ಸೋಮವಾರ, ಜನವರಿ 21, 2013

ಬಿ.ಎಮ್.ಶ್ರೀಯವರ ಲಿಪಿ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ತಿಂಗಳು (ಜನವರಿ), ಅಚ್ಚಗನ್ನಡದ ಹಂಬಿಗೆ ನೀರೆರೆದು ಪೊರೆದ ಕನ್ನಡದ ಕಣ್ವ ಬಿ.ಎಮ್.ಶ್ರೀಯವರು ಹುಟ್ಟಿದ ತಿಂಗಳು. ಶ್ರೀಯವರ ವಿಶಯವಾಗಿ ನನಗೆ ಗೊತ್ತಿರುವುದು ಅವರನ್ನು ಹತ್ತಿರದಿಂದ ಬಲ್ಲವರು ಅವರ ಬಗ್ಗೆ ಬರೆದ ಬರಹಗಳಿಂದ ಮಾತ್ರ. ಶ್ರೀಯವರನ್ನು ಬಲ್ಲವರೆಲ್ಲರೂ ಅವರು ಕನ್ನಡದ ಏಳಿಗೆಗಾಗಿ ಅಕ್ಶರಶಹ ತಮ್ಮ ಒಡಲು ಒಡವೆ ಎರಡನ್ನೂ ಸವೆಸಿದರು ಎಂದು ಹೇಳಿದ್ದಾರೆ. ಅವರ ಕನ್ನಡ ನಾಡುನುಡಿಗಳ ಒಲವಿಗೆ ಎಣೆಯೇ ಇರಲಿಲ್ಲ ಎಂದಿದ್ದಾರೆ. ಶ್ರೀಯವರಿಗೆ ಕನ್ನಡ, ತಮಿಳು, ಸಂಸ್ಕ್ರುತ, ಆಂಗ್ಲ ಹಾಗೂ ಹಳೆಯ ಗ್ರೀಕ್ ಬಾಶೆಗಳಲ್ಲಿ ಪಂಡಿತರನ್ನೇ ಬೆರಗುಗೊಳಿಸುವಶ್ಟು ಪಾಂಡಿತ್ಯವಿತ್ತಂತೆ. ಇಂತಹ ಒಬ್ಬ ಕನ್ನಡದೊಲವಿ, ಇಂತಹ ಹಿರಿಯರಿಗ, ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಕನ್ನಡದ ಲಿಪಿಯನ್ನು ನೇರ‍್ಪುಗೊಳಿಸಬೇಕು ಎಂಬ ಉದ್ದೇಶದಿಂದ ಬಳಕೆಯಲ್ಲಿದ್ದ ಲಿಪಿಗೆ ಕೆಲವು ಮಾರ‍್ಪಾಡುಗಳನ್ನು ಸೂಚಿಸಿದರು. ಅವರು ಕಾಣ್ಕೆಗೊಂಡ ನೇರ‍್ಪುಗೊಳಿಸಿದ ಲಿಪಿಯ ಬಗ್ಗೆ ಈಗಿನ ತಲೆಮಾರಿನವರಿಗೆ ಅಶ್ಟಾಗಿ ತಿಳಿದಿಲ್ಲ. ತಿಳಿದರೆ ಅದನ್ನು ಮೆಚ್ಚದೆ ಇರರು ಎನಿಸುತ್ತದೆ ನನಗೆ.
      ಶ್ರೀಲಿಪಿಯನ್ನು ನೆನಪಿಸಿಕೊಳ್ಳುವ ಮೊದಲು ಕೊಂಚ ಕನ್ನಡ ಲಿಪಿಯ ಅಂದದ ಬಗ್ಗೆ ಮಾತಾಡೋಣ. ಇತ್ತೀಚೆಗೆ ಟೀವೀ ಕಾರ‍್ಯಕ್ರಮ ಒಂದರಲ್ಲಿ ನಗೆಗಯ್ವಿ ಕ್ರಿಶ್ಣೇಗವ್ಡರು ಸಬೆಯೊಂದನ್ನು ಉದ್ದೇಶಿಸಿ ಮಾತಾಡುತ್ತ ಒಂದು ಸಂಗತಿಯನ್ನು ತಿಳಿಸಿದರು. ಹಿಂದೊಮ್ಮೆ ರಶ್ಯಾದ ಮಾಸ್ಕೋದಲ್ಲಿ ಪ್ರಪಂಚದ ಬೇರೆಬೇರೆ ಲಿಪಿಗಳ ಪ್ರದರ‍್ಶನವೊಂದು ನಡೆದಿತ್ತಂತೆ. ಅದರಲ್ಲಿ ಕನ್ನಡ ಲಿಪಿಯ ಅಂದ ಮಂದಿಗೆ ಎಶ್ಟು ಮೆಚ್ಚಿಗೆ ಆಯಿತೆಂದರೆ, ಅಶ್ಟೆಲ್ಲ ಲಿಪಿಗಳ ಮೇಲಾಟದಲ್ಲಿ ಅದು ಮೂರನೆಯ ಎಡೆಯನ್ನು ಗೆದ್ದುಕೊಂಡಿತಂತೆ! ಕ್ರಿಶ್ಣೇಗವ್ಡರ ಮಾತನ್ನು ಕೇಳಿ ಇಡೀ ಸಬೆ ಅಚ್ಚರಿಯ ಉದ್ಗಾರವನ್ನು ಹೊರಡಿಸಿತು. ನನಗಾದರೋ ಎಳ್ಳಶ್ಟೂ ಅಚ್ಚರಿಯಾಗಲಿಲ್ಲ. ಏಕೆಂದರೆ, ಕನ್ನಡ ಲಿಪಿ ತಾನೇತಾನಾಗಿ ಯಾರಿಗೇ ಆಗಲೀ ಮೆಚ್ಚುಗೆಯಾಗುತ್ತದೆ ಎನ್ನುವುದನ್ನು ನನ್ನ ಅನುಬವದಿಂದಲೇ ನಾನು ಆ ಮೊದಲೇ ತಿಳಿದುಕೊಂಡಿದ್ದೆ.
      ಅಮೆರಿಕದಲ್ಲಿ ಓದುತ್ತಿದ್ದಾಗ ಕನ್ನಡ, ತಮಿಳು, ತೆಲುಗು, ದೇವನಾಗರೀ, ಬಂಗಾಳಿ ಮುಂತಾದ ನಮ್ಮ ದೇಶದ ಲಿಪಿಗಳನ್ನು ನಾನು ಅಮೆರಿಕನ್ನರಿಗಶ್ಟೇ ಅಲ್ಲದೆ ಬೇರೆಬೇರೆ ದೇಶಗಳಿಂದ ಬಂದಿದ್ದ ವಿದ್ಯಾರ‍್ತಿಗಳಿಗೆ ಕೂಡ ತೋರಿಸಿ, ಅವರಿಗೆ ಅವುಗಳಲ್ಲಿ ಯಾವುದು ಇಶ್ಟ ಆಯಿತು ಎಂದು ಕೆಲವು ಸಲ ಕುತೂಹಲಕ್ಕಾಗಿ ಕೇಳಿದ್ದೆ. ಕನ್ನಡ ಸಾಮಾನ್ಯವಾಗಿ ಅದೆಶ್ಟು ಮಂದಿಗೆ ಇಶ್ಟವಾಗುತ್ತಿತ್ತು ಎಂದರೆ, ಅದರಿಂದ ನನಗೆ ಆಗುತ್ತಿದ್ದ ಅಚ್ಚರಿ ಅಶ್ಟಿಶ್ಟಲ್ಲ. ಕನ್ನಡ ನನ್ನ ನುಡಿ ಎಂದು ಅವರಿಗೆ ಗೊತ್ತಿರಲಿಲ್ಲ. ಹಾಗಾಗಿ, ಅವರು ಕನ್ನಡ ಲಿಪಿಯನ್ನು ಮೆಚ್ಚಿದ್ದು ಬರೀ ಸವ್‍ಜನ್ಯಕ್ಕಾಗಿ ಅಗಿರಲಿಲ್ಲ. ಕನ್ನಡ ಲಿಪಿಯ ಸಹಜ ಅಂದವೇ ಅವರ ಮೆಚ್ಚುಗೆಯನ್ನು ಗಳಿಸಿಕೊಂಡಿತ್ತು. ಆದರೆ, ಅವರಲ್ಲಿ ಅನೇಕರು, ಹೆಚ್ಚಾಗಿ ಅಮೆರಿಕನ್ನರು, ಅದರ ಒಂದು ಅಂಶವನ್ನು ಮಾತ್ರ ಅಶ್ಟಾಗಿ ಇಶ್ಟ ಪಟ್ಟಿರಲಿಲ್ಲ. ಒತ್ತಕ್ಶರ ಆ ಅಂಶ. What are those little squiggles along the bottom? ಎಂದು ಒತ್ತುಗಳನ್ನು ತೋರಿಸಿ, ’ಒತ್ತುಗಳಿರದಿದ್ದರೆ ಲಿಪಿ ಇನ್ನೂ ಎಶ್ಟು ಅಂದವಾಗಿರುತ್ತಿತ್ತು’ ಎನ್ನುವ ದಾಟಿಯಲ್ಲಿ ನನ್ನನ್ನು ಅವರು ಕೇಳುತ್ತಿದ್ದರು.
      ಒತ್ತಕ್ಶರಗಳ ಬಗ್ಗೆ ಶ್ರೀಯವರೂ ಹೀಗೇ ಅಬಿಪ್ರಾಯ ಪಟ್ಟಿದ್ದರು. ಯಾರಿಗೇ ಆಗಲೀ, ಶ್ರೀಯವರ ಈ ಅಬಿಪ್ರಾಯ ಒಪ್ಪಿಗೆ ಆಗದೆ ಇರದು. ಒತ್ತುಗಳನ್ನು ತೆಗೆದರೆ, ಕನ್ನಡದ ಸಾಲುಗಳಿಗೆ ಓರಂತೆ ಒಂದೇ ಎತ್ತರ ಬರುತ್ತದೆ. ಅದರ ಪರಿಣಾಮವಾಗಿ ಮೇಲೆ ಕೆಳಗೆ ಕೊಂಕುಗಳಿರದ ಮುತ್ತಿನ ಸರಗಳಂತೆ ಅವು ಕಾಣಿಸತೊಡಗುತ್ತವೆ. ನಂಬಿಕೆ ಬರದಿದ್ದರೆ, ಇನ್ನು ಮುಂದೆ ಕನ್ನಡದ ಸಾಲುಗಳನ್ನು ಓದುವಾಗ, ಒತ್ತಕ್ಶರ ಇರದ ಪದಗಳಿಗಿರುವ ಅಂದ ಒತ್ತಕ್ಶರ ಇರುವ ಪದಗಳಿಗೆ ಇದೆಯೆ ಎಂದು ಹೋಲಿಸಿ ನೋಡಿ.
      ಶ್ರೀಯವರು ಅಂದದ ಬಗ್ಗೆ ಮಾತ್ರ ಹೇಳಿ ನಿಲ್ಲಿಸಿರಲಿಲ್ಲ. ಕಾಗುಣಿತದ ಕಟ್ಟಳೆಗಳಲ್ಲಿರುವ ಏರುಪೇರುಗಳನ್ನು ಸರಿಮಾಡುವುದರ ಬಗ್ಗೆ ಮತ್ತು ಬೇಡದ ಕೆಲ ಅಕ್ಶರಗಳನ್ನು ತೆಗೆದು ಹಾಕುವ ಬಗ್ಗೆಯೂ ಹೇಳಿದ್ದರು. ಅವರು ಬೊಟ್ಟಿಟ್ಟು ತೋರಿಸಿದ ಕನ್ನಡ ಲಿಪಿ ಒಳಗೊಂಡಿರುವ ಕೆಲ ಸರಿಯಲ್ಲದ ಅಂಶಗಳು ಹೀಗಿವೆ.
      ದೀರ‍್ಗವನ್ನು ಸೂಚಿಸುವುದಕ್ಕೆ ’ಅಜ್ಜನ ಕೋಲು’ ಎಂದು ಕರೆಯುವ ಚಿನ್ನೆ ಇದೆ. ದೀರ‍್ಗ ಬೇಕಾದಲ್ಲೆಲ್ಲಾ ಅದನ್ನು ಮಾತ್ರ ಬಳಸಿದರೆ ಆಗುವುದಿಲ್ಲವೆ? ಬೇರೆ ಬೇರೆ ಬಗೆಯಲ್ಲಿ ದೀರ‍್ಗವನ್ನು ಸೂಚಿಸುವುದರ ಅವ್‍ಚಿತ್ಯವಾದರೂ ಏನು? ಆ, ಈ, ಊ, ೠ, ಏ, ಓ, ಕಾ, ಕೀ, ಕೂ, ಕೇ, ಕೋ - ಇವು ಹಾಗೂ ಇಂತಹವು ಕನ್ನಡದಲ್ಲಿ ದೀರ‍್ಗವನ್ನು ತೋರಿಸುವ ಬರಿಗೆಗಳು. ಅ, ಇ, ಉ, ಋ, ಎ, ಒ ಬರಿಗೆಗಳ ಮುಂದೆ ಅಜ್ಜನ ಕೋಲನ್ನು ಹಾಕಿ ದೀರ‍್ಗವನ್ನು ಸೂಚಿಸಿದರೆ ಸಾಕಲ್ಲವೆ? ಆ, ಈ, ಊ, ೠ, ಏ ಮತ್ತು ಓ ಎಂಬ ಹೆಚ್ಚುವರಿ ಪ್ರತ್ಯೇಕ ಬರಿಗೆಗಳಾದರೂ ಯಾಕೆ ಬೇಕು? ಅದೇ ರೀತಿ, ಕೀ, ಕೇ, ಕೋ ಬರೆದಂತೆಯೇ ಕ ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕಾ ಆಗುವುದಿಲ್ಲವೇ? ಕು ಮುಂದೆ ಅಜ್ಜನ ಕೋಲನ್ನು ಹಾಕಿದರೆ ಕೂ ಆಗುವುದಿಲ್ಲವೇ? ಕಾ, ಕೂ ಎಂದು ಬೇರೆ ಬೇರೆ ರೀತಿಯಲ್ಲಿ ದೀರ‍್ಗವನ್ನು ತೋರಿಸುವ ಅಗತ್ಯವಾದರೂ ಎಲ್ಲಿದೆ?
      ಅಲ್ಪಪ್ರಾಣ ಮತ್ತು ಮಹಾಪ್ರಾಣದ ಬರಿಗೆಗಳ ಪರಸ್ಪರ ರೂಪಗಳಲ್ಲಿ ಇರುವ ಅರ‍್ತವಿಲ್ಲದ ಬೇರ‍್ಮೆಯನ್ನು ತೊಡೆದು ಹಾಕಬೇಕೆಂದೂ ಅವರು ಸಲಹೆ ನೀಡಿದ್ದರು. ಕ ಹೀಗಿದ್ದರೆ ಖ ಹೀಗೆ. ಜ ಹೀಗಿದ್ದರೆ ಝ ಹೀಗೆ! ಅಲ್ಪಪ್ರಾಣದ ಬರಿಗೆಯ ಬುಡದಲ್ಲೋ ತಲೆಯಲ್ಲೋ ಒಂದು ಬೊಟ್ಟು ಇಟ್ಟು ಮಹಾಪ್ರಾಣವನ್ನು ಸೂಚಿಸಿದರೆ ಆಗುವುದಿಲ್ಲವೆ? ಎಂದು ಅವರು ಕೇಳಿದ್ದರು.
      ಹೀಗೆ ಒತ್ತುಗಳನ್ನು ತೆಗೆಯುವುದರಿಂದ, ಎಲ್ಲೆಡೆ ದೀರ‍್ಗಕ್ಕಾಗಿ ಅಜ್ಜನ ಕೋಲೊಂದನ್ನೇ ಬಳಸುವುದರಿಂದ, ಬೇಡದ ಬರಿಗೆಗಳನ್ನು ತೊಲಗಿಸುವುದರಿಂದ, ಕನ್ನಡಕ್ಕೆ ಇನ್ನಶ್ಟು ಸರಳವೂ ಅಂದವೂ ಆದ ಹಾಗೂ ನೇರ‍್ಪಿನ ಕಾಗುಣಿತವಿರುವ ಹೊಸ ಲಿಪಿಯೊಂದು ದೊರೆಯುತ್ತದೆ ಎಂದು ತಮ್ಮ ವಾದವನ್ನು ತರ‍್ಕಬದ್ದವಾಗಿ ಅವರು ಮಂಡಿಸಿದ್ದರು. ಆದರೆ, ಆಗಿನ ಕಾಲದ ಜನ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ’ಈಗಾಗಲೇ ಬೆಟ್ಟದಶ್ಟು ಪುಸ್ತಕಗಳು ಇಂದಿನ ಲಿಪಿಯಲ್ಲಿ ಅಚ್ಚಾಗಿಬಿಟ್ಟಿವೆಯಲ್ಲ!’ ಎಂದು ಕೆಲವರು ಆಕ್‍ಶೇಪಣೆ ಎತ್ತಿದರು. ’ಈಗಿರುವ ಲಿಪಿ ಹೀಗೇ ಚೆನ್ನಾಗಿದೆ. ಬದಲು ಮಾಡುವ ಅಗತ್ಯ ಇಲ್ಲ’ ಎಂದು ಇನ್ನು ಕೆಲವರು ಉದಾಸೀನ ತೋರಿಸಿದರು. ಒಟ್ಟಿನಲ್ಲಿ ಶ್ರೀಯವರ ಹುರುಳುಳ್ಳ ಸಲಹೆ ಮೂಲೆಗುಂಪಾಯಿತು.
      ಆದರೆ, ಶ್ರೀಯವರ ಮಾರ‍್ಪಾಟುಗಳನ್ನು ಜನ ಒಪ್ಪಿಕೊಳ್ಳುವ ಕಾಲ ಈಗ ಹತ್ತಿರವಾಗಿದೆ ಎಂದು ಅನಿಸುತ್ತಿದೆ ನನಗೆ. ಏಕೆಂದರೆ, ಹೊಸ ತಲೆಮಾರಿನ ಕನ್ನಡದೊಲವಿಗಳು ಸ್ವತಂತ್ರವಾಗಿ ಯೋಚಿಸುವುದನ್ನು ಇಶ್ಟಪಡುತ್ತಿದ್ದಾರೆ. ತರ‍್ಕಕ್ಕೆ ಬೆಲೆ ಕೊಡುತ್ತಿದ್ದಾರೆ. ನಂಬಿದಂತೆ ನಡೆಯುವ ಕೆಚ್ಚು ತೋರಿಸುತ್ತಿದ್ದಾರೆ. ಅನುಮಾನವಿದ್ದರೆ, ಈ ಪುಟದ ಬಲಬದಿಯಲ್ಲಿರುವ ಕಯ್‍ಮರದ ಅಡಿಯಲ್ಲಿ ಕೊಟ್ಟಿರುವ ವೆಬ್ ತಾಣಗಳಿಗೊಮ್ಮೆ ಹೋಗಿ ನೋಡಿ. ಅರ‍್ತವುಳ್ಳ ಮಾರ‍್ಪಾಟುಗಳಿಗೆ ಎಳಗನ್ನಡಿಗರು ಹೇಗೆ ಮನಸ್ಸುಗಳನ್ನು ತೆರೆದುಕೊಳ್ಳುತ್ತಿದ್ದಾರೆ ಎಂಬುದರ ಸುಳುಹು ಅಲ್ಲಿ ನಿಮಗೆ ಡಾಳಾಗಿ ಸಿಗುತ್ತದೆ.
      ನಿಜ ಹೇಳುವುದಾದರೆ, ಕನ್ನಡದಲ್ಲಿ ಲಿಪಿಕ್ರಾಂತಿಯ ಗಾಳಿ ಆಗಲೇ ಬೀಸಲು ತೊಡಗಿದೆ. ಇದಕ್ಕೆ ನುಡಿಯರಿಗ ಶಂಕರ ಬಟ್ಟರ ’ಹೊಸಬರಹ’ ಜನಪ್ರಿಯವಾಗುತ್ತಿರುವುದೇ ಸಾಕ್‍ಶಿ. ಒತ್ತಕ್ಶರಗಳನ್ನು ಕಡಿಮೆ ಮಾಡಿ ಬರೆಯುವ ಪರಿಯೂ ಅಲ್ಲಲ್ಲಿ ಕಾಣಬರುತ್ತಿದೆ. ಇನ್ನು ಬೇಕಾಗಿರುವುದು, ಬರಹದ ಮೆಲ್‍ಪುರುಳುಗಳಲ್ಲಿ ಅಜ್ಜನ ಕೋಲನ್ನು ಬಿಡಿಯಾಗಿ ಬರೆಯಲು ಅನುವು ಮಾಡಿಕೊಡುವ ಸವ್ಲಬ್ಯ. ಈ ಸವ್ಲಬ್ಯ ಕೂಡ ಆಗಲೇ ಕೆಲವು ಮೆಲ್‍ಪುರುಳುಗಳಲ್ಲಿ ದೊರೆಯುತ್ತಿರಬಹುದು.
      ಕನ್ನಡಿಗನಾಗಿ, ದ್ರಾವಿಡನಾಗಿ, ಕಡೆಯದಾಗಿ ನಾನು ಲಿಪಿಯ ವಿಶಯದಲ್ಲಿ ಹೇಳುವುದಿಶ್ಟೆ. ನೆಲದಗಲ ಬಳಕೆಯಲ್ಲಿರುವ ಅದೆಶ್ಟೋ ಲಿಪಿಗಳಲ್ಲಿ, ದ್ರಾವಿಡ ನುಡಿಗಳಲ್ಲಿ ಒಂದು ಮುಕ್ಯ ನುಡಿಯಾದ ನಮ್ಮ ಕನ್ನಡ ನುಡಿಯ ಲಿಪಿ ಎಲ್ಲರೂ ಮೆಚ್ಚುವಂತಹ ಅಂದವನ್ನು ಪಡೆದಿದೆ. ಕನ್ನಡದ ಲಿಪಿ ದಿಟವಾಗಿಯೂ ಮುತ್ತು! ಇನ್ನು ಅದರಿಂದ ಶ್ರೀಯವರ ಕಿವಿಮಾತಿನಂತೆ ಕೆಲ ಕೊಂಕುಗಳನ್ನು ತೆಗೆದು ಹಾಕಿದರೆ, ಅದನ್ನು ಸರಿಗಟ್ಟುವ ಲಿಪಿ ನೆಲದಿ ಮತ್ತೊಂದಿರುವುದಿಲ್ಲ!

ನಲ್ಮೆಯೊಡನೆ,
ಎಚ್.ಎಸ್.ರಾಜ್

3 ಕಾಮೆಂಟ್‌ಗಳು:

m v srinivasa ಹೇಳಿದರು...

ನಿಮ್ಮ ಈ ಲೇಖನ ಬಿ.ಎಮ್.ಶ್ರೀಯವರ ಲಿಪಿ ಓದಿ ಬಹಳ ಸಂತಸಯಿತು. ತಾವೂ ಸಹ ಲಿಪಿ ಸರಳೀಕರಣದ ಮಾತನಾಡುತ್ತಿರುವುದು ಬಹಳ ಮೆಚ್ಚುಗೆಯ ವಿಷಯ.

ಚಲಪತಿ ಹೇಳಿದರು...

ನಮಸ್ಕಾರ ರಾಜ್
ನಿಮ್ಮ ಬ್ಲಾಗನ್ನು ನೋಡಿದೆ, ಕೆಲವನ್ನು ಓದಿದೆ. ಕನ್ನಡಿಗರ ಹಕ್ಕಿನ ಬಗೆಗೆ ನೀವು ಹೇಳುತ್ತಿರುವ ಸಂಗತಿಗಳು ಸೊಗಸಾಗಿ ಮಯ್ಪಡೆದಿವೆ. ನೀವು ಬಳಸುತ್ತಿರುವ ಕನ್ನಡ ಅಲ್ಪಪ್ರಾಣಗಳದು ಸರಿ. ಡಿಎನ್ ಶಂಕರಬಟ್ಟರು ಹೇಳಿದಂತೆ ಕನ್ನಡವನ್ನು ನಾವು ಉಲಿಯುವ ಹಾಗೆ ಬರೆಯುವುದು ಸರಿ. ಆದರೂ ಸಕ್ಕದದ ಪದಗಳನ್ನು ಕಡಿಮೆ ಮಾಡಿದಂತೆ ಆಗವುದಿಲ್ಲ. ಸಕ್ಕದ ಪದಗಳು ಬರುವ ಜಾಗದಲ್ಲಿ ಕನ್ನಡದ್ದೇ ಪದಗಳು ಬರುವಂತೆ-ನಮ್ಮ ಮಾತಿನಲ್ಲಿರುವಂತೆ-ಬಳಸಿದರೆ ಶಂಕರಬಟ್ಟರ ಪ್ರಯತ್ನವನ್ನು ಮುಂದುವರಿಸುವ, ಬೆಳೆಸುವ ಕೆಲಸವೇ ಮಾಡಿದಂತಾಗುತ್ತದೆ. ಶಂಕರಬಟ್ಟರು ಹುಡುಕಿಕೊಡುತ್ತಿರುವ ಕನ್ನಡ ಪದಗಳ ಪ್ರಯತ್ನವೂ ಆ ಬಗೆಯದೇ ಅಂದುಕೊಂಡಿದ್ದೇನೆ. ಏನಂತೀರಿ?

Unknown ಹೇಳಿದರು...

ಮಣಿಹ ನಲ್ಮೆಯ ಚಲಪತಿ ಅವರಿಗೆ.
ನೀವು ಹೇಳುವುದನ್ನು ನಾನು ನೆರೆಯೊಪ್ಪುತ್ತೇನೆ. ನನಗೆ ಆಗುವುದಾದರೆ ಇಡಿಯಾಗಿ ಕನ್ನಡದಲ್ಲೇ ಬರೆಯಲು ಆಸೆ.
ಆದರೆ, ನನಗಿರುವ ಕನ್ನಡ ಸೊಲ್ಲುಗಳ ಅರಿವಿನ ಕೊರತೆಯಿಂದಾಗಿ ಹಾಗೂ ಸಾಮಾನ್ಯವಾಗಿ ತಿಳಿದಿರದ ಕನ್ನಡ ಸೊಲ್ಲುಗಳ
ಬಳಕೆಯಿಂದ ಓದುಗರಿಗೆ ಆಗಬಹುದಾದ ಕಿರಿಕಿರಿಯನ್ನು ಕೂಡಾ ನೆನೆದು, ಕೊಂಚ ಹೆರನುಡಿಯ ಸೊಲ್ಲುಗಳನ್ನೂ ನನ್ನ
ಬರಹಗಳಲ್ಲಿ ಬಳಸುತ್ತಿದ್ದೇನೆ.
ನಿಮ್ಮ ಅನಿಸಿಕೆಗೆ ತುಂಬಾ ನನ್ನಿ.