಕಾಕ್ ಚಳುವಳಿಯಿಂದ ಕಲಿತುಕೊಳ್ಳಬೇಕು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಕಾಮೆಂಟ್‌ಗಳಿಲ್ಲ: