ಗುರುವಾರ, ಮಾರ್ಚ್ 14, 2013

ಗೋಹತ್ಯಾನಿಶೇದವೆಂಬ ದೊಂಬರಾಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೆಳಗಾವಿಯ ಸುವರ‍್ಣ ಸವ್ದದಲ್ಲೂ ಶಾಸಕಸಬೆಯ ಅದಿವೇಶನ ನಡೆಯಿತು. ಅದಿವೇಶನದ ಕಡೆಯ ನಾಳು, ತರಾತುರಿಯಿಂದ ಆಡಳಿತ ಪಕ್ಶ ಆವುಗೊಲೆಗೆ ತಡೆ ಹಾಕುವ ಮಸೂದೆಯನ್ನು ಸದನದ ಮುಂದೆ ಚರ‍್ಚೆಗೆ ತಾರದೆ ಗುಟ್ಟುಗುಟ್ಟಾಗಿ ಅಂಗೀಕರಿಸಿತು. ಸ್ವಾಬಾವಿಕವಾಗಿಯೆ, ಸವರ‍್ಣೀಯ ಹಿಂದೂಗಳನ್ನು ಓಲಯ್ಸುವ ಆಡಳಿತ ಪಕ್ಶದ ಈ ನುಸುಳು ರಾಜಕಾರಣದ ನಡೆಯ ಬಗ್ಗೆ ಮರುದಿನಗಳಲ್ಲಿ ಟೀವೀ ಕಾಲುವೆಗಳಲ್ಲಿ ಪರ-ವಿರೋದಿ ಚರ‍್ಚೆಗಳು ನಡೆದವು. ಇಂತಹ ಒಂದು ಕಾರ‍್ಯಕ್ರಮದಲ್ಲಿ ಶಾಸಕ ಹಸನಬ್ಬನವರು, ’ಮುಸ್ಲಿಮರಲ್ಲಿ ಬಡವರೇ ಹೆಚ್ಚು. ಗೋಮಾಂಸ ಅಗ್ಗ. ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುತ್ತಿರುವುದು ಬಡತನದ ಅನಿವಾರ‍್ಯತೆಯಿಂದಾಗಿ. ಒಂದು ವೇಳೆ, ಕುರಿಯಡಗು  ಗೋಮಾಂಸಕ್ಕಿಂತ ಅಗ್ಗವಾಗಿ ದೊರೆತರೆ, ಮುಸ್ಲಿಮರು ಗೋಹತ್ಯೆ ನಿಶೇದವನ್ನು ವಿರೋದಿಸುವುದಿಲ್ಲ. ಸರ‍್ಕಾರ ಕುರಿಮಾಂಸ ಬಡವರಿಗೆ ರಿಯಾಯತಿ ದರದಲ್ಲಿ ಸಿಗುವಂತೆ ಮಾಡಬೇಕು’ ಎಂದು ಹೇಳಿದರು. ಅವರ ಹೇಳಿಕೆಗೆ ಶ್ರೀರಾಮ ಸೇನೆಯ ಮುತಾಲಿಕರು, ’ಹವುದು. ಆಕಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿಮಾಂಸವನ್ನು ಅಗ್ಗದ ಬೆಲೆಗೆ ಒದಗಿಸುವ ಏರ‍್ಪಾಟು ಆಗಬೇಕು’ ಎಂದು ಒಪ್ಪಿಗೆ ಸೂಚಿಸಿದರು. ಇದನ್ನೆಲ್ಲಾ ಕೇಳಿ ನಾನು ’ಶಿವ ಶಿವಾ’ ಎಂದುಕೊಂಡೆ.
      ಇತ್ತೀಚೆಗೆ ಗೋಹತ್ಯೆಯ ಬಗ್ಗೆ ಇನ್ನೊಂದು ಕಾರ‍್ಯಕ್ರಮವನ್ನು ಟೀವೀಯಲ್ಲಿ ನೋಡಿದೆ. ಎಂಟನೇ ತರಗತಿಯ ಹಿಂದೀ ಪಟ್ಯಪುಸ್ತಕದಲ್ಲಿ ನಮ್ಮ ’ಗೋವಿನ ಹಾಡು’ ಒಂದು ಪಾಟದ ರೂಪದಲ್ಲಿ ಅಳವಟ್ಟಿದೆಯಂತೆ. ಆದರೆ, ಆ ಪಾಟದ ಕತೆಗೂ ನಮ್ಮ ಮೂಲ ಗೋವಿನ ಹಾಡಿನ ಕತೆಗೂ ಒಂದು ಆಕ್ಶೇಪಾರ‍್ಹ ವ್ಯತ್ಯಾಸವಿದೆಯಂತೆ. ಪಾಟದ ಕತೆಯಲ್ಲಿ, ಗೋವಿನ ಸತ್ಯಸಂದತೆಗೆ ಮೆಚ್ಚಿ, ಬಗೆನೊಂದು, ಹುಲಿ, ’ಇನ್ನೆಂದೂ ನಾನು ಗೋಮಾಂಸವನ್ನು ತಿನ್ನುವುದಿಲ್ಲ’ ಎಂದು ಪ್ರತಿಜ್ನೆ ಮಾಡುತ್ತದಂತೆ (ಮೂಲ ಗೋವಿನ ಹಾಡಿನಲ್ಲಿ ಹುಲಿ ಬೆಟ್ಟದ ತುದಿಯಿಂದ ಹಾರಿ ತಂಗೊಲೆ ಗೆಯ್ದುಕೊಳ್ಳುತ್ತದೆ). ಚರ‍್ಚೆಯಲ್ಲಿ ಪಾಲ್ಗೊಂಡಿದ್ದ ಕೆಲ ದಲಿತ ಮುಂದಾಳುಗಳ ಪ್ರಕಾರ, ಹೀಗೆ ಮೂಲ ಕತೆಯನ್ನು ತಿರುಚಿದ್ದು, ಹಿಂದುತ್ವಪರ ಸರ‍್ಕಾರದ ನುಸುಳು ರಾಜಕಾರಣ. ’ಗೋಮಾಂಸವನ್ನು ತಿನ್ನುವುದು ಕೆಟ್ಟದ್ದು’ ಎಂಬ ಪ್ರಜ್ನೆಯನ್ನು ಎಳೆಯ ಮಕ್ಕಳಲ್ಲಿ ಬರಿಸುವುದೇ ಇಲ್ಲಿನ ಉದ್ದೇಶ, ಎಂಬುದು ಅವರ ವಾದ.
      ಈ ಮೇಲಿನ ಎರಡೂ ಚರ‍್ಚೆಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇದು - ’ಹಸು ಎಮ್ಮೆಗಳನ್ನು ಕಾಪಾಡುವುದಕ್ಕೆ ಸಾವಿರಾರು ಮಂದಿ ಇದ್ದಾರೆ. ಆದರೆ, ಕುರಿ ಕೋಳಿಗಳನ್ನು ಕಾಪಾಡುವುದಕ್ಕೆ ಮಾತ್ರ ಒಬ್ಬನೂ ಇಲ್ಲ! ಹಸು ಎಮ್ಮೆಗಳನ್ನು ತಿನ್ನುವುದು ದೊಡ್ಡ ಪಾಪ. ಅದೇ ಕುರಿ ಕೋಳಿಗಳನ್ನು ತಿನ್ನುವುದು ಪಾಪವಲ್ಲ, ಅತವ ಕಡಿಮೆ ಪಾಪ! ಹಸು ಎಮ್ಮೆಗಳ ಹತ್ಯೆ ನಿಲ್ಲುತ್ತದೆ ಎನ್ನುವುದಾದರೆ, ಕುರಿ ಕೋಳಿಗಳನ್ನು ರಿಯಾಯಿತಿ ದರದಲ್ಲಿ ಮಾರಿಸಲಿಕ್ಕೂ ಕೆಲವರು ಸಿದ್ದರಿದ್ದಾರೆ!’. ಅದೇನು ಪಾಪ ಮಾಡಿದ್ದವು ಸ್ವಾಮೀ ಕುರಿ ಕೋಳಿಗಳು? ಅವುಗಳ ನೋವು ನೋವಲ್ಲವೆ? ಪ್ರಾಣಿಗಳಲ್ಲೂ ಮೇಲು-ಕೀಳು ಎಣಿಸುವುದೇ?
      ಪ್ರಾಣಿಗಳಲ್ಲಿ ಮೇಲು-ಕೀಳು ಎಣಿಸುವುದೂ, ಮಾನವರಲ್ಲಿ ಮೇಲು-ಕೀಳು ಎಣಿಸುವುದೂ, ಇಂತಹ ಅನ್ಯಾಯದ ಪರಿಕಲ್ಪನೆಗಳು ಸದ್ಯ ದಕ್ಶಿಣದ ನಾವು ದ್ರಾವಿಡರು ಹುಟ್ಟುಹಾಕಿದವಲ್ಲ. ಈ ವಿಶಯದಲ್ಲಿ ಅದೊಂದು ಸಮಾದಾನ ನನಗೆ. ಹಾಗೆಂದು ಉತ್ತರದಿಂದ ಬಂದ ಇಂತಹ ಕೀಳು ಆಚಾರಗಳನ್ನು ನಾವೇನೂ ನಡೆಸದೆ ಬಿಟ್ಟಿಲ್ಲ. ಇದು ನಿಶ್ಚಯವಾಗಿಯೂ ಒಂದು ಕೊರಗು ನನಗೆ. ಕೆಟ್ಟ ಪದ್ದತಿಗಳನ್ನು ಹುಟ್ಟುಹಾಕುವುದು ಎಶ್ಟು ಪಾಪವೋ, ಆ ಪಾಪಗಳನ್ನು ಒಪ್ಪಿ ಆಚರಿಸುವುದೂ ಅಶ್ಟೇ ಪಾಪ, ನನ್ನ ಕಣ್ಣಿನಲ್ಲಿ.
      ಪ್ರಾಣಿಗಳ ವಿಶಯದಲ್ಲಿ ದಕ್ಶಿಣದ ಸಾದುಸಂತರು ಎಂತೆಂತಹ ಕನಿಕರದ ಮಾತುಗಳನ್ನಾಡಿದ್ದಾರೆ. ’ಇನ್ನೊಂದರ ಮಾಂಸ ತಿಂದು ತನ್ನ ಮೆಯ್ಯ ಮಾಂಸ ಹೆಚ್ಚಿಸಿಕೊಳ್ಳುವವನು, ಅದು ಹೇಗೆ ತಾನೆ ಕನಿಕರ ಉಳ್ಳವನಾಗುತ್ತಾನೆ?’ ಎಂದು ತಮಿಳಿನ ತಿರುಕ್ಕುರಲ್‍ ಬರೆದ ಸಂತ ವಳ್ಳುವಾರ್ ಕೇಳುತ್ತಾನೆ. ನಮ್ಮವನೇ ಆದ ಕನ್ನಡಿಗ ಬಸವಣ್ಣ ಹೇಳುತ್ತಾನೆ, ’ದಯೆಯೇ ದರ‍್ಮದ ಮೂಲವಯ್ಯಾ, ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು. ದಯೆ ಇರಬೇಕಾದುದು ’ಸಕಲ’ ಪ್ರಾಣಿಗಳಲ್ಲಿ. ಬರೀ ಹಸು ಮತ್ತು ಎಮ್ಮೆಗಳಲ್ಲಿ ಮಾತ್ರವಲ್ಲ. ಪ್ರಾಣಿದಯೆ ಸಾರುವ ಮಾತುಗಳು ಉತ್ತರದ ನಾಡುಗಳಲ್ಲೂ ಇರಬಹುದು. ಆದರೆ, ಅವುಗಳೊಂದಿಗೆ, ’ಕೆಲವು ಪ್ರಾಣಿಗಳು ದೇವರಿಗೆ ಸಮಾನ. ಅವಕ್ಕೆ ವಿಶೇಶವಾಗಿ ದಯೆ ತೋರಿರಿ’ ಎಂಬ, ’ಕೆಲವು ಪ್ರಾಣಿಗಳು ಶ್ರೇಶ್ಟ, ಉಳಿದವು ಅಲ್ಲ’ ಎಂದು ತಾರತಮ್ಯ ಮಾಡುವ ಮಾತುಗಳೂ ಅಲ್ಲಿವೆ. ದ್ರಾವಿಡರ ನಾಡಾದ ದಕ್ಶಿಣದಲ್ಲಿ ಈ ಬಗೆಯ ಇಬ್ಬಂದಿ ನೀತಿಯ ಸಂದೇಶಗಳು ನನಗೆ ತಿಳಿದಂತೆ ಇಲ್ಲ.
      ನಮ್ಮ ದ್ರಾವಿಡ ಸಂತರು ಸಮತಾಬಾವದಿಂದ ಎಶ್ಟು ಮಾತು ಹೇಳಿದ್ದರೇನು? ನಾವಂತೂ ಅದನ್ನು ಪಾಲಿಸುತ್ತಿಲ್ಲ. ಸಮತಾಬಾವದ ಮಾತುಗಳು ಹೋಗಲಿ, ಅಸಮತೆಯೇ ಆದಾರವಾಗಿರುವ ಉತ್ತರದಿಂದ ಬಂದ ಆಚರಣೆಗಳಿಗೆ ಗಟ್ಟಿಯಾಗಿ ನಾವು ಜೋತುಬಿದ್ದಿದ್ದೇವೆ. ಮೇಲು-ಕೀಳಿನ ಎಣಿಕೆಯಿಂದ ಬಂದ ಉತ್ತರದ ನಂಬಿಕೆಗಳು ದಕ್ಶಿಣದ ದ್ರಾವಿಡರಾದ ನಮಗೆ ಎಂದೂ ಆದರ‍್ಶವಾಗಬಾರದು. ಆದರೂ, ಆಗಿವೆ. ಮುಂದೆ ಎಂದಾದರೊಂದು ದಿನ, ಬಸವಣ್ಣನ ’ದಯೆಯೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂಬ ಸಂದೇಶ ನಮಗೆಲ್ಲಾ ಆದರ‍್ಶಪ್ರಾಯವಾಗುತ್ತದೆ ಎಂದು ನಂಬೋಣ. ಆದರೆ, ಅಲ್ಲಿಯವರೆಗೆ, ’ಹಸು ಎಮ್ಮೆ ಮೇಲು, ಕುರಿ ಕೋಳಿ ಕೀಳು’ ಎನ್ನುವ ಇಬ್ಬಂದಿ ನೀತಿಯ ದೊಂಬರಾಟದಿಂದ ನಾವು ಹೊರಗಿರೋಣ.

ನಲ್ಮೆಯೊಡನೆ,
ಎಚ್.ಎಸ್.ರಾಜ್

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ರಾಜ್ ಅವರೇ,
ಇಂಥಹ ವಿಚಾರ ಯೋಗ್ಯ ಲೇಖನ ವನ್ನು ಕನ್ನಡ ಬ್ಲಾಗ್ ನಲ್ಲಿ ಪ್ರಕಟಿಸದೆ ಇಲ್ಲಿ ಬ್ಲೋಗಿಸಿದ್ದೀರಲ್ಲ??..
ಇದನ್ನು ಕಾಪಿ ಮಾಡಿ ಅಲ್ಲೂ ಪೇಸ್ಟ್ ಮಾಡಿ ಬಿಡಿ...ದಕ್ಷಿಣ ಭಾರತದ ಎಲ್ಲ ದ್ರಾವಿಡರೂ ಓದಲೇ ಬೇಕಾದ ಲೇಖನವಿದು.

ನಿಮಗೆ ಧನ್ಯವಾದಗಳು.
KM