ಬುಧವಾರ, ಸೆಪ್ಟೆಂಬರ್ 25, 2013

ವಿಶ್ವಕ್ಕೇ ಅಣ್ಣ ನಮ್ಮ ಬಸವಣ್ಣ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮರಾಟರಿಗೆ ಶಿವಾಜಿ ಹೇಗೋ, ತಮಿಳರಿಗೆ ವಳ್ಳುವರ್ ಹೇಗೋ, ತೆಲುಗರಿಗೆ ವೇಮನ ಹೇಗೋ, ಹಾಗೆ ಕನ್ನಡರಿಗೆ ಬಸವಣ್ಣ ’ಸಾಂಸ್ಕ್ರುತಿಕ’ ನಾಯಕನಾದರೆ, ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ ಎಂದು ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಕರರು ಇತ್ತೀಚೆಗೆ ಕಾರ‍್ಯಕ್ರಮವೊಂದರಲ್ಲಿ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ಹೀಗೆಂದು ಸೆಪ್ಟೆಂಬರ್ ಒಂದರ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾಗಿದೆ. ರಾ.ನಂ.ಚಂದ್ರಶೇಕರರ ಈ ಸಲಹೆಯನ್ನು ಕಂಡಾಗ, ’ಬಸವಣ್ಣ ಎಂತಹ ಮಹಾನ್ ವ್ಯಕ್ತಿ! ಇಡೀ ವಿಶ್ವಕ್ಕೇ ಆದರ‍್ಶಪ್ರಾಯನಾಗಿರಬೇಕಾದ ಬಸವಣ್ಣನನ್ನು ಆತನ ನೆಲದಲ್ಲೇ ’ನಾಡ ಲಾಂಚನ’ ವ್ಯಕ್ತಿಯಾಗಿ ಗುರುತಿಸಲಾಗಿಲ್ಲವಲ್ಲ!’ ಎಂದು ನನಗೆ ಕೊಂಚ ಬೇಸರವಾಯಿತು.
      ಪ್ರಾಪಂಚಿಕವಾಗಿ ನೋಡುವುದಾದರೆ, ಬಸವಣ್ಣನಿಗೆ ಯಾವ ಕೊರತೆ ಇತ್ತು? ತಾರುಣ್ಯದಲ್ಲೇ ಹಿರಿಯ ಅದಿಕಾರದ ಪದವಿ ದೊರೆತಿತ್ತು. ದೊರೆ ಬಿಜ್ಜಳನ ಇಡೀ ಬಂಡಾರದ ಪಾರುಪತ್ಯೆಯ ಹೊಣೆಯೇ ಆತನ ಮೇಲಿತ್ತು. ದೊರೆಯ ಮೆಚ್ಚುಗೆ, ಸಮಾಜದ ಮನ್ನಣೆ ಎರಡೂ ಅವನಿಗಿತ್ತು. ಎತ್ತರದ ಪದವಿ ತಂದ ಸಿರಿಸಂಪತ್ತು ಮಾತ್ರವಲ್ಲದೆ ಅವನಿಗೆ ತನ್ನನ್ನು ಚಚ್ಚರದಿಂದ ಅನುಸರಿಸುವ ಅಕ್ಕರೆಯ ಕುಟುಂಬವೂ ಇತ್ತು. ಒಬ್ಬ ಮನುಶ್ಯನಿಗೆ ಇದಕ್ಕಿಂತ ಬೇರೆ ಇನ್ನೇನು ಬೇಕು? ಬಸವಣ್ಣ ಇಂತಹ ಪ್ರಾಪಂಚಿಕ ಸುಕದಲ್ಲಿ ಬದುಕಿನುದ್ದಕ್ಕೂ ಹಾಯಾಗಿ ಇದ್ದುಬಿಡಬಹುದಾಗಿತ್ತು. ಕಶ್ಟಗಳನ್ನು ಮಯ್ಮೇಲೆ ತಂದುಕೊಳ್ಳುವ ಅಗತ್ಯವಾದರೂ ಅವನಿಗೆ ಎಲ್ಲಿತ್ತು? ಆದರೂ ಆತ ಸಮಾಜದ ಒಳಿತಿಗಾಗಿ ಅಪಾಯಗಳಿಗೆ ಮಯ್ ಒಡ್ಡಿದ. ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ತನ್ನ ಬದುಕನ್ನೇ ಸವೆಸಿದ.
      ಪ್ರಪಂಚದಲ್ಲಿ ಹಲವಾರು ನೀತಿಬೋದಕರೂ ಸಮಾಜ ಸುದಾರಕರೂ ಬಂದು ಹೋಗಿದ್ದಾರೆ. ಮನುಶ್ಯರಲ್ಲಿ ಸಮಾನತೆ ಇರಬೇಕೆಂದು ಉಪದೇಶಿಸಿದ್ದಾರೆ. ಮನುಶ್ಯರು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ಅರುಹಿದ್ದಾರೆ. ಪ್ರಾಣಿಪಕ್ಶಿಗಳಲ್ಲಿ ಮರುಕವಿಡಬೇಕೆಂದು ಕೇಳಿಕೊಂಡಿದ್ದಾರೆ. ಆದರೆ, ಅವರಲ್ಲಿ ಎಶ್ಟು ಮಂದಿ ’ಕಾಯಕದ’ ಹಿರಿಮೆಯ ಬಗ್ಗೆ ನುಡಿದಿದ್ದಾರೆ? ಬಸವಣ್ಣ, ಸಾಮಾಜಿಕ ಸಮಾನತೆ, ವಯ್ಯಕ್ತಿಕ ನಯ್ತಿಕತೆ, ಪ್ರಾಣಿದಯೆ ಮುಂತಾದ ಮುನ್ನಿನ ಕೆಲ ಸುದಾರಕರು ಕೊಟ್ಟ ಹಳೆಯ ಸಂದೇಶವನ್ನೇ ತಾನೂ ಇನ್ನೊಮ್ಮೆ ಕೊಟ್ಟು ಸುಮ್ಮನಾಗಲಿಲ್ಲ. ’ಕಾಯಕವೇ ಕಯ್ಲಾಸ’ ಎಂತಲೂ ಹೇಳಿದ. ತನ್ನ ಬಾಳಿನುದ್ದಕ್ಕೂ ಹೇಳಿದಂತೆಯೇ ನಡೆದುಕೊಂಡ. ಬಸವಣ್ಣನಿಗೆ, ಕಾಯಕವೆಂಬುದೇ ಒಂದು ಮಹಾನ್ ವ್ರತ ಎಂಬ ನನ್ನಿಯ ಅರಿವಿತ್ತು. ’ಮಡಕೆ ಮಾಡುವರೆ ಮಣ್ಣೇ ಮೊದಲು’ ಎಂದು ಆತನ ವಚನವೊಂದು ಹೇಳುತ್ತದೆ. ಅದೇ ಪರಿಯಲ್ಲಿ, ’ಪ್ರಪಂಚ ನಡೆವರೆ ಕಾಯಕವೇ ಮೊದಲು’ ಎಂದು ಯಾರೂ ಹೇಳಬಹುದು. ಮಂದಿ ಕೆಲಸ ಮಾಡಲಿಲ್ಲ ಎಂದರೆ ಪ್ರಪಂಚ ಎಲ್ಲಿರುತ್ತದೆ? ಅಶ್ಟು ಮುಕ್ಯ, ಕೆಲಸ ಮಾಡುವುದು. ಮಾಡುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ, ಅದರಲ್ಲೇ ಕಯ್ವಲ್ಯವನ್ನು ಪಡೆಯಿರಿ ಎನ್ನುವ ಬಸವಣ್ಣ ಸಾರಿದ ಮತದ ಎತ್ತರವನ್ನು ಅದೆಶ್ಟು ಉಳಿದ ಮತಗಳು ತಲುಪಲಾರುವವು?
      ಪ್ರಾಣಿದಯೆಯ ವಿಶಯದಲ್ಲೂ ಅಶ್ಟೆ. ಬಸವಣ್ಣನ ಕಣ್ಣೋಲಿನಲ್ಲಿ ವಸ್ತುನಿಶ್ಟತೆ ಇತ್ತು. ಮಾಂಸಕ್ಕಿಂತ ಮಾಂಸವನ್ನು ಪಡೆದುಕೊಳ್ಳುವುದರ ಹಿಂದಿನ ಹಿಂಸೆಯ ಬಗ್ಗೆ ಅವನಿಗೆ ಹೆಚ್ಚು ಕಾಳಜಿಯಿತ್ತು. ಮೊದಲೇ ಸತ್ತು ಹೊರಗೆಸೆಯಲಾಗಿದ್ದ ಹಸುವಿನ ಬಾಡನ್ನು ತಿನ್ನುವ ಕುಲವಿಲ್ಲದವರಿಗಿಂತ, ಜೀವಂತಿಕೆ ಕುಲುಕಿ ಚಿಮ್ಮುವ ಎಳೆಯ ಪ್ರಾಣಿಗಳನ್ನು ಕೊಂದು, ಬಾಡುಂಡು ತೇಗುವ ಕುಲಜರೇ ಕೀಳು ಎಂಬ ವಸ್ತುನಿಶ್ಟ ಅಬಿಪ್ರಾಯ ಅವನದಾಗಿತ್ತು. ’ಹೊತ್ತು ತಂದು ಕೊಲುವಿರಿ ನೀವು!’ ಎಂದು ಎಳವಾಡಿಗೆ ಆಟಿಸುವ ಸವರ‍್ಣೀಯರನ್ನು ತನ್ನ ಒಂದು ವಚನದಲ್ಲಿ ಅವನು ನೇರವಾಗೇ ಮೂದಲಿಸಿದ್ದಾನೆ.
      ಬಸವಣ್ಣನಿಗೆ ಸತ್ತ ಬಳಿಕ ಸಿಗುವ ಸ್ವರ‍್ಗಕ್ಕಿಂತ ಇಂದಿದ್ದು ಬಾಳುವ ಎಂದಿನ ಪ್ರಪಂಚದ ಏಳಿಗೆಯೇ ಮುಕ್ಯವಾಗಿತ್ತು. ವಿದವೆಯರ ಮರುಮದುವೆಗೆ ತಡೆ ಇರಬಾರದೆಂದ. ಬೆಲೆವೆಣ್ಣುಗಳ ಬಿಡುಗಡೆಗೆ ಮಿಡುಕಿದ. ಜಾತೀಯತೆಯನ್ನಂತೂ ಅತ್ಯಂತ ಕಟುವಾಗಿ ವಿರೋದಿಸಿದ. ಜಾತೀಯತೆಯ ಎದುರು ತಾನು ತಳೆದಿದ್ದ ಕಡುನಿಲುವನ್ನು ಎಂದೂ ಆತ ಸಡಿಲಿಸಲಿಲ್ಲ. ಕಡೆಕಡೆಗೆ ಜಾತೀಯತೆಗೆ ಪತ್ತಿದ ಗಟನೆಯೊಂದರಿಂದ ಅವನ ಪ್ರಾಣಕ್ಕೇ ಕುತ್ತು ಬರುವಂತಾಗಿ, ಆತ ಊರನ್ನೇ ತೊರೆದು ಹೋಗಬೇಕಾಯಿತು.
      ಇಂತಹ ಒಬ್ಬ ದೀರ ದೇವತಾ ಮನುಶ್ಯನನ್ನು ನಮ್ಮ ನಾಡಿನ ಲಾಂಚನವನ್ನಾಗಿ ನಾವು ಇನ್ನೂ ಮಾಡಿಕೊಂಡಿಲ್ಲ ಎನ್ನುವುದನ್ನು ನೆನೆದರೇ ಆಶ್ಚರ‍್ಯವಾಗುತ್ತದೆ. ಇದಕ್ಕೆ ಕಾರಣ ಏನಿರಬಹುದು? ಜಾತೀಯತೆಯ ಕೋತಿಹಿಡಿಯಲ್ಲಿ ಸಿಲುಕಿರುವ ನಮ್ಮ ಸಮಾಜ ಬಸವಣ್ಣನನ್ನು ವೀರಶಯ್ವ ಮತದೊಂದಿಗೆ ತಳಿಕೆ ಹಾಕಿರುವುದೇ ಕಾರಣವಿರಬಹುದೆ? ’ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಿಕೊಂಡರೆ ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ’ - ಇದು ಈ ಮೊದಲು ತಿಳಿಸಿದಂತೆ ರಾ.ನ.ಚಂದ್ರಶೇಕರರ ಅಬಿಪ್ರಾಯ. ನನಗನ್ನಿಸುತ್ತದೆ, ಇಂದಿನ ಜಾತಿಮರುಳಿನ ನೆಲೆಯಲ್ಲಿ ಯಾರಾದರೂ ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಹೊರಟರೆ, ಒಮ್ಮತದ ಮಾತು ಬಿಡಿ, ಕನ್ನಡಿಗರಲ್ಲಿ ಒಂದು ಮಿನಿ ಕಾಳಗವೇ ನಡೆದರೂ ನಡೆಯಬಹುದು. ಎಂತಹ ನಾಚಿಕೆಗೇಡು ಇದು!
      ಎಂದಾದರೊಂದು ದಿನ ನಮ್ಮಲ್ಲಿಯ ಜಾತೀಯತೆಯ ಸಣ್ಣತನ ತೊಲಗಿ, ನಮ್ಮ ದ್ರಾವಿಡ ನೆಲದಲ್ಲಿ ಹುಟ್ಟಿ, ನಮ್ಮ ಮೆಚ್ಚಿನ ದ್ರಾವಿಡ ನುಡಿಯಾದ ಕನ್ನಡದಲ್ಲೇ ಇಡೀ ವಿಶ್ವವೇ ಒಪ್ಪುವಂತಹ ಮತವನ್ನು ಸಾರಿ ಸಂದ ಬಸವಣ್ಣ, ನಮ್ಮೆಲ್ಲರ ನಾಯಕನಾಗಿ, ನಮ್ಮ ನಾಡಕುರುಹಾಗಿ ಮೆರೆಯುತ್ತಾನೆ ಎಂದು ಸದ್ಯಕ್ಕೆ ಹಾರಯ್ಸೋಣ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

1 ಕಾಮೆಂಟ್‌:

ನಿರಂಜನ್ ಹೇಳಿದರು...

Nice article,,, whatever u hav told here is cent percent true.... we simply admire , appreciate and chant basavanna's principles but badly failed to follow tos. Its really unfortunate... We need to follow atlest few of his words if cant all .....