ಶನಿವಾರ, ಮೇ 25, 2013

ರಮ್ಯಾ ಮಾಡಿದ್ದು ತಪ್ಪೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕಳೆದ ತಿಂಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಶದ ಹುರಿಯಾಳಿಗಾಗಿ ಕನ್ನಡ ಚಿತ್ರರಂಗದ ತಾರೆ ರಮ್ಯಾ ಶಾಂತಿನಗರ ಕ್ಶೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು. ಶಾಂತಿನಗರ ಕ್ಶೇತ್ರದಲ್ಲಿ ತಮಿಳರ ಸಂಕ್ಯೆ ಹೆಚ್ಚು. ರಮ್ಯಾಗೆ ತಮಿಳಿನಲ್ಲಿ ಮಾತನಾಡುವುದು ಬರುತ್ತದೆ. ಒಂದು ಕಡೆ ಅವರ ಪ್ರಚಾರ ಮೆರವಣಿಗೆಯನ್ನು ನೋಡಲು ನೆರೆದಿದ್ದ ಮಂದಿಯಲ್ಲಿ ತಮಿಳರೇ ಹೆಚ್ಚು ಇದ್ದಿದ್ದರಿಂದ, ರಮ್ಯಾ ತಮಿಳಿನಲ್ಲೇ ಅವರನ್ನು ಉದ್ದೇಶಿಸಿ ಮಾತನಾಡಿದರು. ಪ್ರಚಾರದ ಹುರುಪಿನಲ್ಲಿದ್ದ ರಮ್ಯಾ ತಮಗೆ ಅರಿವಿಲ್ಲದಂತೆಯೇ ಹಾಗೆ ಸಹಜವಾಗಿ ತಮಿಳಿನಲ್ಲಿ ಮಾತನಾಡಿರಬಹುದು, ಇಲ್ಲ, ತಮಿಳರನ್ನು ಓಲಯ್ಸುವ ಸಲುವಾಗಿ ಉದ್ದೇಶಪೂರ‍್ವಕವಾಗೇ ತಮಿಳಿನಲ್ಲಿ ಮಾತನಾಡಿರಬಹುದು. ಕಾರಣ ಏನೇ ಇರಲಿ, ಚುನಾವಣಾ ಪ್ರಚಾರದಂತಹ ಹುರುಪಿನ ಸನ್ನಿವೇಶಗಳಲ್ಲಿ ಈ ರೀತಿ ಮತದಾರರನ್ನು ಪುಸಲಾಯಿಸುವುದು ತೀರಾ ಸಹಜ ಮತ್ತು ಸಾಮಾನ್ಯ. ಜನಸಾಮಾನ್ಯರು ಇಂತಹವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕೆಲ ಟೀವಿ ಚಾನೆಲ್ಲುಗಳ ಪರಿಯೇ ಬೇರೆ. ಒಂದು ಕನ್ನಡ ಚಾನೆಲ್, ರಮ್ಯಾ ತಮಿಳಿನಲ್ಲಿ ಮಾತನಾಡಿದ ಈ ಸಾಸಿವೆಯಂತಹ ಸಣ್ಣ ವಿಶಯವನ್ನು ಎತ್ತಿಕೊಂಡು ಬೆಟ್ಟದಶ್ಟು ದೊಡ್ಡದು ಮಾಡಿ ಎರಡು-ಮೂರು ಗಂಟೆಗಳ ಕಾಲ ರಮ್ಯಾರ ಮೇಲೆ ಹಾಗೂ ಪರೋಕ್ಶವಾಗಿ ತಮಿಳರ ಮೇಲೆ ವಿಶ ಕಾರಿತು. ಜೊತೆಗೆ, ತಾವೇ ಕನ್ನಡ ಬಕ್ತರು ಎಂದು ತಿಳಿದುಕೊಂಡಿರುವ ಕೆಲ ಕನ್ನಡಿಗರಿಂದಲೂ ಟೆಲಿಫೋನ್ ಕರೆಗಳನ್ನು ತೆಗೆದುಕೊಂಡು, ಅವರಿಂದಲೂ ವಿಶ ಕಾರಿಸಿತು.
      ಚಾನೆಲ್ಲಿನವರ ಈ ’ಲಯ್‍ವ್’ ಕಾರ‍್ಯಕ್ರಮದ ಸುಳಿವು ಗೊತ್ತಾದಾಗ ಸ್ವತಹ ರಮ್ಯಾರೇ ಕರೆ ಮಾಡಿ ಸಮಜಾಯಿಶಿ ಕೊಡಲು ಪ್ರಯತ್ನಿಸಿದರು. ರಮ್ಯಾ ಕೊಂಚ ಯೋಚನೆ ಮಾಡಿದ್ದರೆ, ’ಪ್ರಚಾರದ ಗುಂಗಿನಲ್ಲಿದ್ದೆ. ತಮಿಳರ ಏರಿಯಾದಲ್ಲಿದ್ದೆ. ಸಹಜವಾಗೇ ನನಗೇ ಗೊತ್ತಿಲ್ಲದಂತೆ ತಮಿಳಿನಲ್ಲಿ ಮಾತನಾಡಿದೆ. ಕನ್ನಡವನ್ನು ಕಡೆಗಣಿಸಬೇಕೆಂಬ ಉದ್ದೇಶ ನನಗೆ ಇರಲಿಲ್ಲ. ನಾನು ಕನ್ನಡದವಳು. ಕನ್ನಡಿಗರಿಂದ ನಾನು ಈ ಸ್ತಿತಿಯಲ್ಲಿ ಇದ್ದೇನೆ. ನಾನು ತಮಿಳಿನಲ್ಲಿ ಮಾತನಾಡಿದ್ದರಿಂದ ಕನ್ನಡಿಗರಿಗೆ ನೋವಾಗಿದ್ದರೆ, ಅವರಲ್ಲಿ ಕ್ಶಮೆ ಕೇಳುತ್ತೇನೆ’ ಎಂದು ಸರಳವಾಗಿ, ನಡೆದುದನ್ನು ನಡೆದಂತೆ ಹೇಳಿ ಬೆಂಕಿಯನ್ನು ಆರಿಸಬಹುದಾಗಿತ್ತು. ಆದರೆ, ಹಾಗೆ ಮಾಡುವ ಬದಲು ಅವರು ’ಬಾರತದಲ್ಲಿ ಹಲವು ಬಾಶೆಗಳಿವೆ. ಎಲ್ಲಾ ಬಾಶೆಗಳನ್ನೂ ನಾವು ಗವ್‍ರವಿಸಬೇಕು’ ಎಂದು ಮುಂತಾಗಿ ಉಪದೇಶಕ್ಕೆ ತೊಡಗಿ, ಕೆಸರಿಗೆ ದೊಡ್ಡ ಕಲ್ಲನ್ನು ಹಾಕಿ ಇನ್ನಶ್ಟು ರಾಡಿಯನ್ನು ತಮ್ಮ ಮೇಲೆ ಸಿಡಿಸಿಕೊಂಡರು!
      ರಮ್ಯಾರ ಕರೆ ಮುಗಿದ ಬಳಿಕ ಚಾನೆಲ್ಲಿನವರ ಕನ್ನಡ ಕಳಕಳಿಯ ಕಾರ‍್ಯಕ್ರಮ ಇನ್ನಶ್ಟು ಜೋಶ್ ಪಡೆದುಕೊಂಡು ಮುಂದುವರೆಯಿತು. ಕಾರ‍್ಯಕ್ರಮ ನಡೆಸಿಕೊಡುತ್ತಿದ್ದ ’ಕನ್ನಡದ ಕಟ್ಟಾಳಿನ’ ಒಟ್ಟಾರೆ ತಕರಾರು ಇದಾಗಿತ್ತು - ’ನಮ್ಮ ನಾಡಿನಲ್ಲೇ ನಾವು ಕನ್ನಡವಲ್ಲದ ಬಾಶೆಯಲ್ಲಿ ಮತ ಕೇಳಲು ತೊಡಗಿದರೆ ಕನ್ನಡದ ಪಾಡೇನು?’. ಈ ಕಾರ‍್ಯಕ್ರಮ ನಡೆದ ಕೆಲ ದಿನಗಳ ಮುಂಚೆಯಶ್ಟೇ ಉತ್ತರದ ಬೀಜೇಪಿ ಮುಂದಾಳುಗಳು ಬಂದು ’ಕನ್ನಡ’ ನಾಡಿನಲ್ಲಿ ಹಿಂದೀಯಲ್ಲಿ ಬಾಶಣ ಬೊಗಳಿ ಹೋಗಿದ್ದರು. ಅದು ನಡೆದಿರುವುದು ಈ ನಮ್ಮ ಕಾರ‍್ಕ್ರಮ ನಡೆಸುತ್ತಿದ್ದ ಆಳಿನ ತಲೆಯೊಳಗಿತ್ತು. ಅದಕ್ಕಾಗಿಯೋ ಏನೋ, ಆತ, ’ನರೇಂದ್ರ ಮೋದಿಯಂತವರು ಹಿಂದೀಯಲ್ಲಿ ಬಾಶಣ ಮಾಡಿದರೆ ನಾವು ಅದನ್ನು ಮನ್ನಿಸುತ್ತೇವೆ. ಏಕೆಂದರೆ, ಅವರಿಗೆ ಕನ್ನಡ ಬರುವುದಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರು. ಹೇಗಿದೆ ನೋಡಿ ಈ ವರಸೆ! ದೇಶದ ಎಲ್ಲೆಡೆಯಲ್ಲೂ ಹಿಂದೀಯ ಒಡೆತನವನ್ನು ಸ್ತಾಪಿಸಬೇಕು ಎಂದು ಟೊಂಕ ಕಟ್ಟಿರುವ ’ಕೇಸರಿಗಳು’ ಬಂದು, ಎಳ್ಳಶ್ಟೂ ಅಳುಕದೆ ಹಿಂದೀಯಲ್ಲಿ ನಮ್ಮ ಮುಂದೆ ಬೊಗಳಿ ಹೋಗುವುದನ್ನು ಕನ್ನಡದ ಕಳಕಳಿ ಇರುವ ಯಾರೇ ಆದರೂ ಕಂಡಿಸಬೇಕು. ಅದನ್ನು ಬಿಟ್ಟು ಈ ಮಹಾನುಬಾವರು ಕೇಸರಿಗಳ ದಬ್ಬಾಳಿಕೆಯನ್ನು ಸ್ವ ಇಚ್ಚೆಯಿಂದ ಸಮ್ರ‍್ತಿಸಿಕೊಳ್ಳುತ್ತಿದ್ದಾರೆ! ಇವರ ಪ್ರಕಾರ ಕನ್ನಡ ಬರದವರು ಬೇರೆ ಬಾಶೆಯಲ್ಲಿ ಬಾಶಣ ಮಾಡಿದರೆ ತೊಂದರೆ ಇಲ್ಲ ತಾನೆ? ಹಾಗಾದರೆ, ಕನ್ನಡ ಬಾರದ ಯಾರೋ ಒಬ್ಬ ತಮಿಳು ಮನ್ನನ್ ತಮಿಳುನಾಡಿನಿಂದ ಬಂದು ತಮಿಳು ಅರ‍್ತವಾಗುವ ಬೆಂಗಳೂರಿನ ಕನ್ನಡಿಗರನ್ನು ಉದ್ದೇಶಿಸಿ ತಮಿಳಿನಲ್ಲಿ ಬಾಶಣ ಮಾಡಿದರೆ, ಚಾನೆಲ್ಲಿನ ಈ ಮನುಶ್ಯ ಅದನ್ನು ಮನ್ನಿಸುತ್ತಾರೆಯೆ? ಕನ್ನಡಿಗರು ಮನ್ನಿಸುತ್ತಾರೆಯೆ? ಈ ಪ್ರಶ್ನೆಯನ್ನು ಚಾನೆಲ್ಲಿನವರಿಗೆ ನೇರವಾಗಿ ಕೇಳಿಬಿಡೋಣ ಎಂದು ಫೋನ್ ಎತ್ತಿಕೊಂಡೆ. ಆದರೆ, ಎಶ್ಟು ಪ್ರಯತ್ನಿಸಿದರೂ ಸಂಪರ‍್ಕ ಸಿಗಲಿಲ್ಲ.
      ಏನು ಹೇಳುವುದು ಸ್ವಾಮೀ ನಮ್ಮ ಅರಿವುಗೇಡಿತನಕ್ಕೆ! ಕನ್ನಡ ಮತ್ತು ತಮಿಳು - ಎರಡೂ ದ್ರಾವಿಡ ಬಾಶೆಗಳು. ಅಕ್ಕತಂಗಿಯರಿದ್ದ ಹಾಗೆ. ಕನ್ನಡಿಗರೂ ತಮಿಳರೂ ಒಟ್ಟಾರೆ ದ್ರಾವಿಡರೆ. ಒಬ್ಬರಲ್ಲೊಬ್ಬರಿಗೆ ಸಹಜ ಮಯ್‍ತ್ರಿ ಇರಬೇಕು. ಒಬ್ಬರ ನುಡಿಯನ್ನೊಬ್ಬರು ಆದರಿಸಬೇಕು. ಅದನ್ನು ಬಿಟ್ಟು, ನಮಗೆ ಸಂಬಂದವೇ ಇಲ್ಲದ ಉತ್ತರದ ಹಿಂದೀಗೆ ಮಣೆ ಹಾಕುತ್ತೇವೆ. ನಮ್ಮ ನಂಟಿರುವ ನಮ್ಮ ಪರಿವಾರದ್ದೇ ಆದ ತಮಿಳಿಗೆ ಕೆಂಗಣ್ಣು ಬಿಡುತ್ತೇವೆ! ಇದಕ್ಕೆ ಕಾರಣ ಏನು? ನಮ್ಮಲ್ಲಿ ಬಹುಮಂದಿಗೆ ನಮ್ಮ ದ್ರಾವಿಡತನದ ಅರಿವು ಇಲ್ಲದಿರುವುದೇ ಇದಕ್ಕೆ ಕಾರಣ. ಕನ್ನಡ ಸಮುದಾಯದ ಚುಕ್ಕಾಣಿ ಹಿಡಿದವರು ತಲತಲಾಂತರದಿಂದ ಕನ್ನಡಿಗರ ಸಹಜ ದ್ರಾವಿಡತನವನ್ನು ಮರೆಮಾಜಿ, ಕನ್ನಡಿಗರನ್ನು ಉತ್ತರದ ಸಂಸ್ಕ್ರುತಿಯ ಕಡೆಗೆ ಓಲಿಸುತ್ತಾ ಬಂದಿರುವುದು ಕಾರಣ. ಇನ್ನಾದರೂ ನಾವು ಕನ್ನಡಿಗರು ಇಂತಹ ದ್ರೋಹಿಗಳು ಎರಚಿರುವ ಮಂಕುಬೂದಿಯ ಪ್ರಬಾವದಿಂದ ಹೊರಬರುವುದು ಒಳ್ಳೆಯದು.
      ಕೆಲ ದಶಕಗಳ ಹಿಂದೆ ಬೆಂಗಳೂರಿನ ಕೆಲ ತಮಿಳು ಪ್ರದೇಶಗಳಲ್ಲಿ ಕನ್ನಡ ಬಾರದ ತಮಿಳರು ಇದ್ದುದು ದಿಟ. ಆದರೆ, ಈಗ ಸನ್ನಿವೇಶ ತುಂಬಾ ಮಾರ‍್ಪಟ್ಟಿದೆ. ಬೆಂಗಳೂರಿನಲ್ಲಿ ಬಹಳ ಕಾಲದಿಂದ ನೆಲೆಸಿರುವ ತಮಿಳರು ಕನ್ನಡವನ್ನು ಚೆನ್ನಾಗೇ ಮಾತಾಡುತ್ತಾರೆ. ಕನ್ನಡ ಮಾತಾಡುವುದಕ್ಕೆ ಅವರಿಗೆ ಬೇಸರವಿಲ್ಲ. ಅವರ ಪ್ರದೇಶಗಳಲ್ಲಿ ಕೂಡ ಅವರು ತಮಿಳಿನಲ್ಲೇ ನಾವು ಮಾತಾಡಬೇಕು ಎಂದು ಆಗ್ರಹಿಸುವುದಿಲ್ಲ. ತಮಿಳರು ಹೆಚ್ಚಾಗಿರುವ ಹಲಸೂರಿನಲ್ಲಿ ಮನೆಮಾಡಿಕೊಂಡಿರುವ ನನಗೆ ಇದು ಚೆನ್ನಾಗಿ ತಿಳಿದಿದೆ. ಬೆಂಗಳೂರಿನಲ್ಲಿ ಕೆಲ ಹಿಂದೀಯವರು ಮಾತ್ರ ಅವರ ಮಾತನ್ನೇ ಎಲ್ಲರೂ ಆಡಬೇಕೆಂದು ಬಯಸುವವರು. ತಮಿಳರಲ್ಲ. ತೆಲುಗರೂ ಮಲೆಯಾಳಿಗರೂ ಅಲ್ಲ. ಬೆಂಗಳೂರಿನಲ್ಲಿ ದ್ರಾವಿಡ ನುಡಿಗಳನ್ನಾಡುವ ಮಂದಿ ತಮ್ಮಶ್ಟಕ್ಕೆ ತಾವು ಒಬ್ಬರಿಗೊಬ್ಬರು ತೊಂದರೆ ಕೊಡದೆ ಬದುಕುತ್ತಿದ್ದಾರೆ. ಈ ಒಳ್ಳೆಯ ನೆಲೆಯನ್ನು ಇನ್ನೂ ಗಟ್ಟಿಗೊಳಿಸುವ ಬದಲು, ಅದಕ್ಕೆ ದಕ್ಕೆ ತರುವ ಕೇಡುಗ ಬುದ್ದಿಯನ್ನು ಕೆಲ ಅರಿವುಗೆಟ್ಟ ಸ್ವಾರ‍್ತಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಆಗಾಗ್ಗೆ ತೋರಿಸುತ್ತಿರುತ್ತಾರೆ. ಅದಕ್ಕೆ ನಾವು ಸೊಪ್ಪು ಹಾಕುವ ದಡ್ಡತನ ತೋರಬಾರದು, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: