ಶನಿವಾರ, ಡಿಸೆಂಬರ್ 08, 2012

ದ್ರಾವಿಡರ ಇರುವಿಕೆ ಸುಳ್ಳೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಗಣೇಶನ ಹಬ್ಬದ ನಾಳು ಟೀವಿ ಕಾರ‍್ಯಕ್ರಮವೊಂದರಲ್ಲಿ ಗಣೇಶನ ಬಗ್ಗೆ ಚರ‍್ಚೆ ಮಾಡಲಿಕ್ಕೆಂದು ಇಬ್ಬರು ವಿದ್ವಾಂಸರು ಬಂದಿದ್ದರು - ಒಬ್ಬರು ಡಾ. ಕೆ.ಎನ್. ಗಣೇಶಯ್ಯನವರು, ಇನ್ನೊಬ್ಬರು ಡಾ. ಆರ್. ಗಣೇಶ್ ಶತಾವದಾನಿಗಳು. ಗಣೇಶನ ಹಬ್ಬ, ಗಣೇಶನ ಮೇಲೆ ಚರ‍್ಚೆ, ಚರ‍್ಚೆಗೆ ಬಂದವರು ಗಣೇಶಯ್ಯ ಮತ್ತು ಗಣೇಶ್! ಚೆನ್ನಾಗಿದೆ ತಾನೆ? ಸರ‍್ವಂ ಗಣೇಶಮಯಂ :)
      ತಮಾಶೆ ಹಾಗಿರಲಿ ಬಿಡಿ. ಚರ‍್ಚೆ ಕುತೂಹಲಕಾರಿಯಾಗಿತ್ತು. ಚರ‍್ಚೆಯ ನಡುವೆ ಗಣೇಶಯ್ಯನವರು ಒಂದುಕಡೆ ಸಾಂದರ‍್ಬಿಕವಾಗಿ ’ದ್ರಾವಿಡ’ ಎಂಬ ಪದವನ್ನು ಎತ್ತಿದರು. ದ್ರಾವಿಡ ಎಂಬ ಪದ ಕೇಳಿದ ಕೂಡಲೆ ಅವದಾನಿಗಳು, ’ಆರ‍್ಯ ದ್ರಾವಿಡ ಅಂತೆಲ್ಲಾ ಯಾಕೆ ತರ‍್ತೀರಿ? ಅದೆಲ್ಲಾ ಅವಯ್‍ಜ್ನಾನಿಕ’ ಎಂದುಬಿಟ್ಟರು. ಗಣೇಶಯ್ಯನವರು ಅದಕ್ಕೆ ಪ್ರತಿಯಾಗಿ ಏನೂ ಹೇಳಲಿಲ್ಲ. ಅದು ಅಲ್ಲಿಗೆ ಹಾಗೇ ಮುಗಿಯಿತು.
      ಆರ‍್ಯ-ದ್ರಾವಿಡ ಸಿದ್ದಾಂತವನ್ನು ಅವಯ್‍ಜ್ನಾನಿಕ ಎಂದು ಕರೆದಿರುವುದು ಗಣೇಶ್ ಅವದಾನಿಗಳು ಮಾತ್ರವಲ್ಲ. ಇನ್ನೂ  ಕೆಲವರು ಅದನ್ನು ಹಾಗೇ ವರ‍್ಗೀಕರಿಸಿದ್ದಾರೆ. ಬರೀ ಅವಯ್‍ಜ್ನಾನಿಕ ಎಂದು ಕರೆಯುವುದಶ್ಟೇ ಏಕೆ, ’ಆರ‍್ಯ-ದ್ರಾವಿಡ ಎನ್ನುವುದೆಲ್ಲ ಬರಿ ಸುಳ್ಳು. ಬ್ರಿಟಿಶರು ನಮ್ಮನ್ನು ಒಡೆದು ಆಳುವುದಕ್ಕೆಂದು ಗುಳ್ಳೆನರಿಗಳಂತೆ ಹುಟ್ಟುಹಾಕಿದ ಕಟ್ಟುಕತೆ ಅದು’ ಎಂದು ತುಂಬು ನಂಬಿಕೆಯಿಂದ ವಾದಿಸುವವರೂ ಇದ್ದಾರೆ.
      ಚರಿತ್ರೆಯನ್ನು ನೋಡಿದರೆ, ಬ್ರಿಟಿಶರು ನಮ್ಮನ್ನು ಹೊಸದಾಗಿ ಒಡೆಯುವುದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಆಗಲೇ ಇದ್ದ ಒಡಕುಗಳನ್ನು ಸಮರ‍್ತವಾಗಿ ಬಳಸಿಕೊಂಡಹಾಗೆ ಕಾಣುತ್ತದೆ. ಬ್ರಿಟಿಶರು ಗುಳ್ಳೆನರಿಗಳೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಎಶ್ಟರ ಮಟ್ಟಿನ ಗುಳ್ಳೆನರಿಗಳು? ನಮ್ಮ ರಕ್ತದೊಳಗೇ ಹೊಕ್ಕು ನಮ್ಮ 'DNA code' ಅನ್ನೇ ಮಾರ‍್ಪಡಿಸುವಶ್ಟರ ಮಟ್ಟಿನ ಗುಳ್ಳೆನರಿಗಳೆ? ಯಾಕೆ ಹೀಗೆ ಕೇಳುತ್ತಿದ್ದೇನೆಂದರೆ, ಕೆಲವರ‍್ಶಗಳಿಂದೀಚೆಗೆ ಮಾನವಶಾಸ್ತ್ರಜ್ನರು ಜನರ ಬುಡಕಟ್ಟಿನ ಹಿನ್ನೆಲೆಯನ್ನು ಪತ್ತೆ ಹಚ್ಚುವುದಕ್ಕೆ DNA codeಅನ್ನು ಬಿಡಿಸಿ ನೋಡುತ್ತಿದ್ದಾರೆ. ಅದರಲ್ಲಿ ಹಿಂದೆಂದೂ ಕಂಡಿರದಂತಹ ಯಶಸ್ಸನ್ನೂ ಕಾಣುತ್ತಿದ್ದಾರೆ (ಅಂದ ಹಾಗೆ, DNA ಕೋಡಿನಿಂದ ಜನಾಂಗೀಯ ಹಿನ್ನೆಲೆಯನ್ನು ಕಂಡುಹಿಡಿಯುವ ಪ್ರಕ್ರಿಯೆಯನ್ನು ’ಅವಯ್‍ಜ್ನಾನಿಕ’ ಎಂದು ಕರೆದು, ಅದನ್ನು ಒಪ್ಪುವಂತೆ ಸಮರ‍್ತಿಸಿಕೊಂಡವರ ಬಗ್ಗೆ ನಾನು ಇದುವರೆಗೂ ಕೇಳಿಲ್ಲ).
      ಇಲ್ಲಿಯವರೆಗೆ ಬಾರತೀಯ ಸಮುದಾಯಗಳ ಮೇಲೆ ನಡೆಸಿರುವ DNA ಅದ್ಯಯನಗಳು ಬಾರತೀಯರಲ್ಲಿ ಬುಡಕಟ್ಟುಗಳ ಬೆರಕೆ ಆಗಿದೆ ಎಂದೇ ಹೇಳುತ್ತಿವೆ. ಆರ‍್ಯ ಮತ್ತು ದ್ರಾವಿಡ ಜನಾಂಗಗಳ ಒಟ್ಟಾರೆ ಇರುವಿಕೆಯನ್ನು ನಂಬತಕ್ಕಂತೆ ಎತ್ತಿ ಹಿಡಿದಿವೆ (ಇದು ನನ್ನ ಸ್ವಂತ ಅಬಿಪ್ರಾಯವಲ್ಲ. ವಿದ್ವಾಂಸರ ಅಬಿಪ್ರಾಯ. ಇದಕ್ಕೆ ವಿವರವಾಗಿ ಆದಾರಗಳನ್ನು ಕೊಡುವುದು ಈ ಬ್ಲಾಗಿನ ವ್ಯಾಪ್ತಿಗೆ ಮೀರಿದುದು. ಆಸಕ್ತಿ ಇರುವವರಿಗೆ ಇಂಟರ‍್ನೆಟ್ಟಿನಲ್ಲಿ ಇದರ ಬಗ್ಗೆ ಹೇರಳವಾದ ಆದಾರ ದೊರೆಯುತ್ತದೆ). ಆದರೂ ಆರ‍್ಯ-ದ್ರಾವಿಡ ಸಿದ್ದಾಂತವನ್ನು ’ಅವಯ್‍ಜ್ನಾನಿಕ’, ’ಬ್ರಿಟಿಶರ ಕಿಡಿಗೇಡಿತನದ ಪರಿಣಾಮ’ ಎಂದು ಮುಂತಾಗಿ ಕರೆದು ಅಲ್ಲಗಳೆಯುವುದು ಕೆಲವರಿಂದ ನಡೆದೇ ಇದೆ.
      ಆರ‍್ಯ-ದ್ರಾವಿಡ ಸಿದ್ದಾಂತದಲ್ಲಿ ಎರಡು ಮುಕ್ಯ ಅಂಶಗಳಿವೆ. ಒಂದು - ಬಾರತದಲ್ಲಿ ಆರ‍್ಯ ಮತ್ತು ದ್ರಾವಿಡ ಎಂಬ ಜನಾಂಗಗಳ ಅಸ್ತಿತ್ವ. ಎರಡನೆಯದು - ಆ ಜನಾಂಗಗಳ ಹುಟ್ಟು ಹಾಗೂ ಅವುಗಳ ನಡುವೆ ಮೊತ್ತಮೊದಲು ಉಂಟಾದ ಸಂಪರ‍್ಕದ ಕಾಲ ಮತ್ತು ಬಗೆ. ಇದರಲ್ಲಿ ಎರಡನೆಯದು ಉಪಯುಕ್ತತೆಯ ಲೆಕ್ಕದಲ್ಲಿ ದೊಡ್ಡದಲ್ಲ. ಆರ‍್ಯರು ಮತ್ತು ದ್ರಾವಿಡರು ಬಾನಿಂದ ಬಿದ್ದಿದ್ದರೇನು, ನೆಲದಿಂದ ಎದ್ದಿದ್ದರೇನು - ಅದರಿಂದ ಬಾಳ್ತೆಯಿಲ್ಲ. ಹಾಗೇ, ಅವರಿಬ್ಬರೂ ಎಶ್ಟು ಹಿಂದೆ ಮೊತ್ತಮೊದಲ ಬಾರಿಗೆ ಒಬ್ಬರನ್ನೊಬ್ಬರು ಎದುರಾದರು ಎಂಬುದೂ ದೊಡ್ಡದಲ್ಲ. ಯಾವುದು ದೊಡ್ಡದು ಎಂದರೆ, ಅವರಿಬ್ಬರೂ ಇರುವುದು ನಿಜವೆ ಎನ್ನುವುದು. ಅದಕ್ಕಿಂತಲೂ ದೊಡ್ಡದು, ಅವರಿಬ್ಬರ ನಡುವೆ ತಾಕಲಾಟ ನಡೆಯುತ್ತ ಬಂದಿದೆಯೆ ಎನ್ನುವುದು. ಇದುವರೆಗಿನ DNA ಅದ್ಯಯನಗಳು ಬಾರತದಲ್ಲಿ ಅವರಿಬ್ಬರೂ ಇರುವುದು ಹಾಗೂ ಬೆರೆತಿರುವುದು ಸತ್ಯ ಎಂದೇ ತೋರಿಸುತ್ತಿವೆ. ಇದೇ ಮುಕ್ಯ. ಇದೇ ನಮಗೆ ಉಪಯೋಗಕ್ಕೆ ಬರುವ ಕಂಡುಹಿಡಿಕೆ. ಏಕೆಂದರೆ, ಆರ‍್ಯರ ಮತ್ತು ದ್ರಾವಿಡರ ಇರುವಿಕೆ ಸತ್ಯವೆಂದಾದರೆ ಮಾತ್ರ ಅವರಿಬ್ಬರ ನಡುವಿನ ತಾಕಲಾಟದಿಂದ ಆಗಿರುವ ಪರಿಣಾಮಗಳ ಬಗ್ಗೆ ನಾವು ಕಂಡುಕೊಂಡಿರುವ ಅರಿವಿಗೆ ಒಂದು ಅರ‍್ತ ಎನ್ನುವುದು ಇರುತ್ತದೆ.
     ಆರ‍್ಯರ ಪ್ರವೇಶ ಸರಿಸುಮಾರು ಮೂರೂವರೆ ಸಾವಿರ ವರ‍್ಶಗಳ ಹಿಂದೆ ಆಯಿತು ಎನ್ನುವುದು ಬಹುಮಟ್ಟಿನ ಪಂಡಿತರು ಒಪ್ಪಿರುವ ಅಂದಾಜು. ಅಂದರೆ, ಆರ‍್ಯರ ಮತ್ತು ದ್ರಾವಿಡರ ಬೆರಕೆ ಮೂರೂವರೆ ಸಾವಿರ ವರ‍್ಶಗಳಿಗಿಂತ ಹಳೆಯದಲ್ಲ ಎಂದು ಅದರ ಅರ‍್ತ. ಆದರೆ, ಇಸವಿ ೨೦೦೯ರಲ್ಲಿ ಅಮೆರಿಕದ ಹಾರ‍್ವರ‍್ಡ್ ಮೆಡಿಕಲ್ ಸ್ಕೂಲಿನ David Reich ಮತ್ತು ಅವರ ಸಹೋದ್ಯೋಗಿಗಳು ಬಾರತೀಯರ ಮೇಲೆ DNA ಅದ್ಯಯನಗಳನ್ನು ನಡೆಸಿ, ಬಾರತೀಯರಲ್ಲಿ ಕಂಡು ಬರುವ ಜನಾಂಗೀಯ ಬೆರಕೆ ಮೂರೂವರೆ ಸಾವಿರ ವರ‍್ಶಗಳಿಗಿಂತ ಗಣನೀಯವಾಗಿ ಹಿಂದಿನದು ಎಂಬ ತೀರ‍್ಮಾನವನ್ನು ಪ್ರಕಟಿಸಿದರು. ಅದನ್ನು ನೋಡಿದ ಕೂಡಲೆ, ನಮ್ಮಲ್ಲಿ ಆರ‍್ಯ-ದ್ರಾವಿಡ ಸಿದ್ದಾಂತವನ್ನು ಅಲ್ಲಗಳೆಯುತ್ತ ಬಂದಿರುವ ಕೆಲವರು ಹಿಗ್ಗಿನಿಂದ ಕುಣಿದಾಡಿದರು. ಆರ‍್ಯ-ದ್ರಾವಿಡ ಸಿದ್ದಾಂತ ಬರೀ ಸುಳ್ಳು ಎಂದು ಸಾಬೀತಾಯಿತಲ್ಲ? ಎಂದು ಬೀಗಿದರು. ಇದರ ಬಗ್ಗೆ ಪತ್ರಿಕೆಗಳಲ್ಲಿ ಮುಕಪುಟದ ಸುದ್ದಿಗಳೂ ವರದಿಯಾದವು. ಆದರೆ, ಹಾರ‍್ವರ‍್ಡಿನವರ ಅದ್ಯಯನ, ’ಬಾರತೀಯರಲ್ಲಿ ಬುಡಕಟ್ಟುಗಳ ಬೆರಕೆ ಆಗಿದೆ’ ಎಂಬ ಸಿದ್ದಾಂತವನ್ನು ಅಲ್ಲಗಳೆಯದೆ ಇರುವ ಅಂಶದ ಬಗ್ಗೆ ಮಾತ್ರ ಯಾರೂ ಹೆಚ್ಚಾಗಿ ಮಾತಾಡಲಿಲ್ಲ. ಎಲ್ಲರೂ, ಯಾವುದು ಮುಕ್ಯವೋ ಅದನ್ನು ತಮಗೆ ಬೇಡವಾದ್ದರಿಂದ ಕಯ್ಬಿಟ್ಟು, ಮುಕ್ಯವಲ್ಲದ್ದನ್ನು ಮಾತ್ರ, ಅದು ತಮಗೆ ಬೇಕಾದ್ದರಿಂದ, ಎತ್ತಿ ಆಡಿತೋರಿಸಿದರು, ಅಶ್ಟೆ. ಸರಿಯಾಗಿ ನೋಡಿದರೆ, ಆರ‍್ಯ ಮತ್ತು ದ್ರಾವಿಡ ಎಂಬ ಜನಾಂಗಗಳ ಅಸ್ತಿತ್ವ ಇದೆ ಎಂಬ ಅಂಶ, ಅದು ಯಾವ ಕಾಲದಿಂದ ಇದೆ ಎನ್ನುವುದಕ್ಕಿಂತ ಮುಕ್ಯ.
      ಆದ್ದರಿಂದ, ಆರ‍್ಯ-ದ್ರಾವಿಡ ಸಿದ್ದಾಂತ ಸುಳ್ಳು ಎನ್ನುವ ಕೆಲವರ ಪೊಳ್ಳು ಪ್ರಚಾರಕ್ಕೆ ನಾವು ಬಲಿಯಾಗಬಾರದು. ಆರ‍್ಯ ಮತ್ತು ದ್ರಾವಿಡ ಎಂಬ ಜನಾಂಗಗಳ ಇರುವಿಕೆ ಮತ್ತು ಬೆರಕೆ ಒಂದು ವಾಸ್ತವಾಂಶ. ಎರಡು ಸಮುದಾಯಗಳ ನಡುವೆ ನಡೆದ ಮತ್ತು ಈಗಲೂ ನಡೆಯುತ್ತಿರುವ ತಾಕಲಾಟವೂ ಒಂದು ವಾಸ್ತವಾಂಶ. ತಾಕಲಾಟದಲ್ಲಿ ಸೋಲು ಆಗುತ್ತ ಬಂದಿರುವುದು ದ್ರಾವಿಡರಾದ ನಮಗೇ ಎಂಬುದು ಕೂಡ ಒಂದು ವಾಸ್ತವಾಂಶ. ಈ ವಾಸ್ತವದ ಅರಿವನ್ನು ದಕ್ಶಿಣದವರಾದ ನಾವು ಈಗಲಾದರೂ ಪಡೆದುಕೊಳ್ಳಬೇಕು. ಈ ಅರಿವಿನ ಹಿನ್ನೆಲೆಯಲ್ಲಿ ನಾವೆಲ್ಲ ಒಗ್ಗೂಡಬೇಕು. ಆರ‍್ಯಪರ ಶಕ್ತಿಗಳಿಂದ ನಮ್ಮ ನಡೆನುಡಿಗಳ ಮೇಲೆ ನಡೆಯುತ್ತಿರುವ ಒತ್ತುವರಿಯ ಎದುರು ಒಗ್ಗಟ್ಟಿನಿಂದ ಹೋರಾಡಬೇಕು. ಹೀಗೆ ನಡೆದುಕೊಂಡರೆ ಮಾತ್ರ ನಮ್ಮ ನಡೆನುಡಿಗಳು ಉಳಿದಾವು.

ನಲ್ಮೆಯೊಡನೆ,
ಎಚ್.ಎಸ್.ರಾಜ್

ಕಾಮೆಂಟ್‌ಗಳಿಲ್ಲ: