ಶುಕ್ರವಾರ, ಅಕ್ಟೋಬರ್ 25, 2013

ಮಯ್ಬಣ್ಣ ಮತ್ತು ಕೀಳರಿಮೆ

ಕೆಲ ವಾರಗಳ ಹಿಂದೆ NDTV ಕಾಲುವೆಯಲ್ಲಿ ಬರ‍್ಕಾ ದತ್ ಎಂಬವರು ಚರ‍್ಚೆಯ ಕಾರ‍್ಯಕ್ರಮವೊಂದನ್ನು ನಡೆಸಿಕೊಟ್ಟರು. ಮಯ್ಬಣ್ಣವನ್ನು ಬಿಳುಪುಗೊಳಿಸುವ ಕ್ರೀಮುಗಳನ್ನು ಮಾರಾಟ ಮಾಡಲು ಬಳಸಲಾಗುತ್ತಿರುವ ಜಾಹೀರಾತುಗಳ ಬಗ್ಗೆ ಆ ಕಾರ‍್ಯಕ್ರಮದಲ್ಲಿ ಒಂದು ಚರ‍್ಚೆ ನಡೆಯಿತು. ಕಪ್ಪುಚೆಲುವಿನ ನಟಿ ನಂದಿತಾ ದಾಸ್, ಜಾಹೀರಾತುಗಳನ್ನು ತಯಾರಿಸುವ ರಂಗಕರ‍್ಮಿ ಪದಮ್‍ಸೀ ಮುಂತಾದವರು ಚರ‍್ಚೆಯಲ್ಲಿ ಪಾಲ್ಗೊಂಡಿದ್ದರು. ’ಕಪ್ಪು ಮಯ್ಬಣ್ಣದ ಎಳೆಯರಿಗೆ ತಮ್ಮ ಕಪ್ಪು ಬಣ್ಣದಿಂದಾಗಿ ಆತ್ಮವಿಶ್ವಾಸ ಕಡಿಮೆ. ಹಾಗಾಗಿ ಸಮಾಜದಲ್ಲಿ ಅವರು ಮುನ್ನಡೆ ಸಾದಿಸುವುದು ಕಶ್ಟ’ - ಹೀಗೆಂದು ಬಿಳುಪಿಸುವ ಕ್ರೀಮುಗಳ ಜಾಹೀರಾತುಗಳಲ್ಲಿ ಕಪ್ಪು ಬಣ್ಣದ ತರುಣರನ್ನು ಕೀಳಾಗಿ ಬಿಂಬಿಸಲಾಗುತ್ತಿದೆ. ಹೀಗೆ ಬಿಂಬಿಸುವುದು ತಪ್ಪು. ಇಂತಹ ಜಾಹೀರಾತುಗಳನ್ನು ತಯಾರಿಸಕೂಡದು, ಎಂಬುದು ನಂದಿತಾ ದಾಸ್ ಮತ್ತು ಅವರ ಪರ ಮಾತಾಡಿದವರ ವಾದವಾಗಿತ್ತು. ಕಪ್ಪು ಬಣ್ಣದವರಿಗೆ ಕೀಳರಿಮೆ ಇರುವುದು ಸಾಮಾಜಿಕ ಸತ್ಯ. ಇದ್ದುದನ್ನು ಇದ್ದ ಹಾಗೆ ಹೇಳಿದರೆ ತಪ್ಪೇನು? ಎಂಬುದು ಜಾಹೀರಾತುಗಳ ಪರದವರ ಪ್ರತಿವಾದವಾಗಿತ್ತು.
      ಅರ‍್ದ ಗಂಟೆಯ ಆ ಕಾರ‍್ಯಕ್ರಮದುದ್ದಕ್ಕೂ ಕಪ್ಪು ಬಣ್ಣದ ಬಗೆಗಿನ ಹಲವಾರು ಅಂಶಗಳ ಪ್ರಸ್ತಾಪವೇನೋ ಆಯಿತು. ಆದರೆ, ಕಪ್ಪು ಬಣ್ಣಕ್ಕೆ ಹಾಗೂ ಅದರ ಕೀಳುಗಾಣ್ಮೆಗೆ ಮೂಲ ಕಾರಣ ಏನು ಎಂಬುದರ ಬಗ್ಗೆ ಮಾತ್ರ ಹೆಚ್ಚು ಮಾತು ಹೊರಬರಲಿಲ್ಲ. ಒಬ್ಬ ಅತಿತಿಗಳು ಮಾತ್ರ ಕಪ್ಪು ಬಣ್ಣವನ್ನು ಕೀಳಾಗಿ ಕಾಣುವುದಕ್ಕೆ ಮೂಲ ಕಾರಣವನ್ನು ಪರೋಕ್ಶವಾಗಿ ಸೂಚಿಸಿದರು. ಆದರೆ, ಆ ಎಳೆಯನ್ನು ಉಳಿದವರು ಕಯ್ಗೆತ್ತಿಕೊಳ್ಳಲಿಲ್ಲ. ಹಾಗಾಗಿ ಆ ಎಳೆ ಅಲ್ಲಿಗೇ ನಿಂತು ಹೋಯಿತು. ನನ್ನ ಪ್ರಕಾರ, ಯಾವುದೇ ಸಮಸ್ಯೆಯಾಗಲಿ, ಆ ಸಮಸ್ಯೆಗೆ ಮೂಲ ಕಾರಣ ಏನೆಂದು ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳುವುದು ಸಮಸ್ಯೆಯ ಬಗೆಹರಿವಿಗೆ ಸಾಕಶ್ಟು ನೆರವಾಗುತ್ತದೆ.
      ಬಿಳುಪಿಸುವ ಉತ್ಪನ್ನಗಳ ಜಾಹೀರಾತುಗಳು ಸಮಾಜದಲ್ಲಿ ವಾಸ್ತವವಾಗಿ ನಡೆಯುತ್ತಿರುವುದನ್ನೇ ಬಿಂಬಿಸುತ್ತಿವೆ. ನಮ್ಮ ಸಮಾಜದಲ್ಲಿ ಕಪ್ಪು ಬಣ್ಣದವರು ಉಳಿದವರಿಗಿಂತ ಕೊಂಚ ಹೆಚ್ಚು ಅಡೆತಡೆಗಳನ್ನು ಎದುರಿಸುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಶಯ. ಹೆಸರಾಂತ ನಟರಾದ ದುನಿಯಾ ವಿಜಯ್, ಮುರಳಿ ಮುಂತಾದವರೇ ಮೊದಮೊದಲು ಕಪ್ಪು ಬಣ್ಣದ ಕೀಳುಗಾಣ್ಮೆಯಿಂದಾಗಿ ತಮಗಾದ ತೊಂದರೆಗಳ ಬಗ್ಗೆ ಆಗಾಗ್ಗೆ ಹೇಳಿಕೊಂಡಿದ್ದಾರೆ. ಮದುವೆಗಾಗಿ ಗಂಡು ಹೆಣ್ಣುಗಳನ್ನು ಹೊಂದಿಸುವ ’ಮೇಟ್ರಿಮೋನಿಯಲ್’ ಕಾಲಮ್ಮುಗಳಲ್ಲಿನ ಬೇಡಿಕೆಗಳನ್ನು ನೋಡಿದರೆ, ಕಪ್ಪು ಬಣ್ಣ ಯಾರಿಗೂ ಬೇಡ ಎನ್ನುವುದಕ್ಕೆ ಪುರಾವೆ ಕೂಡಲೇ ದೊರೆಯುತ್ತದೆ. ವಾಸ್ತವ ಹೀಗಿರುವಾಗ ಕಪ್ಪು ಬಣ್ಣದ ಮಂದಿಯಲ್ಲಿ ಕೀಳರಿಮೆ ಹೇಗೆ ಮೂಡದೇ ಇದ್ದೀತು? ಈಗ ಕೇಳ್ವಿ ಇದು - ಈ ಕೀಳರಿಮೆಗೆ ಪರಿಹಾರ ಏನು?
      ಬಿಳಿಗೆಯ್ವ ಉತ್ಪನ್ನಗಳ ಬಳಕೆಯಿಂದ ಕೀಳರಿಮೆ ಕೊಂಚ ತಗ್ಗಬಹುದು. ಆದರೆ, ಕೊಂಚ ಮಾತ್ರ. ಅದೂ ಅಲ್ಲದೆ, ಒಂದೇ ಸವನೆ ಅವನ್ನು ಬಳಸುವುದರಿಂದ ಆರೋಗ್ಯ ಕೆಡಬಹುದು. ಒಳ್ಳೆಯ ಶಿಕ್ಶಣ ಹಾಗೂ ದುಡಿಯುವ ಆರ‍್ಪನ್ನು ಪಡೆದುಕೊಳ್ಳುವುದು ಇನ್ನೊಂದು ಪರಿಹಾರ. ಏಕೆಂದರೆ, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ಸಾಮರ‍್ತ್ಯ, ಯಾರಿಗೇ ಆಗಲಿ, ಒಟ್ಟಾರೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇನ್ನೂ ಒಂದು ಪರಿಹಾರ ಇದೆ. ಆದರೆ, ಅದರ ಬಳಕೆ ನಮ್ಮ ದೇಶದಲ್ಲಿ ಆಗುತ್ತಿಲ್ಲ. ಏಕೆಂದರೆ, ಅದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದು ತಿಳಿಯದಂತೆ ಮಾಡುವ ಪ್ರಯತ್ನ ಕೆಲವರಿಂದ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಿನ ದಿನಗಳಲ್ಲಿ ಈ ಕೆಲವರಿಗೆ ರಾಜಕೀಯ ಬೆಂಬಲವೂ ದೊರಕುತ್ತಿದೆ. ಅದೇನೇ ಇರಲಿ, ಆ ಇನ್ನೊಂದು ಪರಿಹಾರ ಏನೆಂದರೆ, ಕೆಲವರಿಗೆ ಕಪ್ಪು ಕೆಲವರಿಗೆ ಬಿಳುಪು ಬಣ್ಣ ಇರುವುದಕ್ಕೆ ವಾಸ್ತವ ಕಾರಣ ಏನು ಎಂಬುದರ ಅರಿವು. ಈ ಅರಿವು ಅಮೆರಿಕದ ಕಪ್ಪು ಸಮುದಾಯಕ್ಕೆ ತಿಳಿದಿದೆ. ನಮ್ಮಲ್ಲಿ ಬಹುತೇಕ ಮಂದಿಗೆ ಈ ಅರಿವಿಲ್ಲ. ಈ ಅರಿವಿರುವುದರಿಂದ ಹಾಗೂ ತಮ್ಮ ಚರಿತ್ರೆಯ ಅರಿವೂ ಇರುವುದರಿಂದ ಅಮೆರಿಕದ ಬಹುತೇಕ ಕಪ್ಪು ಜನಾಂಗೀಯರು ಸಾಮಾಜಿಕ ಹಾಗೂ ರಾಜಕೀಯ ವಿಶಯಗಳಲ್ಲಿ ಒಗ್ಗಟ್ಟಿನಿಂದ ನಡೆದುಕೊಳ್ಳುತ್ತಾರೆ. ಅವರಲ್ಲಿ ಕೂಡ ನಮ್ಮಲ್ಲಿರುವಂತೆಯೆ ಕಪ್ಪು ಬಣ್ಣದ ಕೀಳರಿಮೆ ಇದೆ. ಆದರೆ, ಅರಿವು ಮತ್ತು ಅರಿವಿನಿಂದಾದ ಒಗ್ಗಟ್ಟು, ಅವರಲ್ಲಿ ಕೀಳರಿಮೆಯನ್ನು ಸಾಕಶ್ಟು ಮಟ್ಟಿಗೆ ತಗ್ಗಿಸಿದೆ. ಹಾಗೆ ನೋಡಿದರೆ, ಅವರು ಅಲ್ಲಿ ಅಲ್ಪಸಂಕ್ಯಾತರು. ನಮ್ಮ ನಾಡಿನಲ್ಲಿ ಕಪ್ಪು ಬಣ್ಣದವರೇ ಹೆಚ್ಚು. ಆದ್ದರಿಂದ, ನಮ್ಮ ಕಪ್ಪು ಬಣ್ಣಕ್ಕೆ ಸರಿಯಾದ ಕಾರಣವನ್ನು ತಿಳಿದುಕೊಳ್ಳುವುದರಿಂದ ಅದರ ಬಗೆಗಿನ ಕೀಳರಿಮೆಯನ್ನು ಇನ್ನೂ ಹೆಚ್ಚಿನ ಮಟ್ಟಿಗೆ ನಾವು ಕಡಿಮೆಗೊಳಿಸಬಹುದು. ಹಾಗಾದರೆ, ಯಾವುದು ಈ ಸರಿಯಾದ ತಿಳಿವಳಿಕೆ?
      ಹಿಂದಣ ಜನ್ಮದ ಕರ‍್ಮ, ಯಾವುದೋ ಶಾಪದ ಪಲ, ದುರದ್ರುಶ್ಟ, ದೇವರ ಇಚ್ಚೆ - ಹೀಗೇ ಮುಂತಾದುವು ನಮ್ಮ ಮಂದಿ, ’ಮಯ್ಬಣ್ಣ ಏಕೆ ಕಪ್ಪಾಗಿರುತ್ತದೆ?’ ಎನ್ನುವುದಕ್ಕೆ ಕೊಡುವ ಉತ್ತರಗಳು! ಬಸುರಿ ಹೆಣ್ಣುಮಗಳು ಕೇಸರಿ ಬೆರೆಸಿದ ಹಾಲನ್ನು ನಾಳುನಾಳೂ ಕುಡಿಯುತ್ತಿದ್ದರೆ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂಬ ನಂಬಿಕೆಯೂ ಇದೆಯಂತೆ! ಹೀಗೆಂದು ಶ್ರೀಮತಿ ಸಿ.ಜಿ.ಮಂಜುಳಾ ಅವರು ಪ್ರಜಾವಾಣಿಯ (ಸೆಪ್ಟಂಬರ್ ೨೪, ೨೦೧೩) ಅವರ ’ಕಡೆಗೋಲು’ ಅಂಕಣದಲ್ಲಿ ಬರೆದಿದ್ದಾರೆ. ಇಂತಹ ಅರಿವಿಲಿ ನಂಬಿಕೆಗಳಿದ್ದರೆ ಕಪ್ಪು ಬಣ್ಣದವರಿಗೆ ಕೀಳರಿಮೆ ಬರದೇ ಇನ್ನೇನು? ವಾಸ್ತವವಾಗಿ, ನಮ್ಮ ದೇಶದಲ್ಲಿ ಕಪ್ಪು ಮತ್ತು ಬಿಳಿ ಮಯ್ಬಣ್ಣಗಳು ಕಂಡುಬರುವುದಕ್ಕೆ ಕಾರಣ ಕಪ್ಪು ಮತ್ತು ಬಿಳಿಯ ಬೇರೆಬೇರೆ ಬುಡಕಟ್ಟುಗಳು ನೆಲೆಸಿರುವುದರಿಂದ. ಕಪ್ಪು ಚಾಯೆಗೆ ಕಾರಣ ನೆಗ್ರಿಟೋ, ಮುಂಡ ಮತ್ತು ದ್ರಾವಿಡ ಜನಾಂಗಗಳು. ಬಿಳಿ ಚಾಯೆಗೆ ಕಾರಣ ಆರ‍್ಯ ಮತ್ತು ಮಂಗೋಲ ಬುಡಕಟ್ಟುಗಳು. ವಿದ್ವಾಂಸರು ನಡೆಸಿದ ಸಂಶೋದನೆಯಿಂದ ತಿಳಿದು ಬಂದ ಈ ಅರಿವನ್ನು ಇತ್ತೀಚಿನ DNA ಅದ್ಯಯನಗಳೂ ಎತ್ತಿ ಹಿಡಿದಿವೆ.
      ಇನ್ನು ಕನ್ನಡಿಗರೂ ಸೇರಿದಂತೆ ತೆಂಕಣ ಬಾರತೀಯರ ಬಗ್ಗೆ ಹೇಳುವುದಾದರೆ, ನಮ್ಮಲ್ಲಿನ ಮಯ್ಬಣ್ಣ ವಯ್ವಿದ್ಯಕ್ಕೆ ಹೆಚ್ಚಾಗಿ ದ್ರಾವಿಡ ಮತ್ತು ಆರ‍್ಯ ಬುಡಕಟ್ಟುಗಳ ಬೆರಕೆಯೇ ಕಾರಣ. ಇದಕ್ಕೆ ಹೇರಳವಾದ ವಯ್‍ಜ್ನಾನಿಕ ಆದಾರವನ್ನು ನಮ್ಮ ಬಳಗದ ಕಯ್ಪಿಡಿ - ಕನ್ನಡಿಗರೂ ದ್ರಾವಿಡರೆ - ಓದುಗೆಯಲ್ಲಿ ಒದಗಿಸಲಾಗಿದೆ. ಇದು ನಮ್ಮ ಮಯ್ಬಣ್ಣದ ಸತ್ಯ. ತೆಂಕಣದವರಲ್ಲಿ, ಕನ್ನಡಿಗರೂ ಸೇರಿದಂತೆ, ದ್ರಾವಿಡ ಲಕ್ಶಣದ ಕಪ್ಪು ಬಣ್ಣದವರೇ ಹೆಚ್ಚು (ಇದೇ ಕಾರಣಕ್ಕಾಗೇ ತೆಂಕಣದವರು ಆಡುವ ನುಡಿಗಳು ದ್ರಾವಿಡ ನುಡಿಗಳಾಗಿರುವುದು). ಆದರೆ, ಅವರಲ್ಲಿ ಹೆಚ್ಚು ಮಂದಿಗೆ ಈ ಸತ್ಯ ತಿಳಿದಿಲ್ಲ. ಅಶ್ಟೇ ಅಲ್ಲ, ಸಾವಿರಾರು ವರ‍್ಶಗಳಿಂದ ಆರ‍್ಯ ನಡೆನುಡಿಗಳ ಅಟ್ಟುಳಿಯಿಂದ ತಮ್ಮ ನಡೆನುಡಿಗಳಿಗೆ ಆಗಿರುವ ಕೆಡುಕಿನ ಬಗ್ಗೆಯೂ ತಿಳಿದಿಲ್ಲ, ಈ ಎರಡೂ ವಿಶಯಗಳನ್ನು ಅರಿತುಕೊಂಡರೆ, ದ್ರಾವಿಡರಲ್ಲಿ ಒಗ್ಗಟ್ಟು ಮೂಡುತ್ತದೆ. ಒಗ್ಗಟ್ಟಿನಿಂದ ಸಾಮಾಜಿಕ ಮತ್ತು ರಾಜಕೀಯ ಕಸುವು ಹೆಚ್ಚುತ್ತದೆ. ನಾವೇ ಬಹುಸಂಕ್ಯಾತರೆಂಬ ನೆಮ್ಮದಿಯ ಬಲ ಬೆಳೆಯುತ್ತದೆ. ಮಯ್ಬಣ್ಣವೂ ಸೇರಿದಂತೆ ಎಲ್ಲಾ ಬಗೆಯ ಕೀಳರಿಮೆಗಳೂ ತಾವಾಗೇ ಕಡಿಮೆಯಾಗುತ್ತವೆ. ಇದು ನನ್ನ ನಂಬುಗೆ.
      ಕಪ್ಪು ಬಣ್ಣದ ಕೀಳರಿಮೆ ಎಂದೂ ನೆರೆಯಾಗಿ ಅಳಿಯದಿರಬಹುದು. ಮಾನವರ ಕಣ್ಣಿಗೆ ಸ್ವಾಬಾವಿಕವಾಗಿಯೇ ಬಿಳಿ ಮಯ್ಬಣ್ಣ ಒಟ್ಟಾರೆ ರುಚಿಸಬಹುದು. ಆ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ, DNA ಅರಿವು ನಾಗಾಲೋಟದಲ್ಲಿ ಬೆಳೆಯುತ್ತಿರುವ ಈ ದಿನಗಳಲ್ಲಿ, ಬೇಕೆನಿಸಿದ ಮಯ್ಪರಿ ಇರುವ designer ಮಕ್ಕಳನ್ನು ಪಡೆದುಕೊಳ್ಳುವ ಕಾಲ ದೂರವಿರದ ಆದುನಿಕ ಯುಗದಲ್ಲಿ, ಮಯ್ಬಣ್ಣ, ಬವಿಶ್ಯದಲ್ಲಿ ಒಂದು ಸಮಸ್ಯೆಯೇ ಆಗದಿರುವ ಇನ್ನೊಂದು ಸಾದ್ಯತೆಯೂ ಇದೆ. ಅದೇನೇ ಇರಲಿ, ಈಗಿನ ಮಟ್ಟಿಗಂತೂ, ನಮ್ಮ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು, ಆ ತಿಳಿವಿನ ಬಲದಿಂದ ನಮ್ಮನ್ನು ಕಾಡುವ ದವುರ‍್ಬಲ್ಯಗಳನ್ನು ಕಳೆದುಕೊಳ್ಳುವುದು ಒಳ್ಳೆಯದೆನಿಸುತ್ತದೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: