ಶನಿವಾರ, ಮೇ 25, 2013

ರಮ್ಯಾ ಮಾಡಿದ್ದು ತಪ್ಪೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ತಿಂಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಶದ ಹುರಿಯಾಳಿಗಾಗಿ ಕನ್ನಡ ಚಿತ್ರರಂಗದ ತಾರೆ ರಮ್ಯಾ ಶಾಂತಿನಗರ ಕ್ಶೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು. ಶಾಂತಿನಗರ ಕ್ಶೇತ್ರದಲ್ಲಿ ತಮಿಳರ ಸಂಕ್ಯೆ ಹೆಚ್ಚು. ರಮ್ಯಾಗೆ ತಮಿಳಿನಲ್ಲಿ ಮಾತನಾಡುವುದು ಬರುತ್ತದೆ. ಒಂದು ಕಡೆ ಅವರ ಪ್ರಚಾರ ಮೆರವಣಿಗೆಯನ್ನು ನೋಡಲು ನೆರೆದಿದ್ದ ಮಂದಿಯಲ್ಲಿ ತಮಿಳರೇ ಹೆಚ್ಚು ಇದ್ದಿದ್ದರಿಂದ, ರಮ್ಯಾ ತಮಿಳಿನಲ್ಲೇ ಅವರನ್ನು ಉದ್ದೇಶಿಸಿ ಮಾತನಾಡಿದರು. ಪ್ರಚಾರದ ಹುರುಪಿನಲ್ಲಿದ್ದ ರಮ್ಯಾ ತಮಗೆ ಅರಿವಿಲ್ಲದಂತೆಯೇ ಹಾಗೆ ಸಹಜವಾಗಿ ತಮಿಳಿನಲ್ಲಿ ಮಾತನಾಡಿರಬಹುದು, ಇಲ್ಲ, ತಮಿಳರನ್ನು ಓಲಯ್ಸುವ ಸಲುವಾಗಿ ಉದ್ದೇಶಪೂರ‍್ವಕವಾಗೇ ತಮಿಳಿನಲ್ಲಿ ಮಾತನಾಡಿರಬಹುದು. ಕಾರಣ ಏನೇ ಇರಲಿ, ಚುನಾವಣಾ ಪ್ರಚಾರದಂತಹ ಹುರುಪಿನ ಸನ್ನಿವೇಶಗಳಲ್ಲಿ ಈ ರೀತಿ ಮತದಾರರನ್ನು ಪುಸಲಾಯಿಸುವುದು ತೀರಾ ಸಹಜ ಮತ್ತು ಸಾಮಾನ್ಯ. ಜನಸಾಮಾನ್ಯರು ಇಂತಹವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲ ಟೀವಿ ಚಾನೆಲ್ಲುಗಳ ಪರಿಯೇ ಬೇರೆ. ಒಂದು ಕನ್ನಡ ಚಾನೆಲ್, ರಮ್ಯಾ ತಮಿಳಿನಲ್ಲಿ ಮಾತನಾಡಿದ ಈ ಸಾಸಿವೆಯಂತಹ ಸಣ್ಣ ವಿಶಯವನ್ನು ಎತ್ತಿಕೊಂಡು ಬೆಟ್ಟದಶ್ಟು ದೊಡ್ಡದು ಮಾಡಿ ಎರಡು-ಮೂರು ಗಂಟೆಗಳ ಕಾಲ ರಮ್ಯಾರ ಮೇಲೆ ಹಾಗೂ ಪರೋಕ್ಶವಾಗಿ ತಮಿಳರ ಮೇಲೆ ವಿಶ ಕಾರಿತು. ಜೊತೆಗೆ, ತಾವೇ ಕನ್ನಡ ಬಕ್ತರು ಎಂದು ತಿಳಿದುಕೊಂಡಿರುವ ಕೆಲ ಕನ್ನಡಿಗರಿಂದಲೂ ಟೆಲಿಫೋನ್ ಕರೆಗಳನ್ನು ತೆಗೆದುಕೊಂಡು, ಅವರಿಂದಲೂ ವಿಶ ಕಾರಿಸಿತು.
      ಚಾನೆಲ್ಲಿನವರ ಈ ’ಲಯ್‍ವ್’ ಕಾರ‍್ಯಕ್ರಮದ ಸುಳಿವು ಗೊತ್ತಾದಾಗ ಸ್ವತಹ ರಮ್ಯಾರೇ ಕರೆ ಮಾಡಿ ಸಮಜಾಯಿಶಿ ಕೊಡಲು ಪ್ರಯತ್ನಿಸಿದರು. ರಮ್ಯಾ ಕೊಂಚ ಯೋಚನೆ ಮಾಡಿದ್ದರೆ, ’ಪ್ರಚಾರದ ಗುಂಗಿನಲ್ಲಿದ್ದೆ. ತಮಿಳರ ಏರಿಯಾದಲ್ಲಿದ್ದೆ. ಸಹಜವಾಗೇ ನನಗೇ ಗೊತ್ತಿಲ್ಲದಂತೆ ತಮಿಳಿನಲ್ಲಿ ಮಾತನಾಡಿದೆ. ಕನ್ನಡವನ್ನು ಕಡೆಗಣಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನಾನು ಕನ್ನಡದವಳು. ಕನ್ನಡಿಗರಿಂದ ನಾನು ಈ ಸ್ತಿತಿಯಲ್ಲಿ ಇದ್ದೇನೆ. ನಾನು ತಮಿಳಿನಲ್ಲಿ ಮಾತನಾಡಿದ್ದರಿಂದ ಕನ್ನಡಿಗರಿಗೆ ನೋವಾಗಿದ್ದರೆ, ಅವರಲ್ಲಿ ಕ್ಶಮೆ ಕೇಳುತ್ತೇನೆ’ ಎಂದು ಸರಳವಾಗಿ, ನಡೆದುದನ್ನು ನಡೆದಂತೆ ಹೇಳಿ ಬೆಂಕಿಯನ್ನು ಆರಿಸಬಹುದಾಗಿತ್ತು. ಆದರೆ, ಹಾಗೆ ಮಾಡುವ ಬದಲು ಅವರು ’ಬಾರತದಲ್ಲಿ ಹಲವು ಬಾಶೆಗಳಿವೆ. ಎಲ್ಲಾ ಬಾಶೆಗಳನ್ನೂ ನಾವು ಗವ್‍ರವಿಸಬೇಕು’ ಎಂದು ಮುಂತಾಗಿ ಉಪದೇಶಕ್ಕೆ ತೊಡಗಿ, ಕೆಸರಿಗೆ ದೊಡ್ಡ ಕಲ್ಲನ್ನು ಹಾಕಿ ಇನ್ನಶ್ಟು ರಾಡಿಯನ್ನು ತಮ್ಮ ಮೇಲೆ ಸಿಡಿಸಿಕೊಂಡರು!
      ರಮ್ಯಾರ ಕರೆ ಮುಗಿದ ಬಳಿಕ ಚಾನೆಲ್ಲಿನವರ ಕನ್ನಡ ಕಳಕಳಿಯ ಕಾರ‍್ಯಕ್ರಮ ಇನ್ನಶ್ಟು ಜೋಶ್ ಪಡೆದುಕೊಂಡು ಮುಂದುವರೆಯಿತು. ಕಾರ‍್ಯಕ್ರಮ ನಡೆಸಿಕೊಡುತ್ತಿದ್ದ ’ಕನ್ನಡದ ಕಟ್ಟಾಳಿನ’ ಒಟ್ಟಾರೆ ತಕರಾರು ಇದಾಗಿತ್ತು - ’ನಮ್ಮ ನಾಡಿನಲ್ಲೇ ನಾವು ಕನ್ನಡವಲ್ಲದ ಬಾಶೆಯಲ್ಲಿ ಮತ ಕೇಳಲು ತೊಡಗಿದರೆ ಕನ್ನಡದ ಪಾಡೇನು?’. ಈ ಕಾರ‍್ಯಕ್ರಮ ನಡೆದ ಕೆಲ ದಿನಗಳ ಮುಂಚೆಯಶ್ಟೇ ಉತ್ತರದ ಬೀಜೇಪಿ ಮುಂದಾಳುಗಳು ಬಂದು ’ಕನ್ನಡ’ ನಾಡಿನಲ್ಲಿ ಹಿಂದೀಯಲ್ಲಿ ಬಾಶಣ ಬೊಗಳಿ ಹೋಗಿದ್ದರು. ಅದು ನಡೆದಿರುವುದು ಈ ನಮ್ಮ ಕಾರ‍್ಕ್ರಮ ನಡೆಸುತ್ತಿದ್ದ ಆಳಿನ ತಲೆಯೊಳಗಿತ್ತು. ಅದಕ್ಕಾಗಿಯೋ ಏನೋ, ಆತ, ’ನರೇಂದ್ರ ಮೋದಿಯಂತವರು ಹಿಂದೀಯಲ್ಲಿ ಬಾಶಣ ಮಾಡಿದರೆ ನಾವು ಅದನ್ನು ಮನ್ನಿಸುತ್ತೇವೆ. ಏಕೆಂದರೆ, ಅವರಿಗೆ ಕನ್ನಡ ಬರುವುದಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರು. ಹೇಗಿದೆ ನೋಡಿ ಈ ವರಸೆ! ದೇಶದ ಎಲ್ಲೆಡೆಯಲ್ಲೂ ಹಿಂದೀಯ ಒಡೆತನವನ್ನು ಸ್ತಾಪಿಸಬೇಕು ಎಂದು ಟೊಂಕ ಕಟ್ಟಿರುವ ’ಕೇಸರಿಗಳು’ ಬಂದು, ಎಳ್ಳಶ್ಟೂ ಅಳುಕದೆ ಹಿಂದೀಯಲ್ಲಿ ನಮ್ಮ ಮುಂದೆ ಬೊಗಳಿ ಹೋಗುವುದನ್ನು ಕನ್ನಡದ ಕಳಕಳಿ ಇರುವ ಯಾರೇ ಆದರೂ ಕಂಡಿಸಬೇಕು. ಅದನ್ನು ಬಿಟ್ಟು ಈ ಮಹಾನುಬಾವರು ಕೇಸರಿಗಳ ದಬ್ಬಾಳಿಕೆಯನ್ನು ಸ್ವ ಇಚ್ಚೆಯಿಂದ ಸಮ್ರ‍್ತಿಸಿಕೊಳ್ಳುತ್ತಿದ್ದಾರೆ! ಇವರ ಪ್ರಕಾರ ಕನ್ನಡ ಬರದವರು ಬೇರೆ ಬಾಶೆಯಲ್ಲಿ ಬಾಶಣ ಮಾಡಿದರೆ ತೊಂದರೆ ಇಲ್ಲ ತಾನೆ? ಹಾಗಾದರೆ, ಕನ್ನಡ ಬಾರದ ಯಾರೋ ಒಬ್ಬ ತಮಿಳು ಮನ್ನನ್ ತಮಿಳುನಾಡಿನಿಂದ ಬಂದು ತಮಿಳು ಅರ‍್ತವಾಗುವ ಬೆಂಗಳೂರಿನ ಕನ್ನಡಿಗರನ್ನು ಉದ್ದೇಶಿಸಿ ತಮಿಳಿನಲ್ಲಿ ಬಾಶಣ ಮಾಡಿದರೆ, ಚಾನೆಲ್ಲಿನ ಈ ಮನುಶ್ಯ ಅದನ್ನು ಮನ್ನಿಸುತ್ತಾರೆಯೆ? ಕನ್ನಡಿಗರು ಮನ್ನಿಸುತ್ತಾರೆಯೆ? ಈ ಪ್ರಶ್ನೆಯನ್ನು ಚಾನೆಲ್ಲಿನವರಿಗೆ ನೇರವಾಗಿ ಕೇಳಿಬಿಡೋಣ ಎಂದು ಫೋನ್ ಎತ್ತಿಕೊಂಡೆ. ಆದರೆ, ಎಶ್ಟು ಪ್ರಯತ್ನಿಸಿದರೂ ಸಂಪರ‍್ಕ ಸಿಗಲಿಲ್ಲ.
      ಏನು ಹೇಳುವುದು ಸ್ವಾಮೀ ನಮ್ಮ ಅರಿವುಗೇಡಿತನಕ್ಕೆ! ಕನ್ನಡ ಮತ್ತು ತಮಿಳು - ಎರಡೂ ದ್ರಾವಿಡ ಬಾಶೆಗಳು. ಅಕ್ಕತಂಗಿಯರಿದ್ದ ಹಾಗೆ. ಕನ್ನಡಿಗರೂ ತಮಿಳರೂ ಒಟ್ಟಾರೆ ದ್ರಾವಿಡರೆ. ಒಬ್ಬರಲ್ಲೊಬ್ಬರಿಗೆ ಸಹಜ ಮಯ್‍ತ್ರಿ ಇರಬೇಕು. ಒಬ್ಬರ ನುಡಿಯನ್ನೊಬ್ಬರು ಆದರಿಸಬೇಕು. ಅದನ್ನು ಬಿಟ್ಟು, ನಮಗೆ ಸಂಬಂದವೇ ಇಲ್ಲದ ಉತ್ತರದ ಹಿಂದೀಗೆ ಮಣೆ ಹಾಕುತ್ತೇವೆ. ನಮ್ಮ ನಂಟಿರುವ ನಮ್ಮ ಪರಿವಾರದ್ದೇ ಆದ ತಮಿಳಿಗೆ ಕೆಂಗಣ್ಣು ಬಿಡುತ್ತೇವೆ! ಇದಕ್ಕೆ ಕಾರಣ ಏನು? ನಮ್ಮಲ್ಲಿ ಬಹುಮಂದಿಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಕನ್ನಡ ಸಮುದಾಯದ ಚುಕ್ಕಾಣಿ ಹಿಡಿದವರು ತಲತಲಾಂತರದಿಂದ ಕನ್ನಡಿಗರ ಸಹಜ ದ್ರಾವಿಡತನವನ್ನು ಮರೆಮಾಜಿ, ಕನ್ನಡಿಗರನ್ನು ಉತ್ತರದ ಸಂಸ್ಕ್ರುತಿಯ ಕಡೆಗೆ ಓಲಿಸುತ್ತಾ ಬಂದಿರುವುದು ಕಾರಣ. ಇನ್ನಾದರೂ ನಾವು ಕನ್ನಡಿಗರು ಇಂತಹ ದ್ರೋಹಿಗಳು ಎರಚಿರುವ ಮಂಕುಬೂದಿಯ ಪ್ರಬಾವದಿಂದ ಹೊರಬರುವುದು ಒಳ್ಳೆಯದು.
      ಕೆಲ ದಶಕಗಳ ಹಿಂದೆ ಬೆಂಗಳೂರಿನ ಕೆಲ ತಮಿಳು ಪ್ರದೇಶಗಳಲ್ಲಿ ಕನ್ನಡ ಬಾರದ ತಮಿಳರು ಇದ್ದುದು ದಿಟ. ಆದರೆ, ಈಗ ಸನ್ನಿವೇಶ ತುಂಬಾ ಮಾರ‍್ಪಟ್ಟಿದೆ. ಬೆಂಗಳೂರಿನಲ್ಲಿ ಬಹಳ ಕಾಲದಿಂದ ನೆಲೆಸಿರುವ ತಮಿಳರು ಕನ್ನಡವನ್ನು ಚೆನ್ನಾಗೇ ಮಾತಾಡುತ್ತಾರೆ. ಕನ್ನಡ ಮಾತಾಡುವುದಕ್ಕೆ ಅವರಿಗೆ ಬೇಸರವಿಲ್ಲ. ಅವರ ಪ್ರದೇಶಗಳಲ್ಲಿ ಕೂಡ ಅವರು ತಮಿಳಿನಲ್ಲೇ ನಾವು ಮಾತಾಡಬೇಕು ಎಂದು ಆಗ್ರಹಿಸುವುದಿಲ್ಲ. ತಮಿಳರು ಹೆಚ್ಚಾಗಿರುವ ಹಲಸೂರಿನಲ್ಲಿ ಮನೆಮಾಡಿಕೊಂಡಿರುವ ನನಗೆ ಇದು ಚೆನ್ನಾಗಿ ತಿಳಿದಿದೆ. ಬೆಂಗಳೂರಿನಲ್ಲಿ ಕೆಲ ಹಿಂದೀಯವರು ಮಾತ್ರ ಅವರ ಮಾತನ್ನೇ ಎಲ್ಲರೂ ಆಡಬೇಕೆಂದು ಬಯಸುವವರು. ತಮಿಳರಲ್ಲ. ತೆಲುಗರೂ ಮಲೆಯಾಳಿಗರೂ ಅಲ್ಲ. ಬೆಂಗಳೂರಿನಲ್ಲಿ ದ್ರಾವಿಡ ನುಡಿಗಳನ್ನಾಡುವ ಮಂದಿ ತಮ್ಮಶ್ಟಕ್ಕೆ ತಾವು ಒಬ್ಬರಿಗೊಬ್ಬರು ತೊಂದರೆ ಕೊಡದೆ ಬದುಕುತ್ತಿದ್ದಾರೆ. ಈ ಒಳ್ಳೆಯ ನೆಲೆಯನ್ನು ಇನ್ನೂ ಗಟ್ಟಿಗೊಳಿಸುವ ಬದಲು, ಅದಕ್ಕೆ ದಕ್ಕೆ ತರುವ ಕೇಡುಗ ಬುದ್ದಿಯನ್ನು ಕೆಲ ಅರಿವುಗೆಟ್ಟ ಸ್ವಾರ‍್ತಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಆಗಾಗ್ಗೆ ತೋರಿಸುತ್ತಿರುತ್ತಾರೆ. ಅದಕ್ಕೆ ನಾವು ಸೊಪ್ಪು ಹಾಕುವ ದಡ್ಡತನ ತೋರಬಾರದು, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಮೇ 09, 2013

ಬಲೇ ಅಮಿತಾಬ್ ಮತ್ತು ಸೋನಿಯಾ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹಿಂದೀ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಇತ್ತೀಚಿನ ವರ‍್ಶಗಳಲ್ಲಿ ದೇಶದ ಒಳಿತಿಗಾಗಿ ಸರ‍್ಕಾರವೂ ಸಾರ‍್ವಜನಿಕರೂ ಹಮ್ಮಿಕೊಂಡಿರುವ ಹಲವಾರು ಯೋಜನೆಗಳಿಗೆ ರಾಯಬಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವುಗೊಂಡ ಹೆಸರಾಂತ ವ್ಯಕ್ತಿಗಳು ಹೇಗೆ ಸಮಾಜಕ್ಕೆ ಬೇರೆಬೇರೆ ಬಗೆಗಳಲ್ಲಿ ಒಳಿತು ಗಯ್ಯಬಹುದು ಎಂಬುದಕ್ಕೆ ಅವರು ಒಂದು ಬೆಳಗುವ ಆದರ‍್ಶವಾಗಿದ್ದಾರೆ. ನಮ್ಮ ದೇಶದ ಹುಲಿಗಳನ್ನು ಕಾಪಾಡುವ ಯೋಜನೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡು ಬಂದಿರುವ ರೀತಿಗೆ ಅವರನ್ನು ನಾನು ವಿಶೇಶವಾಗಿ ಮೆಚ್ಚಿದ್ದೇನೆ. ಇತ್ತೀಚೆಗೆ ಅವರನ್ನು ಇನ್ನಶ್ಟು ಮೆಚ್ಚುವ ಸಂಗತಿಯೊಂದು ನನ್ನ ಗಮನಕ್ಕೆ ಬಂತು. ಈ ಸಂಗತಿ ಬಹಳ ಮಂದಿಗೆ ವಿಶೇಶ ಎನಿಸದಿರಬಹುದು. ಆದರೆ, ಕನ್ನಡತನ ಹಾಗೂ ದ್ರಾವಿಡತನವನ್ನು ಮಯ್ಗೂಡಿಸಿಕೊಂಡಿರುವ ನನಗೆ ಅದರಲ್ಲಿ ಸೆರಪು (ವಿಶೇಶ) ಕಂಡದ್ದರಲ್ಲಿ ಸಂಶಯವಿಲ್ಲ. ಅದೇನೆಂದರೆ, ಟಯ್‍ಮ್ಸ್ ಆಫ್ ಇಂಡಿಯಾ ಪತ್ರಿಕೆಯ ಏಪ್ರಿಲ್ ೧೯ರ ಸಂಚಿಕೆಯಲ್ಲಿ ಬಚ್ಚನ್ ಅವರು ಇತ್ತೀಚೆಗೆ IPL ಕ್ರಿಕೆಟಿಗರ ಬಗ್ಗೆ ಕೊಟ್ಟ ಹೇಳಿಕೆಯನ್ನು ಪ್ರಕಟಿಸಿದ್ದಾರೆ. ಬಚ್ಚನ್ ಅವರ ಹೇಳಿಕೆ ಹೀಗಿದೆ - "Indian IPL players, you do not have to reply in English when questioned at the end of a game...reply in your mother tongue if uncomfortable.". ಈ ಹೇಳಿಕೆಯಲ್ಲಿ ಅದೇನು ಅಂತಾ ಸೆರಪು ಕಂಡಿತು ನನಗೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇದು - ಬಚ್ಚನ್ ಅವರು, 'reply in your mother tongue' ಎನ್ನುವ ಬದಲು ’reply in Hindi’ ಎಂದು ಹಾಗೇ ಸುಮ್ಮನೆ ಹೇಳಿಬಿಡಬಹುದಾಗಿತ್ತು. ಹಾಗೊಂದು ವೇಳೆ ಅವರು ’reply in Hindi’ ಎಂದೇ ಹೇಳಿದ್ದರೆ, ಯಾರೂ ಅದಕ್ಕೆ ಹುಬ್ಬೇರಿಸುತ್ತಿರಲಿಲ್ಲ. ಯಾರೂ ಅದಕ್ಕೆ ಎದುರು ಹೇಳುತ್ತಿರಲಿಲ್ಲ. ಯಾರೂ ಅದನ್ನು ಗಮನಿಸುತ್ತಲೂ ಇರಲಿಲ್ಲ. ಹಾಗಿದ್ದರೂ, ಬಚ್ಚನ್ ಅವರು ಬಾಶಾಸೂಕ್ಶ್ಮತೆಗೆ ಕುಂದು ಬರದ ಹಾಗೆ, ಹಿಂದೀಯೇತರರನ್ನೂ ಒಳಗೊಳ್ಳುವ ಹಾಗೆ 'reply in your mother tongue' ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ. IPL ಆಟಗಾರರಲ್ಲಿ ಹಿಂದೀ ತಾಯ್ನುಡಿಯಲ್ಲದವರೂ ಇದ್ದಾರೆ ಎಂಬುದನ್ನು ಮರೆಯದೆ, ಪ್ರಜ್‍ನಾಪೂರ‍್ವಕವಾಗಿ ಕೊಟ್ಟ ಹೇಳಿಕೆ ಇದು ಎಂಬುದು ನನ್ನ ನಂಬಿಕೆ. ಬಡಗಣ ರಾಜ್ಯಗಳ ಕೋಟಿ ಕೋಟಿ ಹಿಂದೀವಾದಿಗಳೂ ಹೀಗೇ ಕೊಂಚ ನುಡಿನಣ್ಪನ್ನು ತೋರಿದರೆ, ನಮ್ಮಲ್ಲಿ ಬಾಶಾಕಲಹಕ್ಕೆ ಎಡೆಯೇ ಇರುವುದಿಲ್ಲ, ಅಲ್ಲವೆ?
      ಇನ್ನು ಈ ಕಳೆದ ಕೆಲ ನಾಳುಗಳಲ್ಲಿ ಬಾಶಾಸೂಕ್ಶ್ಮತೆ ತೋರಿದ ಇನ್ನೊಬ್ಬರು ಯಾರೆಂದರೆ ಕಾಂಗ್ರೆಸ್ ಪಕ್ಶದ ಮುಂದಾಳುಗಳು. ಚುನಾವಣೆಯ ಪ್ರಚಾರಕ್ಕೆಂದು ನಮ್ಮ ನಾಡಿನಲ್ಲಿ ಓಡಾಡಿದ ಕಾಂಗ್ರೆಸ್ ಪಕ್ಶದ ಮುಂದಾಳು ಸೋನಿಯಾ ಗಾಂದಿ, ಮಂಗಳೂರು ಬೆಂಗಳೂರುಗಳಂತಹ ಊರುಗಳಲ್ಲಿ ಇಂಗ್ಲೀಶಿನಲ್ಲಿ ಮಾತ್ರ ಪ್ರಚಾರ ಬಾಶಣಗಳನ್ನು ಮಾಡಿದರು. ಗುಲ್ಬರ‍್ಗದಲ್ಲಿ, ಬಹುಶಹ ಅಲ್ಲಿ ಹಿಂದೀ ಕೆಲಮಟ್ಟಿಗೆ ಚಲಾವಣೆಯಲ್ಲಿದೆ ಎಂಬ ಕಾರಣಕ್ಕೇನೋ, ಹಿಂದಿಯಲ್ಲಿ ಬಾಶಣ ಮಾಡಿದರು. ಒಟ್ಟಾರೆ, ಹೆಚ್ಚಿನ ಕಡೆ ಹಿಂದೀಯಲ್ಲಿ ಬಾಶಣ ಮಾಡದೇ ಇರುವ ಮೂಲಕ, ’ಕರ‍್ನಾಟಕ ತೆಂಕಣ ನಾಡು. ಕರ‍್ನಾಟಕದಲ್ಲಿ ಹಿಂದೀ ಆಡುವ ಉಡಾಫೆ ತೋರಿಸಬಾರದು’ ಎಂಬ ಬಾಶಾಸೂಕ್ಶ್ಮತೆಯನ್ನು ತೋರಿಕೆಗಾದರೂ ಅವರು ಮೆರೆದಿದ್ದಾರೆ. ’ನಾವೂ ಹಿಂದೊಮ್ಮೆ ಹಿಂದೀ ಹೇರಿಕೆಗೆ ವಿರೋದ ತೋರಿಸಿದ್ದೆವು, ನಮ್ಮ ದ್ರಾವಿಡತನವನ್ನೂ ಪ್ರಾದೇಶಿಕತೆಯನ್ನೂ ಮೆರೆದಿದ್ದೆವು’ ಎಂಬ ಸತ್ಯ ಅಲ್ಪಾವದಿ ನೆನಪಿನ ಶಕ್ತಿಯ ಕನ್ನಡಿಗರು ನಮಗೆ ಮರೆತು ಹೋಗಿರಬಹುದು. ಆದರೆ, ಕಾಂಗ್ರೆಸ್ ಪಕ್ಶಕ್ಕೆ ಇನ್ನೂ ಅದು ಮರೆತು ಹೋಗಿಲ್ಲ ಎನ್ನುವುದು ಸಮಾದಾನಕರ ಸಂಗತಿ.
      ಕಾಂಗ್ರೆಸ್ಸಿನವರು ಹೀಗೆ ನಮ್ಮ ದ್ರಾವಿಡತನಕ್ಕೆ ಕೊಂಚವಾದರೂ ಬೆಲೆ ಕೊಟ್ಟರೆ, ಕೊಬ್ಬಿನ ಮೊಟ್ಟೆಗಳಾದ ಬೀಜೇಪಿಯ ’ನೇತಾಗಳು’ ಏನು ಮಾಡಿದವು ನೋಡಿ. ಹೋದ ಕಡೆಯೆಲ್ಲಾ ಬರೀ ಹಿಂದಿಯಲ್ಲೇ ಬೊಗಳಾಟ! ಬಾಶಣವನ್ನು ಕನ್ನಡದಲ್ಲಿ ಶುರು ಮಾಡುವ ’ಸ್ಟಂಟ್’ ಹಾಕುವುದು, ಬಳಿಕ ಹಿಂದೀಯಲ್ಲಿ ಗಂಟೆಗಟ್ಟಲೆ ಜಡಿಯುವುದು! ಕರ‍್ನಾಟಕ ಹಿಂದೀಗೆ ಸೋತು ಶರಣಾದ ಇನ್ನೊಂದು ರಾಜ್ಯ ಎನ್ನುವ ಬಾವನೆ ಅವರ ಬಗೆಯಲ್ಲಿ ಎಶ್ಟು ಗಟ್ಟಿಯಾಗಿ ನಿಂತಿದೆ ಎಂದರೆ, ಅವರು ಇಲ್ಲಿಗೆ ಬಂದು ಹಿಂದೀಯಲ್ಲಿ ಬಾಶಣ ಮಾಡುವುದಕ್ಕೂ ವ್ಯವಹರಿಸುವುದಕ್ಕೂ ಎಳ್ಳಶ್ಟೂ ಅಳುಕು ತೋರಿಸುವುದಿಲ್ಲ. ಕೇಸರಿ ಬಣದವರಿಗೆ ಇಡೀ ದೇಶವನ್ನು ಹಿಂದೀಮಯ ಮಾಡದಿದ್ದರೆ ತಿಂದದ್ದು ಅರಗುವುದಿಲ್ಲ, ಇರುಳಲ್ಲಿ ನಿದ್ದೆ ಬರುವುದಿಲ್ಲ. ಇಂತಹ ದಬ್ಬಾಳಿಕೆ ನಡೆಸುವ ಗರ‍್ವಿಗಳು ಹಾಕುವ ತಾಳಕ್ಕೆ ಕಮಕ್ ಕಿಮಕ್ ಎನ್ನದೆ ಕುಣಿಯುತ್ತೇವೆ ನಾವು! ಇದೇನು ನಾವು ಅಮಾಯಕರೋ, ಇಲ್ಲ, ಬೆಪ್ಪು ತಕ್ಕಡಿಗಳೋ, ಇಲ್ಲ, ಹೇಡಿಗಳೋ, ನಮ್ಮನ್ನು ಪಡೆದ ಆ ಕನ್ನಡ ತಾಯಿಗೇ ಗೊತ್ತಿರಬೇಕು!
      ಇನ್ನು ಕಡೆಯದಾಗಿ, ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ತಮಾಶೆಯ ವಿಶಯ. ಮತ ಹಾಕುವ ನಾಳು, ಬೀಜೇಪಿಯ ದೇಶಮಟ್ಟದ ’ನೇತಾ’ ವೆಂಕಯ್ಯ ನಾಯುಡು, ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯದೇ ನೇರವಾಗಿ ಅದಿಕಾರಿಗಳ ಬಳಿ ಹೋಗಿ, ’ನಾನು ಇಂತವನು. ನನಗೆ ಕೂಡಲೇ ಮತ ಹಾಕಲು ಬಿಡಿ’ ಎಂದು ಕೇಳಿಕೊಂಡರು. ಅದಿಕಾರಿಗಳು ಏನು ಮಾಡಿರುತ್ತಿದ್ದರೋ. ಆದರೆ, ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ಮತದಾರರು ಅದಕ್ಕೆ ಅವಕಾಶ ಕೊಡಲಿಲ್ಲ. ಬೇರೆ ದಾರಿ ಇಲ್ಲದೆ, ನಾಯುಡು ಅವರು ತಮ್ಮ ಸರದಿಗಾಗಿ ಕಾದೇ ಮತ ಹಾಕಬೇಕಾಯಿತು. ಪೆಚ್ಚು ಮೋರೆ ಹಾಕಿಕೊಂಡು ಬಳಿಕ ಅವರು ಮಾದ್ಯಮದವರಿಗೆ ’ಏಕೆ ಹಾಗೆ ಸರದಿಗೆ ಕಾಯದಿರುವ ಆತುರ ತೋರಿಸಿದರು’ ಎಂಬುದನ್ನು ವಿವರಿಸಿದರು. ವಿವರಣೆ ಕೊಟ್ಟಿದ್ದು ಹಿಂದೀ ಮತ್ತು ಇಂಗ್ಲೀಶುಗಳಲ್ಲಿ. ಮತ್ತೆ ಅದೇ ಮೊಂಡಾಟ! ಬರೀ ಇಂಗ್ಲೀಶಿನಲ್ಲಿ ಬೊಗಳಿದ್ದರೆ ಸಾಕಿತ್ತಲ್ಲವೆ? ಹಿಂದೀ ಏಕೆ ಬೇಕಿತ್ತು?
      ಅದೇನೇದರೂ ಇರಲಿ. ಹಿಂದೀ ಬಾಶಣಗಳಿಗೆ ಮತ್ತೆ ಎದುರು ತೋರಿಸುವುದನ್ನು ನಾವು ರೂಡಿಸಿಕೊಳ್ಳಬೇಕು. ನಾವು ಕನ್ನಡಿಗರು. ನಾವು ದ್ರಾವಿಡರು. ನಮಗೆ ನಮ್ಮದೇ ಆದ ದ್ರಾವಿಡ ನುಡಿ ಇದೆ. ನಮಗೆ ಕೆಲಸಕ್ಕೆ ಬಾರದ ಹಿಂದೀ ಬೇಡ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್