ಗುರುವಾರ, ಅಕ್ಟೋಬರ್ 10, 2013

’ಎನ್ನಡ ಎಕ್ಕಡ’ vs ’ಕ್ಯಾ ಹಯ್ ಕಹಾ ಹಯ್’

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಚೆನ್ನಯಿಯಲ್ಲಿ ನಮ್ಮ ದೇಶದ ಚಿತ್ರೋದ್ಯಮ ನೂರು ವರ‍್ಶಗಳನ್ನು ಪೂರಯ್ಸಿದ ಸಂತಸಕ್ಕಾಗಿ ತಮಿಳುನಾಡಿನ ಸರ‍್ಕಾರದ ವತಿಯಿಂದ ಸಡಗರದ ಹಬ್ಬವೊಂದನ್ನು ನಡೆಸಲಾಯಿತು. ಹಬ್ಬದಲ್ಲಿ ತೆಂಕಣ ಬಾರತದ ಎಲ್ಲಾ ಬಾಶೆಗಳ ಚಿತ್ರಕರ‍್ಮಿಗಳು ಪಾಲ್ಗೊಂಡಿದ್ದರು. ಹಬ್ಬವೇನೋ ಸಂಬ್ರಮದಿಂದ ನಡೆದು ಮುಕ್ತಾಯವಾಯಿತು. ಆದರೆ, ಅದು ಮುಗಿದ ಮಾರನೇ ದಿನದಿಂದಲೇ ಶುರುವಾಯಿತು ನೋಡಿ ನಮ್ಮ ಕನ್ನಡ ಟೀವೀ ಕಾಲುವೆಗಳಲ್ಲಿ ಒಂದು ಜೋರು ಬೊಬ್ಬೆ! ಅದೇನೆಂದರೆ, ಉತ್ಸವದಲ್ಲಿ ಕನ್ನಡದ ನಟನಟಿಯರಿಗೆ ಆಯೋಜಕರಾದ ತಮಿಳರಿಂದ ಅವಮಾನವಾಯಿತು ಎಂದು. ’ಹಿರಿಯ ನಟಿಯರಾದ ಲೀಲಾವತಿ, ಬಾರತಿ, ಜಯಂತಿ ಮುಂತಾದವರಿಗೆ ಸರಿಯಾದ ವಾಹನ ಸವುಕರ‍್ಯವನ್ನು ಏರ‍್ಪಡಿಸದೆ ಅವರನ್ನು ಬಿಸಿಲಲ್ಲಿ ನಡೆಯುವಂತೆ ಮಾಡಿದರು. ಕನ್ನಡಿಗ ಅತಿತಿಗಳನ್ನು ಆಯೋಜಕರು ಯಾರೋ ಕಡಲೇಕಾಯಿ ಮಾರುವವರನ್ನು ಕರೆಯುವರಂತೆ ಕಯ್ ಸನ್ನೆ ಮಾಡಿ ಕರೆಯುತ್ತಿದ್ದರು. ನಟಿ ಜಯಮಾಲಾರನ್ನು ಸಬೆಯಲ್ಲಿ ಮೊದಲು ಮುಂದಿನ ಸಾಲಿನಲ್ಲಿ ಕೂರಿಸಿ, ಬಳಿಕ ಹಿಂದಿನ ಸಾಲಿಗೆ ಏಕಾಏಕಿ ಕಳಿಸಿದರು’ -  ಹೀಗೆ ಕೆಲವು ಆಪಾದನೆಗಳು ಕೇಳಿಬಂದವು. ಮೊದಮೊದಲು ಆಪಾದನೆಗಳನ್ನು ಅಲ್ಲಗಳೆಯುವ ಹೇಳಿಕೆಗಳು ಯಾರಿಂದಲೂ ಬರಲಿಲ್ಲ. ಆದರೆ, ಒಂದೆರಡು ದಿನಗಳ ಬಳಿಕ, ಸಾ. ರಾ. ಗೋವಿಂದು ಮತ್ತು ಎಸ್. ನಾರಾಯಣ್ ಅವರು ಆಪಾದನೆಗಳ ಸತ್ಯತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ನಟ ಶ್ರೀನಾತರು, ’ನನಗೆ ಅವಮಾನ ಆಯಿತು ಅಂತ ಹೇಳಿಕೊಂಡಿದ್ದೇನೆ ಅಂತ ಊಹಾಪೋಹ ಎದ್ದಿದೆ. ಆದರೆ, ನಾನು ಹಾಗೆ ಹೇಳಿಕೊಂಡೇ ಇಲ್ಲ’, ಎಂದು ಅವರೇ ಸ್ವತಹ ಕಾರ‍್ಯಕ್ರಮವೊಂದಕ್ಕೆ ಕರೆ ಮಾಡಿ ತಿಳಿಸಿದರು. ಒಟ್ಟಿನಲ್ಲಿ, ಈ ಚರ‍್ಚೆಗಳ ಅಬ್ಬರ ಮುಗಿಯುವಶ್ಟರಲ್ಲಿ, ಚೆನ್ನಯಿಯಲ್ಲಿ ನಮ್ಮ ಮಂದಿಗೆ ನಿಜವಾಗಿಯೂ ಅವಮಾನ ಆಯಿತೋ ಇಲ್ಲ ನಮ್ಮವರು ಅವಮಾನ ಆಯಿತು ಎಂದು ಕಲ್ಪನೆ ಮಾಡಿಕೊಂಡರೋ ಎಂದು ಎಲ್ಲರೂ ಅನುಮಾನ ಪಡುವಂತಾಯಿತು.
      ನನಗೆ ಅನಿಸುವುದು ಇದು - ಬಹುಶಹ ನಮ್ಮವರಲ್ಲಿ ಕೆಲವರಿಗೆ ಸಣ್ಣಪುಟ್ಟ ಅವಮಾನಗಳು ಆಗಿವೆ. ಏಕೆಂದರೆ, ನಾವು ಸುಮ್ಮ ಸುಮ್ಮನೆ ಸುಳ್ಳು ಹೇಳುವವರಲ್ಲ. ಒಂದುವೇಳೆ ಆಯೋಜಕರು ಬೇಕೆಂತಲೇ ಈ ಅವಮಾನಗಳನ್ನು ಎಸಗಿದ್ದರೆ ಅವರ ನಡತೆ ನಿಜಕ್ಕೂ ಕಂಡನೀಯ. ನಿಜವಾಗಿಯೂ ಅವಮಾನವಾಗಿದ್ದರೆ, ಅದರ ಬಗ್ಗೆ ದೂರುವುದರಲ್ಲಿ ತಪ್ಪಿಲ್ಲ.
      ಚೆನ್ನಯಿಯಲ್ಲಿ ನಿಜವಾಗಿಯೂ ಏನು ನಡೆಯಿತೋ, ಅದು ಒತ್ತಟ್ಟಿಗೆ ಇರಲಿ. ಈ ಸಂದರ‍್ಬದಲ್ಲಿ ನಾವು ನಿಜಕ್ಕೂ ಯೋಚನೆ ಮಾಡಬೇಕಾಗಿರುವುದು ನಮ್ಮದೇ ಸ್ವಬಾವದ ಬಗ್ಗೆ. ’ನೆರೆಯವರಿಂದ ನಮಗೆ ಅವಮಾನವಾಯಿತು’ ಎಂದು ನಾವು ದೂರುತ್ತಿರುವುದು ಇದೇ ಮೊದಲಲ್ಲ. ಅಗಾಗ್ಗೆ ನಾವು ಈ ಬಗೆಯ ದೂರುಗಳನ್ನು ಮಾಡುತ್ತಲೇ ಇರುತ್ತೇವೆ. ನನಗೆ ಈ ವಿಶಯದಲ್ಲಿ ಸೋಜಿಗ ಎನಿಸುವುದು ಇದು - ಬರೀ ನೆರೆಯವರಶ್ಟೇ ನಮಗೆ ಅವಮಾನ ಮಾಡುವುದಿಲ್ಲ. ನಮ್ಮ ನಡುವೆ ಬದುಕುತ್ತಿರುವ ಹೆಚ್ಚುಕಡಿಮೆ ಎಲ್ಲಾ ಬಾಶಿಕರೂ ನಮಗೆ ದಿನನಿತ್ಯ ಅವಮಾನ ಮಾಡುತ್ತಲೇ ಇರುತ್ತಾರೆ. ಆದರೆ, ನಾವು ಸಾಮಾನ್ಯವಾಗಿ ನೆರೆಯವರನ್ನು ದೂರುತ್ತೇವೆಯೇ ಹೊರತು ಉಳಿದವರನ್ನು ದೂರುವುದಿಲ್ಲ. ಉದಾಹರಣೆಗೆ, ನಮ್ಮ ನೆಲದಲ್ಲಿ ಜಾಂಡಾ ಊರಿರುವ ಹಿಂದೀವಾಲಾಗಳನ್ನು ತೆಗೆದುಕೊಳ್ಳಿ. ಅವರಲ್ಲಿ ಎಶ್ಟು ಮಂದಿ ಕನ್ನಡ ಮಾತಾಡುತ್ತಾರೆ? ಮನೆ ಕೆಲಸದವರು, ತರಕಾರಿ ಗಾಡಿಯವರು, ಬಸ್ ಕಂಡಕ್ಟರರು, ಅಂಗಡಿಯವರು, ನೆರೆಹೊರೆಯವರು, ಬೀದಿಯ ಸಾರ‍್ವಜನಿಕರು, ಸಹೋದ್ಯೋಗಿಗಳು - ಈ ಎಲ್ಲರ ಬಾಯಲ್ಲೂ ಮುಲಾಜೇ ಇಲ್ಲದೆ ಹಿಂದೀ ಹೊರಡಿಸುತ್ತಾರೆ ನಮ್ಮ ಹಿಂದೀವಾಲರು! ನಮ್ಮ ನೆಲದಲ್ಲಿ ನೆಲೆ ನಿಂತ ಹಿಂದೀವಾಲರು ನಮ್ಮ ನುಡಿಯನ್ನು ಕಲಿತು ಆಡಬೇಕು. ಹಾಗೆ ನಡೆದುಕೊಳ್ಳದೆ, ಅವರ ಹಿಂದಿಯಲ್ಲೇ ನಮ್ಮನ್ನೂ ಮಾತಾಡುವಂತೆ ಮಾಡುವುದು ನಮಗೆ ಎಸಗುವ ಅವಮಾನ ತಾನೆ? ಆದರೆ, ನಾವು ಅದನ್ನು ಅವಮಾನ ಎಂದುಕೊಳ್ಳುವುದಿಲ್ಲ! ಉತ್ತರ ಬಾರತದ ಅನೇಕ ಪುಡಾರಿಗಳು ನಮ್ಮಲ್ಲಿಗೆ ಬಂದು ಹಿಂದಿಯಲ್ಲಿ ಬಾಶಣ ಜಡಿದು ಹೋಗುತ್ತಾರೆ. ಅದೂ ಅವಮಾನವೇ. ಆದರೆ, ಅದನ್ನೂ ನಾವು ಅವಮಾನ ಎಂದು ತೆಗೆದುಕೊಳ್ಳುವುದಿಲ್ಲ! ಅದೇ ನಮ್ಮ ನೆರೆಯ ತಮಿಳರೋ ತೆಲುಗರೋ ಎಡವೆಟ್ಟು ಮಾಡಿದರೆ, ’ಅಯ್ಯೋ ನಮಗೆ ಅವಮಾನ ಆಯ್ತು’ ಎಂದು ಬೊಬ್ಬೆ ಇಡುತ್ತೇವೆ!  ಈ ವಿಚಿತ್ರಕ್ಕೆ ಏನು ಹೇಳುವುದು, ಸ್ವಾಮೀ?
      ’ನಮಗೆ ಎನ್ನಡಾ ಎಕ್ಕಡಾ ಅನ್ನೋರು ಬೇಡ’ - ಈ ಸಾಲನ್ನು ಕನ್ನಡ ಚಿತ್ರಗಳಲ್ಲಿ ಪಾತ್ರದಾರಿಗಳು ನುಡಿಯುವುದನ್ನು ನಾನು ನೋಡಿದ್ದೇನೆ. ಇದರ ಅರ‍್ತ, ’ನಮಗೆ ತಮಿಳರೂ ತೆಲುಗರೂ ಬೇಡ’ ಎಂದು. ಆದರೆ, ’ನಮಗೆ ಕ್ಯಾ ಹಯ್, ಕಹಾ ಹಯ್ ಅನ್ನೋರು ಬೇಡ’ ಎನ್ನುವ ಸಿನಿಮಾ ಡಯಲಾಗನ್ನು ನಾನು ಇದುವರೆಗೆ ಕೇಳೇ ಇಲ್ಲ. ಹೇಗಿದೆ ನೋಡಿ ಈ ತಮಾಶೆ! ನಮಗೆ ನಮ್ಮಂತೆ ದ್ರಾವಿಡರೇ ಆದ ತಮಿಳರು ತೆಲುಗರು ಬೇಡ. ಆದರೆ, ನಮ್ಮನ್ನೆಲ್ಲಾ ಒಟ್ಟಿಗೆ ಸೇರಿಸಿ, ’ಮದ್ರಾಸಿ’ ಎಂದು ಹೀಯಾಳಿಸುವ ಹಿಂದೀವಾಲರು ಮಾತ್ರ ಬೇಡ ಎನಿಸುವುದಿಲ್ಲ!
      ಇಂತಹ ಪರಿಸ್ತಿತಿಗೆ ನಮ್ಮಲ್ಲಿ ದ್ರಾವಿಡತನ ಇಲ್ಲದಿರುವುದೇ ಕಾರಣ. ಕಾವೇರಿ ಹೊಳೆ, ಕರುನಾಡು ಮತ್ತು ತಮಿಳುನಾಡು - ಈ ಎರಡೂ ರಾಜ್ಯಗಳಲ್ಲಿ ಹರಿಯುವುದರಿಂದ, ನಮಗೂ ತಮಿಳರಿಗೂ ಜಗಳ ತಪ್ಪಿದ್ದಲ್ಲ. ಕಾವೇರಿಯ ನೀರು ಇಬ್ಬರಿಗೂ ಸಾಕಾಗುವುದಿಲ್ಲ. ಈ ಕೊರತೆಯನ್ನೇ ಎರಡೂ ಕಡೆಗಳಲ್ಲಿ ಬಂಡವಾಳವಾಗಿ ಬಳಸಿಕೊಂಡು ಇಬ್ಬರ ಮದ್ಯೆ ವಯ್ಮನಸ್ಯ ತಂದಿಕ್ಕುವ ಪುಡಾರಿಗಳಿಗೇನು ಕೊರತೆಯೇ? ಈ ಕಾರಣಕ್ಕಾಗಿ ನಮ್ಮ ಹಾಗೂ ತಮಿಳರ ನಡುವೆ ಸವ್‍ಹಾರ‍್ದ ಮೂಡುವುದು ಕೊಂಚ ಕಶ್ಟ. ಪದೇ ಪದೇ ಮಳೆಯ ಪ್ರಮಾಣದಲ್ಲಿ ಕೊರತೆಯಾದರೆ, ಕ್ರಿಶ್ಣಾ ನದಿಯ ಸಲುವಾಗಿ ನಮಗೂ ತೆಲುಗರಿಗೂ ಕೂಡ ಮನಸ್ತಾಪ ಉಂಟಾಗಬಹುದು. ಈ ರೀತಿ ಆಗುವುದು ನಮಗಶ್ಟೇ ಅಲ್ಲ, ಇಡೀ ತೆಂಕಣ ಬಾರತಕ್ಕೇ ಕೆಟ್ಟದ್ದು. ಜನಸಂಕ್ಯೆ ತಗ್ಗಿ ಹಿಡಿತಕ್ಕೆ ಬರುವವರೆಗೂ ಈ ಸಮಸ್ಯೆಗಳಿಗೆ ಬಗೆಹರಿವಿಲ್ಲ. ಆದರೆ, ಸಮಸ್ಯೆಗಳ ತೀಕ್ಶ್ಣತೆಯನ್ನು ದ್ರಾವಿಡತನದ ಅರಿವನ್ನು ಬೆಳೆಸಿಕೊಳುವುದರ ಮೂಲಕ ಕೊಂಚ ಕಡಿಮೆ ಮಾಡಬಹುದು. ’ದಕ್ಶಿಣದವರಾದ ನಾವೆಲ್ಲರೂ ದ್ರಾವಿಡ ಹಿನ್ನೆಲೆಯವರು’ ಎಂಬ ಅರಿವನ್ನು ಮೂಡಿಸಿಕೊಂಡರೆ, ಕಡೇ ಪಕ್ಶ, ಸಣ್ಣಪುಟ್ಟ ಕಾರಣಗಳಿಂದಾಗಿ ನಮ್ಮ ನಮ್ಮಲ್ಲಿ ಮನಸ್ತಾಪ ಉಂಟಾಗುವುದಾದರೂ ನಿಲ್ಲುತ್ತದೆ. ದ್ರಾವಿಡತನದ ಬಿಗಿಯಾದ ಅಡಿಗಲ್ಲನ್ನು ಹಾಕಿಕೊಂಡರೆ, ಎಲ್ಲರ ಮೇಲೆ ಹಿಂದೀ ಹೇರುವ ಉತ್ತರದವರ ಕೆಟ್ಟ ಚಾಳಿಗೂ ನಾವು ತಕ್ಕ ಎದುರನ್ನು ಒಡ್ಡುತ್ತೇವೆ. ಹಾಗಾಗಿ, ಹೇಗೆ ನೋಡಿದರೂ, ದಕ್ಶಿಣದವರಾದ ನಾವು ದ್ರಾವಿಡತನವನ್ನು ಮಯ್ಗೂಡಿಸಿಕೊಂಡರೇ ಒಳ್ಳೆಯದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: