ಶನಿವಾರ, ಡಿಸೆಂಬರ್ 22, 2012

ಹಿಂದಿಯಿಂದ ಕನ್ನಡಕ್ಕೆ ಕುತ್ತು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

’ಹಿಂದಿ ಅದಿಕ್ರುತ ರಾಶ್ಟ್ರಬಾಶೆಯೋ ಅನದಿಕ್ರುತ ರಾಶ್ಟ್ರಬಾಶೆಯೋ ಎನ್ನುವುದು ಮುಕ್ಯವೇ ಅಲ್ಲ. ನಿಜಪ್ರಪಂಚದಲ್ಲಿ ಹಿಂದಿಯ ವರ‍್ಚಸ್ಸಿಗೆ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’ - ಹಿಂದೀವಾದಿಗಳ ಈ ಜಂಬದ ಹೇಳಿಕೆಯನ್ನು ನಂಬುವುದು ’ಕನ್ನಡದಂತಹ ಬಾಶೆಗಳನ್ನು ತಳವೇ ಇಲ್ಲದ ಒಂದು ಪ್ರಪಾತಕ್ಕೆ ತಳ್ಳಿದ ಹಾಗೆ’ ಎಂಬ ಅಬಿಪ್ರಾಯದೊಂದಿಗೆ ’ಹಿಂದೀ ಕಲಿಕೆಯಿಂದ ಯಾರಿಗೆ ಲಾಬ?’ ಎಂಬ ಕಳೆದ ವಾರದ ಕಂತನ್ನು ಮುಗಿಸಿದೆ. ಈ ವಾರದ ಕಂತಿನಲ್ಲಿ ನನ್ನ ಈ ಅಬಿಪ್ರಾಯಕ್ಕೆ ಕಾರಣ ಏನು ಎಂಬುದನ್ನು ಹೇಳುತ್ತೇನೆ.
      ಲೆಕ್ಕದ ಪ್ರಕಾರ ನಮ್ಮ ದೇಶ ಒಂದು federal ಏರ‍್ಪಾಡಿನ ಒಕ್ಕೂಟ. ನಿಜವಾದ federal ಏರ‍್ಪಾಡಿನಲ್ಲಿ ಬಹುಮಟ್ಟಿನ ಅದಿಕಾರ ಮತ್ತು ಹೊಣೆಗಾರಿಕೆ ಅಂಗ ರಾಜ್ಯಗಳು ಮತ್ತು ಆ ರಾಜ್ಯಗಳ ಪ್ರಜೆಗಳ ಕಯ್ಯಲ್ಲಿರುತ್ತದೆ. ಮಿಲಿಟರಿ ಮತ್ತು ವಿದೇಶಾಂಗ ನೀತಿ ಮುಂತಾದ, ರಾಜ್ಯಗಳಿಗೆ ಮೀರಿದ ಕೆಲವೇ ಕೆಲವು ಹೊಣೆಗಾರಿಕೆಗಳು ಮಾತ್ರ ಕೇಂದ್ರ ಸರ‍್ಕಾರದ ಕಯ್ಯಲ್ಲಿರುತ್ತವೆ. ಅಮೆರಿಕ ಇಂತಹ ಏರ‍್ಪಾಡಿಗೆ ಒಂದು ಒಳ್ಳೆಯ ಉದಾಹರಣೆ. ನಮ್ಮ ದೇಶದ ಏರ‍್ಪಾಡಾದರೋ ನಿಜವಾದ federalismನಿಂದ ಸಾಕಶ್ಟು ದೂರವಿದೆ. ನಮ್ಮ ದೇಶ ಅಸ್ತಿತ್ವಕ್ಕೆ ಬಂದ ಸನ್ನಿವೇಶದಿಂದಾಗಿ ಹಾಗೂ ಮೊದಮೊದಲು ’ಸಮಾಜವಾದ’ ನಮ್ಮ ದೇಶದ ಗುರಿಯಾದದ್ದರಿಂದ, ಬಹುಮಟ್ಟಿನ ಅದಿಕಾರಗಳು ಕೇಂದ್ರ ಸರ‍್ಕಾರದ ಕಯ್ಯಲ್ಲೇ ಉಳಿದುಕೊಂಡಿವೆ. ಸಾರಿಗೆ, ಸಂಪರ‍್ಕ, ಗಣಿಗಾರಿಕೆ, ಬ್ಯಾಂಕಿಂಗ್, ಉತ್ಪಾದನೆ - ಹೀಗೆ ಕೇಂದ್ರ ಸರ‍್ಕಾರದ ಕಯ್ವಾಡ ಅನೇಕ ಕ್ಶೇತ್ರಗಳಲ್ಲಿ ಸೇರಿಕೊಂಡಿದೆ. ದೇಶದ ಒಳಗಿನ ಕಾರ‍್ಯನೀತಿಯನ್ನು ರೂಪಿಸುವ ವಿಶಯದಲ್ಲಂತೂ ಕೇಂದ್ರಕ್ಕೆ ಮಿತಿಮೀರಿದ ಅದಿಕಾರವಿದೆ (ಕೆಲ ವರ‍್ಶಗಳ ಹಿಂದೆ ಜಸ್ವಂತ್ ಸಿಂಗ್ ಎಂಬ ರಾಜನೀತಿ ಅರಿಗರು, ’ನಮ್ಮ ದೇಶದಲ್ಲಿ ನಿಜವಾದ federal ಏರ್‍ಪಾಡು ಇದ್ದಿದ್ದರೆ ಪಾಕಿಸ್ತಾನದ ನಿರ‍್ಮಾಣಕ್ಕೆ ಆಸ್ಪದವಿರುತ್ತಿರಲಿಲ್ಲ’ ಎಂದು ಪ್ರತಿಪಾದಿಸಿ ವಿವಾದ ಎಬ್ಬಿಸಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು).
      ಹೀಗೆ ರಾಜ್ಯಗಳ ಅದಿಕಾರ ಕಡಿಮೆ ಇದ್ದು ಕೇಂದ್ರದ ಅದಿಕಾರ ಹೆಚ್ಚಿರುವುದರಿಂದ, ಹಿಂದಿಯನ್ನೇನಾದರೂ ಅದಿಕ್ರುತವಾಗಿ ರಾಶ್ಟ್ರಬಾಶೆಯನ್ನಾಗಿ ಮಾಡಿದರೆ, ಇರುಳೋಇರುಳು ಕೆಂದ್ರ ತನ್ನ ಕಯ್ವಾಡವಿರುವ ಎಲ್ಲಾ ಕ್ಶೇತ್ರಗಳಲ್ಲಿ ಹಿಂದಿಯೊಂದೇ ಆಡಳಿತ ಬಾಶೆ ಎಂದು ಸಾರಿಬಿಡುತ್ತದೆ. ಹಾಗೆ ಮಾಡಲು ಅದಕ್ಕೆ ಯಾರ ಒಪ್ಪಿಗೆಯೂ ಬೇಕಾಗುವುದಿಲ್ಲ. ಸಂಸತ್ತಿನ ಕಲಾಪಗಳು ಹಿಂದಿಯೊಂದರಲ್ಲೇ ನಡೆಯತೊಡಗುತ್ತವೆ. ಉಚ್ಚ ನ್ಯಾಯಾಲಯಗಳ ವ್ಯವಹಾರ ಹಿಂದೀಮಯವಾಗುತ್ತದೆ. ಅಲ್ಲಿಗೇ ನಿಲ್ಲದೆ, ಕಾರ‍್ಯನೀತಿಯನ್ನು ರೂಪಿಸುವುದರಲ್ಲಿ ತನಗಿರುವ ಅದಿಕಾರವನ್ನು ಬಳಸಿಕೊಂಡು ಕೇಂದ್ರ ಸರ‍್ಕಾರ ರಾಜ್ಯಗಳ ವ್ಯವಹಾರಗಳಲ್ಲೂ ಹಿಂದಿಯನ್ನು ಕ್ರಮೇಣ ಕಡ್ಡಾಯಗೊಳಿಸುತ್ತದೆ. ಇದನ್ನು ವಿಪರೀತ ಕಲ್ಪನೆ ಎಂದುಕೊಳ್ಳಬೇಡಿ. ಏಕೆಂದರೆ, ಕೆಲ ವರ‍್ಶಗಳ ಹಿಂದೆ, ಕರ‍್ನಾಟಕದಲ್ಲಿ ರಾಜ್ಯಪಾಲರ ಆಡಳಿತ ಬಂದಿದ್ದಾಗ, ಮುಂಗಡಪತ್ರವನ್ನು ಹಿಂದಿಯಲ್ಲೂ ಪ್ರಕಟಿಸುವುದಾಗಿ ಸರ‍್ಕಾರ ಹೇಳಿಕೆ ಕೊಟ್ಟಿತ್ತು.
      ಹೀಗೆ, ಹಿಂದಿಗೆ ರಾಶ್ಟ್ರಬಾಶೆ ಎಂಬ ’ಅದಿಕ್ರುತ’ ಸ್ತಾನಮಾನ ಸಿಕ್ಕಿದರೆ, ಸ್ವಲ್ಪಕಾಲದಲ್ಲೇ ಎಲ್ಲೆಡೆಯಲ್ಲೂ ಅದರ ಕಲಿಕೆ ಹಾಗೂ ಬಳಕೆ ಕಡ್ಡಾಯವಾಗುತ್ತದೆ. ಬಳಕೆ ಕಡ್ಡಾಯವಾಗುವುದರಿಂದ ಅದು ಅನಿವಾರ‍್ಯವಾಗಿ ಉಪಯುಕ್ತವೂ ಆಗಿಬಿಡುತ್ತದೆ. ಇನ್ನು ಕಾಸಗಿ ಮತ್ತು ಸಾರ‍್ವಜನಿಕ ಕಣಗಳಲ್ಲಿ ಇಂಗ್ಲೀಶ್ ಹೇಗೂ ಅನದಿಕ್ರುತವಾಗಿ ಕಡ್ಡಾಯ ನುಡಿಯಾಗುತ್ತಲಿದೆ. ಈ ರೀತಿ ಎರಡು ಕಡ್ಡಾಯದ ಬಾಶೆಗಳನ್ನು ಕಲಿತು ಪಳಗಬೇಕಾದ ಪರಿಸ್ತಿತಿ ಒದಗಿ ಬಂದಾಗ, ತಮ್ಮ ತಾಯ್ನುಡಿಯನ್ನೂ ಎತ್ತಿಹಿಡಿಯುವುದು ಎಶ್ಟು ಮಂದಿಗೆ ಹೊರೆ ಎನಿಸದೆ ಇರುತ್ತದೆ? ಇಂತಹ ಒಂದು ಕೆಟ್ಟ ನೆಲೆಯಲ್ಲಿ ಸ್ತಳೀಯ ತಾಯ್ನುಡಿಗಳು ಹೇಳದೆ ಕೇಳದೆ ಮೂಲೆಗುಂಪಾಗುವುದಿಲ್ಲವೆ?
      ’ರಾಜ್ಯಗಳು ಒಪ್ಪಿದರೆ ತಾನೆ ಹಿಂದೀ ಅದಿಕ್ರುತ ರಾಶ್ಟ್ರಬಾಶೆ ಆಗುವುದು? ತಮ್ಮ ಬಾಶೆಗಳಿಗೇ ಕುತ್ತು ಉಂಟಾಗುತ್ತದೆ ಎಂದು ತಿಳಿದೂ ತಿಳಿದೂ ರಾಜ್ಯಗಳು ಏಕೆ ಒಪ್ಪುತ್ತವೆ?’ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ, ’ಒಪ್ಪುತ್ತವೆ! ತಿಳಿದೂ ತಿಳಿದೂ ಒಪ್ಪುತ್ತವೆ!’. ಉದಾಹರಣೆಗೆ, ತ್ರಿಬಾಶಾ ಸೂತ್ರಕ್ಕೆ ನಾವು ಒಪ್ಪಿದ್ದೇವಲ್ಲ? ತ್ರಿಬಾಶಾ ಸೂತ್ರವನ್ನು ಒಪ್ಪುವ ಸಮಯದಲ್ಲಿ ಕುವೆಂಪು ಅದನ್ನು ಬಲವಾಗಿ ವಿರೋದಿಸಿದ್ದರು. ’ತ್ರಿಬಾಶಾ ಸೂತ್ರ ಒಂದು  ಸೂತ್ರವಲ್ಲ. ಅದು ಮೊನೆಗಳಲ್ಲಿ ತಿಂಡಿ ಸಿಕ್ಕಿಸಿಕೊಂಡು ಬಂದಿರುವ ಒಂದು ತ್ರಿಶೂಲ’ ಎಂದು ಅದರ ನಿಜಬಣ್ಣವನ್ನು ಬಯಲು ಮಾಡಿದ್ದರು. ತ್ರಿಬಾಶಾ ಸೂತ್ರದಿಂದ ಮುಂದೆ ಹಿಂದೀ ಕೂಡ ಇಂಗ್ಲೀಶಿನಂತೆ ಒಂದು ಕಡ್ಡಾಯ ಬಾಶೆಯಾಗುತ್ತದೆ ಎಂದು ಮುಂದಾಗೇ ನಮಗೆ ತಿಳಿಸಿದ್ದರು. ಕನ್ನಡಕ್ಕೆ ಉಸಿರುಗಟ್ಟಿಸುವ ನೆಲೆಯೊದಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ, ಅವರ ಎಚ್ಚರಿಕೆಯನ್ನು ಯಾರು ಕಿವಿಗೆ ಹಾಕಿಕೊಂಡರು?
      ರಾಶ್ಟ್ರಾಬಿಮಾನದ ಹೆಸರಿನಲ್ಲಿ, ಕೇಸರೀಕರಣದ ಕಾತರದಲ್ಲಿ, ನಮ್ಮ ನಡೆನುಡಿಗಳನ್ನೇ ಬಲಿಕೊಡಲು ಮುಂದಾಗಿರುವ ಮುಂದಾಳುಗಳು ನಮ್ಮಲ್ಲಿ ಬೇಕಾದಶ್ಟಿದ್ದಾರೆ. ಹಾಗಾಗಿ, ನಾವು ಎಚ್ಚರ ತಪ್ಪಿದರೆ, ಒಂದು ನಾಳು, ಹಿಂದೀ ’ಅದಿಕ್ರುತ ರಾಶ್ಟ್ರಬಾಶೆ’ ಆಗಿಬಿಡುವುದೇನೂ ಅಸಾದ್ಯವಲ್ಲ. ಆದ್ದರಿಂದ ನಾವು, ’ಹಿಂದೀ ಅದಿಕ್ರುತವೋ ಅನದಿಕ್ರುತವೋ ಎನ್ನುವುದು ಮುಕ್ಯವಲ್ಲ’ ಎಂಬ ಹಿಂದೀವಾಲರ ವಾದಕ್ಕೆ ಪಕ್ಕಾಗಬಾರದು. ಅದಿಕ್ರುತ ಹಿಂದಿಗೂ ಅನದಿಕ್ರುತ ಹಿಂದಿಗೂ ಹಗಲು ಇರುಳಿನಶ್ಟು ವ್ಯತ್ಯಾಸ ಇದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಹಿಂದೀಯನ್ನು ಅದಿಕ್ರುತ ಮಾಡುವುದಕ್ಕೆ ಎದಿರು ತೋರಿಸಬೇಕು. ಇದಕ್ಕೆ ಮುನ್ನಿನ ನಡೆಯಾಗಿ, ತ್ರಿಬಾಶಾ ಸೂತ್ರದಿಂದ ಕೂಡಲೆ ಹೊರಬರಬೇಕು.
      ಒಂದು ಕಾಲಕ್ಕೆ ಬಾರತದ ಬಹುಬಾಗದಲ್ಲಿ ದ್ರಾವಿಡ ನುಡಿಗಳು ಬಳಕೆಯಲ್ಲಿದ್ದವು. ಈಗ ನೋಡಿದರೆ, ದಕ್ಶಿಣದಲ್ಲಿ ಮಾತ್ರ ಕೆಲವೇ ಕೆಲವು ಉಳಿದಿವೆ. ಹೀಗೆ ಉಳಿದಿರುವ ನುಡಿಗಳಲ್ಲಿ ನಮ್ಮ ಕನ್ನಡ ನುಡಿ ಒಂದು ಮುಕ್ಯ ನುಡಿ. ಹಾಗಾಗಿ, ಕನ್ನಡವನ್ನು ಕಾಪಾಡಿಕೊಳ್ಳುವುದು ನಮಗೆ ತುಂಬಾ ಮುಕ್ಯ.
      ಇಂದು ಹಿಂದಿ ಅದಿಕ್ರುತ ರಾಶ್ಟ್ರಬಾಶೆಯಾಗಿ ಕನ್ನಡವನ್ನು ಇನ್ನೂ ನುಂಗಿ ಹಾಕದೇ ಇರುವುದಕ್ಕೆ ಕಾರಣ, ನಮ್ಮ ಸಹದ್ರಾವಿಡರಾದ ತಮಿಳರ ಬಲಿದಾನ ಮತ್ತು ಹೋರಾಟ. ಅದಕ್ಕಾಗಿ ನಾವು ತಮಿಳರಿಗೆ ರುಣಿಗಳಾಗಿರಬೇಕು. ತಮಿಳರ ಹಿಂದೀ ವಿರುದ್ದದ ಹೋರಾಟದಲ್ಲಿ ನಾವೂ ಕಯ್ ಸೇರಿಸಬೇಕು. ನಮ್ಮ ನುಡಿಗಳಾದ ಕನ್ನಡ, ತುಳು, ಕೊಡವ, ತಮಿಳು, ತೆಲುಗು ಮತ್ತು ಮಲಯಾಳಗಳನ್ನು ಕಾಪಾಡಿಕೊಳ್ಳುವುದರಲ್ಲಿ ದ್ರಾವಿಡರು ನಾವೆಲ್ಲ ಒಟ್ಟಾಗಿ ನಿಲ್ಲಬೇಕು. ಹೀಗೆ ಒಟ್ಟಾಗಿ ನಿಂತರೇನೆ ನಮ್ಮ ನುಡಿಗಳ ಉಳಿವು, ನಮ್ಮತನದ ಉಳಿವು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಹಿಂದೀ ಹೇರಿಕೆಯ ಬಗ್ಗೆ ಹಾಗೂ ಅದರಿಂದ ಕನ್ನಡಕ್ಕೆ ಆಗುವ ಕೆಡುಕಿನ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಬಯಸುವವರು ಬನವಾಸಿಬಳಗ ಹೊರತಂದಿರುವ, ಜಿ. ಆನಂದ್ ಅವರು ಬರೆದಿರುವ, ’ಹಿಂದೀ ಹೇರಿಕೆ - ಮೂರು ಮಂತ್ರ, ನೂರು ತಂತ್ರ’ ಎಂಬ ಓದುಗೆಯನ್ನು ನೋಡಬಹುದು.

ಕಾಮೆಂಟ್‌ಗಳಿಲ್ಲ: