ಗುರುವಾರ, ನವೆಂಬರ್ 08, 2012

ಹಿಂದೀವಾಲರ ಪೊಗರು!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಹನ್ನೆರಡು ವರ‍್ಶಗಳ ಹಿಂದಿನ ಮಾತು. ಅಮೆರಿಕದಲ್ಲಿ ಇದ್ದುದು ಸಾಕು ಎಂದು, ಮರಳಿ ಬಂದು ಮಯ್ಸೂರಿನಲ್ಲಿ ಬೀಡು ಬಿಟ್ಟೆ. ಆದರೆ, ಕಾರಣಾಂತರಗಳಿಂದ ಎರಡು ವರ‍್ಶಗಳೊಳಗೇ ಅಮೆರಿಕಕ್ಕೆ ತಿರುಗಿ ಹೋಗಬೇಕಾಯಿತು. ಹೋಗುವಾಗ ನನ್ನ ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲ ಮಾರಾಟಕ್ಕೆ ಹಚ್ಚಿದೆ. ಅವುಗಳನ್ನು ಹಿಂದೀವಾಲನೊಬ್ಬ ಕೊಂಡುಕೊಳ್ಳುವುದಕ್ಕೆಂದು ಬಂದ. ಸಾಮಾನುಗಳನ್ನು ಬಿಡಿಬಿಡಿಯಾಗಿ ಸೂಕ್ಶ್ಮವಾಗಿ ನೋಡುವುದಕ್ಕೇ ನನ್ನ ಮನೆಗೆ ಮೂರ‍್ನಾಲ್ಕು ಬಾರಿ ಬೇಟಿ ಕೊಟ್ಟ. ಪ್ರತಿ ಬೇಟಿಯಲ್ಲೂ ನನ್ನೊಂದಿಗೆ ಹಿಂದಿಯಲ್ಲೇ ಮಾತಾಡಲು ಪದೇ ಪದೇ ಪ್ರಯತ್ನ ಪಟ್ಟ. ಅವನಿಗೆ ಇಂಗ್ಲಿಶ್ ಚೆನ್ನಾಗೇ ಬರುತ್ತಿತ್ತು. ನನಗೆ ಹಿಂದಿ ಬರುವುದು ತುಂಬಾ ಕಡಿಮೆ. ಅಶ್ಟೇ ಅಲ್ಲದೆ, ಹಿಂದಿಯಲ್ಲಿ ಮಾತಾಡುವ ಇಶ್ಟವೂ ಇಲ್ಲ. ಹಾಗಾಗಿ ಅವನೊಂದಿಗೆ ಹಿಂದಿಯಲ್ಲಿ ಮಾತಾಡಲು ನಾನು ಹೋಗಲಿಲ್ಲ. ನನಗೆ ಹಿಂದಿ ಬರುವುದಿಲ್ಲ ಎಂದು ಮೊದಲೇ ಅವನಿಗೆ ಹೇಳಿಬಿಟ್ಟೆ. ಆದರೂ ಆತ ನನಗೆ ಹಿಂದಿಯಲ್ಲೇ ಮಾತನಾಡಿಸಲು ಅನೇಕ ಸಲ ಪ್ರಯತ್ನಿಸಿದ. ನಾನು ಸುಳ್ಳು ಹೇಳುತ್ತಿದ್ದೇನೆ, ಹಿಂದಿ ಬಾರದವನಂತೆ ನಟಿಸುತ್ತಿದ್ದೇನೆ ಎಂದು ಅವನಿಗೆ ಸಂದೇಹ. ’ನಿನಗೆ ಚೂರೂ ಹಿಂದಿ ಬರುವುದಿಲ್ಲವೆ?’ ಎಂದು ಹತ್ತು ಬಾರಿಯಾದರೂ ನನ್ನನ್ನು ಬಿಟ್ಟು ಬಿಟ್ಟು ಕೇಳಿದ. ಕಡೆಯ ದಿನ ಸಾಮಾನನ್ನು ಸಾಗಿಸಲು ಆಳುಗಳನ್ನು ಕರೆದುಕೊಂಡು ಬಂದ. ಆಳುಗಳೆಲ್ಲ ಕನ್ನಡಿಗರೇ ಆಗಿದ್ದರು. ಆದರೂ ಅವರಿಗೆ ಅವನು ಹಿಂದಿಯಲ್ಲಿ ಅಪ್ಪಣೆ ಕೊಡುತ್ತಿದ್ದ. ಅವರೂ ಅವನೊಡನೆ ಹರುಕುಮುರುಕು ಹಿಂದಿಯಲ್ಲೇ ಮಾತಾಡುತ್ತಿದ್ದರು. ಕಡೆಗೂ ಸಾಮಾನುಗಳನ್ನೆಲ್ಲ ಸಾಗಿಸಿಕೊಂಡು ಹೋದ. ಅವನ ನಡವಳಿಕೆ ನನ್ನನ್ನು ಕೊಂಚ ಯೋಚನೆಗೆ ಹಚ್ಚಿತು. ನಾನೋ, ಒಬ್ಬ ಹುಟ್ಟು ಕನ್ನಡಿಗ. ಕನ್ನಡ ಮಣ್ಣಲ್ಲೇ ಬೆಳೆದ ಕನ್ನಡ ಮಣ್ಣಿನ ಮಗ. ಹಾಗಾಗಿ, ’ಇವನು ಯಾರೋ ಎಲ್ಲಿಂದಲೋ ಬಂದು ನನ್ನ ಊರಿನಲ್ಲೇ ನನಗೆ ಹಿಂದಿಯಲ್ಲಿ ಮಾತಾಡಲು ಒತ್ತಾಯ ಮಾಡಿದನಲ್ಲ. ನಾನು ಹಿಂದಿ ಮಾತಾಡದಿದ್ದುದು ನನ್ನದೇ ತಪ್ಪು ಎನ್ನುವ ಹಾಗೆ ಆಡಿದನಲ್ಲ. ಎಶ್ಟಿದೆ ನೋಡು ಇವನ ಪೊಗರು!’ ಎಂದುಕೊಂಡೆ.
      ಈಗ, ಮತ್ತೆ ಮರಳಿಬಂದು, ಕಳೆದ ಎರಡು ವರ‍್ಶಗಳಿಂದ ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದೇನೆ. ಮೇಲಿನ ಗಟನೆಯನ್ನು ಮೇಲಿಂದ ಮೇಲೆ ನೆನಪಿಸಿಕೊಳ್ಳುತ್ತಿದ್ದೇನೆ. ಏಕೆಂದರೆ, ಹಾಗಾಗಿದೆ ಇಲ್ಲಿನ ಸ್ತಿತಿ. ಬೆಂಗಳೂರಿನಲ್ಲಿ ಎಲ್ಲಾ ಕಡೆಯೂ ಈಗ ಹಿಂದೀವಾಲರು ತುಂಬಿಹೋಗಿದ್ದಾರೆ. ಎಲ್ಲಾ ಕಡೆಯೂ ರಾಜಾರೋಶವಾಗಿ ಹಿಂದಿಯಲ್ಲೇ ಮಾತಾಡುತ್ತಾರೆ. ಹೋಟೆಲುಗಳಲ್ಲಿ, ಮಾಲುಗಳಲ್ಲಿ ಕೆಲಸಗಾರರನ್ನು ಹಿಂದಿಯಲ್ಲೇ ಕೂಗಿ ಕರೆಯುತ್ತಾರೆ. ಹಿಂದಿಯಲ್ಲೇ ಪ್ರಶ್ನೆ ಕೇಳುತ್ತಾರೆ. ಹಿಂದಿಯಲ್ಲೇ ವಾದ ಮಾಡುತ್ತಾರೆ. ಬೆಂಗಳೂರಿಗರು ಹಿಂದಿ ಕಲಿತಿರಬೇಕು, ಹಿಂದಿಯಲ್ಲಿ ಮಾತಾಡಬೇಕು, ಹಿಂದಿ ಗೊತ್ತಿಲ್ಲದಿದ್ದರೆ ಬೆಂಗಳೂರಿಗರದೇ ತಪ್ಪು ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ನಮ್ಮವರೂ ಅಶ್ಟೆ. ಅವರು ಹಾಕಿದ ತಾಳಕ್ಕೆ ಕುರಿಗಳಂತೆ ಕುಣಿಯುತ್ತಿದ್ದಾರೆ. ಏನೆನ್ನುವುದು ಇದಕ್ಕೆ? ಕನ್ನಡಿಗರ ತಲೆಯೂರಿನಲ್ಲೇ ಬಡಗರಿಂದ ಕನ್ನಡಿಗರ ಮೇಲೆ ಹಿಂದೀ ಹೇರಿಕೆ ನಡೆಯುತ್ತಿದೆ. ಆದರೆ ವೀರ ಕನ್ನಡಿಗರು ಮಾತ್ರ ಅದಕ್ಕೆ ಎಳ್ಳಶ್ಟೂ ಎದುರು ತೋರಿಸುತ್ತಿಲ್ಲ!
      ಯಾಕೆ ನಾವು ಹೀಗೆ? ನಮ್ಮ ನೆರೆಯ ತಮಿಳರು ಚೆನ್ನಯ್ನಲ್ಲಿ ಹೀಗಾಗಲಿಕ್ಕೆ ಬಿಟ್ಟಿದ್ದಾರೆಯೆ? ಅಲ್ಲೂ ದಂಡಿಯಾಗಿ ಹಿಂದೀಗಳು ಸೇರಿಕೊಂಡಿದ್ದಾರೆ. ಆದರೆ ತೆಪ್ಪಗೆ ತಮಿಳು ಕಲಿತು ತಮಿಳಿನಲ್ಲೇ ಮಾತಾಡುತ್ತಾರೆ. ಅಲ್ಲಿ ಹಿಂದಿಯಲ್ಲಿ ಮಾತಾಡಲಿಕ್ಕೆ ಆಸ್ಪದವೇ ಇಲ್ಲ. ಏಕೆಂದರೆ, ತಮಿಳರು ದ್ರಾವಿಡತನ ಮೆರೆದು ಹಿಂದಿಯನ್ನು ಕಲಿಯುವ ತಂಟೆಗೇ ಹೋಗಲಿಲ್ಲ. ಅವರು ಹಿಂದಿ ಕಲಿಯದೇ ಹೋದುದರಿಂದ ಅವರ ತಾಯ್ನುಡಿ ತಮಿಳಿಗಿದ್ದ ಮೊದಲೆಡೆ ಹಾಗೇ ಉಳಿಯಿತು. ಆದರೆ ನಾವು ಮಾಡಿದ್ದೇನು? ಅವರಂತೆ ನಾವು ಕೂಡ ದ್ರಾವಿಡ ನುಡಿಯನ್ನೇ ಆಡಿದರೂ ದ್ರಾವಿಡತನವನ್ನು ಮಾತ್ರ ಮಯ್ಗೂಡಿಸಿಕೊಳ್ಳಲಿಲ್ಲ. ದ್ರಾವಿಡತನವನ್ನು ಕಡೆಗಣಿಸಿ ’ತ್ರಿಬಾಶಾ’ ಸೂತ್ರಕ್ಕೆ ಒಪ್ಪಿ ಟೋಪಿ ಹಾಕಿಸಿಕೊಂಡೆವು. ಕುವೆಂಪು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದೆವು. ಹಿಂದಿ ಕಲಿತು ಎಡವೆಟ್ಟು ಮಾಡಿಕೊಂಡೆವು. ಎಡವೆಟ್ಟಿನ ಪಲವನ್ನು ಈಗ ಉಣ್ಣುತ್ತಿದ್ದೇವೆ. ನಮ್ಮ ಮಣ್ಣಿನಲ್ಲೇ ನಾವು ಹಿಂದೀಗಳ ಒಡನೆ ಹಿಂದಿಯಲ್ಲೇ ತೊತ್ತುಗಳ ಹಾಗೆ ಮಾತಾಡುತ್ತಿದ್ದೇವೆ. ನಾವು ಹಿಂದಿ ಕಲಿತದ್ದು ನಮಗೇ ಮುಳುವಾಗಿದೆ; ಹಿಂದೀಗಳಿಗೆ ಅನುಕೂಲವಾಗಿದೆ!
      ಆದರೆ ಇನ್ನೂ ಕಾಲ ಮಿಂಚಿಲ್ಲ. ಬೆಂಗಳೂರು ಇನ್ನೂ ಬಾಂಬೆ ಆಗಿಲ್ಲ. ಈಗಲೂ ನಾವು ಹಿಂದೀಗಳಿಗೆ, ’ಕರ‍್ನಾಟಕ ದ್ರಾವಿಡ ನೆಲ. ಕನ್ನಡ ದ್ರಾವಿಡ ನುಡಿ. ಇಲ್ಲಿ ಕನ್ನಡವೇ ಮೊದಲು. ಹಿಂದೀ ಬಾಲ ಇಲ್ಲಿ ಬಿಚ್ಚಬೇಡಿ’ ಎಂಬ ತಿಳಿವಳಿಕೆ ಕೊಡುವ ಕೆಚ್ಚು ತೋರಿಸಬೇಕು. ನಮ್ಮ ದ್ರಾವಿಡತನವನ್ನು ಮೆರೆಯಬೇಕು. ತ್ರಿಬಾಶಾ ಸೂತ್ರದಿಂದ ಹೊರಗೆ ಬರಬೇಕು. ಹಿಂದಿಯನ್ನು ಅಸಡ್ಡೆಯಿಂದ ಕಾಣಬೇಕು. ಹಿಂದಿಯಲ್ಲಿ ಮಾತಾಡಲಿಕ್ಕೇ ಹೋಗಬಾರದು. ಹಿಂದಿಯಲ್ಲಿ ಮಾತಾಡಿದರೆ ಕನ್ನಡಕ್ಕೆ ಕುತ್ತು ಎನ್ನುವುದನ್ನು ಅರಿತುಕೊಳ್ಳಬೇಕು. ಹಿಂದಿಯಲ್ಲಿ ಮಾತಾಡದಿದ್ದರೆ ನಶ್ಟವೇನೂ ಇಲ್ಲ ಎಂಬುದನ್ನು ಕಂಡುಕೊಳ್ಳಬೇಕು.
      ಅಂದ ಹಾಗೆ, ನಾನು ಬರೀ ಉಪದೇಶ ಮಾಡುತ್ತಿಲ್ಲ. ಮೇಲೆ ಹೇಳಿದ ಹಾಗೇ ನಡೆದುಕೊಂಡು ಬಂದಿದ್ದೇನೆ. ಎಂದೂ ನಾನು ಹಿಂದಿಗೆ ಸೊಪ್ಪು ಹಾಕಿಲ್ಲ. ಅದರಿಂದ ನನಗೆ ಏನೂ ನಶ್ಟವಾಗಿಲ್ಲ. ನಂಬಿ.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಕಾಮೆಂಟ್‌ಗಳಿಲ್ಲ: