ಶುಕ್ರವಾರ, ಜನವರಿ 04, 2013

ಕಪ್ಪು ಕನ್ನಡಿಗರು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಪಂಜಾಬಿ ಮೂಲದ ಕನ್ನಡ ನಟಿ ಪೂಜಾ ಗಾಂದಿಯವರ ತಾಯಿಗೆ ಕಪ್ಪು ಅಳಿಯ ಬೇಡವಂತೆ. ಹೀಗೆ ದೂರಿರುವವರು ಸ್ವತಹ ಪೂಜಾ ಗಾಂದಿಯವರ ಕಯ್ ಹಿಡಿಯಬೇಕಾಗಿದ್ದ ಆನಂದ ಗವ್‍ಡ ಎಂಬ ಕಪ್ಪು ಕನ್ನಡಿಗ. ಹೀಗೆಂದು ಎರಡು ವಾರಗಳ ಹಿಂದೆ ರಂಗುರಂಗಾಗಿ ಪ್ರಸಾರ ಮಾಡಿ ಟೀವಿ ಮಾದ್ಯಮಗಳು ಗುಲ್ಲುಪ್ರಿಯ ನೋಡುಗರ ಬಾಯಿಗೆ ಕಡಲೆ ಬೆಲ್ಲವನ್ನು ಒದಗಿಸಿದವು. ಆನಂದ ಗವ್‍ಡರು ನಿಜವಾಗಿಯೂ ಕಪ್ಪೋ, ಕಪ್ಪಿದ್ದರೂ ಎಶ್ಟು ಕಪ್ಪು ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಇಶ್ಟು ಮಾತ್ರ ಹೇಳಬಲ್ಲೆ. ಟೊಮೇಟೋದಂತಹ ಪಂಜಾಬಿಗಳಿಗೆ ಹೋಲಿಸಿದರೆ ಬರೀ ಆನಂದ ಗವ್‍ಡರಶ್ಟೇ ಅಲ್ಲ, ಹೆಚ್ಚುಕಡಿಮೆ ನಾವೆಲ್ಲ ಕನ್ನಡಿಗರೂ ಕಪ್ಪೇ.
      ಕನ್ನಡಿಗರನ್ನು ’ಕಪ್ಪು’ ಎಂದು ಬೀಳುಗರೆಯುವುದಕ್ಕೆ ಪಂಜಾಬಿಗಳಂತಹ ಬಡಗ ಮಂದಿಯೇ ಬೇಕಾಗಿಲ್ಲ. ಕನ್ನಡಿಗರೇ ತಮ್ಮತಮ್ಮಲ್ಲಿ ’ಕಪ್ಪು-ಬಿಳಿ’ ಎಂಬ ತಾರತಮ್ಯವನ್ನು ದಿನನಿತ್ಯ ಮಾಡುತ್ತಾರೆ. ಇದು ಎಲ್ಲರಿಗೂ ತಿಳಿದ ವಿಶಯ.
      ಇತ್ತೀಚೆಗೆ ಟೀವಿ ಕಾಲುವೆಯೊಂದರಲ್ಲಿ ’ಹಾಸ್ಯ ಹಬ್ಬ’ ಎಂಬ ಕಾರ‍್ಯಕ್ರಮವನ್ನು ನೋಡುತ್ತಿದ್ದೆ. ಅದರಲ್ಲಿ ಹೆಸರಾಂತ ನಗೆಗಾರ‍್ತಿ ಇಂದುಮತಿ ಸಾಲಿಮಟ್ ಅವರು ತಮ್ಮ ಬದುಕಿನಲ್ಲಿ ನಡೆದ ಒಂದು ತಮಾಶೆಯ ಸಂಗತಿಯ ಬಗ್ಗೆ ಹೇಳುತ್ತಿದ್ದರು. ಅವರ ಬಣ್ಣ ಕಪ್ಪಂತೆ. ಆದರೆ, ಅವರ ಮಕ್ಕಳಿಬ್ಬರ ಬಣ್ಣ ತಂದೆಯಂತೆ ಬಿಳಿಯಂತೆ. ಬಿಜಾಪುರದಲ್ಲಿದ್ದಾಗ ಮಕ್ಕಳನ್ನು ದಿನವೂ  ಶಾಲೆಗೆ ಬಿಡುವುದನ್ನೂ, ಮತ್ತೆ ಅಲ್ಲಿಂದ ಕರೆತರುವುದನ್ನೂ ಅವರೇ ಮಾಡುತ್ತಿದ್ದರಂತೆ. ಒಂದು ದಿನ ಶಾಲೆಯ ಮಾಸ್ತರರು ಅವರಿಗೆ ಹೇಳಿದರಂತೆ, "ಈ ಮಕ್ಕಳ ತಾಯಿಗೆ ನನ್ನನ್ನು ನಾಳೆ ಬಂದು ಕಾಣಲು ಹೇಳು" ಎಂದು! ಆಗ, "ಈ ಮಕ್ಕಳ ತಾಯಿ ನಾನೇ" ಎಂದು ಇಂದುಮತಿಯವರು ಹೇಳಿದರಂತೆ. ಅದನ್ನು ಕೇಳಿ ಮಾಸ್ತರರಿಗೆ ತುಂಬಾ ಅಚ್ಚರಿಯಾಯಿತಂತೆ. ಅದಕ್ಕೆ ಕಾರಣ, ಮಕ್ಕಳ ಮಯ್ಬಣ್ಣ ಬಿಳಿ ಇದ್ದುದರಿಂದ, ಇಂದುಮತಿಯವರ ಮಯ್ಬಣ್ಣ ಕರಿ ಇದ್ದುದರಿಂದ, ಇಂದುಮತಿಯವರು ಮನೆಗೆಲಸದಾಕೆ ಇರಬೇಕೆಂದು ಮಾಸ್ತರರು ಮನಸ್ಸಿನಲ್ಲಿ ಮುಂದಾಗೇ ತೀರ‍್ಮಾನಿಸಿಕೊಂಡುಬಿಟ್ಟಿದ್ದರಂತೆ!
      ಅಮೆರಿಕ, ಬ್ರೆಜಿಲ್, ಬಾರತ - ಹೀಗೆ ಎಲ್ಲೆಲ್ಲಿ ಕರಿ ಮತ್ತು ಬಿಳಿ ಮಯ್ಬಣ್ಣದವರು ಕಾಣಬರುತ್ತಾರೋ, ಅಲ್ಲೆಲ್ಲ ಸಮಾಜ ಮಯ್ಬಣ್ಣದಿಂದ ಮಂದಿಯ ಅಂತಸ್ತನ್ನು ಅಳೆಯುವುದು ಒಂದು ದಿನನಿತ್ಯದ ಸತ್ಯವಾಗಿಬಿಟ್ಟಿದೆ. ಬಿಳಿ ಮಯ್ಬಣ್ಣದವರಿಗೆ ಸಿಗುವ ಅವಕಾಶಗಳು ಕರಿ ಬಣ್ಣದವರಿಗೆ ಸುಲಬವಾಗಿ ಸಿಗುವುದಿಲ್ಲ. ಅಂಕಿ-ಅಂಶಗಳ ಪ್ರಕಾರ ಕರಿ ಬಣ್ಣದವರ ಒಟ್ಟಾರೆ ಸಾಮಾಜಿಕ ಮತ್ತು ಆರ‍್ತಿಕ ಮಟ್ಟ, ಬಿಳಿ ಬಣ್ಣದವರ ಮಟ್ಟಕ್ಕಿಂತ ಎದ್ದುತೋರುವಶ್ಟು ಕೆಳಗಿರುತ್ತದೆ.
      ನಮ್ಮಲ್ಲಂತೂ ಈ ಬಿಳಿ-ಕರಿ, ಮೇಲು-ಕೀಳು ವ್ಯವಹಾರ ಅಡೆತಡೆಯಿಲ್ಲದೆ ನಡೆದುಕೊಂಡು ಬಂದಿದೆ. ಸಿನಿಮಾ ಮತ್ತು ಟೀವಿಯ ದಾರಾವಾಹಿಗಳನ್ನು ಕೊಂಚ ಗಮನಿಸಿ ನೋಡಿ. ಕಲಿತವರ ಹಾಗೂ ಸಮಾಜದ ಮೇಲು ಪದರದವರ ಪಾತ್ರದಾರಿಗಳು ಸಾಮಾನ್ಯವಾಗಿ ಬಿಳಿ. ಅವಿದ್ಯಾವಂತರ, ಕೂಲಿಗಳ, ಹಳ್ಳಿಗರ ಹಾಗೂ ಕಳ್ಳಕಾಕರ ಪಾತ್ರದಾರಿಗಳು ಸಾಮಾನ್ಯವಾಗಿ ಕರಿ. ದ್ರುಶ್ಯಮಾದ್ಯಮಗಳಲ್ಲಿ ಸಮಾಜ ಹೀಗೆ ಬಿಂಬಿತವಾಗುವುದು ಆಕಸ್ಮಿಕವಲ್ಲ. ವಾಸ್ತವವಾಗಿ ಕನ್ನಡಿಗರಲ್ಲಿ ಬಹುಮಟ್ಟಿನ ಮಂದಿಗೆ ಮಯ್ಬಣ್ಣ ಕಪ್ಪೇ. ಆದರೆ, ದ್ರುಶ್ಯಮಾದ್ಯಮಗಳನ್ನು ನೋಡಿದರೆ, ಬಹುಮಟ್ಟಿನ ಕನ್ನಡಿಗರ ಮಯ್ಬಣ್ಣ ಬಿಳಿಯೇ ಇರಬೇಕು ಎನ್ನುವಂತೆ ಬಾಸವಾಗುತ್ತದೆ!
      ’ಬಿಳಿ ಬಣ್ಣ ಮೇಲು, ಕಪ್ಪು ಬಣ್ಣ ಕೀಳು’ ಎನ್ನುವ ಈ ದೋರಣೆಯಿಂದ ಕಪ್ಪು ಬಣ್ಣದವರಿಗೆ ಸಮಾಜ ಎಳವೆಯಿಂದಲೇ ಕೀಳರಿಮೆಯನ್ನು ತರಿಸುತ್ತದೆ. ಜೊತೆಗೆ, ಮಯ್ಬಣ್ಣದ ವ್ಯತ್ಯಾಸಕ್ಕೆ ಮೂಲ ಕಾರಣ ಏನು ಎಂಬುದರ ಬಗ್ಗೆ ಯಾರಿಗೂ ಶಾಲೆಗಳಲ್ಲಾಗಲೀ ಬೇರಿನ್ನೆಲ್ಲಾಗಲೀ ಕಲಿಸಲಾಗುವುದಿಲ್ಲ. ಇದರಿಂದಾಗಿ ಬಹಳಶ್ಟು ಜನರಿಗೆ ಕಪ್ಪು ಬಣ್ಣ ಯಾವುದೋ ಒಂದು ಕೆಟ್ಟ ಶಾಪದ ಪರಿಣಾಮ ಎನಿಸಿರುತ್ತದೆ.
      ಬಾರತೀಯರಲ್ಲಿ ಮಯ್ಬಣ್ಣ ಕೆಲವರಿಗೆ ಕಪ್ಪಾಗಿಯೂ, ಕೆಲವರಿಗೆ ಬಿಳಿಯಾಗಿಯೂ ಇರುವುದಕ್ಕೆ ಕಾರಣ, ಅವರಲ್ಲಿ ಆಗಿರುವ ಬಿಳಿ ಬಣ್ಣದ ಮತ್ತು ಕಪ್ಪು ಬಣ್ಣದ ಬುಡಕಟ್ಟುಗಳ ಬೆರಕೆ. ಬಹುಕಾಲದ ಈ ಊಹೆಯನ್ನು ಇತ್ತೀಚಿನ DNA ಅದ್ಯಯನಗಳೂ ಎತ್ತಿಹಿಡಿದಿವೆ. ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ಕನ್ನಡಿಗರಲ್ಲಿರುವ ಕರಿ-ಬಿಳಿ ಬಣ್ಣಕ್ಕೆ ಒಟ್ಟಾರೆ ಕಾರಣ ಬಿಳಿಯ ಆರ‍್ಯರ ಮತ್ತು ಕಪ್ಪು ದ್ರಾವಿಡರ ಬೆರಕೆ (ಬಾರತೀಯರ ಜನಾಂಗೀಯ ಬೆರಕೆಗಳ ಬಗ್ಗೆ ಇಂಟರ‍್ನೆಟ್ಟಿನಲ್ಲಿ ಹೇರಳವಾದ ವಯ್‍ಜ್ನಾನಿಕ ಮಾಹಿತಿ ದೊರೆಯುತ್ತದೆ. ಆಸಕ್ತರು ಅದನ್ನು ನೋಡಬಹುದು). ಅಶ್ಟೇ ಅಲ್ಲದೆ, ಕನ್ನಡಿಗರಲ್ಲಿ ಕಪ್ಪು ಬಣ್ಣದವರ ಸಂಕ್ಯೆಯೇ ಹೆಚ್ಚು. ಇದು ವಾಸ್ತವಾಂಶ. ಇಶ್ಟನ್ನು ತಿಳಿದುಕೊಂಡರೇ ಸಾಕು, ಕಪ್ಪು ಕನ್ನಡಿಗರ ಕೀಳರಿಮೆ ತನ್ನಶ್ಟಕ್ಕೆ ತಾನೇ ತಕ್ಕಮಟ್ಟಿಗೆ ನೀಗುತ್ತದೆ. ಏಕೆಂದರೆ, ಸಂಕ್ಯಾಬಲದ ಅರಿವು ಸಹಜವಾಗೇ ಶಕ್ತಿಯನ್ನು ತಂದುಕೊಡುತ್ತದೆ.
      ಆದ್ದರಿಂದ, ಕಪ್ಪು ಮಯ್ಬಣ್ಣದ ಕನ್ನಡಿಗರು ತಾವು ಕಪ್ಪಾಗಿರುವುದು ತಮ್ಮಲ್ಲಿರುವ ದ್ರಾವಿಡ ರಕ್ತದಿಂದ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ದ್ರಾವಿಡ ರಕ್ತದವರೇ ಕನ್ನಡಿಗರಲ್ಲಿ ಹೆಚ್ಚು ಮಂದಿ ಎನ್ನುವುದನ್ನೂ ಅರಿತುಕೊಳ್ಳಬೇಕು. ಅರಿತುಕೊಂಡು ಸುಮ್ಮನೆ ಕುಳಿತಿರದೆ ಉಳಿದವರಲ್ಲೂ ಈ ಅರಿವನ್ನು ಹಂಚಿಕೊಳ್ಳಬೇಕು. ದ್ರಾವಿಡ ಪರಿವೆಯನ್ನು ಹರಡಬೇಕು. ಹೀಗೆ ಮಾಡಿದರೆ, ಬರೀ ಕೀಳರಿಮೆಯನ್ನು ಹೋಗಿಸಿಕೊಳ್ಳುವುದೊಂದೇ ಅಲ್ಲ, ಬಹುಸಂಕ್ಯಾಬಲದಿಂದ ಸಮಾಜದಲ್ಲಿ ಒಳ್ಳೆಯ ಸ್ತಾನಮಾನಗಳನ್ನೂ ಕಪ್ಪು ಕನ್ನಡಿಗರು ಪಡೆದುಕೊಳ್ಳಬಹುದು.
     ನಿಜ ಹೇಳಬೇಕೆಂದರೆ, ಮೇಲಿನ ಮಾತು ಇಡೀ ಕನ್ನಡ ಸಮುದಾಯಕ್ಕೂ ಅನ್ವಯವಾಗುತ್ತದೆ. ಏಕೆಂದರೆ, ಪಂಜಾಬಿ, ಸಿಂದಿ, ಕಶ್ಮೀರಿ ಮುಂತಾದ ಬಡಗ ಸಮುದಾಯಗಳಿಗೆ ಹೋಲಿಸಿದರೆ ಇಡೀ ಕನ್ನಡ ಸಮುದಾಯನ್ನೇ ಒಟ್ಟಾರೆಯಾಗಿ ಕಪ್ಪು ಎನ್ನಬೇಕಾಗುತ್ತದೆ. ಹಾಗಾಗಿ, ನಮ್ಮ ಕಪ್ಪು ಬಣ್ಣ ನಮ್ಮ ದ್ರಾವಿಡ ಹಿನ್ನೆಲೆಯ ಪರಿಣಾಮ ಎನ್ನುವುದನ್ನು ಕನ್ನಡಿಗರು ನಾವೆಲ್ಲರೂ ಒಟ್ಟಾಗಿಯೂ ತಿಳಿದುಕೊಳ್ಳಬೇಕು. ಅಶ್ಟಕ್ಕೇ ನಿಲ್ಲದೆ, ನಮ್ಮ ನೆರೆಹೊರೆಯವರಾದ ತಮಿಳರು, ತೆಲುಗರು, ಕೇರಳೀಯರು ಮತ್ತು ಮರಾಟಿಗರು ಕೂಡ ಒಟ್ಟಾರೆ ದ್ರಾವಿಡರು, ಹಾಗಾಗಿ, ನಮ್ಮೆಲ್ಲರದು ಒಂದು ಹಿರಿದಾದ ದ್ರಾವಿಡ ಸಮುದಾಯ ಎಂಬ ಅರಿಮೆಯನ್ನೂ ಮೂಡಿಸಿಕೊಳ್ಳಬೇಕು (ಮರಾಟಿಗರ ನುಡಿ ದ್ರಾವಿಡವಲ್ಲದಿದ್ದರೂ ಅವರ ಬುಡಕಟ್ಟಿನ ಹಿನ್ನೆಲೆ ಬಹುಮಟ್ಟಿಗೆ ದ್ರಾವಿಡವೆ). ಹೀಗೆ ದ್ರಾವಿಡತನದಲ್ಲಿ ನಾವೆಲ್ಲ ಒಗ್ಗೂಡಿದರೆ ನಮಗೇ ಒಳಿತು.

ನಲ್ಮೆಯೊಡನೆ,
ಎಚ್.ಎಸ್.ರಾಜ್

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನಿಮ್ಮಲ್ಲಿ ಬಿಳಿಯನು ಕರಿಯನಿಗೆ ಮೇಲಲ್ಲ
ಕರಿಯನು ಬಿಳಿಯನಿಗೆ ಮೇಲಲ್ಲ
ಅರಬನು ಅರಬನಲ್ಲದವನಿಗೆ ಮೇಲಲ್ಲ
ಅರಬನಲ್ಲದವನು ಅರಬನಿಗೆ ಮೇಲಲ್ಲ
ಇರುವವನು ಇಲ್ಲದವನಿಗೆ ,ಇಲ್ಲದವನು ಇರುವವನಿಗೆ ಮೇಲಲ್ಲ.
ನಿಮ್ಮಲ್ಲಿ ಒಳ್ಳೆಯ ಗುಣ ಹೊಂದಿರುವವನೇ "ಎಲ್ಲರಿಗಿಂತ ಉತ್ತಮನು".
+ ಮುಹಮ್ಮದ್ ಪೈಗಂಬರ್ - ತನ್ನ ಮರಣಕ್ಕೆ ಮೊದಲ ಕೊನೆಯ ಉಪದೇಶದಲ್ಲಿ.
*******************************************************************
ಈ ಕಾರಣದಿಂದ ನಿಮ್ಮ ಲೇಖನ ಎಷ್ಟು ಔಚಿತ್ಯ ಎನ್ನುವ ಪ್ರಶ್ನೆ ನನ್ನನ್ನು ಕಾಡಿದೆ.

Unknown ಹೇಳಿದರು...

ಮೇಲು-ಕೀಳು ಎಣಿಸುವುದು ಸಮಾಜಕ್ಕೆ ಬಹು ಹಿಂದಿನಿಂದಲೂ ಒಗ್ಗಿ ಬಂದ ವಾಡಿಕೆ. ಇದು ಸತ್ಯವಾಗಿರದಿದ್ದರೆ ಪಯ್ಗಂಬರ್ ನೀವು ಉದ್ದರಿಸಿರುವ ಅವನ ಮಾತುಗಳನ್ನು ಹೇಳುತ್ತಿರಲಿಲ್ಲ. ಹೇಳಲಿಕ್ಕೆ ಕಾರಣವೇ ಇರುತ್ತಿರಲಿಲ್ಲ. ಅದೇ ರೀತಿ, ನಮ್ಮ ಸಮಾಜ ಮನುಶ್ಯರ ಮಯ್ಬಣ್ಣದಲ್ಲಿ ಮೇಲು-ಕೀಳು ಎಣಿಸದಿದ್ದರೆ, ನಾನು ಈ ಲೇಕನವನ್ನು ಬರೆಯುವುದಕ್ಕೆ ಕಾರಣವೇ ಇರುತ್ತಿರಲಿಲ್ಲ. ವಾಸ್ತವ ಏನೆಂದರೆ, ಸಮಾಜ ಕಪ್ಪು ಮಯ್ಬಣ್ಣವನ್ನು ಕೀಳು ಎಂದೇ ಕಾಣುತ್ತದೆ. ಇದನ್ನು ಯಾರೂ ಅಲ್ಲಗಳೆಯಲಾರರು. ನನ್ನ ಬರಹಕ್ಕೆ ನಾನು ವಾಸ್ತವವಾಗಿ ಇತ್ತೀಚೆಗೆ ನಡೆದ ಸಂಗತಿಗಳನ್ನೇ ಆದಾರವಾಗಿ ಕೊಟ್ಟಿದ್ದೇನೆ. ನನ್ನ ಸ್ವಂತ ಕಲ್ಪನೆಯನ್ನು ಬರಹದಲ್ಲಿ ಎಲ್ಲೂ ತೂರಿಸಿಲ್ಲ. ಅಶ್ಟೇ ಅಲ್ಲದೆ, ನಾನು ಸಮಾಜದ ಮೇಲೆ ತಪ್ಪು ಹೊರಿಸುವ ಕೆಲಸವನ್ನಶ್ಟೇ ಮಾಡಿ ಸುಮ್ಮನಾಗಿಲ್ಲ. ಸಮಸ್ಯೆಗೆ ನನಗೆ ಸರಿ ಎನಿಸಿದಂತೆ ಪರಿಹಾರವನ್ನೂ ಸೂಚಿಸಿದ್ದೇನೆ. ಹಾಗಾಗಿ, ನನ್ನ ಲೇಕನ ಅವ್‍ಚಿತ್ಯಪೂರ‍್ಣವಲ್ಲ ಎಂದು ನನಗೆ ಅನಿಸುತ್ತಿಲ್ಲ.
ನಿಮ್ಮ ಅನಿಸಿಕೆಯನ್ನು ಗಮನಿಸಿದರೆ, ನೀವು ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಉಳ್ಳವರಂತೆ ಕಾಣುತ್ತೀರಿ. ನಿಮ್ಮ ಕಳಕಳಿ ಉಳಿದವರಿಗೂ ಇದ್ದರೆ, ನಾನು ಇಲ್ಲಿ ಬರೆದಿರುವಂತಹ ಲೇಕನವನ್ನು ಬರೆಯುವ ಅಗತ್ಯವೇ ಇರುವುದಿಲ್ಲ.
ನಿಮ್ಮ ಪ್ರಾಮಾಣಿಕ ಕಳಕಳಿಯ ಪ್ರತಿಕ್ರಿಯೆಗಾಗಿ ನಿಮಗೆ ನನ್ನ ನಲ್ಮೆ.